ಪುಣೆ ಜಿಲ್ಲೆಯ ನಿಮ್ಗಾಂವ್ ಕೇಟ್ಕಿ ಗ್ರಾಮದ ಮೂವರು ಗಾಯಕಿಯರು ತಮ್ಮ ದೈನಂದಿನ ಹಿಟ್ಟು ಬೀಸುವ ಕೆಲಸದ ನಡುವೆ ತಮ್ಮ ಸಹೋದರರಿಗಾಗಿ ಕೆಲವು ಹಾಡುಗಳನ್ನು ಹಾಡಿದ್ದಾರೆ
"ನನ್ನ ತಮ್ಮ ಜೀಪ್ ಸ್ಟಿಯರಿಂಗ್ ಹಿಡಿದಿರುವಾಗ ಜೀಪಿಗೆ ಒಂದು ಕಳೆ ಬರುತ್ತದೆ" ಎಂದು ನಿಮ್ಗಾಂವ್ ಕೇತಕಿಯ ಮಹಿಳೆಯರು ಹಾಡುತ್ತಾರೆ. ತಮ್ಮ ಜೀಪ್ ಓಡಿಸುವಾಗ ಜೀಪಿನ ಮೌಲ್ಯ ಹೆಚ್ಚುತ್ತದೆ. ಅದುವೇ ಅವನಲ್ಲಿನ ಹೆಚ್ಚುಗಾರಿಕೆ. ಈ ಹಾಡಿನಲ್ಲಿ ಬರುವ ಜಿತೇಂದ್ರ ಎಂದರೆ ಮೂಲ ಜಿಎಸ್‌ಪಿ ತಂಡದಲ್ಲಿದ್ದ ಯುವ ಸಂಶೋಧಕ ಜಿತೇಂದ್ರ ಮೇದ್. ಈ ಬೀಸುಕಲ್ಲಿನ ಪದಗಳನ್ನು ರೆಕಾರ್ಡ್ ಮಾಡಲು ಆ ಸಮಯದಲ್ಲಿ ಅವರು ಹಳ್ಳಿಯಲ್ಲಿದ್ದರು.
ಆ ಕ್ಷಣದ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಕಟ್ಟಲಾಗಿರುವ ಈ 15 ಓವಿಗಳ ಈ ಗುಚ್ಛದಲ್ಲಿನ ಹಾಡುಗಳನ್ನು ಇಂದಾಪುರ ತಾಲೂಕಿನ ನಿಮ್ಗಾಂವ್ ಕೇತ್ಕಿಯ ಚಿಂಚವಾಡಿ ಕುಗ್ರಾಮದ ಫುಲಾ ಭೋಂಗ್, ಚಂದ್ರಭಾಗ ಭೋಂಗ್ ಮತ್ತು ಭಾಗು ಮೋಹಿತೆ ಅವರು ಕೊಡುಗೆಯಾಗಿ ನೀಡಿದ್ದಾರೆ. ಅವರು ಸಹೋದರನ ಯಶಸ್ಸಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ - ಈ ಸಂದರ್ಭದಲ್ಲಿ, ಜಿತೇಂದ್ರನನ್ನು ಶ್ರೀಮಂತ ಮತ್ತು ವಿನಮ್ರ ಗುಣದ ಸಹೋದರ ಎಂದು ಸಂಬೋಧಿಸುತ್ತಾರೆ.
1995ರಲ್ಲಿ ಜಿಎಸ್‌ಪಿ ತಂಡಕ್ಕಾಗಿ ಈ ಹಾಡುಗಳನ್ನು ಹಾಡಿದಾಗ ಪ್ರತಿಯೊಬ್ಬ ಮಹಿಳೆಯು ಇನ್ನೊಬ್ಬರಿಗೆ ಪದಗಳನ್ನು ಸಾಲವಾಗಿ ನೀಡುತ್ತಿದ್ದರು. ವಯಸ್ಸಾದ ಮಹಿಳೆಯರಿಂದ ಅವರು ಕಲಿತ ಈ ಹಾಡುಗಳ ಪದಗಳನ್ನು ನೆನಪಿಸಿಕೊಳ್ಳಲು ಅವರು ಹೆಣಗಾಡಿದಾಗ ಜಿತೇಂದ್ರ ಕೂಡ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಇದರೊಂದಿಗೆ, ಪ್ರೀತಿಯ ಸಹಯೋಗವು ಮುನ್ನುಡಿಯಾಯಿತು. ಗಾಯಕರು ಸಂಶೋಧಕರಿಗೆ ತಮ್ಮ ಪ್ರಪಂಚದ ಒಳನೋಟಕ್ಕೆ ಅವಕಾಶ ಮಾಡಿಕೊಟ್ಟರು, ಅವರನ್ನು ಹಾಡುಗಳ ಮಡಿಲಿಗೆ ಸ್ವಾಗತಿಸಿದರು.
ಮೊದಲ ಎರಡು ದ್ವಿಪದಿಗಳಲ್ಲಿ ಸಹೋದರನು ತನ್ನ ತಂಗಿಯ ಮನೆಗೆ ಭೇಟಿ ನೀಡಿರುವುದನ್ನು ವಿವರಿಸಲಾಗಿದೆ. ಸಹೋದರಿ ಹೀಗೆ ಹೇಳುತ್ತಾಳೆ:
ಜೀಪು ಹೊಂದಿರುವ ನನ್ನ ತಮ್ಮ, ನಡೆದೇ ಬಂದ ನನ್ನ
ಮನೆಗೆ
ನನ್ನ ತಮ್ಮ ಜಿತೇಂದ್ರ ಸಿರಿವಂತ, ಆದರೂ ಇಲ್ಲ
ಒಂದಿಷ್ಟು ಹಮ್ಮು
ತಮ್ಮ ಅವನ ವಾಹನವನ್ನು ಓರೆಕೋರೆಯಾದ ರಸ್ತೆಯಲ್ಲಿ ಚತುರವಾಗಿ ನಡೆಸುತ್ತಿರುವುದನ್ನು ಅವಳು ಹೆಮ್ಮೆಯಿಂದ ನೋಡುತ್ತಾಳೆ. ಅವನು ಜೀಪ್ ಓಡಿಸಿದರೂ - ಸಂಪತ್ತು ಮತ್ತು ಚಲನಶೀಲತೆಯ ಸಂಕೇತ - ಅವನು ಅವಳನ್ನು ಭೇಟಿ ಮಾಡಲು ಸಹೋದರಿಯ ಮನೆಗೆ ನಡೆದೇ ಹೋಗುತ್ತಾನೆ. ಅಭಿಮಾನಗಳನ್ನು ಬದಿಗಿಡುವ ತಮ್ಮನ ಈ ಗುಣವನ್ನು ಅವಳು ಪ್ರಶಂಸಿಸುತ್ತಾಳೆ.
ಈ ಓವಿಗಳಲ್ಲಿ ಸಹೋದರನನ್ನು ಚಾರಿತ್ರ್ಯವಂತ ವ್ಯಕ್ತಿಯಾಗಿ ಚಿತ್ರಿಸಲಾಗಿದೆ - ವಿವೇಚನಾಶೀಲ ಮತ್ತು ಸದ್ಗುಣಿ, ಮತ್ತು ಅವನು ಸಂಗ್ರಹಿಸಿದ ಸಂಪತ್ತಿಗಿಂತ ಹೆಚ್ಚು ಮೌಲ್ಯಯುತವಾದವನು. ಇಬ್ಬರು ಸಹೋದರಿಯರು ತನ್ನ ಸಹೋದರನನ್ನು ಭೇಟಿ ಮಾಡಲು ಹೋಗುತ್ತಿರುವಾಗ ಗಾಯಕರು ಒಂದು ಘಟನೆಯನ್ನು ವಿವರಿಸುತ್ತಾರೆ; ಇಬ್ಬರು ಅಕ್ಕ ತಂಗಿಯರು ಅವರ ಅಣ್ಣನ ಭೇಟಿಗೆ ಹೋಗುವಾಗ ಒಬ್ಬಳು ಅಪರಿಚಿತನೊಡನೆ ಕಣ್ಣು ಬೆರೆಸುತ್ತಾಳೆ. "ಆ ನೋಟಕ್ಕೆ ಸಿಲುಕಿದ" ಅವಳು ಅವನಿಗಾಗಿ ತನ್ನ ಜಗತ್ತು ಮತ್ತು ಅದರ ಎಲ್ಲ ಅದ್ಭುತಗಳನ್ನು ಬಿಟ್ಟು ಬರಲು ತಯಾರು ಎನ್ನುತ್ತಾಳೆ. ಆಗ ಸಹೋದರ ಜಿತೇಂದ್ರ ಹೇಳುತ್ತಾನೆ, "ನಿನ್ನ ಮರ್ಯಾದೆಯ ಕಡೆ ಗಮನವಿರಲಿ," ಎಂದು . ಸಹೋದರನ ಎಚ್ಚರಿಕೆಯು ಅವನ ಪ್ರೀತಿಯ ಸಂಕೇತವಾಗಿ ಕಂಡುಬರುತ್ತದೆ.
![](/media/images/02-GSP-Lot-52-BrotherSister-image0-NW__GSP.max-1400x1120.jpg)
ತನ್ನ ಮುದ್ದಿನ ತಮ್ಮನನ್ನು ಸಿಂಗರಿಸಲು ಮುತ್ತು ಕೊಳ್ಳುವ ಅಕ್ಕನ ಅನನ್ಯ ಪ್ರೀತಿಯನ್ನು ಹಿಡಿದಿಟ್ಟಿವೆ ಈ ಹಾಡುಗಳು
ಈ ವಾತ್ಸಲ್ಯವನ್ನು ಆಹಾರದ ಮೂಲಕವೂ ದ್ವಿಪದಿಗಳಲ್ಲಿ ಚಿತ್ರಿಸಲಾಗಿದೆ. ತನ್ನ ಅಡಿಗೆಮನೆಯ ಬೆಂಕಿ ಆರಿಹೋಗಿದ್ದರೂ, ಸಹೋದರಿ ತನ್ನ ಸಹೋದರನಿಗಾಗಿ ಅಡುಗೆ ಮಾಡಲು ಅದನ್ನು ಮತ್ತೆ ಬೆಳಗಿಸಲು ಪ್ರಾರಂಭಿಸುತ್ತಾಳೆ. ಒಡಹುಟ್ಟಿದವರು ಹರಟೆ ಹೊಡೆಯುತ್ತಿದ್ದಂತೆ ಅವನ ನೆಚ್ಚಿನ ಊಟವನ್ನು ತಯಾರಿಸಲಾಗುತ್ತದೆ:
ತಮ್ಮ ಬಂದಿರುವನೆಂದು ಬೇಳೆ, ಈರುಳ್ಳಿ ಸಾರು
ಮಾಡಿರುವೆ
ಎಷ್ಟೆಂದು ಹೇಳಲಿ ತಮ್ಮ ನಿನಗೆ, ನಾವು ಬೂಂದಿ
ಲಾಡು ಮಾಡೋಣ
ಕಡಲೆ ಹಿಟ್ಟನ್ನು ಕಾಳುಗಳಾಗಿ ಕರಿದು ಅದನ್ನು ಸಕ್ಕರೆ ಪಾಕದಲ್ಲಿ ಅದ್ದಿ ಬೂಂಧಿ ಲಾಡುಗಳನ್ನು ಮಾಡಲಾಗುತ್ತದೆ.
ಮುಂದಿನ ದ್ವಿಪದಿಗಳಲ್ಲಿ, ಸಹೋದರಿಯು ತನ್ನ ತಮ್ಮನ ಮದುವೆಯ ಸುದ್ದಿಯನ್ನು ಸ್ವೀಕರಿಸುವ ಬಗ್ಗೆ ಹಾಡುತ್ತಾಳೆ. "ನನ್ನ ಕಿರಿಯ ಸಹೋದರ ವೈಶಾಖ ಮಾಸದಲ್ಲಿ (ಏಪ್ರಿಲ್-ಮೇ) ಮದುಮಗನಾಗುತ್ತಾನೆ" ಎಂದು ಅವರು ಹೇಳುತ್ತಾರೆ. ಮುಂಡವಲ್ಯ ಎಂಬ ಆಭರಣವನ್ನು ವರನ ಮದುವೆ ಸಮಾರಂಭದ ಸಮಯದಲ್ಲಿ ಅವನ ಹಣೆಯ ಮೇಲೆ ಕಟ್ಟಲು, ಹತ್ತಿಯ ಬಟ್ಟೆಯಲ್ಲಿ ಸುರಕ್ಷಿತವಾಗಿಡಲು ಅವಳು ಮುತ್ತುಗಳನ್ನು ಒಟ್ಟಿಗೆ ಕಟ್ಟುತ್ತಾಳೆ. ತನ್ನ ಅಮೂಲ್ಯ ಸಹೋದರನನ್ನು ಅಲಂಕರಿಸಲು ಮುತ್ತುಗಳ ಮೇಲೆ ಖರ್ಚುಮಾಡುವುದು, ಪ್ರೀತಿಯ ಸಹೋದರಿಯ ವಾತ್ಸಲ್ಯವು ಸ್ಪಷ್ಟವಾಗಿದೆ.
ಭಾಗುಬಾಯಿ ಮೋಹಿತೆ ಹಾಡಿದ ಕೊನೆಯ ಎರಡು ದ್ವಿಪದಿಗಳು, ಸಹೋದರಿ ತನ್ನ ತವರಿನ ಬಗ್ಗೆ ಅನುಭವಿಸುವ ಭಾವನೆಗಳ ಸರಣಿಯನ್ನು ಬಹಿರಂಗಪಡಿಸುತ್ತವೆ. ಅವಳು ತನ್ನ ಸಹೋದರನ ಸಂಪತ್ತು ಮತ್ತು ಯಶಸ್ಸಿನ ಬಗ್ಗೆ ಹೆಮ್ಮೆಪಡುತ್ತಾಳೆ, ಆದರೆ ಒಂದು ಬಗೆಯ ಅಸೂಯೆಯ ದನಿಯೂ ಸಹ ಇದೆ. ತನ್ನ ಸಹೋದರರ ಹೆಂಡತಿಯರು ತಮ್ಮ ಗಂಡನ ಸಮೃದ್ಧಿ ಮತ್ತು ಖ್ಯಾತಿಯನ್ನು ಹೇಗೆ "ಆಳುತ್ತಾರೆ" ಎಂಬುದನ್ನು ಅವಳು ಹಾಡುತ್ತಾಳೆ. ಪೊಸೆಸಿವ್ ಮತ್ತು ಸ್ವಲ್ಪ ಅಸೂಯೆಯಿಂದ, ಸಹೋದರಿ ಹಿಟ್ಟು ಅರೆಯುವ ತನ್ನ ಕೆಲಸಕ್ಕೆ ಹಿಂತಿರುಗುತ್ತಾಳೆ. ಕೌಟುಂಬಿಕ ಸಂಬಂಧಗಳಲ್ಲಿ ವ್ಯಾಮೋಹದ ಸ್ವರೂಪವನ್ನು ಬಹಿರಂಗಪಡಿಸುವ ಈ ದ್ವಿಪದಿಗಳು ಪ್ರೀತಿ ಮತ್ತು ವಾತ್ಸಲ್ಯದ ಜೊತೆಗೆ ಅಸ್ತಿತ್ವದಲ್ಲಿರುವ ದೈನಂದಿನ ಸಂಘರ್ಷಗಳನ್ನು ವ್ಯಕ್ತಪಡಿಸುತ್ತವೆ.
ಗಾಯಕಿ ಆ ದಿನಕ್ಕೆ ಸಾಕಷ್ಟು ಹಿಟ್ಟನ್ನು ಬೀಸಿ ಮುಗಿಸಿದ್ದಾರೆ, ಇದರಿಂದ "ಸಂಪೂರ್ಣ ತೃಪ್ತಿ" ಎಂದು ಅವರು ಹೇಳುತ್ತಾರೆ. ಅವರ ಮೊರದಲ್ಲಿ ಒಂದು ವೀಳ್ಯದೆಲೆ ಪೆಟ್ಟಿಗೆ ಇದೆ, ಅವರು ಈಗ ವಿಶ್ರಾಂತಿ ಪಡೆಯುತ್ತಾರೆ ಮತ್ತು ಅಡಿಕೆಯನ್ನು ಆನಂದಿಸುತ್ತಾರೆ ಎಂದು ಇದು ಸೂಚಿಸುತ್ತದೆ. ಇದ್ದಕ್ಕಿದ್ದಂತೆ ನೆನಪಾಗುವಂತೆ, ಗಾಯಕಿ ತನ್ನ ಪತಿಯೂ ಸಹ ಒಂಬತ್ತು ಲಕ್ಷ ರೂಪಾಯಿ ಮೌಲ್ಯದ ನೌಲಾಖಾ ಎಂದು ನಮಗೆ ಹೇಳುತ್ತಾರೆ.
ಹಾಡುಗಾರಿಕೆಯ ನಡುವೆ, ಜಿತೇಂದ್ರ ಮೇದ್ ಮತ್ತು ಗಾಯಕರು ತಮಾಷೆ ಮಾಡುತ್ತಾರೆ. ಜಿತೇಂದ್ರ ಅವರು ತಮ್ಮ ಮದುವೆಗೆ ಆಹ್ವಾನಿಸುತ್ತಾರೆ. "ನೀವು ಮದುವೆಯಾದಾಗ ನಾವು ಸೋಬಾನೆ ಹಾಡುಗಳನ್ನು ಹಾಡುತ್ತೇವೆ" ಎಂದು ಗಾಯಕರು ನಗುವಿನ ನಡುವೆ ಹೇಳುತ್ತಾರೆ. ತದನಂತರ ಬೇಗನೆ ಮುಂದುವರೆದು, "ಆದರೆ ನೀವು ಬಂದು ನಮ್ಮನ್ನು ಕರೆತರಬೇಕು, ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂದು ನಮಗೆ ತಿಳಿದಿಲ್ಲ."
ಜೀಪು
ಹೊಂದಿರುವ ನನ್ನಣ್ಣ, ನಡೆದೇ ಬಂದ ನನ್ನ ಮನೆಗೆ
ನನ್ನಣ್ಣ
ಜಿತೇಂದ್ರ ಸಿರಿವಂತ, ಆದರೂ ಇಲ್ಲ ಒಂದಿಷ್ಟು ಹಮ್ಮು
ಸುತ್ತು
ಬಳಸಿನ ದಾರಿ ಹೋಗುವುದು ಬಂಗಲೆಯ ಕಡೆಗೆ
ಜೀಪಿಗೊಂದು
ಜೀವಕಳೆ ನನ್ನಣ್ಣ ಕುಳಿತರ ಅದನ್ನು ಓಡಿಸಲೆಂದು
ಹಾದಿಹೋಕನೇ
ನಿನ್ನ ನೋಟವೇ ಒಂದು ಆಕರ್ಷಣೆ
ಎಲ್ಲವನ್ನು
ಬಿಟ್ಟುಬಂದೆ ನಿನ್ನ ಜೊತೆ ಸೇರಲೆಂದು
ನನ್ನಣ್ಣ
ಜಿತೇಂದ್ರೆ ಹೇಳುತಾನೆ, ನಿನ್ನ ಕೀರ್ತಿಯನ್ನು ಕಾಪಾಡಿಕೋ
ನಾವಿಬ್ಬರೂ
ಸೋದರಿಯರು ಬರುವವರಿದ್ದೇವೆ ನಿಮ್ಮೂರಿಗೆ ಇಂದು
ಅಣ್ಣ
ಊಟಕ್ಕೆಂದು ಬಂದಿದ್ದಾನೆ ಮನೆಗೆ, ಹುಷಾರಿಲ್ಲದೆ ಮಲಗಿದ್ದೇನೆ ನಾನು
ನನ್ನಣ್ಣ
ಜಿತೇಂದ್ರನಿಗೆ ಬೂಂದಿ ಲಾಡು ಎಂದರೆ ಎಲ್ಲಿಲ್ಲದ ಇಷ್ಟ
ಅಣ್ಣ
ಬಂದಿರುವನೆಂದು ಬೇಳೆ, ಈರುಳ್ಳಿ ಸಾರು ಮಾಡಿರುವೆ
ಎಷ್ಟೆಂದು
ಹೇಳಲಿ ಅಣ್ಣ ನಿನಗೆ, ನಾವು ಬೂಂದಿ ಲಾಡು ಮಾಡೋಣ
ಅಣ್ಣ
ಬಂದಿರುವ ಮನೆಗಿಂದು, ನೀರು, ಚಹಾವನ್ನು ತಂದಿಟ್ಟೆ
ಚಹಾವಷ್ಟೇ
ಎತ್ತಿಕೊಂಡ ಅಣ್ಣ ನೀರನ್ನು ಕೊಂಡು ಹೋಗೆಂದ
ಬೆಳಗಿನ
ಜಾವವದು, ಕಣ್ಣಿನ್ನೂ ಮಂಜು ಮಂಜು ನನಗೆ
ನನ್ನ
ಮಗನ ಕೇಳಿದೆ, ಕಂದಾ, ಕಪ್ಪು, ಬಸಿ ಎಲ್ಲಿವೆಯೆಂದು
ಬೆಳಗಿನ
ಜಾವವದು, ಕಣ್ಣಿನ್ನೂ ಮಂಜು ಮಂಜು ನನಗೆ
ನಿಜ
ಹೇಳತೇನ ಶಿವರಾಜ, ಕಪ್ಪು, ಬಸಿ ಎರಡೂ ಇರುವಲ್ಲೇ ಇದ್ದವು
ಅಣ್ಣ
ತಂಗಿಯರು ನಾವು, ಅಚ್ಚುಮೆಚ್ಚು ಒಬ್ಬರಿಗೊಬ್ಬರು ನಾವು
ಎಷ್ಟಂತ
ಹೇಳಲಿ ಅಣ್ಣ ನಿನಗೆ, ಚಾಪೆ ಹಾಕು ನೆಲದ ಮೇಲೆ
ಅಣ್ಣನಿಗೆ
ಮದುವೆಯಂತೆ, ಸಂತೆಯಲ್ಲಿ ಕೇಳ್ಪಟ್ಟೆ ನಾನು
ಮುಂಡವಲ್ಯ
ಕೊಂಡು ಸೀರೆಯ ಸೆರಗಿನಂಚಿನಲ್ಲಿ ಕಟ್ಟಿಕೊಂಡೆ ನಾನು
ಅಣ್ಣನ
ಮದುವೆಯೆಂದು ತಿಳಿಯಿತು ಅತ್ತೆಯ ಮನೆಯಲ್ಲಿದ್ದವಳಿಗೆ
ಮುತ್ತು
ಪೋಣಿಸುತ್ತಿದ್ದೇನೆ ಮುಂದವಲ್ಯಕ್ಕೆ ಅಣ್ಣನಿಗೆಂದು ಚಾವಡಿಯಲ್ಲಿ ಕುಳಿತು
ಮುತ್ತಿನ ಮುಂಡವಲ್ಯ, ಸುತ್ತಿ ಇಟ್ಟಿರುವೆ ಹತ್ತಿ ಬಟ್ಟೆಯಲಿ
ನನ್ನ ಪುಟ್ಟ ತಮ್ಮ ಮದುಮಗನಾಗುತಾನೆ ಬರುವ ವೈಶಾಖದಲ್ಲಿ
ಜೋಳ
ಬೀಸಿ ಮುಗಿಯಿತು, ಇದರಲ್ಲೇ ನೆಮ್ಮದಿ ಸಿಗುವುದು ನನಗೆ
ನನ್ನ
ಅಣ್ಣ-ತಮ್ಮಂದಿರ ಸಂಪತ್ತನ್ನ ಆಳುತ್ತಾರೆ ಅತ್ತಿಗೆ-ನಾದಿನಿಯರು
ಜೋಳ
ಬೀಸಿ ಮುಗಿಯಿತು, ವೀಳ್ಯದೆಲೆ ಪೆಟ್ಟಿಗೆಯಿದೆ ಮೊರದಲ್ಲಿ
ಹೇಳತೇನೆ
ಕೇಳು ಗೆಳತಿ, ಒಂಬತ್ತು ಲಕ್ಷದ ಸರದಾರ ನನ ಗಂಡ
![](/media/images/03-695-NW__GSP-Brother_drives_a_swanky_jee.max-1400x1120.jpg)
ಫುಲಾಬಾಯಿ ಭೋಂಗ್
ಪ್ರದರ್ಶ ಕಿ / ಗಾಯಕಿ : ಫುಲಾಬಾಯಿ ಭೋಂಗ್, ಚಂದ್ರಭಾಗಾ ಭೋಂಗ್
ಗ್ರಾಮ : ನಿಮ್ ಗಾಂವ್ ಕೆಟ್ಕಿ
ಊರು : ಚಿಂಚವಾಡಿ
ತಾಲ್ಲೂಕು : ಇಂದಾಪುರ
ಜಿಲ್ಲೆ: ಪುಣೆ
ಜಾತಿ : ಫುಲ್ಮಾಲಿ (ತೋಟಗಾರ)
ಪ್ರದರ್ಶ ಕಿ / ಗಾಯಕಿ : ಭಾಗುಬಾಯಿ ಮೋಹಿತೆ
ಗ್ರಾಮ : ನಿಮ್ ಗಾಂವ್ ಕೆಟ್ಕಿ
ಊರು: ಭೋಂಗ್ ವಸ್ತಿ
ತಾಲೂಕು: ಇಂದಾಪುರ
ಜಿಲ್ಲೆ: ಪುಣೆ
ಜಾತಿ: ಮರಾಠ
ದಿನಾಂಕ : ಇಲ್ಲಿನ ಮಾಹಿತಿ, ಛಾಯಾಚಿತ್ರ ಮತ್ತು ಹಾಡುಗಳನ್ನು ಡಿಸೆಂಬರ್ 11, 1995ರಂದು ರೆಕಾರ್ಡ್ ಮಾಡಲಾಗಿದೆ.
ಪೋಸ್ಟರ್: ಊರ್ಜಾ
ಹೇಮಾ ರಾಯ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಬಗ್ಗೆ ಓದಿ .
ಅನುವಾದ: ಶಂಕರ ಎನ್. ಕೆಂಚನೂರು