ಸುಕುಮಾರ್ ಬಿಸ್ವಾಸ್ ಓರ್ವ ಸರ್ವೇ ಸಾಮಾನ್ಯ ಎಳನೀರು ಮಾರಾಟಗಾರರಲ್ಲ. ಬಾಯಾರಿದ ಗ್ರಾಹಕರಿಗೆ ಕುಡಿಯಲು ಎಳೆನೀರು ಕೊಚ್ಚುವಾಗ “ಅನ್ನವಿಲ್ಲದೆ ಬದುಕಬಲ್ಲೆ, ಆದರೆ ಹಾಡ ಹಾಡದೆ ಬದುಕಲಾರೆ” ಎಂದು ಹಾಡುವ ಅವರ ಹಾಡಿನ ಮೇಲಿನ ಪ್ರೀತಿ ಎಂದಿಗೂ ನಿಲ್ಲುವುದಿಲ್ಲ. ಶಾಂತಿಪುರದ ಲಂಕಾಪಾರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಅವರನ್ನು 'ದಾಬ್ದಾದು' (ಎಳೆನೀರು ಅಜ್ಜ) ಎಂದು ಕರೆಯುತ್ತಾರೆ.
70 ವರ್ಷ ವಯಸ್ಸಿನ ಇವರು ಒಂದು ಸ್ಟ್ರಾ ಜೊತೆಗೆ ಹಸಿರು ಹಸಿರಾದ ಎಳೆನೀರನ್ನು ಕೈಗಿಟ್ಟು, ನೀವು ಕುಡಿದು ಮುಗಿಸಿದ ಮೇಲೆ ಕಾಯನ್ನು ಬಗೆದು ಒಳಗಿರುವ ನುಣುಪಾದ ಸೀಯಾಳದ ಗಂಜಿಯನ್ನು ನಿಮಗೆ ಸ್ಕೂಪ್ ಮಾಡಿಕೊಡುತ್ತಾರೆ. ಆಗೆಲ್ಲಾ ಜಾನಪದ ಹಾಡುಗಳನ್ನು ಹಾಡುತ್ತಾರೆ. ಅವರು ಲಾಲೋನ್ ಫಕೀರ್, ಹಾಡುಗಾರ ಶಾ ಅಬ್ದುಲ್ ಕರೀಮ್, ಭಾಬಾ ಖ್ಯಾಪಾ ಇನ್ನಿತರರು ರಚಿಸಿದ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳಲ್ಲಿ ಅವರು ತಮ್ಮ ಜೀವನದ ಅರ್ಥವನ್ನು ಕಂಡುಕೊಳ್ಳುತ್ತಾರೆ ಎಂದು ಅವರೇ ಹೇಳುತ್ತಾರೆ. ಒಂದನ್ನು ವಾಕ್ಯವನ್ನು ಉಲ್ಲೇಖಿಸಿ ಅದನ್ನು ಪರಿಗಾಗಿ ಪ್ಯಾರಾಫ್ರೇಸ್ ಮಾಡುತ್ತಾ: “ಸತ್ಯ ಏನೆಂದು ನಮಗೆ ತಿಳಿದಾಗ ಮಾತ್ರ ನಾವು ಸತ್ಯವನ್ನು ತಲುಪಬಹುದು. ಸತ್ಯವನ್ನು ತಿಳಿಯಲು ನಾವು ನಮ್ಮೊಳಗೆ ಪ್ರಾಮಾಣಿಕತೆಯನ್ನು ಇಟ್ಟುಕೊಳ್ಳಬೇಕು. ನಾವು ಅಪ್ರಾಮಾಣಿಕತೆಯಿಂದ ಮುಕ್ತರಾದಾಗ ಮಾತ್ರ ಇತರರನ್ನು ಪ್ರೀತಿಸಲು ಸಾಧ್ಯ,” ಎಂದು ಹೇಳಿದರು.
ಅವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಮ್ಮ ಟೋಲಿಯನ್ನು (ಟ್ರೈಸೈಕಲ್ಗೆ ಜೋಡಿಸಲಾದ ವ್ಯಾನ್) ಓಡಿಸುವಾಗಲೂ ಹಾಡು ಹಾಡುವುದನ್ನು ನಿಲ್ಲಿಸುವುದಿಲ್ಲ. ಅವರ ಹಾಡನ್ನು ಕೇಳಿ ಜನರಿಗೆ ಸುಕುಮಾರ್ ಬಿಸ್ವಾಸ್ ಆ ಪ್ರದೇಶಕ್ಕೆ ಬಂದದ್ದು ಗೊತ್ತಾಗುತ್ತದೆ.
“ಎಳೆನೀರು ಬೇಡದವರು ನನ್ನ ಹಾಡುಗಳನ್ನು ಕೇಳಲು ಸ್ವಲ್ಪ ಸಮಯ ನಿಂತಿರುತ್ತಾರೆ. ಅವರು ಎಳೆನೀರನ್ನು ಖರೀದಿಸಬೇಕೇಂದೇನಿಲ್ಲ. ನಾನು ಹೆಚ್ಚು ಮಾರಾಟವನ್ನೂ ನಿರೀಕ್ಷಿಸುವುದಿಲ್ಲ. ನಾನು ಆಗಿದ್ದರಲ್ಲೇ ಸಂತೋಷ ಪಡುತ್ತೇನೆ,” ಎನ್ನುತ್ತಾ ಗ್ರಾಹಕರೊಂದಿಗೆ ವ್ಯವಹಾರವನ್ನು ಮುಂದುವರೆಸುತ್ತಾರೆ.
ಸುಕುಮಾರ್ ಅವರು ಜನಿಸಿದ್ದು ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯಲ್ಲಿ. ಅಲ್ಲಿ ಅವರ ತಂದೆ ಮೀನು ಹಿಡಿದು ಬದುಕು ಸಾಗಿಸುತ್ತಿದ್ದರು. ಸೀಸನ್ಗಳಲ್ಲಿ ಮೀನು ಹಿಡಿಯಲು ಸಾಧ್ಯವಾಗದೆ ಇದ್ದಾಗ ದಿನಗೂಲಿಯ ಕೆಲಸ ಮಾಡುತ್ತಿದ್ದರು. 1971 ರಲ್ಲಿ ಬಾಂಗ್ಲಾದೇಶದಲ್ಲಿ ಯುದ್ಧ ಪ್ರಾರಂಭವಾದಾಗ (ಆಗ ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು), ಹೆಚ್ಚಿನ ಸಂಖ್ಯೆಯ ಜನರು ಭಾರತಕ್ಕೆ ಬಂದು ಆಶ್ರಯ ಪಡೆದರು. ಅದರಲ್ಲಿ ಸುಕುಮಾರ್ ಕೂಡ ಒಬ್ಬರು. “ನಾವು ಈ ದೇಶಕ್ಕೆ ಬಂದಾಗ ನಾವು ನಿರಾಶ್ರಿತರಾಗಿದ್ದೆವು. ಹೆಚ್ಚಿನ ಜನರು ನಮ್ಮನ್ನು ಕರುಣೆಯಿಂದ ನೋಡಿಕೊಂಡರು,” ಎಂದು ಅವರು ಹೇಳುತ್ತಾರೆ. ಅವರು ಭಾರತಕ್ಕೆ ಬಂದಾಗ, ಅವರು ತಮ್ಮೊಂದಿಗೆ ತಂದದ್ದು ಮೀನು ಹಿಡಿಯುವ ಒಂದು ಬಲೆಯನ್ನು ಮಾತ್ರ.
ಸುಕುಮಾರ್ರವರ ಕುಟುಂಬ ಭಾರತಕ್ಕೆ ಮೊದಲು ಬಂದಿಳಿದದ್ದು ಪಶ್ಚಿಮ ಬಂಗಾಳದ ಶಿಕರ್ಪುರ ಗ್ರಾಮಕ್ಕೆ. ಕೆಲವು ತಿಂಗಳುಗಳ ಕಾಲ ಕೃಷ್ಣನಗರಕ್ಕೆ ತೆರಳಿದ ಅವರು, ಕೊನೆಯಲ್ಲಿ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್-ಅಜಿಮ್ಗಂಜ್ನಲ್ಲಿ ನೆಲೆನಿಂತರು. ಗಂಗಾ ನದಿಯಲ್ಲಿ ತನ್ನ ತಂದೆ ಮೀನು ಹಿಡಿಯುತ್ತಿದ್ದ ಬಗ್ಗೆ ಮಾತನಾಡುವಾಗ ಸುಕುಮಾರ್ ಅವರ ಕಣ್ಣುಗಳು ಹೊಳೆಯುತ್ತವೆ. ನಂತರ, “ಅವರು ಸ್ಥಳೀಯ ಮಾರ್ಕೆಟ್ಗೆ ಹೋಗಿ ಆ ಮೀನುಗಳನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡುತ್ತಿದ್ದರು. ಒಂದು ದಿನ ಮನೆಗೆ ಬಂದ ಅವರು ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ನಮಗೆ ಲಾಟರಿ ಹೊಡೆದಂತೆ ಆಗಿತ್ತು. ಆ ಮೀನುಗಳನ್ನು ಮೊದಲ ಸಲ ಮಾರಾಟ ಮಾಡಿ ನಮಗೆ 125 ರೂಪಾಯಿ ಸಿಕ್ಕಿತ್ತು. ಆಗ ಅದು ನಿಜವಾಗಿಯೂ ನಮಗೆ ದೊಡ್ಡ ಸಂಗತಿಯಾಗಿತ್ತು,” ಎಂದು ಹೇಳಿದರು.
ಯುವಕನಾಗಿ ಬೆಳೆಯುತ್ತಾ ಸುಕುಮಾರ್ ಬೇರೆ ಬೇರೆ ವೃತ್ತಿಗಳನ್ನು ಮಾಡಿದರು. ರೈಲಿನಲ್ಲಿ ವ್ಯಾಪಾರ, ನದಿಯಲ್ಲಿ ದೋಣಿಗಳನ್ನು ಓಡಿಸುವುದು, ದಿನಗೂಲಿ ಕಾರ್ಮಿಕನಾಗಿ ಮತ್ತು ಕೊಳಲು ಹಾಗೂ ದೋತಾರಾ ಮುಂತಾದ ಸಂಗೀತ ವಾದ್ಯಗಳನ್ನು ತಯಾರಿಸುವ ಕೆಲಸಗಳನ್ನು ಮಾಡಿದ್ದರು. ಆದರೆ ಯಾವ ವೃತ್ತಿಯನ್ನು ಮಾಡಿದರೂ ಹಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇಂದಿಗೂ ಬಾಂಗ್ಲಾದೇಶದ ನದಿತೀರಗಳಲ್ಲಿ, ಹಚ್ಚ ಹಸಿರ ಗದ್ದೆಗಳಲ್ಲಿ ಕಲಿತ ಹಾಡುಗಳೆಲ್ಲವೂ ಅವರ ನೆನಪಿನ ಜೋಳಿಗೆಯಲ್ಲಿವೆ.
ಸದ್ಯ ಸುಕುಮಾರ್ ಈಗ ತಮ್ಮ ಪತ್ನಿಯೊಂದಿಗೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಶಾಂತಿಪುರದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಹೆಣ್ಣುಮಕ್ಕಳಿಗೆ ಮದುವೆಯಾಗಿದ್ದು, ಮಗ ಮಹಾರಾಷ್ಟ್ರದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. “ನಾನು ಏನೇ ಮಾಡಿದರೂ ಅದನ್ನು ಅವರು ಒಪ್ಪಿಕೊಳ್ಳುತ್ತಾರೆ. ಅವರು ಯಾವಾಗಲೂ ನನ್ನೊಂದಿಗೆ ಸಹಕರಿಸುತ್ತಾರೆ. ನನ್ನ ದಿನದ ಗಳಿಕೆಯ ಬಗ್ಗೆ ನಾನು ಚಿಂತಿಸುವುದಿಲ್ಲ. ನಾನು ಹುಟ್ಟಿ ಇಷ್ಟು ವರ್ಷಗಳಾಗಿವೆ, ನನ್ನ ಉಳಿದ ಜೀವನವನ್ನು ನಾನು ಹೀಗೆಯೇ ಬದುಕಬಲ್ಲೆ ಎಂದು ನಂಬಿದ್ದೇನೆ,” ಎನ್ನುತ್ತಾರೆ ಸುಕುಮಾರ್.
ಅನುವಾದ: ಚರಣ್ ಐವರ್ನಾಡು