ರೋಪಿ ಖಾಸಗಿ ಹೆರಿಗೆ ಕ್ಲಿನಿಕ್ಕಿನ ವೈದ್ಯರ ಬಳಿ ಈ ಮಹಿಳೆ ಇಬ್ಬರು ಮಕ್ಕಳನ್ನು ಹೆರುತ್ತಾಳೆಂದು ಆತ್ಮವಿಶ್ವಾಸದಿಂದ ಹೇಳಿದರು, ಆದರೆ ಹೀಗೆ ಕರಾರುವಕ್ಕಾಗಿ ಹೇಳಿದ ಅವರ ಬಳಿ ಇದನ್ನು ದೃಢಪಡಿಸುವ ಅಲ್ಟ್ರಾಸೌಂಡ್‌ ವರದಿಯೇನೂ ಇದ್ದಿರಲಿಲ್ಲ.

ರೋಪಿ ಮನ್ನು ಬೇಟೆ ಎರಡು ವರ್ಷಗಳ ಹಿಂದಿನ ಘಟನೆಯನ್ನು ಬಹಳ ಸಂಭ್ರಮ ಮತ್ತು ಸಂತೋಷದಿಂದ ನೆನಪಿಸಿಕೊಂಡರು. “ಕಾನ್‌ ಮೇ ವ್ಹೋ ಲಗಾಯಾ” [‘ಅವರು ಅದನ್ನು ಕಿವಿಗೆ ಹಾಕಿಕೊಂಡರುʼ] ಎಂದು ವೈದ್ಯರು ಸ್ಟೆತಸ್ಕೋಪ್ ಬಳಸುವಂತೆ ಸನ್ನೆ ಮಾಡಿ ತೋರಿಸುತ್ತಾ ಹೇಳಿದರು. ವೈದ್ಯರು ದುರ್ಬಲ ದೇಹದ ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಪರೀಕ್ಷಿಸಿದವರು ರೋಪಿಯವರ ಅವಳಿ ಭವಿಷ್ಯದ ಹೇಳಿಕೆಯನ್ನು ತಿರಸ್ಕರಿಸಿದರು.

ಕ್ಲಿನಿಕ್ಕಿನ ಹೆರಿಗೆ ಕೊಟಡಿಯಲ್ಲಿ ಸ್ಟೂಲ್ ಮೇಲೆ ಕುಳಿತು, "ಮೇಡಂ, ದೋ, ದೋ ಹೋತಾ, [ಎರಡು, ಎರಡು ಆಗುತ್ತೆ ಮೇಡಂ]," ಎಂದು ತನ್ನ ಅನಿಸಿಕೆಯನ್ನು ಪುನರುಚ್ಚರಿಸಿದರು. ತಾಯಿಯಾಗಲಿರುವ ಸುಮಾರು 70 ವರ್ಷದ ರೋಪಿ ಮತ್ತು ಹೆರಿಗೆ ನೋವಿನಿಂದ ನರಳುತ್ತಿರುವ ಮಹಿಳೆ ಆ ಹೊತ್ತಿನಲ್ಲಿ ಈಶಾನ್ಯ ಮಹಾರಾಷ್ಟ್ರದ ಮೇಲ್ಘಾಟ್ ಅರಣ್ಯದ ಅಂಚಿನಲ್ಲಿರುವ ಅವರ ಗ್ರಾಮವಾದ ಜೈತದೇಹಿಯಿಂದ 20 ಕಿಮೀ ದೂರದಲ್ಲಿರುವ ಪರತ್ವಾಡ ಪಟ್ಟಣದಲ್ಲಿದ್ದರು.

ಸಂಜೆಯ ಹೊತ್ತಿಗೆ, ಮೊದಲಿಗೆ ಒಂದು ಗಂಡು ಮಗು ಹುಟ್ಟಿತು, ಅದಾದ ಕೆಲವು ಸೆಕೆಂಡುಗಳಲ್ಲಿ ಇನ್ನೊಂದು ಮಗುವಿನ ತಲೆ ಹೊರಗೆ ಬಂದಿತು. ಈ ಬಾರಿ ಹೆಣ್ಣು ಮಗು ಹುಟ್ಟಿತ್ತು. ಅವಳಿ ಜವಳಿ ಮಕ್ಕಳಾಗಿದ್ದವು.

ತನ್ನ ಮಣ್ಣಿನ ಗೋಡೆ ಮತ್ತು ಸೆಗಣಿಯಿಂದ ಸಾರಿಸಲಾದ ನೆಲವಿರುವ ಸಾಂಪ್ರದಾಯಿಕ ಮನೆಯ ವರಾಂಡದಲ್ಲಿದ್ದ ಮರದ ಮಂಚದ ಮೇಲೆ ಕುಳಿತಿದ್ದ ರೋಪಿ, ಜೋರಾಗಿ ನಗುತ್ತಿದ್ದರು. ಮರದ ಮುಚ್ಚಿಗೆಯನ್ನು ಹೊಂದಿದ್ದ ಮನೆಯೊಳಗಿನ ಮೂರು ಕೋಣೆಗಳು ಖಾಲಿಯಿದ್ದವು. ಅವರ ಮೂವರು ಗಂಡು ಮಕ್ಕಳು ಬೇಸಾಯದ ಕೆಲಸಕ್ಕೆಂದು ಹೊಲಕ್ಕೆ ಹೋಗಿದ್ದರು. ಅವರ ಕುಟುಂಬವು ಎರಡು ಎಕರೆ ಜಮೀನು ಹೊಂದಿದೆ.

ಹಾಗೆ ನಗುತ್ತಾ ಅವರ ಮನೆ ಮಾತಾದ ಕೊರ್ಕು ಭಾಷೆಯಲ್ಲಿ ಕೆಟ್ಟ ಪದವೊಂದನ್ನು ಹೇಳಿದರು. ಅದನ್ನು ಅನುವಾದಿಸಿದರೆ ಕತ್ತೆಯ ಖಾಸಗಿ ಅಂಗವೆಂದು ಆಗುತ್ತದೆ. ಅದನ್ನು ಹೇಳಿದ ನಂತರ ಆಕೆ ಇನ್ನಷ್ಟು ಜೋರಾಗಿ ನಗಲಾರಂಭಿಸಿದರು. ಹಾಗೆ ನಗುವಾಗ ಅವರ ಆಳಕ್ಕಿಳಿದ ಕೆನ್ನೆಯ ಸುಕ್ಕುಗಟ್ಟಿದ ಚರ್ಮ ಇನ್ನಷ್ಟು ಆಳಕ್ಕಿಳಿದಂತೆ ಕಾಣುತ್ತಿತ್ತು. “ಹಾಗೇ ಬೈದಿದ್ದೆ, ಅವಳಿಗೆ” ಎಂದು ತಾನು ಸಿಟಿಯ ಆಸ್ಪತ್ರೆಯ ಡಾಕ್ಟರಿಗೆ ಬೈದಿದ್ದನ್ನು ನೆನಪಿಸಿಕೊಂಡು ಮತ್ತೊಮ್ಮೆ ಮುಗುಳ್ನಕ್ಕರು.

Ropi, Jaitadehi village's last remaining traditional dai, says she must have delivered at least 500-600 babies
PHOTO • Kavitha Iyer

ರೋಪಿ, ಜೈತದೇಹಿ ಗ್ರಾಮದ ಕೊನೆಯ ಸಾಂಪ್ರದಾಯಿಕ ದಾಯಿ (ಸೂಲಗಿತ್ತಿ), ಇದುವರೆಗೂ ಅವರು ಸುಮಾರು 500-600 ಮಕ್ಕಳ ಹೆರಿಗೆ ಮಾಡಿಸಿರುವುದಾಗಿ ಹೇಳುತ್ತಾರೆ

ಅವರ ಈ ಆತ್ಮವಿಶ್ವಾಸದ ಹಿಂದೆ ನಾಲ್ಕು ದಶಕಗಳ ಅನುಭವವಿದೆ. ಕೊರ್ಕು ಸಮುದಾಯಕ್ಕೆ ಸೇರಿದವರಾದ ರೋಪಿ, ಜೈತದೇಹಿಯ ಕೊನೆಯ ಸಾಂಪ್ರದಾಯಿಕ ಸೂಲಗಿತ್ತಿ. ಅವರು ಇದುವರೆಗೆ 500-600 ಮಕ್ಕಳಿಗೆ ಹೆರಿಗೆ ಮಾಡಿಸಿರುವುದಾಗಿ ಹೇಳುತ್ತಾರೆ. ಆದರೆ ಅವರು ಎಂದೂ ತಾವು ಮಾಡಿಸಿದ ಹೆರಿಗೆಗಳ ಲೆಕ್ಕವಿಟ್ಟಿಲ್ಲ. ತನ್ನ ಮೇಲ್ವಿಚಾರಣೆಯಲ್ಲಿ ನಡೆದ ಹೆರಿಗೆಗಳಲ್ಲಿ ಇದುವರೆಗೂ ಒಂದೇ ಒಂದು ಮಗು ತೀರಿಕೊಂಡಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ. "ಸಬ್‌ ಚೊಕಾ [ಎಲ್ಲ ಮಕ್ಕಳೂ ಆರೋಗ್ಯವಾಗಿದ್ದರು]." ಅದೇನೇ ಇದ್ದರೂ, ಹೆರಿಗೆಗಳಲ್ಲಿ ಸಹಾಯ ಮಾಡುವ, ದಾಯಿಗಳೆಂದು ಕರೆಯಲ್ಪಡುವ ಈ ಸಾಂಪ್ರದಾಯಿಕ ಹೆರಿಗೆ ಪರಿಚಾರಿಕೆಯರು (traditional birth attendants (TBAs)) ಯಾವುದೇ ಆಧುನಿಕ ತರಬೇತಿಗಳನ್ನು ಹೊಂದಿಲ್ಲ ಅಥವಾ ಯಾವುದೇ ಪ್ರಮಾಣಪತ್ರಗಳನ್ನು ಹೊಂದಿರುವುದಿಲ್ಲ.

ಮಹಾರಾಷ್ಟ್ರದ ವಿದರ್ಭ ಪ್ರದೇಶದ ಅಮರಾವತಿ ಜಿಲ್ಲೆಯ ಧರಣಿ ಮತ್ತು ಚಿಕಲ್ದಾರ ಬ್ಲಾಕ್‌ಗಳ ಹಳ್ಳಿಗಳಲ್ಲಿ ವಾಸಿಸುವ ಮೇಲ್ಘಾಟ್ ಅರಣ್ಯದ ಕೊರ್ಕು ಬುಡಕಟ್ಟು ಸಮುದಾಯದವರಿಗೆ ರೋಪಿಯವರಂತಹ ಮಹಿಳೆಯರು ಹಿಂದಿನಿಂದಲೂ ಮನೆಯಲ್ಲಿಯೇ ಹೆರಿಗೆ ಮಾಡಿಸುವ ಸಾಂಪ್ರದಾಯಿಕ ಜವಬ್ದಾರಿಯನ್ನು ಹೊತ್ತುಕೊಂಡು ಬಂದವರು, ಆದರೆ ಇಲ್ಲಿನ ಜನರಿಗೆ ಇವರು ಕೇವಲ ಅನುಭವಿ ಸೂಲಗಿತ್ತಿಯರಷ್ಟೇ ಅಲ್ಲದೆ ಪ್ರಸವಪೂರ್ವ ಆರೈಕೆಯನ್ನು ಒದಗಿಸುವವರಾಗಿಯೂ ಒದಗುತ್ತಾರೆ. ಮೂಲಭೂತ ಸೌಲಭ್ಯಗಳಿಲ್ಲದ ದೂರದ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಲ್ಲಿ ಜನರಿಗೆ ಆರೋಗ್ಯ ಸೇವೆಯನ್ನು ಸಹ ನೀಡುತ್ತಾರೆ. ಇಂತಹ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆ ತಲುಪುವುದು ಬಹಳ ಕಷ್ಟ.

ಮೇಲ್ಘಾಟ್‌ನ ಹೆಚ್ಚಿನ ಹಳ್ಳಿಗಳಲ್ಲಿ ಈಗಲೂ ಒಬ್ಬರು ಅಥವಾ ಇಬ್ಬರು ದಾಯಿಯರು ಇದ್ದಾರೆ, ಆದರೆ ಅವರೆಲ್ಲರಿಗೂ ಈಗ ವಯಸ್ಸಾಗಿದೆ ಎಂದು ರೋಪಿ ಹೇಳುತ್ತಾರೆ. ಆದರೆ ಈ ಪರಂಪರೆಯನ್ನು ಮುಂದುವರೆಸಲು ಇಂದಿನ ಪೀಳಿಗೆಯ ಯಾರೂ ಮುಂದೆ ಬಂದಿಲ್ಲ. ಜೈತದೇಹಿಯಲ್ಲಿದ್ದ ಏಕೈಕ ದಾಯಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಮಗಳು ಅಥವಾ ಸೊಸೆ ಆಕೆಯಿಂದ ಈ ಕೌಶಲವನ್ನು ಕಲಿತಿದ್ದಾರೆ ಎನ್ನುವುದು ರೋಪಿಯವರ ಅನಿಸಿಕೆ, ಆದರೆ ಆ ಕುಟುಂಬದ ಯಾರೂ ಪ್ರಸ್ತುತ ಸೂಲಗಿತ್ತಿಯಾಗಿ ಕೆಲಸ ಮಾಡುತ್ತಿಲ್ಲ.

ರೋಪಿಯವರ ಮಕ್ಕಳೆಲ್ಲರೂ ಸಹ ಮನೆಯಲ್ಲಿಯೇ ಜನಿಸಿದರು, ಅವರಿಗೆ ಅವರ ತಾಯಿ ಮತ್ತು ಸೂಲಗಿತ್ತಿ ಹೆರಿಗೆಯಲ್ಲಿ ಸಹಾಯ ಮಾಡುತ್ತಿದ್ದರು. ಅವರಿಗೆ ನಾಲ್ಕು ಗಂಡು ಮಕ್ಕಳಿದ್ದರು, ಅವರಲ್ಲಿ ಒಬ್ಬರು ಒಂದು ದಶಕದ ಹಿಂದೆ ಅನಾರೋಗ್ಯದಿಂದ ನಿಧನರಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳೂ ಇದ್ದು, ಅವರು ಮದುವೆಯಾಗಿ ಜೈತದೇಹಿಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಅನೇಕ ಮೊಮ್ಮಕ್ಕಳು ಕೂಡ ಇದ್ದಾರೆ. (ತನ್ನ ಹೆಣ್ಣುಮಕ್ಕಳು ಈ ಕೆಲಸವನ್ನು ಮಾಡಲು ಒಪ್ಪಿಲ್ಲವೆಂದು ರೋಪಿ ಹೇಳುತ್ತಾರೆ. ಆದರೆ, ಒಬ್ಬ ಮಗಳು ಈ ಕೌಶಲವನ್ನು ಒಂದಷ್ಟು ಕಲಿತಿದ್ದಾರೆ.)

ಅವರು ಮಾತು ಮುಂದುವರೆಸುತ್ತಾ, “ನನ್ನ ಸೊಸೆ ಹೆರಿಗೆಗಳೆಂದರೆ ಎಷ್ಟು ಹೆದರುತ್ತಾಳೆಂದರೆ, ಹೆರಿಗೆ ಮಾಡುತ್ತಿರುವ ಕೋಣೆಯಲ್ಲಿ ಅರೆ ಗಳಿಗೆ ನಿಲ್ಲುವುದೂ ಇಲ್ಲ, ಅವಳು ನಾನು ಹೆರಿಗೆ ಮಾಡಿಸುವಾಗ ಬಟ್ಟೆ ಕೊಡುವುದಾಗಲಿ ಅಥವಾ ಇನ್ನೇನಾದರೂ ಸಹಾಯ ಮಾಡುವುದಾಗಲಿ ಮಾಡಲು ಸಾಧ್ಯವಿಲ್ಲ,” ಎಂದು ರಕ್ತವನ್ನು ನೋಡಿ ನಡುಗುವ ಪುಟ್ಟ ಸೊಸೆಯನ್ನು ಅನುಕರಿಸಿ ತೋರಿಸುತ್ತಾರೆ.

ಆಗಿನ ದಿನಗಳಲ್ಲಿ, ಮಹಿಳೆಯರು ಈ ದೈಹಿಕ ಪ್ರಕ್ರಿಯೆಗಳಿಗೆ ಹೆದರುತ್ತಿರಲಿಲ್ಲ ಎಂದು ರೋಪಿ ನೆನಪಿಸಿಕೊಳ್ಳುತ್ತಾರೆ. "ನಮಗೆ ಧೈರ್ಯವಾಗಿರುವುದನ್ನು ಬಿಟ್ಟು ಬೇರೆ ಆಯ್ಕೆಯೂ ಇದ್ದಿರಲಿಲ್ಲ. ಆಗಿನ ಕಾಲದಲ್ಲಿ ಪ್ರತಿಯೊಂದು ವೈದ್ಯಕೀಯ ಅಗತ್ಯಕ್ಕೂ, ದೊಡ್ಡ ಅಥವಾ ಸಣ್ಣ, ವೈದ್ಯರು ಅಥವಾ ನರ್ಸ್ ಇರಲಿಲ್ಲ."

Ropi with her great grandchildren: her own children were all born at home, assisted by her mother and a dai
PHOTO • Kavitha Iyer

ಮರಿ ಮೊಮ್ಮಕ್ಕಳೊಂದಿಗೆ ರೋಪಿ: ಅವರ ಎಲ್ಲಾ ಮಕ್ಕಳು ಮನೆಯಲ್ಲಿ ಜನಿಸಿದರು, ಅವರ ಹೆರಿಗೆಯಲ್ಲಿ ಅವರ ತಾಯಿ ಮತ್ತು ಸೂಲಗಿತ್ತಿ ಸಹಾಯ ಮಾಡಿದ್ದರು

ರೋಪಿಯವರ ಅಮ್ಮ ಮತ್ತು ಅಜ್ಜಿ ಇಬ್ಬರೂ ಸೂಲಗಿತ್ತಿಯರಾಗಿದ್ದರು. ಅವರು ತಮ್ಮ ಅಜ್ಜಿಯೊಡನೆ ಹೆರಿಗೆಗಳಿಗೆ ಹೋಗುವ ಮೂಲಕ ಈ ಕೌಶಲವನ್ನು ಕಲಿತರು. ಆದರೆ ಅವರ ಅಮ್ಮ ಶಾಲೆಗೆ ಹೋಗದ ಮಗಳನ್ನು ತನ್ನೊಡನೆ ಹೆರಿಗೆಗೆ ಬರದಂತೆ ತಡೆಯುತ್ತಿದ್ದರು. “ಬಕೀ ಹೆಜೆದೊ [ವಾಪಸ್‌ ಹೋಗು],” ಎಂದು ಕೊರ್ಕುವಿನಲ್ಲಿ ಬಯ್ಯುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. “ಆದರೆ ಅಜ್ಜಿ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು. ನಾನು 12 ಅಥವಾ 13 ವರ್ಷದವಳಿರುವಾಗಲೇ ಅಜ್ಜಿಯೊಡನೆ ಹೋಗುತ್ತಿದ್ದೆ.” ತನ್ನ 16ನೇ ವಯಸ್ಸಿನಲ್ಲಿ ಮದುವೆಯಾದ ರೋಪಿ ಅದಕ್ಕೂ ಮೊದಲೇ ಅಜ್ಜಿಗೆ ಸಹಾಯಕಿಯಾಗಿ ಹೋಗುತ್ತಿದ್ದರು.

*****

ಜೀವವೈವಿಧ್ಯದ ಪ್ರಮುಖ ಆಗರವಾಗಿರುವ ಮೇಲ್ಘಾಟ್‌ನ ಅಂಕುಡೊಂಕಾದ ಬೆಟ್ಟಗಳು ಮತ್ತು ಕಾಡುಗಳು ವಿಶಾಲವಾದ ಮೇಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶದ ಭದ್ರಕೋಟೆಯಾಗಿದೆ. ಈ ಮೀಸಲು ಅರಣ್ಯ 1,500 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿದೆ. ಈ ಒಣ, ಎಲೆಯುದುರುವ ಕಾಡಿನಲ್ಲಿ ಕೊರ್ಕು ಮತ್ತು ಗೊಂಡ ಬುಡಕಟ್ಟು ಸಮುದಾಯಗಳಿಗೆ ನೆಲೆಯಾಗಿರುವ ಗ್ರಾಮಗಳಿವೆ. ಈ ಅನೇಕ ನೆಲೆಗಳು ಹುಲಿ ಸಂರಕ್ಷಿತ ಪ್ರದೇಶದ ಒಳಗೆ, ಅದರ ಬಫರ್ ವಲಯದಲ್ಲಿ ಮತ್ತು ತೀರದಲ್ಲಿವೆ. ಇಲ್ಲಿನ ಹೆಚ್ಚಿನ ಜನರು ರೈತರು ಮತ್ತು ಪಶುಪಾಲಕರಾಗಿದ್ದು, ಅವರ ಮುಖ್ಯ ಆದಾಯದ ಮೂಲವೆಂದರೆ ಅರಣ್ಯ ಉತ್ಪನ್ನಗಳಾದ ಬಿದಿರು ಮತ್ತು ಗಿಡಮೂಲಿಕೆಗಳು.

ಈ ದಟ್ಟ ಅರಣ್ಯ ಪ್ರದೇಶದಲ್ಲಿನ 150 ಕುಟುಂಬಗಳಿರುವ ಬೋರ್ತಿಖೇಡ ಗ್ರಾಮವು ಚಿಕಲ್ದಾರ ತಾಲೂಕಿನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಸುಮಾರು 70 ವರ್ಷ ವಯಸ್ಸಿನ ಚಾರ್ಕು ಬಾಬುಲಾಲ್ ಕಸ್ಡೇಕರ್ ಇಲ್ಲಿ ಸೂಲಗಿತ್ತಿಯಾಗಿದ್ದು, "ನನಗೆ ನೆನಪಿರುವ ಕಾಲದಿಂದಲೂ" ಸೂಲಗಿತ್ತಿಯಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ. ಇಂದಿಗೂ, ಮೇಲ್ಘಾಟ್‌ನ ದೂರದ ಹಳ್ಳಿಗಳಲ್ಲಿ, ಪ್ರತಿ 10 ಗರ್ಭಿಣಿಯರಲ್ಲಿ ಐವರು ಮನೆ ಹೆರಿಗೆ ಬಯಸುತ್ತಾರೆ, ಆದರೆ ಇತ್ತೀಚಿನ ದಶಕಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಸ್ವಲ್ಪ ಸುಧಾರಿಸಿದೆ. (2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ, NFHS-4 , ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 91ಕ್ಕಿಂತ ಹೆಚ್ಚು ಮಕ್ಕಳು ಆಸ್ಪತ್ರೆ ಅಥವಾ ವೈದ್ಯಕೀಯ ಸಂಸ್ಥೆಯಲ್ಲಿ ಜನಿಸಿದ್ದಾರೆ ಎಂದು ಹೇಳುತ್ತದೆ. ಆದರೆ ಈ ಅಂಕಿ-ಅಂಶಗಳು ದೂರದ ಮೇಲ್ಘಾಟ್‌ನಲ್ಲಿನ ಹಳ್ಳಿಗಳ ವಾಸ್ತವತೆಯನ್ನು ಪ್ರತಿಬಿಂಬಿಸುವುದಿಲ್ಲ).

2021ರ ಏಪ್ರಿಲ್ ತಿಂಗಳಿನಲ್ಲಿ, ಬೋರ್ತಿಖೇಡಾದಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರದ (PHC) ಉಪ ಕೇಂದ್ರವನ್ನು ತೆರೆಯಲಾಯಿತು. ಅಲ್ಲಿಗೆ ಭೇಟಿ ನೀಡಿದಾಗ ಎರಡು ತಿಂಗಳು ಕಳೆದರೂ ಈ ಒಂದು ಅಂತಸ್ತಿನ ಕಟ್ಟಡಕ್ಕೆ ನೀರಿನ ಪೈಪ್‌ ಬಂದಿರಲಿಲ್ಲ. ಆಕ್ಷಿಲರಿ ನರ್ಸ್‌ ಮಿಡ್‌ವೈಫ್ (ANM) ದಿನದ 24 ಗಂಟೆಗಳ ಕಾಲ ಕರೆಗೆ ಲಭ್ಯವಿರುತ್ತಾರೆ. ಅವರು ಮೊದಲ ಮಹಡಿಯಲ್ಲಿ ನಿರ್ಮಿಸಿದ ಮನೆಯಲ್ಲಿ ವಾಸಿಸಬೇಕೆಂಬ ನಿಯಮವಿದ್ದರೂ, ಬೋರ್ತಿಖೇಡಾದ ಎಎನ್‌ಎಂ ಶಾಂತಾ ವಿಹಿಕೆ ದುರ್ವೆ ಅವರು ಆ ಊರಿನ ಸೊಸೆಯಾಗಿದ್ದು, ಊರಿನಲ್ಲಿಯೇ ವಾಸವಿದ್ದಾರೆ.

ಸಮುದಾಯ ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಉಪಕೇಂದ್ರದಲ್ಲಿ ವೈದ್ಯರ ಹುದ್ದೆಯಿದೆ, ಆದರೆ ಈ ಸ್ಥಾನದಲ್ಲಿ ಕೆಲಸ ಮಾಡುವವರಿಗೆ ಕೊಳಾಯಿ ನೀರಿನ ಲಭ್ಯತೆ ಇಲ್ಲದಿರುವುದು ಈ ಕೆಲಸಕ್ಕೆ ಬರುವವರಿಗೆ ತೊಂದರೆ ಉಂಟುಮಾಡುತ್ತಿದೆ ಎಂದು ಗ್ರಾಮಸ್ಥರು ನನಗೆ ತಿಳಿಸಿದರು. ಸುಮಾರು 20 ಕಿ.ಮೀ ದೂರದ ಸೆಮಡೋಹ್ ಗ್ರಾಮದ ಪಿಎಚ್‌ಸಿಯಲ್ಲಿ ತರಬೇತಿ ಪಡೆಯುತ್ತಿದ್ದ ಇತ್ತೀಚೆಗೆ ಪದವಿ ಪಡೆದ ವೈದ್ಯರೊಬ್ಬರು ಇಲ್ಲಿ ಕೆಲಸ ಪ್ರಾರಂಭಿಸುವ ನಿರೀಕ್ಷೆಯಿದೆ (ಕಳೆದ ವರ್ಷ ನಾನು ಅಲ್ಲಿಗೆ ಹೋದ ಸಂದರ್ಭದಲ್ಲಿ).

Bortyakheda’s ANM Shanta Durve (left) urges Charku, the village's elderly dai, to come along even for deliveries the PHC
PHOTO • Kavitha Iyer

ಬೋರ್ತಿಖೇಡಾದ ಎಎನ್‌ಎಂ ಶಾಂತಾ ದುರ್ವೆ (ಎಡ) ಅವರು ಗ್ರಾಮದ ಹಿರಿಯ ಸೂಲಗಿತ್ತಿ ಚಾರ್ಕು  ಪಿಎಚ್‌ಸಿಯಲ್ಲಿ ಹೆರಿಗೆ ಸಂದರ್ಭದಲ್ಲಿ ಸಹಾಯಕ್ಕಾಗಿ ಬರುತ್ತಾರೆ

ಆದರೆ ಅನೇಕ ಗರ್ಭಿಣಿಯರು ಹೆರಿಗೆಗೆ ಉಪಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಎಎನ್ ಎಂ ಶಾಂತಾ. "ಮನೆಯಲ್ಲೇ ಸಂಬಂಧಿಕರಿಂದ ಹೆರಿಗೆ ಮಾಡಿಸಿದರೆ ಒಳಿತು ಎನ್ನುವುದು ಅವರ ಅನಿಸಿಕೆ" ಎಂದು ಅವರು ಹೇಳುತ್ತಾರೆ. ಶಾಂತಾ ತನ್ನ 30ರ ಪ್ರಾಯ ದಾಟಿದ್ದು, ಪಕ್ಕದ ಮೋರ್ಶಿ ತಾಲೂಕಿನಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿ ಈಗ ಇಲ್ಲಿ ಸೇವೆಯಲ್ಲಿದ್ದಾರೆ.

ಶಾಂತಾ ಸೆಮಡೋಹ್‌ನ ಪಿಎಚ್‌ಸಿಯಲ್ಲಿ ಹೆರಿಗೆಯಿದ್ದಾಗಲೂ ಚಾರ್ಕು ಅವರನ್ನು ಬರುವಂತೆ ಒತ್ತಾಯಿಸುತ್ತಾರೆ. ಅಲ್ಲಿನ ಜನರು ದಾಯಿಯ ಮಾತುಗಳನ್ನು ಹೆಚ್ಚು ಗೌರವಿಸುತ್ತಾರೆನ್ನುವುದು ಅವರ ಅಭಿಪ್ರಾಯ. ಮತ್ತು ಬೋರ್ತ್ಯಖೇಡದಲ್ಲಿ ಪ್ರಸ್ತುತ ಯಾವುದೇ ಯುವ ದಾಯಿಗಳು ಲಭ್ಯವಿಲ್ಲ. ಇದರರ್ಥ ಇನ್ನು ಆ ಊರಿನಲ್ಲಿ ದಾಯಿ ಸಂಪ್ರದಾಯ ಇರುವುದಿಲ್ಲ. ಇನ್ನು ಚಾರ್ಕುವವರ ಆ ಪರಂಪರೆ ಮುಂದುವರೆಯುವುದಿಲ್ಲ. ಇನ್ನೊಬ್ಬ ದಾಯಿ ಕೂಡಾ ತನ್ನ ವಯಸ್ಸಿನ ಕಾರಣದಿಂದಾಗಿ ಹೆರಿಗೆಗಳಿಗೆ ಹೋಗುತ್ತಿಲ್ಲ. ಜೊತೆಗೆ ಅವರು ಕೆಲವು ವರ್ಷಗಳ ಹಿಂದೆ ಯುನಿಸೆಫ್ ಜೊತೆಗೆ ಸರ್ಕಾರವು ಆಯೋಜಿಸಿದ್ದ ಕಿರು ತರಬೇತಿ ಕೋರ್ಸಿಗೂ ಹೋಗಿರಲಿಲ್ಲ.

"ನಮಗೆ ಎಲ್ಲವೂ ತಿಳಿದಿದೆ ಎಂದುಕೊಂಡಿರುತ್ತೇವೆ" ಎಂದು ಪೂರ್ಣ ದಿನದ ಕೋರ್ಸ್ ತೆಗೆದುಕೊಂಡ ಚಾರ್ಕು ಹೇಳುತ್ತಾರೆ, ಆದರೆ ಅವರು ನಮಗೆ ಸಾಬೂನನ್ನು ಹೇಗೆ ಬಳಸುವುದು, ಕೈ ತೊಳೆಯುವುದು ಮತ್ತು ಹೊಸ ಬ್ಲೇಡ್ ಅನ್ನು ಹೇಗೆ ಬಳಸುವುದು ಮುಂತಾದ ಇನ್ನೂ ಕೆಲವು ಮುಖ್ಯ ವಿಷಯಗಳನ್ನು ನಮಗೆ ಕಲಿಸಿದರು."

ಹೆರಿಗೆ ನೋವಿನ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಥವಾ ಸಾಂದರ್ಭಿಕವಾಗಿ ಖಾಸಗಿ ಚಿಕಿತ್ಸಾಲಯಕ್ಕೆ ಮಹಿಳೆಯೊಂದಿಗೆ ಹೋದಾಗ, ಹೆರಿಗೆಯನ್ನು ನರ್ಸ್ (ಮಹಿಳೆ) ನಡೆಸುತ್ತಾರೆ. ಹೆರಿಗೆ ಮಾಡಲು ಸಾಧ್ಯವಿಲ್ಲ ಎಂದು ನರ್ಸ್ ಹೇಳುವವರೆಗೂ ಮಹಿಳೆಯರು ಪುರುಷ ವೈದ್ಯರಿಂದ ಹೆರಿಗೆ ಮಾಡಿಸಿಕೊಳ್ಳಲು ಬಯಸುವುದಿಲ್ಲ ಎನ್ನುತ್ತಾರೆ ಚಾರ್ಕು. ಹೆರಿಗೆಯಲ್ಲಿ ತೊಡಕುಗಳಿದ್ದರೆ ಮಾತ್ರ ವೈದ್ಯರನ್ನು ಕರೆಯುತ್ತಾರೆ.

ಈ ಭೇಟಿಗಳಿಗೆಂದು ಚಾರ್ಕುವವರಿಗೆ ಯಾವುದೇ ಹಣ ದೊರೆಯುವುದಿಲ್ಲ. ಹಾಗಿದ್ದರೆ ಅವರು ಏಕೆ ಹೋಗುತ್ತಾರೆ? “ಚಲೋ ಬೋಲಾ ತೋ ಜಾತಿ [ಅವರು ಕರೆದರೆ ಹೋಗುತ್ತೇನೆ]. ನನ್ನ ಇರುವಿಕೆ ತಾಯಿಗೆ ನೆಮ್ಮದಿ ಕೊಡಬಹುದಾದರೆ ನಾನು ಹೋಗುವುದರಲ್ಲೇನಿದೆ?”

ಹಲವು ವರ್ಷಗಳ ಹಿಂದೆ ಹೆರಿಗೆ ಮಾಡಿಸಿದ್ದಕ್ಕೆ ಪ್ರತಿಯಾಗಿ ಜನರು ಧಾನ್ಯಗಳನ್ನು ನೀಡುತ್ತಿದ್ದರು, ಕೆಲವೊಮ್ಮೆ ಎರಡು ಅಥವಾ ಮೂರು ಪೈ (ಸೇರಿನಷ್ಟು) ಅಕ್ಕಿ ಅಥವಾ ಗೋಧಿ ಕೂಡಾ ನೀಡುತ್ತಿದ್ದರು. ಕೆಲವೊಮ್ಮೆ ಖುಷಿಯಿಂದ ಹಣವನ್ನೂ ಕೊಡುತ್ತಿದ್ದರು.

ಕಳೆದ ಕೆಲವು ದಶಕಗಳನ್ನು ಗಮನಿಸಿದರೆ ಈ ಸೂಲಗಿತ್ತಿಯರ ಸಂಪಾದನೆಯಲ್ಲಿ ಅಂತಹ ಸುಧಾರಣೆಯೇನೂ ಕಂಡುಬಂದಿಲ್ಲ. 2021ರ ಜೂನ್‌ ತಿಂಗಳಿನಲ್ಲಿ ನಾನು ಚಾರ್ಕು ಅವರನ್ನು ಭೇಟಿಯಾಗುವ ಒಂದು ವಾರದ ಮೊದಲು, ಅವರು ಮಾಡಿಸಿದ್ದ ಕೊನೆಯ ಹೆರಿಗೆಗಾಗಿ ಅವರಿಗೆ ರೂ. 500 ಮತ್ತು ನಾಲ್ಕು ಕಿಲೋ ಗೋಧಿಯನ್ನು ಪಡೆದಿದ್ದರು. ಅಂದು ಹೆರಿಗೆ ಬೇಗನೆ ಮುಗಿದಿತ್ತು. ಹೆರಿಗೆ ನೋವು ಶುರುವಾದ ಕೂಡಲೇ ಮಗು ಹೊರಬರತೊಡಗಿತು. "ಡೆಲಿವರಿ ಹೆಚ್ಚು ಸಮಯ ತೆಗೆದುಕೊಂಡಿದ್ದರೂ, ನನಗೆ ಅದೇ ಮೊತ್ತ ಸಿಗುತ್ತಿತ್ತು" ಎಂದು ಅವರು ಹೇಳುತ್ತಾರೆ.

Charku with two of her great grandkids: at least half of the babies born in Bortyakheda over the past three decades had Charku present at the time of their birth, and she has delivered her own grandchildren and a great-grandchild
PHOTO • Kavitha Iyer

ತನ್ನ ಮರಿಮೊಮ್ಮಕ್ಕಳೊಡನೆ ಚಾರ್ಕು: ಕಳೆದ ಮೂರು ದಶಕಗಳಲ್ಲಿ ಬೋರ್ತಿಖೇಡದಲ್ಲಿ ಜನಿಸಿದ ಅರ್ಧಕ್ಕೂ ಹೆಚ್ಚು ಮಕ್ಕಳ ಹೆರಿಗೆಯ ಸಮಯದಲ್ಲಿ ಚಾರ್ಕು ಸ್ಥಳದಲ್ಲಿದ್ದರು, ಮತ್ತು ಅವರ ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳ ಹೆರಿಗೆಯನ್ನೂ ಅವರೇ ಮಾಡಿಸಿದ್ದು

ಚಾರ್ಕುಅವರ ಪತಿ ಸುಮಾರು ಐದು ವರ್ಷಗಳ ಹಿಂದೆ ನಿಧನರಾದರು; ಅವರು ಪ್ರಸ್ತುತ ಮಗಳು ಮತ್ತು ಅಳಿಯ ಬೇಸಾಯ ಮಾಡುತ್ತಿರುವ ನೆಲದಲ್ಲಿ ಬೇಸಾಯ ಮಾಡುತ್ತಿದ್ದರು. ದಾಯಿ ಆಗಿ ತನ್ನ ಕೆಲಸದಿಂದ ಎಂದಿಗೂ ಸ್ಥಿರವಾದ ಆದಾಯವಿದ್ದಿರಲಿಲ್ಲ ಎಂದು ಚಾರ್ಕು ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ತಿಂಗಳುಗಳಲ್ಲಿ ಅವರು ರೂ. 4,000 ತನಕ ಸಂಪಾದಿಸಿದ್ದಾರೆ, ಮತ್ತು ಕೆಲವು ತಿಂಗಳುಗಳಲ್ಲಿ ರೂ. 1,000 ಸಹ ಸಿಗುವುದಿಲ್ಲ.

ತನ್ನ ಮರಿಮೊಮ್ಮಕ್ಕಳೊಡನೆ ಚಾರ್ಕು: ಕಳೆದ ಮೂರು ದಶಕಗಳಲ್ಲಿ ಬೋರ್ತಿಖೇಡದಲ್ಲಿ ಜನಿಸಿದ ಅರ್ಧಕ್ಕೂ ಹೆಚ್ಚು ಮಕ್ಕಳ ಹೆರಿಗೆಯ ಸಮಯದಲ್ಲಿ ಚಾರ್ಕು ಸ್ಥಳದಲ್ಲಿದ್ದರು, ಮತ್ತು ಅವರ ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳ ಹೆರಿಗೆಯನ್ನೂ ಅವರೇ ಮಾಡಿಸಿದ್ದು

ಅವರು ಮಾಡಿದ ಹೆರಿಗೆಗಳಲ್ಲಿ, ಹೆರಿಗೆಯಾದ ಕೆಲವು ದಿನಗಳ ನಂತರ, ಕೆಲವು ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಜನನದ ಸಮಯದಲ್ಲಿ ಅಲ್ಲ, ಆದರೆ ಕೆಲವು ದಿನಗಳ ನಂತರ." ಈ ಸಾವುಗಳಿಗೆ ಕಾರಣವೇನೆಂದು ಅವರಿಗೆ ತಿಳಿದಿಲ್ಲ. ಇದಕ್ಕೆ ಕಾರಣ ಯಾರಿಗೂ ತಿಳಿದಿಲ್ಲ.

ಈಗ ದೃಷ್ಟಿ ಮಂದವಾಗಿರುವ ಕಾರಣ ಅವರು, ಕುಟುಂಬಗಳಿಗೆ ನಿರಂತರವಾಗಿ PHC ಅಥವಾ ಉಪ ಕೇಂದ್ರಕ್ಕೆ ಭೇಟಿ ನೀಡುವಂತೆ ಹೇಳುತ್ತಾರೆ.

*****

ತನ್ನ ವಯಸ್ಸು ಸರಿಯಾಗಿ ನೆನಪಿಲ್ಲದ ರೋಪಿಯವರಿಗೆ ಇತ್ತೀಚೆಗಷ್ಟೇ ಕಾಲು ನೋವಿನ ಸಮಸ್ಯೆ ಶುರುವಾಗಿದೆ. ಅವರ ಕಣಕಾಲುಗಳ ಸುತ್ತಲೂ ಊತವಿದೆ ಮತ್ತು ಅವರ ಮೊಣಕಾಲುಗಳಲ್ಲಿ ಸಾಕಷ್ಟು ನೋವಿದೆ. ನಗರದ ವೈದ್ಯರ ಬಳಿ ಹೋಗದಿದ್ದರೂ ಸ್ಥಳೀಯ ವೈದ್ಯರು ನೀಡಿದ ಎಣ್ಣೆಯಿಂದ ಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಾರೆ.

ತನ್ನ ಹಳೆಯ ಪರಿಚಯಸ್ಥರನ್ನು ಮತ್ತು ತನ್ನ ಹೆಣ್ಣುಮಕ್ಕಳನ್ನು ಭೇಟಿಯಾಗಲು ಅವರು ಹಳ್ಳಿಯ ಸುತ್ತ ತಿರುಗಾಡುತ್ತಿದ್ದರೂ, ಹೆರಿಗೆಗಾಗಿ ಬರಹೇಳುವ ಹೆಚ್ಚಿನ ಕುಟುಂಬಗಳ ಕರೆಗಳನ್ನು ಅವರು ನಿರಾಕರಿಸುತ್ತಾರೆ. ಅವರಿಗೆ ತಾನು ಎಷ್ಟು ಕೆಲಸ ಮಾಡಬಲ್ಲೆ, ತನಗೆ ಎಷ್ಟರಮಟ್ಟಿಗೆ ಕಣ್ಣು ಕಾಣುತ್ತದೆಯೆನ್ನುವ ಕುರಿತು ಅವರಿಗೆ ಸ್ಪಷ್ಟತೆಯಿಲ್ಲ. ರೋಪಿ ಹೇಳುತ್ತಾರೆ, “ನಾನು ಅವರಿಗೆ ಸಿಟಿ ಕ್ಲಿನಿಕ್‌ಗೆ [ಪ್ರಸ್ತುತ ಪರತ್ವಾಡ ಪಟ್ಟಣದಲ್ಲಿದೆ] ಕರೆ ಮಾಡಲು ಹೇಳುತ್ತೇನೆ ಮತ್ತು ಆಂಬ್ಯುಲೆನ್ಸ್ ಬರುವವರೆಗೆ ಅವರೊಂದಿಗೆ ಇರುತ್ತೇನೆ. ಮತ್ತು ಕೆಲವೊಮ್ಮೆ ವಾಹನವು ತಕ್ಷಣವೇ ಹಳ್ಳಿಗೆ ಮರಳಿ ಬರುವಂತಿದ್ದರೆ, ನಾನು ಸಹ ಅವರೊಂದಿಗೆ ಹೋಗುತ್ತೇನೆ.”

Ropi's family has a small goat-rearing business, and they also cultivate two acres. Her earning as a dai remain modest, and have not improved greatly over the decades
PHOTO • Kavitha Iyer
Ropi's family has a small goat-rearing business, and they also cultivate two acres. Her earning as a dai remain modest, and have not improved greatly over the decades
PHOTO • Kavitha Iyer

ರೋಪಿಯವರ ಕುಟುಂಬವು ಮೇಕೆ ಸಾಕಣೆಯ ಸಣ್ಣ ವ್ಯಾಪಾರವನ್ನು ಸಹ ನಡೆಸುತ್ತಿದೆ ಮತ್ತು ಎರಡು ಎಕರೆಯಲ್ಲಿ ಕೃಷಿಯನ್ನು ಸಹ ಮಾಡುತ್ತಿದೆ. ಸೂಲಗಿತ್ತಿಯಾಗಿ ಅವರ ಗಳಿಕೆಯು ಇಂದಿಗೂ ಸಾಧಾರಣವಾಗಿದೆ ಮತ್ತು ಹಲವಾರು ದಶಕಗಳ ನಂತರವೂ ಹೆಚ್ಚಿಲ್ಲ

ಅವರು ಸೂಲಗಿತ್ತಿಯಾಗಿ ಕೆಲಸದಲ್ಲಿ ನಿರತರಾಗಿದ್ದ ವರ್ಷಗಳಲ್ಲಿ, ಜೈತದೇಹಿಯಲ್ಲಿ ವಿವಿಧ ಸಂದರ್ಭಗಳಲ್ಲಿ ತ್ವರಿತವಾಗಿ ಮತ್ತು ಶಾಂತವಾಗಿ ಕೆಲಸ ಮಾಡುತ್ತಾರೆಂದು ಹೊಗಳುತ್ತಿದ್ದರು. "ಹಿಂದೆ, ಅವರು ನನ್ನನ್ನು ಕರೆಯಲು ಬಂದಾಗ, ನನಗೆ ಬೇಕಾದುದನ್ನು ಮೊದಲು ಅವರಿಗೆ ಹೇಳುತ್ತಿದ್ದೆ - ಬ್ಲೇಡ್, ದಾರ [ಹೊಲಿಗೆ ದಾರ], ಸೂಜಿ, ಇತ್ಯಾದಿ." ಅನೇಕ ದಾಯಿಯರು ಪೆರಿನಿಯಲ್ ಟಿಯರ್‌ ಅನ್ನು ಹೊಲಿಯುತ್ತಾರೆ (ಹೆರಿಗೆಯ ಸಮಯದಲ್ಲಿ ಯೋನಿಯ ಮತ್ತು ಗುದ ದ್ವಾರದ ನಡುವಿನಲ್ಲಿ ಉಂಟಾಗುವ ಗಾಯ); ಇದು ದೊಡ್ಡ ವಿಷಯವಲ್ಲ ಎಂಬಂತೆ ಅವಳು ಹೇಳುತ್ತಾರೆ.

ಆಗ, ಹೆರಿಗೆ ನೋವು ಆಗಷ್ಟೇ ಪ್ರಾರಂಭಗೊಂಡಿದೆಯೋ ಅಥವಾ ನೋವು ಹೆಚ್ಚಾಗಿದೆಯೋ ಎನ್ನುವುದನ್ನು ಅವಲಂಬಿಸಿ ಅವರು ತಮ್ಮ ಮನೆಗೆಲಸಗಳನ್ನು ಮುಗಿಸಿ ಬಸುರಿ ಹೆಂಗಸು ಇರುವ ಮನೆಗೆ ಹೋಗುತ್ತಿದ್ದರು. ಅಲ್ಲಿ ಕುಟುಂಬಸ್ಥರೆಲ್ಲರೂ ಆತಂಕದಿಂದ ಸೇರಿರುತ್ತಿದ್ದರು.

ರೋಪಿ ಯಾವಾಗಲೂ ಪ್ರಾರ್ಥನೆಯೊಂದಿಗೆ ಹೆರಿಗೆಯನ್ನು ಪ್ರಾರಂಭಿಸುತ್ತಿದ್ದರು, ನಂತರ ತಮ್ಮ ಕೈಗಳನ್ನು ತೊಳೆದುಕೊಂಡು ಬಸುರಿ ಮಹಿಳೆಯ ಹಿಗ್ಗುವಿಕೆಯನ್ನು ಗಮನಿಸುತ್ತಿದ್ದರು.

ರೋಪಿ ಹೇಳುತ್ತಾರೆ, “ತಾಯಿ [ಭಾವಿ ತಾಯಿಯ ತಾಯಿ] ಏನನ್ನೂ ಮಾಡುವುದಿಲ್ಲ, ಯಾವಾಗಲೂ ತನ್ನ ಮಗಳೊಂದಿಗೆ ಅಳುತ್ತಾರೆ. ನೋವಿನಿಂದ ಅಳುತ್ತಿರುವ ಮಗಳನ್ನು ನೋಡಿ ಅಳುವ ತಾಯಿಯ ಅಳು ಮಗಳ ಅಳುವಿನಷ್ಟೇ ತೀವ್ರವಾಗಿರುತ್ತದೆ. ತಾಯಂದಿರು ಹೆರಿಗೆಯಾಗುವುದು ನನ್ನ ಕೈಯಲ್ಲಿದೆಯೇನೋ ಎಂಬಂತೆ ʼಓ ಮಾಯಿ, ಜಲ್ದಿ ಕರ್‌ ದೋ ಮಾಯಿ [ಓ ತಾಯಿ ಬೇಗ ಮಾಡಿಸು]ʼ ಎಂದು ಗಡಿಬಿಡಿ ಬೀಳಿಸುತ್ತಿದ್ದರು!"

ಕೆಲವೊಮ್ಮೆ ಹೆರಿಗೆ ನೋವು ತಾಸುಗಟ್ಟಲೆ ಇರುತ್ತಿತ್ತು. ರೋಪಿ ಅಂತಹ ಸಮಯದಲ್ಲಿ ತನ್ನ ಗಂಡ ಅಥವಾ ಮಗನಿಗೆ ಊಟ ಬಡಿಸಲು ತನ್ನ ಮನೆಗೆ ಧಾವಿಸುತ್ತಿದ್ದರು. “ಇಂತಹ ಹೆರಿಗೆ ಸಂದರ್ಭಗಳಲ್ಲಿ ತಾಯಂದಿರು ಜೋರಾಗಿ ಕಿರುಚುತ್ತಿದ್ದರು ಮತ್ತು ಮಗು ಜನಿಸುವವರೆಗೂ ಬಿಡಬೇಡಿ ಎಂದು ಹೇಳುತ್ತಿದ್ದರು. ಆದರೆ ಕೆಲವೊಮ್ಮೆ ಇದು ಇಡೀ ರಾತ್ರಿ ಅಥವಾ ಇಡೀ ದಿನ ತೆಗೆದುಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಹೆದರುತ್ತಾರೆ, ಆದರೆ ನಾನು ಹೆದರುವುದಿಲ್ಲ.”

ಆಗಾಗ್ಗೆ, ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಮಸಾಜ್ ಮಾಡಲು ಸ್ವಲ್ಪ ಎಣ್ಣೆಯನ್ನು (ಅಡುಗೆಮನೆಯಲ್ಲಿರುವ ಯಾವುದೇ ಎಣ್ಣೆ) ಕೇಳುತ್ತಾರೆ. ಇದರಿಂದ ಹೊಟ್ಟೆಯನ್ನು ಸ್ಪರ್ಶಿಸಿ ಮಗು ಹಿಮ್ಮುಖ ಸ್ಥಿತಿಯಲ್ಲಿದೆಯೇ ಅಥವಾ ಸರಿಯಾದ ದಿಕ್ಕಿನಲ್ಲಿ ಮಸಾಜ್ ಮಾಡುವ ಮೂಲಕ ಭ್ರೂಣದ ತಲೆಯನ್ನು ಬಲಕ್ಕೆ ತಿರುಗಿಸಬಹುದೇ ಎಂದು ಊಹಿಸಬಹುದು ಎಂದು ರೋಪಿ ಹೇಳುತ್ತಾರೆ. ಹೆರಿಗೆಯ ಸಮಯದಲ್ಲಿ ಮೊದಲು ಮಗುವಿನ ಕಾಲು ಹೊರಬಂದಂತಹ ಸಂದರ್ಭಗಳನ್ನೂ ಅವರು ಎದುರಿಸಿದ್ದರು. ಅದರೆ ಇಂತಹ ಸಂದರ್ಭಗಳಲ್ಲೂ ತನಗೆ ತೀರಾ ಕಷ್ಟವೇನೂ ಆಗಿರಲಿಲ್ಲವೆನ್ನುತ್ತಾರೆ ಅವರು.

ಇತರ ಸಾಂಪ್ರದಾಯಿಕ ನಂಬಿಕೆಗಳನ್ನು ಬದಲಾಯಿಸುವುದು ಕಷ್ಟದ ಕೆಲಸವಾಗಿದೆ. ಒಂಬತ್ತನೇ ತಿಂಗಳು ಪೂರ್ಣಗೊಂಡ ನಂತರವೂ ಹೆರಿಗೆ ನೋವು ಪ್ರಾರಂಭವಾಗದಿದ್ದರೆ, ಭೂಮಾಕಾಲ್ ಆಶೀರ್ವಾದ ಮಾಡಿದ ಕೆಲವು ಗುಟುಕು ನೀರನ್ನು ಸೇವಿಸಲು ಶಿಫಾರಸು ಮಾಡುವುದಾಗಿ ಚಾರ್ಕು ಹೇಳುತ್ತಾರೆ

ದಾಯಿಯರು ಸಾಮಾನ್ಯವಾಗಿ ಹೆರಿಗೆಯ ನಂತರ ಜನನ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ ಎಂದು ರೋಪಿ ಹೇಳುತ್ತಾರೆ. ಅವರು ಹೇಳುತ್ತಾರೆ, “ಮೊದಲು ನಾವು ಮಗುವಿಗೆ ತಕ್ಷಣ ಸ್ನಾನ ಮಾಡಿಸುತ್ತಿದ್ದೆವು. ಈಗ ಹಾಗೆ ಮಾಡುವುದನ್ನು ನಿಲ್ಲಿಸಿದ್ದೇವೆ." ಮಗುವಿಗೆ ಸ್ನಾನ ಮಾಡಿಸಿ ನಂತರ ಅದನ್ನು ತಾಯಿಗೆ ಮೊದಲ ಬಾರಿ ಹಾಲುಣಿಸಲು ಕೊಡುವುದು ಪದ್ಧತಿಯಾಗಿತ್ತು.

ಚಾರ್ಕು ಈ ಮಾತನ್ನು ಒಪ್ಪುತ್ತಾರೆ. “ಮೊದಲು, ನಾವು ಬಿಸಿನೀರನ್ನು ಬಳಸುತ್ತಿದ್ದೆವು ಮತ್ತು ಹುಟ್ಟಿದ ತಕ್ಷಣ ಮಗುವಿಗೆ ಸ್ನಾನ ಮಾಡಿಸುತ್ತಿದ್ದೆವು. ಹಾಗೂ ಕೆಲವೊಮ್ಮೆ ಮಗುವಿಗೆ ಎರಡು-ಮೂರು ದಿನಗಳ ನಂತರವೇ ತಾಯಿಯ ಹಾಲನ್ನು ಕುಡಿಸಲು ಬಿಡುತ್ತಿದ್ದೆವು. ಕೆಲವು ಕುಟುಂಬಗಳು ಮಗುವಿಗೆ ಮೊದಲ ದಿನ ಬೆಲ್ಲದ ನೀರು ಅಥವಾ ಜೇನುತುಪ್ಪದ ನೀರನ್ನು ಮಾತ್ರ ನೀಡುತ್ತವೆ.

ಸ್ಥಳೀಯ ಎಎನ್‌ಎಂಗಳ ಸಲಹೆಯಿಂದಾಗಿ ನವಜಾತ ಶಿಶುವಿಗೆ ಸ್ನಾನ ಮಾಡಿಸುವ ಪದ್ಧತಿ ಬಹುತೇಕ ನಿಂತಿದೆ. ಈ ಪರಿಣಾಮವು ಆಸ್ಪತ್ರೆಗಳಲ್ಲಿ ಹೆರಿಗೆಯನ್ನು ಉತ್ತೇಜಿಸುವ ಅಭಿಯಾನಗಳಲ್ಲಿ ಮತ್ತು ಮೇಲ್ಘಾಟ್‌ನಲ್ಲಿನ ಶಿಶು ಮರಣದ ಸಮಸ್ಯೆಯ ಬಗ್ಗೆ ಸರಕಾರದ ಕಾಳಜಿಯನ್ನು ತೋರಿಸುತ್ತದೆ. ( ವಿವಿಧ ಅಧ್ಯಯನಗಳು ಮತ್ತು ವರದಿಗಳು ಈ ಪ್ರದೇಶದ ಹೆಚ್ಚಿನ ಶಿಶು ಮರಣ ಪ್ರಮಾಣ ಮತ್ತು ತೀವ್ರ ಅಪೌಷ್ಟಿಕತೆಯನ್ನು ಬಹಿರಂಗಪಡಿಸಿವೆ). ಬೋರ್ತಿಖೇಡಾದ ಎಎನ್‌ಎಂ ಶಾಂತಾ ಹೇಳುವ ಪ್ರಕಾರ, ಮಗುವಿನ ಆರೋಗ್ಯಕ್ಕಿಂತಲೂ ಹೆಚ್ಚಾಗಿ ಜನನದ ನಂತರದ ಆಚರಣೆಗಳು ಮತ್ತು ದೇವತೆಗಳಿಗೆ ನೈವೇದ್ಯ ಇಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಮತ್ತು ಸರ್ಕಾರಿ-ಯುನಿಸೆಫ್ ತರಬೇತಿ ಕಾರ್ಯಕ್ರಮಗಳು ಮನೆ-ಹೆರಿಗೆ ಪ್ರಕ್ರಿಯೆಯಲ್ಲಿ ಉತ್ತಮ ಮಟ್ಟದ ಸುರಕ್ಷತೆಗೆ ಕಾರಣವಾಗಿವೆ.

ಈಗೆಲ್ಲ, ತಾಯಿ ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆದ ನಂತರ ಮಗು ಅಲುಗಾಡಲು ಪ್ರಾರಂಭಿಸುತ್ತದೆ, ಸೂಲಗಿತ್ತಿಯು ತಾಯಿಗೆ ಮಲಗಿರುವಾಗ ಅಥವಾ ಕುಳಿತಾಗ ಸುರಕ್ಷಿತವಾಗಿ ಸ್ತನ್ಯಪಾನ ಮಾಡುವುದು ಹೇಗೆ ಎನ್ನುವುದನ್ನು ತೋರಿಸಿಕೊಡುತ್ತಾರೆ. ಹಾಗೂ ಈಗ ಮಗುವಿಗೆ ಹೆರಿಗೆಯಾದ ಅರ್ಧ ಗಂಟೆಯೊಳಗೆ ತಾಯಿಯ ಹಾಲು ನೀಡಲಾಗುತ್ತದೆ ಎಂದು ಚಾರ್ಕು ಹೇಳುತ್ತಾರೆ.

ಇಲ್ಲಿ ಬೇರೂರಿರುವ ಇತರ ಸಾಂಪ್ರದಾಯಿಕ ನಂಬಿಕೆಗಳನ್ನು ಕೆಡವುವುದು ಕಷ್ಟವಾಗುತ್ತಿದೆ. ಒಂಬತ್ತನೇ ತಿಂಗಳು ಮುಗಿದ ನಂತರ ಹೆರಿಗೆ ಪ್ರಾರಂಭವಾಗದಿದ್ದರೆ, ಚಾರ್ಕು ಪ್ರಕಾರ ಬಸುರಿಯು ಭೂಮಿಕಾಲ್ (ಸಾಂಪ್ರದಾಯಿಕ ಆಧ್ಯಾತ್ಮಿಕ ವೈದ್ಯ) ಆಶೀರ್ವದಿಸಿದ ಕೆಲವು ಗುಟುಕು ನೀರನ್ನು ಸೇವಿಸಲು ಹೇಳುತ್ತಾರೆ.

ಗರ್ಭಿಣಿ ಮಹಿಳೆಗೆ ಗಂಡು ಮಗು ಹುಟ್ಟುತ್ತದೆಯೋ ಹೆಣ್ಣು ಮಗು ಹುಟ್ಟುತ್ತದೆಯೋ ಎಂದು ಊಹಿಸುವುದು ತನಗೆ ಇಷ್ಟ ಎಂದು ರೋಪಿ ಹೇಳುತ್ತಾರೆ. ಗಂಡು ಭ್ರೂಣಗಳು ಹೊಟ್ಟೆಯನ್ನು ಮುಂಭಾಗದಲ್ಲಿ ಹೊರಕ್ಕೆ ಹರಡುತ್ತವೆ ಎಂದು ಅವರು ಹೇಳುತ್ತಾರೆ. "ಹೆಣ್ಣು ಭ್ರೂಣವು ಹೊಟ್ಟೆಯನ್ನು ಅಕ್ಕಪಕ್ಕಕ್ಕೆ ವಿಸ್ತರಿಸುತ್ತದೆ." ಆದರೆ ಈ ಸಾಮಾನ್ಯೀಕರಣದ ಕುರಿತು ಅವರು ನಗುತ್ತಾರೆ. ಇದು ಊಹೆಯ ಮೇಲೆ ಆಧಾರಿತವಾಗಿದೆ ಎಂದು ಅವರು ಹೇಳುತ್ತಾರೆ, ಮತ್ತು ಜನನದ ಮೊದಲು ಮನುಷ್ಯರು ಮಗುವಿನ ಲಿಂಗವನ್ನು ಪರೀಕ್ಷಿಸುವುದನ್ನು ದೇವರು ಇಷ್ಟಪಡುವುದಿಲ್ಲ ಎನ್ನುತ್ತಾರೆ.

Charku's eyesight is dimming, and she tells families more and more frequently to head to the PHC or the new sub-centre.
PHOTO • Kavitha Iyer
Ropi too sends away most people who come to seek her help, tellign them, 'I can’t do it any longer'
PHOTO • Kavitha Iyer

ಎಡ: ಚಾರ್ಕು ತನ್ನ ಕಣ್ಣಿನ ದೃಷ್ಟಿ ಮಸುಕಾಗಿರುವುದರಿಂದಾಗಿ ತನ್ನ ಬಳಿ ಬರುವ ಜನರಿಗೆ ಹೆಚ್ಚಾಗಿ ಅಲ್ಲಿನ ಪಿಎಚ್‌ಸಿ ಅಥವಾ ಉಪಕೇಂದ್ರಕ್ಕೆ ಹೋಗುವಂತೆ ಸಲಹೆ ನೀಡುತ್ತಾರೆ. ಬಲ: ರೋಪಿ ಕೂಡಾ ಈಗ ತನ್ನ ಬಳಿ ಬರುವ ಜನರಿಗೆ ʼಇನ್ನು ನನ್ನಿಂದ ಈ ಕೆಲಸ ಸಾಧ್ಯವಿಲ್ಲʼ ಎಂದು ಹೇಳಿ ಹಿಂದಕ್ಕೆ ಕಳುಹಿಸುತ್ತಾರೆ

ಸಾಂಪ್ರದಾಯಿಕ ದಾಯಿಯರು ಸಮುದಾಯದ ಆರೋಗ್ಯದ ವಿಷಯದಲ್ಲಿ ಪೋಷಕ ಪಾತ್ರವನ್ನು ವಹಿಸುತ್ತಾರೆ ಎಂದು ಬೋರ್ತಿಖೇಡಾದ ಗ್ರಾಮಸ್ಥರು ಹೇಳುತ್ತಾರೆ. ಅವರು ಗರ್ಭಿಣಿ ಮಹಿಳೆಯರಿಗೆ ಹೆರಿಗೆಯ ಕೊನೆಯ ದಿನಗಳಲ್ಲಿ, ಹೆರಿಗೆಯ ಯೋಜನೆ ಮತ್ತು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸುವ ಮೂಲಕ ಸರ್ಕಾರಿ-ನಿರ್ಧರಿತ ಬೆಂಬಲವನ್ನು (ನಿಯಮಿತ ತಪಾಸಣೆ, ಕಬ್ಬಿಣ-ಫೋಲಿಕ್ ಆಸಿಡ್ ಮತ್ತು ಕ್ಯಾಲ್ಸಿಯಂ ಪೂರಕಗಳನ್ನು ಒಳಗೊಂಡಂತೆ) ಒದಗಿಸುತ್ತಾರೆ.

ಪರತವಾಡ ಪಟ್ಟಣದ ಖಾಸಗಿ ಆಸ್ಪತ್ರೆಗೆ ಹತ್ತಿರದಲ್ಲೇ ಇರುವ ಜೈತದೇಹಿ ಗ್ರಾಮಸ್ಥರಿಗೆ ರೋಪಿಯವರ ನಂತರ ಸೂಲಗಿತ್ತಿಯರಿಲ್ಲ ಎಂಬ ಆತಂಕ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಹೆರಿಗೆ ಮಾಡಿಸುವ ಸರ್ಕಾರಿ ಸಂಸ್ಥೆಗಳಿಗೆ ತಾನು ಹೇಳಬೇಕಿರುವ ಒಂದಿಷ್ಟು ಮಾತುಗಳಿರುವುದಾಗಿ ರೋಪಿ ಹೇಳುತ್ತಾರೆ. ಅವರು ಹೇಳುತ್ತಾರೆ, “ಕೆಲವು ಮಹಿಳೆಯರು ತುಂಬಾ ತೆಳ್ಳಗಿರುತ್ತಾರೆ, ಒಂಬತ್ತು ತಿಂಗಳವರೆಗೆ ಪ್ರತಿದಿನ ವಾಂತಿ ಮಾಡುತ್ತಾರೆ. ಅವರು ಮಾಂಸವನ್ನು ತಿನ್ನಲು ನಿರಾಕರಿಸುತ್ತಾರೆ, ಅವರು ಕೆಲವು ರೀತಿಯ ಆಹಾರವನ್ನು ಬೇಡವೆನ್ನುತ್ತಾರೆ. ಗರ್ಭಿಣಿಯರು ಎಲ್ಲವನ್ನೂ ತಿನ್ನಬೇಕು. ಯಾವುದಕ್ಕೂ ನಿರ್ಬಂಧವಿಲ್ಲ. ಈ ವಿಷಯಗಳ ಬಗ್ಗೆ ವೈದ್ಯರು ಗರ್ಭಿಣಿಯರಿಗೂ ಸಲಹೆ ನೀಡಬೇಕು.”

ಅವರ ಸಮುದಾಯದಲ್ಲಿ, ಎಂದರೆ ಕೊರ್ಕು ಕುಟುಂಬಗಳಲ್ಲಿ ಹೆರಿಗೆಯ ಐದನೇ ದಿನವನ್ನು ಆಚರಿಸಲು ಸೂಲಗಿತ್ತಿಯರನ್ನು ಆಹ್ವಾನಿಸಲಾಗುತ್ತದೆ. ಕೆಲವೊಮ್ಮೆ ಆ ದಿನವೇ ಸೂಲಗಿತ್ತಿಯರಿಗೆ ಹಣವನ್ನು ಕೊಡಲಾಗುತ್ತದೆ, ಇದು ಮಗು ತನ್ನ ಆರಂಭಿಕ ಅನಿಶ್ಚಿತ ದಿನಗಳಲ್ಲಿ ಸುರಕ್ಷಿತವಾಗಿದೆ ಎನ್ನುವುದರ ಸಂಕೇತವಾಗಿದೆ. ರೋಪಿ ತಾತ್ವಿಕವಾಗಿ ಹೇಳುತ್ತಾರೆ, "ಕೆಲವರು ಅಪಘಾತದಿಂದ ಸಾಯುತ್ತಾರೆ, ಕೆಲವರು ಅನಾರೋಗ್ಯದಿಂದ ಸಾಯುತ್ತಾರೆ, ಕೆಲವರು ಹುಟ್ಟುವಾಗಲೇ ಸಾಯುತ್ತಾರೆ. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಸಾಯುತ್ತಾರೆ. ಆದರೆ ಮಗು ಬದುಕುಳಿಯುವುದೆಂದರೆ ತಾಯಿ ಮತ್ತು ಮಗುವಿನ ಗೆಲುವು."

ಮಕ್ಕಳು ಆರೋಗ್ಯವಾಗಿ ಜೀವಿಸುತ್ತಿರುವುದಕ್ಕೆ ತನಗೆ ಜನರು ಸಲ್ಲಿಸುವ ಕೃತಜ್ಞತೆಯು ಒಬ್ಬ ದಾಯಿಯಾಗಿ ನನಗೆ ಆತ್ಮತೃಪ್ತಿ ಕೊಡುವ ಸಂಗತಿಯಾಗಿದೆ ಎಂದು ರೋಪಿ ಹೇಳುತ್ತಾರೆ. ಹಾಗೂ ಈಗ ಅವರಿಗೆ ಈ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ, ಈಗೆಲ್ಲ ಜನರು ತನ್ನನ್ನು ಹುಡುಕಿಕೊಂಡು ಬಂದರೆ “ಜಾವೋ ಬಾಬಾ, ಅಬ್‌ ಮೇರೇ ಸೇ ಹೋತಾ ನಹೀ,” ಎಂದು ವಾಪಸ್‌ ಕಳುಹಿಸುತ್ತಾರೆ. “ಇನ್ನು ನನ್ನಿಂದ ಈ ಕೆಲಸ ಸಾಧ್ಯವಿಲ್ಲ.”

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು , ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ . ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ .

ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಇದಕ್ಕಾಗಿ - ಮೈಲ್ ವಿಳಾಸವನ್ನು ಸಂಪರ್ಕಿಸಿ : [email protected] ಒಂದು ಪ್ರತಿಯನ್ನು [email protected] . ವಿಳಾಸಕ್ಕೆ ಕಳುಹಿಸಿ

ಅನುವಾದ : ಶಂಕರ . ಎನ್ . ಕೆಂಚನೂರು

Kavitha Iyer

Kavitha Iyer has been a journalist for 20 years. She is the author of ‘Landscapes Of Loss: The Story Of An Indian Drought’ (HarperCollins, 2021).

Other stories by Kavitha Iyer
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor and Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru