ಲಿಂಬ್ಡಿ ಹೆದ್ದಾರಿಯಿಂದ ಸುಮಾರು 10-12 ಕಿಲೋಮೀಟರ್ ದೂರದಲ್ಲಿರುವ ಮೋಟಾ ಟಿಂಬ್ಲಾ ಗ್ರಾಮದವರೆಗೆ ಸುಸಜ್ಜಿತ ರಸ್ತೆ ವಿಸ್ತರಿಸಿದೆ. ಗ್ರಾಮದ ಅಂಚಿನಲ್ಲಿ ವಂಕರ್ವಾಸ್ ಎನ್ನುವ ಊರಿದೆ, ಇದು ಇಲ್ಲಿನ ದಲಿತ ನೇಕಾರ ಸಮುದಾಯಗಳ ಮನೆಗಳಿಗೆ ಗೊತ್ತುಪಡಿಸಿದ ಸ್ಥಳ. ಹಳೆಯ ಶೈಲಿಯ, ಹೆಂಚಿನ ಛಾವಣಿಯ ಮನೆಗಳು ಮತ್ತು ಕೆಲವು ಗುಡಿಸಲುಗಳ ಮನೆಗಳ ನಡುವಿನ ಕಿರಿದಾದ ಓಣಿಗಳಲ್ಲಿ ಶಟಲ್ ಮಗ್ಗಗಳ ಖಟಾ-ಖಟ್... ಎನ್ನುವ ಲಯಬದ್ಧ ಶಬ್ದಗಳು ಪ್ರತಿಧ್ವನಿಸುತ್ತವೆ, ಅಪರೂಪಕ್ಕೊ ಮಾನವ ಸನಿ ಈ ಸದ್ದನ್ನು ಕಲಕುತ್ತದೆ. ಇಲ್ಲಿ ನೀವು ಸೂಕ್ಷ್ಮವಾಗಿ ಆಲಿಸಿದರೆ ಶ್ರಮದ ಶಬ್ದವನ್ನು ಸಹ ಕೇಳಬಹುದು. ಹಾಗೇ ಆಲಿಸುತ್ತಾ ಸಾಗಿದರೆ ಟಪ್ ಟಪ್ ಎನ್ನುವ ರೇಖಾ ಬೆನ್ ಅವರ ಬದುಕಿನ ಮುನ್ನುಡಿಯಂತಹ ಮಗ್ಗದ ದನಿಯೊಂದು ಸಹ ನಿಮಗೆ ಕೇಳುತ್ತದೆ.
"ನಾನು 8ನೇ ತರಗತಿ ಓದಲು ಹೋಗಿ ಕೇವಲ ಮೂರು ತಿಂಗಳಾಗಿತ್ತು. ಆಗ ನಾನು ಲಿಂಬ್ಡಿಯ ಹಾಸ್ಟೆಲ್ಲಿನಲ್ಲಿದ್ದೆ. ಆಗಷ್ಟೇ ಮೊದಲ ಶಾಲಾ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದೆ. ಅಂದು ಇನ್ನು ನಾನು ಶಾಲೆಗೆ ಹೋಗುವಂತಿಲ್ಲ ಎಂದು ನನ್ನ ತಾಯಿ ಹೇಳಿದರು. ನನ್ನ ಅಣ್ಣ ಗೋಪಾಲ್ ಭಾಯಿಗೆ ಕೆಲಸದಲ್ಲಿ ಸಹಾಯದ ಅಗತ್ಯವಿತ್ತು. ಜೀವನೋಪಾಯಕ್ಕಾಗಿ ಅವರು ಪದವಿ ಪಡೆಯುವ ಮೊದಲೇ ಶಾಲೆಯನ್ನು ತೊರೆದಿದ್ದರು. ನನ್ನ ಇಬ್ಬರು ಸಹೋದರರನ್ನು ಓದಿಸುವಷ್ಟು ನಮ್ಮ ಕುಟುಂಬ ಎಂದೂ ಬಲಾಢ್ಯವಾಗಿರಲಿಲ್ಲ. ಹೀಗೆ ನಾನು ಪಟೋಲಾ ಕೆಲಸವನ್ನು ಪ್ರಾರಂಭಿಸಿದೆ." ಬಡತನದಿಂದ ರೂಪುಗೊಂಡ ಇತರ ಎಲ್ಲ ವಿಷಯಗಳಂತೆ ರೇಖಾ ಬೆನ್ ಅವರ ಮಾತುಗಳು ಸಹ ನೇರ ಮತ್ತು ತೀಕ್ಷ್ಣವಾಗಿದ್ದವು,. ಈಗ 40ರ ಹರೆಯದಲ್ಲಿರುವ ಅವರು ಗುಜರಾತ್ ರಾಜ್ಯದ ಸುರೇಂದ್ರನಗರ ಜಿಲ್ಲೆಯ ಮೋಟಾ ಟಿಂಬ್ಲಾ ಗ್ರಾಮದ ಅನುಭವಿ ನೇಕಾರರು.
"ನನ್ನ ಪತಿ ಮದ್ಯ, ಜೂಜಾಟ, ಪಾನ್ ಮಸಾಲಾ, ತಂಬಾಕಿನ ವ್ಯಸನಿಯಾಗಿದ್ದರು" ಎಂದು ಹೇಳುತ್ತಾ ಅವರು ಬದುಕಿನ ಇನ್ನೊಂದು ಎಳೆಯನ್ನು ಬಿಚ್ಚಿಡತೊಡಗಿದರು. ಈ ಎಳೆ ಒಂದಷ್ಟು ಅಸಂತುಷ್ಟವಾದದ್ದು. ಅವರು ಆಗಾಗ ಗಂಡನನ್ನು ತೊರೆದು ತವರಿಗೆ ಬರುತ್ತಿದ್ದರು. ಆದರೆ ಅವರ ಮನವೊಲಿಸಿ ಮತ್ತೆ ಕಳುಹಿಸಲಾಗುತ್ತಿತ್ತು. ಅವರು ಅಸಹಾಯಕರಾಗಿದ್ದರು ಹೀಗಾಗಿ ಎಲ್ಲವನ್ನೂ ಸಹಿಸಿದರು. “ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಮನುಷ್ಯನಾಗಿರಲಿಲ್ಲ ಆತ” ಎಂದು ಅವರು ಈಗ ಹೇಳುತ್ತಾರೆ.
“ಅವನು ನಾನು ಬಸುರಿಯಾಗಿದ್ದ ಸಮಯದಲ್ಲೂ ಒಮ್ಮೊಮ್ಮೆ ಹೊಡೆಯುತ್ತಿದ್ದ” ಎನ್ನುತ್ತಾರೆ. ಅವರ ದನಿಯಲ್ಲಿ ಆ ಗಾಯಗಳ ತೀವ್ರತೆಯನ್ನೂ ಈಗಲೂ ನೋಡಬಹುದಿತ್ತು. “ನನಗೆ ಮಗಳು ಹುಟ್ಟಿದ ನಂತರ ಅವನಿಗೆ ಇನ್ನೊಂದು ಸಂಬಂಧವಿರುವುದು ತಿಳಿಯಿತು. ಒಂದು ವರ್ಷದ ನಾನು ಸುಮ್ಮನಿದ್ದೆ. ಅದೇ ಸಂದರ್ಭದಲ್ಲಿ ಗೋಪಾಲ್ ಭಾಯ್ ಅಪಘಾತದಲ್ಲಿ (2010 ರಲ್ಲಿ) ನಿಧನರಾದರು. ಆಗ ಅವರ ಪಟೋಲಾ ಕೆಲಸಗಳು ಬಾಕಿಯಾಗಿದ್ದವು. ಗೋಪಾಲ್ ತನ್ನ ಕೆಲಸಕ್ಕೆ ಸಾಮಾಗ್ರಿಗಳನ್ನು ತಂದ ಅಂಗಡಿಗೆ ಹಣ ಕೊಡುವುದು ಬಾಕಿಯಿತ್ತು. ಕೊನೆಗೆ ನಾನು ಮುಂದಿನ ಐದು ತಿಂಗಳು [ತವರಿನಲ್ಲಿ] ಉಳಿದು ಅವರ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿದೆ. ಅದರ ನಂತರ, ಗಂಡ ನನ್ನನ್ನು ಕರೆದೊಯ್ಯಲು ಬಂದರು" ಎಂದು ಅವರು ಹೇಳುತ್ತಾರೆ.
ಮುಂದಿನ ಕೆಲವು ವರ್ಷಗಳನ್ನು ತಾನು ಸಂತೋಷವಾಗಿದ್ದೇನೆ ಎಂದು ತನಗೆ ತಾನೇ ಸುಳ್ಳು ಹೇಳಿಕೊಂಡು ಕಳೆಯತೊಡಗಿದರು. ಜೊತೆಗೆ ಮಗುವನ್ನೂ ನೋಡಿಕೊಳ್ಳಬೇಕಿದ್ದ ಕಾರಣ ಹೊತ್ತು ಹೋಗುತ್ತಿತ್ತು. “ಕೊನೆಗೆ ಮಗಳಿಗೆ ನಾಲ್ಕೂವರೆ ವರ್ಷ ಪ್ರಾಯವಾಗಿರುವಾಗ ಇನ್ನು ಚಿತ್ರಹಿಂಸೆ ಸಹಿಸಲು ಸಾಧ್ಯವಿಲ್ಲ ಎನ್ನಿಸಿ ಅಲ್ಲಿಂದ ಹೊರಟೆ” ಎನ್ನುತ್ತಾರೆ ರೇಖಾ ಬೆನ್. ಶಾಲೆ ತೊರೆದ ನಂತರ ಕಲಿತಿದ್ದ ಪಟೋಲಾ ನೇಯುವ ಕೌಶಲ ಈಗ ಅವರ ಸಹಾಯಕ್ಕೆ ಬಂದಿತ್ತು. ಇದು ಅವರ ಬಡತನದಿಂದ ಹರಿದ ಬಟ್ಟೆಯಂತಾಗಿದ್ದ ಬದುಕಿಗೆ ಒಂದಷ್ಟು ನುಣುಪು ತಂದಿತು. ಅವರ ಬದುಕಿಗೆ ಈಗ ಹೊಸದೊಂದು ಆರಂಭ ದೊರಕಿತ್ತು. ಅದು ಬಲವಾಗಿತ್ತು.
ಕೆಲವೇ ದಿನಗಳಲ್ಲಿ ರೇಖಾ ಬೆನ್ ಸುತ್ತಮುತ್ತಲಿನ ಹಳ್ಳಿಗಳ ಏಕೈಕ ಪಟೋಲಾ ನೇಕಾರ ಮಹಿಳೆ ಎಂದು ಗುರುತಿಸಿಕೊಂಡರು. ಅವರು ಹಾಸೆಳೆ ಮತ್ತು ಅಡ್ಡೆಳೆಗಳನ್ನು ಸುಲಭವಾಗಿ ಹೊಂದಿಸುವ ಕೌಶಲವನ್ನು ಪಳಗಿಸಿಕೊಂಡಿದ್ದಾರೆ.
“ಆರಂಭದಲ್ಲಿ ನಾನು ದಂಡಿ ಕೆಲಸಕ್ಕಾಗಿ ನಮ್ಮ ಎದುರು ಮನೆಗೆ ಹೋಗುತ್ತಿದ್ದೆ. ನನಗೆ ಅದನ್ನು ಕಲಿಯಲು ಹೆಚ್ಚುಕಡಿಮೆ ಒಂದು ತಿಂಗಳು ಹಿಡಿದಿತ್ತು” ಎಂದು ರೇಖಾ ಬೆನ್ ಹೇಳುತ್ತಾರೆ. ಅವರು ನಮ್ಮೊಂದಿಗೆ ಮಾತಾಡುತ್ತಿರುವಾಗಲೇ ಮಗ್ಗದ ಶಟಲ್ ಹೊಂದಿಸುತ್ತಿದ್ದರು. ಅವರು ಅನುಭವಿ ಒರಟು ಕೆನ್ನೆಯನ್ನು ಒರೆಸಿಕೊಂಡು ಮೊಣಕೈಯನ್ನು ಮಗ್ಗದ ಮೇಲಿಟ್ಟುಕೊಂಡು ಕೆಲಸ ಮುಂದುವರೆಸಿದರು. ಅವರು ವಾರ್ಪ್ (ಉದ್ದದ ದಾರ) ಮತ್ತು ವೆಫ್ಟ್‌ನ (ಅಡ್ಡ ದಾರ) ಉದ್ದಕ್ಕೂ ದಾರಗಳ ಮಾದರಿಯನ್ನು ಎಚ್ಚರಿಕೆಯಿಂದ ಹೊಂದಿಸತೊಡಗಿದರು.
ಶಟಲ್ ಒಳಗಿದ್ದ ಖಾಲಿ ಕದಿರನ್ನು ತೆಗೆದು ಇನ್ನೊಂದನ್ನು ಹಾಕಿದ ಅವರು ನಂತರ ಮಗ್ಗದ ಪೆಡಲ್ ತುಳಿಯತೊಡಗಿದರು. ಈ ಮೂಲಕ ಅವರು ತಾನು ಬಯಸಿದ ಎಳೆ ಹಾದು ಹೋಗುವಂತೆ ಮಾಡುತ್ತಿದ್ದರು. ಒಂದು ಕೈ ಕಂಟ್ರೋಲಿಂಗ್ ಲೀವರ್ ಎಳೆಯುತ್ತಿದ್ದರೆ ಇನ್ನೊಂದು ಕೈ ವೇಗವಾಗಿ ಬೀಟರ್ ಎಳೆದು ವೆಫ್ಟ್ ದಾರ ಬಂದು ಕೂರುವಂತೆ ಮಾಡುತ್ತಿತ್ತು. ಒಬ್ಬಂಟಿಯಾಗಿ ಪಟೋಲು ನೇಯುವ ರೇಖಾ ಬೆನ್ ಅವರ ಕಣ್ಣುಗಳು ಮಗ್ಗದ ಮೇಲಿದ್ದರೆ, ಅವರ ಮನಸ್ಸು ಮುಂದೆ ಮೂಡಬೇಕಿರುವ ವಿನ್ಯಾಸವನ್ನು ಊಹಿಸುತ್ತಿತ್ತು. ಅವರು ತಮ್ಮ ಕರಕುಶಲತೆ ಮತ್ತು ಬದುಕು ಎರಡರ ಕುರಿತಾಗಿಯೂ ಒಂದೇ ಉಸಿರಿನಲ್ಲಿ ಮಾತನಾಡುತ್ತಿದ್ದರು.
ಸಾಂಪ್ರದಾಯಿಕವಾಗಿ, ಪಟೋಲು ನೇಯ್ಗೆಗೆ ಕನಿಷ್ಠ ಇಬ್ಬರು ವ್ಯಕ್ತಿಗಳು ಬೇಕು. "ದಂಡಿ ಕೆಲಸವನ್ನು ಮಾಡುವ ಸಹಾಯಕ ಎಡಭಾಗದಲ್ಲಿ ಕುಳಿತುಕೊಂಡರೆ, ನೇಕಾರ ಬಲಭಾಗದಲ್ಲಿ ಕುಳಿತುಕೊಳ್ಳುತ್ತಾನೆ" ಎಂದು ಅವರು ವಿವರಿಸುತ್ತಾರೆ. ದಂಡಿ ಕೆಲಸವು ನೇಯ್ಗೆ ಮಾಡಲಾಗುತ್ತಿರುವ ಪಟೋಲುವಿನ ಪ್ರಕಾರವನ್ನು ಅವಲಂಬಿಸಿ ಹಾಸೆಳೆ ಅಥವಾ ಅಡ್ಡ ಎಳೆ ಅಥವಾ ಎರಡರ ಬಣ್ಣದ ದಾರಗಳನ್ನು ಹೊಂದಿಸುವುದನ್ನು ಒಳಗೊಂಡಿರುತ್ತದೆ.
ಪ್ರತಿ ಬಟ್ಟೆಯ ತುಂಡಿಗೆ ವ್ಯಯಿಸಿದ ಸಮಯ ಮತ್ತು ಶ್ರಮವನ್ನು ನೋಡಿದಾಗ ನೇಯ್ಗೆ ಪ್ರಕ್ರಿಯೆ ಸಂಕೀರ್ಣವಾಗಿ ಕಾಣುತ್ತದೆ. ಆದರೆ ರೇಖಾ ಬೆನ್ ತಮ್ಮ ಕೌಶಲ ಮತ್ತು ಕೈಚಳಕದಿಂದ ಅದು ಸುಲಭವೆನ್ನುವ ಹಾಗೆ ಕಾಣುವಂತೆ ಮಾಡುತ್ತಾರೆ. ನೇಯ್ಗೆಯ ಸಂಪೂರ್ಣ ಸಂಕೀರ್ಣ ಪ್ರಕ್ರಿಯೆಯು ಕಣ್ಣುಗಳಲ್ಲಿನ ಮಾಂತ್ರಿಕ ಕನಸಿನಂತೆ ಅವರ ಬೆರಳ ತುದಿಯಲ್ಲಿ ತೆರೆದುಕೊಳ್ಳುತ್ತದೆ.
“ಸಿಂಗಲ್ ಇಕಾತ್ ನೇಯ್ಗೆಯಲ್ಲಿ ವಿನ್ಯಾಸವು ಅಡ್ಡ ದಾರದಲ್ಲಿ ಮಾತ್ರ ಇರುತ್ತದೆ. ಆದರೆ ಡಬಲ್ ಇಕಾತ್ ನೇಯ್ಗೆಯಲ್ಲಿ ಅಡ್ಡ ಮತ್ತು ಉದ್ದ ಎರಡೂ ವಿನ್ಯಾಸವನ್ನು ಹೊಂದಿರುತ್ತವೆ. ಅವರು ಎರಡೂ ಬಗೆಯ ಪಟೋಲಾಗಳ ನಡುವಿನ ವ್ಯತ್ಯಾಸವನ್ನು ಈ ರೀತಿ ವಿವರಿಸಿದರು.
ಇದೇ ಎರಡು ವಿಧಾನಗಳನ್ನು ಪ್ರತ್ಯೇಕಿಸುವ ವಿನ್ಯಾಸವಾಗಿ ಕೆಲಸ ಮಾಡುತ್ತದೆ. ವಿಝಾಲಾವಾಡದ ಪಟೋಲಾ ಬೆಂಗಳೂರಿನ ಉತ್ತಮ ರೇಷ್ಮೆಯಿಂದ ತಯಾರಿಸಿದ ಏಕೈಕ ಇಕಾತ್ ಪ್ರಕಾರದ್ದು, ಆದರೆ ಪಟಾಣ್ ಪಟೋಲಾಗಳು ಅಸ್ಸಾಂ, ಢಾಕಾ ಅಥವಾ ಇಂಗ್ಲೆಂಡ್ ದೇಶದ ದಪ್ಪ ರೇಷ್ಮೆಯನ್ನು ಬಳಸಿ ಡಬಲ್ ಇಕಾತ್ ತಯಾರಿಸಲಾಗುತ್ತದೆ ಎಂದು ಇಲ್ಲಿನ ನೇಕಾರರು ಹೇಳುತ್ತಾರೆ.
ಇಕಾತ್ ಎಂದು ಕರೆಯಲ್ಪಡುವ ಸಂಕೀರ್ಣ ಕಟ್ಟುವ ಮತ್ತು ಡೈಯಿಂಗ್ ಪ್ರಕ್ರಿಯೆಯ ನೇಯ್ಗೆಯನ್ನು ತೆಲಂಗಾಣ ಅಥವಾ ಒಡಿಶಾದಂತಹ ಭಾರತದ ಅನೇಕ ಭಾಗಗಳಲ್ಲಿ ನೇಕಾರರು ಅನುಸರಿದ್ದಾರೆ. ಆದರೆ, ಸ್ಥಳ ವಿಶೇಷದ ಹೊರತಾಗಿ, ಗುಜರಾತಿ ಪಟೋಲಾವನ್ನು ವಿಶಿಷ್ಟವಾಗಿಸುವ ಅಂಶವೆಂದರೆ ಅದರ ಸಂಕೀರ್ಣ ಮತ್ತು ಸ್ಪಷ್ಟ ವಿನ್ಯಾಸಗಳು ಮತ್ತು ರೇಷ್ಮೆಯ ಸ್ಪಷ್ಟ ಬಣ್ಣಗಳು. ಇದರ ಅಂತಿಮ ಉತ್ಪನ್ನಗಳು ದುಬಾರಿ ಮತ್ತು ರಾಜ ಪೋಷಣೆಯ ಇತಿಹಾಸವನ್ನು ಹೊಂದಿವೆ.
ಪಡಿ ಪಟೋಲೆ ಭಾತ್, ಫಾಟೆ ಪಾನ್ ಫೀಟೆ ನಹೀ. ಇದೊಂದು ಜನಪ್ರಿಯ ಗುಜರಾತಿ ಗಾದೆ. ಇದರ ಪ್ರಕಾರ ಪಟೋಲಾ ವಿನ್ಯಾಸ ಎಂದಿಗೂ ಮಸುಕಾಗುವುದಿಲ್ಲ, ಅದು ಹರಿದ ನಂತರವೂ ಅದರ ವಿನ್ಯಾಸ ಉಳಿದಿರುತ್ತದೆ. ಪಟೋಲಾ ವಿನ್ಯಾಸದ ವಿಶೇಷ ಏನು ಎನ್ನುವುದು ಮತ್ತೊಂದು ಸಂಕೀರ್ಣ ಕಥೆ. ಅದನ್ನು ಇನ್ನೊಮ್ಮೆ ಕೇಳಬಹುದು.
ರೇಖಾ ಬೆನ್ ತನ್ನ ಗಂಡನ ಮನೆಯನ್ನು ತೊರೆದ ನಂತರ ಅವರ ಬದುಕು ಅಷ್ಟು ಸುಖದಿಂದೇನೂ ಕೂಡಿರಲಿಲ್ಲ. ಆ ಸಮಯಕ್ಕೆ ಅವರು ನೇಯ್ಗೆಯನ್ನು ಬಿಟ್ಟು ಬಹಳ ಸಮಯವಾಗಿತ್ತು. ಅದಕ್ಕೆ ಮರಳುವುದು ಕಷ್ಟವಿತ್ತು. "ನಾನು ಇಬ್ಬರು ಅಥವಾ ಮೂರು ಜನರೊಂದಿಗೆ ಮಾತನಾಡಿದೆ, ಆದರೆ ಯಾರೂ ನನ್ನನ್ನು ಕೆಲಸದ ವಿಷಯದಲ್ಲಿ ನಂಬಲಿಲ್ಲ" ಎಂದು ಅವರು ಹೇಳುತ್ತಾರೆ. "ಸೋಮಸರ್ ಎನ್ನುವ ಊರಿನ ಜಯಂತಿ ಭಾಯ್ ನನಗೆ ನಿಗದಿತ ವೇತನಕ್ಕೆ ನೇಯ್ಗೆ ಮಾಡಲು ಆರು ಸೀರೆಗಳನ್ನು ನೀಡಿದರು. ಆದರೆ ನಾಲ್ಕು ವರ್ಷಗಳ ಅಂತರದ ನಂತರ ನಾನು ಕೆಲಸಕ್ಕೆ ಕುಳಿತಿದ್ದೆ, ಮತ್ತು ಸೀರೆಯ ಫಿನಿಷಿಂಗ್ ನಿರೀಕ್ಷಿಸಿದಷ್ಟು ಉತ್ತಮವಾಗಿರಲಿಲ್ಲ. ಅವರಿಗೆ ನನ್ನ ಕೆಲಸ ಅನನುಭವಿಯ ಕೆಲಸದಂತೆ ಕಂಡಿತು – ಮುಂದೆ ಅವರು ನನಗೆ ಮತ್ತೊಂದು ಅವಕಾಶವನ್ನು ನೀಡಲಿಲ್ಲ. ಅವರು ಸದಾ ಏನಾದರೂ ನೆಪ ಹೇಳುತ್ತಿದ್ದರು" ಎಂದು ರೇಖಾ ಬೆನ್ ನಿಟ್ಟುಸಿರು ಬಿಡುತ್ತಾ ಹೇಳುತ್ತಾರೆ. ಒಟ್ಟಾರೆ ಮಾದರಿಗೆ ನಿರ್ಣಾಯಕವಾದ ಹಾಸೆಳೆಗಳ ನಿಖರವಾದ ಜೋಡಣೆಗೆ ತೊಂದರೆಯಾಯಿತೇ ಎಂದು ನನಗೆ ಅನ್ನಿಸುತ್ತಿತ್ತು.
ʼಕೆಲಸ ಕೇಳಬೇಕೋ, ಬೇಡವೋʼ ಎನ್ನುವ ಗೊಂದಲದಲ್ಲೇ ದಿನಗಳು ಸರಿಯುತ್ತಿದ್ದವು. ಬಡತನ ತೀವ್ರಗೊಂಡಿತು. ಕೆಲಸದ ವಿಷಯದಲ್ಲಿ ರೇಖಾ ಬೆನ್ ಭಿಕ್ಷೆ ಬೇಡುವುದಕ್ಕೂ ಸಿದ್ಧರಿದ್ದರು. ಆದರೆ ಹಣ ಬೇಡಲು ಅಲ್ಲಿ ಹೆಮ್ಮೆ ಅಡ್ಡಬಂದಿತು. “ಕೊನೆಗೆ ನಾನು ನನ್ನ ಫುಯಿಯ ಮಗನ [ತಂದೆಯ ಸಹೋದರಿಯ ಮಗ] ಬಳಿ ಮಾತನಾಡಿದೆ. ಅವನು ನನಗೆ ಕೆಲಸ ಕೊಟ್ಟ. ಈ ಬಾರಿ ಕೆಲಸದ ಗುಣಮಟ್ಟ ಒಂದಷ್ಟು ಅಭಿವೃದ್ಧಿ ಕಂಡಿತ್ತು. ಅವನಿಗೆ ಅದು ಇಷ್ಟವಾಯಿತು. ಮುಂದಿನ ಒಂದೂವರೆ ವರ್ಷ ನಾನು ಅವರ ಬಳಿ ಸಂಬಳಕ್ಕೆ ಕೆಲಸ ಮಾಡಿದೆ. ಅದು ಸಿಂಗಲ್ ಇಕಾತ್ ನೇಯ್ಗೆಯಾಗಿತ್ತು. ಮತ್ತು ಒಂದು ಪಟೋಲಾ ಸೀರೆಗೆ 700 ರೂಪಾಯಿ ಕೊಡುತ್ತಿದ್ದರು. ಎಂದು ರೇಖಾ ಬೆನ್ ನೆನಪಿಸಿಕೊಳ್ಳುತ್ತಾರೆ. "ನಾನು ಮತ್ತು ನನ್ನ ಅತ್ತಿಗೆ [ಗೋಪಾಲ್ ಭಾಯ್ ಅವರ ಪತ್ನಿ] ಒಟ್ಟಿಗೆ ಕೆಲಸ ಮಾಡಿ ಒಂದು ಸೀರೆಯನ್ನು ಮೂರು ದಿನಗಳಲ್ಲಿ ನೇಯುತ್ತಿದ್ದೆವು." ಆ ಪ್ರತಿ ದಿನವೂ ಹತ್ತು ಗಂಟೆಗಳ ನೇಯ್ಗೆಯ ಶ್ರಮವಿರುತ್ತಿತ್ತು. ಇತರ ಕೆಲಸಗಳಿಗೆ ಉಳಿದ ಸಮಯ ಹೋಗುತ್ತಿತ್ತು.”
ಈ ಸಣ್ಣ ಸಂಪಾದನೆ ಅವರ ನಿರಂತರ ಕಲಹ ಪೀಡಿತ ಬದುಕಿಗೆ ಒಂದಷ್ಟು ಸಾಂತ್ವನ ನೀಡಿತ್ತು. ಒಂದು ದೀರ್ಘ ಉಸಿರು ಬಿಟ್ಟು ಅವರು ಹೇಳತೊಡಗಿದರು “ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ನಾನು ಸ್ವತಂತ್ರವಾಗಿ ಕೆಲಸ ಮಾಡುವುದು ಒಳ್ಳೆಯದೆನ್ನಿಸಿತು. ಕಚ್ಚಾ ವಸ್ತುಗಳನ್ನು ನಾನೇ ಖರೀದಿಸಿ ಹೊರಗಿನಿಂದ ಮಗ್ಗವನ್ನು ಸಿದ್ಧಪಡಿಸಿಕೊಂಡೆ. ಮಗ್ಗ ಸಿದ್ಧವಾದ ನಂತರ, ನಾನು ಹಾಸೆಳೆ ತಂದು ಮನೆಯಲ್ಲೇ ನೇಯ್ಗೆ ಮಾಡಲು ಆರಂಭಿಸಿದೆ.
“ಈ ಬಾರಿ ಯಾವುದೇ ಬೇಡಿಕೆ ಪಡೆದುಕೊಂಡು ನೇಯ್ಗೆ ಆರಂಭಿಸಿರಲಿಲ್ಲ” ಎಂದು ಅವರು ಹೆಮ್ಮೆಯ ನಗುವಿನೊಂದಿಗೆ ಅಂದ ಅವರು, “ನಾನೇ ಸ್ವತಃ ಪಟೋಲಾ ನೇಯ್ಗೆ ಆರಂಭಿಸಿದೆ. ನೇಯ್ದ ಪಟೋಲಾಗಳನ್ನು ಮನೆಯಿಂದಲೇ ಮಾರಲು ಆರಂಭಿಸಿದೆ. ನಂತರ ದಿನಗಳಲ್ಲಿ ನಿಧಾನವಾಗಿ ಉತ್ಪಾದನೆ ಹೆಚ್ಚಿಸತೊಡಗಿದೆ” ಎಂದು ಹೇಳಿದರು. ಅದೊಂದು ಅದ್ಭುತ ಸಾಧನೆಯಾಗಿತ್ತು. ದುರ್ಬಲ ಬದುಕಿನಿಂದ ಅವರು ಸ್ವತಂತ್ರ ಬದುಕಿನತ್ತ ಚಲಿಸಿದ್ದರು. ಇದೆಲ್ಲದರ ನಡುವೆಯೂ ಅವರನ್ನು ಒಂದು ಕೊರತೆ ಕಾಡುತ್ತಿತ್ತು. ಅದು ಡಬಲ್ ಇಕಾತ್ ನೇಯ್ಗೆಯ ಕೌಶಲದ ಜ್ಞಾನ ಇಲ್ಲದಿರುವುದು.
“ಕೊನೆಗೆ ನಾನು ನನ್ನ ಚಿಕ್ಕಪ್ಪನ ಬಳಿ ಈ ಕುರಿತು ತರಬೇತಿ ಪಡೆದೆ. ಅದನ್ನು ಕಲಿಯಲು ಸುಮಾರು ಒಂದೂವರೆ ತಿಂಗಳು ಹಿಡಿಯಿತು” ಎಂದು ಅವರು ಹೇಳಿದರು. ಆಗ ಅವರ ಮಗಳಿನ್ನೂ ಚಿಕ್ಕವಳಿದ್ದಳು. ಅವಳು 4ನೇ ತರಗತಿ ಓದುತ್ತಿದ್ದಳು. ಗಂಡನ ಮನೆ ಕಡೆಯಿಂದ ಯಾವುದೇ ಸಂಪರ್ಕವಿಲ್ಲದೆ ಹೋದ ಕಾರಣ ಆರ್ಥಿಕ ಹೊರೆ ಅವರ ಮೇಲೆ ದೊಡ್ಡ ಮಟ್ಟದಲ್ಲೇ ಇತ್ತು. ಆದರೆ ರೇಖಾ ಬೆನ್ ಎದೆಗುಂದಲಿಲ್ಲ. “ನಾನು ನನ್ನ ಉಳಿತಾಯದ ಹಣವನ್ನೆಲ್ಲ ಕಚ್ಚಾ ವಸ್ತು ಖರೀದಿಗಾಗಿ ಖರ್ಚು ಮಾಡಿದೆ. ರೇಶ್ಮೆ ನೂಲು ಖರೀದಿಸಿದ ನಾನು ಅದರಿಂದ ಹದಿನಾರು ಪಟೋಲಾಗಳಿಗೆ ವಿನ್ಯಾಸಗಳ ಜೊತೆಗೆ ನೂಲನ್ನು ಸಿದ್ಧಪಡಿಸಿದೆ” ಎಂದು ಅವರು ಹೇಳುತ್ತಾರೆ.
"ಈ ಕೆಲಸವನ್ನು ಮಾಡಲು ಕನಿಷ್ಠ ಮೂರು ಜನ ಬೇಕು. ಆದರೆ ನಾನು ಒಬ್ಬಂಟಿಯಾಗಿದ್ದೆ. ಆ ಸಮಯದಲ್ಲಿ ನಾನು ಗೊಂದಲಕ್ಕೊಳಗಾಗಿದ್ದೆ. ಪಾಸಿ ವಿಚಾರು ಜೆ ಕರ್ವಾನು ಛೆ ಇ ಮರಾಜ್ ಕರ್ವಾನು ಸೇ. ಮನ್ ಮಕ್ಕಂ ಕರಿ ಲಿಧು ಪಾಸಿ. [ಆದರೆ ನನಗೆ ನಾನೇ ಹೇಳಿಕೊಂಡೆ, ʼಏನೇ ಮಾಡುವುದಿದ್ದರೂ ನಾನೇ ಮಾಡಬೇಕುʼ.]" ಆದರೂ, ಕೆಲವೊಮ್ಮೆ ಸಹಾಯದ ಅಗತ್ಯವಿದ್ದಾಗ, ಸಮುದಾಯದ ಜನರು ಸಹಾಯ ಮಾಡಲು ಮುಂದೆ ಬಂದರು: ಬೀದಿಯ ಎರಡು ಕಂಬಗಳಿಗೆ ಬಣ್ಣದ ಹಾಸೆಳೆಗಳನ್ನು ಸುತ್ತಿ ಅದಕ್ಕೆ ಗಂಜಿ ಮತ್ತು ಬಲದ ಲೇಪನ ಮಾಡಲು; ಬೀಮ್ ಮೇಲೆ ಗಂಜಿ ಹಚ್ಚಿರುವ ಹಾಸು ದಾರಗಳನ್ನು ಸುತ್ತಲು; ಮಗ್ಗದ ಮೇಲೆ ಬೀಮ್ ಸರಿಪಡಿಸಲು; ಬೀಮಿನಲ್ಲಿರುವ ನೂಲಿನ ದಾರಗಳನ್ನು ಫೆನ್ ಮೂಲಕ ಸರಿಯಾದ ಕ್ರಮದಲ್ಲಿ (ಡೈಯಿಂಗ್ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ) ಸಂಪರ್ಕಿಸಲು ಮತ್ತು ಕೈಮಗ್ಗವನ್ನು ನೇಯ್ಗೆಗೆ ಸಿದ್ಧಗೊಳಿಸಲು.
ದಾರಗಳಿಗೆ ಗಂಜಿ ಹಚ್ಚುವುದು ಬಹಳ ನಾಜೂಕಿನ ಕೆಲಸ. ನೂಲಿನ ಮೇಲೆ ಹಿಟ್ಟು ಹೆಚ್ಚು ಅಂಟಿಕೊಂಡರೆ ಅದು ಇಲಿ ಮತ್ತು ಹಲ್ಲಿಗಳನ್ನು ಮಗ್ಗದ ಬಳಿ ಆಕರ್ಷಿಸುವ ಸಾಧ್ಯತೆಯಿರುತ್ತದೆ.
“ಡಬಲ್ ಇಕಾತ್ ನೇಯ್ಗೆ ಅಷ್ಟು ಸುಲಭವಾಗಿರಲಿಲ್ಲ. ನಾನು ತಪ್ಪುಗಳನ್ನು ಮಾಡಿದ್ದೆ. ಅಡ್ಡ ಎಳೆ ಮತ್ತು ಹಾಸು ಎಳೆ ಜೋಡಣೆಯಲ್ಲಿ ತಪ್ಪಾಗುತ್ತಿತ್ತು. ಅದನ್ನು ಕಲಿಯಲು ನಾನು ಹೊರಗಿನಿಂದ ಜನರನ್ನು ಕರೆಸಬೇಕಾಯಿತು. ಆದರೆ ಒಂದೇ ಬಾರಿ ಕರೆದರೆ ಯಾರೂ ಬರುವುದಿಲ್ಲ. ಅವರ ಬಳಿ ನಾಲ್ಕೈದು ಸಲ ಹೋಗಿ ವಿನಂತಿಸಬೇಕಿತ್ತು. ಆದರೆ ನಂತರ ಎಲ್ಲವೂ ನನ್ನ ನಿಯಂತ್ರಣಕ್ಕೆ ಬಂದವು.” ಅವರ ನಗುವಿನಲ್ಲಿ ಅನಿಶ್ಚಿತತೆ, ಭಯ, ಗೊಂದಲ, ಧೈರ್ಯ ಮತ್ತು ನಿರಂತರತೆಯೊಂದಿಗೆ ಬೆರೆತ ತೃಪ್ತಿಯ ಭಾವವೂ ಇತ್ತು. ಇಲ್ಲಿ ಎಲ್ಲವೂ ನಿಯಂತ್ರಣಕ್ಕೆ ಬರುವುದೆಂದರೆ ಈಗ ಅವರು ಹಾಸು ದಾರಗಳನ್ನು ಅಡ್ಡ ಎಳೆಯೊಂದಿಗೆ ಸರಿಯಾಗಿ ಹೊಂದಿಸಬಲ್ಲರು. ಈಗ ಬಟ್ಟೆಯ ಮೇಲಿನ ವಿನ್ಯಾಸದಲ್ಲಿ ತಪ್ಪುಗಳಾಗುವುದಿಲ್ಲ. ಇದೆಲ್ಲ ಸಾಧ್ಯವಾಗದೆ ಹೋದರೆ ಪಟೋಲು ಖರೀದಿದಾರನಿಗಿಂತಲೂ ನೇಕಾರರ ಪಾಲಿಗೆ ಹೆಚ್ಚು ದುಬಾರಿಯಾಗಬಲ್ಲದು.
ಸಂಕೀರ್ಣವಾದ ಡಬಲ್ ಇಕಾತ್ ಪಟೋಲಾ ಪಟಾಣ್ ಮಾದರಿಯಿಂದ ಬಂದಿದ್ದು. "ಪಟಾಣ್ ನೇಕಾರರು ರೇಷ್ಮೆಯನ್ನು ಇಂಗ್ಲೆಂಡಿನಿಂದ ತರಿಸುತ್ತಾರೆ, ನಾವು ಬೆಂಗಳೂರಿನಿಂದ ತರಿಸುತ್ತೇವೆ. ಅನೇಕ ವ್ಯಾಪಾರಿಗಳು ಪಟೋಲಾವನ್ನು ರಾಜಕೋಟ್ ಅಥವಾ ಸುರೇಂದ್ರನಗರದಿಂದ ಖರೀದಿಸಿ ಅದರ ಮೇಲೆ ಪಟಾಣ್ ಸ್ಟಾಂಪ್ ಹಾಕುತ್ತಾರೆ" ಎಂದು ಗ್ರಾಮದ ಮತ್ತೊಬ್ಬ ನೇಕಾರ ವಿಕ್ರಮ್ ಪರ್ಮಾರ್ (58) ತಮ್ಮ ಅನುಭವದಿಂದ ಹೇಳುತ್ತಾರೆ.
"ನಮ್ಮಿಂದ ಐವತ್ತು, ಅರವತ್ತು, ಎಪ್ಪತ್ತು ಸಾವಿರ ರೂಪಾಯಿಗಳಿಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಅವರೂ ಸಹ ನೇಯ್ಗೆ ಮಾಡುತ್ತಾರೆ ಆದರೆ ಅವರು ಇದನ್ನು ಅಗ್ಗವಾಗಿ ಕಾಣುತ್ತಾರೆ" ಎಂದು ವಿಕ್ರಮ್ ಹೇಳುತ್ತಾರೆ. ಹಳ್ಳಿಯ ಒಂದಕ್ಕಿಂತ ಹೆಚ್ಚು ನೇಕಾರರು ಪಟಾಣ್ ಸ್ಟಾಂಪ್ ಹೊಂದಿರುವ ಝಾಲಾವಾಡದ ಅಗ್ಗದ ಪಟೋಲಾ ದೊಡ್ಡ ನಗರಗಳಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುವ ಕಥೆಯನ್ನು ಹೇಳುತ್ತಾರೆ. ಇದು ಬಹಳ ಸಮಯದಿಂದ ನಡೆಯುತ್ತಿದೆ.
ಸುಮಾರು ನಲವತ್ತು ವರ್ಷಗಳ ಹಿಂದೆ, ರೇಖಾ ಬೆನ್ ಅವರಿಗಿಂತ ಹಿಂದಿನ ಪೀಳಿಗೆಯ 70 ವರ್ಷದ ಹಮೀರ್ ಭಾಯ್, ಪಟೋಲಾ ನೇಯ್ಗೆಯನ್ನು ಲಿಂಬ್ಡಿ ತಾಲೂಕಿಗೆ ತಂದರು.
"ಅರ್ಜನ್ ಭಾಯ್ ನನ್ನನ್ನು ಭಯವದರ್ ಎನ್ನುವಲ್ಲಿಂದ ರಾಜ್ ಕೋಟ್ ಪ್ರದೇಶಕ್ಕೆ ಕರೆತಂದರು" ಎಂದು ಹಮೀರ್ ಭಾಯ್ ಲಿಂಬ್ಡಿಯ ಕಟಾರಿಯಾ ತಾವು ಗ್ರಾಮಕ್ಕೆ ಬಂದ ಕತೆಯನ್ನು ನೆನಪಿಸಿಕೊಳ್ಳುತ್ತಾರೆ. "ಸುಮಾರು ಒಂದು ಅಥವಾ ಎರಡು ತಿಂಗಳು ನನ್ನನ್ನು ಒಂದು ಕಾರ್ಖಾನೆಯಿಂದ ಇನ್ನೊಂದಕ್ಕೆ ವರ್ಗಾಯಿಸಲಾಯಿತು. ಒಮ್ಮೆ ಮಾಲೀಕರು ನನ್ನನ್ನು ಕೇಳಿದರು: 'ಹೌದಾ? [ನೀವು ಯಾವ ಜಾತಿಯವರು?] ಮತ್ತು ನಾನು 'ವಂಕರ್' ಎಂದು ಹೇಳಿದೆ. ಅಷ್ಟೆ. ಅವರು 'ಕಲ್ ಥಿ ನೋ ಆವತಾ, ತಮಾರಾ ಭೇಗು ಪಾನಿ ನಾಥ್ ಪೀವು' [ನಾಳೆಯಿಂದ ಬರಬೇಡಿ; ನಾವು ನಿಮ್ಮಿಂದ ನೀರನ್ನು ಸಹ ಕುಡಿಯುವುದಿಲ್ಲ.]ʼ ಅದರ ನಂತರ, ಮೋಹನ್ ಭಾಯ್ ಮಕ್ವಾನಾ ಒಮ್ಮೆ ನನ್ನ ಬಳಿ ಪಟೋಲಾ ನೇಯ್ಗೆ ಕಲಿಯಲು ಬಯಸುತ್ತೀರಾ ಎಂದು ಕೇಳಿದರು. ದಿನಕ್ಕೆ ಐದು ಕೂಲಿಯೊಂದಿಗೆ ಕೆಲಸ ಆರಂಭಿಸಿದೆ. ಆರು ತಿಂಗಳು ವಿನ್ಯಾಸದ ಕುರಿತು ಕಲಿತೆ, ನಂತರ ಮುಂದಿನ ಆರು ತಿಂಗಳು ನೇಯ್ಗೆಯನ್ನು ಕಲಿತೆ" ಎಂದು ಅವರು ಹೇಳುತ್ತಾರೆ. ಅದರ ನಂತರ ಅವರು ಕಟಾರಿಯಾಕ್ಕೆ ಮರಳಿ ನೇಯ್ಗೆಯನ್ನು ಮುಂದುವರೆಸುವುದರ ಜೊತೆಗೆ ಇತರರಿಗೂ ಕಲಿಸಿದರು.
"ನಾನು ಕಳೆದ ಐವತ್ತು ವರ್ಷಗಳಿಂದ ನೇಯ್ಗೆ ಮಾಡುತ್ತಿದ್ದೇನೆ" ಎಂದು ಮತ್ತೊಬ್ಬ ನೇಕಾರ ಪೂಂಜಾ ಭಾಯ್ ವಾಘೇಲಾ ಹೇಳುತ್ತಾರೆ. "ನೇಯ್ಗೆ ಪ್ರಾರಂಭಿಸಿದ ಸಮಯದಲ್ಲಿ ನಾನು 3ನೇ ತರಗತಿಯಲ್ಲಿದ್ದೆ. ಮೊದಲು ಖಾದಿ ಕೆಲಸ ಮಾಡುತ್ತಿದ್ದೆ. ನಂತರ ಪಟೋಲಾ ಆರಂಭಿಸಿದೆ. ಚಿಕ್ಕಪ್ಪ ನನಗೆ ಪಟೋಲಾ ನೇಯ್ಗೆಯನ್ನು ಕಲಿಸಿದರು. ಅಂದಿನಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಎಲ್ಲವೂ ಒಂದೇ ಇಕಾತ್, ಏಳರಿಂದ ಎಂಟು ಸಾವಿರ ರೂಪಾಯಿಗಳು. "ನಾವು, ಗಂಡ ಮತ್ತು ಹೆಂಡತಿ, ಸುರೇಂದ್ರನಗರದಲ್ಲಿ ಪ್ರವೀಣ್ ಭಾಯ್ ಅವರ ಬಳಿ ಕೆಲಸ ಮಾಡುತ್ತಿದ್ದೆವು, ಮತ್ತು ಈಗ ಕಳೆದ ಆರೇಳು ತಿಂಗಳುಗಳಿಂದ ನಾವು ರೇಖಾ ಬೆನ್ ಅವರ ಬಳಿ ಕೆಲಸ ಮಾಡುತ್ತಿದ್ದೇವೆ" ಎಂದು ಅವರು ತಮ್ಮ ಪತಿ ಜಾಸು ಬೆನ್ ಅವರನ್ನು ತೋರಿಸುತ್ತಾರೆ.
"ಮಗ್ಗದಲ್ಲಿ ಅವರ ಪಕ್ಕದಲ್ಲಿ ಕುಳಿತು [ದಾರ ಜೋಡಣೆಗೆ ಸಹಾಯ ಮಾಡಿದರೆ] ನಮಗೆ ದಿನಕ್ಕೆ 200 ರೂಪಾಯಿಗಳು ಸಿಗುತ್ತವೆ. ನಾವು ಕೆಲವು, ಸಣ್ಣ ವಿನ್ಯಾಸ ಸಂಬಂಧಿತ ಕೆಲಸಗಳನ್ನು ಮಾಡಿದರೆ, ನಮಗೆ 60 ಅಥವಾ 70 ರೂಪಾಯಿಗಳು ಸಿಗಬಹುದು. ಮಗಳು ಊರ್ಮಿಳಾ ನೂಲಿಗೆ ಬಣ್ಣ ಹಾಕುವ ಕೆಲಸಕ್ಕಾಗಿ ರೇಖಾ ಬೆನ್ ಅವರ ಮನೆಗೆ ಹೋಗುತ್ತಾಳೆ. ಆಕೆಗೆ 200 ರೂಪಾಯಿಗಳ ದಿನಗೂಲಿ ಸಿಗುತ್ತದೆ. ಒಟ್ಟಾರೆ ಸಂಪಾದನೆಯಿಂದ ನಾವು ಮನೆ ನಡೆಸುತ್ತೇವೆ" ಎಂದು ಜಾಸು ಬೆನ್ ಹೇಳುತ್ತಾರೆ.
"ಈ ಲೂಮ್ ಶೂಮ್ ಮತ್ತು ಎಲ್ಲವೂ ರೇಖಾ ಬೆನ್ ಗೆ ಸೇರಿದ್ದು" ಎಂದು ತೇಗದ ಮರದ ಫ್ರೇಮನ್ನು ಸವರುತ್ತಾ ಪುಂಜಾ ಭಾಯ್ ಹೇಳುತ್ತಾರೆ. ಮಗ್ಗದ ಬೆಲೆ ಮಾತ್ರ 35-40,000 ರೂ.ಗಳವರೆಗೆ ಇರಬಹುದು. "ನಮ್ಮ ಬಳಿ ಇರುವುದು ನಮ್ಮ ದುಡಿಮೆ ಮಾತ್ರ. ಎಲ್ಲವನ್ನೂ ಒಟ್ಟುಗೂಡಿಸಿದರೆ, ನಾವು ತಿಂಗಳಿಗೆ ಸುಮಾರು ಹನ್ನೆರಡು ಸಾವಿರ ರೂಪಾಯಿ ಗಳಿಸುತ್ತೇವೆ", ಎಂದು ಪೂಂಜಾ ಭಾಯ್ ಹೇಳುತ್ತಾ ಅವರು ತಮ್ಮ ಬಡತನವನ್ನು ಕಷ್ಟಪಟ್ಟು ವಿವರಿಸಿದರು.
ವ್ಯಾಪಾರವು ಪ್ರಾರಂಭವಾಗುತ್ತಿದ್ದಂತೆ ರೇಖಾ ಬೆನ್ ಒಂದಷ್ಟು ನೇಯ್ಗೆ ಕೆಲಸವನ್ನು ಪೂಂಜಾ ಭಾಯ್ ಅವರಿಗೆ ಹೊರಗುತ್ತಿಗೆ ನೀಡಬೇಕಾಯಿತು. "ಬೆಳಿಗ್ಗೆ ಐದು ಗಂಟೆಗೆ ಎದ್ದು ರಾತ್ರಿ ಹನ್ನೊಂದಕ್ಕೆ ಮಲಗುತ್ತೇನೆ. ಎಲ್ಲಾ ಸಮಯದಲ್ಲೂ ಕೆಲಸ ಮಾಡುತ್ತಲೇ ಇರುತ್ತೇನೆ. ಮನೆ ಕೆಲಸಗಳನ್ನೂ ನಾನೇ ಮಾಡಿಕೊಳ್ಳಬೇಕು. ಸಮುದಾಯದ ಜನರೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಹೊರಗಿನ ಕೆಲಸವೂ ಸಹ ನನ್ನದೇ. ಇಡೀ ವ್ಯವಹಾರದ ಭಾರವೂ ನನ್ನ ತಲೆಯ ಮೇಲಿದೆ." ರೇಖಾ ಬೆನ್ ಬಾಬಿನ್ ಒಂದನ್ನು ಶಟಲ್‌ಗೆ ಜಾರಿಸಿ ಶಟಲ್ ಅನ್ನು ಬಲದಿಂದ ಎಡಕ್ಕೆ ಜಾರಿಸುತ್ತಾರೆ.
ನಾನು ಅಚ್ಚರಿಯಿಂದ ರೇಖಾ ಬೆನ್ ಅವರ ಕೈಗಳು ಮಗ್ಗದ ಮೇಲೆ ಸುಲಲಿತವಾಗಿ ಚಲಿಸುವುದನ್ನು ಅಚ್ಚರಿಯಿಂದ ನೋಡುತ್ತಿರುವಾಗಲೇ, ಕಬೀರರ ದೋಹೆಯೊಂದು ನೆನಪಾಯಿತು.
‘नाचे ताना नाचे बाना नाचे कूँच पुराना
करघै बैठा कबीर नाचे चूहा काट्या ताना'
ಹಾಸು ದಾರ ಮತ್ತು
ಹೊಕ್ಕು ದಾರ ಕುಣಿಯುತ್ತಿವೆ,
ಅದರೊಂದಿಗೆ ಹಳೆ ಕೂಂಚ್*
ಕೂಡಾ ಕುಣಿಯುತ್ತಿದೆ
ಕಬೀರ ಮಗ್ಗದ ನೃತ್ಯಕ್ಕೆ
ಮರುಳಾಗಿದ್ದರೆ
ಇಲಿ ಮಗ್ಗದಲ್ಲಿನ
ನೂಲು ಕತ್ತರಿಸುತ್ತಿದೆ
*ನೂಲನ್ನು ಸ್ವಚ್ಛಗೊಳಿಸಲು ಬಳಸುವ ಮೃದುವಾದ ಬ್ರಷ್
ಈ ಲೇಖನದ ವಿಷಯದಲ್ಲಿ ಒದಗಿಸಿದ ಸಹಾಯಕ್ಕಾಗಿ ಜೈಸುಖ್ ವಾಘೇಲಾ ಅವರಿಗೆ ಲೇಖಕ ಧನ್ಯವಾದ ಹೇಳಲು ಬಯಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು