ಯಾರನ್ನು ಬೇಕಿದ್ದರೂ ಕಾಯಿಸಬಹುದು, ಆದರೆ ಕಾಡಿನ ರಾಜನನ್ನು ಕಾಯಿಸುವಂತಿಲ್ಲ.
ಸಿಂಹಗಳು ಗುಜರಾತಿನಿಂದ ಬರಲಿದ್ದವು. ಮತ್ತು ಉಳಿದ ಎಲ್ಲರೂ ಸಿಂಹಗಳಿಗೆ ಅನುಕೂಲ ಮಾಡಿಕೊಡಬೇಕಿತ್ತು. ಅವುಗಳ ಬರವಿಗೆ ತೊಂದರೆಯಾಗದಂತೆ.
ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕಿನ ಒಳಗಿನ ಹಳ್ಳಿಗಳ ಕತೆಯೇನು ಎನ್ನುವ ಪ್ರಶ್ನೆಯ ನಡುವೆಯೂ, ಇದೆಲ್ಲವೂ ಒಳ್ಳೆಯ ಉದ್ದೇಶದಂತೆಯೇ ಕಾಣುತ್ತಿತ್ತು.
“ಸಿಂಹಗಳು ಬಂದ ನಂತರ ಈ ಪ್ರದೇಶವು ಹೆಸರುವಾಸಿಯಾಗುತ್ತದೆ. ನಾವು ಗೈಡ್‌ಗಳಾಗಿ ಉದ್ಯೋಗ ಪಡೆಯಲಿದ್ದೇವೆ. ಅಂಗಡಿ, ಹೋಟೆಲ್ಲುಗಳನ್ನು ಕೂಡಾ ನಡೆಸಬಹುದು. ಈ ಮೂಲಕ ನಮ್ಮ ಕುಟುಂಬಗಳು ಅಭಿವೃದ್ಧಿ ಹೊಂದಲಿವೆ.” ಇದು ಈಗ 70ರ ಪ್ರಾಯದವರಾಗಿರುವ ರಘುಲಾಲ್ ಜಾಟವ್ ಅವರ ಮಾತು. ಅವರು ಕುನೋ ನ್ಯಾಷನಲ್ ಪಾರ್ಕಿನ ಅಗರ ಎನ್ನುವ ಊರಿನಲ್ಲಿ ನಮ್ಮೊಡನೆ ಮಾತನಾಡುತ್ತಿದ್ದರು.
"ನಾವು ಉತ್ತಮ ಗುಣಮಟ್ಟದ ನೀರಾವರಿ ಭೂಮಿ, ಸರ್ವರುತು ರಸ್ತೆಗಳು, ಇಡೀ ಗ್ರಾಮಕ್ಕೆ ವಿದ್ಯುತ್ ಮತ್ತು ಎಲ್ಲಾ ನಾಗರಿಕ ಸೌಲಭ್ಯಗಳನ್ನು ಪಡೆಯುತ್ತೇವೆ" ಎಂದು ರಘುಲಾಲ್ ಹೇಳುತ್ತಾರೆ.
"ಸರ್ಕಾರ್ (ಸರ್ಕಾರ) ನಮಗೆ ಈ ರೀತಿಯಾಗಿ ಭರವಸೆ ನೀಡಿತ್ತು" ಎಂದು ಅವರು ಹೇಳುತ್ತಾರೆ.
ಮತ್ತು ಈ ಹಿನ್ನೆಲೆಯಲ್ಲಿ, ಪೈರಾ ಮತ್ತು 24 ಹಳ್ಳಿಗಳ ಸುಮಾರು 1,600 ಕುಟುಂಬಗಳು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ತಮ್ಮ ಮನೆಗಳನ್ನು ಖಾಲಿ ಮಾಡಿದವು. ಅವರು ಮುಖ್ಯವಾಗಿ ಸಹರಿಯಾ ಆದಿವಾಸಿಗಳು ಮತ್ತು ದಲಿತರು ಮತ್ತು ಬಡ ಒಬಿಸಿ ಸಮುದಾಯಗಳಿಗೆ ಸೇರಿದವರು. ಅವರ ಸ್ಥಳಾಂತರದ ಪ್ರಯಾಣವು ಆತುರದಿಂದ ಕೂಡಿತ್ತು.
ಟ್ರಾಕ್ಟರುಗಳನ್ನು ತರಲಾಯಿತು, ಮತ್ತು ಅರಣ್ಯವಾಸಿಗಳು ತಾವು ವಾಸವಿದ್ದ ಮನೆಗಳನ್ನು ತರಾತುರಿಯಲ್ಲಿ ಬಿಟ್ಟುಹೋಗಲು ಅನೇಕ ತಲೆಮಾರುಗಳ ಆಸ್ತಿಪಾಸ್ತಿಗಳನ್ನು ಒಂದೆಡೆ ರಾಶಿ ಹಾಕಿದರು. ಪ್ರಾಥಮಿಕ ಶಾಲೆಗಳು, ಕೈಪಂಪುಗಳು, ಬಾವಿಗಳು ಮತ್ತು ತಲೆಮಾರುಗಳಿಂದ ಉಳುಮೆ ಮಾಡಿದ ಭೂಮಿಯನ್ನು ಸಹ ತೊರೆದರು. ದನಕರುಗಳನ್ನು ಸಹ ಬಿಟ್ಟುಹೋಗಬೇಕಾಯಿತು. ಏಕೆಂದರೆ ಕಾಡಿನ ಸಾಕಷ್ಟು ಮೇವಿನ ಸಂಪನ್ಮೂಲಗಳಿಲ್ಲದೆ ಅವು ಆಹಾರಕ್ಕೆ ಹೊರೆಯಾಗುತ್ತವೆ.
ಇದೆಲ್ಲ ಆಗಿ ಇಪ್ಪತ್ತಮೂರು ವರ್ಷಗಳು ಕಳೆದಿವೆ. ಅವರು ಈಗಲೂ ಸಿಂಹಗಳ ಬರವಿಗಾಗಿ ಕಾಯುತ್ತಿದ್ದಾರೆ.


















