ಮಾರ್ಚ್ 2020ರಲ್ಲಿ ಕೋವಿಡ್ -19 ಒಮ್ಮೆಗೆ ಹರಡಲಾರಂಭಿಸಿದಾಗ, ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯಲ್ಲಿದ್ದ ಅರುಣ್ ಗಾಯಕವಾಡ್ ಅವರ 10 ಎಕರೆ ಕೃಷಿಭೂಮಿ ನಿರ್ಜನ ರೂಪ  ಧರಿಸಿತು. ಒಸ್ಮಾನಾಬಾದ್ ತಾಲ್ಲೂಕಿನ ಮಹಾಲಿಂಗಿ ಗ್ರಾಮದಲ್ಲಿರುವ ಅವರ ಪತ್ನಿ ರಾಜಶ್ರೀ (48) ಹೇಳುತ್ತಾರೆ, "ನಾವು ಆ ಸಮಯದಲ್ಲಿ ಜೋಳ, ಚನಾ[ಕಡಲೆ] ಮತ್ತು ಈರುಳ್ಳಿಯನ್ನು ಕಟಾವು ಮಾಡಿದ್ದೆವು.”

ಆದರೆ ಲಾಕ್‌ ಡೌನ್‌ ಕಾರಣದಿಂದಾಗಿ ದೇಶದೆಲ್ಲೆಡೆ ಮಾರುಕಟ್ಟೆಗಳು ಬಂದ್‌ ಆಗಿದ್ದವು. “ಆ ಸಮಯದಲ್ಲಿ ನಮ್ಮಿಂದ ಆ ಬೆಳೆಗಳನ್ನು ಮಂಡಿಗೆ ಸಾಗಿಸಲು ಸಾಧ್ಯವಾಗದ ಕಾರಣ ಅಷ್ಟೂ ಇಳುವರಿ ಕಣ್ಣ ಮುಂದೆಯೇ ನಾಶವಾದವು.” ಎನ್ನುತ್ತಾರೆ ರಾಜಶ್ರೀ.

ಅರುಣ್, 52, ಮತ್ತು ರಾಜಶ್ರೀ 10 ಕ್ವಿಂಟಾಲ್ ಜೋಳ, 100 ಕ್ವಿಂಟಾಲ್ ಈರುಳ್ಳಿ, ಮತ್ತು 15 ಕ್ವಿಂಟಾಲ್ ಚನಾ ಕೊಯ್ಲು ಮಾಡಿದ್ದರು. ಆ ಸಮಯದಲ್ಲಿ, ಜೋಳಕ್ಕೆ ಕ್ವಿಂಟಾಲ್‌ಗೆ 2,550 ಕಡಲೆಗೆ 4,800, ಮತ್ತು ಈರುಳ್ಳಿಗೆ ಸುಮಾರು ಪ್ರತಿ ಕ್ವಿಂಟಾಲ್‌ಗೆ 1,300 ರೂಪಾಯಿಗಳಷ್ಟು ಕನಿಷ್ಠ ಬೆಂಬಲ ಬೆಲೆಯಿತ್ತು. ಈ ಲೆಕ್ಕದಲ್ಲಿ ದಂಪತಿಗಳು ಕನಿಷ್ಠ 227,500 ರೂಪಾಯಿಗಳಷ್ಟು ನಷ್ಟವನ್ನು ಹೊಂದಿದ್ದಾರೆ, ಇದರಲ್ಲಿ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಇತರ ಖರ್ಚುಗಳ ಮೇಲಿನ ಹೂಡಿಕೆಯನ್ನು ಸೇರಿಸಿಲ್ಲ.

ಇದಲ್ಲದೆ ಅವರಿಬ್ಬರ ಹಲವು ದಿನಗಳ ಶ್ರಮವೂ ಇದರಲ್ಲಿತ್ತೆಂದು ರಾಜಶ್ರೀ ಹೇಳುತ್ತಾರೆ. “ಕೋವಿಡ್‌ ಪಿಡುಗು ಆರಂಭಗೊಳ್ಳುವ ಸ್ವಲ್ಪ ಮೊದಲು ಅವರು ಹೊಸದಾಗಿ ಒಂದು ಟ್ರ್ಯಾಕ್ಟರ್‌ ಕೊಂಡಿದ್ದರು. ಅದರ ತಿಂಗಳ ಕಂತು 15,000 ರೂಪಾಯಿಗಳನ್ನು ಕಟ್ಟುವುದು ಕಷ್ಟವಾಗಿತ್ತು. ನಮಗೆ ಬ್ಯಾಂಕಿನಿಂದ ನೋಟೀಸುಗಳು ಬರಲು ಪ್ರಾರಂಭಗೊಂಡಿದ್ದವು.”

ಆದರೆ ಅರುಣ್ 2020ರ ಖಾರಿಫ್ ಹಂಗಾಮಿನಲ್ಲಿ  (ಜುಲೈ-ಅಕ್ಟೋಬರ್) ನಷ್ಟವನ್ನು ಮರಳಿ ಪಡೆಯುವ ಭರವಸೆ ಹೊಂದಿದ್ದರು. ಕೋವಿಡ್-19ರ ಮೊದಲ ಅಲೆ ಜುಲೈ ವೇಳೆಗೆ ಇಳಿಮುಖವಾಗಿತ್ತು ಮತ್ತು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಅವರು ಕೆಟ್ಟ ಸಮಯ ಮುಗಿಯಿತೆಂದು ಭಾವಿಸಿದ್ದರು. "ನಾವು ಸದ್ಯದಲ್ಲೇ ಮೊದಲಿನ ಸ್ಥಿತಿಗೆ ಬರಲಿದ್ದೇವೆ ಮತ್ತು ವಿನಾಶದ ಕಾಲ ಮುಗಿಯಲಿದೆ ಎಂದು ಭಾವಿಸಿದ್ದೆವು. ಆರ್ಥಿಕ ಪರಿಸ್ಥಿತಿಯೂ ನಿಧಾನವಾಗಿ ಸುಧಾರಿಸುತ್ತಿತ್ತು” ಎಂದು ಅರುಣ್ ಅವರ 30 ವರ್ಷದ ಅಳಿಯ ಪ್ರದೀಪ ಧಾವ್ಳೆ ಹೇಳುತ್ತಾರೆ.

ಕಳೆದ ವರ್ಷದ ಜೂನ್ ಕೊನೆಯಲ್ಲಿ, ಅರುಣ್ ಮತ್ತು ರಾಜಶ್ರೀ ತಮ್ಮ ಹೊಲದಲ್ಲಿ ಸೋಯಾಬೀನ್ ಬಿತ್ತನೆ ಮಾಡಿದರು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಕೊಯ್ಲಿನ ಸಮಯದಲ್ಲಿ ಸುರಿದ ಅಕಾಲಿಕ ಮಳೆಯು ಒಸ್ಮಾನಾಬಾದ್ ಪ್ರದೇಶದೆಲ್ಲೆಡೆಯ ಸೋಯಾಬೀನ್ ಬೆಳೆಗಳನ್ನು ಕೊಚ್ಚಿಕೊಂಡು ಹೋಯಿತು . "ನಮ್ಮ ಇಡೀ ಕೃಷಿಭೂಮಿ ಪ್ರವಾಹಕ್ಕೆ ಸಿಲುಕಿತ್ತು" ಎಂದು ರಾಜಶ್ರೀ ಹೇಳುತ್ತಾರೆ. "ಫಸಲಿನ ಒಂದು ಸಣ್ಣ ಭಾಗವನ್ನೂ ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ಆಗ ನಾವು ಅನುಭವಿಸಿದ ನಷ್ಟದ ಪ್ರಮಾಣವನ್ನು ಅವರು ನನಗೆ ಹೇಳಲಿಲ್ಲ, ಬಹುಶಃ ಅವರಿಗೆ ನನ್ನ ಆತಂಕವನ್ನು ಹೆಚ್ಚಿಸುವುದು ಬೇಕಿರಲಿಲ್ಲ.” ಕಳೆದ 4-5 ವರ್ಷಗಳಲ್ಲಿ ಸಾಲವು 10 ಲಕ್ಷ ರೂ.ಗಳಿಗೆ ಹತ್ತಿರದಲ್ಲಿದೆಯೆಂದು ಪತಿ ಹೇಳಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.

PHOTO • Parth M.N.
PHOTO • Parth M.N.

ಎಡಕ್ಕೆ: ಮಾವ ಅರುಣ್ ಗಾಯಕ್ವಾಡ್ ಖರೀದಿಸಿದ ಟ್ರ್ಯಾಕ್ಟರ್‌ನೊಂದಿಗೆ ಪ್ರದೀಪ ಧಾವ್ಳೆ. ಬಲ: ಅರುಣ್ ಆತ್ಮಹತ್ಯೆ ಮಾಡಿಕೊಂಡ ಶೆಡ್

ಆ ಮೊತ್ತದಲ್ಲಿ ತಮ್ಮ ಮೂವರು ಹೆಣ್ಣುಮಕ್ಕಳ ಮದುವೆಗಾಗಿ ತೆಗೆದುಕೊಂಡ ಸಾಲವೂ ಸೇರಿತ್ತು. “ಕೋವಿಡ್‌ಗಿಂತಲೂ ಮೊದಲೇ ನಮ್ಮ ಪರಿಸ್ಥಿತಿ ಕಠಿಣವಾಗಿತ್ತು. ಲಾಕ್ ಡೌನ್ ಮತ್ತು ಭಾರಿ ಮಳೆಯ ನಂತರ, ಅದು ಇನ್ನಷ್ಟು ಬಿಗಡಾಯಿಸಿತು" ಎಂದು ರಾಜಶ್ರೀ ಹೇಳುತ್ತಾರೆ. "ನಮಗೆ 20 ವರ್ಷದ ಮಂಥನ್ ಎಂಬ ಮಗನಿದ್ದಾನೆ. ಅವನ ಓದಿನ ಖರ್ಚಿಗೂ ನಮಗೆ ಹಣದ ಅಗತ್ಯವಿತ್ತು."

ಅರುಣ್ ಆಗಲೂ ಭರವಸೆ ಕಳೆದುಕೊಳ್ಳಲಿಲ್ಲ. ಕೆಟ್ಟ ಸಮಯ ಕೊನೆಗೂ ಮುಗಿಯಿತೆಂದು ಭಾವಿಸಿದರು. ಹೊಸ ಹುರುಪಿನಿಂದ, ಅವರು ನವೆಂಬರ್ ಸುಮಾರಿಗೆ ಪ್ರಾರಂಭವಾಗುವ ಹಿಂಗಾರು ಹಂಗಾಮಿನಲ್ಲಿ (ರಬಿ) ಬೇಸಾಯದ ಕೆಲಸ ಪ್ರಾರಂಭಿಸಿದರು. ಅವರು ಈ ಬಾರಿ ಜೋಳ ಮತ್ತು ಕಡಲೆಯನ್ನು ಬಿತ್ತಿದರು. "ಆದರೆ ಹಿಂಗಾರು ಬೆಳೆಗಳನ್ನು ಕೊಯ್ಲು ಮಾಡುವ ಸಮಯಕ್ಕೆ ಸರಿಯಾಗಿ (ಮಾರ್ಚ್ ಸುಮಾರಿಗೆ) ಎರಡನೇ [ಕೋವಿಡ್-19] ಅಲೆ ಬಂದಿತು" ಎಂದು ಪ್ರದೀಪ ಹೇಳುತ್ತಾರೆ. "ಇದು ಮೊದಲನೆಯದಕ್ಕಿಂತ ಹೆಚ್ಚು ಭಯ ಹುಟ್ಟಿಸುವಂತಿತ್ತು. ಜನರು ಕಳೆದ ವರ್ಷದಂತೆಯೇ ಭಯಭೀತರಾಗಿದ್ದರು. ಯಾರೂ ಮನೆಯಿಂದ ಹೊರಗೆ ಬರಲು ಬಯಸುತ್ತಿರಲಿಲ್ಲ."

ಈ ಬಾರಿ ಅವರು 25 ಕ್ವಿಂಟಾಲ್ ಜೋಳ ಮತ್ತು 20 ಕ್ವಿಂಟಾಲ್‌ ಕಡಲೆಯ ಇಳುವರಿ ಪಡೆದಿದ್ದರು. ಆದರೆ ಈ ಬಾರಿಯೂ ಅಂದರೆ ಮಾರ್ಚ್‌ 2020ರಲ್ಲಿ ಮತ್ತೆ ಲಾಕ್‌ ಡೌನ್‌ ಆಗಿತ್ತು. ಈ ಬಾರಿಯೂ ಬಹುತೇಕ ಬೆಳೆಗಳ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದರಿಂದಾಗಿ ದಂಪತಿಗಳ ಪಾಲಿಗೆ ದೊಡ್ದ ಮೊತ್ತದ ನಷ್ಟ ಎದುರಾಗಿತ್ತು.

ಬಹುಶಃ ಇನ್ನೊಂದು ದುರಂತವನ್ನು ಎದುರಿಸಬೇಕೆನ್ನುವ ಅರಿವು ಅರುಣ್‌ ಅವರನ್ನು ಧೃತಿಗೆಡಿಸಿದೆ. ಏಪ್ರಿಲ್‌ ತಿಂಗಳ ಒಂದು ಬೆಳಗಿನ ಜಾವ ಅವರು ತನ್ನ ಮನೆ ಪಕ್ಕದಲ್ಲಿದ್ದ ಶೆಡ್ಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಅರುಣ್‌ ಕೋವಿಡ್‌-19 ಪಿಡುಗಿನಿಂದ ತಪ್ಪಿಸಿಕೊಂಡಿರಬಹುದು ಆದರೆ ಅದು ಉಳಿಸಿ ಹೋದ ನಷ್ಟವನ್ನು ಭರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಯುಎಸ್ ಮೂಲದ ಪಿಇಯು ಸಂಶೋಧನಾ ಕೇಂದ್ರದ ಮಾರ್ಚ್ 2021ರ ವರದಿಯ ಪ್ರಕಾರ ಮಾರ್ಚ್ 2020ರಲ್ಲಿ ಕೋವಿಡ್-19 ಪ್ರಾರಂಭವಾದ ನಂತರ ಕೇವಲ ಒಂದು ವರ್ಷದಲ್ಲಿ, ಭಾರತದಲ್ಲಿ ಅಂದಾಜು 75 ಮಿಲಿಯನ್ ಜನರು ದಿನಕ್ಕೆ 2 ಡಾಲರ್ ಅಥವಾ ಅದಕ್ಕಿಂತ ಕಡಿಮೆ ಆದಾಯದೊಂದಿಗೆ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ.

ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಕೃಷಿ ಜಿಲ್ಲೆಯಾದ ಒಸ್ಮಾನಾಬಾದಿನಲ್ಲಿ ಈ ಆರ್ಥಿಕ ಹಿಂಜರಿತವು ವಿಶೇಷವಾಗಿ ಎದ್ದು ಕಾಣುತ್ತದೆ- ಕಳೆದ ಮೂರು ದಶಕಗಳಿಂದ ಇಲ್ಲಿನ ರೈತರು ಸಾಲ ಮತ್ತು ಸಂಕಷ್ಟಗಳೊಡನೆ ಹೋರಾಡುತ್ತಿದ್ದಾರೆ.

PHOTO • Parth M.N.
PHOTO • Parth M.N.

ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಒಸ್ಮಾನಾಬಾದ್‌ನಲ್ಲಿ ಕೊಯ್ಲು ಮಾಡಿದ ಈರುಳ್ಳಿ ವ್ಯರ್ಥವಾಗಲಿದೆ, ಆಗ ಕೋವಿಡ್-19ರ ಎರಡನೇ ಅಲೆಯು ರೈತರು ತಮ್ಮ ಸಂಗ್ರಹವನ್ನು ಮಾರಾಟ ಮಾಡದಂತೆ ತಡೆಯಿತು

2015ರಿಂದ 2018ರವರೆಗೆ ರಾಜ್ಯದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳಿಗೆ ಮರಾಠಾ ವಾಡಾ ಸಾಕ್ಷಿಯಾಗಿದೆ . ಈಗ, ಮುಳುಗುತ್ತಿರುವ ಸ್ಥಳೀಯ ಆರ್ಥಿಕತೆಯು ಬರ, ಹಣದುಬ್ಬರ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳೊಡನೆ ಹೋರಾಡುತ್ತಾ ಬಂದಿದ್ದ ಇಲ್ಲಿನ ರೈತರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಮಹಾಮಾರಿ ಪ್ರಾರಂಭವಾದಾಗಿನಿಂದ ತಮ್ಮ  ಉಳಿವಿಗಾಗಿ ಅವರು ನಡೆಸುತ್ತಿದ್ದ ಹೋರಾಟವು ಇನ್ನಷ್ಟು ಕಷ್ಟಕರವಾಗಿದೆ, ಇದು ಅನೇಕ ರೈತರನ್ನು ಬಡತನದ ಅಂಚಿಗೆ ತಳ್ಳುತ್ತಿದೆ.

40 ವರ್ಷದ ರಮೇಶ್ ಚೌರೆ, ಎರಡನೇ ಅಲೆ ಅಪ್ಪಳಿಸುವ ಮೊದಲೇ ಎಲ್ಲವನ್ನೂ ಕಳೆದುಕೊಳ್ಳುವ ಭಯಕ್ಕೆ ಮಣಿದರು – ಮೊದಲನೆಯ ಅಲೆ ಅವರ ಸಂಕಲ್ಪವನ್ನು ಮುರಿದಿತ್ತು.

ಒಸ್ಮಾನಾಬಾದ್‌ನ ರಘುಚಿವಾಡಿ ಗ್ರಾಮದಲ್ಲಿ ಮೂರು ಎಕರೆ ಭೂಮಿ ಹೊಂದಿರುವ ರೈತರಾದ ರಮೇಶ್ ತನ್ನ ಹೆಂಡತಿಯ ಡಯಾಲಿಸಿಸ್ ಚಿಕಿತ್ಸೆಗಾಗಿ ಸಾಲ ಪಡೆದಿದ್ದರು- ಅದಕ್ಕಾಗಿ ಅವರು ತಿಂಗಳಿಗೆ ಒಮ್ಮೆಯಾದರೂ 90 ಕಿಲೋಮೀಟರ್ ದೂರದಲ್ಲಿರುವ ಲಾತೂರಿಗೆ ಹೋಗುತ್ತಿದ್ದರು. "ಅವನು ಅವಳ ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಬೇಕಾಗಿತ್ತು" ಎಂದು ಪಕ್ಕದ ಮನೆಯಲ್ಲಿ ವಾಸಿಸುವ ಅವರ ಮಾವ 61 ವರ್ಷದ ರಾಮರಾವ್ ಹೇಳುತ್ತಾರೆ. "ಸೆಪ್ಟೆಂಬರ್ 2019ರಲ್ಲಿ, ಆಕೆ ನಿಧನರಾದರು."

ಪತ್ನಿಯ ಮರಣದ ನಂತರ ರಮೇಶ್ ತನ್ನ ಭೂಮಿಯಲ್ಲಿ ಜೋಳ ಮತ್ತು ಸೋಯಾಬೀನ್ ಬೇಸಾಯ ಮಾಡಿದರು. ಜೊತೆಗೆ ಜೀವನ ನಿರ್ವಹಣೆಗಾಗಿ ಟೆಂಪೋ ಓಡಿಸುತ್ತಿದ್ದರು, ಮತ್ತು ತನ್ನ 16 ವರ್ಷದ ಮಗ ರೋಹಿತನನ್ನು ನೋಡಿಕೊಳ್ಳುವ ಜವಬ್ದಾರಿಯೂ ಅವರ ಮೇಲಿತ್ತು. "ಅವನು ಡ್ರೈವರ್ ಆಗಿ ತಿಂಗಳಿಗೆ 6,00 ರೂ.ಗಳನ್ನು ಗಳಿಸುತ್ತಿದ್ದ" ಎಂದು ರಾಮರಾವ್ ಹೇಳುತ್ತಾರೆ. "ಆದರೆ ಕೋವಿಡ್-19 (ಉಲ್ಬಣಾವಸ್ಥೆ) ಕಾರಣದಿಂದ ಕೆಲಸ ಕಳೆದುಕೊಂಡ. ಮತ್ತು ಅವನು ರೈತನಾಗಿಯೂ ಕಷ್ಟಪಡುತ್ತಿದ್ದ.”

ರಮೇಶ್‌ ಅವರಿಗೂ ಇತರ ರೈತರಂತೆಯೇ ತಾವು ಬೆಳೆದ 25 ಕ್ವಿಂಟಾಲ್ ಜೋಳವನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ ಮತ್ತು ಇದರಿಂದಾಗಿ ಅವರು ಸುಮಾರು 64,000 ರೂಪಾಯಿಗಳನ್ನು ಕಲೆದುಕೊಂಡರು, ಇದರ ಜೊತೆಗೆ ಇನ್ನೂ 30,000 ಸಾವಿರ ರೂಪಾಯಿಗಳನ್ನು ರಮೇಶ್ ಕಳೆದುಕೊಂಡಿದ್ದಾಗಿ ರಮೇಶ್‌ ರಾವ್‌ ಹೇಳುತ್ತಾರೆ. ಯಾಕೆಂದರೆ ಅವರು ಬೆಳೆ ಬೆಳೆಯಲು ಪ್ರತಿ ಎಕರೆಗೆ ಕನಿಷ್ಟ 12,000 ರೂಪಾಯಿಗಳನ್ನು ಖರ್ಚು ಮಾಡಿದ್ದರು.

ಕೃಷಿ ವೆಚ್ಚಗಳು ಮತ್ತು ವೈದ್ಯಕೀಯ ಬಿಲ್‌ಗಳು ಸೇರಿದಂತೆ ರಮೇಶ್ ಅವರ ಹೆಚ್ಚುತ್ತಿರುವ ಸಾಲ ಅವರನ್ನು ಚಿಂತೆಗೀಡು ಮಾಡಲು ಪ್ರಾರಂಭಿಸಿತು. ಅವರ ಸಾಲ 4 ಲಕ್ಷ ರೂಪಾಯಿಗಳಷ್ಟಾಗಿತ್ತು. "ಸೋಯಾಬೀನ್ ಬೆಳೆ ಉತ್ತಮವಾಗಿ ಬಂದರೂ, ತನ್ನ ಸಾಲ ಅಷ್ಟು ಬೇಗ ತೀರುವುದಿಲ್ಲವೆನ್ನುವುದು ಅವನಿಗೆ ಗೊತ್ತಾಗಿತ್ತು" ಎಂದು ರಾಮರಾವ್ ಹೇಳುತ್ತಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ರಮೇಶ್ ತಮ್ಮ ಬದುಕನ್ನು ಕೊನೆಗೊಳಿಸಿದರು. "ನಾನು ಸಂಜೆ ಹೊಲಕ್ಕೆ ಹೋಗಿದ್ದೆ, ಮರಳಿ ಬಂದಾಗ, ಅವನು ಸೀಲಿಂಗ್ ಫ್ಯಾನಿಗೆ (ಅವನ ಮನೆಯಲ್ಲಿ) ನೇತಾಡುತ್ತಿರುವುದು ಕಾಣಿಸಿತು" ಎಂದು ರಾಮರಾವ್ ನೆನಪಿಸಿಕೊಳ್ಳುತ್ತಾರೆ. "ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆ ಅವನ ಪೂರ್ತಿ ಬೆಳೆಯನ್ನೇ ಕೊಚ್ಚಿಕೊಂಡು ಹೋಯಿತು. ಪುಣ್ಯಕ್ಕೆ ಅದನ್ನು ನೋಡಿ ಎದೆಯೊಡೆದುಕೊಳ್ಳಲು ಅವನು ಉಳಿದಿರಲಿಲ್ಲ..."

ಒಂದು ವರ್ಷದ ಅವಧಿಯಲ್ಲಿ ತನ್ನ ಹೆತ್ತವರಿಬ್ಬರನ್ನೂ ಕಳೆದುಕೊಂಡ ರಮೇಶ್ ಅವರ ಮಗ ರೋಹಿತ್ ತನ್ನ ಓದಿನ ಸಲುವಾಗಿ ರೇಷನ್ ಅಂಗಡಿಯೊಂದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. "ನಾನು ಈಗಷ್ಟೇ ಶಾಲೆಯನ್ನು ಮುಗಿಸಿದ್ದೇನೆ ಮತ್ತು ಕಾಲೇಜಿಗೆ ಹೋಗಿ ಆರ್ಟ್ಸ್‌ ಓದಲು ಬಯಸುತ್ತೇನೆ" ಎಂದು ಹೇಳುತ್ತಾನೆ. "ಅದರ ನಂತರ ಮುಂದೆ ಏನು ಮಾಡಬೇಕೆನ್ನುವುದರ ಕುರಿತು ಯೋಚಿಸುತ್ತೇನೆ."

PHOTO • Parth M.N.

"ರಮೇಶ್ ಒಬ್ಬ ರೈತನಾಗಿ ಬಹಳ ಕಷ್ಟಪಟ್ಟನು" ಎಂದು ರಾಮರಾವ್ ಚೌರೆ ತನ್ನ ಸೋದರಳಿಯನ ಬಗ್ಗೆ ಹೇಳುತ್ತಾರೆ

ಮುಳುಗುತ್ತಿರುವ ಸ್ಥಳೀಯ ಆರ್ಥಿಕತೆಯು ಬರ, ಹಣದುಬ್ಬರ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳೊಡನೆ ಹೋರಾಡುತ್ತಾ ಬಂದಿದ್ದ ಇಲ್ಲಿನ ರೈತರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಮಹಾಮಾರಿ ಆರಂಭದ ನಂತರ ಅವರು ತಮ್ಮ ಅಸ್ತಿತ್ವಕ್ಕಾಗಿ ನಡೆಸುತ್ತಿದ್ದ ಹೋರಾಟ ಇನ್ನಷ್ಟು ಜಟಿಲವಾಗಿದೆ, ಇದು ಅನೇಕ ರೈತರನ್ನು ಬಡತನದ ಅಂಚಿಗೆ ತಳ್ಳುತ್ತಿದೆ

ಕುಸಿಯುತ್ತಿರುವ ರೈತರ ಖರೀದಿ ಶಕ್ತಿಯು ದೂರಗಾಮಿ ಪರಿಣಾಮಗಳನ್ನು ಬೀರಿದೆ.

ಬೀಡ್ ಜಿಲ್ಲೆಯ ಧಾರೂರು ತಾಲ್ಲೂಕಿನ ಕೃಷಿ ಸೇವಾ ಕೇಂದ್ರದ ಮಾಲೀಕ 31 ವರ್ಷದ ಶ್ರೀಕೃಷ್ಣ ಬಧೆ ಇದರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಒಸ್ಮಾನಾಬಾದ್ ನಗರದಿಂದ ಸುಮಾರು 115 ಕಿಲೋಮೀಟರ್ ದೂರದಲ್ಲಿರುವ ದೇವ್ದಹಿಫಲ್ ಗ್ರಾಮದಲ್ಲಿರುವ ಅವರ ಅಂಗಡಿಯು ಈ ಪ್ರದೇಶದ ರೈತರಿಗೆ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಮಾರಾಟ ಮಾಡುತ್ತದೆ. "ಹಲವಾರು ಸಂದರ್ಭಗಳಲ್ಲಿ, ರೈತರು ಈ ಕೃಷಿ ಸಂಬಂಧಿ ವಸ್ತುಗಳನ್ನು ಖರೀದಿಸುವುದಿಲ್ಲ, ಅವರು ಅದನ್ನು ಸಾಲವಾಗಿ ಪಡೆಯುತ್ತಾರೆ" ಎಂದು ಬಧೆ ಅವರ 24 ವರ್ಷದ ಸೋದರಸಂಬಂಧಿ ಖಂಡು ಪೋಟೆ ಹೇಳುತ್ತಾರೆ. "ಒಮ್ಮೆ ಬೆಳೆಗೆ ಕೈಗೆ ಬಂದ ನಂತರ ಫಸಲನ್ನು ಮಾರಿ ಬಂದ ಹಣದಿಂದ ಅಂಗಡಿಯವರ ಸಾಲವನ್ನು ತೀರಿಸುತ್ತಾರೆ."

ಆದಾಗ್ಯೂ,  ಕೊರೋನಾ ಕಾಣಿಸಿಕೊಂಡ ನಂತರ ಹೆಚ್ಚಿನ ರೈತರು ಬಧೆಯವರ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು ಪೋತೆ ಹೇಳುತ್ತಾರೆ. "ಸ್ವತಃ ಶ್ರೀಕೃಷ್ಣ ಐದು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದರು, ಹೀಗಾಗಿ ಅವರಿಗೆ ರೈತರು ಸುಳ್ಳು ಹೇಳುವುದಿಲ್ಲವೆನ್ನುವುದು ತಿಳಿದಿತ್ತು" ಎಂದು ಅವರು ಮುಂದುವರೆದು ಹೇಳುತ್ತಾರೆ. "ಆದರೆ ಅವರು ತಮ್ಮ ವಿತರಕರಿಂದ ಪಡೆದ  ಸಂಗ್ರಹಕ್ಕೆ ಹಣ ಪಾವತಿ ಮಾಡಬೇಕಿತ್ತು. ಇದಕ್ಕಾಗಿ ರೈತರಿಗೆ ಸಾಲದ ರೂಪದಲ್ಲಿ ನೀಡಿದ್ದ ವಸ್ತುಗಳ ಹಣದ ನಿರೀಕ್ಷೆಯಲ್ಲಿದ್ದರು ಆದರೆ ಆ ಹಣ ಬರಲಿಲ್ಲ"

ಇದೆಲ್ಲದರಿಂದ ದಿನೇ ದಿನೇ ತಮ್ಮ ಆತಂಕ ಹೆಚ್ಚಿದ್ದರಿಂದಾಗಿ 2021ರ ಮೇ ತಿಂಗಳಿನ ಒಂದು ದಿನ ತಮ್ಮ ಹೊಲಕ್ಕೆ ಹೋಗಿ ಮರಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡರು. “ಇನ್ನೊಂದು ನಷ್ಟ ಮತ್ತು ಹತಾಶೆಯನ್ನು ತರಲಿರುವ ಕೃಷಿ ಹಂಗಾಮಿನ ಕುರಿತು ಅವರು ಹೆದರಿದ್ದರು.” ಎಂದು ಪೋತೆ ಹೇಳುತ್ತಾರೆ. “ವಾಸ್ತವವೆಂದರೆ, ರೈತರಿಗೆ ತಮ್ಮ ನಷ್ಟವನ್ನು ತುಂಬಿಕೊಳ್ಳಲು ಮತ್ತೆ ಕೃಷಿಯನ್ನೇ ಅವಲಂಬಿಸಬೇಕಾಗುತ್ತದೆಯೇ ಹೊರತು ಇತರ ಯಾವುದೇ ಆಯ್ಕೆಗಳು ಅವರ ಪಾಲಿಗಿರುವುದಿಲ್ಲ.”

ರಾಜಶ್ರೀ ಈಗ ಅದನ್ನೇ ಮಾಡಲು ಯೋಜಿಸಿದ್ದಾರೆ. "ಸೋಯಾಬೀನ್ ಋತುವಿನ ಆರಂಭದಲ್ಲಿ (2021ರಲ್ಲಿ) ನಾವು ಒಂದು ಲಕ್ಷ ರೂ.ಗಳನ್ನು ಸಾಲ ಪಡೆದಿದ್ದೇವೆ" ಎಂದು ಅವರು ಹೇಳುತ್ತಾರೆ. "ನಾವು ಸೋಯಾಬೀನ್ ಬೆಳೆಯನ್ನು ಕೊಯ್ಲು ಮಾಡುವಾಗ ಋತುವಿನ ಕೊನೆಯಲ್ಲಿ ಅದನ್ನು ಮರುಪಾವತಿಸುತ್ತೇವೆ. ಇದು ಸಾಲವನ್ನು ನಿಧಾನವಾಗಿ ತೀರಿಸಲು ನಮಗಿರುವ ಏಕೈಕ ಆಯ್ಕೆಯಾಗಿದೆ."

ಹೀಗಾಗಿ ಈಗ ರಾಜಶ್ರೀಯವರಿಗೆ ಒಂದು ಅತ್ಯುತ್ತಮ ಇಳುವರಿಯ ಅಗತ್ಯವಿದೆ. ಈ ನಡುವೆ ಅವರ ಹೆಣ್ಣುಮಕ್ಕಳು ಮತ್ತು ಅವರ ಗಂಡಂದಿರು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಬದುಕು ನಿಧಾನವಾಗಿ ಹಳಿಗೆ ಬರಲಾರಂಭಿಸಿತ್ತು. ಆದರೆ ಗುಲಾಬ್ ಚಂಡಮಾರುತವು ಸೆಪ್ಟೆಂಬರ್ ಕೊನೆಯಲ್ಲಿ ಮರಾಠವಾಡಕ್ಕೆ ಭಾರಿ ಮಳೆಯನ್ನು ತಂದ ನಂತರ, ರಾಜಶ್ರೀಯವರಿಗೆ ಅಪಾಯವು ಮತ್ತೆ ತನ್ನ ಬೆನ್ನ ನಿಂತಿರುವಂತೆ ಭಾಸವಾಗಲಾರಂಭಿಸಿದೆ.

ಈ ವರದಿಯು ಪುಲಿಟ್ಜರ್ ಕೇಂದ್ರದ ಸಹಯೋಗದೊಂದಿಗೆ ಪ್ರಕಟಿಸುತ್ತಿರುವ ಸರಣಿಯ ಭಾಗವಾಗಿದೆ. ಕೇಂದ್ರವು ಸ್ವತಂತ್ರ ಪತ್ರಿಕೋದ್ಯಮಕ್ಕಾಗಿ ನೀಡುವ ಅನುದಾನಕ್ಕಾಗಿ ಈ ವರದಿಗಾರರನ್ನು ಆಯ್ಕೆ ಮಾಡಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru