“ನಮ್ಮ ಕಾಲದವರು ಭೇಡ್ ಬಕ್ರಿ ಚಾರ್ನಾ [ಪಶುಪಾಲನೆ] ಮಾಡುವುದು ಕಷ್ಟ” ಎನ್ನುತ್ತಾರೆ ತಾಲಿಬ್ ಕಸಾಣ. ಇವರು ಭೊರ್ಥೇನ್ ಎನ್ನುವ ಗ್ರಾಮದ ಪೆಹ್ಲಿ ಎನ್ನುವ ಬಕರ್ವಾಲ್ ಕುಗ್ರಾಮಕ್ಕೆ ಸೇರಿದವರು. ಅವರು ದೂರಶಿಕ್ಷಣದ ಮೂಲಕ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಓದುತ್ತಿದ್ದಾರೆ.
ಪಶುಪಾಲಕ ಸಮುದಾಯವಾಗಿರುವ ಬಕರ್ವಾಲ್ ಜನರು ತಮ್ಮ ಜಾನುವಾರುಗಳಿಗೆ ಮೇವಿನ ಮಾಳವನ್ನು ಹುಡುಕುತ್ತಾ ಹಿಮಾಲಯದ ಸುತ್ತ ದೊಡ್ಡ ಗುಂಪುಗಳಲ್ಲಿ ಹೊರಡುತ್ತಾರೆ. “ಒಮ್ಮೆ ಹಳ್ಳಿಗಳಲ್ಲಿ ಬದುಕುತ್ತಾ ಕುರಿ ಮೇಯಿಸುವ ಬದಲು ಓದಲು ಪ್ರಾರಂಭಿಸಿದರೆ ನಮಗೂ ಇತರ ವಿಷಯಗಳು ಅಭ್ಯಾಸವಾಗುತ್ತವೆ… ನಮಗೂ ಬಾಗಿಲಿರುವ ಬಚ್ಚಲು ಮನೆಯಲ್ಲಿ ಸ್ನಾನ ಮಾಡಬೇಕೆನ್ನಿಸುತ್ತದೆ ಅಥವಾ ಒಂದೇ ಸ್ಥಳದಲ್ಲಿದ್ದು ಓದಬೇಕೆನ್ನುವ ಆಸೆಯೂ ಇರುತ್ತದೆ.”
ತಾಲಿಬ್ ಜಮ್ಮುವಿನ ಕಥುವಾ ಜಿಲ್ಲೆಯ ಸಣ್ಣ ಬಕರ್ವಾಲ್ ನೆಲೆಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದು ಅರೆ-ಶಾಶ್ವತ ನೆಲೆಯಾಗಿದೆ, ಮತ್ತು ಇಲ್ಲಿನ ಯಾವುದೇ ನಿವಾಸಿಗಳಿಗೆ ಭೂಮಿಯ ಮೇಲೆ ಹಕ್ಕುಗಳಿಲ್ಲ.
ಕಳೆದ ದಶಕದಲ್ಲಿ, ಈ ಅರೆ ಅಲೆಮಾರಿ ಸಮುದಾಯದ ಅನೇಕ ಯುವಕರು ತಮ್ಮ ಸಾಂಪ್ರದಾಯಿಕ ಗ್ರಾಮೀಣ ಜೀವನದಿಂದ ದೂರ ಸರಿದು ಉನ್ನತ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಣವಿದ್ದವರು ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಓದುತ್ತಿದ್ದಾರೆ. ಉಳಿದಂತೆ ರಾಜಕೀಯ ಮತ್ತು ನಾಗರಿಕ ಸೇವಾ ಉದ್ಯೋಗಗಳಲ್ಲಿಯೂ ವೃತ್ತಿಜೀವನವನ್ನು ಹುಡುಕುತ್ತಿದ್ದಾರೆ.
ಬಕರ್ವಾಲ್ ಕುಟುಂಬಗಳಲ್ಲಿ ಎರಡು ಗಂಡು ಮಕ್ಕಳಿದ್ದಾಗ ಅವರಲ್ಲಿ ಒಬ್ಬರು ಕುರಿಗಳನ್ನು ನೋಡಿಕೊಂಡರೆ ಇನ್ನೊಬ್ಬರು ಹೊರಗೆ ಕೆಲಸಕ್ಕಾಗಿ ಪ್ರಯತ್ನಿಸುತ್ತಾರೆ. ತಾಲಿಬ್ ಕಸಾಣ ತನ್ನ ಓದನ್ನು ಮುಂದುವರೆಸುವ ಯೋಚನೆಯಲ್ಲಿದ್ದಾರೆ, ಆದರೆ ಅವರ ತಮ್ಮನಿಗೆ ಕುರಿ ಮೇಯಿಸುವ ಕೆಲಸ ಇಷ್ಟವಿಲ್ಲ. ಅವರೂ ಹೊರಗೆ ಕೆಲಸ ಹುಡುಕಲು ಬಯಸುತ್ತಿದ್ದಾರೆ. ಆದರೆ ಅಣ್ಣ ತಮ್ಮನಿಗೆ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾರೆ, “ನಮ್ಮಂತಹವರಿಗೆ ಹೊರಗೆ ಕೆಲಸ ಅಷ್ಟು ಸುಲಭವಾಗಿ ಸಿಗುವುದಿಲ್ಲ” ಎಂದು.
ಕಥುವಾ ಜಿಲ್ಲೆಯ ಬೈರಾ ಕುಪಾಯಿ ಗ್ರಾಮದಲ್ಲಿ ವಾಸಿಸುವ ಬಕರ್ವಾಲ್ ಸಮುದಾಯಕ್ಕೆ ಸೇರಿದವರಾದ ಹಿರಿಯ ಮುನಬ್ಬರ್ ಅಲಿ ತಾಲಿಬ್ ಅವರ ಮಾತುಗಳಲ್ಲಿ ತಾಲಿಬ್ ಅವರ ಅನಿಸಿಕೆಗಳೇ ಪ್ರತಿಧ್ವನಿಸುತ್ತವೆ. "ನನ್ನ ಮಗಳು 12ನೇ ತರಗತಿ ಉತ್ತೀರ್ಣಳಾಗಿ ಮನೆಯಲ್ಲಿ ಕುಳಿತಿದ್ದಾಳೆ."
ವೃತ್ತಿಯಲ್ಲಿ ಬಡಗಿಯಾಗಿರುವ ಮುನಬ್ಬರ್ ಅಲಿ ತನ್ನ ಮಗಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. "ನಮ್ಮ ಮಕ್ಕಳು ಪದವಿ ಪಡೆದರೂ, ಅದರಿಂದ ಅವರ ಬದುಕಿನಲ್ಲಿ ಯಾವುದೇ ವ್ಯತ್ಯಾಸವಾಗುತ್ತಿಲ್ಲ. ಅವರಿಗೆ ಉನ್ನತ ಸ್ಥಾನಗಳು ಸಿಗುವುದಿಲ್ಲ.
ಇದರ ಹೊರತಾಗಿಯೂ ಬಕರ್ವಾಲ್ ಕುಟುಂಬಗಳು ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡಲು ಸಿದ್ಧರಿದ್ದಾರೆ. ಮೊಹಮ್ಮದ್ ಹನೀಫ್ ಜಟ್ಲಾ ಜಮ್ಮು ಜಿಲ್ಲೆಯ ಸಂಧಿ ಗ್ರಾಮದಲ್ಲಿ ಬಕರ್ವಾಲ್ ಕುಟುಂಬದಲ್ಲಿ ಜನಿಸಿದರು. ಆರು ಮಕ್ಕಳಲ್ಲಿ ಒಬ್ಬರಾದ ಅವರು ತಮ್ಮ ಮೊದಲ ಕೆಲವು ವರ್ಷಗಳನ್ನು ಕುರಿ, ಆಡು ಮತ್ತು ಕುದುರೆಗಳ ಸುತ್ತ ಕಳೆದರು. ಒಂದು ದಿನ ಇದ್ದಕ್ಕಿದ್ದಂತೆ ಅವರ ತಾಯಿ ತೀರಿಕೊಂಡ ನಂತರ ಅವರ ಕುಟುಂಬವ ಅವರ ಅಜ್ಜನ ಉಳಿತಾಯದ ಹಣವನ್ನು ಬಳಸಿ ಅವರನ್ನುಶಾಲೆಗೆ ಸೇರಿಸಿತು.
ಹನೀಫ್ ಅವರು ಕಾಲೇಜಿನಲ್ಲಿದ್ದ ಸಮಯದಲ್ಲಿ, “ನನ್ನ ತಂದೆ ತಮ್ಮಲ್ಲಿದ್ದ ಎಲ್ಲಾ ಜಾನುವಾರುಗಳನ್ನು ಕೊಟ್ಟು (0.25 ಎಕರೆ) ಎರಡು ಕನಾಲ್ ಭೂಮಿ ಖರೀದಿಸಿದರು.” ತನ್ನ ಕುಟುಂಬ ಒಂದೆಡೆ ನೆಲೆ ನಿಂತು, ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿಯಬೇಕೆನ್ನುವುದು ಅವರ ತಂದೆಯ ಆಸೆಯಾಗಿತ್ತು. ಅದಕ್ಕಾಗಿಯೇ ಅವರು ಭೂಮಿ ಖರೀದಿಸಿದರು ಎಂದು ಅವರು ಹೇಳಿದರು. ಪ್ರಸ್ತುತ ಹನೀಫ್ ಸ್ಥಳೀಯ ಸುದ್ದಿ ಸಂಸ್ಥೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಬಕರ್ವಾಲ್ ಸಮುದಾಯವನ್ನು ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿದೆ. 2013ರ ವರದಿಯ ಪ್ರಕಾರ ಅವರ ಒಟ್ಟು ಜನಸಂಖ್ಯೆ 1,13,198. ಈ ಸಮುದಾಯದ ಬಹುತೇಕರ ಬಳಿ ಭೂಮಿಯ ಮಾಲಕತ್ವವಿಲ್ಲ. ಸಾರ್ವಜನಿಕ ಭೂಮಿಯ ಗಾತ್ರ ಕುಗ್ಗುತ್ತಿರುವುದರಿಂದಾಗಿ ಅವರ ಹುಲ್ಲುಗಾವಲು, ಭೂಮಿ, ಮತ್ತು ಶಾಶ್ವತ ಮನೆಯ ಹಕ್ಕುಗಳು ವಿವಾದಾಸ್ಪದವಾಗಿವೆ.
ಜಮ್ಮು ಜಿಲ್ಲೆಯ ಬಜಲ್ಟಾ ಪಟ್ಟಣದ ಬಳಿಯ ನೆಲೆಗಳ ಗುಂಪಿನ ಪರ್ವೇಜ್ ಚೌಧರಿ, ದಶಕಗಳಿಂದ ಒಂದೇ ಸ್ಥಳದಲ್ಲಿ ವಾಸಿಸುತ್ತಿದ್ದರೂ, ಅವರ ಸಮುದಾಯದ ಸದಸ್ಯರಿಗೆ ತಮ್ಮ ಭೂಮಿಯ ಮೇಲೆ ಯಾವುದೇ ದಾಖಲೆಗಳು ಅಥವಾ ಹಕ್ಕುಗಳು ದೊರೆತಿಲ್ಲ ಎಂದರು. ಮೇವು ಮತ್ತು ಕೃಷಿ ಭೂಮಿಯ ಅನೇಕ ಭಾಗಗಳಿಗೆ ಈಗ ಕಾಂಪಾ (ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ) ಅಡಿಯಲ್ಲಿ ಬೇಲಿ ಹಾಕಲಾಗುತ್ತಿದೆ ಮತ್ತು ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ, ಇದು ದೊಡ್ಡ ಪ್ರಮಾಣದ ಒಕ್ಕಲೆಬ್ಬಿಸುವಿಕೆಗೆ ಕಾರಣವಾಗಿದೆ.
“ಬಕರ್ವಾಲ್ ಸಮುದಾಯದ ಹೆಚ್ಚಿನ ಜನರು ಸರ್ಕಾರಿ ಅಥವಾ ಅರಣ್ಯ ಭೂಮಿಗಳಲ್ಲಿ ವಾಸಿಸುತ್ತಿದ್ದಾರೆ. ಸರಕಾರ ಇದನ್ನೂ ನಮ್ಮಿಂದ ಕಿತ್ತುಕೊಂಡರೆ ನಾವು ಎಲ್ಲಿಗೆ ಹೋಗುವುದು?” ಎಂದು ಕೇಳುತ್ತಾರೆ ಎಂದು ವಿಜಯಪುರ ಬಳಿಯ ಬಕರ್ವಾಲ್ ಕಾಲೋನಿಯಲ್ಲಿ ವಾಸಿಸುವ 30 ರ ಹರೆಯದ ಮೊಹಮ್ಮದ್ ಯೂಸುಫ್ ಮತ್ತು ಫಿರ್ದೋಸ್ ಅಹ್ಮದ್.
ಇಲ್ಲಿನ ಅವರ ಕಾಲೋನಿಯಲ್ಲಾಗಲೀ ಅಥವಾ ತಾಲಿಬ್ ವಾಸಿಸುವ ಬೈರಾ ಕುಪೈಯಲ್ಲಿಯಾಗಲೀ ಯಾವುದೇ ನಾಗರಿಕ ಸೌಲಭ್ಯಗಳಿಲ್ಲ. ಅರಣ್ಯ ಇಲಾಖೆಯಿಂದ ಆಗಾಗ್ಗೆ ಎದುರಾಗುವ ಬೆದರಿಕೆಗಳಿಂದಾಗಿ ನಮ್ಮ ತಾತ್ಕಾಲಿಕ ಮನೆಗಳನ್ನು ಶಾಶ್ವತ ಮನೆಗಳನ್ನಾಗಿ ಪರಿವರ್ತಿಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಅವರು ದೂರುತ್ತಾರೆ. ಅವರ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಸೌಲಭ್ಯವಿಲ್ಲದಿರುವುದೂ ಅವರನ್ನು ಚಿಂತೆಗೆ ಈಡು ಮಾಡಿದೆ. “ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದಾಗ ಅವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಬಹಳ ತೊಂದರೆಯಾಗುತ್ತದೆ.”
ಪರಿ ಈ ಸಮುದಾಯದ ಜನರೊಡನೆ ಮಾತನಾಡುತ್ತಿರುವಾಗ ಸಮುದಾಯದ ಹೆಂಗಸರು ತಲೆಯ ಮೇಲೆ ಭಾರದ ನೀರಿನ ಕೊಡಗಳನ್ನು ಹೊತ್ತು ಎತ್ತರದ ಬೆಟ್ಟ ಏರುತ್ತಿರುವುದು ಕಾಣುತ್ತಿತ್ತು. ಒಂದೆರಡು ಗಂಟೆಗಳ ನಂತರ ನಾವು ಹೊರಡುವಾಗ ಅವರು ಹಲವು ಬಾರಿ ಗುಡ್ಡ ಹತ್ತಿಳಿದು ನೀರು ಸಾಗಿಸಿದ್ದರು.
ನಹೀಲಾ ಜಮ್ಮುವಿನ ಯುವ ವಿದ್ಯಾರ್ಥಿ ಕಾರ್ಯಕರ್ತೆಯಾಗಿದ್ದು, ಬಕರ್ವಾಲ್ ಸಮುದಾಯದ ಕಾನೂನು, ಭೂಮಿ ಮತ್ತು ಸಾಂಸ್ಕೃತಿಕ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಬಕರ್ವಾಲ್ ಯುವಕರು ತಮ್ಮ ಜೀವನವನ್ನು ಬದಲಾಯಿಸಬಹುದು ಎಂದು ಅವರು ನಂಬುತ್ತಾರೆ. "ಶಿಕ್ಷಣ, ಭೂ ಹಕ್ಕುಗಳು ಮತ್ತು ಉತ್ತಮ ಸೌಲಭ್ಯಗಳು ಮತ್ತು ಸರ್ಕಾರದಿಂದ [ಉತ್ತಮ ಸೌಲಭ್ಯಗಳಿಗಾಗಿ] ಬೆಂಬಲಕ್ಕಾಗಿ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳುತ್ತಾರೆ.
ಅವರ ಉಳಿದ ಬೇಡಿಕೆಗಳೊಡನೆ ಬಕರ್ವಾಲ್ ಯುವಕರು ಅಲೆಮಾರಿಗಳ ಅಗತ್ಯಗಳ ಕುರಿತು ಸರಿಯಾದ ಸಮೀಕ್ಷೆ ಮತ್ತು ಉತ್ತಮ ಆಶ್ರಯವನ್ನು ಸಹ ಒದಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಜೊತೆಗೆ ಅವರು ಸರ್ಕಾರಿ ಸಂಸ್ಥೆಗಳು ಮತ್ತು ಆಯೋಗಗಳಲ್ಲಿ ಬುಡಕಟ್ಟು ಪ್ರಾತಿನಿಧ್ಯವನ್ನು ಬಯಸುತ್ತಾರೆ.
ಪಹಾಡಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿದೆ - ಈ ಕ್ರಮದಿಂದ ಎಸ್‌ಟಿ ಕೋಟಾದಡಿ ಸಿಗುವ ಸೌಲಭ್ಯಗಳಿಗೆ ಸ್ಪರ್ಧೆ ಹೆಚ್ಚಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.
ಸಾಂಪ್ರದಾಯಿಕ ಕಸುಬುಗಳನ್ನು ನಡೆಸುವುದು ಅಥವಾ ಇತರ ಉದ್ಯೋಗಗಳಿಗೆ ಹೋಗುವುದರ ನಡುವಿನ ಗೊಂದಲದಲ್ಲಿ, ಪೆಹ್ಲಿಯ ಬಕರ್ವಾಲ್ ಅಬ್ದುಲ್ ರಶೀದ್ ಹೇಳುತ್ತಾರೆ, " ನಾ ಯಹಾಂ ಕೇ , ನಾ ವಂಹಾ ಕೇ [ನಾವು ಇಲ್ಲಿಗೂ ಸೇರಿದವರಲ್ಲ, ಅಲ್ಲಿಗೂ ಸೇರಿದವರಲ್ಲ].”
ಅನುವಾದ: ಶಂಕರ. ಎನ್. ಕೆಂಚನೂರು