ನಾನು ನಾಲ್ಕನೇ ದಿನ ಅಲ್ಲಿಗೆ ತಲುಪಿದ್ದೆ; ಅಲ್ಲಿಗೆ ತಲುಪುವಾಗ ಮಧ್ಯಾಹ್ನವಾಗುವುದರಲ್ಲಿತ್ತು.
ಚೆನ್ನೈಯಿಂದ ವಯನಾಡಿಗೆ ಸ್ವಯಂಸೇವಕರ ತಂಡವೊಂದರ ಜೊತೆ ಹೊರಟಿದ್ದೆ. ಬಸ್ಸುಗಳಿರದ ಕಾರಣ ಅಪರಿಚಿರಿಂದ ಲಿಫ್ಟ್ ಪಡೆಯಬೇಕಾಯಿತು.
ದುರಂತ ನಡೆದ ಸ್ಥಳವು ಯುದ್ಧಭೂಮಿಯಂತಿತ್ತು. ಆಂಬುಲೆನ್ಸ್‌ಗಳು ಒಂದೇ ಸಮನೇ ಬಂದು ಹೋಗುತ್ತಿದ್ದವು. ಜನರು ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಹೆಣಗಳನ್ನು ಹುಡುಕುವುದರಲ್ಲಿ ನಿರತರಾಗಿದ್ದರು. ಚೂರಮಲಾ, ಅಟ್ಟಮಲಾ ಮತ್ತು ಮುಂಡಕ್ಕೈ ಪಟ್ಟಣಗಳು ಹೇಳ ಹೆಸರಿಲ್ಲದಂತಾಗಿದ್ದವು. ಅಲ್ಲಿ ಜನಜೀವನ ಇದ್ದ ಕುರುಹುಗಳೇ ಇರಲಿಲ್ಲ. ಅಲ್ಲಿನ ನಿವಾಸಿಗಳು ಯಾವ ಮಟ್ಟಕ್ಕೆ ಕುಸಿದು ಹೋಗಿದ್ದರೆಂದರೆ ಅವರಿಗೆ ತಮ್ಮ ಪೀತಿಪಾತ್ರರ ದೇಹವನ್ನು ಗುರುತಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.
ನದಿಯ ದಡದಲ್ಲಿ ಅವಶೇಷಗಳು ಮತ್ತು ಮೃತ ದೇಹಗಳು ಬಿದ್ದಿದ್ದವು. ಪರಿಹಾರ ಕಾರ್ಯಕರ್ತರು ಹಾಗೂ ಕುಟುಂಬಗಳು ಮಣ್ಣಿನಡಿ ಹೂತು ಹೋಗುವ ಭಯದಿಂದ ಕೋಲು ಹಿಡಿದುಕೊಂಡೇ ಹುಡುಕಾಟದಲ್ಲಿ ತೊಡಗಿದ್ದರು. ನನ್ನ ಕಾಲು ಮಣ್ಣಿನಲ್ಲಿ ಹೂತುಕೊಂಡಿತ್ತು. ದೇಹಗಳನ್ನು ಗುರುತು ಹಿಡಿಯುವುದು ಬಹಳ ಕಷ್ಟವಿತ್ತು. ದೇಹದ ಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪ್ರಕೃತಿಯೊಂದಿಗೆ ನನಗೆ ಬಹಳ ಆಪ್ತ ಸಂಬಂಧವಿದೆ. ಆದರೆ ಇಲ್ಲಿನ ದೃಶ್ಯಗಳು ನನ್ನನ್ನು ದಂಗಬಡಿಸಿದವು.
ಭಾಷೆಯ ಸಮಸ್ಯೆಯಿಂದಾಗಿ ನನಗೆ ಅಲ್ಲಿನ ಜನರ ಭಾವನೆಗಳಷ್ಟೇ ಅರ್ಥವಾಗುತ್ತಿದ್ದವು. ನಾನು ಅವರನ್ನು ಡಿಸ್ಟರ್ಬ್ ಮಾಡಲು ಹೋಗಲಿಲ್ಲ. ನಾನು ಇಲ್ಲಿಗೆ ಮೊದಲೇ ಬರುವವನಿದ್ದೆ, ಆದರೆ ಆರೋಗ್ಯ ಅದಕ್ಕೆ ಆಸ್ಪದ ನೀಡಿರಲಿಲ್ಲ.
ಹರಿಯುವ ನೀರನ್ನು ಅನುಸರಿಸಿ ಕೆಲವು ಕಿಲೋಮೀಟರ್ ದೂರವನ್ನು ನಡೆದೆ. ಮನೆಗಳು ಮಣ್ಣಿನಲ್ಲಿ ಹೂತು ಹೋಗಿದ್ದವು. ಇನ್ನೂ ಕೆಲವು ಪೂರ್ತಿಯಾಗಿ ಕಾಣೆಯಾಗಿದ್ದವು. ಎಲ್ಲೆಡೆಯೂ ಸ್ವಯಂಸೇವಕರು ಮೃತ ದೇಹಗಳಿಗಾಗಿ ಹುಡುಕುತ್ತಿರುವುದು ಕಾಣುತ್ತಿತ್ತು. ಜೊತೆಗೆ ಸೈನ್ಯವೂ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ನಾನು ಅಲ್ಲಿ ಎರಡು ದಿನಗಳ ಕಾಲ ಉಳಿದಿದ್ದೆ ಆದರೆ ಯಾವುದೇ ಮೃತ ದೇಹ ಕಂಡುಬಂದಿರಲಿಲ್ಲ. ಆದರೆ ಹುಡುಕಾಟ ಮಾತ್ರ ಬಿಡುವಿಲ್ಲದೆ ಸಾಗಿತ್ತು. ಅವರು ಚಹಾ ಮತ್ತು ಊಟದ ಸಲುವಾಗಿಯಷ್ಟೇ ವಿರಮಿಸುತ್ತಿದ್ದರು. ಅಲ್ಲಿನ ಜನರ ಒಗ್ಗಟ್ಟು ನನ್ನನ್ನು ನಿಜಕ್ಕೂ ಅಚ್ಚರಿಯಲ್ಲಿ ದೂಡಿತು.
ಸ್ಥಳೀಯರೊಂದಿಗೆ ಮಾತನಾಡಿದಾಗ, ಅವರು 2019ರ ಆಗಸ್ಟ್ 8ರಂದು ಪುದುಮಲಾ ಎನ್ನುವಲ್ಲಿ ಇಂತಹದ್ದೇ ಘಟನೆ ನಡೆದು 40 ಜನ ತೀರಿಕೊಂಡ ವಿಷಯವನ್ನು ತಿಳಿಸಿದರು. ಜೊತೆಗೆ 2021ರಲ್ಲಿ ಸುಮಾರು 17 ಜನ ಸತ್ತಿದ್ದರು. ಇದು ಮೂರನೇ ಸಲ. ಸುಮಾರು 430 ಜನರು ಪ್ರಾಣ ಕಳೆದುಕೊಂಡಿದ್ದು, 150 ಜನರೂ ಇನ್ನೂ ಪತ್ತೆಯಾಗಿಲ್ಲ.
ನಾನು ಕೊನೆಯ ದಿನ ಹೊರಡುವಾಗ ಪುದುಮಲಾ ಬಳಿ ಎಂಟು ಮೃತದೇಹಗಳನ್ನು ಮಣ್ಣು ಮಾಡಲಾಯಿತು ಎನ್ನುವ ಮಾಹಿತಿ ದೊರಕಿತು. ಮಣ್ಣು ಮಾಡುವ ಸಮಯದಲ್ಲಿ ಎಲ್ಲಾ ಧರ್ಮದ ಜನರು (ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಇತರರು) ಸ್ಥಳದಲ್ಲಿದ್ದು ಎಲ್ಲಾ ಧಾರ್ಮಿಕ ಪ್ರಕ್ರಿಯೆಗಳನ್ನು ಪೂರೈಸಿದ್ದರು. ಆ ಮೃತದೇಹಗಳು ಯಾರದ್ದೆಂದು ಗುರುತು ಸಿಗದ ಕಾರಣ ಸಾಮೂಹಿಕವಾಗಿ ಪ್ರಾರ್ಥಿಸಿ ಮಣ್ಣು ಮಾಡಲಾಯಿತು.
ಅಲ್ಲಿ ಅಳುವ ಸದ್ದಿರಲಿಲ್ಲ. ಮಳೆ ಒಂದೇ ಸಮ ಸುರಿಯುತ್ತಿತ್ತು.
ಪದೇ ಪದೇ ಇಂತಹ ದುರಂತಗಳು ಇಲ್ಲಿಯೇ ಏಕೆ ಸಂಭವಿಸುತ್ತವೆ? ಇಲ್ಲಿನ ಇಡೀ ಪ್ರದೇಶ ಮಣ್ಣು ಮತ್ತು ಕಲ್ಲಿನ ಮಿಶ್ರಣ. ಬಹುಶಃ ಇಂತಹ ಗಟ್ಟಿಯಾದ ಮಣ್ಣು ಇರದಿರುವುದೇ ಈ ಘಟನೆಗೆ ಕಾರಣವಾಗಿರಬಹುದು. ಫೋಟೊಗಳನ್ನು ತೆಗೆಯುವಾಗ ನನಗೆ ಕಾಣಿಸಿದ್ದು ಬರೀ ಕಲ್ಲು ಮಣ್ಣಿನ ಮಿಶ್ರಣ. ಎಲ್ಲೂ ಬರೀ ಮಣ್ಣು ಅಥವಾ ಕಲ್ಲು ಕಾಣಿಸಿಲ್ಲ.
ನಿರಂತರ ಸುರಿದ ಮಳೆ ಈ ಪ್ರದೇಶದಲ್ಲಿ ಸಾಮಾನ್ಯವಲ್ಲ. ಜಾಳು ಮಣ್ಣಿನ ಈ ನೆಲದ ಮೇಲೆ ರಾತ್ರಿ ಒಂದರಿಂದ ಬೆಳಗಿನ ಜಾವ ಐದರ ತನಕ ಮಳೆ ಸುರಿದಿತ್ತು. ಅದರ ಬೆನ್ನಿಗೆ ರಾತ್ರಿ ಮೂರು ಭೂಕುಸಿತಗಳು ಉಂಟಾದವು. ನೋಡಿದ ಪ್ರತಿ ಕಟ್ಟಡ ಮತ್ತು ಮನೆಗಳು ನನಗೆ ಇದನ್ನು ನೆನಪಿಸಿದವು. ಅಲ್ಲಿದ್ದವರೊಂದಿಗೆ ಮಾತನಾಡಿದಾಗ ನನಗೆ ಅನ್ನಿಸಿದ್ದೆಂದರೆ ಅಲ್ಲಿ ಪರಿಹಾರ ಕಾರ್ಯಕ್ಕಾಗಿ ಬಂದಿದ್ದ ಕಾರ್ಯಕರ್ತರು ಸಹ ಕುಸಿದು ಹೋಗಿದ್ದಾರೆ. ಮತ್ತೆ ಅಲ್ಲಿ ಬದುಕು ನಡೆಸುತ್ತಿರುವವರು… ಎಂದಿಗೂ ಈ ದುರಂತದ ನೆನಪಿನಿಂದ ಹೊರಬರಲು ಸಾಧ್ಯವಿಲ್ಲ.
ಅನುವಾದ: ಶಂಕರ. ಎನ್. ಕೆಂಚನೂರು