ಡಿ. ಅಮರನಾಥ ರೆಡ್ಡಿಯವರು ತಾವು ಹಾಕಿಸಿದ್ದ ಮೂರನೇ ಕೊಳವೆ ಬಾವಿಯೂ ಬತ್ತಿದ ನಂತರ ಬೆಳೆಗಳಿಗೆ ನೀರುಣಿಸಲು ಮಳೆಯನ್ನೇ ಆಶ್ರಯಿಸಬೇಕಾಯಿತು. ಆದರೆ ಚಿತ್ತೂರು ಜಿಲ್ಲೆಯ ಮುಡಿವೇಡು ಗ್ರಾಮದ ಈ 51 ವರ್ಷದ ರೈತ ಟೊಮೆಟೊ ಬೆಳೆಯುವ ಹೊಲವಿರುವ ರಾಯಲಸೀಮದಲ್ಲಿ ಮಳೆಯೆನ್ನುವುದು ಬಹಳ ಅನಿಶ್ಚಿತವಾಗಿರುತ್ತದೆ. ಈ ಕಾರಣಕ್ಕಾಗಿಯೇ ಅಮರನಾಥ 5 ಲಕ್ಷ ರೂಪಾಯಿಗಳನ್ನು ಬೋರ್‌ ಕೊರೆಸುವುದಕ್ಕೆಂದು ವ್ಯಯಿಸಿದ್ದರು. ಈ ಹಣಕ್ಕಾಗಿ ಅವರು ಖಾಸಗಿ ಲೇವಾದೇವಿದಾರರನ್ನು ಆಶ್ರಯಿಸಿದ್ದರು. ಮೊದಲನೇ ಬೋರ್‌ ವಿಫಲಗೊಂಡಾಗ, ಎರಡನೆಯದನ್ನು ಕೊರೆಸಿದರು. ಅದೂ ವಿಫಲಗೊಂಡು ಮೂರನೇ ಬೋರ್‌ ಕೊರೆಸುವ ಹೊತ್ತಿಗೆ ಅವರು ಸಾಲದ ಕೂಪದಲ್ಲಿದ್ದರು ಮತ್ತು ನೀರೆನ್ನುವುದು ಅವರ ಪಾಲಿಗೆ ದೂರವಾಗಿಯೇ ಉಳಿಯಿತು.

ಅಮರನಾಥ ಅವರು 2020ರ ಎಪ್ರಿಲ್-ಮೇ ತಿಂಗಳಿನಲ್ಲಿ ಬೆಳೆ ಕೈಗೆ ಬರುವುದನ್ನೇ ಕಾತರದಿಂದ ಕಾಯುತ್ತಿದ್ದರು. ಈ ಮೂಲಕ ಅವರು ತನ್ನ ಮೇಲಿರುವ ಸಾಲದ ಹೊರೆಯನ್ನು ಒಂದಿಷ್ಟು ಕಡಿಮೆ ಮಾಡಿಕಕೊಳ್ಳುವ ಆಲೋಚನೆಯಲ್ಲಿದ್ದರು. ಬೋರ್‌ ಹಾಕಿಸಲು ಮಾಡಿದ್ದ ಸಾಲ, ಹಿರಿಯ ಮಗಳ ಮದುವೆಗೆಂದು ಮಾಡಿದ್ದ ಸಾಲ ಮತ್ತು ಬೆಳೆ ಸಾಲ ಸೇರಿ ರೂ. 10 ಲಕ್ಷಗಳಷ್ಟು ಸಾಲದಲ್ಲಿದ್ದರು. ಆದರೆ ಕಳೆದ ವರ್ಷದ ಮಾರ್ಚ್‌ 24ರಂದು ಪ್ರಧಾನಮಂತ್ರಿ ಅಚಾನಕ್‌ ಘೋಷಿಸಿದ ಲಾಕ್‌ಡೌನ್‌ ಅವರ ಕನಸಿಗೆ ಮಣ್ಣು ಸುರಿಯಿತು. ಅವರು ತಾವು ಬೆಳೆದ ಟೊಮೆಟೊ ಹೊಲದಲ್ಲೇ ಹಣ್ಣಾಗಿ ಕೊಳೆಯುವುದನ್ನು ಅಸಹಾಯಕರಾಗಿ ನೋಡುತ್ತಾ ನಿಲ್ಲಬೇಕಾಯಿತು.

"ಈ ಕೊರೋನಾ ಸಮಯದಲ್ಲಿ ಪರಿಸ್ಥಿತಿಗಳು ಸುಧಾರಿಸಲಿಕ್ಕಿಲ್ಲ ಎಂದು ಅವರಿಗೆ ಎನ್ನಿಸಿರಬಹುದು ಹಾಗೂ ಇದರಿಂದಾಗಿ ಬದುಕಿನ ಕುರಿತು ಭರವಸೆ ಕಳೆದುಕೊಂಡಿರಬಹುದು" ಎಂದು ಹೇಳುತ್ತಾ ಮರನಾಥ ಅವರ ಪತ್ನಿ ಡಿ. ವಿಮಲಾ ತನ್ನ ಪತಿ ಸೆಪ್ಟೆಂಬರ್ 17, 2020ರಂದು ವಿಷವನ್ನು ಏಕೆ ಸೇವಿಸಿದರೆನ್ನುವುದನ್ನು ವಿವರಿಸಲು ಪ್ರಯತ್ನಿಸುತ್ತಿದ್ದರು. "ಅವರು ಇದಕ್ಕೂ 10 ದಿನಗಳ ಮೊದಲು ಕೂಡಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ನಾವು ಅವರನ್ನು ಉಳಿಸಿಕೊಳ್ಳಲಿ ಉಳಿಸಲು ಬೆಂಗಳೂರಿನ ದೊಡ್ಡ ಆಸ್ಪತ್ರೆಗೆ [180 ಕಿಲೋಮೀಟರ್ ದೂರ] ಕರೆದುಕೊಂಡು ಹೋದೆವು. ಆಗ 1 ಲಕ್ಷ ರೂಪಾಯಿ ಖರ್ಚಾಗಿತ್ತು." ಎಂದು ಅಮರನಾಥ ಅವರ ಬಳಿ ಇನ್ನು ಮುಂದೆ ಹೀಗೆ ಮಾಡದಂತೆ ಮನವಿ ಮಾಡಿದ್ದ ವಿಮಲಾ ಹೇಳುತ್ತಾರೆ.

ಚಿತ್ತೂರಿನಲ್ಲಿ ವರದಿಯಾಗಿರುವ ರೈತರ ಆತ್ಮಹತ್ಯೆಗಳಿಗೆ ಬೋರ್‌ವೆಲ್‌ ವೈಫಲ್ಯವು ಪ್ರಮುಖ ಕಾರಣವೆಂದು ಇಲ್ಲಿನ ಪೋಲಿಸ್‌ ವರದಿಗಳು ಹೇಳುತ್ತವೆ. ಉಳಿದ ಕಾರಣಗಳೆಂದರೆ ಟೊಮೆಟೊ ಬೆಳೆ ವೈಫಲ್ಯ ಮತ್ತು ಕೃಷಿ ಸಾಲ. ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಬಂದ ಆದೇಶವು ಹೆಚ್ಚಿನ ಕಾರಣಗಳನ್ನು ಒದಗಿಸುತ್ತದೆ: "ಕೊಳವೆಬಾವಿಗಳ ವೈಫಲ್ಯ, ಹೆಚ್ಚಿನ ಕೃಷಿ ವೆಚ್ಚದೊಂದಿಗೆ ವಾಣಿಜ್ಯ ಬೆಳೆಗಳನ್ನು ಹೆಚ್ಚಿಸುವುದು, ಲಾಭದಾಯಕವಲ್ಲದ ಬೆಲೆಗಳು, ಮೌಖಿಕ ಬೋಗ್ಯ ಮತ್ತು ಬ್ಯಾಂಕ್ ಸಾಲಗಳನ್ನು ಪಡೆಯಲು ಅನರ್ಹತೆ, ಹೆಚ್ಚಿನ ಬಡ್ಡಿ ದರಗಳೊಂದಿಗೆ ಖಾಸಗಿ ಸಾಲ, ಪ್ರತಿಕೂಲ ಋತುಮಾನದ ಪರಿಸ್ಥಿತಿಗಳು, ಮಕ್ಕಳ ಶಿಕ್ಷಣ, ಅನಾರೋಗ್ಯ ಮತ್ತು ಮದುವೆಗಳಿಗೆ ಭಾರಿ ವೆಚ್ಚ ಮುಂತಾದ ಹಲವು ಸಂಗತಿಗಳು ಆತ್ಮಹತ್ಯೆಗೆ ಕಾರಣವಾಗುತ್ತಿವೆ."

ಅನೇಕರ ಪಾಲಿಗೆ ಇದ್ದಕ್ಕಿದ್ದಂತೆ ಘೋಷಿಸಲ್ಪಟ್ಟ ಲಾಕ್‌ಡೌನ್‌ ಸಾವಿನ ಕುಣಿಕೆಯಾಗಿ ಮಾರ್ಪಟ್ಟಿತು. 2020ರಲ್ಲಿ ಮಾತ್ರವೇ ಚಿತ್ತೂರು ಜಿಲ್ಲೆಯ 34 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು 2014ರ ನಂತರ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಅವರಲ್ಲಿ 27 ಮಂದಿ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ ನಿಧನರಾದರು.

Vimala's husband, D. Amarnath Reddy, could not harvest his tomato crop because of the Covid-19 lockdown
PHOTO • Courtesy: D. Vimala

ಚಿತ್ತೂರು, ಮುಡಿವೇಡುವಿನಲ್ಲಿ ಡಿ.ವಿಮಲಾ (ಬಲ) ಮತ್ತು ಅವರ ತಂದೆ ಬಿ.ವೆಂಕಟರೆಡ್ಡಿ. ಕೋವಿಡ್-19 ಲಾಕ್ ಡೌನ್‌ನಿಂದಾಗಿ ವಿಮಲಾ ಅವರ ಪತಿ ಡಿ. ಅಮರನಾಥ ರೆಡ್ಡಿಯವರಿಗೆ ತಮ್ಮ ಟೊಮೆಟೊ ಬೆಳೆಯನ್ನು ಕೊಯ್ಲು ಮಾಡಲು ಸಾಧ್ಯವಾಗಲಿಲ್ಲ

ಕೊರೋನಾ ಮಹಾಮಾರಿ ಬರುವ ಮೊದಲೂ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ.  2019ರಲ್ಲಿ ಆಂಧ್ರ ಪ್ರದೇಶದ ರೈತ ಕುಟುಂಬವೊಂದರ ಸರಾಸರಿ ಸಾಲ 2.45 ಲಕ್ಷ ರೂಪಾಯಿಗಳಷ್ಟಿತ್ತು. ಅದು ದೇಶದಲ್ಲೇ ಗರಿಷ್ಟ ಮೊತ್ತವಾಗಿತ್ತು. ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣ ಭಾರತದ ಕೃಷಿ ಕುಟುಂಬಗಳ ಭೂಮಿ ಮತ್ತು ಜಾನುವಾರು ಹಿಡುವಳಿಗಳ ಪರಿಸ್ಥಿತಿ ಮೌಲ್ಯಮಾಪನ, 2019ರ ಪ್ರಕಾರ ಆ ವರ್ಷ ರಾಜ್ಯದ ಶೇಕಡಾ 93ರಷ್ಟು ಕೃಷಿ ಕುಟುಂಬಗಳು ಸಾಲದಲ್ಲಿದ್ದವು.

ಅಮರನಾಥ ಮತ್ತು ವಿಮಲಾ ಅವರ ಮನೆಯ ಪಕ್ಕದ ಬೀದಿಯಲ್ಲಿ, 27 ವರ್ಷದ ಪಿ. ಮಂಜುಳ ಅವರು ತಮ್ಮ ದಿವಂಗತ ಪತಿಯ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಸಂಕಟದ ಯಾವುದೇ ಲಕ್ಷಣಗಳನ್ನು ತೋರಿಸಿರಲಿಲ್ಲ ಎಂದು  ಹೇಳುತ್ತಾರವರು. ಅವರು ಮದುವೆಯಾದ ಎಂಟು ವರ್ಷಗಳಲ್ಲಿ, ಪತಿ ಆಗಾಗ ತಮ್ಮ 10 ಎಕರೆ ಕೃಷಿಭೂಮಿಯಲ್ಲಿ ಕೃಷಿ ಮಾಡುವ ತಮ್ಮ ಯೋಜನೆಯ ಕುರಿತು ಚರ್ಚಿಸುತ್ತಿದ್ದರು. "ಆದರೆ ಅವರು ತಮ್ಮ ಆರ್ಥಿಕ ತೊಂದರೆಗಳ ಕುರಿತು ಎಂದೂ ಚರ್ಚಿಸಿರಲಿಲ್ಲ. [8.35 ಲಕ್ಷ ರೂಪಾಯಿ] ಸಾಲ ನನಗೆ ಆಶ್ಚರ್ಯವನ್ನುಂಟು ಮಾಡಿತು." ಮಂಜುಳಾರ ಪತಿ 33 ವರ್ಷದ ಪಿ. ಮಧುಸೂಧನ್ ರೆಡ್ಡಿ ಜುಲೈ 26, 2020ರಂದು ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದರು.

ಮಧುಸೂದನ ಅವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಬೆಳೆದ ಟೊಮೆಟೊವನ್ನು ಕೊಯ್ಲು ಮಾಡಲು ಸಾಧ್ಯವಾಗಿರಲಿಲ್ಲ. ಅವರ ಸಾಲದ ಬಹುದೊಡ್ಡ ಭಾಗ ಅವರ ಹೊಲದಲ್ಲಿ ಬೋರ್‌ ತೋಡುವುದಕ್ಕೆ ಖರ್ಚು ಮಾಡಿದ್ದಾಗಿತ್ತು ಎಂದು ಅವರ ತಂದೆ ಜಯರಾಮಿ ರೆಡ್ಡಿ ಹೇಳುತ್ತಾರೆ. ಎಂಟು ವರ್ಷಗಳ ಅವಧಿಯಲ್ಲಿ 700-800 ಅಡಿಗಳ ತನಕ ಬೋರ್‌ ಕೊರೆಸಲಾಗಿದ್ದು ಅದರ ಸಾಲದ ಮೇಲಿನ ವಿಪರೀತ ಬೆಳೆದು ನಿಂತಿತ್ತು.

ಆ ಸಾಲದ ಒಂದಿಷ್ಟು ಮೊತ್ತವನ್ನು ತೀರಿಸುವ ಸಲುವಾಗಿ ಮಧುಸೂದನ ಅವರ ಕುಟುಂಬವು ಎರಡು ಎಕರೆ ಭೂಮಿಯನ್ನು ಮಾರಿದ್ದಾರೆ. ಪ್ರಸ್ತುತ ಕುಟುಂಬವು ಅಲ್ಲಿನ ಏಳು ಕುಟುಂಬಗಳು ಸೇರಿ ಬಳಸುವ ಬೋರ್‌ ನೀರನ್ನು ಅವಲಂಬಿಸಿ ಅರ್ಧ ಎಕರೆ ಜಾಗದಲ್ಲಿ ಭತ್ತವನ್ನು ಬೆಳೆಯುತ್ತಿದ್ದಾರೆ. “ನೆಲಗಡಲೆ ಹಾಕಿದ್ದೆವು ಆದರೆ ಈ ವರ್ಷದ [2021] ವಿಪರೀತ ಮಳೆಯಿಂದಾಗಿ ಇಳುವರಿ ಸಿಗಲಿಲ್ಲ. ಅದಕ್ಕಾಗಿ ಹಾಕಿದ ಹಣವೂ ಮರಳಿ ಬರುವುದಿಲ್ಲ. ಉಳಿದ ಭೂಮಿ ಬಂಜರು ಬಿದ್ದಿದೆ.” ಎನ್ನುತ್ತಾರೆ ಜಯರಾಮಿ ರೆಡ್ಡಿ.

2019ರಿಂದ ಹೆಚ್ಚುವರಿ ಮಳೆಸುರಿಯುತ್ತಿರುವುದರಿಂದ ಜಿಲ್ಲೆಯ ರೈತರು ಟೊಮೆಟೊ ಬದಲು ಭತ್ತವನ್ನು ಬೆಳೆಯುತ್ತಿದ್ದಾರೆ ಎನ್ನುತ್ತಾರೆ ಚಿತ್ತೂರು ತೋಟಗಾರಿಕೆ ಉಪನಿರ್ದೇಶಕ ಬಿ. ಶ್ರೀನಿವಾಸುಲು. ಆದಾಗ್ಯೂ, 2009-10 ಮತ್ತು 2018-19ರ ನಡುವಿನ ದಶಕದಲ್ಲಿ ಏಳು ವರ್ಷಗಳ ಕಾಲ, ಜಿಲ್ಲೆಯ ಕೆಲವು ಭಾಗಗಳು - ಮುಡಿವೇಡು ಇರುವ ಕುರಬಾಲಕೋಟ ಮಂಡಲದಂತೆ - ಬರಪೀಡಿತ ಎಂದು ಘೋಷಿಸಲಾಗಿತ್ತು ಎಂದು ಮಂಡಲದ ಸಹಾಯಕ ಅಂಕಿಅಂಶ ಅಧಿಕಾರಿ ಎನ್. ರಾಘವ ರೆಡ್ಡಿ ಹೇಳುತ್ತಾರೆ.

P. Manjula and her late husband P. Madhusudhan Reddy's parents, P. Jayarami Reddy and P. Padmavatamma.
PHOTO • G. Ram Mohan
M. Eswaramma and Pooja in Deganipalli
PHOTO • Courtesy: M. Eswaramma

ಎಡಕ್ಕೆ: ಪಿ.ಮಂಜುಳ ಮತ್ತು ಅವರ ದಿವಂಗತ ಪತಿ ಪಿ. ಮಧುಸೂಧನ ರೆಡ್ಡಿಯವರ ಪೋಷಕರು, ಪಿ. ಜಯರಾಮಿ ರೆಡ್ಡಿ ಮತ್ತು ಪಿ. ಪದ್ಮಾವತಮ್ಮ. ಬಲಕ್ಕೆ: ದೇಗಿನಪಲ್ಲಿಯ ಎಂ. ಈಶ್ವರಮ್ಮ ಮತ್ತು ಪೂಜಾ

2019ರಿಂದ ಚಿತ್ತೂರಿನಲ್ಲಿ ಆತ್ಮಹತ್ಯೆಯಿಂದ ಸಾಯುವ ರೈತರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ ಸಂಗ್ರಹಿಸಿದ ದತ್ತಾಂಶದ ಪ್ರಕಾರ, 2018ರಲ್ಲಿ 7ರಷ್ಟಿದ್ದ ಸಂಖ್ಯೆ 2019ರಲ್ಲಿ 27ಕ್ಕೆ ಏರಿದೆ. 2020ರಲ್ಲಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿಆರ್ ಬಿ) ಪ್ರಕಾರ140 ಗೇಣಿ ರೈತರು ಸೇರಿದಂತೆ 564 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರಲ್ಲಿ 34 ರೈತರು ಚಿತ್ತೂರು ಮೂಲದವರು. ಇದರೊಂದಿಗೆ ಆಂಧ್ರವು ರೈತರ ಆತ್ಮಹತ್ಯೆಯ ವಿಷಯದಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ.

ಅಂತಹ ರೈತರಲ್ಲಿ ದಲಿತ ಒಕ್ಕಲು ರೈತ ಎಂ.ಚಿನ್ನ ರೆಡ್ಡಪ್ಪ ಕೂಡಾ ಒಬ್ಬರು. ಅವರು ಪೆದ್ದ ತಿಪ್ಪಸಮುದ್ರಂ ಮಂಡಲದ ಸಂಪತ್ತಿಕೋಟ ಎಂಬ ತಮ್ಮ ಗ್ರಾಮದಲ್ಲಿರುವ 1.5 ಎಕರೆ ಗುತ್ತಿಗೆ ಜಮೀನಿನಲ್ಲಿ ಟೊಮೇಟೊ ಬೆಳೆದಿದ್ದು, ಆರು ತಿಂಗಳಿಗೆ ರೂ. 20,000 ಬಾಡಿಗೆ ಒಪ್ಪಂದ ಮಾಡಿಕೊಂಢಿದ್ದರು. ಕೋವಿಡ್-19 ಲಾಕ್‌ಡೌನ್, ಬೆಳೆದ ಫಸಲನ್ನು ಮಾರಾಟ ಮಾಡಲು ಅವಕಾಶ ನೀಡಲಿಲ್ಲವೆಂದು ಅವರ ಪತ್ನಿ ಎಂ. ಈಶ್ವರಮ್ಮ ಹೇಳುತ್ತಾರೆ. "ಗದ್ದೆಯಲ್ಲಿ ಬೆಳೆ ಒಣಗಿಹೋದ ನಂತರ ನಾವು ಮೂರು ಲಕ್ಷ ರೂಪಾಯಿ ಸಾಲವಷ್ಟೇ ನಮ್ಮ ಪಾಲಿಗೆ ಉಳಿದಿತ್ತು." ಆದಾಯ ನಷ್ಟವನ್ನು ಭರಿಸಲು ದಂಪತಿಯ ಬಳಿ ಆಸ್ತಿ ಅಥವಾ ಉಳಿತಾಯ ಇರಲಿಲ್ಲ. ಡಿಸೆಂಬರ್ 30ರಂದು 45 ವರ್ಷದ ಚಿನ್ನ ರೆಡ್ಡಪ್ಪ ತನ್ನ ಬದುಕನ್ನು ಕೊನೆಗೊಳಿಸಿದರು.

ಈಶ್ವರಮ್ಮ ಮತ್ತು ಅವರ ಮಗಳು, 5ನೇ ತರಗತಿಯ ವಿದ್ಯಾರ್ಥಿ ಪೂಜಾ, ಬಿ. ಕೋತಕೋಟಾ ಮಂಡಲದ ದೇಗನಿಪಲ್ಲಿಯಲ್ಲಿರುವ ತನ್ನ ಹೆತ್ತವರ ಮನೆಗೆ ಸ್ಥಳಾಂತರಗೊಂಡರು. "ಈಗ ನಾನು ದಿನಕ್ಕೆ  200 ರೂಪಾಯಿಗಳ ಕೂಲಿಗೆ ಹೊಲಗಳಲ್ಲಿ ಕೆಲಸ ಮಾಡುವ ಮೂಲಕ ಬದುಕು ನಡೆಸುತ್ತಿದ್ದೇನೆ, ಮತ್ತು ಸಾಲವನ್ನು ಮರುಪಾವತಿಸಲು ಯಾವುದೇ ದಾರಿ ಕಾಣುತ್ತಿಲ್ಲ" ಎಂದು ಈಶ್ವರಮ್ಮ ಹೇಳುತ್ತಾರೆ, "ನನ್ನ ಪರಿಸ್ಥಿತಿಯ ಅರಿವಿದ್ದೂ ಸಾಲ ನೀಡಿದವರು ಪದೇಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ."

2014 ಮತ್ತು 2018ರ ನಡುವೆ ಆಂಧ್ರಪ್ರದೇಶದಲ್ಲಿ 1,513 ರೈತರು ಆತ್ಮಹತ್ಯೆ ಯಿಂದ ಸತ್ತಿದ್ದಾರೆ ಎನ್ನುವ ವಿಷಯವನ್ನು ರೈತ ಸ್ವರಾಜ್ಯಾ ವೇದಿಕಾ (ಆರ್ ಎಸ್ ವಿ) ಫೆಬ್ರವರಿ 2019ರಲ್ಲಿ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿ ಬೆಳಕಿಗೆ ತಂದಿದೆ. ಆದರೆ ರಾಜ್ಯ ಸರ್ಕಾರದ ಪರಿಹಾರ ಧನವನ್ನು ಕೇವಲ 391 ಕುಟುಂಬಗಳು ಮಾತ್ರ ಪಡೆದಿದ್ದವು. ಇದು ಮಾಧ್ಯಮಗಳಲ್ಲಿ ವರದಿಯಾದ ನಂತರ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತು. "ಇನ್ನೂ 640 ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲು ಸರ್ಕಾರ ಒಪ್ಪಿಕೊಂಡಿದೆ, ಮತ್ತು ಉಳಿದ 482 ರೈತರ ಕುಟುಂಬಗಳಿಗೆ ಏನನ್ನೂ ನೀಡಿಲ್ಲ" ಎಂದು ಪರಿಹಾರ ನಿರಾಕರಿಸಲಾದ ಕುಟುಂಬಗಳಿಗೆ ಸಹಾಯ ಮಾಡುತ್ತಿರುವ ರೈತ ಸಂಘಟನೆಯಾದ ಆರ್‌ಎಸ್‌ವಿಯ ಕಾರ್ಯದರ್ಶಿ ಬಿ. ಕೊಂಡಲ್ ರೆಡ್ಡಿ ಹೇಳುತ್ತಾರೆ. ರಾಜ್ಯ ಸರ್ಕಾರವು ಅಕ್ಟೋಬರ್ 2019ರಲ್ಲಿ, ಮೃತ ರೈತರ ಕುಟುಂಬಗಳಿಗೆ ಪರಿಹಾರವನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸುವುದಾಗಿ ಘೋಷಿಸಿತು. ಆದರೆ ವಿಮಲಾ, ಮಂಜುಳ ಅಥವಾ ಈಶ್ವರಮ್ಮ ಇಬ್ಬರಿಗೂ ಇದುವರೆಗೂ ಯಾವುದೇ ಮೊತ್ತ ಬಂದಿಲ್ಲ.

2019-20ರಲ್ಲಿ, ಆಂಧ್ರಪ್ರದೇಶವು ದೇಶದ ಎರಡನೇ ಅತಿದೊಡ್ಡ ಟೊಮೆಟೊ ಉತ್ಪಾದನೆಯ ರಾಜ್ಯವಾಗಿದ್ದು, ಚಿತ್ತೂರು ಜಿಲ್ಲೆಯು ರಾಜ್ಯದ ಟೊಮೆಟೊ ಉತ್ಪಾದನೆಗೆ ಶೇಕಡಾ 37ರಷ್ಟು ಕೊಡುಗೆಯನ್ನು ನೀಡಿದೆ. ಇಲ್ಲಿ ವರ್ಷವಿಡೀ ಹೈಬ್ರಿಡ್ ಮತ್ತು ಸ್ಥಳೀಯ ಟೊಮೆಟೊ ಬೆಳೆಗಳನ್ನು ಬೆಳೆಯಲಾಗುತ್ತದೆ. ಚಿತ್ತೂರು, ಮತ್ತು ರಾಯಲಸೀಮಾದ ಇತರ ಜಿಲ್ಲೆಗಳು (ವೈಎಸ್‌ಆರ್ ಕಡಪ, ಅನಂತಪುರ, ಕರ್ನೂಲ್) ಮತ್ತು ನೆರೆಯ ಕರ್ನಾಟಕದ ಅನೇಕ ಟೊಮೆಟೊ ಬೆಳೆಗಾರ ರೈತರು ತಮ್ಮ ಬೆಳೆಗಳನ್ನು ದೇಶದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಚಿತ್ತೂರಿನ ಮದನಪಲ್ಲಿ ಟೊಮೆಟೊ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

S. Sreenivasulu from Anantapur (left) sells his produce at Madanapalle market yard in Chittoor. The market yard is one of the largest trading hubs for tomatoes
PHOTO • G. Ram Mohan
The market yard is one of the largest trading hubs for tomatoes
PHOTO • G. Ram Mohan

ಅನಂತಪುರದ (ಎಡ) ಎಸ್. ಶ್ರೀನಿವಾಸುಲು ತಮ್ಮ ಉತ್ಪನ್ನಗಳನ್ನು ಚಿತ್ತೂರಿನ ಮದನಪಲ್ಲಿ ಮಾರುಕಟ್ಟೆ ಅಂಗಳದಲ್ಲಿ ಮಾರಾಟ ಮಾಡುತ್ತಾರೆ. ಈ ಮಾರುಕಟ್ಟೆ ಅಂಗಳವು ಅತಿದೊಡ್ಡ ಟೊಮೆಟೊ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ

ಮದನಪಲ್ಲಿಯಲ್ಲಿ ಸಗಟು ಬೆಲೆಯನ್ನು ಹರಾಜಿನ ಮೂಲಕ ನಿರ್ಧರಿಸಲಾಗುತ್ತದೆ ಮತ್ತದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಹಿಂದಿನ ರಾತ್ರಿ ಮಳೆಯಾಗಿದ್ದರೆ, ಮರುದಿನ ಬೆಳಿಗ್ಗೆ ಬೆಲೆ ಇಳಿಯುತ್ತದೆ. ಯಾವ ದಿನದಲ್ಲಿ ಉತ್ತಮ ಬೆಲೆ ಇದ್ದು, ಮಾರುಕಟ್ಟೆಗೆ ಹೆಚ್ಚು ಟೊಮೆಟೊ ಬರುತ್ತದೋ ಆ ದಿನ ಹರಾಜು ದರ ಕಡಿಮೆಯಾಗಬಹುದು. ಇದೇ ಆಗಸ್ಟ್ 29ರಂದು ಈ ವರದಿಗಾರನನ್ನು ಭೇಟಿಯಾದ ಅನಂತಪುರ ಜಿಲ್ಲೆಯ ತಣಕಲ್ ಮಂಡಲದ ಮಾಲರೆಡ್ಡಿಪಲ್ಲಿ ಗ್ರಾಮದ ರೈತ ಎಸ್.ಎಂ. ಶ್ರೀನಿವಾಸುಲು  ಮದನಪಲ್ಲಿ ಯಾರ್ಡಿನಲ್ಲಿ ಟೊಮೆಟೊವನ್ನು ಮಾರುತ್ತಿದ್ದರು. ಅವರು ಹೇಳುವಂತೆ "ಒಳ್ಳೆಯ ಬೆಲೆಯ ಕಾರಣಕ್ಕೆ ರೈತರು ಹೆಚ್ಚು ಟೊಮೆಟು ತಂದರು ಇದರಿಂದಾಗಿ 500 ರೂಪಾಯಿಗಳಷ್ಟಿದ್ದ 30 ಕೇಜಿ ಟೊಮೆಟೋ ಕ್ರೇಟ್‌ನ ಬೆಲೆ 390 ರೂಪಾಯಿಯಾಯಿತು."

ಅನಂತಪುರದ ನಲ್ಲಚೆರುವು ಮಂಡಲದ ಅಳ್ಳುಗುಂಡು ಗ್ರಾಮದ ರೈತ ಆರ್. ರಾಮಸ್ವಾಮಿ ರೆಡ್ಡಿ ಹೇಳುತ್ತಾರೆ, "ಟೊಮೆಟೊ ಕೃಷಿಗೆ ಪ್ರತಿ ಎಕರೆಗೆ ರೂ 100,000 ರಿಂದ ರೂ 200,000 ಹೂಡಿಕೆಯ ಅಗತ್ಯವಿರುತ್ತದೆ. ಮತ್ತು ಪ್ರಕೃತಿ [ಮಳೆ] ಬೆಳೆಯನ್ನು ಹಾಳು ಮಾಡದಿದ್ದರೆ, ಬೆಳೆಗೆ ಹೆಚ್ಚಿನ ಹೂಡಿಕೆ ಮಾಡುವುದರಿಂದ ಇಳುವರಿ ಹೆಚ್ಚಾಗುತ್ತದೆ. 2-3 ವರ್ಷಗಳಲ್ಲಿ ಆದ ನಷ್ಟವನ್ನು ನಾಲ್ಕನೇ ವರ್ಷದಲ್ಲಿ ಮಾತ್ರ ಸರಿದೂಗಿಸಬಹುದು.

ಮದನಪಲ್ಲಿಯ ವಕೀಲರಾದ ಎನ್. ಸಹದೇವ್ ನಾಯ್ಡು ಕಳೆದ ಮೂರು ವರ್ಷಗಳಿಂದ ಟೊಮೇಟೊ ಕೃಷಿಯು ಅಪಾಯಕಾರಿ ವ್ಯವಹಾರವಾಗಿದೆ ಎಂದು  ಹೇಳುತ್ತಾರೆ. ನಾಯ್ಡು ಅವರ ಕುಟುಂಬ 10-15 ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದೆ. ನನ್ನ 20 ವರ್ಷಗಳ ಅನುಭವದಲ್ಲಿ ಒಂದೇ ಒಂದು ವಾರದವರೆಗೆ ಏಕರೂಪದ ಟೊಮೇಟೊ ದರ ಕಂಡಿಲ್ಲ ಎನ್ನುತ್ತಾರವರು. ಕಳೆದ ಎರಡು ದಶಕಗಳಲ್ಲಿ ವೆಚ್ಚಕ್ಕಿಂತ 7-10 ಪಟ್ಟು ಹೆಚ್ಚು ಆದಾಯ ಬರುತ್ತಿದ್ದು, ಟೊಮೆಟೊ ದರ 1ರಿಂದ 60 ರೂ ತನಕ ಹೋಗುತ್ತದೆ. ಆದರೆ, ರಿಸ್ಕ್ ತೆಗೆದುಕೊಳ್ಳಲು ತಯಾರಿರುವ ರೈತರು ಮಾತ್ರವೇ ಬೆಳೆಗಿಂತ ಹೆಚ್ಚಿನ ಆದಾಯದ ಬಗ್ಗೆ ಯೋಚಿಸಬಹುದು. ಹೆಚ್ಚಿನ ಉತ್ಪಾದನೆಯು ನಾಯ್ಡು ಅವರ ಕುಟುಂಬಕ್ಕೆ ಬೆಲೆ ಏರಿಳಿತಗಳನ್ನು ನಿಭಾಯಿಸಲು ಸಹಾಯ ಮಾಡಿದೆ. "ನಾವು ಜಮೀನನ್ನು ಗುತ್ತಿಗೆಗೆ ಕೊಂಡು ಟೊಮೆಟೊ ಕೃಷಿ ಮಾಡುತ್ತಿದ್ದೆವು ಮತ್ತು ಅದನ್ನು ವರ್ಷವಿಡೀ ಮಾರಾಟ ಮಾಡುತ್ತೇವೆ. ಹೀಗೆ ಮಾಡುವುದರಿಂದ ನಾವು ನಷ್ಟದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು" ಎಂದು ಅವರು ಹೇಳುತ್ತಾರೆ.

ಈ ವರ್ಷದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ, ಭೀಕರ ಮುಂಗಾರು ಮಳೆ ಮತ್ತು ನವೆಂಬರ್ ಮಧ್ಯದಿಂದ 255%ಕ್ಕಿಂತ ಹೆಚ್ಚು ಸುರಿದ ಅಕಾಲಿಕ ಮಳೆಯು ರಾಯಲಸೀಮಾದಲ್ಲಿ ಸಾವಿರಾರು ಎಕರೆ ಬೆಳೆಗಳನ್ನು ನಾಶಪಡಿಸಿತು . ಅಕ್ಟೋಬರ್‌ನಿಂದ ಮದನಪಲ್ಲಿಯ ಯಾರ್ಡ್‌ನಲ್ಲಿ ಟೊಮೆಟೊ ಕೊರತೆಯಿಂದ ಬೆಲೆ ಏರಿಕೆಯಾಗುತ್ತಿದೆ. ಕಳೆದ ತಿಂಗಳು ಕೆ.ಜಿ.ಗೆ 42ರಿಂದ 48 ರೂ.ಗಳಿದ್ದ ಉತ್ತಮ ಗುಣಮಟ್ಟದ ಹೈಬ್ರಿಡ್ ಟೊಮೆಟೊ ನವೆಂಬರ್ 16ರಂದು ಕೆಜಿಗೆ 92 ರೂ.ಗೆ ಮಾರಾಟವಾಗಿತ್ತು. ಇದಾದ ನಂತರವೂ ಬೆಲೆ ಏರಿಕೆಯಾಗುತ್ತಲೇ ಇದ್ದು, ನವೆಂಬರ್ 23ರಂದು ದಾಖಲೆಯ ಬೆಲೆ ಕೆಜಿಗೆ 130 ರೂ. ತಲುಪಿದೆ.

ಕೆಲವು ರೈತರು ಅಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರೂ, ಹಲವರಿಗೆ ಈ ಬಲೆ ತಮ್ಮ ಅನಿಶ್ಚಿತ ಜೀವನೋಪಾಯದ ನೆನಪು ತಂದಿತು.

ನೀವು ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ ಅಥವಾ ತೊಂದರೆಯಲ್ಲಿರುವ ಯಾರನ್ನಾದರೂ ತಿಳಿದಿದ್ದರೆ , ದಯವಿಟ್ಟು ರಾಷ್ಟ್ರೀಯ ಸಹಾಯವಾಣಿ ' ಕಿರಣ್ ' 1800-599-0019 (24/7 ಟೋಲ್ ಫ್ರೀ ) ಅಥವಾ ಹತ್ತಿರದ ಈ ಸಹಾಯವಾಣಿಗಳಲ್ಲಿ ಯಾವುದಾದರೂ ಸಂಖ್ಯೆಗೆ ಕರೆ ಮಾಡಿ . ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಮತ್ತು ಸೇವೆಗಳ ಕುರಿತು ಮಾಹಿತಿಗಾಗಿ , ದಯವಿಟ್ಟು SPIF ನ ಮಾನಸಿಕ ಆರೋಗ್ಯ ನಿರ್ದೇಶಿಕೆಯನ್ನು ನೋಡಿ.

ಅನುವಾದ : ಶಂಕರ . ಎನ್ . ಕೆಂಚನೂರು

G. Ram Mohan

G. Ram Mohan is a freelance journalist based in Tirupati, Andhra Pradesh. He focuses on education, agriculture and health.

Other stories by G. Ram Mohan
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru