“ಒಂದು ಸಣ್ಣ ತಪ್ಪೇನಾದ್ರೂ ಆದ್ರೆ ಕೊಯ್ಟಾ ಹೋಗಿ ಸಟ್ಟೂರು ಸಿಗುತ್ತದೆ!” ಎಂದು ರಾಜೇಶ್ ಚಾಫೇಕರ್ ಕಸಾಯಿಖಾನೆಯಲ್ಲಿ ಬಳಸುವ ಚಾಕು ಮತ್ತು ಕುಡುಗೋಲಿನ ನಡುವೆ ಇರುವ ವ್ಯತ್ಯಾಸವನ್ನು ತಿಳಿಸುತ್ತಾರೆ. ಒಬ್ಬ ಅನುಭವಿ ಲೋಹರ್ (ಕಮ್ಮಾರ) ಆಗಿರುವ ಇವರು ಮಹಾರಾಷ್ಟ್ರದ ಆಕ್ಟಾನ್ ಗ್ರಾಮದಲ್ಲಿರುವ ತಮ್ಮ ವರ್ಕ್‌ಶಾಪ್‌ನಲ್ಲಿ 10,000 ಕ್ಕೂ ಹೆಚ್ಚು ಕಬ್ಬಿಣದ ಉಪಕರಣಗಳನ್ನು ತಯಾರಿಸಿದ್ದಾರೆ.
52 ವರ್ಷ ವಯಸ್ಸಿನ ಇವರು ತಮ್ಮ ತಂದೆ ದತ್ತಾತ್ರೇ ಚಾಫೇಕರ್ ಅವರಿಂದ ಈ ವೃತ್ತಿಯನ್ನು ಕಲಿತರು. ಇವರು ಮಹಾರಾಷ್ಟ್ರದ ರೈತ ಗ್ರಾಹಕರ ಗೌರವಕ್ಕೆ ಪಾತ್ರವಾಗಿರುವ ಪಾಂಚಾಲ್ ಲೋಹರ್‌ಗಳ ದೀರ್ಘ ಪರಂಪರೆಗೆ ಸೇರಿದವರು. "ಜನರು 'ಆಕ್ಟಾನ್ ಸೆ ಹಿ ಹತ್ಯಾರ್ ಲೇಕೆ ಆವೋ' [ಹತ್ಯಾರುಗಳನ್ನು ಆಕ್ಟಾನ್‌ನಿಂದ ಮಾತ್ರ ಖರೀದಿಸಿ] ಎಂದು ಹೇಳುತ್ತಾರೆ," ಎಂದು ವಸೈ ತಾಲೂಕಿನಲ್ಲಿ ವಾಸಿಸುತ್ತಿರುವ ಏಳನೇ ತಲೆಮಾರಿನ ಕಮ್ಮಾರ ರಾಜೇಶ್ ಹೇಳುತ್ತಾರೆ. ಇವರಿಗೆ 25ಕ್ಕೂ ಹೆಚ್ಚು ಬಗೆಯ ಕೃಷಿ ಉಪಕರಣಗಳನ್ನು ತಯಾರಿಸಲು ಬರುತ್ತದೆ.
ದೋಣಿ ತಯಾರಿಕೆಯಲ್ಲಿ ಮಹತ್ವದ ಸಾಧನವಾದ ತಸ್ನಿಯ ದೊಡ್ಡ ಆರ್ಡರ್‌ಗಳನ್ನು ಕೊಡಲು ಗ್ರಾಹಕರು ಸುಮಾರು 90 ಕಿಲೋಮೀಟರ್ ದೂರದ ನವಿ ಮುಂಬೈನ ಉರಾನ್‌ನಿಂದ ಬರುತ್ತಿದ್ದರು. "ಗಿರ್ಹೈಕ್‌ಗಳು [ಗ್ರಾಹಕರು] ನಾಲ್ಕು ದಿನ ನಮ್ಮ ಮನೆಯಲ್ಲಿಯೇ ಇದ್ದು, ನಾವು ಉಪಕರಣವನ್ನು ತಯಾರಿಸುವುದನ್ನು ಆರಂಭದಿಂದಲೇ ಗಮನಿಸುತ್ತಿದ್ದರು," ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಆಕ್ಟಾನ್ ಹಳ್ಳಿಯಲ್ಲಿ ಕಿರಿದಾದ ಬೀದಿಗಳನ್ನು ಸಾಂಪ್ರದಾಯಿಕವಾಗಿಯೇ ಜಾತಿ ಆಧಾರಿತ ಉದ್ಯೋಗಗಳ ಮೇಲೆ ಕರೆಯಲಾಗುತ್ತದೆ: ಸೋನಾರ್ (ಚಿನಿವಾರ), ಲೋಹರ್ (ಕಮ್ಮಾರ), ಸುತಾರ್ (ಬಡಗಿ), ಚಂಬಾರ್ (ಚಮ್ಮಾರ) ಮತ್ತು ಕುಂಬಾರ್ (ಕುಂಬಾರ) ಎಂದೆಲ್ಲಾ ಗುರುತಿಸಲಾಗುತ್ತದೆ. ಈ ಹಳ್ಳಿಯ ಜನರು ಇವರನ್ನು ದೇವತೆಗಳ ಶಿಲ್ಪಿ ವಿಶ್ವಕರ್ಮನ ಶಿಷ್ಯರು ಎಂದು ಕರೆಯುತ್ತಾರೆ. 2008 ರಿಂದ ಪಾಂಚಾಲ್ ಲೋಹರ್‌ಗಳನ್ನು ಅಲೆಮಾರಿ ಬುಡಕಟ್ಟುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೊದಲು ಅವರನ್ನು ಒಬಿಸಿ (ಇತರ ಹಿಂದುಳಿದ ವರ್ಗಗಳು) ಎಂದು ವರ್ಗೀಕರಿಸಲಾಗಿತ್ತು.
19 ವರ್ಷದವರಿದ್ದಾಗ ತಮಗೆ ತಮ್ಮ ಕುಟುಂಬದ ಉದ್ಯೋಗವಾದ ಕಮ್ಮಾರಿಕೆಯನ್ನು ಮುಂದುವರಿಸುವ ಯೋಚನೆಯಿರಲಿಲ್ಲ ಎಂದು ರಾಜೇಶ್ ಹೇಳುತ್ತಾರೆ. ಅವರು ತಿಂಗಳಿಗೆ 1,200 ರುಪಾಯಿ ಸಂಬಳಕ್ಕೆ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ, ಇವರ ದೊಡ್ಡ ಅವಿಭಕ್ತ ಕುಟುಂಬ ಸಂಕಷ್ಟಕ್ಕೆ ಸಿಲುಕಿ ಇವರ ತಂದೆ ಕೆಲಸ ಕಳೆದುಕೊಂಡರು. ಆಗ ಮನೆಯ ಹಿರಿಮಗನಾದ ರಾಜೇಶ್ ಈ ಉದ್ಯಮ ಶುರುಮಾಡಬೇಕಾಯ್ತು.
ಮೂರು ದಶಕಗಳ ಅನುಭವದ ನಂತರ, ಈಗ ಅವರು ಓರ್ವ ನುರಿತ ಕಮ್ಮಾರರಾಗಿದ್ದಾರೆ. ಅವರ ಕೆಲಸ ಬೆಳಗ್ಗೆ 7 ಗಂಟೆಯ ನಂತರ ಆರಂಭವಾಗಿ 12 ಗಂಟೆ ಕೆಲಸ ಮಾಡುತ್ತಾರೆ. ಟೀ ಕುಡಿಯಲು ಮಧ್ಯ ಆಗಾಗ ಕೆಲಸ ನಿಲ್ಲಿಸುತ್ತಾರೆ. ಒಂದು ದಿನದಲ್ಲಿ ಅವರು ಮೂರು ಉಪಕರಣಗಳನ್ನು ತಯಾರಿಸುತ್ತಾರೆ. ವಸೈಯ ಭುಯಿಗಾಂವ್ ಬಳಿ ವಾಸಿಸುವ ಬೆನಪಟ್ಟಿಯ ಆದಿವಾಸಿಗಳು ಮತ್ತು ಮುಂಬೈನ ಗೊರೈ ಗ್ರಾಮದ ಜನರು ಇವರ ಪ್ರಮುಖ ಗ್ರಾಹಕರು.
ಕೊಯ್ಟಾ (ಸಣ್ಣ ಕುಡಗೋಲು), ಮೊರ್ಲಿ (ತರಕಾರಿ ಮತ್ತು ಮಾಂಸ ಕತ್ತರಿಸುವ ಚಾಕು), ಆವುಟ್ (ನೇಗಿಲು) , ತಾಸ್ನಿ (ಉಳಿ), ಕಾಟಿ (ಮೀನು ಸೀಳುವ ಚಾಕು) , ಚಿಮ್ಟೆ (ಇಕ್ಕುಳ) ಮತ್ತು ಸತ್ತೂರ್ (ಕಸಾಯಿಖಾನೆಯಲ್ಲಿ ಬಳಸುವ ಚಾಕು)- ಇವು ಹೆಚ್ಚು ಮಾರಾಟವಾಗುವ ಉಪಕರಣಗಳು.
ರಾಜೇಶ್ ಅವರು ಗ್ರಾಹಕರಿಗೆ ಬೇಕಾದಂತೆ ಕಸ್ಟಮೈಸ್ಡ್ ಸಾಧನಗಳನ್ನೂ ತಯಾರಿಸುತ್ತಾರೆ, “ಪ್ರತಿ ಹಳ್ಳಿಗೂ ತನ್ನದೇ ಆದ ಡಿಸೈನ್ ಮತ್ತು ಅವಶ್ಯಕತೆಗಳಿರುತ್ತವೆ. ಶೇಂದಿ ತೆಗೆಯಲು ಮರ ಹತ್ತುವಾಗ ತಮ್ಮ ಕೊಯ್ಟಾಗಳನ್ನು [ಸಣ್ಣ ಕುಡಗೋಲು] ಗಟ್ಟಿಯಾಗಿ ಹಿಡಿದುಕೊಳ್ಳಲು ಅವರಿಗೆ ಹೆಚ್ಚುವರಿ ಹಿಡಿತದ ಅಗತ್ಯವಿದೆ,” ಎನ್ನುತ್ತಾರೆ ಅವರು. ಬಾಳೆ ಮತ್ತು ತೆಂಗು ಬೆಳೆಗಾರರು ತಮ್ಮ ಉಪಕರಣಗಳನ್ನು ವರ್ಷಪೂರ್ತಿ ಹರಿತಗೊಳಿಸಲು ಮತ್ತು ರಿಪೇರಿ ಮಾಡಲು ಇವರಲ್ಲಿಗೆ ಕಳುಹಿಸುತ್ತಾರೆ.
"ನಮ್ಮ ಕೆಲಸಕ್ಕೆ ಪ್ರತಿಯಾಗಿ ಉಡುಗೊರೆಗಳೂ ಸಿಗುತ್ತವೆ," ಎಂದು ಅವರು ಹೇಳುತ್ತಾರೆ. ಸ್ಥಳೀಯ ಕೃಷಿಕರು ಅವರ ಕುಡುಗೋಲು ಹರಿತ ಮಾಡಿಕೊಟ್ಟಿದ್ದಕ್ಕೆ ಉಡುಗೊರೆಯಾಗಿ ತೆಂಗಿನಕಾಯಿಗಳನ್ನು ಮೆಚ್ಚುಗೆಯ ಸಂಕೇತವಾಗಿ ಕೊಡುತ್ತಾರೆ "ನಾನು ಕಾಟಿಯನ್ನು ರಿಪೇರಿ ಮಾಡಿಕೊಟ್ಟರೆ ಕೋಲಿ ಸಹೋದರರು ಕೆಲವೊಮ್ಮೆ ತಾಜಾ ಮೀನಗಳನ್ನು ನಮಗೆ ಕೊಡುತ್ತಾರೆ" ಎಂದು ರಾಜೇಶ್ ಹೇಳುತ್ತಾರೆ.
ಇವರಿಗೆ ಪುಣೆಯ ವಾಘೋಲಿಯಿಂದ ಹಲವಾರು ಆರ್ಡರ್‌ಗಳು ಬರುತ್ತವೆ, ಏಕೆಂದರೆ ಆ ಪ್ರದೇಶದಲ್ಲಿ ಕೆಲವೇ ಕೆಲವು ಕಮ್ಮಾರರು ಮಾತ್ರ ಇದ್ದಾರೆ. "ತ್ಯಾಂಚೆ ಸತ್ತೂರ್ ಅಸ್ತಾತ್, ಬಕ್ರೆ ಕಪಯ್ಲಾ [ ಅವರ ಅರ್ಡರ್‌ನಲ್ಲಿ ಆಡಿನ ಮಾಂಸ ಕತ್ತರಿಸುವ ಚಾಕು ಕೂಡ ಇರುತ್ತದೆ]" ಎಂದು ರಾಜೇಶ್ ಹೇಳುತ್ತಾರೆ.
ಹೊಸದೇನಾದರೂ ಕಂಡುಹಿಡಿಯುವ ಉತ್ಸಾಹಿ ರಾಜೇಶ್ ಅವರು ಗಟ್ಟಿಯಾದ ಒಣ ತೆಂಗಿನಕಾಯಿಗಳನ್ನು ಸುಲಭವಾಗಿ ಒಡೆಯಲು ವಿಶೇಷವಾದ ಕುಡಗೋಲೊಂದನ್ನು ತಯಾರಿಸಿದ್ದಾರೆ. “ನಾನು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇನೆ. ಆದರೆ ನಿಮಗೆ ಅದನ್ನು ತೋರಿಸುವುದಿಲ್ಲ. ಅದಕ್ಕೆ ನನ್ನ ಪೇಟೆಂಟ್ ಇದೆ!" ಎಂದು ನಗುತ್ತಾ ಹೇಳುವ ಇವರು ಅವುಗಳ ಫೋಟೋ ತೆಗೆಯುವುದನ್ನು ನಿರಾಕರಿಸುತ್ತಾರೆ.
ತುಂಬಾ ಬೇಡಿಕೆ ಇರುವ ಉಪಕರಣ ಮೊರ್ಲಿ. ಇದೊಂದು ಚಿಕ್ಕದಾದ ತರಕಾರಿ ಕತ್ತರಿಸುವ ಸಾಧನ. ಇದನ್ನು ಅಡಿಗೆ ಮನೆಯ ಪ್ಲಾಟ್‌ಫಾರ್ಮ್‌ಗೆ ಜೋಡಿಸಬಹುದು. ನೆಲದಲ್ಲಿ ಇಟ್ಟು ಬಳಸುವ ಸಾಧನಗಳನ್ನು ಉಪಯೋಗಿಸಲು ಸಾಧ್ಯವಾಗದ ವಯಸ್ಸಾದ ಮಹಿಳೆಯರಿಗೆ ಇದೊಂದು ಉಪಯುಕ್ತ ಸಾಧನ..
ಮುಂಗಾರಿನಲ್ಲಿ ರೈತರು ದಿನಗೂಲಿ ಕೆಲಸ ಹುಡುಕಿ ನಗರಕ್ಕೆ ಹೋಗುವುದರಿಂದ ರಾಕೇಶ್ ಅವರ ವ್ಯಾಪಾರ ಕುಸಿಯುತ್ತದೆ. “ಕೆಲವೊಮ್ಮೆ ನಾನು ದಿನಕ್ಕೆ 100 ರುಪಾಯಿ, ಕೆಲವೊಮ್ಮೆ ಕೇವಲ 10 ರುಪಾಯಿ ಮಾತ್ರ ಸಂಪಾದಿಸುತ್ತೇನೆ. ಕೆಲವೊಮ್ಮೆ 3,000 ಅಥವಾ 5,000 ರುಪಾಯಿಯಾದರೆ, ಮಾರನೇ ದಿನ ಒಂದು ರುಪಾಯಿಯೂ ಇಲ್ಲ,” ಎಂದು ಅವರು ತಮ್ಮ ಗಳಿಕೆಯ ಬಗ್ಗೆ ವಿವರಿಸುತ್ತಾರೆ. “ಗಿರ್ಹೈಕ್ ಆನಿ ಮರಣ ಕಧಿ ಯೆತಿಲ್ ಕಾಯ್ ಸಾಂಗ್ತಾ ಯೇತಾ ಕಾ? [ಗ್ರಾಹಕರು ಮತ್ತು ಸಾವು ನಿಮ್ಮ ಮನೆಯ ಬಾಗಿಲನ್ನು ಯಾವಾಗ ತಟ್ಟಬಹುದು ಎಂಬುದು ನಿಮಗೆ ಗೊತ್ತಾಗುತ್ತದಾ?]," ಎನ್ನುತ್ತಾರೆ ಅವರು.
*****
ಭಾನುವಾರವೂ ಸೇರಿದಂತೆ ಪ್ರತಿದಿನ ಬೆಳಗ್ಗೆ ರಾಜೇಶ್ ತನ್ನ ಭಟ್ಟಿಯಲ್ಲಿ (ಕುಲುಮೆ) ಬೆಂಕಿ ಉರಿಸುತ್ತಾರೆ.
ಪರಿ ಅವರನ್ನು ಬೇಟಿ ಮಾಡಿದ ದಿನ, ಅವರು ಕುಲುಮೆ ಬಿಸಿಯಾಗಲು ಕಾಯುತ್ತಿದ್ದರು, ಸ್ಥಳೀಯರೊಬ್ಬರು ಆಲೂಗಡ್ಡೆಯೊಂದಿಗೆ ಬಂದರು. ಯಾವುದೇ ಮಾತುಕತೆ ನಡೆಯಲಿಲ್ಲ. ರಾಜೇಶ್ ಆಲೂಗೆಡ್ಡೆಯನ್ನು ತೆಗೆದುಕೊಂಡು ಕುಲುಮೆಯ ಒಂದು ಬದಿಗೆ ಹಾಕಿದರು. "ಅವರಿಗೆ ಕಲ್ಲಿದ್ದಲಿನಲ್ಲಿ ಹುರಿದ ಆಲೂಗಡ್ಡೆಗಳೆಂದರೆ ಇಷ್ಟ ಮತ್ತು ಅದನ್ನು ಒಂದು ಗಂಟೆಯಲ್ಲಿ ತೆಗೆದುಕೊಳ್ಳುತ್ತಾರೆ," ಎಂದು ಅವರು ಹೇಳುತ್ತಾರೆ.
ಆಗಲೇ ಗ್ರಾಹಕರೊಬ್ಬರು ಬಂದು ನಾಲ್ಕು ಕುಡುಗೋಲುಗಳನ್ನುಹರಿತ ಮಾಡಲು ಕೊಡುತ್ತಾರೆ. "ಅರ್ಜಂಟ್ ಇಲ್ಲ ಅಲ್ವಾ?" ಎಂದು ಅವರಲ್ಲಿ ಕೇಳುತ್ತಾರೆ. ಆಗ ಗ್ರಾಹಕ ಇಲ್ಲವೆಂದು ಹೇಳಿ ಕೆಲ ದಿನಗಳ ನಂತರ ಬಂದು ತೆಗೆದುಕೊಳ್ಳುವುದಾಗಿ ಹೇಳುತ್ತಾರೆ.
“ಏನು ಮಾಡೋಣ ಹೇಳಿ, ನಾನೇ ಎಲ್ಲವನ್ನೂ ಕೇಳಬೇಕು. ನನ್ನ ಜೊತೆ ಯಾರೂ ಇಲ್ಲ,’’ ಎನ್ನುತ್ತಾರೆ ರಾಜೇಶ್.
ದಿನದ ಆರ್ಡರ್ ಬರಲು ಆರಂಭವಾದಂತೆ ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಜೋಡಿಸಲು ಆರಂಭಿಸುತ್ತಾರೆ. ಕುಲುಮೆ ಬಿಸಿಯಾದ ನಂತರ ಈ ಎಲ್ಲಾ ಸಾಮಗ್ರಿಗಳು ಸುಲಭವಾಗಿ ಕೈಗೆ ಸಿಗಬೇಕು ಎಂಬುದು ಅವರ ಯೋಚನೆ. ಅವರು ಆರರಿಂದ ಎಂಟು ಕಿಲೋಗಳಷ್ಟು ಕಲ್ಲಿದ್ದಲನ್ನು ಒಂದು ಪಾತ್ರೆಗೆ ಹಾಕಿ, ತನ್ನ ಕೈಗಳಿಂದ ಅದರಲ್ಲಿ ಇರುವ ಕಲ್ಲುಗಳನ್ನು ಆರಿಸಲು ಆರಂಭಿಸುತ್ತಾರೆ. " ಈ ಸಣ್ಣ ಸಣ್ಣ ಕಲ್ಲುಗಳು ಕಲ್ಲಿದ್ದಲು ಉರಿಯುವುದನ್ನು ನಿಧಾನ ಮಾಡುತ್ತದೆ,” ಎಂದು ಅವರು ಹೇಳುತ್ತಾರೆ ಮತ್ತು ಕುಲುಮೆಗೆ ಬೆಂಕಿ ಹಾಕುವ ಮೊದಲು ಅವುಗಳನ್ನು ಆರಿಸಿ ಎಸೆಯಬೇಕು.
ಅನುಭವಿ ಕಮ್ಮಾರರಾದ ರಾಜೇಶ್ ಬೆಂಕಿಯನ್ನು ಉರಿಸುವಾಗ ಕಲ್ಲಿದ್ದಲಿನ ಮೇಲೆ ಮರದ ಸಿಪ್ಪೆಗಳ ಸಣ್ಣ ತುಂಡುಗಳನ್ನು ಇರಿಸುತ್ತಾರೆ. ಹಿಂದೆ ಧಮ್ನಿ (ಗಾಳಿ ಹಾಕುವ ಪಂಪ್) ಎಂದು ಕರೆಯಲಾಗುತ್ತಿದ್ದ ಭಾಟಾವನ್ನು ಬಳಸಿ ಕುಲುಮೆಯ ಒಳಗೆ ಬೆಂಕಿಯ ಜ್ವಾಲೆಯನ್ನು ನಿಯಂತ್ರಿಸಲಾಗುತ್ತದೆ. ಕುಲುಮೆಯನ್ನು ಬಿಸಿಯಾಗಿಡಲು ಹೆಚ್ಚು ಗಾಳಿ ಹಾಕುವಾಗ ಗಾಳಿಯ ದಿಕ್ಕನ್ನು ನಿಯಂತ್ರಿಸುವಲ್ಲಿ ಇದು ಸಹಾಯ ಮಾಡುತ್ತದೆ.
ಕಚ್ಚಾ ಲೋಹವನ್ನು ಬಿಸಿಮಾಡಲು ಐದರಿಂದ ಏಳು ನಿಮಿಷಗಳ ಕಾಲ ಕುಲುಮೆ ಒಳಗೆ ಇರಿಸುತ್ತಾರೆ. ಒಮ್ಮೆ ಬಿಸಿಯಾಗಿ, ಕೆಂಪಾದಾಗ ಅದನ್ನು ಐರಾನ್ (ಅನ್ವಿಲ್) ಮೇಲೆ ಇರಿಸಲಾಗುತ್ತದೆ. ಇದೊಂದು ಕಬ್ಬಿಣದ ದೊಡ್ಡ ಇಟ್ಟಿಗೆ. ನಂತರ ರಾಜೇಶ್ ಆ ಲೋಹವನ್ನು ಒಂದೆರಡು ಸೆಕೆಂಡುಗಳ ಕಾಲ ತಲೆಕೆಳಗಾಗಿ ಹಿಡಿದುಕೊಂಡು, ಘಾನ್ (ಸುತ್ತಿಗೆ) ಬಳಸಿ ಒಂದೇ ಸಮನೆ ಹೊಡೆಯುತ್ತಾರೆ, "ಮೆಟಲ್ ತಣ್ಣಗಾಗುವ ಮೊದಲು ಇದನ್ನು ಮಾಡಬೇಕು, ಇಲ್ಲದಿದ್ದರೆ ಅದರ ಆಕಾರ ಹಾಳಾಗುತ್ತದೆ" ಎಂದು ಅವರು ವಿವರಿಸುತ್ತಾರೆ.
ರಾಜೇಶ್ ಚಿಕ್ಕ ಸುತ್ತಿಗೆಯನ್ನು ಬಳಸಿದರೆ, ಅವರ ಮಗ ಓಂ ದೊಡ್ಡದನ್ನು ಎತ್ತುತ್ತಾನೆ. ಇಬ್ಬರೂ ಒಟ್ಟಿಗೆ ಸೇರಿ ತಮಗೆ ಬೇಕಾದ ಅಕಾರ ಬರುವ ವರೆಗೆ ಸುಮಾರು ಒಂದು ಗಂಟೆಗಳ ಕಾಲ ಲೋಹವನ್ನು ಹೊಡೆಯುವುದು ಮತ್ತು ಬಿಸಿಮಾಡುವುದನ್ನು ಮಾಡುತ್ತಾರೆ. ಸಲಕರಣೆಗೆ ಆಕಾರ ಬಂದ ಮೇಲೆ ಮರದ ಬೇಸ್ ಹಾಕಿ, ಅದನ್ನು ಲೋಹದ ರಿಂಗ್ ಹಾಕಿ ಬಂಧಿಸಲಾಗುತ್ತದೆ.
ಉಪಕರಣಗಳ ಅಂಚುಗಳನ್ನು ಹರಿತ ಮಾಡಲು 80 ವರ್ಷ ಹಳೇಯ ಗ್ರೈಂಡ್‌ಸ್ಟೋನ್ ಬಳಸುತ್ತಾರೆ. ರಾಜೇಶ್ ತಮ್ಮ ತಂದೆ ತಮಗೆ ಕೊಟ್ಟ ಮೊಗ್ರಿ ಎಂಬ ಅರದ ಸಹಾಯದಿಂದ ಕೈಯಿಂದ ಮಾಡಿದ ಸಲಕರಣೆಗೆ ಅಂತಿಮ ಸ್ಪರ್ಶ ಕೊಡುತ್ತಾರೆ.
ಇವರ ವರ್ಕ್‌ಶಾಪ್ ಸಾಮಾನ್ಯವಾಗಿ ಹೊಗೆಯಿಂದ ತುಂಬಿರುತ್ತದೆ, ಆದರೆ ಅದರಿಂದ ಅವರಿಗೇನು ತೊಂದರೆಯಿಲ್ಲ. "ನನಗೆ ಬಿಸಿ ಬಿಸಿಯಾಗಿ ಇರುವುದು ಎಂದರೆ ಇಷ್ಟ. ಮಜ್ಜಾ ಆತಾ ಹೈ ಮೆರೆಕೋ [ನಂಗೆ ಮಜಾ ಆಗ್ತದೆ]," ಎನ್ನುತ್ತಾರೆ ಅವರು. ಕುಲುಮೆ ಬಳಿ ಕುಳಿತುಕೊಳ್ಳಲು ಕಷ್ಟವಾಗುವಾಗ ತಮ್ಮ ಬರಿಗಾಲಿನ ಮೇಲೆ ನೀರು ಚಿಮುಕಿಸಿಕೊಳ್ಳುತ್ತಾರೆ.
ಸ್ಥಳೀಯ ಯೂಟ್ಯೂಬರ್ ಒಬ್ಬರು ಮಾಡಿದ ಇವರ ವಿಡಿಯೋ ವೈರಲ್ ಆದ ಮೇಲೆ ವಿದೇಶಗಳಿಂದ ಇವರಿಗೆ ಆರ್ಡರ್ ಬರಲು ಆರಂಭವಾಯ್ತು. ಆದರೆ ಈ ಸಲಕರಣೆಗಳನ್ನು ಶಸ್ತ್ರಾಸ್ತ್ರಗಳೆಂದು ಪರಿಗಣಿಸಲಾಗುವುದರಿಂದ ಅವುಗಳನ್ನು ರಪ್ತು ಮಾಡಲು ಸಾಧ್ಯವಿಲ್ಲ. ಈಗೀಗ ಆಸ್ಟ್ರೇಲಿಯಾದ ಗ್ರಾಹಕರು ಕಸಾಯಿಖಾನೆಯಲ್ಲಿ ಬಳಸುವ ಚಾಕುಗಳನ್ನು ಕೊಳ್ಳಲು ಭಾರತದಲ್ಲಿ ಇರುವ ಅವರ ವರ್ಕ್‌ಶಾಪ್‌ಗೆ ಖುದ್ದಾಗಿ ಭೇಟಿ ನೀಡುತ್ತಾರೆ.
ರಾಜೇಶ್ ಅವರಿಗೆ ನಿಷ್ಠಾವಂತ ಗ್ರಾಹಕರಿದ್ದಾರೆ. ಆದರೆ ಅವರ ಜೊತೆಗೆ ಕೆಲಸ ಮಾಡಲು ಬೇರೆ ಯಾರೂ ಇಲ್ಲದ ಕಾರಣ ಎಲ್ಲಾ ಆರ್ಡರ್‌ಗಳನ್ನು ಮುಗಿಸಲು ಅವರಿಗೆ ಕಷ್ಟವಾಗಿದೆ. "ನನ್ನ ಗ್ರಾಹಕರಿಗೆ ನಾಳೆ ಬನ್ನಿ ಎಂದು ಹೇಳಲು ನನಗೆ ಸಾಧ್ಯವಿಲ್ಲ," ಎಂದು ಅವರು ಹೇಳುತ್ತಾರೆ.
ಅವರ ಸಮುದಾಯದ ಹಲವರು ಈಗ ಒಳ್ಳೆಯ ಉದ್ಯೋಗಗಳನ್ನು ಹುಡುಕುತ್ತಾ ಥಾಣೆ ಮತ್ತು ಮುಂಬೈಗೆ ಹತ್ತಿರವಾಗಿದ್ದಾರೆ. ಇಲ್ಲಿ ರೈಲ್ವೇ ಮತ್ತು ಸಣ್ಣ ಉದ್ಯಮಗಳಲ್ಲಿ ಸಿಗುವ ಸಂಬಳದಂತೆ ಹೆಚ್ಚು ಗಳಿಸಬಹುದು. "ಕೃಷಿಭೂಮಿಗಳು ಕಡಿಮೆಯಾಗುತ್ತಿರುವಾಗ ನಾವು ಈಗ ಏನು ಮಾಡಬೇಕು," ಎಂದು 30 ವರ್ಷಗಳ ಹಿಂದೆ ತಮ್ಮ ಬೀದಿಯಲ್ಲಿದ್ದ 10-12 ಕಮ್ಮಾರರ ವರ್ಕ್‌ಶಾಪ್‌ಗಳನ್ನು ನೆನಪಿಸಿಕೊಳ್ಳುತ್ತಾರೆ. "ಈಗ ಕೇವಲ ಎರಡೇ ಇವೆ." ಅವರ ಸಮುದಾಯದಲ್ಲಿ ರಾಜೇಶ್ ಮತ್ತು ಅವರ ಸೋದರಸಂಬಂಧಿಯೊಬ್ಬರು ಮಾತ್ರ ಈ ವೃತ್ತಿ ಮಾಡುತ್ತಿದ್ದಾರೆ.
ಅವರ ಪತ್ನಿ ಸೋನಾಲಿ ಶಿಕ್ಷಕಿಯಾಗಿದ್ದು, ಕಮ್ಮಾರ ವೃತ್ತಿಯನ್ನು ಮುಂದುವರಿಸಿರುವ ತಮ್ಮ ಪತಿಯ ನಿರ್ಧಾರದ ಬಗ್ಗೆ ಹೆಮ್ಮೆ ಪಡುತ್ತಾರೆ. “ಈಗ ಎಲ್ಲರಿಗೂ ಸುಲಭವಾಗಿ ಹಣ ಮಾಡಬೇಕು. ಭಟ್ಟಿಯಲ್ಲಿ ಕುಳಿತು ಘಾನ್ [ಸುತ್ತಿಗೆ] ಹೊಡೆಯುವುದು ಯಾರಿಗೆ ಬೇಕು?” ಎಂದು ಅವರು ಕೇಳುತ್ತಾರೆ.
ಈ ದಂಪತಿಗಳ 20 ವರ್ಷದ ಮಗ ಓಂ ಎಂಜಿನಿಯರಿಂಗ್ ಓದುತ್ತಿದ್ದಾನೆ. "ವಾರದ ಕೊನೆಯಲ್ಲಿ ನನ್ನೊಂದಿಗೆ ಕೆಲಸಕ್ಕೆ ಬರಲು ನಾನು ಯಾವಾಗಲೂ ಅವನಿಗೆ ಹೇಳುತ್ತೇನೆ. ಇದು ನಮ್ಮ ಕೆಲಸ; ಈ ಕೌಶಲ್ಯವನ್ನು ಮರೆಯಬಾರದು. ನನ್ನ ಸಾವಿನ ನಂತರ ನನ್ನ ಎಲ್ಲಾ ಉಪಕರಣಗಳನ್ನು ಮಗ ಸಂರಕ್ಷಿಸಿ ಇಡಬೇಕು ಎಂದು ರಾಜೇಶ್ ಬಯಸುತ್ತಾರೆ. “ನನ್ನ ತಂದೆ ಮತ್ತು ಅಜ್ಜನ ಉಪಕರಣಗಳು ಇನ್ನೂ ನನ್ನ ಬಳಿ ಇವೆ. ಸುತ್ತಿಗೆಯ ಹೊಡೆತವನ್ನು ನೋಡಿ ಸಲಕರಣೆಯನ್ನು ತಯಾರಿಸಿದವರು ಯಾರು ಎಂಬುದನ್ನು ನೀವು ಕಂಡುಹಿಡಿಯಬಹುದು. ಪ್ರತಿಯೊಬ್ಬರ ಸುತ್ತಿಗೆಯ ಪೆಟ್ಟೂ ವಿಭಿನ್ನವಾಗಿರುತ್ತದೆ,” ಎನ್ನುತ್ತಾರೆ ರಾಜೇಶ್.
ಕುಲುಮೆಗೆ ಕೋಕಿಂಗ್ ಅಲ್ಲದ ಕಲ್ಲಿದ್ದಲನ್ನು ಬಳಸುವುದು ದುಬಾರಿಯಾಗುತ್ತಿದೆ: ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 2023 ರಲ್ಲಿ ಉನ್ನತ ದರ್ಜೆಯ ಕಲ್ಲಿದ್ದಲಿನ ಬೆಲೆಗಳನ್ನು ಶೇಕಡಾ ಎಂಟರಷ್ಟು ಹೆಚ್ಚಿಸಿದೆ. “ನಾನು [32 ವರ್ಷಗಳ ಹಿಂದೆ] ಆರಂಭಿಸುವಾಗ ಕೆಜಿಗೆ ಸುಮಾರು 3 ರೂಪಾಯಿಗಳಷ್ಟಿತ್ತು, ಈಗ ಕೆಜಿಗೆ 58 ಆಗಿದೆ,” ಎಂದು ಅವರು ಹೇಳುತ್ತಾರೆ.
ಪ್ರತಿದಿನ ಬಳಸುವ ಕಲ್ಲಿದ್ದಲಿನ ವೆಚ್ಚವನ್ನು ಭರಿಸುವುದು ಒಂದು ದೊಡ್ಡ ಸವಾಲು. ಅವರು ಒಂದು ಕುಡುಗೋಲಿಗೆ 750 ರುಪಾಯಿ ತೆಗೆದುಕೊಳ್ಳುತ್ತಾರೆ. ಎರಡು ಮೂರು ಕೆಜಿ ಕಚ್ಚಾ ಲೋಹದಿಂದ ಒಂದು ಕುಡುಗೋಲು ತಯಾರಿಸಲು ಸುಮಾರು ಆರು ಕೆಜಿ ಕಲ್ಲಿದ್ದಲು ಬೇಕು. ಪ್ರತಿ ತುಂಡಿಗೆ 120-140 ರುಪಾಯಿ ಆಗುತ್ತದೆ. ಉಪಕರಣಕ್ಕೆ ಹಾಕಲಾಗುವ ಮರದ ಹಿಡಿಕೆಯನ್ನು ಬಲ್ಕ್‌ನಲ್ಲಿ ಖರೀದಿಸಿದರೆ ಒಂದು ಪೀಸಿಗೆ 15 ರುಪಾಯಿ, ಇಲ್ಲದಿದ್ದರೆ ಒಂದು ಪೀಸಿಗೆ 60 ರುಪಾಯಿ.
"ನನಗೆ ಕೊನೆಯಲ್ಲಿ ಎಷ್ಟು ಉಳಿಯುತ್ತದೆ ಎಂದು ನೀವೇ ಲೆಕ್ಕಹಾಕಿ ಹೇಳಿ," ಎಂದು ಕೇಳುತ್ತಾ ಅವರು ತಮ್ಮ ಕಡಿಮೆ ಗಳಿಕೆಯ ಬಗ್ಗೆ ಹೇಳುತ್ತಾರೆ.
ಹೆಚ್ಚುತ್ತಿರುವ ಕಲ್ಲಿದ್ದಲಿನ ಬೆಲೆಯ ಜೊತೆಗೆ ಜೀವನೋಪಾಯ ಕಂಡುಕೊಳ್ಳಲು ಹೆಣಗಾಡುತ್ತಿರುವ ಈ ಸಮುದಾಯ ನಷ್ಟದಿಂದ ದಿನದೂಡುತ್ತಿದೆ. ಒಂದು ಕಾಲದಲ್ಲಿ ಬಡಗಿಗಳು ಮತ್ತು ಕಮ್ಮಾರರು ಪರಸ್ಪರರ ಖರ್ಚನ್ನು ಕಡಿಮೆ ಮಾಡಿಕೊಳ್ಳಲು ಒಬ್ಬರಿಗೊಬ್ಬರು ನೆರವಾಗುತ್ತಿದ್ದರು ಎಂದು ಅವರು ಹೇಳುತ್ತಾರೆ. “ನಾವು ಇಂದು ಸಿಗುವ ಬಾಬುಲ್‌ಗಿಂತ ಹೆಚ್ಚು ದುಬಾರಿಯಾದ ಖೈರ್ ಮರವನ್ನು ಬಳಸುತ್ತಿದ್ದೆವು. ಬಡಗಿಗಳು ಕಾಡಿಗೆ ಹೋದಾಗ ನಮಗಾಗಿ ಅದನ್ನು ತರುತ್ತಿದ್ದರು. ಇದಕ್ಕೆ ಬದಲಾಗಿ ನಾವು ಅವರ ಎತ್ತಿನ ಗಾಡಿಗಳ ಚಕ್ರಗಳಿಗೆ ಬೇಕಾದ ಹಬ್ ಬ್ಯಾಂಡ್ (ವೃತ್ತಾಕಾರದ ಲೋಹದ ಪಟ್ಟಿ) ಮತ್ತು ಬಾಕ್ಸಿಂಗ್ ಮಾಡಿ ಕೊಡುತ್ತಿದ್ದೆವು. ಈ ರೀತಿಯಲ್ಲಿ ನಾವು ಪರಸ್ಪರ ನೆರವಾಗುತ್ತಿದ್ದೆವು,” ಎಂದು ರಾಜೇಶ್ ನೆನಪಿಸಿಕೊಳ್ಳುತ್ತಾರೆ.
ಬೆಂಕಿ ಮತ್ತು ಲೋಹದೊಂದಿಗೆ ಕೆಲಸ ಮಾಡುವುದು ಅಪಾಯಕಾರಿ ವೃತ್ತಿ, ಗಾಯಗಳಾಗುತ್ತವೆ. ಮಾರುಕಟ್ಟೆಯಲ್ಲಿ ಮುಖಕ್ಕೆ ಹಾಕಿಕೊಳ್ಳಲು ರಕ್ಷಣಾತ್ಮಕ ಮುಖವಾಡ-ಗೇರ್ ಸಿಗುತ್ತದೆ. ಆದರೆ ಇದನ್ನು ಹಾಕಿದರೆ ಕುಲುಮೆಯ ಶಾಖದಿಂದಾಗಿ ಉಸಿರುಗಟ್ಟುತ್ತದೆ ಎಂದು ರಾಜೇಶ್ ಹೇಳುತ್ತಾರೆ. ತಮ್ಮ ಪತಿಯ ಕೈಗಳಲ್ಲಿ ಇರುವ ಸುಟ್ಟ ಗಾಯಗಳ ಬಗ್ಗೆ ಆತಂಕ ಪಡುವ ಪತ್ನಿ ಸೋನಾಲಿ, “ಸಲಕರಣೆಗಳನ್ನು ತಯಾರಿಸುವಾಗ ಅನೇಕ ಬಾರಿ ಇವರು ತಮ್ಮ ಕೈಗಳಿಗೆ ಗಾಯಮಾಡಿಕೊಂಡಿದ್ದಾರೆ. ಒಮ್ಮೆ ಅವರು ತನ್ನ ಪಾದಗಳನ್ನೂ ಕತ್ತರಿಸಿಕೊಂಡಿದ್ದರು,” ಎಂದು ಹೇಳುತ್ತಾರೆ.
ಆದರೆ ರಾಜೇಶ್ ಕೆಲಸ ನಿಲ್ಲಿಸುವುದಿಲ್ಲ. “ಸುಮ್ಮನೆ ಕುಳಿತುಕೊಂಡರೆ ನನಗೆ ಯಾರೂ ಕೆಲಸ ಕೊಡುವುದಿಲ್ಲ . ನಾನು ಭಟ್ಟಿಯಲ್ಲಿ ಕುಳಿತುಕೊಳ್ಳಬೇಕು. ಕೊಯ್ಲಾ ಜಲನಾ ಹೈ ಮೆರೆಕೋ [ನಾನು ಕಲ್ಲಿದ್ದಲು ಉರಿಸಲೇ ಬೇಕು],” ಎಂದು ರಾಜೇಶ್ ಹೇಳುತ್ತಾರೆ.
ದಶಕಗಳಿಂದ ತಾವು ಮಾಡುತ್ತಿರುವ ಕಮ್ಮಾರ ವೃತ್ತಿಯನ್ನು ಮುಂದುವರಿಸಲು ನಿರ್ಧರಿಸಿರುವ ಇವರು, "ಸಿ ಹಲ್ತಾ ಹೈ ಘರ್ [ನಾನು ನನ್ನ ಮನೆ ನಡೆಸಬಲ್ಲೆ]," ಎಂದು ಹೇಳುತ್ತಾರೆ.
ಅನುವಾದಕರು: ಚರಣ್ ಐವರ್ನಾಡು