“ಎಸ್‌ಡಿಎಮ್ [ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್] ಇಲ್ಲಿಗೆ ಜೂನ್ ತಿಂಗಳಿನಲ್ಲಿ ಬಂದು, ʼನೀವು ಇಲ್ಲಿಂದ ಹೊರಡುವಂತೆ ಸೂಚಿಸಿ ನೋಟಿಸ್ ನೀಡುತ್ತಿದ್ದೇವೆ” ಎಂದರು.
ಗಾಧ್ರಾ ಗ್ರಾಮದ ನಿವಾಸಿ ಬಾಬುಲಾಲ್ ಆದಿವಾಸಿ ಊರಿನ ಬಾಗಿಲಿನಲ್ಲಿರುವ ಆಲದ ಮರವೊಂದನ್ನು ತೋರಿಸಿದರು. ಅದು ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಜನರು ಒಗ್ಗೂಡುವ ಜಾಗ. ಈಗ ಅದೇ ಜಾಗ ಅವರ ಊರಿನ ಜನರ ಭವಿಷ್ಯವನ್ನು ಬದಲಾಯಿಸಿದ ದಿನಕ್ಕೆ ಸಾಕ್ಷಿಯೂ ಆಗಿದೆ.
ಮಧ್ಯಪ್ರದೇಶದ ಪನ್ನಾ ಟೈಗರ್ ರಿಸರ್ವ್ (ಪಿಟಿಆರ್) ಮತ್ತು ಸುತ್ತಮುತ್ತಲಿನ 22 ಗ್ರಾಮಗಳ ಸಾವಿರಾರು ನಿವಾಸಿಗಳಿಗೆ ಅಣೆಕಟ್ಟು ಮತ್ತು ನದಿ ಜೋಡಣೆ ಯೋಜನೆಯೊಂದರ ಸಲುವಾಗಿ ತಮ್ಮ ಮನೆಗಳು ಮತ್ತು ಭೂಮಿಯನ್ನು ತೊರೆಯುವಂತೆ ಆದೇಶ ನೀಡಲಾಗಿದೆ. ಈ ಯೋಜನೆಗೆ 2017ರಲ್ಲೇ ಪರಿಸರ ಸಂಬಂಧಿ ವಿಷಯಕ್ಕೆ ಸಂಬಂಧಿಸಿದ ಅಂತಿಮ ಅನುಮತಿಗಳು ದೊರಕಿದ್ದವು. ಮತ್ತು ಈಗಾಗಲೇ ಈ ರಾಷ್ಟ್ರೀಯ ಉದ್ಯಾನದಲ್ಲಿ ಮರಗಳನ್ನು ಕಡಿಯಲು ಆರಂಭಿಸಲಾಗಿದೆ. ಅದೇ ಸಮಯಕ್ಕೆ ತಕ್ಷಣವೇ ಇಲ್ಲಿಂದ ಹೊರಬೀಳಬೇಕಾದ ಅನಿವಾರ್ಯತೆಗೂ ಇಲ್ಲಿನ ಜನರು ಒಳಗಾಗಿದ್ದಾರೆ.
ಕೆನ್ ಮತ್ತು ಬೆತ್ವಾ ನದಿಗಳನ್ನು 218 ಕಿಲೋಮೀಟರ್ ಉದ್ದದ ಕಾಲುವೆಯೊಂದಿಗೆ ಸಂಪರ್ಕಿಸುವ 44,605 ಕೋಟಿ ರೂ.ಗಳ ಯೋಜನೆ ( ಹಂತ 1 ) ಈ ಯೋಜನೆಯು ಎರಡು ದಶಕಗಳಿಂದ ಬಾಕಿಯಿತ್ತು.
ಆದರೆ ಈ ಯೋಜನೆ ವ್ಯಾಪಕ ವಿಮರ್ಶೆಗಳಿಗೆ ಪಕ್ಕಾಗಿದೆ. “ಈ ಯೋಜನೆಗೊಂದು ಸಮರ್ಥನೆಯೇ ಇಲ್ಲ. ಜಲವಿಜ್ಞಾನದ ಪ್ರಕಾರವಾಗಿಯೂ ಇಲ್ಲ. ಮೊದಲಿಗೆ ಕೆನ್ ನದಿಯಲ್ಲಿ ಹೆಚ್ಚುವರಿ ನೀರಿಲ್ಲ. ಈ ಕುರಿತು ಯಾವುದೇ ವಿಶ್ವಾಸಾರ್ಹ ಮೌಲ್ಯಮಾಪನ ಅಥವಾ ವಸ್ತುನಿಷ್ಠ ಅಧ್ಯಯನವನ್ನೂ ಮಾಡಲಾಗಿಲ್ಲ. ಕೇವಲ ಪೂರ್ವನಿರ್ಧರಿತ ತೀರ್ಮಾನಗಳ ಮೇಲೆ ಈ ಯೋಜನೆ ನಿಂತಿದೆ” ಎಂದು 35 ವರ್ಷಗಳಿಂದ ನೀರಾವರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿ ಹಿಮಾಂಶು ಠಕ್ಕರ್ ಹೇಳುತ್ತಾರೆ.
ಠಕ್ಕರ್ ಅವರು ಸೌತ್ ಏಷಿಯಾ ನೆಟ್ವರ್ಕ್ ಆನ್ ಡ್ಯಾಮ್ಸ್ ಎಂಡ್ ಪೀಪಲ್ (ಎಸ್‌ಎಎನ್‌ಡಿಆರ್‌ಪಿ) ಸಂಸ್ಥೆಯ ಸಂಯೋಜಕರು. ಅವರು 2004ರಲ್ಲಿ ಜಲಸಂಪನ್ಮೂಲ ಸಚಿವಾಲಯವು (ಪ್ರಸ್ತುತ ಜಲಶಕ್ತಿ) ನದಿಗಳ ಜೋಡಣೆಗೆ ಸಂಬಂಧಿಸಿದಂತೆ ರಚಿಸಿದ್ದ ತಜ್ಞರ ಸಮಿತಿಯ ಸದಸ್ಯರಾಗಿದ್ದರು. "ನದಿ ಜೋಡಣೆಯು ಅರಣ್ಯ, ನದಿ, ಜೀವವೈವಿಧ್ಯತೆಯ ಮೇಲೆ ಭಾರಿ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಇಲ್ಲಿನ ಮತ್ತು ಬುಂದೇಲಖಂಡ್ ಮತ್ತು ಅದರಾಚೆಗಿನ ಜನರನ್ನು ಬಡತನಕ್ಕೆ ತಳ್ಳುತ್ತದೆ" ಎಂದು ಅವರು ಹೇಳುತ್ತಾರೆ.
ಈ 77 ಮೀಟರುಗಳಷ್ಟು ಎತ್ತರದ ಜಲಾಶಯದಡಿ 14 ಗ್ರಾಮಗಳನ್ನು ಮುಳುಗಲಿವೆ. ಇದು ಮೂಲ ಹುಲಿ ಆವಾಸಸ್ಥಾನವನ್ನು ಮುಳುಗಿಸುತ್ತದೆ, ನಿರ್ಣಾಯಕ ವನ್ಯಜೀವಿ ವಲಯಗಳನ್ನು ಕಿರಿದಾಗಿಸುತ್ತದೆ. ಈ ನಷ್ಟವನ್ನು ಸರಿದೂಗಿಸುವ ಸಲುವಾಗಿ ಸರ್ಕಾರವು ಬಾಬುಲಾಲ್ ಅವರ ಊರಿನಂತೆ ಇತರ ಎಂಟು ಗ್ರಾಮಗಳನ್ನು ಪರಿಹಾರ ಭೂಮಿಯಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ.
ಇದರಲ್ಲಿ ಅಸಾಮಾನ್ಯ ಎನ್ನಿಸುವಂತಹದ್ದು ಏನೂ ಇಲ್ಲ. ಚಿರತೆಗಳು, ಹುಲಿಗಳು , ನವೀಕರಿಸಬಹುದಾದ ಇಂಧನ, ಅಣೆಕಟ್ಟುಗಳು ಮತ್ತು ಗಣಿಗಳಿಗೆಂದು ಲಕ್ಷಾಂತರ ಗ್ರಾಮೀಣ ಭಾರತೀಯರು, ವಿಶೇಷವಾಗಿ ಆದಿವಾಸಿಗಳು ಪದೇ ಪದೇ ಎತ್ತಂಗಡಿಗೆ ಒಳಗಾಗುವುದು ಇಲ್ಲಿ ಸಾಮಾನ್ಯ.
ಹುಲಿ ಯೋಜನೆ ಇದೀಗ ತನ್ನ ಯಶಸ್ವೀ 51ನೇ ವರ್ಷವನ್ನು ಪೂರೈಸಿದೆ. ಪ್ರಸ್ತುತ ಭಾರತದ ಹುಲಿಗಳ ಸಂಖ್ಯೆ 3,682 (2022 ಹುಲಿ ಗಣತಿ) ತಲುಪಿದೆ. ಆದರೆ ಇದಕ್ಕಾಗಿ ಸ್ಥಳೀಯ ಅರಣ್ಯ ಸಮುದಾಯಗಳು ಬಹಳ ದೊಡ್ಡ ಬೆಲೆಯನ್ನೇ ತೆತ್ತಿವೆ. ಈ ಸಮುದಾಯಗಳ ಬಹುತೇಕ ಜನರು ದೇಶದ ಅತ್ಯಂತ ವಂಚಿತ ನಾಗರಿಕರು.
1973ರಲ್ಲಿ ಭಾರತದಲ್ಲಿ ಒಂಬತ್ತು ಹುಲಿ ಮೀಸಲು ಪ್ರದೇಶಗಳಿದ್ದವು, ಇಂದು ಅವುಗಳ ಸಂಖ್ಯೆ 53ಕ್ಕೆ ತಲುಪಿದೆ. 1972ರಿಂದ ಒಂದು ಹುಲಿ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ನಾವು ಸರಾಸರಿ 150 ಅರಣ್ಯವಾಸಿಗಳನ್ನು ಸ್ಥಳಾಂತರಿಸಿದ್ದೇವೆ. ಇದು ಕೂಡಾ ತೀರಾ ಕಡಿಮೆ ಅಂದಾಜು.
ಇದು ಇಲ್ಲಿಗೆ ಮುಗಿಯುವುದಿಲ್ಲ. ಜೂನ್ 19, 2024ರಂದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೊರಡಿಸಿದ ಪತ್ರದಲ್ಲಿ ದೇಶಾದ್ಯಂತ 591 ಗ್ರಾಮಗಳನ್ನು ಮತ್ತು ಅಲ್ಲಿನ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ.
ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ (ಪಿಟಿಆರ್) 79 ಹುಲಿಗಳಿವೆ ಮತ್ತು ಹೊಸ ಅಣೆಕಟ್ಟಿನಡಿ ಈ ಪ್ರಮುಖ ಅರಣ್ಯ ಪ್ರದೇಶದ ಹೆಚ್ಚಿನ ಭಾಗ ಮುಳುಗಡೆಯಾಗುತ್ತದೆ. ಹೀಗಾಗಿ ಹುಲಿಗಳ ಓಡಾಟಕ್ಕೆ ಹೊಸ ಜಾಗವನ್ನು ಮೀಸಲಿಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗಾಧ್ರಾದಲ್ಲಿನ ಬಾಬುಲಾಲ್ ಅವರ ಮನೆ ಹಾಗೂ ಜಮೀನು ಹುಲಿಗಳ ಪಾಲಾಗಲಿದೆ.
ಸರಳವಾಗಿ ಹೇಳುವುದಾದರೆ, ಇಲ್ಲಿ ಅರಣ್ಯ ಇಲಾಖೆಗೆ ʼಪರಿಹಾರʼ ನೀಡಲಾಗುತ್ತಿದೆಯೇ ಹೊರತು ಶಾಶ್ವತವಾಗಿ ತಮ್ಮ ಮನೆ-ಮಾರು ಕಳೆದುಕೊಳ್ಳಲಿರುವ ಗ್ರಾಮಸ್ಥರಿಗಲ್ಲ,
“ನಾವು ಆ ಪ್ರದೇಶವನ್ನು ಮತ್ತೆ ಅರಣ್ಯವನ್ನಾಗಿ ಬದಲಾಯಿಸುತ್ತೇವೆ” ಎಂದು ಪನ್ನಾ ವಲಯದ ಉಪ ಅರಣ್ಯ ಅಧಿಕಾರಿ ಅಂಜನಾ ಟಿರ್ಕಿ ಹೇಳುತ್ತಾರೆ. "ಅದನ್ನು ಹುಲ್ಲುಗಾವಲುಗಳಾಗಿ ಪರಿವರ್ತಿಸುವುದು ಮತ್ತು ವನ್ಯಜೀವಿಗಳನ್ನು ನಿರ್ವಹಿಸುವುದು ನಮ್ಮ ಕೆಲಸ" ಎಂದು ಅವರು ಹೇಳುತ್ತಾರೆ, ಯೋಜನೆಯ ಕೃಷಿ ಪರಿಸರಶಾಸ್ತ್ರೀಯ ಅಂಶಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ಒಪ್ಪಲಿಲ್ಲ.
ಮುಳುಗಡೆಯಾಗಲಿರುವ 60 ಚದರ ಕಿಲೋಮೀಟರ್ ಅಳತೆಯ ದಟ್ಟ ಮತ್ತು ಜೈವಿಕ ವೈವಿಧ್ಯ ಅರಣ್ಯದ ನಷ್ಟವನ್ನು ಸರಿದೂಗಿಸಲು ನೆಡುತೋಪುಗಳನ್ನು ಸ್ಥಾಪಿಸುವುದಕ್ಕಷ್ಟೇ ತಮ್ಮ ಅತ್ಯಂತ ಪರಿಣಾಮಕಾರಿ ಪ್ರತಿಕ್ರಿಯೆ ಸೀಮಿತ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಹೇಳುತ್ತಾರೆ. ಯುನೆಸ್ಕೋ ಪನ್ನಾ ಅರಣ್ಯವನ್ನು ವಿಶ್ವ ಜೀವಗೋಳ ಮೀಸಲು ಜಾಲ ದ ಭಾಗವೆಂದು ಹೆಸರಿಸಿದ ಕೇವಲ ಎರಡು ವರ್ಷಗಳ ನಂತರ ಈ ಪರಿಸ್ಥಿತಿ ಉದ್ಭವಿಸಿದೆ. ಇದಲ್ಲದೆ, 2017ರಲ್ಲಿ ಅರಣ್ಯ ಸಲಹಾ ಸಮಿತಿ ಸಭೆಯಲ್ಲಿ ವರದಿಯಾದಂತೆ ಸರಿಸುಮಾರು 4.6 ಮಿಲಿಯನ್ ಮರಗಳನ್ನು ಕಡಿಯುವುದರಿಂದ ಉಂಟಾಗುವ ಜಲಶಾಸ್ತ್ರೀಯ ಪರಿಣಾಮಗಳನ್ನು ಇನ್ನಷ್ಟೇ ಮೌಲ್ಯಮಾಪನ ಮಾಡಬೇಕಾಗಿದೆ.
ಈ ಯೋಜನೆಯ ಸಂತ್ರಸ್ತರ ಪಟ್ಟಿಯಲ್ಲಿ ಹುಲಿಗಳಷ್ಟೇ ಇಲ್ಲ. ಭಾರತದ ಮೂರು ಘರಿಯಾಲ್ (ಮೊಸಳೆ) ಅಭಯಾರಣ್ಯಗಳಲ್ಲಿ ಒಂದು ಈ ಉದ್ದೇಶಿತ ಅಣೆಕಟ್ಟಿನ ಕೆಳಭಾಗದಲ್ಲಿ ಕೆಲವು ಕಿಲೋಮೀಟರ್ ದೂರಲ್ಲಿದೆ. ಜೊತೆಗೆ ಈ ಪ್ರದೇಶವು ಭಾರತೀಯ ರಣಹದ್ದುಗಳಿಗೆ ಗೂಡುಕಟ್ಟುವ ಪ್ರಮುಖ ತಾಣ. ಈ ಪ್ರಭೇದವು ನಿರ್ಣಾಯಕವಾಗಿ ಅಳಿವಿನಂಚಿನಲ್ಲಿರುವ ಪಕ್ಷಿಗಳ ಐಯುಸಿಎನ್ ಕೆಂಪು ಪಟ್ಟಿಯಲ್ಲಿದೆ . ಇದಲ್ಲದೆ ಇವುಗಳ ಜೊತೆಗೆ ಇನ್ನೂ ಹಲವು ದೊಡ್ಡ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳು ತಮ್ಮ ನೆಲೆ ಕಳೆದುಕೊಳ್ಳಲಿವೆ.
ಬಾಬುಲಾಲ್ ಒಬ್ಬ ಬಡ ರೈತನಾಗಿದ್ದು, ಅವರು ತಮ್ಮ ಕುಟುಂಬದ ಪೋಷಣೆಗಾಗಿ ಕೆಲವು ಬಿಘಾ ಮಳೆಯಾಶ್ರಿತ ಭೂಮಿಯನ್ನು ಹೊಂದಿದ್ದಾರೆ. “ಇಲ್ಲಿಂದ ಯಾವಾಗ ಹೊರಡಬೇಕೆಂದು ಸರಿಯಾದ ದಿನಾಂಕವನ್ನು ತಿಳಿಸಿರದ ಕಾರಣ ನಾವು ಮನೆ ಬಳಕೆಗಾದರೂ ಆಗುತ್ತದೆ ಎನ್ನುವ ನಂಬಿಕೆಯೊಂದಿಗೆ ಒಂದಷ್ಟು ಮಕ್ಕಾಯ್ (ಜೋಳ) ಬೆಳೆದುಕೊಳ್ಳಲು ತೀರ್ಮಾನಿಸಿದೆವು.” ಆದರೆ ಅವರು ಮತ್ತು ಅವರ ಊರಿನ ನೂರಾರು ಜನರು ತಮ್ಮ ಹೊಲವನ್ನು ಉಳುಮೆ ಮಾಡಲು ಸಿದ್ಧರಾಗುತ್ತಿದ್ದ ಹಾಗೆ ಕಾಣಿಸಿಕೊಂಡ ಫಾರೆಸ್ಟ್ ರೇಂಜರುಗಳು, “ಇಲ್ಲಿಗೆ ಕೆಲಸ ನಿಲ್ಲಿಸಿ ಎಂದು ಹೇಳಿದರು. ಒಂದು ವೇಳೆ ನಿಲ್ಲಿಸದಿದ್ದರೆ, ʼಟ್ರ್ಯಾಕ್ಟರ್ ತಂದು ಹೊಲವನ್ನು ನಾಶಗೊಳಿಸುತ್ತೇವೆʼ ಎಂದು ಬೆದರಿಕೆ ಹಾಕಿದರು” ಎಂದು ಬಾಬುಲಾಲ್ ಹೇಳುತ್ತಾರೆ.
ಪರಿಗೆ ತನ್ನ ಪಾಳು ಭೂಮಿಯನ್ನು ತೋರಿಸುತ್ತಾ, "ನಾವು ಇಲ್ಲಿಂದ ಹೋಗುವುದಕ್ಕೆ ಅವರು ನಮಗೆ ಸಂಪೂರ್ಣ ಪರಿಹಾರ ನೀಡಿಲ್ಲ. ಸರ್ಕಾರಕ್ಕೆ ನಮ್ಮ ಮನವಿಯೆಂದರೆ, ನಾವು ಇಲ್ಲಿ ಇರುವವರೆಗಾದರೂ ನಮಗೆ ಕೃಷಿ ಮಾಡಲು ಬಿಡಿ. ಇಲ್ಲವಾದರೆ ನಾವು ತಿನ್ನುವುದಾದರೂ ಏನನ್ನು?” ಎಂದು ಬಾಬುಲಾಲ್ ನೋವಿನಿಂದ ಕೇಳುತ್ತಾರೆ.
ತಮ್ಮ ಪೂರ್ವಜರು ಕಟ್ಟಿದ ಊರು ಮನೆಗಳನ್ನು ಬಿಟ್ಟು ಹೋಗಬೇಕಿರುವುದು ಅವರನ್ನು ಕಾಡುತ್ತಿರುವ ಇನ್ನೊಂದು ನೋವು. ನನ್ನ ಕುಟುಂಬವು 300 ವರ್ಷಗಳಿಗಿಂತಲೂ ಹೆಚ್ಚು ಕಾಲ ಗಾಧ್ರಾರಾದಲ್ಲಿ ವಾಸಿಸುತ್ತಿದೆ ಎಂದು ಸ್ವಾಮಿ ಪ್ರಸಾದ್ ಪರೋಹರ್ ಪರಿಗೆ ತಿಳಿಸಿದರು. “ಕೃಷಿ ಮತ್ತು ವರ್ಷವಿಡೀ ಸಿಗುವ ಕಾಡುತ್ಪತ್ತಿಗಳಾದ ಮಹುವಾ ಮತ್ತು ತೆಂಡು ಸಂಗ್ರಹದ ಮೂಲಕ ನಾನು ಹೊಟ್ಟೆಪಾಡು ನಡೆಸಿಕೊಂಡು ಬಂದಿದ್ದೆ. ಈಗ ನಾವು ಎಲ್ಲಿಗೆ ಹೋಗಬೇಕು? ನಾವು ಎಲ್ಲಿ ಸಾಯುತ್ತೇವೆ? ಎಲ್ಲಿ ಮುಳುಗುತ್ತೇವೆ... ಯಾರಿಗೆ ಗೊತ್ತು?" ಮುಂದಿನ ತಲೆಮಾರುಗಳು ಕಾಡಿನೊಂದಿಗಿನ ಸಂಪರ್ಕವನ್ನೇ ಕಳೆದುಕೊಳ್ಳಲಿವೆ ಎನ್ನುವ ನೋವಿನಲ್ಲಿ ಈ 80 ವರ್ಷದ ಹಿರಿಯರಿದ್ದಾರೆ.
*****
ʼಅಭಿವೃದ್ಧಿʼ ಎನ್ನುವ ಹೆಸರಿನಲ್ಲಿ ಭೂ ಕಬಳಿಕೆ ಮಾಡಲು ಸರ್ಕಾರಕ್ಕೆ ಇತ್ತೀಚಿಗೆ ಸಿಕ್ಕ ನೆಪವೆಂದರೆ ನದಿ ಜೋಡಣೆ.
2023ರ ಅಕ್ಟೋಬರ್ ತಿಂಗಳಿನಲ್ಲಿ ಕೆನ್-ಬೆತ್ವಾ ನದಿ ಜೋಡಣೆ ಯೋಜನೆಗೆ (ಕೆಬಿಆರ್‌ಎಲ್‌ಪಿ) ಅಂತಿಮ ಮಂಜೂರಾತಿ ಬಂದಾಗ, ಅಂದಿನ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅದನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. "ಹಿಂದುಳಿದಿದ್ದ ಬುಂದೇಲಖಂಡದ ಜನರಿ ಪಾಲಿಗೆ ಇದು ಅದೃಷ್ಟದ ದಿನ" ಎಂದು ಅವರು ಬಣ್ಣಿಸಿದರು. ಆದರೆ ಅಂದು ಅವರು ತಮ್ಮ ರಾಜ್ಯದ ಸಾವಿರಾರು ರೈತರು, ಪಶುಪಾಲಕರು, ಅರಣ್ಯವಾಸಿಗಳು ಮತ್ತು ಅವರ ಕುಟುಂಬಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ವಿದ್ಯುತ್ ಉತ್ಪಾದನೆಯು ಪಿಟಿಆರ್ ನ ಹೊರಗೆ ಇರುತ್ತದೆ ಎಂಬ ಆಧಾರದ ಮೇಲೆ ಅರಣ್ಯ ಅನುಮತಿಯನ್ನು ನೀಡಲಾಗಿದೆ ಎಂದು ಅವರು ನೋಡಲಿಲ್ಲ, ಆದರೆ ಈಗ ಅದು ಒಳಗೆ ಬಂದಿದೆ.
ಒಂದು ನದಿಯ ಹೆಚ್ಚುವರಿ ನೀರನ್ನು ನೀರಿನ ಕೊರತೆಯಿರುವ ನದಿ ಜಲಾನಯನ ಪ್ರದೇಶಗಳೊಂದಿಗೆ ಸಂಪರ್ಕಿಸುವ ಕಲ್ಪನೆಯು 1970ರ ದಶಕದಲ್ಲಿ ಚಿಗುರೊಡೆಯಿತು ಮತ್ತುಇದರೊಂದಿಗೆ ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಏಜೆನ್ಸಿಯೂ (ಎನ್ಡಬ್ಲ್ಯೂಡಿಎ) ಹುಟ್ಟಿಕೊಂಡಿತು. ಇದು ಕಾಲುವೆಗಳ ಭವ್ಯ ಹಾರದಂತಹ ಮಾದರಿಯ ಕಲ್ಪನೆಯೊಂದಿಗೆ ದೇಶದ ನದಿಗಳಿಗೆ ಅಡ್ಡಲಾಗಿ 30 ಸಂಪರ್ಕ ಸಾಧ್ಯತೆಯನ್ನು ಅಧ್ಯಯನ ಮಾಡಲು ಪ್ರಾರಂಭಿಸಿತು
ಮಧ್ಯ ಭಾರತದ ಕೈಮೂರ್ ಬೆಟ್ಟಗಳಲ್ಲಿ ಹುಟ್ಟುವ ಕೆನ್ ನದಿ ಗಂಗಾ ಜಲಾನಯನ ಪ್ರದೇಶದ ಭಾಗವಾಗಿದೆ. ಇದು ಮುಂದೆ - ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ಯಮುನಾ ನದಿಯನ್ನು ಸೇರುತ್ತದೆ. ಇದು ತನ್ನ 427 ಕಿಲೋಮೀಟರ್ ಪ್ರಯಾಣದಲ್ಲಿ ಪನ್ನಾ ಹುಲಿ ಮೀಸಲು ಪ್ರದೇಶದ ಮೂಲಕ ಹಾದುಹೋಗುತ್ತದೆ. ಇದೇ ಉದ್ಯಾನದ ಒಳಗಿರುವ ಧೋಡಾನ್ ಗ್ರಾಮವನ್ನು ಅಣೆಕಟ್ಟಿನ ಸ್ಥಳವನ್ನಾಗಿ ಗುರುತಿಸಲಾಗಿದೆ.
ಕೆನ್ ನದಿಯ ಪಶ್ಚಿಮಕ್ಕೆ ಬೆತ್ವಾ ನದಿ ಹರಿಯುತ್ತದೆ. ಪ್ರಸ್ತುತ ಬಿಎಲ್ಆರ್‌ಪಿ ಯೋಜನೆಯು ಕೆನ್ ನದಿಯ ʼಹೆಚ್ಚುವರಿʼ ನೀರನ್ನು ತೆಗೆದುಕೊಂಡು ಬೆತ್ವಾ ನದಿಯ ʼಕೊರತೆಯನ್ನುʼ ತುಂಬಲು ಯೋಜಿಸುತ್ತಿದೆ. ಈ ಎರಡೂ ನದಿಗಳನ್ನು ಜೋಡಿಸುವುದರಿಂದ ಹಿಂದುಳಿದ ಪ್ರದೇಶ ಮತ್ತು ವೋಟ್ ಬ್ಯಾಂಕ್ ಆಗಿರುವ ಬುಂದೇಲಖಂಡದ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ 43,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಯೋಜಿಸಲಾಗಿದೆ. ಆದರೆ ವಾಸ್ತವದಲ್ಲಿ, ಈ ಯೋಜನೆಯು ಬುಂದೇಲಖಂಡ ಭಾಗದಿಂದ ಬುಂದೇಲಖಂಡದ ಹೊರಭಾಗದಲ್ಲಿನ ಬೆತ್ವಾ ಜಲಾನಯನ ಪ್ರದೇಶದ ಪ್ರದೇಶಗಳಿಗೆ ನೀರನ್ನು ರಫ್ತು ಮಾಡಲು ಅನುಕೂಲವಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಕೆನ್ ನದಿಯಲ್ಲಿ ಹೆಚ್ಚುವರಿ ನೀರಿದೆ ಎನ್ನುವ ಕಲ್ಪನೆಯನ್ನೇ ಪ್ರಶ್ನಿಸಬೇಕಿದೆ ಎಂದು ಡಾ. ನಚಿಕೇತ್ ಕೇಳ್ಕರ್ ಹೇಳುತ್ತಾರೆ. ಕೆನ್ ನದಿಯಲ್ಲಿ ನೀರು ಇದ್ದಿದ್ದರೆ ಕೆನ್ - ಬರಿಯಾರ್ ಪುರ ಬ್ಯಾರೇಜ್, ಗಂಗಾವು ಅಣೆಕಟ್ಟು ಮತ್ತು ಪವಾಯಿಗೆ ನೀರು ಒದಗಿಸಬೇಕಿತ್ತು. "ಕೆಲವು ವರ್ಷಗಳ ಹಿಂದೆ ನಾನು ಬಾಂಡಾ ಮತ್ತು ಕೆನ್ ನದಿಯ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದಾಗ, ಅಲ್ಲಿ ನೀರಾವರಿಗೆ ನೀರು ಲಭ್ಯವಿಲ್ಲ ಎಂದು ಹೇಳುವುದನ್ನು ಪದೇ ಪದೇ ಕೇಳಿದ್ದೇನೆ” ಎಂದು ವನ್ಯಜೀವಿ ಜೀವಿ ಟ್ರಸ್ಟಿನ ಈ ಪರಿಸರವಾದಿ ಹೇಳುತ್ತಾರೆ.
2017ರಲ್ಲಿ ಈ ನದಿಯ ಉದ್ದಕ್ಕೂ ನಡೆದು ಸಂಶೋಧನೆ ನಡೆಸಿದ್ದ ಎಸ್‌ಎಎನ್‌ಡಿಆರ್‌ಪಿ ಸಂಸ್ಥೆಯ ಸಂಶೋಧಕರು ತಮ್ಮ ವರದಿಯಲ್ಲಿ “… ನದಿ ಈಗ ನಿರಂತರ ಪ್ರವಾಹವನ್ನು ಹೊಂದಿರುವ ನದಿಯಾಗಿ ಉಳಿದಿಲ್ಲ… ಅದರ ಬಹುತೇಕ ಭಾಗವು ಹರಿವನ್ನು ಕಳೆದುಕೊಂಡಿದೆ ಮತ್ತು ಕೆಲವೆಡೇ ನೀರೇ ಇಲ್ಲ” ಎಂದು ಹೇಳಿದ್ದಾರೆ.
ಸ್ವತಃ ಕೆನ್ ನದಿಯೇ ನೀರಿನ ಕೊರತೆಯನ್ನು ಹೊಂದಿದೆ. ಹೀಗಿರುವಾಗ ಇದರ ನೀರನ್ನು ಬೆತ್ವಾ ನದಿಗೆ ಹರಿಸಿದರೆ ಕೆನ್ ನದಿಯ ಹರಿವಿನ ಪ್ರದೇಶಗಳು ನೀರಿನ ಕೊರತೆಯನ್ನು ಎದುರಿಸಲಿವೆ. ತಮ್ಮ ಇಡೀ ಬದುಕನ್ನು ಪನ್ನಾದಲ್ಲಿ ಕಳೆದಿರುವ ನಿಲೇಶ್ ತಿವಾರಿ ಕೂಡಾ ಇದನ್ನೇ ಹೇಳುತ್ತಾರೆ. ಅವರು ಹೇಳುವಂತೆ ಈ ಪ್ರದೇಶದಲ್ಲಿ ಅಣೆಕಟ್ಟಿನ ಕುರಿತು ಸಾಕಷ್ಟು ಆಕ್ರೋಶವಿದೆ. ಏಕೆಂದರೆ ಇದು ಮಧ್ಯಪ್ರದೇಶದ ಜನರನ್ನು ಶಾಶ್ವತವಾಗಿ ನೀರಿನಿಂದ ವಂಚಿತಗೊಳಿಸಿ ನೆರೆಯ ಉತ್ತರ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳುತ್ತಾರೆ.
"ಅಣೆಕಟ್ಟಿನಡಿ ಲಕ್ಷಾಂತರ ಮರಗಳು, ಸಾವಿರಾರು ಪ್ರಾಣಿಗಳು ಮುಳುಗಡೆಯಾಗಲಿವೆ. ಜನರು [ಅರಣ್ಯವಾಸಿಗಳು] ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ, ಅವರು ಬೇಘರ್ [ಮನೆ ಇಲ್ಲದವರು] ಆಗುತ್ತಾರೆ. ಜನರು ಕೋಪಗೊಂಡಿದ್ದಾರೆ, ಆದರೆ ಸರ್ಕಾರ ಗಮನ ಹರಿಸುತ್ತಿಲ್ಲ" ಎಂದು ತಿವಾರಿ ಹೇಳುತ್ತಾರೆ.
"ಎಲ್ಲೋ, ಅವರು [ಸರ್ಕಾರಿ] ರಾಷ್ಟ್ರೀಯ ಉದ್ಯಾನವನವನ್ನು ಸ್ಥಾಪಿಸಿದರು, ಎಲ್ಲೋ ಈ ನದಿಯಲ್ಲಿ ಅಣೆಕಟ್ಟು ಮತ್ತು ಅದರ ಮೇಲೆ ... ಮತ್ತು ಜನರನ್ನು ಸ್ಥಳಾಂತರಗೊಳಿಸಲಾಗಿದೆ, ಒಕ್ಕಲೆಬ್ಬಿಸಲಾಗಿದೆ..." ಉಮ್ರಾವನ್ ಎನ್ನುವ ಊರಿನ ಜಂಕಾ ಬಾಯಿ ತಮ್ಮ ಮನೆಯನ್ನು 2015ರಲ್ಲಿ ವಿಸ್ತರಿಸಲ್ಪಟ್ಟ ಪನ್ನಾ ಹುಲಿ ಮೀಸಲು ಪ್ರದೇಶ ನುಂಗಿತು ಎಂದು ಹೇಳುತ್ತಾರೆ.
ಐವತ್ತರ ಪ್ರಾಯದ, ಗೊಂಡ್ ಆದಿವಾಸಿ ಗ್ರಾಮ ಉಮ್ರವಾನ್ ನಿವಾಸಿಯಾದ ಅವರು ಈಗ ಒಂದು ದಶಕದಿಂದ ಸೂಕ್ತ ಪರಿಹಾರಕ್ಕಾಗಿ ಹೋರಾಡುತ್ತಿದ್ದಾರೆ. "ಸರ್ಕಾರವು ನಮ್ಮ ಭವಿಷ್ಯದ ಬಗ್ಗೆ, ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ. ಅವರು ನಮ್ಮನ್ನು ಮೂರ್ಖರನ್ನಾಗಿ ಮಾಡಿದ್ದಾರೆ", ಎಂದು ಹುಲಿ ಸಂರಕ್ಷಣೆಗಾಗಿ ತಮ್ಮಿಂದ ಕಿತ್ತುಕೊಂಡ ಭೂಮಿಯಲ್ಲಿ ರೆಸಾರ್ಟ್ ಏಳುತ್ತಿರುವುದನ್ನು ತೋರಿಸುತ್ತಾ “ಇಲ್ಲಿ ನೋಡಿ ಅವರು ಪ್ರವಾಸಿಗರಿಗಾಗಿ ರೆಸಾರ್ಟ್ ಮಾಡಲು ಭೂಮಿಯನ್ನು ಸರ್ವೇ ಮಾಡಿರುವುದು. ನಮ್ಮನ್ನು ಇಲ್ಲಿಂದ ಹೊರ ಹಾಕಿ ಅವರು ಈ ಕೆಲಸ ಮಾಡುತ್ತಿದ್ದಾರೆ” ಎಂದರು.
*****
ಡಿಸೆಂಬರ್ 2014ರಲ್ಲಿ, ಕೆನ್-ಬೆತ್ವಾ ನದಿ ಜೋಡಣೆಯನ್ನು ಸಾರ್ವಜನಿಕ ವಿಚಾರಣೆಯಲ್ಲಿ ಘೋಷಿಸಲಾಯಿತು.
ಆದರೆ, ಸ್ಥಳೀಯರು ಸಾರ್ವಜನಿಕ ಸಭೆ ನಡೆದಿಲ್ಲ, ತೆರವು ನೋಟಿಸುಗಳು ಮತ್ತು ಮೌಖಿಕ ಭರವಸೆಗಳನ್ನು ಮಾತ್ರ ನೀಡಲಾಗಿದೆ ಎಂದು ಪ್ರಮಾಣ ಮಾಡುತ್ತಾರೆ. ಇದು ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ ಕಾಯ್ದೆ , 2013 (ಎಲ್ಎಆರ್‌ಆರ್‌ಎ) ಯ ಉಲ್ಲಂಘನೆಯಾಗಿದೆ. ಈ ಕಾಯ್ದೆ ಹೀಗೆ ಆದೇಶಿಸುತ್ತದೆ: "ಭೂಸ್ವಾಧೀನದ ವಿಷಯಗಳನ್ನು ಅಧಿಕೃತ ಗೆಜೆಟ್ಟಿನಲ್ಲಿ, ಸ್ಥಳೀಯ ಪತ್ರಿಕೆಗಳಲ್ಲಿ, ಸ್ಥಳೀಯ ಭಾಷೆಯಲ್ಲಿ, ಸಂಬಂಧಿತ ಸರ್ಕಾರಿ ಸೈಟುಳಲ್ಲಿ ಘೋಷಣೆ ಮಾಡಬೇಕು." ಅಧಿಸೂಚನೆಯನ್ನು ನೀಡಿದ ನಂತರ, ಈ ಉದ್ದೇಶಕ್ಕಾಗಿ ಕರೆಯಲಾದ ಸಭೆಯ ಮೂಲಕ ಗ್ರಾಮ ಸಭೆಗೆ ಮಾಹಿತಿ ನೀಡಬೇಕು.
"ಕಾಯ್ದೆಯಲ್ಲಿ ಸೂಚಿಸಲಾದ ಯಾವುದೇ ವಿಧಾನಗಳ ಮೂಲಕ ಸರ್ಕಾರವು ಜನರಿಗೆ ಮಾಹಿತಿಯನ್ನು ತಿಳಿಸಿರಲಿಲ್ಲ. 'ನೀವು ಇದನ್ನು ಕಾಯ್ದೆಯ ಯಾವ ಸೆಕ್ಷನ್ ಅಡಿಯಲ್ಲಿ ಮಾಡುತ್ತಿದ್ದೀರಿ ಎಂದು ನಮಗೆ ತಿಳಿಸಿ' ಎಂದು ನಾವು ಅನೇಕ ಬಾರಿ ಕೇಳಿದ್ದೇವೆ" ಎಂದು ಸಾಮಾಜಿಕ ಕಾರ್ಯಕರ್ತ ಅಮಿತ್ ಭಟ್ನಾಗರ್ ಹೇಳುತ್ತಾರೆ. ಈ ವರ್ಷದ ಜೂನ್ ತಿಂಗಳಿನಲ್ಲಿ, ಗ್ರಾಮಸಭೆಯ ಸಹಿಯ ಪುರಾವೆಗಳನ್ನು ತೋರಿಸುವಂತೆ ಒತ್ತಾಯಿಸಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ್ದರು. ಅವರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು.
"ಮೊದಲು ನೀವು [ಸರ್ಕಾರ] ಯಾವ ಗ್ರಾಮ ಸಭೆ ಮಾಡಿದ್ದೀರಿ ಎಂದು ನಮಗೆ ತಿಳಿಸಿ, ಏಕೆಂದರೆ ನೀವು ಮಾಡಿಯೇ ಇಲ್ಲ" ಎಂದು ಆಮ್ ಆದ್ಮಿ ಪಕ್ಷದ ಸದಸ್ಯ ಭಟ್ನಾಗರ್ ಹೇಳುತ್ತಾರೆ. "ಎರಡನೆಯದಾಗಿ, ಕಾನೂನು ಹೇಳುವಂತೆ, ಈ ಯೋಜನೆಗೆ ಜನರ ಒಪ್ಪಿಗೆ ಇರಬೇಕು, ಇಲ್ಲಿ ಜನರಿಗೆ ಒಪ್ಪಿಗೆಯಿಲ್ಲ. ಮತ್ತು ಮೂರನೆಯದಾಗಿ, ಅವರು ಹೊರಡಲು ಸಿದ್ಧವಿದ್ದರೆ, ನೀವು ಅವರನ್ನು ಎಲ್ಲಿಗೆ ಕಳುಹಿಸುತ್ತಿದ್ದೀರಿ? ನೀವು ಈ ಬಗ್ಗೆ ಏನನ್ನೂ ಹೇಳಿಲ್ಲ, ಯಾವುದೇ ನೋಟಿಸ್ ಅಥವಾ ಮಾಹಿತಿಯನ್ನು ನೀಡಿಲ್ಲ.”
ಇಲ್ಲಿ ಎಲ್‌ಎಆರ್‌ಆರ್‌ಎ ಕಾಯ್ದೆಯ ಉಲ್ಲಂಘನೆಯಷ್ಟೇ ನಡೆದಿಲ್ಲ, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಭರವಸೆಗಳನ್ನು ಸಹ ನೀಡಿದ್ದರು. ಧೋಡಾನ್ ನಿವಾಸಿ ಗುರುದೇವ್ ಮಿಶ್ರಾ ಹೇಳುವಂತೆ ಪ್ರತಿಯೊಬ್ಬರಲ್ಲೂ ತಾವು ಮೋಸ ಹೋಗಿದ್ದೇವೆ ಎನ್ನುವ ಅಭಿಪ್ರಾಯವಿದೆ. "ನಿಮ್ಮ ಭೂಮಿಗೆ ಭೂಮಿ, ನಿಮ್ಮ ಮನೆಗೆ ಪಕ್ಕಾ ಮನೆ ನೀಡುತ್ತೇವೆ, ನಿಮಗೆ ಉದ್ಯೋಗ ಸಿಗುತ್ತದೆ. ನಿಮ್ಮ ಬೀಳ್ಕೊಡುಗೆ ಪ್ರೀತಿಯ ಮಗಳ ಮದುವೆಯ ಸಂದರ್ಭದ ಬೀಳ್ಕೊಡುಗೆಯಂತೆಯೇ ಇರುತ್ತದೆʼ ಎಂದು ಅಧಿಕಾರಿಗಳು ಹೇಳಿದರು” ಎಂದು ಅವರು ಹೇಳುತ್ತಾರೆ.
ಊರಿನ ಮಾಜಿ ಸರಪಂಚರಾದ ಅವರು ಅನೌಪಚಾರಿಕ ಗ್ರಾಮ ಸಭೆಯಲ್ಲಿ ಪರಿಯೊಂದಿಗೆ ಮಾತನಾಡುತ್ತಿದ್ದರು. "ಸರ್ಕಾರ ಏನು ಭರವಸೆ ನೀಡಿತ್ತು, ಛತ್ತರ್‌ಪುರದ ಜಿಲ್ಲಾಧಿಕಾರಿ, ಮುಖ್ಯಮಂತ್ರಿ, [ಕೆಬಿಆರ್‌ಎಲ್‌ಪಿ] ಯೋಜನೆಯ ಅಧಿಕಾರಿಗಳು ಇಲ್ಲಿಗೆ ಬಂದಾಗ ನಮಗೆ ಏನು ಭರವಸೆ ನೀಡಿದ್ದರೋ ಅದನ್ನು ಮಾತ್ರ ನಾವು ಕೇಳುತ್ತಿದ್ದೇವೆ" ಎಂದು ಅವರು ಹೇಳುತ್ತಾರೆ. "ಆದರೆ ಅವರು ಅದ್ಯಾವುದನ್ನೂ ಈಡೇರಿಸಿಲ್ಲ."
ಗಾಧ್ರಾದ ಪನ್ನಾ ಹುಲಿ ಮೀಸಲು ಪ್ರದೇಶದ ಪೂರ್ವ ಭಾಗದಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. “[ಪನ್ನಾ] ಕಲೆಕ್ಟರ್ ನೀವು ಈಗಿರುವಂತೆಯೇ ಇರಲು ವ್ಯವಸ್ಥೆ ಮಾಡಿಕೊಡುತ್ತೇವೆ. ಇದು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರಲಿದೆ. ನಾವು ಇಡೀ ಊರನ್ನೇ ಪುನರ್ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಅಂತಹದ್ದೇನನ್ನೂ ಮಾಡಲಿಲ್ಲ. ಈಗ ನಮ್ಮನ್ನು ಇಲ್ಲಿಂದ ಹೊರಡಿ ಎನ್ನುತ್ತಿದ್ದಾರೆ” ಎಂದು ಪರೋಹರ್ ಹೇಳುತ್ತಾರೆ.
ಪರಿಹಾರದ ಮೊತ್ತವೂ ಸ್ಪಷ್ಟವಾಗಿಲ್ಲ ಮತ್ತು ಅನೇಕ ಅಂಕಿಅಂಶಗಳನ್ನು ತೇಲಿಬಿಡಲಾಗುತ್ತಿದೆ - 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಪುರುಷನಿಗೆ 12ರಿಂದ 20 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಇಲ್ಲಿನ ಜನರು ಕೇಳುತ್ತಾರೆ: "ಇದು ತಲಾ ಒಬ್ಬರಿಗೆ ನೀಡಲಾಗುತ್ತದೆಯೋ ಅಥವಾ ಪ್ರತಿ ಕುಟುಂಬಕ್ಕೆ ಒಬ್ಬರಿಗೋ? ಮಹಿಳೆಯರು ಮುಖ್ಯಸ್ಥರಾಗಿರುವ ಕುಟುಂಬದ ಕತೆ ಏನು? ಮತ್ತು ಅವರು ನಮಗೆ ಭೂಮಿಗೆ ಪ್ರತ್ಯೇಕವಾಗಿ ಪರಿಹಾರ ನೀಡುತ್ತಾರೆಯೇ? ನಮ್ಮ ಜಾನುವಾರುಗಳ ಕತೆ ಏನು? ನಮಗೆ ಯಾವುದನ್ನೂ ಸ್ಪಷ್ಟವಾಗಿ ತಿಳಿಸಲಾಗಿಲ್ಲ.”
ಸರ್ಕಾರದ ಹಿಂದಿನ ಸುಳ್ಳುಗಳು ಮತ್ತು ಅಸ್ಪಷ್ಟತೆಯ ಪರಿಣಾಮವಾಗಿ, ಪರಿ ಭೇಟಿ ನೀಡಿದ ಪ್ರತಿಯೊಂದು ಹಳ್ಳಿಯಲ್ಲಿ, ಅಲ್ಲಿನ ಜನರಿಗೆ ಯಾವಾಗ ಮತ್ತು ಎಲ್ಲಿಗೆ ಹೋಗುತ್ತಾರೆನ್ನುವುದು ಅಥವಾ ಮನೆಗಳು, ಭೂಮಿ, ಜಾನುವಾರುಗಳು ಮತ್ತು ಮರಗಳಿಗೆ ನಿಖರವಾದ ಪರಿಹಾರ ಮೊತ್ತ/ದರ ಎಷ್ಟು ಎನ್ನುವುದು ತಿಳಿದಿರಲಿಲ್ಲ. 22 ಹಳ್ಳಿಗಳ ಜನರು ನಿಶ್ಚಲ ಪರಿಸ್ಥಿತಿಯಲ್ಲಿ ಬದುಕು ನಡೆಸುತ್ತಿರುವಂತೆ ತೋರುತ್ತಿತ್ತು.
ಅಣೆಕಟ್ಟಿನ ನೀರಿನಡಿ ಮುಳುಗಲಿರುವ ಧೋಡನ್‌ನಲ್ಲಿರುವ ತನ್ನ ಮನೆಯ ಹೊರಗೆ ಕುಳಿತಿದ್ದ ಮಾಲೀಕತ್ವವನ್ನು ಸಾಬೀತುಪಡಿಸುವ ಹಿಂದಿನ ರಸೀದಿಗಳು ಮತ್ತು ಅಧಿಕೃತ ದಾಖಲೆಗಳನ್ನು ತಂದರು. "ನನ್ನ ಬಳಿ ಪಟ್ಟಾ (ಮಾಲೀಕತ್ವದ ಅಧಿಕೃತ ದಾಖಲೆ) ಇಲ್ಲ ಎಂದು ಅವರು ಹೇಳುತ್ತಾರೆ. ಆದರೆ ನನ್ನ ಬಳಿ ಈ ರಸೀದಿಗಳಿವೆ. ನನ್ನ ತಂದೆ, ಅವರ ತಂದೆ, ಅವರ ತಂದೆ... ಅವರೆಲ್ಲರೂ ಈ ಭೂಮಿಯಲ್ಲೇ ಬದುಕಿದ್ದರು. ನನ್ನ ಬಳಿ ಎಲ್ಲಾ ರಸೀದಿಗಳಿವೆ."
ಅರಣ್ಯ ಹಕ್ಕುಗಳ ಕಾಯ್ದೆ 2006ರ ಪ್ರಕಾರ, ಆದಿವಾಸಿ ಅಥವಾ ಅರಣ್ಯವಾಸಿ ಬುಡಕಟ್ಟು ಜನಾಂಗದವರು "ಅರಣ್ಯ ಭೂಮಿಗೆ ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ರಾಜ್ಯ ಸರ್ಕಾರ ನೀಡುವ ಪಟ್ಟಾಗಳು ಅಥವಾ ಗುತ್ತಿಗೆಗಳು ಅಥವಾ ಅನುದಾನಗಳನ್ನು ಹಕ್ಕುಪತ್ರಗಳಾಗಿ ಪರಿವರ್ತಿಸಲು" ಅನುಮತಿಸಲಾಗಿದೆ.
ಆದರೆ ಕೈಲಾಶ್ ಅವರ ಬಳಿಯಿರುವ ದಾಖಲೆಗಳು 'ಸಾಕಾಗುವುದಿಲ್ಲ' ಎಂಬ ಕಾರಣಕ್ಕೆ ಅವರಿಗೆ ಪರಿಹಾರವನ್ನು ನಿರಾಕರಿಸಲಾಗುತ್ತಿದೆ. "ಈ ಭೂಮಿ ಮತ್ತು ಮನೆಯ ಮೇಲೆ ನಮಗೆ ಹಕ್ಕುಗಳಿವೆಯೇ ಅಥವಾ ಇಲ್ಲವೇ ಎನ್ನುವುದು ನಮಗೆ ಈಗ ಸ್ಪಷ್ಟವಾಗಿಲ್ಲ. ಪರಿಹಾರ ಸಿಗುತ್ತದೆಯೋ ಇಲ್ಲವೋ ಎಂದು ಹೇಳುತ್ತಿಲ್ಲ. ಅವರು ನಮ್ಮನ್ನು ಇಲ್ಲಿಂದ ಓಡಿಸಲು ನೋಡುತ್ತಿದ್ದಾರೆ. ನಮ್ಮ ಗೋಳನ್ನು ಕೇಳಬಲ್ಲವರು ಯಾರೂ ಇಲ್ಲ.”
ಅಣೆಕಟ್ಟಿನ ಹಿನ್ನೀರು 14 ಗ್ರಾಮಗಳನ್ನು ಮುಳುಗಿಸುತ್ತದೆ ಮತ್ತು ಇತರ ಎಂಟು ಗ್ರಾಮಗಳನ್ನು ಸರ್ಕಾರವು ಪರಿಹಾರವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ
ಮುಂದಿನ ಗ್ರಾಮವಾದ ಪಾಲ್ಕೋಹಾದಲ್ಲಿ, ಜುಗಲ್ ಆದಿವಾಸಿ ಖಾಸಗಿಯಾಗಿ ಮಾತನಾಡಲು ಬಯಸಿದರು. "ನಿಮ್ಮ ಪಟ್ಟಾ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಪಟ್ವಾರಿ [ಪಟೇಲರು] ಘೋಷಿಸಿದ್ದಾರೆ" ಎಂದು ನಾವು ಊರಿನ ಕೇಂದ್ರದಿಂದ ಹೊರನಡೆಯುವಾಗ ಅವರು ಹೇಳಿದರು. "ಅರ್ಧದಷ್ಟು ಜನರಿಗೆ ಸ್ವಲ್ಪ ಪರಿಹಾರ ಸಿಕ್ಕಿದೆ, ಉಳಿದವರಿಗೆ ಏನೂ ಸಿಕ್ಕಿಲ್ಲ." ಈಗ ಅವರು ತನ್ನ ವಾರ್ಷಿಕ ವಲಸೆಯನ್ನು ಆರಂಭಿಸುವ ಸಮಯ. ಆದರೆ ಅವರು ಹಾಗೆ ಹೊರಟರೆ ಪರಿಹಾರ ಕೈತಪ್ಪಬಹುದು, ಮತ್ತು ಪರಿಣಾಮವಾಗಿ ತನ್ನ ಏಳು ಮಕ್ಕಳ ಭವಿಷ್ಯವು ಅಪಾಯಕ್ಕೆ ಸಿಲುಕಬಹುದು ಎನ್ನುವ ಭಯ ಅವರನ್ನು ಕಾಡುತ್ತಿದೆ.
"ನಾನು ಸಣ್ಣವನಿದ್ದಾಗ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ಕಾಡಿಗೂ ಹೋಗುತ್ತಿದ್ದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಆದರೆ ಕಳೆದ 25 ವರ್ಷಗಳಲ್ಲಿ, ಹುಲಿ ಮೀಸಲು ಪ್ರದೇಶವಾಗಿ ಮಾರ್ಪಟ್ಟ ಕಾಡಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಅಂದಿನಿಂದ ಅವರಂತಹ ಆದಿವಾಸಿಗಳಿ ದಿನಗೂಲಿ ಕೆಲಸ ಹುಡುಕಿಕೊಂಡು ವಲಸೆ ಹೋಗುವುದನ್ನು ಬಿಟ್ಟು ಇನ್ನೊಂದು ಆಯ್ಕೆ ಉಳಿದಿಲ್ಲ.
ಸ್ಥಳಾಂತರಗೊಳ್ಳಲಿರುವ ಹಳ್ಳಿಗಳ ಮಹಿಳೆಯರು ತಮ್ಮ ನ್ಯಾಯಯುತ ಪಾಲನ್ನು ಪಡೆಯುವ ವಿಷಯದಲ್ಲಿ ಹಠ ಹಿಡಿದು ಕುಳಿತಿದ್ದಾರೆ. "ಪ್ರಧಾನಿ ಮೋದಿ ಯಾವಾಗಲೂ 'ಮಹಿಳೆಯರಿಗಾಗಿ ಈ ಯೋಜನೆ... ಮಹಿಳೆಯರಿಗಾಗಿ ಆ ಯೋಜನೆ' ಎನ್ನುತ್ತಾರೆ. ನಮಗೆ ಅದು ಬೇಕಿಲ್ಲ. ನಮ್ಮ ಹಕ್ಕನ್ನು ನಮಗೆ ಕೊಟ್ಟರೆ ಸಾಕು" ಎಂದು (ದಲಿತ) ರವಿದಾಸ್ ಸಮುದಾಯಕ್ಕೆ ಸೇರಿದ ಪಾಲ್ಕೋಹಾದ ರೈತ ಮಹಿಳೆ ಸುನ್ನಿ ಬಾಯಿ ಹೇಳುತ್ತಾರೆ.
"ಪುರುಷರಿಗೆ ಮಾತ್ರ [ಪರಿಹಾರ] ಪ್ಯಾಕೇಜ್ ಏಕೆ ಸಿಗುತ್ತಿದೆ ಮತ್ತು ಮಹಿಳೆಯರಿಗೇಕೆ ಏನೂ ಸಿಗುತ್ತಿಲ್ಲ? ಯಾವ ಆಧಾರದ ಮೇಲೆ ಸರ್ಕಾರ ಈ ಕಾನೂನನ್ನು ಮಾಡಿದೆ?" ಎಂದು ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳ ತಾಯಿಐದ ಅವರು ಕೇಳುತ್ತಾರೆ. "ಒಬ್ಬ ಗಂಡನಿಲ್ಲದ ಮಹಿಳೆ ಒಕ್ಕಲೆಬ್ಬಿಸಲ್ಪಟ್ಟರೆ ಅವಳು ತನಗೆ ಹಾಗೂ ತನ್ನ ಮಕ್ಕಳ ಹೊಟ್ಟೆಪಾಡಿಗೆ ಏನು ಮಾಡಬೇಕು? ಕಾನೂನು ಈ ವಿಷಯಗಳ ಬಗ್ಗೆ ಯೋಚಿಸಬೇಕು... ಅಷ್ಟಕ್ಕೂ, ಅವಳು ಮತದಾರಳೂ ಹೌದು."
*****
"ಜಲ, ಜೀವನ್, ಜಂಗಲ್ ಔರ್ ಜಾನ್ವರ್ [ನೀರು, ಹೊಟ್ಟೆಪಾಡು, ಕಾಡುಗಳು ಮತ್ತು ಪ್ರಾಣಿಗಳಿಗಾಗಿ] ನಾವು ಹೋರಾಡುತ್ತಿದ್ದೇವೆ" ಎಂದು ಇಲ್ಲಿನ ಜನರು ಪರಿಗೆ ಹೇಳುತ್ತಾರೆ.
ಧೋಡನ್‌ನ ಗುಲಾಬ್ ಬಾಯಿ ತನ್ನ ದೊಡ್ಡ ಅಂಗಳವನ್ನು ನಮಗೆ ತೋರಿಸುತ್ತಾ ಮನೆಯಂಗಳ ಹಾಗೂ ಅಡುಗೆಮನೆಗಳನ್ನು ಪರಿಹಾರದ ವ್ಯಾಪ್ತಿಯಿಂದ ಹೊರಗಿಟ್ಟಿರುವ ಕುರಿತು ಹೇಳಿದರು. ಇವುಗಳು ಮನೆಯ ಮುಖ್ಯ ಕೋಣೆಯಿಂದ ಹೊರಗಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳುತ್ತಾರೆ. ಆದರೆ 60 ವರ್ಷದ ಅವರು ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. "[ನನ್ನಂತಹ] ಆದಿವಾಸಿಗಳಿಗೆ ಶಾಸನ್ [ಆಡಳಿತ] ದಿಂದ ಏನೂ ಸಿಕ್ಕಿಲ್ಲ. ನಾನು ಇಲ್ಲಿಂದ ಭೋಪಾಲ್ [ರಾಜ್ಯ ರಾಜಧಾನಿ] ಗೆ ಹೋಗಿ ಹೋರಾಡುತ್ತೇನೆ. ನನಗೆ ಶಕ್ತಿ ಇದೆ. ನಾನು ಅಲ್ಲಿಗೆ ಹೋಗಿದ್ದೆ. ನನಗೆ ಭಯವಿಲ್ಲ. ನಾನು ಆಂದೋಲನಕ್ಕೆ ಸಿದ್ಧಳಿದ್ದೇನೆ" ಎಂದು ಹೇಳಿದರು.
ಕೆಬಿಆರ್‌ಎಲ್‌ಪಿ ವಿರುದ್ಧ ಪ್ರತಿಭಟನೆಗಳು 2017ರಲ್ಲಿ ಗ್ರಾಮ ಸಭೆಗಳೊಂದಿಗೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದವು. ಜನವರಿ 31, 2021ರಂದು, 300 ಕ್ಕೂ ಹೆಚ್ಚು ಜನರು ಎಲ್ಎಆರ್ಎ ಉಲ್ಲಂಘನೆಯ ವಿರುದ್ಧ ಛತ್ತರ್ಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಲು ಒಟ್ಟುಗೂಡಿದರು. 2023 ರ ಗಣರಾಜ್ಯೋತ್ಸವದಂದು, ಮೂರು ಜಲ ಸತ್ಯಾಗ್ರಹಗಳಲ್ಲಿ ಮೊದಲನೆಯದು (ನೀರಿಗೆ ಸಂಬಂಧಿಸಿದ ಕಾರಣಗಳಿಗಾಗಿ ಪ್ರತಿಭಟನೆಗಳು) ಪಿಟಿಆರ್ನ 14 ಹಳ್ಳಿಗಳ ಸಾವಿರಾರು ಜನರು ತಮ್ಮ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಮಾತನಾಡಿದರು.
ಕಳೆದ ವರ್ಷ ಅಣೆಕಟ್ಟು ಉದ್ಘಾಟಿಸಲು ಧೋಡಾನ್‌ಗೆ ಬರಬೇಕಿದ್ದ ಪ್ರಧಾನಿ ಕಾರ್ಯಕ್ರಮಕ್ಕೆ ಬಾರದಿರಲು ನಿರ್ಧರಿಸಿದ್ದರ ಹಿಂದೆ ಸ್ಥಳೀಯರ ಆಕ್ರೋಶದ ಪಾತ್ರವಿದೆಯೆಂದು ಇಲ್ಲಿನ ಜನರು ಹೇಳುತ್ತಾರೆ. ಆದರೆ ಇದರ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಈ ವರದಿಗಾರರಿಗೆ ಸಾಧ್ಯವಾಗಲಿಲ್ಲ.
ಯೋಜನೆಯ ಸುತ್ತಲಿನ ವಿವಾದ ಮತ್ತು ದುರುದ್ದೇಶವು 2023ರ ಆಗಸ್ಟ್ ತಿಂಗಳಿನಲ್ಲಿ ನಡೆಯಬೇಕಿದ್ದ ಟೆಂಡರ್ ಪ್ರಕ್ರಿಯೆಗೂ ಹೊಡೆತ ನೀಡಿತು. ಟೆಂಡರ್ ಸಲ್ಲಿಸಲು ಯಾರೂ ಮುಂದೆ ಬಾರದ ಕಾರಣ ಅರ್ಜಿ ಸಲ್ಲಿಸಲು ಘೋಷಿಸಲಾಗಿದ್ದ ಕೊನೆಯ ದಿನಾಂಕವನ್ನು ಆರು ತಿಂಗಳ ತನಕ ವಿಸ್ತರಿಸಲಾಗಿತ್ತು.
ಸರ್ಕಾರದ ಸುಳ್ಳು ಮತ್ತು ಅಸ್ಪಷ್ಟತೆಯ ಕಾರಣದಿಂದಾಗಿ ಪರಿ ಭೇಟಿ ನೀಡಿದ ಪ್ರತಿ ಹಳ್ಳಿಯಲ್ಲಿನ ಜನರಿಗೂ ತಾವು ಯಾವಾಗ ಮತ್ತು ಎಲ್ಲಿಗೆ ಸ್ಥಳಾಂತರಗೊಳ್ಳಲಿದ್ದೇವೆ ಎನ್ನುವುದು ತಿಳಿದಿರಲಿಲ್ಲ. ಅಲ್ಲದೆ ಅಥವಾ ಮನೆ, ಭೂಮಿ, ಜಾನುವಾರು ಮತ್ತು ಮರಗಳಿಗೆ ನಿಖರವಾದ ಪರಿಹಾರ ಮೊತ್ತ / ದರವೆಷ್ಟು ಮತ್ತು ಅದನ್ನು ಯಾವಾಗ ನೀಡಲಾಗುತ್ತದೆಯೆನ್ನುವುದು ಕೂಡಾ ತಿಳಿದಿರಲಿಲ್ಲ
*****
"ಮಧ್ಯ ಭಾರತದಲ್ಲಿನ ಹವಾಮಾನ ವೈಪರೀತ್ಯದ ಕುರಿತು ಹೆಚ್ಚಿನ ಜನರು ಮಾತನಾಡುವುದಿಲ್ಲ. ಇತ್ತೀಚೆಗೆ ನಾವು ಇಲ್ಲಿ ಮಳೆ ಹಾಗೂ ಬರಗಾಲಗಳಲ್ಲಿ ವಿಪರೀತ ಹೆಚ್ಚಳವನ್ನು ಕಾಣುತ್ತಿದ್ದೇವೆ. ಇವೆರಡೂ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಸೂಚಿಸುತ್ತವೆ” ಎಂದು ಪರಿಸರ ತಜ್ಞ ಕೇಳ್ಕರ್ ಹೇಳುತ್ತಾರೆ. “ಮಧ್ಯ ಭಾರತದ ಹೆಚ್ಚಿನ ನದಿಗಳು ಹವಾಮಾನ ವೈಪರೀತ್ಯದಿಂದಾಗಿ ವೇಗ ಹರಿವಿಗೆ ಸಾಕ್ಷಿಯಾಗುತ್ತಿವೆ, ಆದರೆ ಈ ಹರಿವು ಹೆಚ್ಚು ಕಾಲ ಉಳಿಯುವುದಿಲ್ಲ. ಈ ಹರಿವು ನದಿಯಲ್ಲಿ ನೀರಿನ ಹೆಚ್ಚುವರಿ ಹರಿವಿದೆ ಎನ್ನುವ ಕಲ್ಪನೆಯನ್ನು ಮೂಡಿಸಿರಬಹುದು. ಆದರೆ ಹವಾಮಾನ ವೈಪರೀತ್ಯದ ದೃಷ್ಟಿಯಿಂದ ಇದನ್ನು ನೋಡಿದಾಗ ಈ ಹರಿವು ತಾತ್ಕಾಲಿಕೆ ಎನ್ನುವುದು ಸ್ಪಷ್ಟವಾಗುತ್ತದೆ.”
ಈ ಅಲ್ಪಾವಧಿಯ ಬದಲಾವಣೆಗಳನ್ನು ನಂಬಿಕೊಂಡು ನದಿ ಜೋಡಿಸುವ ಕಾರ್ಯಕ್ಕೆ ಕೈಯಿಟ್ಟರೆ ಮುಂದಿನ ದಿನಗಳಲ್ಲಿ ಈ ಪ್ರದೇಶವು ಇನ್ನಷ್ಟು ಬರಗಾಲವನ್ನು ಎದುರಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಅವರು ಎಚ್ಚರಿಸುತ್ತಾರೆ.
ನೈಸರ್ಗಿಕ ಅರಣ್ಯದ ಬೃಹತ್ ಪ್ರದೇಶದ ನಾಶದ ಜಲಶಾಸ್ತ್ರೀಯ ಪರಿಣಾಮವು ಒಂದು ದೊಡ್ಡ ತಪ್ಪು ಎಂದು ಠಕ್ಕರ್ ಎಚ್ಚರಿಸುತ್ತಾರೆ. "ಸುಪ್ರೀಂ ಕೋರ್ಟಿನ ಕೇಂದ್ರ ಉನ್ನತಾಧಿಕಾರ ಸಮಿತಿಯ ವರದಿಯು ಈ ಬಗ್ಗೆ ಬೆಳಕು ಚೆಲ್ಲಿದೆ, ಆದರೆ ಆ ವರದಿಯನ್ನು ಸುಪ್ರೀಂ ಕೋರ್ಟ್ ಸಹ ಪರಿಗಣಿಸಿಲ್ಲ" ಎಂದು ಅವರು ಹೇಳಿದರು.
ನೇಚರ್ ಕಮ್ಯುನಿಕೇಷನ್ ಪತ್ರಿಕೆಯ ನದಿ ಜೋಡಣೆಯ ಬಗ್ಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮುಂಬೈ 2023ರಲ್ಲಿ ಪ್ರಕಟಿಸಿದ ಒಂದು ಪ್ರಬಂಧವು ಹೀಗೆ ಎಚ್ಚರಿಸುತ್ತದೆ: “ವರ್ಗಾವಣೆಗೊಂಡ ನೀರಿನಿಂದ ಹೆಚ್ಚಿದ ನೀರಾವರಿಯು ಈಗಾಗಲೇ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಸರಾಸರಿ ಮಳೆಯನ್ನು 12% ವರೆಗೆ ಕಡಿಮೆ ಮಾಡುತ್ತದೆ… ಸೆಪ್ಟೆಂಬರ್ ತಿಂಗಳಿನಲ್ಲಿ ಕಡಿಮೆ ಮಳೆಯಾದರೆ ಮಾನ್ಸೂನ್ ನಂತರ ನದಿಗಳು ಒಣಗುತ್ತವೆ, ಇದು ದೇಶಾದ್ಯಂತ ನೀರಿನ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಪರಸ್ಪರ ಸಂಪರ್ಕವನ್ನು ನಿಷ್ಕ್ರಿಯಗೊಳಿಸುತ್ತದೆ.
ಯೋಜನೆಯು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯೂಡಿಎ) ಬಳಸಿದ ಮಾಹಿತಿಗಳನ್ನು ರಾಷ್ಟ್ರೀಯ ಭದ್ರತಾ ಕಾಳಜಿಗಳ ಕಾರಣ ಹೇಳಿ ವಿಜ್ಞಾನಿಗಳೊಂದಿಗೆ ಹಂಚಿಕೊಳ್ಳಲು ನಿರಾಕರಿಸಲಾಗುತ್ತಿದೆ ಎಂದು ಹಿಮಾಂಶು ಠಕ್ಕರ್ ಹೇಳುತ್ತಾರೆ.
2015ರಲ್ಲಿ ಅಣೆಕಟ್ಟು ಕಟ್ಟುವುದು ಬಹುತೇಕ ಖಚಿತವಾದಾಗ ಠಕ್ಕರ್ ಮತ್ತು ಎಸ್‌ಎಎನಾರ್‌ಪಿ ಸಂಸ್ಥೆಯ ಇತರರು ಈ ಕುರಿತಾಗಿ ಪರಿಸರ ಮೌಲ್ಯಮಾಪನ ಸಮಿತಿಗೆ (ಇಎಸಿ) ಅನೇಕ ಪತ್ರಗಳನ್ನು ಬರೆದಿದ್ದರು. 'ದೋಷಪೂರಿತ ಕೆನ್ ಬೆತ್ವಾ, ಇಐಎ ಮತ್ತು ಸಾರ್ವಜನಿಕ ಅಹವಾಲಿನಲ್ಲಿನ ಉಲ್ಲಂಘನೆಗಳು' ಎಂಬ ಶೀರ್ಷಿಕೆಯ ಪತ್ರ ಅವುಗಳಲ್ಲಿ ಒಂದು. ಈ ಪತ್ರದಲ್ಲಿ "ಯೋಜನೆಯ ಇಐಎ ಮೂಲಭೂತವಾಗಿ ದೋಷಗಳಿಂದ ಕೂಡಿದ್ದು, ಅಪೂರ್ಣವಾಗಿದೆ ಮತ್ತು ಅದರ ಸಾರ್ವಜನಿಕ ವಿಚಾರಣೆಗಳು ಹಲವಾರು ಉಲ್ಲಂಘನೆಗಳನ್ನು ಒಳಗೊಂಡಿವೆ. ಇಂತಹ ಅಸಮರ್ಪಕ ಅಧ್ಯಯನಗಳೊಂದಿಗೆ ಯೋಜನೆಗೆ ಯಾವುದೇ ಅನುಮತಿ ನೀಡುವುದು ತಪ್ಪು ಮಾತ್ರವಲ್ಲ, ಕಾನೂನಾತ್ಮಕವಾಗಿ ಸಮರ್ಥನೀಯವೂ ಅಲ್ಲ” ಎಂದು ಹೇಳಲಾಗಿತ್ತು.
ಈಗಾಗಲೇ 15-20 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ. ಸ್ಪಷ್ಟ ಪರಿಹಾರದ ಕಲ್ಪನೆಯಿಲ್ಲದೆ ಒಕ್ಕಲೆಬ್ಬಿಸುವ ವದಂತಿಯ ಬೆದರಿಕೆಗಳು ಗಾಳಿ ಸುದ್ದಿಯಾಗಿ ಹರಡುತ್ತಿದೆ. ಬೇಸಾಯವನ್ನು ನಿಲ್ಲಿಸಲಾಗಿದೆ. ದೈನಂದಿನ ಕೂಲಿ ಕೆಲಸಕ್ಕಾಗಿ ವಲಸೆ ಹೋದರೆ ಪರಿಹಾರದ ಹೆಸರಿನಲ್ಲಿ ಯಾವುದೇ ಬರಬಹುದಾದ ಸಂಭಾವ್ಯ ಕರಪತ್ರಗಳು ತಪ್ಪಿ ಹೋಗುವ ಸಾಧ್ಯತೆಯಿದೆ.
ಸುನ್ನಿ ಬಾಯಿ ಇಡೀ ಕತೆಯನ್ನು ಈ ಕೆಲವೇ ಮಾತುಗಳಲ್ಲಿ ವಿವರಿಸುತ್ತಾರೆ: "ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಅವರು ಅದನ್ನು ನಮ್ಮಿಂದ ಕಿತ್ತುಕೊಳ್ಳುತ್ತಿದ್ದಾರೆ. ಅವರು ನಮಗೆ ಸಹಾಯ ಮಾಡಬೇಕು. ಆದರೆ ಅವರು “ಪ್ಯಾಕೇಜ್ ಇಲ್ಲಿದೆ, ಅರ್ಜಿಗೆ ಸಹಿ ಮಾಡಿ, ನಿಮ್ಮ ಹಣವನ್ನು ತೆಗೆದುಕೊಂಡು ಹೋಗಿ' ಎಂದು ಹೇಳುತ್ತಾರೆ.”
ಅನುವಾದ: ಶಂಕರ. ಎನ್. ಕೆಂಚನೂರು