ತನುಜಾ ತನಗೆ ಬೆನ್ನು ನೋವು ಮತ್ತು ಸೆಳೆತ ಅಸಹನೀಯ ಎನ್ನಿಸತೊಡಗಿದಾಗ ಅವರು ಹೋಮಿಯೋಪಥಿ ವೈದ್ಯರೊಬ್ಬರ ಬಳಿ ಹೋದರು. “ಅವರು ನನಗೆ ನನಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಸಮಸ್ಯೆ [ಕೊರತೆ] ಇದೆ ಮತ್ತು ನೆಲದ ಮೇಲೆ ಕುಳಿತು ಕೆಲಸ ಮಾಡಬಾರದು ಎಂದು ಹೇಳಿದರು.”
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೀಡಿ ಕಾರ್ಮಿಕರಾಗಿರುವ ಅವರು ಎಂಟು ಗಂಟೆಗಳ ಕಾಲ ನೆಲದ ಮೇಲೆ ಕುಳಿತು ಬೀಡಿ ಕಟ್ಟುತ್ತಾರೆ. "ನನಗೆ ಜ್ವರ ಮತ್ತು ನಿತ್ರಾಣ ಕಾಡುತ್ತಿದೆ, ಮತ್ತು ನನ್ನ ಬೆನ್ನಿನಲ್ಲಿ ತುಂಬಾ ನೋವು ಇದೆ," ಎಂದು 40ರ ದಶಕದ ಉತ್ತರಾರ್ಧದಲ್ಲಿ ಈ ಈ ಕೆಲಸಗಾರ್ತಿ ಹೇಳುತ್ತಾರೆ. "ಒಂದು ಕುರ್ಚಿ ಮತ್ತು ಮೇಜನ್ನು ಖರೀದಿಸಲು ನನಗೆ ಸಾಧ್ಯವಾಗಿದ್ದರೆ ಚೆನ್ನಾಗಿರುತ್ತಿತ್ತು," ಎಂದು ಅವರು ಹೇಳುತ್ತಾರೆ.
ಅದು ನವೆಂಬರ್ ತಿಂಗಳ ಕೊನೆಯ ದಿನವಾಗಿತ್ತು ಮತ್ತು ಹರೇಕ್ ನಗರ ಮೊಹಲ್ಲಾದಲ್ಲಿರುವ ಅವರ ಮನೆಯ ಗಟ್ಟಿಯಾದ ಸಿಮೆಂಟ್ ನೆಲದ ಮೇಲೆ ಬೆಚ್ಚಗಿನ ಬೆಳಕು ಬೀಳುತ್ತಿತ್ತು. ತನುಜಾ ತಾಳೆಗರಿಯ ಮದುರ್ (ಚಾಪೆ) ಮೇಲೆ ಕುಳಿತು ಒಂದರ ನಂತರ ಒಂದರಂತೆ ಬೀಡಿಯನ್ನು ಕಟ್ಟುತ್ತಿದ್ದರು. ಅವರು ಕೆಂಡು ಎಲೆಯನ್ನು ತಿರುಚುವಾಗ, ಮೊಣಕೈಗಳನ್ನು ಒಂದು ಭಂಗಿಯಲ್ಲಿರಿಸಿ, ಭುಜಗಳನ್ನು ಮೇಲಕ್ಕೆತ್ತಿ, ತಲೆಯನ್ನು ಒಂದು ಬದಿಗೆ ವಾಲಿಸುವಾಗ ಬೆರಳುಗಳು ಜಾಣ್ಮೆಯಿಂದ ಚಲಿಸುತ್ತವೆ. "ನನ್ನ ಬೆರಳುಗಳು ಎಷ್ಟು ಮರಗಟ್ಟಿವೆಯೆಂದರೆ, ನನಗೆ ಬೆರಳುಗಳಿವೆಯೇ ಎಂದು ಅನುಮಾನವಾಗುತ್ತದೆ," ಎಂದು ಅರೆ ತಮಾಷೆಯಾಗಿ ಹೇಳುತ್ತಾರೆ.
ಅವರ ಸುತ್ತಲೂ ಬೀಡಿ ಕಟ್ಟಲು ಬೇಕಾಗುವ ಪರಿಕರಗಳಿದ್ದವು: ಕೆಂಡು ಎಲೆ, ಹೊಗೆಸೊಪ್ಪಿನ ಪುಡಿ ಮತ್ತು ನೂಲಿನ ಉಂಡೆ. ಜೊತೆಗೆ ಒಂದು ಸಣ್ಣ ಹರಿತವಾದ ಚೂರಿ ಮತ್ತು ಕತ್ತರಿ ಅವರ ಕೆಲಸದ ಉಪಕರಣಗಳಾಗಿ ಪಕ್ಕದಲ್ಲಿದ್ದವು.
ತನುಜಾ ಮನೆಗೆ ದಿನಸಿ ಸಾಮಾನುಗಳನ್ನು ತರಲು, ಅಡುಗೆ ಮಾಡಲು, ನೀರು ತರಲು, ಮನೆ ಮತ್ತು ಅಂಗಳವನ್ನು ಸ್ವಚ್ಛಗೊಳಿಸಲು ಮತ್ತು ಇತರ ಮನೆಕೆಲಸಗಳನ್ನು ಮುಗಿಸಲು ಸ್ವಲ್ಪ ಸಮಯ ಹೊರಗೆ ಬರುತ್ತಾರೆ. ಆದರೆ ದಿನಕ್ಕೆ ಸರಿಸುಮಾರು 500-700 ಬೀಡಿಗಳ ಗುರಿಯನ್ನು ಅವರು ಸಾಧಿಸಲೇಬೇಕು, ಆಗಲಷ್ಟೇ ತನಗೆ ಮಾಸಿಕ 3,000 ರೂ.ಗಳ ಆದಾಯ ಪಡೆಯಲು ಸಾಧ್ಯವೆನ್ನುವುದರ ಆಳವಾದ ಅರಿವು ಅವರಿಗಿದೆ.
















