ಜಮೀಲ್ ಅವರದು ಸೂಕ್ಷ್ಮ ಚಿನ್ನದ ಜರಿ ಕಸೂತಿಯಲ್ಲಿ ಎತ್ತಿದ ಕೈ. ಈ 27 ವರ್ಷದ ಕುಶಲಕರ್ಮಿ ದುಬಾರಿ ಉಡುಪುಗಳಿಗೆ ಹೊಳಪು ಮತ್ತು ಅದ್ದೂರಿತನವನ್ನು ನೀಡುತ್ತಾರೆ. ಇದಕ್ಕಾಗಿ ಅವರು ಗಂಟೆಗಳ ಕಾಲ ಚಕ್ಕಂಬಕ್ಕಳ ಹಾಕಿ ನೆಲದ ಮೇಲೆ ಕೂರಬೇಕು. ಆದರೆ 20ರ ಹರೆಯದಲ್ಲಿ ಕ್ಷಯಕರೋಗ (ಟಿಬಿ) ಗೆ ಒಳಗಾದ ಇವರು ಅಂದಿನಿಂದ ತಮ್ಮ ಕೈಯಲ್ಲಿದ್ದ ಸೂಜಿ ಮತ್ತು ದಾರವನ್ನು ಕೆಳಗಿಟ್ಟಿದ್ದಾರೆ. ಕಾಯಿಲೆಯಿಂದಾಗಿ ಅವರ ಮೂಳೆಗಳು ಮೃದುವಾಗಿದ್ದು ಈಗ ಅವರಿಗೆ ಗಂಟೆಗಳ ಕಾಲ ಕಾಲು ಮಡಚಿಕೊಂಡು ಕೂರುವುದು ಸಾಧ್ಯವಿಲ್ಲ.
“ನನ್ನದು ನಾನು ದುಡಿದು ನನ್ನ ತಂದೆ, ತಾಯಿಗೆ ವಿಶ್ರಾಂತಿ ನೀಡಬೇಕಾದ ವಯಸ್ಸು. ಆದರೆ ಇಲ್ಲಿ ಅದು ಉಲ್ಟಾ ಆಗಿದೆ. ನನ್ನ ಔಷಧಿ ಇತ್ಯಾದಿ ಖರ್ಚಿಗಾಗಿ ಅವರು ದುಡಿಯಬೇಕಾಗಿದೆ” ಎನ್ನುತ್ತಾರೆ ಜಮೀಲ್. ಹೌರಾ ಜಿಲ್ಲೆಯ ಚೆಂಗೈಲ್ ಪ್ರದೇಶದ ನಿವಾಸಿಯಾಗಿದ್ದು, ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಪ್ರಯಾಣಿಸುತ್ತಾರೆ.
ಅದೇ ಜಿಲ್ಲೆಯಲ್ಲಿ, ಅವಿಕ್ ಮತ್ತು ಅವನ ಕುಟುಂಬದವರು ಹೌರಾದ ಪಿಲ್ಖಾನಾ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ, ಮತ್ತು ಈ ಹದಿಹರೆಯದ ಬಾಲಕನಿಗೆ ಮೂಳೆ ಟಿಬಿ ಕೂಡ ಇದೆ. ಈ ಕಾಯಿಲೆಯ ಕಾರಣದಿಂದಾಗಿ ಅವನು 2022ರ ಮಧ್ಯದಿಂದ ಶಾಲೆಯನ್ನು ಬಿಟ್ಟಿದ್ದಾನೆ. ಈಗ ಒಂದಷ್ಟು ಚೇತರಿಸಿಕೊಂಡಿದ್ದಾನೆ. ಆದರೆ ಈಗಲೂ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.
ನಾನು 2022ರಲ್ಲಿ ಈ ಕಥೆಯನ್ನು ವರದಿ ಮಾಡಲು ಪ್ರಾರಂಭಿಸಿದ ಸಂದರ್ಭದಲ್ಲಿ ನಾನು ಮೊದಲು ಜಮೀಲ್, ಅವಿಕ್ ಮತ್ತು ಇತರರನ್ನು ಭೇಟಿಯಾದೆ. ಇದರ ನಂತರ ಪಿಲ್ಖಾನಾದ ಕೊಳೆಗೇರಿಗಳಲ್ಲಿನ ಅವರ ಮನೆಗಳಿಗೆ ನಾನು ಆಗಾಗ್ಗೆ ಭೇಟಿ ನೀಡುತ್ತಿದ್ದೆ, ಅವರ ದೈನಂದಿನ ಜೀವನದ ಚಟುವಟಿಕೆಗಳನ್ನು ನನ್ನ ಕೆಮೆರಾದಲ್ಲಿ ಸೆರೆಹಿಡಿಯುತ್ತಿದ್ದೆ.
ಖಾಸಗಿ ಚಿಕಿತ್ಸಾಲಯಗಳು ವಿಧಿಸುವ ದುಬಾರಿ ಮೊತ್ತವನ್ನು ಭರಿಸಲಾಗದೆ ಜಮೀಲ್ ಮತ್ತು ಅವಿಕ್ ಆರಂಭದಲ್ಲಿ ದಕ್ಷಿಣ 24 ಪರಗಣಗಳು ಮತ್ತು ಹೌರಾ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆ ನಡೆಸುತ್ತಿರುವ ಮೊಬೈಲ್ ಟಿಬಿ ಕ್ಲಿನಿಕ್ಕಿಗೆ ಚಿಕಿತ್ಸೆಗೆಂದು ಹೋದರು. ಈ ವಿಷಯದಲ್ಲಿ ಅವರು ಒಬ್ಬಂಟಿಗಳಲ್ಲ.
ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ( ಎನ್ಎಫ್ಎಚ್ಎಸ್ -5 ) ಹೇಳುವಂತೆ, "ಕ್ಷಯರೋಗವು ಮತ್ತೆ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಹೊರಹೊಮ್ಮಿದೆ. ಒಟ್ಟಾರೆ ಜಾಗತಿಕ ಟಿಬಿ ಪ್ರಕರಣಗಳಲ್ಲಿ ಭಾರತದ ಪಾಲು ಶೇಕಡಾ 27ರಷ್ಟಿದೆ (ವಿಶ್ವ ಆರೋಗ್ಯ ಸಂಸ್ಥೆಯ ಟಿಬಿ ವರದಿ , ನವೆಂಬರ್ 2023ರಲ್ಲಿ ಪ್ರಕಟವಾಗಿದೆ).
ಇಬ್ಬರು ವೈದ್ಯರು ಮತ್ತು 15 ನರ್ಸುಗಳನ್ನು ಹೊಂದಿರುವ ಈ ಮೊಬೈಲ್ ತಂಡವು ದಿನಕ್ಕೆ ಸರಿಸುಮಾರು 150 ಕಿಲೋಮೀಟರ್ ಪ್ರಯಾಣಿಸುತ್ತದೆ, ಕೋಲ್ಕತ್ತಾ ಅಥವಾ ಹೌರಾಗೆ ಪ್ರಯಾಣಿಸಲು ಸಾಧ್ಯವಾಗದವರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ನಾಲ್ಕು ಅಥವಾ ಐದು ಸ್ಥಳಗಳಿಗೆ ಭೇಟಿ ನೀಡುತ್ತದೆ. ಸಂಚಾರಿ ಚಿಕಿತ್ಸಾಲಯಗಳಲ್ಲಿನ ರೋಗಿಗಳಲ್ಲಿ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕಲ್ಲು ಪುಡಿಮಾಡುವ ಕೆಲಸ ಮಾಡುವವರು, ಬೀಡಿ ಕಟ್ಟುವವರು ಮತ್ತು ಬಸ್ ಹಾಗೂ ಟ್ರಕ್ ಚಾಲಕರು ಸೇರಿದ್ದಾರೆ.
ಈ ಮೊಬೈಲ್ ಕ್ಲಿನಿಕ್ಕಿನಲ್ಲಿ ನಾನು ಕೆಮೆರಾದಲ್ಲಿ ಸೆರೆಹಿಡಿದ ಮತ್ತು ನನ್ನೊಂದಿಗೆ ಮಾತನಾಡಿದ ರೋಗಿಗಳಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳು ಮತ್ತು ನಗರ ಕೊಳೆಗೇರಿಗಳಿಂದ ಬಂದವರು.
ಈ ಮೊಬೈಲ್ ಕ್ಲಿನಿಕ್ಕುಗಳನ್ನು ಕೋವಿಡ್ ಅವಧಿಯಲ್ಲಿ ವಿಶೇಷ ಉಪಕ್ರಮವಾಗಿ ಆರಂಭಿಸಲಾಗಿತ್ತು. ಅದರ ನಂತರ ಇವುಗಳನ್ನು ನಿಲ್ಲಿಸಲಾಗಿದೆ. ಪ್ರಸ್ತುತ ಅವಿಕ್ ನಂತಹ ಕ್ಷಯ ರೋಗಿಗಳು ಈಗ ಹೌರಾದ ಬಾಂಟ್ರಾ ಸೇಂಟ್ ಥಾಮಸ್ ಹೋಮ್ ವೆಲ್ಫೇರ್ ಸೊಸೈಟಿಗೆ ಅನುಸರಣೆಗಾಗಿ ಹೋಗುತ್ತಾರೆ. ಈ ಬಾಲಕನಂತೆ, ಸೊಸೈಟಿಗೆ ಭೇಟಿ ನೀಡುವ ಇತರರು ಸಹ ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದವರು ಮತ್ತು ಅವರು ಕಿಕ್ಕಿರಿದ ಸರ್ಕಾರಿ ಸೌಲಭ್ಯಗಳಿಗೆ ಚಿಕಿತ್ಸೆಗೆಂದು ಹೋದರೆ ತಮ್ಮ ಒಂದು ದಿನದ ಗಳಿಕೆಯನ್ನು ಕಳೆದುಕೊಳ್ಳುತ್ತಾರೆ.
ಇಲ್ಲಿನ ರೋಗಿಗಳೊಂದಿಗೆ ಮಾತನಾಡಿದ ನಂತರ ನನಗೆ ಸ್ಪಷ್ಟವಾದ ವಿಷಯವೇನೆಂದರೆ, ಚಿಕಿತ್ಸೆ ಮತ್ತು ಕಾಳಜಿಯ ವಿಷಯವಿರಲಿ, ಕ್ಷಯರೋಗದ ಕುರಿತಾಗಿಯೇ ಅವರಲ್ಲಿ ಸಾಕಷ್ಟು ಜನರಿಗೆ ಗೊತ್ತಿಲ್ಲ ಎನ್ನುವುದು. ಈ ರೋಗಕ್ಕೆ ತುತ್ತಾಗಿರುವ ಸಾಕಷ್ಟು ರೋಗಿಗಳು ಸ್ಥಳದ ಕೊರತೆಯ ಕಾರಣದಿಂದಾಗಿ ತಮ್ಮ ಕುಟುಂಬಗಳೊಂದಿಗೆ ಒಂದೇ ಕೋಣೆಯಲ್ಲಿ ಬದುಕುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿಯೂ ಸಹ ಕೆಲಸಗಾರರೊಂದಿಗೆ ಒಂದೇ ಕೋಣೆಯಲ್ಲಿ ವಾಸ ಮಾಡುತ್ತಾರೆ. “ನಾನು ನನ್ನ ಸಹೋದ್ಯೋಗಿಗಳೊಂದಿಗೆ ಕೋಣೆ ಹಂಚಿಕೊಂಡಿದ್ದೇನೆ. ಅವರಲ್ಲಿ ಒಬ್ಬರಿಗೆ ಟಿಬಿ ಕಾಯಿಲೆಯಿದೆ. ಆದರೆ ನನ್ನ ಸಂಪಾದನೆಯಲ್ಲಿ ಒಬ್ಬನೇ ಕೋಣೆ ಬಾಡಿಗೆಗೆ ಪಡೆಯುವುದು ಬಹಳ ಕಷ್ಟ. ಹೀಗಾಗಿ ಅವರೊಂದಿಗೆ ಕೋಣೆ ಹಂಚಿಕೊಳ್ಳುತ್ತಿದ್ದೇನೆ” ಎನ್ನುತ್ತಾರೆ ಹೌರಾದ ಸೆಣಬಿನ ಕಾರ್ಖಾನೆಯಲ್ಲಿ ಕೆಲಸ ಮಾಡಲು 13 ವರ್ಷಗಳ ಹಿಂದೆ ದಕ್ಷಿಣ 24 ಪರಗಣಗಳಿಂದ ವಲಸೆ ಬಂದ ರೋಶನ್ ಕುಮಾರ್.
*****
ದೇಶದಲ್ಲಿ ಕ್ಷಯರೋಗ ಹೊಂದಿರುವ ಮಕ್ಕಳ ಸಂಖ್ಯೆ ಜಾಗತಿಕ ಬಾಲ್ಯದ ಟಿಬಿ ಹೊರೆಯ ಶೇಕಡಾ 28ರಷ್ಟಿದೆ ಎಂದು ಹದಿಹರೆಯದ ಮಕ್ಕಳು ಮತ್ತು ಟಿಬಿ ಕುರಿತ 2021ರ ರಾಷ್ಟ್ರೀಯ ಆರೋಗ್ಯ ಮಿಷನ್ ವರದಿ ಹೇಳುತ್ತದೆ.
ಅವಿಕ್‌ಗೆ ಟಿಬಿಯಿರುವುದು ಪತ್ತೆಯಾದ ನಂತರ ಅವನಿಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಶಾಲೆಗೆ ಹೋಗುವುದು ಕಷ್ಟವಾದ ಕಾರಣ ಅವನು ಶಾಲೆಯನ್ನು ತೊರೆದನು. "ನಾನು ನನ್ನ ಶಾಲೆ ಮತ್ತು ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಈಗಾಗಲೇ ಪಾಸ್ ಆಗಿ ನನಗಿಂತಲೂ ಒಂದು ಕ್ಲಾಸ್ ಮುಂದಕ್ಕೆ ಹೋಗಿದ್ದಾರೆ. ನಾನು ಆಟೋಟವನ್ನು ಕೂಡಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಈ 16 ವರ್ಷದ ಬಾಲಕ ಹೇಳುತ್ತಾನೆ.
ಭಾರತದಲ್ಲಿ, ಪ್ರತಿ ವರ್ಷ 0-14 ವರ್ಷದೊಳಗಿನ ಅಂದಾಜು 3.33 ಲಕ್ಷ ಮಕ್ಕಳು ಕ್ಷಯರೋಗದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ; ಗಂಡು ಮಕ್ಕಳಲ್ಲಿ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚು. "ಮಕ್ಕಳಲ್ಲಿ ಕ್ಷಯರೋಗವನ್ನು ಪತ್ತೆಹಚ್ಚುವುದು ಕಷ್ಟ... ಮಕ್ಕಳಲ್ಲಿನ ರೋಗಲಕ್ಷಣಗಳು ಇತರ ಬಾಲ್ಯದ ಕಾಯಿಲೆಗಳನ್ನು ಹೋಲುತ್ತವೆ ..." ಎಂದು ಎನ್‌ಎಚ್‌ಎಂ ವರದಿ ಹೇಳುತ್ತದೆ. ಬಾಲ ಟಿಬಿ ರೋಗಿಗಳಿಗೆ ಹೆಚ್ಚಿನ ಪ್ರಮಾಣದ ಔಷಧಿಗಳ ಅಗತ್ಯವಿದೆ ಎಂದು ಅದು ಹೇಳುತ್ತದೆ.
ಹದಿನೇಳು ವರ್ಷದ ರಾಖಿ ಶರ್ಮಾ ದೀರ್ಘ ಹೋರಾಟದ ನಂತರ ಈ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ ಅವಳಿಗೆ ಈಗಲೂ ಇನ್ನೊಬ್ಬರ ಬೆಂಬಲವಿಲ್ಲದೆ ನಡೆಯಲು ಅಥವಾ ಬಹಳ ಹೊತ್ತು ಕುಳಿತುಕೊಳ್ಳಲು ಸಾಧ್ಯವಿಲ್ಲ. ಅವರ ಕುಟುಂಬ ಮೊದಲಿನಿಂದಲೂ ಪಿಲ್ಖಾನ ಕೊಳಗೇರಿಯಲ್ಲಿ ವಾಸಿಸುತ್ತಿದೆ. ಈ ಕಾಯಿಲೆಗೆ ಆಕೆ ತನ್ನ ಒಂದು ವರ್ಷದ ಶಾಲಾ ಜೀವನವನ್ನು ಬಲಿ ನೀಡಬೇಕಾಯಿತು. ಹೌರಾದ ಫುಡ್ ಕೋರ್ಟ್ ಒಂದರಲ್ಲಿ ಕೆಲಸ ಮಾಡುವ ಆಕೆಯ ತಂದೆ ರಾಕೇಶ್ ಶರ್ಮಾ, "ನಾವು ಮನೆಯಲ್ಲಿ ಖಾಸಗಿ ಬೋಧಕರೊಬ್ಬರನ್ನು ನೇಮಿಸಿಕೊಂಡು ಅವಳ ಶೈಕ್ಷಣಿಕ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಅವಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನೂ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ನಮಗೂ ಹಣಕಾಸಿನ ಮಿತಿಗಳಿವೆ” ಎಂದು ಅಸಹಾಯಕರಾಗಿ ನುಡಿಯುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಕ್ಷಯರೋಗದ ಪ್ರಕರಣಗಳು ಹೆಚ್ಚಾಗಿರುತ್ತವೆ; ಅಡುಗೆ ಉರುವಲಿಗೆ ಹುಲ್ಲು ಅಥವಾ ಬೆಳೆ ಕಡ್ಡಿಗಳನ್ನು ಬಳಸುವ ಮನೆಗಳಲ್ಲಿ ವಾಸಿಸುವವರಿಗೆ, ಒತ್ತು ಒತ್ತಾಗಿ ಮನೆಗಳಿರುವಲ್ಲಿ ವಾಸಿಸುವವರು ಮತ್ತು ಪ್ರತ್ಯೇಕ ಅಡುಗೆ ಮನೆ ವ್ಯವಸ್ಥೆಯಿಲ್ಲದವರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎನ್ನುತ್ತದೆ ಇತ್ತೀಚಿನ ಎನ್ಎಫ್ಎಚ್ಎಸ್ 5 ವರದಿ.
ಕ್ಷಯರೋಗವು ಬಡತನ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಆಹಾರ ಮತ್ತು ಆದಾಯದ ಕೊರತೆಯಿಂದ ಉಂಟಾಗುತ್ತದೆ ಮಾತ್ರವಲ್ಲ, ಈ ರೋಗವು ಪೀಡಿತ ಜನರ ಬಡತನವನ್ನು ಇನ್ನಷ್ಟು ಹದಗೆಡಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದರಲ್ಲಿ ಆರೋಗ್ಯ ಕಾರ್ಯಕರ್ತರ ನಡುವೆ ಸಾಮಾನ್ಯ ಒಮ್ಮತವಿದೆ.
ಟಿಬಿ ರೋಗಿಯನ್ನು ಹೊಂದಿರುವ ಕುಟುಂಬಗಳು ಕಳಂಕದ ಭಯದಿಂದ ಅದನ್ನು ಮುಚ್ಚಿಡುವ ಸಾಧ್ಯತೆಯಿದೆ ಎಂದೂ ಎನ್ಎಫ್ಎಚ್ಎಸ್ -5 ಹೇಳುತ್ತದೆ: "... ಐದು ಪುರುಷರಲ್ಲಿ ಒಬ್ಬರು ಕುಟುಂಬ ಸದಸ್ಯರ ಟಿಬಿ ಸ್ಥಿತಿ ರಹಸ್ಯವಾಗಿ ಉಳಿಯಬೇಕೆಂದು ಬಯಸುತ್ತಾರೆ.” ಅಲ್ಲದೆ ಟಿಬಿ ಆಸ್ಪತ್ರೆಗೆ ಆರೋಗ್ಯ ಕಾರ್ಯಕರ್ತರನ್ನು ನೇಮಿಸಿಕೊಳ್ಳುವುದು ಸಹ ಕಷ್ಟ.
ಭಾರತದಲ್ಲಿ ಕ್ಷಯ ರೋಗಿಗಳಲ್ಲಿ ಕಾಲು ಭಾಗದಷ್ಟು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು (15ರಿಂದ 49 ವರ್ಷಗಳು) ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ವರದಿ (2019) ಹೇಳುತ್ತದೆ. ಪುರುಷರಿಗಿಂತ ಕಡಿಮೆ ಮಹಿಳೆಯರು ಟಿಬಿಗೆ ತುತ್ತಾಗುತ್ತಾರಾದರೂ, ಸೋಂಕಿಗೆ ಒಳಗಾದವರು ತಮ್ಮ ಆರೋಗ್ಯಕ್ಕಿಂತಲೂ ಹೆಚ್ಚು ಕೌಟುಂಬಿಕ ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡುವ ಸಾಧ್ಯತೆಯಿದೆ.
"ನಾನು ಆದಷ್ಟು ಬೇಗ [ಮನೆಗೆ] ಮನೆಗೆ ಹೋಗಬೇಕು. ನನ್ನ ಗಂಡ ಇನ್ಯಾರನ್ನಾದರೂ ಮದುವೆಯಾಗಬಹುದೆನ್ನುವ ಭಯ ನನ್ನನ್ನು ಕಾಡುತ್ತಿದೆ" ಎಂದು ಬಿಹಾರದ ಟಿಬಿ ರೋಗಿ ಹನೀಫಾ ಅಲಿ ಹೇಳುತ್ತಾರೆ. ಅವರು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವ ಸಾಧ್ಯತೆಯಿದೆ ಎಂದು ಹೌರಾದ ಬಾಂಟ್ರಾ ಸೇಂಟ್ ಥಾಮಸ್ ಹೋಮ್ ವೆಲ್ಫೇರ್ ಸೊಸೈಟಿಯ ವೈದ್ಯರು ಹೇಳುತ್ತಾರೆ.
"ಮಹಿಳೆಯರು ಮೌನ ಬಲಿಪಶುಗಳು. ಅವರು ರೋಗಲಕ್ಷಣಗಳನ್ನು ಮರೆಮಾಚಿ ಕೆಲಸ ಮಾಡುತ್ತಲೇ ಇರುತ್ತಾರೆ. ರೋಗ ಪತ್ತೆಯಾಗುವ ವೇಳೆಗೆ ಬಹಳ ತಡವಾಗಿರುತ್ತದೆ ಮತ್ತು ಅವರಿಗೆ ಅದು ಸಾಕಷ್ಟು ಹಾನಿ ಮಾಡಿರುತ್ತದೆ" ಎಂದು ಸೊಸೈಟಿಯ ಕಾರ್ಯದರ್ಶಿ ಮೋನಿಕಾ ನಾಯಕ್ ಹೇಳುತ್ತಾರೆ. ಅವರು 20 ವರ್ಷಗಳಿಂದ ಟಿಬಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಟಿಬಿಯಿಂದ ಚೇತರಿಸಿಕೊಳ್ಳುವುದು ದೀರ್ಘ ಪ್ರಕ್ರಿಯೆಯಾಗಿದೆ ಮತ್ತು ಇದು ಇಡೀ ಕುಟುಂಬದ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.
“ಕೆಲವು ಪ್ರಕರಣಗಳಲ್ಲಿ ರೋಗಿ ಸಂಪೂರ್ಣ ಗುಣಮುಖನಾಗಿದ್ದರೂ ಮನೆಯವರು ಕರೆದೊಯ್ಯಲು ಹಿಂಜರಿಯುತ್ತಾರೆ. ಇಂತಹ ಸಂದರ್ಭಗಳಲ್ಲಿ ನಾವು ನಿಜಕ್ಕೂ ಅವರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ” ಎಂದು ಅವರು ಹೇಳುತ್ತಾರೆ. ಟಿಬಿ ತಡೆಗಟ್ಟುವಿಕೆ ಕ್ಷೇತ್ರದಲ್ಲಿ ದಣಿವರಿಯದ ಕೆಲಸಕ್ಕಾಗಿ ನಾಯಕ್ ಪ್ರತಿಷ್ಠಿತ ಜರ್ಮನ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮೆರಿಟ್ ಪಡೆದಿದ್ದಾರೆ.
ಸುಮಾರು 40 ವರ್ಷದ ಅಲಾಪಿ ಮಂಡಲ್ ಟಿಬಿಯಿಂದ ಚೇತರಿಸಿಕೊಂಡಿದ್ದಾರೆ ಮತ್ತು ಹೇಳುತ್ತಾರೆ, "ನಾನು ಮತ್ತೆ ಮನೆಗೆ ಮರಳುವ ದಿನಕ್ಕಾಗಿ ಕಾಯುತ್ತಿದ್ದೇನೆ. ಈ ದೀರ್ಘ ಯುದ್ಧದಲ್ಲಿ ಕುಟುಂಬ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋಯಿತು..."
*****
ಈ ಕ್ಷೇತ್ರದಲ್ಲಿ ದುಡಿಯುವ ಕಾರ್ಯಕರ್ತರಿಗೆ ಈ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿದ್ದು ಅವರು ಮಾಸ್ಕ್ ತೊಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸೊಸೈಟಿ ನಡೆಸುತ್ತಿರುವ ಕ್ಲಿನಿಕ್ಕಿನಲ್ಲಿ, ತೀವ್ರ ಸಾಂಕ್ರಾಮಿಕ ಟಿಬಿ ಹೊಂದಿರುವ ರೋಗಿಗಳನ್ನು ವಿಶೇಷ ವಾರ್ಡಿನಲ್ಲಿ ಇರಿಸಲಾಗುತ್ತದೆ. ಹೊರ ರೋಗಿಗಳ ವಿಭಾಗವು ವಾರಕ್ಕೆ ಎರಡು ಬಾರಿ ದಿನಕ್ಕೆ 100-200 ರೋಗಿಗಳಿಗೆ ಸೇವೆ ಸಲ್ಲಿಸುತ್ತದೆ ಮತ್ತು ಅವರಲ್ಲಿ ಶೇಕಡಾ 60ರಷ್ಟು ಮಹಿಳಾ ರೋಗಿಗಳು.
ಟಿಬಿಗೆ ಸಂಬಂಧಿಸಿದ ಔಷಧಿಗಳ ದೀರ್ಘಕಾಲದ ಬಳಕೆಯಿಂದಾಗಿ ಅನೇಕ ರೋಗಿಗಳು ಕ್ಲಿನಿಕಲ್ ಖಿನ್ನತೆಯನ್ನು ಅಡ್ಡಪರಿಣಾಮವಾಗಿ ಎದುರಿಸುತ್ತಾರೆ ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರು ಹೇಳುತ್ತಾರೆ. ಸರಿಯಾದ ಚಿಕಿತ್ಸೆಯು ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದೆ - ಡಿಸ್ಚಾರ್ಜ್ ಆದ ನಂತರ, ರೋಗಿಗಳು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಮತ್ತು ಅವರಿಗೆ ಆರೋಗ್ಯಕರ ಆಹಾರದ ಅಗತ್ಯವಿದೆ.
ಈ ಕಾಯಿಲೆಗೆ ತುತ್ತಾಗುವ ಹೆಚ್ಚಿನ ರೋಗಿಗಳು ಕಡಿಮೆ ಆದಾಯದ ಗುಂಪುಗಳಿಗೆ ಸೇರಿದವರಾಗಿರುವುದರಿಂದ, ಅವರು ಕೆಲವೊಮ್ಮೆ ಔಷಧಿಗಳನ್ನು ಮಧ್ಯದಲ್ಲಿ ನಿಲ್ಲಿಸುತ್ತಾರೆ, ಇದು ಎಂಡಿಆರ್ ಟಿಬಿ (ಮಲ್ಟಿ-ಡ್ರಗ್ ರೆಸಿಸ್ಟೆನ್ಸ್ ಟ್ಯೂಬರ್ಕ್ಯುಲೋಸಿಸ್) ಗೆ ಕಾರಣವಾಗುವ ಅಪಾಯವನ್ನುಂಟು ಮಾಡುತ್ತದೆ ಎಂದು ಡಾ.ಟೋಬಿಯಾಸ್ ವೋಗ್ಟ್ ಹೇಳುತ್ತಾರೆ. ಜರ್ಮನಿಯ ವೈದ್ಯರಾಗಿರುವ ಅವರು ಕಳೆದ ಎರಡು ದಶಕಗಳಿಂದ ಹೌರಾದಲ್ಲಿ ಕ್ಷಯರೋಗದ ಬಗ್ಗೆ ಕೆಲಸ ಮಾಡುತ್ತಿದ್ದಾರೆ.
ಇಂದು ಮಲ್ಟಿಡ್ರಗ್-ರೆಸಿಸ್ಟೆಂಟ್ ಟಿಬಿ (ಎಂಡಿಆರ್-ಟಿಬಿ) ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಮತ್ತು ಆರೋಗ್ಯ ಭದ್ರತಾ ಬೆದರಿಕೆಯಾಗಿ ಉಳಿದಿದೆ. ಔಷಧ ನಿರೋಧಕ ಟಿಬಿ ಹೊಂದಿರುವ ಐದು ಜನರಲ್ಲಿ ಇಬ್ಬರು ಮಾತ್ರ 2022ರಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಟಿಬಿ ವರದಿಯ ಪ್ರಕಾರ , "2020ರಲ್ಲಿ, 1.5 ಮಿಲಿಯನ್ ಜನರು ಕ್ಷಯರೋಗದಿಂದ ಸಾವನ್ನಪ್ಪಿದ್ದಾರೆ, ಇದರಲ್ಲಿ 214,000 ಎಚ್ಐವಿ ಕಾಯಿಲೆ ಹೊಂದಿರುವವರು ಸಹ ಸೇರಿದ್ದಾರೆ."
ವೋಗ್ಟ್ ಮುಂದುವರೆದು ಹೇಳುತ್ತಾರೆ: "ಕ್ಷಯರೋಗವು ಮೂಳೆಗಳು, ಬೆನ್ನುಮೂಳೆ, ಹೊಟ್ಟೆ ಮತ್ತು ಮೆದುಳು ಸೇರಿದಂತೆ ದೇಹದ ಯಾವುದೇ ಭಾಗವನ್ನು ಹಾನಿಗೊಳಿಸುತ್ತದೆ. ಕ್ಷಯರೋಗಕ್ಕೆ ತುತ್ತಾಗಿ ಚೇತರಿಸಿಕೊಳ್ಳುವ ಮಕ್ಕಳಿದ್ದಾರೆ, ಆದರೆ ಅದರಿಂದ ಅವರ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ."
ಅನೇಕ ಟಿಬಿ ರೋಗಿಗಳು ಈ ಕಾಯಿಲೆಯಿಂದಾಗಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. "ನನಗೆ ಶ್ವಾಸಕೋಶದ ಟಿಬಿ ಇರುವುದು ಪತ್ತೆಯಾದ ನಂತರ, ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೂ ಇನ್ನು ಮುಂದೆ ಕೆಲಸ ಮಾಡಲು ಸಾಧ್ಯವಿಲ್ಲ. ನನ್ನ ಶಕ್ತಿ ಮುಗಿದು ಹೋಗಿದೆ" ಎಂದು ಈ ಹಿಂದೆ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ ಶೇಖ್ ಸಹಾಬುದ್ದೀನ್ ಹೇಳುತ್ತಾರೆ. ಒಂದು ಕಾಲದಲ್ಲಿ ಹೌರಾ ಜಿಲ್ಲೆಯಲ್ಲಿ ಪ್ರಯಾಣಿಕರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುತ್ತಿದ್ದ ಬಲಶಾಲಿ ವ್ಯಕ್ತಿ ಈಗ ಅಸಹಾಯಕರಾಗಿದ್ದಾರೆ. "ನನ್ನದು ಐದು ಜನರ ಕುಟುಂಬ. ಬದುಕುವುದು ಹೇಗೆ?" ಎಂದು ಈ ಶಹಾಪುರ ನಿವಾಸಿ ಪ್ರಶ್ನಿಸುತ್ತಾರೆ.
ಪಂಚು ಗೋಪಾಲ್ ಮಂಡಲ್ ಅವರು ಬಂಟ್ರಾ ಹೋಮ್ ವೆಲ್ಫೇರ್ ಸೊಸೈಟಿ ಕ್ಲಿನಿಕ್ ಗೆ ಚಿಕಿತ್ಸೆಗಾಗಿ ಬರುವ ಹಿರಿಯ ರೋಗಿ. ಅವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದರು ಮತ್ತು ಈಗ, "ನನ್ನ ಬಳಿ 200 ರೂಪಾಯಿಗಳಿಲ್ಲ ಮತ್ತು ನಿಲ್ಲಲು ನನಗೆ ಶಕ್ತಿ ಇಲ್ಲ. ಇತ್ತೀಚೆಗೆ ಕೆಮ್ಮಿದರೆ ಗುಲಾಬಿ ಬಣ್ಣದ ಕಫ ಬರುತ್ತಿತ್ತು, ಹೀಗಾಗಿ ಎದೆಯ ಪರೀಕ್ಷೆಗಾಗಿ ಇಲ್ಲಿಗೆ ಬಂದಿದ್ದೇನೆ" ಎಂದು ಹೌರಾದ 70 ವರ್ಷದ ನಿವಾಸಿ ಹೇಳುತ್ತಾರೆ. ಅವರ ಎಲ್ಲಾ ಪುತ್ರರು ಕೆಲಸ ಹುಡುಕಿಕೊಂಡು ರಾಜ್ಯದಿಂದ ಹೊರಹೋಗಿದ್ದಾರೆ ಎಂದು ಅವರು ಹೇಳುತ್ತಾರೆ.
ಟಿಬಿ ನಿಯಂತ್ರಣಕ್ಕಾಗಿ ವೆಬ್-ಶಕ್ತಗೊಳಿಸಲಾಗಿರುವ ರೋಗಿ ನಿರ್ವಹಣಾ ವ್ಯವಸ್ಥೆ - ಎನ್ಐ-ಕೆಎಸ್ಎವೈ - ಚಿಕಿತ್ಸೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ನೋಡಲು ಸಮಗ್ರ, ಏಕ-ಗವಾಕ್ಷಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಟಿಬಿ ರೋಗಿಗಳ ಮೇಲೆ ನಿಗಾ ಇಡುವುದು ಮತ್ತು ಅವರ ಸ್ಥಿತಿ ಚೇತರಿಕೆಯ ಹಾದಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದು ಆರೈಕೆಯ ನಿರ್ಣಾಯಕ ಅಂಶವಾಗಿದೆ. "ನಾವು ಅದರಲ್ಲಿ [ನಿಕ್ಷಯ್] ರೋಗಿಯ ಎಲ್ಲಾ ವಿವರಗಳನ್ನು ನೀಡುತ್ತೇವೆ ಮತ್ತು ಟ್ರ್ಯಾಕ್ ಮಾಡಬಹುದು" ಎಂದು ಸೊಸೈಟಿಯ ಆಡಳಿತ ಮುಖ್ಯಸ್ಥ ಸುಮಂತ ಚಟರ್ಜಿ ಹೇಳುತ್ತಾರೆ. ಪಿಲ್ಖಾನಾ ಕೊಳೆಗೇರಿಗಳು ಹೆಚ್ಚಿನ ಸಂಖ್ಯೆಯ ಟಿಬಿ ಸೋಂಕಿತ ರೋಗಿಗಳನ್ನು ಹೊಂದಿವೆ ಏಕೆಂದರೆ ಇದು "ರಾಜ್ಯದ ಅತ್ಯಂತ ಕಿಕ್ಕಿರಿದ ಕೊಳೆಗೇರಿಗಳಲ್ಲಿ ಒಂದಾಗಿದೆ" ಎಂದು ಅವರು ಹೇಳುತ್ತಾರೆ.
ಇದು ಗುಣಪಡಿಸಬಹುದಾದ ಮತ್ತು ತಡೆಗಟ್ಟಬಹುದಾದ ರೋಗವಾಗಿದ್ದರೂ ಸಹ ಜಾಗತಿಕವಾಗಿ ಕೋವಿಡ್ -19 ನಂತರ ಟಿಬಿ ಎರಡನೇ ಪ್ರಮುಖ ಸಾಂಕ್ರಾಮಿಕ ಕೊಲೆಗಾರ ಎಂದು ಡಬ್ಲ್ಯುಎಚ್ಒ ಹೇಳುತ್ತದೆ .
ಇದಲ್ಲದೆ ಕೋವಿಡ್ -19 ಸಾಂಕ್ರಾಮಿಕ ರೋಗವು ಕೆಮ್ಮು ಮತ್ತು ಅನಾರೋಗ್ಯದಿಂದ ಉಂಟಾಗುವ ಕಳಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಇದು ರೋಗದ ತೀವ್ರತೆ ಮತ್ತು ಸಾಂಕ್ರಾಮಿಕತೆ ಹದಗೆಡುವವರೆಗೆ ಟಿಬಿ ರೋಗಿಗಳು ತಮ್ಮ ಅನಾರೋಗ್ಯವನ್ನು ಇತರರಿಂದ ಮರೆಮಾಚುವಂತೆ ಮಾಡಿದೆ.
ನಾನು ನಿಯಮಿತವಾಗಿ ಆರೋಗ್ಯ ಸಮಸ್ಯೆಗಳನ್ನು ವರದಿ ಮಾಡುತ್ತಿರುತ್ತೇನೆ, ಆದರೆ ಅನೇಕ ಜನರು ಈಗಲೂ ಕ್ಷಯರೋಗದಿಂದ ಬಳಲುತ್ತಿದ್ದಾರೆ ಎನ್ನುವುದು ನನಗೆ ತಿಳಿದಿರಲಿಲ್ಲ. ಇದು ಮಾರಣಾಂತಿಕ ಕಾಯಿಲೆಯಲ್ಲದ ಕಾರಣ, ಇದು ವ್ಯಾಪಕವಾಗಿ ವರದಿಯಾಗಿಲ್ಲ. ಮಾರಣಾಂತಿಕವಲ್ಲದಿದ್ದರೂ ಅಷ್ಟೇ ತೀವ್ರ ಪರಿಣಾಮವನ್ನು ಇದೂ ಹೊಂದಿದೆ. ಈ ಕಾಯಿಲೆ ಕುಟುಂಬದ ಪ್ರಾಥಮಿಕ
ಆದಾಯ ಗಳಿಸುವ ಸದಸ್ಯರ ಮೇಲೆ ಪರಿಣಾಮ ಬೀರುವ ಮೂಲಕ ಕುಟುಂಬವನ್ನು ನಿಶ್ಚಲಗೊಳಿಸಿಬಿಡುತ್ತದೆ. ಅಲ್ಲದೆ
ಈ ಕಾಯಿಲೆಯಿಂದ ಚೇತರಿಸಿಕೊಳ್ಳಲು ದೀರ್ಘಕಾಲ ಬೇಕಾಗುವುದರಿಂದಾಗಿ ಈಗಾಗಲೇ ಬಡತನದಿಂದ ಬೇಯುತ್ತಿರುವ
ಕುಟುಂಬಗಳನ್ನು ಇನ್ನಷ್ಟು ಆರ್ಥಿಕ ಮುಗ್ಗಟ್ಟಿಗೆ ತಳ್ಳುತ್ತದೆ.
ವರದಿಯಲ್ಲಿನ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
ಈ ವರದಿಗೆ ಸಹಾಯ ಮಾಡಿದ ಜಯಪ್ರಕಾಶ್ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಚೇಂಜ್ (ಜೆಪಿಐಎಸ್‌ಸಿ) ಸದಸ್ಯರಿಗೆ ವರದಿಗಾರ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಜೆಪಿಐಎಸ್‌ಸಿ ಟಿಬಿ ಸೋಂಕು ಹೊಂದಿರುವ ಮಕ್ಕಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು