ಮಳೆ, ನೀರಿನ ಅಭಾವಕ್ಕೆ ಕುಖ್ಯಾತವಾಗಿರುವ ಈ ಭಾಗದಲ್ಲಿ ‘ಸಿಹಿ ನೀರಿನ’ ಮಹತ್ವವನ್ನು ವಿವರಿಸುವ ಜಾನಪದ ಗೀತೆಯೊಂದು ಪ್ರಚಲಿತದಲ್ಲಿದೆ. ಹಾಡು ಕಚ್ (ಸಾಮಾನ್ಯವಾಗಿ ಕಛ್ಛ್ ಎಂದು ಕರೆಯಲಾಗುತ್ತದೆ) ಮತ್ತು ಪ್ರದೇಶದ ಜನರ ವಿಶಾಲವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಲ್ಲೇಖಿಸುತ್ತದೆ.‌

ಸುಮಾರು ಒಂದು ಸಾವಿರ ವರ್ಷಗಳ ಹಿಂದೆ, ಲಾಖೋ ಫುಲಾನಿ (ಜನನ: ಕ್ರಿ.ಶ. 920) ಕಚ್, ಸಿಂಧ್ ಮತ್ತು ಸೌರಾಷ್ಟ್ರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಮತ್ತು ಆಳುತ್ತಿದ್ದರು. ಪ್ರಜೆಗಳ ಬಗೆಗಿನ ಅವರ ಪ್ರೀತಿ ಮತ್ತು ಸೇವೆಯಿಂದಾಗಿ ಅವರು ಬಹಳಷ್ಟು ಗೌರವಿಸಲ್ಪಟ್ಟರು. ಅವರ ಉದಾರ ಆಡಳಿತ ನೀತಿಗಳನ್ನು ನೆನಪಿಸಿಕೊಳ್ಳುತ್ತಾ, ಜನರು ಈಗಲೂ ಹೇಳುತ್ತಾರೆ, “ಲಕ್ಖಾ ತೊ ಲಾಖೋ ಮಲಾಷೆ ಪಾನ್ ಫುಲಾನಿ ಇ ಫೆರ್ [ಲಾಖೊ ಎನ್ನುವ ಲೆಕ್ಕವಿಲ್ಲದಷ್ಟು ಹೆಸರಿನ ಜನರಿರುತ್ತಾರೆ, ಆದರೆ ನಮ್ಮ ಹೃದಯವನ್ನು ಆಳುವುದು ಲಾಖೊ ಫುಲಾನಿ ಮಾತ್ರ]”

ಈ ಜಾನಪದ ಗೀತೆಯಲ್ಲಿ ಅವರನ್ನು ವ್ಯಾಪಕವಾಗಿ ಉಲ್ಲೇಖಿಸಲಾಗಿದೆ, ಜೊತೆಗೆ ಈ ಗೀತೆಯು ಈ ಪ್ರದೇಶದ ಸಂಸ್ಕೃತಿಯ ಅಡಿಪಾಯದಲ್ಲಿರುವ ಧಾರ್ಮಿಕ ಸಹಿಷ್ಣುತೆ ಮತ್ತು ಸಾಮರಸ್ಯದ ವಿವರಣೆಯಾಗಿದೆ. ಕಚ್‌ನಲ್ಲಿರುವ ಹಾಜಿ ಪೀರ್‌ ದೇವಾಲಯ ಮತ್ತು ದೇಶದೇವಿಯಲ್ಲಿರುವ ಆಶಾಪುರದ ದೇವಾಲಯದಂತಹ ಅನೇಕ ಧಾರ್ಮಿಕ ಸ್ಥಳಗಳಿವೆ, ಇವುಗಳಿಗೆ ಹಿಂದೂಗಳು ಮತ್ತು ಮುಸ್ಲಿಮರು ಭೇಟಿ ನೀಡುತ್ತಾರೆ. ಈ ಜಾನಪದ ಗೀತೆಯು ಕರಕೋಟ್ ಗ್ರಾಮದಲ್ಲಿ ಫುಲಾನಿ ನಿರ್ಮಿಸಿದ ಕೋಟೆಯಂತಹ ಐತಿಹಾಸಿಕ ಉಲ್ಲೇಖಗಳನ್ನು ಸಹ ವ್ಯಕ್ತಪಡಿಸುತ್ತದೆ.

ಈ ಹಾಡು, ಸಂಗ್ರಹದಲ್ಲಿರುವ ಇತರ ಹಾಡುಗಳಂತೆ, ಪ್ರೀತಿ, ದುರಾಸೆ, ನಷ್ಟ, ಮದುವೆ, ಮಾತೃಭೂಮಿಯಿಂದ ಹಿಡಿದು ಲಿಂಗ ಜಾಗೃತಿ, ಪ್ರಜಾಪ್ರಭುತ್ವ ಹಕ್ಕುಗಳವರೆಗೆ ಪ್ರಮುಖ ವಿಷಯಗಳನ್ನು ಸ್ಪರ್ಶಿಸುತ್ತದೆ.

ಕಚ್ ಪ್ರದೇಶದ 341 ಹಾಡುಗಳನ್ನು ಒಳಗೊಂಡ ಕಚ್ಚಿ ಜಾನಪದ ಗೀತೆಗಳ ಮಲ್ಟಿಮೀಡಿಯಾ ಸಂಗ್ರಹವನ್ನು ಪರಿ ಪ್ರಕಟಿಸಲಿದೆ. ಈ ಲೇಖನದೊಂದಿಗೆ ಪ್ರಸ್ತುತಪಡಿಸಲಾದ ಆಡಿಯೊ ಫೈಲ್ ಸ್ಥಳೀಯ ಜಾನಪದ ಕಲಾವಿದರ ಹಾಡುಗಳ ಒಂದು ನೋಟವನ್ನು ಅವರ ಮೂಲ ಭಾಷೆಯಲ್ಲಿ ನೀಡುತ್ತದೆ. ಈ ಜಾನಪದ ಹಾಡುಗಳನ್ನು ಓದುಗರ ಅನುಕೂಲಕ್ಕಾಗಿ ಗುಜರಾತಿ ಲಿಪಿಯ ಜೊತೆಗೆ ಇಂಗ್ಲಿಷ್ ಮತ್ತು ಇತರ 14 ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುತ್ತದೆ. ಪರಿ ಪ್ರಸ್ತುತ 14 ಭಾಷೆಗಳಲ್ಲಿ ತನ್ನ ಎಲ್ಲಾ ವರದಿಗಳನ್ನು ಪ್ರಕಟಿಸುತ್ತದೆ.

ಕಚ್ ಸೂಕ್ಷ್ಮ ಪರಿಸರ ವ್ಯವಸ್ಥೆಯ 45,612 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿದೆ; ದಕ್ಷಿಣಕ್ಕೆ ಸಮುದ್ರ ಮತ್ತು ಉತ್ತರಕ್ಕೆ ಮರುಭೂಮಿ. ಭಾರತದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾದ ಇದು ಅರೆ-ಶುಷ್ಕ ವಲಯದಲ್ಲಿ ಬರುತ್ತದೆ, ಇದು ನೀರಿನ ಕೊರತೆ ಮತ್ತು ಬರಗಾಲದ ಸಮಸ್ಯೆಗಳೊಂದಿಗೆ ನಿಯಮಿತವಾಗಿ ಹೋರಾಡುತ್ತದೆ.

ವಿವಿಧ ಜಾತಿಗಳು, ಧರ್ಮಗಳು ಮತ್ತು ಸಮುದಾಯಗಳ ಜನರು ಕಚ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕಳೆದ ಒಂದು ಸಾವಿರ ವರ್ಷಗಳಲ್ಲಿ ಸ್ಥಳಾಂತರಗೊಂಡ ನಂತರ ಈ ಪ್ರದೇಶಕ್ಕೆ ಬಂದು ನೆಲೆಸಿದ ವಲಸಿಗರ ವಂಶಸ್ಥರು. ಈ ಜನರಲ್ಲಿ ಹಿಂದೂ, ಮುಸ್ಲಿಂ ಮತ್ತು ಜೈನ ಪಂಥಗಳು ಮತ್ತು ರಬರಿ, ಗಧ್ವಿ, ಜಾಟ್, ಮೇಘವಾಲ್, ಮುತ್ವಾ, ಸೋಧಾ ರಜಪೂತ್, ಕೋಲಿ, ಸಿಂಧಿ ಮತ್ತು ದರ್ಬಾರ್ ಉಪಗುಂಪುಗಳ ಸದಸ್ಯರು ಸೇರಿದ್ದಾರೆ. ಕಚ್‌ನ ಜಾನಪದ ಜೀವನದ ಶ್ರೀಮಂತ ಮತ್ತು ಬಹುತ್ವದ ಪರಂಪರೆಯು ಅವರ ವಿಶಿಷ್ಟ ವೇಷಭೂಷಣಗಳು ಮತ್ತು ಉಡುಗೆ, ಕಸೂತಿ-ನೇಯ್ಗೆ, ಸಂಗೀತ ಮತ್ತು ಇತರ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಸುಲಭವಾಗಿ ಗೋಚರಿಸುತ್ತದೆ. 1989ರಲ್ಲಿ ಸ್ಥಾಪಿಸಲಾದ ಕಚ್ ಮಹಿಳಾ ವಿಕಾಸ್ ಸಂಘಟನೆ (KMVS), ಈ ಸಮುದಾಯಗಳನ್ನು ಮತ್ತು ಪ್ರದೇಶದ ಸಾಂಪ್ರದಾಯಿಕ ಪರಂಪರೆಯನ್ನು ಸಂಘಟಿಸಲು ಮತ್ತು ಬೆಂಬಲಿಸುವಲ್ಲಿ ಸಕ್ರಿಯವಾಗಿದೆ.

ಪರಿ ಈ ಕಚ್ಚಿ ಜಾನಪದ ಗೀತೆಗಳ ಶ್ರೀಮಂತ ಸಂಗ್ರಹವನ್ನು ರಚಿಸುವಲ್ಲಿ KMVS ನೊಂದಿಗೆ ಪಾಲುದಾರಿಕೆ ಹೊಂದಿದೆ. ಇಲ್ಲಿ ಪ್ರಸ್ತುತಪಡಿಸಲಾದ ಜಾನಪದ ಗೀತೆಗಳನ್ನು ಸುರ್ವಾಣಿ ಎನ್ನುವ ಉಪಕ್ರಮದ ಭಾಗವಾಗಿ KMVS ರೆಕಾರ್ಡ್ ಮಾಡಿದೆ. ಸಂಸ್ಥೆಯು ತನ್ನದೇ ಆದ ಪೂರ್ಣ ಸಮಯದ ಮಾಧ್ಯಮ ಕೋಶವನ್ನು ಅಭಿವೃದ್ಧಿಪಡಿಸಿದೆ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಬದಲಾವಣೆಯ ಸಾಧನಗಳೊಂದಿಗೆ ಮಹಿಳೆಯರನ್ನು ಸಜ್ಜುಗೊಳಿಸುವ ಉದ್ದೇಶದಿಂದ ತಳಮಟ್ಟದಿಂದ ಪ್ರಾರಂಭಿಸಿ. ಅವರು ಸುರ್ವಾಣಿಯನ್ನು ಸಮುದಾಯ-ಚಾಲಿತ ಮತ್ತು ನಿಯಮಿತವಾಗಿ ಪ್ರಸಾರ ಮಾಡುವ ಮಾಧ್ಯಮವಾಗಿ ಪ್ರಾರಂಭಿಸಿದ್ದಾರೆ ಮತ್ತು ಕಚ್‌ನ ಶ್ರೀಮಂತ ಸಂಪ್ರದಾಯದ ಸಂಗೀತವನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದ್ದಾರೆ. ಸುಮಾರು 305 ಸಂಗೀತಗಾರರ ಹವ್ಯಾಸಿ ಗುಂಪು 38 ವಿಭಿನ್ನ ವಾದ್ಯಗಳು ಮತ್ತು ಸಂಗೀತ ಸ್ವರೂಪಗಳ ಮೂಲಕ ಈ ಸಂಗ್ರಹಕ್ಕೆ ಕೊಡುಗೆ ನೀಡಿದೆ. ಕಚ್‌ನ ಜಾನಪದ ಸಂಗೀತ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ, ಜನಪ್ರಿಯಗೊಳಿಸುವ ಮತ್ತು ಉತ್ತೇಜಿಸುವ ಜೊತೆಗೆ ಕಚ್ ಜಾನಪದ ಸಂಗೀತಗಾರರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸುರ್ವಾಣಿ ಮೂಲಕ ಪ್ರಮುಖ ಪ್ರಯತ್ನಗಳನ್ನು ಮಾಡಿದ್ದಾರೆ.

ಅಂಜರ್‌ನ ನಸೀಮ್ ಶೇಖ್ ಅವರ ಧ್ವನಿಯಲ್ಲಿ ಜಾನಪದ ಹಾಡನ್ನು ಆಲಿಸಿ

કરછી

મિઠો મિઠો પાંજે કચ્છડે જો પાણી રે, મિઠો મિઠો પાંજે કચ્છડે જો પાણી રે
મિઠો આય માડૂએ  જો માન, મિઠો મિઠો પાંજે કચ્છડે જો પાણી.
પાંજે તે કચ્છડે મેં હાજીપીર ઓલિયા, જેજા નીલા ફરકે નિસાન.
મિઠો મિઠો પાંજે કચ્છડે જો પાણી રે. મિઠો મિઠો પાંજે કચ્છડે જો પાણી રે
પાંજે તે કચ્છડે મેં મઢ ગામ વારી, ઉતે વસેતા આશાપુરા માડી.
મિઠો મિઠો પાંજે કચ્છડે જો પાણી. મિઠો મિઠો પાંજે કચ્છડે જો પાણી રે
પાંજે તે કચ્છડે મેં કેરો કોટ પાણી, ઉતે રાજ કરીએ લાખો ફુલાણી.
મિઠો મિઠો પાંજે કચ્છડે જો પાણી રે. મિઠો મિઠો પાંજે કચ્છડે જો પાણી રે


ಕನ್ನಡ

ಕಚ್‌ನ ಸಿಹಿ ನೀರು. ಓಹ್! ಕಚ್‌ನ ಸಿಹಿ ನೀರು
ಇಲ್ಲಿರುವವರು ಸುಂದರ ಜನರು, ಓಹ್! ಕಚ್‌ನ ಸಿಹಿ ನೀರಿನಂತೆ
ಹಾಜಿಪೀರ್ ದರ್ಗಾ ಇಲ್ಲಿದೆ, ಹಸಿರು ಧ್ವಜಗಳು ಹಾರುತ್ತಿವೆ
ಕಚ್‌ನ ನೀರು ಎಷ್ಟು ಸಿಹಿಯೆಂದರೆ! ಸವಿ ಜೇನಿನಂತೆ!
ಮಾ ಆಶಾಪುರ ದೇವಸ್ಥಾನವು ಮಾಧ್ ಗ್ರಾಮದಲ್ಲಿದೆ
ಕಚ್‌ನ ನೀರು ಎಷ್ಟು ಸಿಹಿಯೆಂದರೆ! ಸವಿ ಜೇನಿನಂತೆ!
ಕೇರಾದಲ್ಲಿದೆ ಕೋಟೆಯ ಅವಶೇಷ ಲಾಖೊ ಫುಲಾನಿಯ ಆಡಳಿತದ ಗುರುತಾಗಿ
ಕಚ್‌ನ ನೀರು ಎಷ್ಟು ಸಿಹಿಯೆಂದರೆ! ಸವಿ ಜೇನಿನಂತೆ!
ಇಲ್ಲಿರುವರು ಅನೇಕ ಸುಂದರ ಜನರು, ಜೇನುತುಪ್ಪದಂತಹ ಸಿಹಿ ನೀರು ಇಲ್ಲಿನದು
ಈ ನೀರಿನ ರುಚಿ ಜೇನುತುಪ್ಪದಂತಿದೆ.
ಕಚ್‌ನ ಸಿಹಿ ನೀರು. ಓಹ್! ಕಚ್‌ನ ಸಿಹಿ ನೀರು


PHOTO • Antara Raman

ಹಾಡಿನ ಪ್ರಕಾರ : ಜಾನಪದ ಗೀತೆ

ಕ್ಲಸ್ಟರ್ : ಭೂಮಿ, ಸ್ಥಳಗಳು ಮತ್ತು ಜನರ ಹಾಡುಗಳು

ಹಾಡು : 1

ಹಾಡಿನ ಶೀರ್ಷಿಕೆ : ಮಿಠೋ ಮಿಠೋ ಪಂಜೆ ಕಛ್‌ದೇ ಜೋ ಪಾನಿ ರೇ

ಲೇಖಕ : ನಸೀಮ್ ಶೇಖ್

ಸಂಗೀತ : ದೇವಲ್ ಮೆಹ್ತಾ

ಗಾಯನ : ಅಂಜಾರ್ ನ ನಸೀಮ್ ಶೇಖ್

ಬಳಸಿದ ವಾದ್ಯಗಳು : ಹಾರ್ಮೋನಿಯಂ, ಬಾಂಜೋ, ಡ್ರಮ್, ತಂಬೌರಿನ್

ರೆಕಾರ್ಡಿಂಗ್ ವರ್ಷ : 2008, ಕೆಎಂವಿಎಸ್ ಸ್ಟುಡಿಯೋ

ಗುಜರಾತಿ ಅನುವಾದ : ಅಮದ್ ಸಮೇಜಾ, ಭಾರತಿ ಗೋರ್


ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ ಮತ್ತು ಕೆಎಂವಿಎಸ್ ಪ್ರಾಜೆಕ್ಟ್ ಸಂಯೋಜಕ ಅಮದ್ ಸಮೇಜಾ ಅವರಿಗೆ ಸಹಕಾರಕ್ಕಾಗಿ ವಿಶೇಷ ಧನ್ಯವಾದಗಳು.

ಅನುವಾದ: ಶಂಕರ. ಎನ್. ಕೆಂಚನೂರು

Editor : Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Illustration : Antara Raman

Antara Raman is an illustrator and website designer with an interest in social processes and mythological imagery. A graduate of the Srishti Institute of Art, Design and Technology, Bengaluru, she believes that the world of storytelling and illustration are symbiotic.

Other stories by Antara Raman
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru