“ಹೆಣ್ಣು ಮಗು” ಎಂದು ಡಾಕ್ಟರ್ ಹೇಳಿದರು.
ಇದು ಆಶಾ ಅವರ ನಾಲ್ಕನೇ ಮಗು-ಆದರೆ ಖಂಡಿತವಾಗಿಯೂ ಅವರ ಕೊನೆಯ ಮಗುವಲ್ಲ. ಸ್ತ್ರೀರೋಗತಜ್ಞ ಆಕೆಯ ತಾಯಿ ಕಾಂತಾಬೆನ್‌ಗೆ ಸಾಂತ್ವನ ಹೇಳುವುದು ಕೇಳುತ್ತಿತ್ತು: “ಅಮ್ಮಾ, ಅಳಬೇಡಿ. ಅಗತ್ಯವಿದ್ದರೆ ಇನ್ನೂ ಎಂಟು ಸಿಝೇರಿಯನ್ ಮಾಡುತ್ತೇನೆ. ಅವಳು ಗಂಡು ಮಗುವಿಗೆ ಜನ್ಮ ನೀಡುವವರೆಗೂ, ನಾನು ಇಲ್ಲಿಯೇ ಇರುತ್ತೇನೆ. ಅದು ನನ್ನ ಜವಾಬ್ದಾರಿ. "
ಈ ಮೊದಲು ಆಶಾ ಅವರ ಮೂರೂ ಮಕ್ಕಳು ಹೆಣ್ಣು, ಇವರೆಲ್ಲರೂ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಜನಿಸಿದ್ದರು. ಮತ್ತು ಈಗ ಅವರು ಅಹಮದಾಬಾದ್ ನಗರದ ಮಣಿನಗರ ಪ್ರದೇಶದ ಖಾಸಗಿ ಚಿಕಿತ್ಸಾಲಯವೊಂದರಲ್ಲಿ ಭ್ರೂಣದ ಲೈಂಗಿಕ ಪರೀಕ್ಷೆಯ ಫಲಿತಾಂಶವನ್ನು ವೈದ್ಯರಿಂದ ಕೇಳುತ್ತಿದ್ದರು. (ಅಂತಹ ಪರೀಕ್ಷೆಗಳು ಕಾನೂನುಬಾಹಿರ, ಆದರೆ ವ್ಯಾಪಕವಾಗಿ ಲಭ್ಯವಿದೆ.) ಇದು ಅವರ ನಾಲ್ಕನೇ ಗರ್ಭಧಾರಣೆ. ಅವರು 40 ಕಿ.ಮೀ ದೂರದಲ್ಲಿರುವ ಖಾನ್ಪರ್ ಗ್ರಾಮದಿಂದ ಕಾಂತಾಬೆನ್ ಜೊತೆ ಇಲ್ಲಿಗೆ ಬಂದಿದ್ದರು. ತಾಯಿ ಮತ್ತು ಮಗಳು ಇಬ್ಬರೂ ದುಃಖಿತರಾಗಿದ್ದರು. ಆಶಾರ ಮಾವ ಗರ್ಭಪಾತ ಮಾಡಲು ಅನುಮತಿಸುವುದಿಲ್ಲ ಎಂದು ಅವರಿಗೆ ತಿಳಿದಿತ್ತು. "ಅದು ನಮ್ಮ ನಂಬಿಕೆಗೆ ವಿರುದ್ಧವಾದುದು" ಎಂದು ಕಾಂತಾಬೆನ್ ಹೇಳಿದರು.
ಬೇರೆ ರೀತಿಯಲ್ಲಿ ಹೇಳುವುದಾದರೆ ಇದು ಆಶಾರ ಕೊನೆಯ ಗರ್ಭಾವಸ್ಥೆಯಲ್ಲ.
ಆಶಾ ಮತ್ತು ಕಾಂತಾಬೆನ್ ಅವರು ಭರ್ವಾಡ್ ಪಶುಪಾಲಕ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಸಾಮಾನ್ಯವಾಗಿ ಕುರಿ ಮತ್ತು ಮೇಕೆಗಳನ್ನು ಮೇಯಿಸುತ್ತಾರೆ. ಆದಾಗ್ಯೂ, ಅಹಮದಾಬಾದ್ ಜಿಲ್ಲೆಯ ಧೋಲ್ಕಾ ತಾಲ್ಲೂಕಿನ ಖಾನ್ಪರ್ ಎನ್ನುವ ಹಳ್ಳಿಯಲ್ಲಿ, ಇವರ ಸಮುದಾಯದ 1,500ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ 271 ಮನೆಗಳಿವೆ (ಜನಗಣತಿ 2011) - ಅವರಲ್ಲಿ ಹೆಚ್ಚಿನವರು ಕಡಿಮೆ ಸಂಖ್ಯೆಯ ಹಸುಗಳು ಮತ್ತು ಎಮ್ಮೆಗಳನ್ನು ಸಾಕುತ್ತಾರೆ. ಸಾಂಪ್ರದಾಯಿಕ ಸಾಮಾಜಿಕ ಶ್ರೇಣಿಗಳಲ್ಲಿ, ಈ ಸಮುದಾಯವು ಗ್ರಾಮೀಣ ಜಾತಿಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಕಂಡುಬರುತ್ತದೆ ಮತ್ತು ಗುಜರಾತ್‌ನಲ್ಲಿ ಪರಿಶಿಷ್ಟ ಪಂಗಡ ಎಂದು ಇದನ್ನು ಪಟ್ಟಿಮಾಡಲಾಗಿದೆ.







