“ನಮ್ಮ ಜೀವನವು ಸುಧಾರಿಸುತ್ತದೆಯೆಂದು ಅವರು ತಿಳಿಸಿದ್ದರಾದರೂ ನಮ್ಮನ್ನು ಅವರು ಮೋಸಗೊಳಿದರು. ನಮ್ಮ ಭೂಮಿಯನ್ನು ವಶಪಡಿಸಿಕೊಂಡ ನಂತರ ನೌಕರಶಾಹಿಯು ಭೂಮಿಯ ಚಿಕ್ಕ ಭಾಗವೊಂದನ್ನು ಮಾತ್ರ ಕರಾರಿನ ಮೇಲೆ ವಾಪಸ್ಸು ನೀಡಿ, ಅಷ್ಟು ಮಾತ್ರವೇ ನಮ್ಮ ಸ್ವಂತದ್ದೆಂದು ನಾವು ನಂಬುವಂತೆ ಮಾಡಿದರು. ನಮ್ಮಲ್ಲಿನ ಕೆಲವರು ನಮ್ಮ ಮನೆ, ಹೊಲ ಮತ್ತು ಕೈತೋಟವನ್ನು ಕಳೆದುಕೊಂಡೆವು.” ಆದರೆ ನಾವು ನಿಜವಾಗಿ ಕಳೆದುಕೊಂಡದ್ದು, ನಮ್ಮ ಹುಲ್ಲುಗಾವಲು, ಅರಣ್ಯಗಳು, ಸಾರ್ವಜನಿಕ ಪ್ರದೇಶ, ಸ್ಮಶಾನ ಮತ್ತು ಆಟದ ಮೈದಾನಗಳು. ನಮ್ಮ ಭೂಮಿಯನ್ನು ವಾಪಸ್ಸು ಪಡೆಯಲು ತಿಂಗಳಾನುಗಟ್ಟಲೆ ಸರ್ಕಾರಿ ಕಛೇರಿಗಳಿಗೆ ಎಡತಾಕುತ್ತಿದ್ದೇವೆ” ಎಂದರು ಜುನ್ವನಿ ಗ್ರಾಮದ ಪ್ರೀತಮ್ ಕುಂಜಂ.
ರಾಯ್ಪುರ್ನಿಂದ 140 ಕಿ.ಮೀ. ದೂರದ ಛತ್ತೀಸ್ಗಡ್ನಲ್ಲಿನ ಧಮ್ತರಿ ಜಿಲ್ಲೆಯಲ್ಲಿ, ಜುನ್ವನಿಯ ಜನರು ತಮ್ಮ ಭೂಮಿಯನ್ನು ಮರಳಿ ಪಡೆಯಲು, ಡಿಸೆಂಬರ್ 2015ರಲ್ಲಿ, ಹೋರಾಟವನ್ನು ಪ್ರಾರಂಭಿಸಿದರು. ಇವರು ಪರಿಶಿಷ್ಟ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಕಾಯಿದೆ, ಅಥವಾ ಅರಣ್ಯ ಹಕ್ಕು ಕಾಯಿದೆ (ಎಫ್ಆರ್ಎ) ಅನುಸಾರ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಡಿಸೆಂಬರ್ 2006ರಲ್ಲಿ ರಚಿಸಲ್ಪಟ್ಟ ಕಾಯಿದೆಯು 2008ರ ಜನವರಿ 1ರಂದು ಜಾರಿಗೆ ಬಂದಿತು. ಭಾರತದಾದ್ಯಂತದ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆಯು ಪಾರಂಪರಿಕ ಅರಣ್ಯ ಹಕ್ಕುಗಳ ಪುನಃಪ್ರದಾನಕ್ಕೆ ಅವಕಾಶ ನೀಡುತ್ತದೆ. ಅರಣ್ಯದ ಕಿರು ಉತ್ಪನ್ನಗಳು ಮತ್ತು ಗೋಮಾಳದ ಭೂಮಿಗಳನ್ನು ಬಳಸಲು ಸಮುದಾಯ ಹಕ್ಕುಗಳನ್ನು ಹಾಗೂ 2005ರ ಡಿಸೆಂಬರ್ 13ರ ಹೊತ್ತಿಗೆ ಆದಿವಾಸಿಗಳು ಕೃಷಿಯಲ್ಲಿ ತೊಡಗಿದ್ದ ಭೂಮಿಗೆ ಪ್ರತ್ಯೇಕ ಸ್ವಾಮಿತ್ವವನ್ನು ನೀಡುತ್ತದೆ.
ಛತ್ತೀಸ್ಗಡ್ ಸರ್ಕಾರವು ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಭೂಮಿಯನ್ನು ಗೇಣಿಗೆ ನೀಡುವಲ್ಲಿ ಇತರೆ ರಾಜ್ಯಗಳಿಗಿಂತಲೂ ಮುಂಚೂಣಿಯಲ್ಲಿದೆಯೆಂದು ಪ್ರತಿಪಾದಿಸುತ್ತಿರುವಾಗಲೇ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರಶಾಹಿಯ ಉಪಸ್ಥಿತಿಯಲ್ಲಿ ರಾಯ್ಪುರ್ನಲ್ಲಿ ೨೦೧೫ರ ನವೆಂಬರ್ ೧೫ರಂದು, ಆಯೋಜಿಸಲ್ಪಟ್ಟ ಅರಣ್ಯ ಹಕ್ಕುಗಳನ್ನು ಕುರಿತ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ ದತ್ತಾಂಶವು ವಾಸ್ತವ ಪರಿಸ್ಥಿತಿಯು ಇದಕ್ಕಿಂತಲೂ ಭಿನ್ನವಾಗಿದೆಯೆಂದು ತಿಳಿಸುತ್ತದೆ.
ರಾಜ್ಯ ಸರ್ಕಾರವು ಕಳೆದ 7 ವರ್ಷಗಳಲ್ಲಿ ಆದಿವಾಸಿಗಳ ಶೇ. 60ರಷ್ಟು ವ್ಯಕ್ತಿಗತ ದಾವೆಗಳನ್ನು ಅಥವಾ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿನ ಅಂತಹ ಸುಮಾರು 512,000 ದಾವೆಗಳನ್ನು ರದ್ದುಪಡಿಸಿದೆ ಮತ್ತು ಪ್ರತಿಯೊಬ್ಬ ವಯಸ್ಕನಿ/ಳಿಗೆ 2.5 ಎಕರೆ ಜಮೀನಿನ ಭರವಸೆ ನೀಡಲಾದ ಕಾನೂನಿಗೆ ವ್ಯತಿರಿಕ್ತವಾಗಿ, ಛತ್ತೀಸ್ಗಡ್ ಸರ್ಕಾರವು ಕುಟುಂಬವೊಂದಕ್ಕೆ ಕೇವಲ ಸರಾಸರಿ 2 ಎಕರೆ ಅರಣ್ಯ ಭೂಮಿಯನ್ನು ಪರಿಗಣಿಸಿದೆ.
ಛತ್ತೀಸ್ಗಡ್ನಲ್ಲಿನ ಶೇ. 44ರಷ್ಟು ಭೂಮಿಯು ವನಚ್ಛಾದಿತವಾಗಿದ್ದು, ಹಕ್ಕುದಾರರಿಗೆ ಈ ಹಕ್ಕನ್ನು ನೀಡದಿರುವುದು ಇನ್ನಷ್ಟು ಮಹತ್ವಪೂರ್ಣವಾದುದು. ಇದೇ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದ ದತ್ತಾಂಶವು, ತ್ರಿಪುರ ಹಾಗೂ ಕೇರಳದಲ್ಲಿ ಇಂತಹ ದಾವೆಗಳ ಕೇವಲ ಶೇ. 34ರಷ್ಟನ್ನು ಮಾತ್ರ ರದ್ದುಪಡಿಸಲಾಗಿದೆಯೆಂಬುದನ್ನು ತೋರ್ಪಡಿಸಿತು.
ಜುನ್ವನಿಯ ಪಂಚಾಯತ್ ಮತದಾರರ ಪಟ್ಟಿಯ ಅನುಸಾರ 265 ಮತದಾರರಿದ್ದಾರೆ. ವ್ಯಕ್ತಿಗತ ಹಕ್ಕಿನ ಪ್ರಕಾರ, 662 ಎಕರೆಯು ಅವರಿಗೆ ಸಲ್ಲತಕ್ಕದ್ದು. ಆದರೆ ಸ್ಥಳೀಯ ಕಾರ್ಯಕರ್ತರಾದ ಬೆನಿಪುರಿ ಗೋಸ್ವಾಮಿ ಅವರು ಹೇಳುವಂತೆ, “ದಶಕಗಳಷ್ಟು ಹಿಂದಿನ ದಾಖಲೆಗಳನ್ನು ಬಳಸಲಾಗುತ್ತಿದ್ದು, ಕೇವಲ 180 ಎಕರೆಗಳನ್ನು ಮಾತ್ರವೇ ವ್ಯಕ್ತಿಗತ ಕರಾರಿನ ನಿಟ್ಟಿನಲ್ಲಿ ನೀಡಲಾಗಿದೆ.” ಭುವನೇಶ್ವರದಲ್ಲಿ ನೆಲೆಗೊಂಡಿದ್ದು, ಪರಿಸರ ಮತ್ತು ಸುಸ್ಥಿರತೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ ಹಾಗೂ ನೀತಿಯ ವಿಷಯದಲ್ಲಿ ತೊಡಗಿರುವ ವಸುಂಧರ ತಂಡದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಮಧು ಸರಿನ್, ಹೀಗೆನ್ನುತ್ತಾರೆ: “ನಮ್ಮ ಕಾಯಿದೆಯ ಪ್ರಕಾರ, ಒಬ್ಬ ವ್ಯಕ್ತಿಗೆ 2.5 ಎಕರೆಯ ಅವಕಾಶವಿದೆಯಾದರೂ, ಅವರಿಗೆ ಚಿಕ್ಕ ಜಾಗವೊಂದನ್ನು ಮಾತ್ರವೇ ಅದೂ ಅವರ ತಂದೆಯ ಹೆಸರಿನಲ್ಲಿ ನೀಡಲಾಗಿದೆ.” ಮಹಿಳೆಯರಿಗೆ ಜುನ್ವನಿಯಲ್ಲಿ ಯಾವುದೇ ಭೂಮಿಯನ್ನು ನೀಡಿರುವುದಿಲ್ಲ. “ಒಬ್ಬ ಮಹಿಳೆಯ ಹೆಸರೂ ನೋಂದಾಯಿಸಲ್ಪಟ್ಟಿರುವುದಿಲ್ಲ. ಕರಾರಿನ ಜೊತೆಗೆ ಯಾವುದೇ ಗುರುತು ಅಥವಾ ನಕ್ಷೆಯನ್ನು ಒದಗಿಸಿಲ್ಲ”ವೆಂಬುದಾಗಿ ಕುಂಜಮ್ ತಿಳಿಸುತ್ತಾರೆ.




