ಜಾನಪದ ಗೀತೆಗಳೆಂದರೆ ಸದಾ ಜ್ಞಾನವನ್ನು ಸಾಗಿಸುವ ವಾಹಕಗಳು. ಹಾಗೆಯೇ ಸಾಮಾಜಿಕ ಕಟ್ಟಪಾಡುಗಳ ವಾಹಕಗಳೂ ಹೌದು. ಆದರೆ ಅಲ್ಲಲ್ಲಿ ಅವುಗಳನ್ನು ಸಾಂಸ್ಕೃತಿಕ ಬದಲಾವಣೆ ಮತ್ತು ಜಾಗೃತಿ ಮೂಡಿಸುವ ಸಾಧನವಾಗಿಯೂ ಬಳಸಲಾಗಿದೆ. ಜಾನಪದ ಸಂಗೀತದ ಮೌಖಿಕತೆ, ಪ್ರತಿ ನಿರೂಪಣೆಯೊಂದಿಗೂ ಬದಲಾಗುವ ಸಾಮರ್ಥ್ಯ ಮತ್ತು ಎಲ್ಲಾ ಸನ್ನಿವೇಶಕ್ಕೂ ಹೊಂದಿಕೊಳ್ಳುವ ಗುಣ ಅದಕ್ಕೆ ಅದರ ಸಮಾಜದ ಮೂಲದಿಂದಲೇ ಬಂದಿದೆ.
ಈ ಹಾಡು ಜಾನಪದ ಸಂಗೀತದ ಈ ಪುನರುತ್ಪಾದಕ ಶಕ್ತಿಯನ್ನು ಬಳಸಿಕೊಂಡಿದೆ. ಇದು ಜಾಗೃತಿಯ ಸಂದೇಶವನ್ನು ಹರಡುತ್ತಲೇ, ಗ್ರಾಮೀಣ ಮಹಿಳೆಯರು ಎದುರಿಸುವ ಲಿಂಗಾಧಾರಿತ ತಾರತಮ್ಯದ ವಾಸ್ತವವನ್ನೂ ಕಣ್ಣ ಮುಂದೆ ತರುತ್ತದೆ. ಕಛ್ ಮತ್ತು ಅಹಮದಾಬಾದಿನ ಮಹಿಳಾ ಕಲಾವಿದರು ಹಾಡಿರುವ ಈ ಹಾಡು ಸಾಮಾಜಿಕ ವಿಮರ್ಶೆಯನ್ನು ಭಾವನಾತ್ಮಕ ಆಕರ್ಷಣೆಯೊಂದಿಗೆ ಪ್ರಸ್ತುತಪಡಿಸುತ್ತದೆ.
ಈ ಹಾಡಿನಲ್ಲಿನ ಒಂದು ವಿಶೇಷ ಅಂಶವೆಂದರೆ ಅದರ ಹಿನ್ನೆಲೆಯಲ್ಲಿ ನುಡಿಸಲಾಗಿರುವ ವಾದ್ಯಗಳಲ್ಲಿ ಒಂದಾದ ಜೋಡಿಯಾ ಪಾವಾ ಅಥವಾ ಅಲ್ಘೋಜಾ ಎನ್ನುವ ವಾದ್ಯ. ಇದು ಪಾಕಿಸ್ತಾನದ ಸಿಂಧ್ ಮತ್ತು ಭಾರತದ ಕಛ್, ರಾಜಸ್ಥಾನ ಮತ್ತು ಪಂಜಾಬಿನಂತಹ ವಾಯುವ್ಯ ಪ್ರದೇಶಗಳ ಕಲಾವಿದರು ಸಾಂಪ್ರದಾಯಿಕವಾಗಿ ನುಡಿಸುವ ಎರಡು ಕೊಳವೆಗಳಿರುವ ಗಾಳಿ ವಾದ್ಯವಾಗಿದೆ.
કચ્છી
પિતળ તાળા ખોલ્યાસી ભેણ ત્રામેં તાળા ખોલ્યાસી,
બાઈએ જો મન કોય ખોલેં નાંય.(૨)
ગોઠ જા ગોઠ ફિરયાસી, ભેણ ગોઠ જા ગોઠ ફિરયાસી,
બાઈએ જો મોં કોય નેરે નાંય. (૨)
પિતળ તાળા ખોલ્યાસી ભેણ ત્રામે તાળા ખોલ્યાસી,
બાઈએ જો મન કોય ખોલે નાંય. (૨)
ઘરજો કમ કરયાસી,ખેતીજો કમ કરયાસી,
બાઈએ જે કમ કે કોય લેખે નાંય.
ઘરજો કમ કરયાસી, ખેતીજો કમ કરયાસી
બાઈએ જે કમ કે કોય નેરે નાંય
ગોઠ જા ગોઠ ફિરયાસી, ભેણ ગોઠ જા ગોઠ ફિરયાસી,
બાઈએ જો મોં કોય નેરે નાંય.
ચુલુ બારયાસી ભેણ,માની પણ ગડયાસી ભેણ,
બાઈએ કે જસ કોય મિલ્યો નાંય. (૨)
ગોઠ જા ગોઠ ફિરયાસી ભેણ ગોઠ જા ગોઠ ફિરયાસી,
બાઈએ જો મોં કોય નેરે નાંય. (૨)
સરકાર કાયધા ભનાય ભેણ,કેકે ફાયધો થ્યો ભેણ,
બાઈએ કે જાણ કોઈ થિઈ નાંય (૨)
ગોઠ જા ગોઠ ફિરયાસી ભેણ ગોઠ જા ગોઠ ફિરયાસી,
બાઈએ જો મોં કોય નેરે નાંય (૨)
ಕನ್ನಡ
ಹಿತ್ತಾಳೆ ಬೀಗ
ತೆರೆದಿರಿ, ತಾಮ್ರದ ಬೀಗ ತೆರೆದಿರಿ ನೀವು
ಏನು ತೆರೆದರೆ ಏನು
ಬಂತು ನೀವು
ಅವಳ ಹೃದಯದ ಬೀಗ
ತೆರೆಯಲಾರದೆ ಹೋದಿರಿ ನೀವು
ಅವಳ ಒಳ ಮನಸು ಅರಿಯದೆ
ಹೋದಿರಿ ನೀವು(2)
ಊರಿಂದ ಊರಿಗೆ ಅಲೆಯುತ್ತೀರಿ
ನೀವು
ಪರದೆಯ ಹಿಂದಡಗಿದ
ಅವಳ ಮುಖವ ಕಾಣಲಾರಿರಿ ನೀವು
ಅವಳ ಭಾವನೆಗಳು
ಏನೆಂದು ಅರಿಯಲಿಲ್ಲ ಯಾರೂ. (2)
ಹಿತ್ತಾಳೆ ಬೀಗ
ತೆರೆದಿರಿ, ತಾಮ್ರದ ಬೀಗ ತೆರೆದಿರಿ ನೀವು
ಏನು ತೆರೆದರೆ ಏನು
ಬಂತು ನೀವು
ಅವಳ ಹೃದಯದ ಬೀಗ
ತೆರೆಯಲಾರದೆ ಹೋದಿರಿ ನೀವು
ಅವಳ ಒಳ ಮನಸು ಅರಿಯದೆ
ಹೋದಿರಿ ನೀವು(2)
ಮನೆಯಲ್ಲಿ ದುಡಿಯುತ್ತೇವೆ
ನಾವು, ಹೊಲದಲ್ಲಿ ದುಡಿಯುತ್ತೇವೆ ನಾವು
ನಾವು ಮಾಡುವ ಕೆಲಸಗಳ
ಕಣ್ಣೆತ್ತಿ ನೋಡುವವರು ಯಾರು?
ಊರಿಂದ ಊರಿಗೆ ಅಲೆಯುತ್ತೀರಿ
ನೀವು
ಪರದೆಯ ಹಿಂದಡಗಿದ
ಅವಳ ಮುಖವ ಕಾಣಲಾರಿರಿ ನೀವು
ಅವಳ ಭಾವನೆಗಳು
ಏನೆಂದು ಅರಿಯಲಿಲ್ಲ ಯಾರೂ. (2)
ನಿಮ್ಮ ಅಡುಗೆ ಮನೆಯ
ಒಲೆ ಉರಿಸುತ್ತೇವೆ ನಾವು,
ರೊಟ್ಟಿಯನ್ನು ತಟ್ಟುತ್ತೇವೆ
ನಾವು
ಆದರೂ ಯಾರಿಗೂ ಅನ್ನಿಸುವುದಿಲ್ಲ
ನಮಗೊಂದು ಕೃತಜ್ಞತೆ
ಹೇಳಬೇಕೆಂದು
ಯಾರಿಗೂ ಅನ್ನಿಸುವುದಿಲ್ಲ
ನಮ್ಮ ಶ್ರಮವನ್ನು
ಹೊಗಳಬೇಕೆಂದು(2)
ಊರಿಂದ ಊರಿಗೆ ಅಲೆಯುತ್ತೀರಿ
ನೀವು
ಪರದೆಯ ಹಿಂದಡಗಿದ
ಅವಳ ಮುಖವ ಕಾಣಲಾರಿರಿ ನೀವು
ಅವಳ ಭಾವನೆಗಳು
ಏನೆಂದು ಅರಿಯಲಿಲ್ಲ ಯಾರೂ. (2)
ರಾಜ ಹೊಸ ಕಾನೂನು
ತರುತ್ತಾನೆ
ಆದರೆ ಅದರ ಲಾಭ
ಪಡೆಯುವವರು ಯಾರು ಅಕ್ಕ?
ಹೆಣ್ಣು ಮಕ್ಕಳಿಗೆ
ವಿಷಯ ತಿಳಿಸುವುದಿಲ್ಲ ಯಾರೂ(2)
ಊರಿಂದ ಊರಿಗೆ ಅಲೆಯುತ್ತೀರಿ
ನೀವು
ಪರದೆಯ ಹಿಂದಡಗಿದ
ಅವಳ ಮುಖವ ಕಾಣಲಾರಿರಿ ನೀವು
ಅವಳ ಭಾವನೆಗಳು
ಏನೆಂದು ಅರಿಯಲಿಲ್ಲ ಯಾರೂ. (2)
ಹಾಡಿನ ಪ್ರಕಾರ : ಪ್ರಗತಿಶೀಲ
ಕ್ಲಸ್ಟರ್ : ಸ್ವಾತಂತ್ರ್ಯ ಮತ್ತು ಜಾಗೃತಿಯ ಹಾಡುಗಳು
ಹಾಡು : 8
ಹಾಡಿನ ಶೀರ್ಷಿಕೆ : ಪಿತ್ತಳ್ ತಾಳಾ ಖೋಲ್ಯಾಸಿ, ಬೆಣ್ ತ್ರಮೇಂ ತಾಳಾ ಖೋಲ್ಯಾಸಿ
ಸಂಗೀತ : ದೇವಲ್ ಮೆಹ್ತಾ
ಗಾಯಕರು : ಕಛ್ ಮತ್ತು ಅಹಮದಾಬಾದ್ ಮೂಲದ ಕಲಾವಿದರು
ಬಳಸಿರು ವ ವಾದ್ಯಗಳು : ಡ್ರಮ್, ಹಾರ್ಮೋನಿಯಂ, ಟ್ಯಾಂಬೋರಿನ್, ಜೋಡಿಯಾ ಪಾವಾ (ಅಲ್ಘೋಝಾ)
ರೆಕಾರ್ಡಿಂಗ್ ವರ್ಷ : 1998, ಕೆಎಂವಿಎಸ್ ಸ್ಟುಡಿಯೋ
ಸಮುದಾಯ ನಡೆಸುವ ರೇಡಿಯೋ ಸೂರ್ವಾಣಿ ರೆಕಾರ್ಡ್ ಮಾಡಿದ 341 ಹಾಡುಗಳು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಮೂಲಕ ಪರಿಗೆ ಬಂದಿವೆ.
ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ, ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಭಾರತಿಬೆನ್ ಗೋರ್ ಇವರುಗಳಿಗೆ ಅಮೂಲ್ಯ ಸಹಾಯಕ್ಕಾಗಿ ವಿಶೇಷ ಧನ್ಯವಾದಗಳು.
ಅನುವಾದ: ಶಂಕರ. ಎನ್. ಕೆಂಚನೂರು