ʻಅಂಬೇಡ್ಕರ್‌ ಅವರಿಲ್ಲದೆ ಸಂವಿಧಾನ ಮತ್ತು ಕಾನೂನನ್ನು ರೂಪಿಸಲು ಸಾಧ್ಯವಿಲ್ಲ ಎನ್ನುವುದು ಗಾಂಧಿ ಮತ್ತು ನೆಹರೂ ಇಬ್ಬರಿಗೂ ಅರಿವಾಯಿತು. ಅವರೊಬ್ಬರೇ ಅದಕ್ಕೆ ಸಾಮರ್ಥ್ಯವಿದ್ದ ವ್ಯಕ್ತಿ. ಅವರು ಈ ಪಾತ್ರಕ್ಕಾಗಿ ಭಿಕ್ಷೆ ಬೇಡಲಿಲ್ಲ.ʼ
ಶೋಭಾರಾಂ ಗೆಹೆರ್ವರ್‌, ಜಾದೂಗಾರ್‌ ಬಸ್ತಿ, ಆಜ್ಮೇರ್‌, ರಾಜಸ್ಥಾನ

ಅಜ್ಮೇರ್‌ನ ಅರಣ್ಯದಿಂದ ಸುತ್ತುವರಿದಿದ್ದ ಗುಡ್ಡದ ಮೇಲೆ ನಾವು ಬಾಂಬು ತಯಾರಿಸುತ್ತಿದ್ದ ಸ್ಥಳವನ್ನು ಬ್ರಿಟಿಷರು ಸುತ್ತುವರೆದಿದ್ದರು. ಹುಲಿಯೊಂದು ಅಲ್ಲಿಗೆ ತೀರಾ ಸಮೀಪದಲ್ಲಿದ್ದ ತೊರೆಗೆ ನೀರು ಕುಡಿಯಲು ಬರುತ್ತಿತ್ತು. ಆ ಹುಲಿ ಬಂದು ಹೋಗುತ್ತಿತ್ತು. ಕೆಲವೊಮ್ಮೆ ನಾವು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ಕಾರಣ ಅದಕ್ಕೆ ಸುಮ್ಮನೆ ಬಂದು ನೀರು ಕುಡಿದು ಹೋಗುತ್ತಿರಬೇಕು ಎಂಬುದು ಗೊತ್ತಾಗಿತ್ತು. ಇಲ್ಲದಿದ್ದಲ್ಲಿ, ನಾವು ಗಾಳಿಯಲ್ಲಿ ಅಲ್ಲ, ಅದಕ್ಕೇ ನೇರ ಗುಂಡು ಹಾರಿಸುತ್ತಿದ್ದೆವು.

ʻಆದರೆ ಆ ದಿನ ಬ್ರಿಟಿಷರಿಗೆ ನಮ್ಮ ಅಡಗುದಾಣ ಗೊತ್ತಾಗಿ ಹತ್ತಿರ ಬರುತ್ತಿದ್ದರು. ಅವು ಹೇಳಿಕೇಳಿ ಬ್ರಿಟಿಷ್‌ ರಾಜ್ಯದ ದಿನಗಳು. ಹಾಗಾಗಿ ನಾವು ಕೆಲವು ಸ್ಫೋಟಕಗಳನ್ನು ಸ್ಫೋಟಿಸಿದೆವು. ನಾನಲ್ಲ. ನಾನು ಆಗ ತೀರಾ ಚಿಕ್ಕವನಿದ್ದೆ. ಅಲ್ಲಿದ್ದ ನನ್ನ ಗೆಳೆಯರು ಸ್ಫೋಟಿಸಿದ್ದರು. ಅದೇ ಸಮಯಕ್ಕೆ ನೀರಿನ ಬಳಿ ಹುಲಿ ಕಾಣಿಸಿಕೊಂಡಿತುʼ.

ಹುಲಿ ನೀರು ಕುಡಿಯದೆ ಓಡಿ ಹೋಯಿತು. ಆ ಬ್ರಿಟಿಷ್‌ ಪೊಲೀಸರ ಬೆನ್ನು ಹತ್ತಿಯೇ ಓಡಿತು. ಆ ಎಲ್ಲರೂ ಓಡತೊಡಗಿದರು. ಹುಲಿ ಅಲ್ಲೇ ಎಲ್ಲೋ ಬೆನ್ನಿಗಿತ್ತು. ಕೆಲವರು ಗುಡ್ಡದ ಬದಿಗೆ ಬಿದ್ದರು. ಇನ್ನು ಕೆಲವರು ರಸ್ತೆಯಲ್ಲಿ. ಈ ಎಲ್ಲಾ ಗೊಂದಲದಲ್ಲಿ ಇಬ್ಬರು ಪೊಲೀಸರು ಮೃತಪಟ್ಟರು. ಪೊಲೀಸರಿಗೆ ಮತ್ತೆ ಆ ಜಾಗಕ್ಕೆ ಹಿಂದಿರುಗುವ ಧೈರ್ಯವಿರಲಿಲ್ಲ. ಅವರಿಗೆ ನಮಗೆ ಭಯಪಡುತ್ತಿದ್ದರು.

ಈ ಎಲ್ಲಾ ಗೊಂದಲ, ಗದ್ದಲದಿಂದ ಬಚಾವಾದ ಆ ಹುಲಿ ಬೇರೆ ದಿನಗಳಲ್ಲಿಯೂ ನೀರು ಕುಡಿಯದೇ ಬದುಕುಳಿದಿತ್ತು.

ಇವರು ಶೋಭಾರಾಂ ಗೆಹೆರ್ವರ್‌. ಹಿರಿಯ ಸ್ವಾತಂತ್ರ್ಯ ಯೋಧ. ಈಗ 96ನೇ ವರ್ಷದಲ್ಲಿರುವ ಇವರು 2022ರ ಏಪ್ರಿಲ್‌ 14ರಂದು ಅಜ್ಮೇರ್‌ನ ಅವರ ಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದರು. ಒಂದು ಶತಮಾನದ ಹಿಂದಿನ ತಾವು ಹುಟ್ಟಿದ ದಲಿತ ಬಸ್ತಿಯಲ್ಲಿ ಅವರು ವಾಸ ಮಾಡುತ್ತಿದ್ದಾರೆ. ಅವರು ಎಂದೂ ಸುಸಜ್ಜಿತವಾದ ಜಾಗಕ್ಕೆ ಹೋಗಲು ಇಚ್ಛಿಸಿಲ್ಲ. ಎರಡು ಬಾರಿ ಮುನಿಸಿಪಾಲಿಟಿಯ ಸದಸ್ಯರಾಗಿದ್ದ ಇವರಿಗೆ ಹಾಗೆ ತಮಗೆ ಬೇಕಾದ ಕಡೆ ಹೋಗುವುದು ಕಷ್ಟವೇನಿರಲಿಲ್ಲ. ಇವರು ಬ್ರಿಟಿಷ್‌ ರಾಜ್‌ನೊಂದಿಗಿನ ತಮ್ಮ 1930 ಹಾಗೂ 1940ರ ದಶಕದ ಹೋರಾಟಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದರು.

Shobharam Gehervar, the last Dalit freedom fighter in Rajasthan, talking to PARI at his home in Ajmer in 2022
PHOTO • P. Sainath

ರಾಜಸ್ಥಾನದ ಕೊನೆಯ ದಲಿತ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಶೋಭರಾಮ್ ಗೆಹರ್ವರ್ 2022ರಲ್ಲಿ ಅಜ್ಮೇರ್‌ ಪಟ್ಟಣದಲ್ಲಿನ ತಮ್ಮ ಮನೆಯಲ್ಲಿ ಪರಿಯೊಂದಿಗೆ ಮಾತನಾಡುತ್ತಿರುವುದು

Shobharam lives with his sister Shanti in Jadugar Basti of Ajmer town . Shanti is 21 years younger
PHOTO • Urja

ಶೋಭಾರಾಮ್‌ ಅವರು ಆಜ್ಮೇರ್‌ ಪಟ್ಟಣದ ಜಾದೂಗಾರ್‌ ಬಸ್ತಿ ಎನ್ನುವಲ್ಲಿ ತನ್ನ ತಂಗಿ ಶಾಂತಿಯವರೊಡನೆ ಬದುಕುತ್ತಿದ್ದಾರೆ. ಶಾಂತಿಯವರು ತನ್ನ ಅಣ್ಣನಿಗಿಂತ 21 ವರ್ಷ ಕಿರಿಯರು

ಅವರು ಮಾತಾನಾಡುತ್ತಿದ್ದದ್ದು ಒಂದು ರೀತಿ ಭೂಗತ ಬಾಂಬ್‌ ಫ್ಯಾಕ್ಟರಿಯ ಬಗ್ಗೆಯೇ?

ʻಅರೇ! ಅದು ಕಾಡು, ಫ್ಯಾಕ್ಟರಿ ಅಲ್ಲ… ಫ್ಯಾಕ್ಟರಿಯಲ್ಲಿ ಕತ್ತರಿ ತಯಾರಿಸುತ್ತಾರೆ. ನಾವು ಇಲ್ಲಿ ತಯಾರಿಸಿದ್ದು ಬಾಂಬ್‌ಗಳನ್ನುʼ.

ʻಒಮ್ಮೆ ಚಂದ್ರಶೇಖರ್‌ ಆಜಾದ್‌ ಸಹಾ ಇಲ್ಲಿಗೆ ಭೇಟಿ ಕೊಟ್ಟಿದ್ದರುʼ. ಅದು ಬಹುಶಃ 1930ರ ದ್ವಿತೀಯ ಭಾಗದಲ್ಲಿ ಇಲ್ಲವೇ 1931ರ ಮೊದಲ ಭಾಗದಲ್ಲಿ. ದಿನಾಂಕ ನಿಶ್ಚಿತವಾಗಿಲ್ಲ. ʻನಿಖರವಾದ ದಿನಗಳ ಬಗ್ಗೆ ನನ್ನನ್ನು ಕೇಳಬೇಡಿʼ ಎಂದ ಶೋಭಾರಾಂ, ʻನನ್ನ ಬಳಿ ಒಮ್ಮೆ ಎಲ್ಲಾ, ಎಲ್ಲಾ ದಾಖಲೆಗಳು, ನನ್ನ ಎಲ್ಲಾ ಧ್ವನಿಮುದ್ರಣಗಳು, ನನ್ನ ಟಿಪ್ಪಣಿಗಳು, ಇಲ್ಲೇ ಈ ಮನೆಯಲ್ಲೇ ಇದ್ದವು. ಆದರೆ, ೧೯೭೫ರಲ್ಲಿ ಪ್ರವಾಹ ಬಂದು ನಾನು ಎಲ್ಲವನ್ನೂ ಕಳೆದುಕೊಂಡೆʼ ಎಂದರು.

ಭಗತ್‌ಸಿಂಗ್‌ರ ಜೊತೆ ಸೇರಿ ಚಂದ್ರಶೇಖರ್‌ ಆಜಾದ್‌ ಅವರು 1928ಲ್ಲಿ ಹಿಂದೂಸ್ಥಾನ್‌ ಸೋಷಿಯಲಿಸ್ಟ್‌ ರಿಪಬ್ಲಿಕನ್‌ ಅಸೋಸಿಯೇಷನ್‌ ಅನ್ನು ಪುನರ್‌ಸ್ಥಾಪಿಸಿದರು. ೧೯೩೧ ಫೆಬ್ರವರಿ 27ರಂದು ಅಲಹಾಬಾದ್‌ನ ಆಲ್ಫ್ರೆಡ್‌ ಪಾರ್ಕ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರು ಹಾರಿಸಿದ ಗುಂಡು ತೋಳಿಗೆ ತಗುಲಿ ಆಜಾದ್‌ ಅಸುನೀಗಿದರು. ಬ್ರಿಟಿಷ್‌ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಇನ್ನೇನು ಒಂದೇ ಒಂದು ಗುಂಡು ಉಳಿದಿದ್ದಾಗ ಚಂದ್ರಶೇಖರ್‌ ಆಜಾದ್‌ ತಮ್ಮ ಪ್ರಾಣವನ್ನು ಬಲಿಗೊಟ್ಟರು. ಎಂದೂ ಕೈವಶವಾಗದೇ ಸ್ವತಂತ್ರವಾಗಿಯೇ ಉಳಿವ ಅವರ ಪ್ರತಿಜ್ಞೆಯಂತೆ ಗೌರವಿಸಲು ಅವರು ಪ್ರಾಣಬಿಟ್ಟರು. ಆಗ ಅವರಿಗೆ 24 ವರ್ಷವಾಗಿತ್ತು.

ಸ್ವಾತಂತ್ರ್ಯ ದೊರೆತ ನಂತರ ಆಲ್ಫ್ರೆಡ್‌ ಪಾರ್ಕ್‌ ಅನ್ನು ಚಂದ್ರಶೇಖರ್‌ ಆಜಾದ್‌ ಮೈದಾನ ಎಂದು ಮರುನಾಮಕರಣ ಮಾಡಲಾಯಿತು.

ಈ 98 ವರ್ಷದ ಸ್ವಾತಂತ್ರ್ಯ ಹೋರಾಟಗಾರ ತಾನು ಗಾಂಧಿ ಮತ್ತು ಅಂಬೇಡ್ಕರ್‌ ಇಬ್ಬರ ಅನುಯಾಯಿಯೂ ಹೌದು ಎನ್ನುತ್ತಾರೆ. ʼಇಬ್ಬರಲ್ಲೂ ನನಗೆ ಸರಿಯೆನ್ನಿಸಿದ ಆಲೋಚನೆಗಳನ್ನು ಒಪ್ಪುತ್ತೇನೆʼ ಎಎನ್ನುವುದು ಅವರ ನಿಲುವು

ಈ ವಿಡಿಯೋ ನೋಡಿ: ರಾಜಸ್ಥಾನದ 98 ವರ್ಷದ ಸ್ವಾತಂತ್ರ್ಯ ಹೋರಾಟಗಾರ | ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಆಯ್ಕೆ ಮಾಡಿಕೊಳ್ಳಬೇಕೆ?

ಹುಲಿ ಬಂದು ಹೋಯಿತು. ನಾವು ಗಾಳಿಯಲ್ಲಿ ಗುಂಡು ಹಾರಿಸಿದೆವು. ಚಂದ್ರಶೇಖರ್‌ ಆಜಾದ್‌ ನಾವು ಗಾಳಿಯಲ್ಲಿ ಗುಂಡು ಹಾರಿಸಿದ್ದೇಕೆ ಎಂದು ಕೇಳಿದರು. ಹುಲಿಗೆ ನಾವು ಅದಕ್ಕೆ ತೊಂದರೆ ಉಂಟು ಮಾಡುವುದಿಲ್ಲ ಎಂದು ಗೊತ್ತಾಗಲು ಹಾಗೆ ಮಾಡುತ್ತೇವೆ.

ಹಾಗಾಗಿ ಅದು ಹಾಗೇ ಹೋಗುತ್ತದೆ ಎಂದೆವುʼ. ಇದು ಹುಲಿ ಬೇಕಾಗಿದ್ದ ನೀರು ಕುಡಿಯಲು ಹೋರಾಟಗಾರರು ತಮ್ಮ ಭದ್ರತೆ ಕಾಪಾಡಿಕೊಳ್ಳಲು ಮಾಡಿಕೊಂಡಿದ್ದ ಒಪ್ಪಂದ.

ʻನಾನು ಅವತ್ತು ನಿಮಗೆ ಹೇಳುತ್ತಿದ್ದೆನಲ್ಲಾ, ಬ್ರಿಟಿಷ್‌ ಪೊಲೀಸರು ಮೊದಲು ಅಲ್ಲಿಗೆ ಬಂದಿದ್ದರು. ಮತ್ತು ನಾನು ಹೇಳಿದಂತೆ ಗೊಂದಲ ಉಂಟಾಗಿತ್ತು…ʼ

ಆ ಗಲಭೆಯಲ್ಲಿ ಅಥವಾ ಸಂಬಂಧಿಸಿ ನನ್ನದೇನೂ ಪಾತ್ರವಿರಲಿಲ್ಲ. ಆದರೆ, ಇವರು ಆ ಎಲ್ಲದ್ದಕ್ಕೂ ಸಾಕ್ಷಿದಾರರಾಗಿದ್ದರು. ಆಜಾದ್‌ ಬಂದಾಗ ಇವರಿಗೆ 5 ವರ್ಷಕ್ಕಿಂತ ಹೆಚ್ಚಿರಲಿಲ್ಲ. ʻಅವರು ಮಾರುವೇಷದಲ್ಲಿದ್ದರು. ನಮ್ಮ ಕೆಲಸ ಅವರನ್ನು ಬಾಂಬು ತಯಾರಿಸುತ್ತಿದ್ದ ಗುಡ್ಡ ಹಾಗೂ ಕಾಡಿಗೆ ಕರೆದೊಯ್ಯುವುದಷ್ಟೇ ಆಗಿತ್ತುʼ.

ಇದೊಂದು ರೀತಿಯಲ್ಲಿ ಜಾಣ ನಿಜ ಮರೆಸುವ ಚಿಕ್ಕಪ್ಪ ಮಕ್ಕಳ ಆಟವಾಗಿತ್ತು.

ʻಆಜಾದ್‌ ನಮ್ಮ ತಯಾರಿಕಾ ಕೇಂದ್ರವನ್ನು ನೋಡಿದರು. ಅದು ಕಾರ್ಖಾನೆಯೇನಾಗಿರಲಿಲ್ಲ. ಮಕ್ಕಳಾದ ನಮ್ಮ ಬೆನ್ನುತಟ್ಟಿದ ಅವರು ಮರಿ ಹುಲಿಗಳು ಎಂದು ಪ್ರಶಂಸಿಸಿದರು. ನೀವು ಧೈರ್ಯಶಾಲಿಗಳು. ಸಾವಿಗೆ ಹೆದರುವುದು ಬೇಡʼ ಎಂದರು. ನಮ್ಮ ಮನೆಮಠದಿಂದಲೂ ಕೂಡ ʻಸತ್ತರೂ ಸಹಾ ಅವರು ಸ್ವಾತಂತ್ರ್ಯಕ್ಕಾಗಿ ತಾನೇ ಸಾಯುವುದುʼ ಎಂದರು.

‘Don’t ask me about exact dates,’ says Shobharam. ‘I once had everything, all my documents, all my notes and records, right in this house. There was a flood here in 1975 and I lost everything'
PHOTO • Urja

ʼದಿನಾಂಕಗಳ ವಿಷಯದಲ್ಲಿ ನಿಖರವಾಗಿ ಹೇಳುವುದು ನನ್ನಿಂದ ಸಾಧ್ಯವಿಲ್ಲʼ ಎನ್ನುತ್ತಾರೆ ಶೋಭಾರಾಮ್.‌ ʼಒಂದು ಕಾಲದಲ್ಲಿ ನನ್ನ ಹತ್ತಿರ ದಾಖಲೆಗಳು, ಟಿಪ್ಪಣಿಗಳು, ರೆಕಾರ್ಡುಗಳೆಲ್ಲವೂ ಇದ್ದವು. 1975ರಲ್ಲಿ ಬಂದ ದೊಡ್ಡ ನೆರೆಯಲ್ಲಿ ಅದೆಲ್ಲವನ್ನೂ ಕಳೆದುಕೊಂಡೆʼ

*****

ʻಗುಂಡು ನನ್ನನ್ನೇನೂ ಸಾಯಿಸಲಿಲ್ಲ. ಅವಥವಾ ಶಾಶ್ವತವಾಗಿ ಗಾಯಗೊಳಿಸಲೂ ಇಲ್ಲ. ಅದು ಕಾಲಿಗೆ ತಾಗಿ ಮುಂದೆ ಹೋಯಿತು. ನೋಡಿʼ ಎಂದವರೇ ತಮ್ಮ ಬಲಗಾಲಿನಲ್ಲಿ ಮೊಳಕಾಲಿನ ಸ್ವಲ್ಪ ಕೆಳಗೆ ಅದು ತಾಕಿದ್ದ ಕಾರಣ ಮಾಡಿದ ಗುರುತನ್ನು ತೋರಿಸಿದರು. ಅದು ಕಾಲಿನೊಳಗೆ ಹೊಕ್ಕಲಿಲ್ಲ. ಆದರೆ, ಅದರಿಂದ ತೀರಾ ನೋವಾಯಿತು. ʻನಾನು ಮೂರ್ಚೆ ಹೋದೆ. ಅವರು ನನ್ನನ್ನು ಆಸ್ಪತ್ರೆಗೆ ಕೊಂಡೊಯ್ದರುʼ ಎಂದರು.

ಅದು 1942ರ ಸುಮಯ. ಅವರು ʻಸಾಕಷ್ಟು ದೊಡ್ಡವರಾಗಿʼ ಅಂದರೆ ಸುಮಾರು 16 ವರ್ಷವಾಗಿದ್ದಾಗ ನೇರವಾಗಿ ಚಳವಳಿಗೆ ಧುಮುಕಿದ್ದರು. ಈಗ ತಮ್ಮ 96ನೆಯ ವಯಸ್ಸಿನಲ್ಲಿ ಶೋಭಾರಾಂ ಗೆಹೆರ್ವರ್‌ ಅವರು ಒಳ್ಳೆಯ ಕಟ್ಟಮಸ್ತಾಗಿಯೇ ಇದ್ದಾರೆ. ಆರು ಅಡಿ ಎತ್ತ, ನೇರ ನಡೆಯ, ಚಟುವಟಿಕೆಯ ವ್ಯಕ್ತಿತ್ವ. ರಾಜಸ್ಥಾನದ ಅಜ್ಮೇರ್‌ನ ತಮ್ಮ ಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಾ, ಈ ಮಾತನ್ನು ಹೇಳಿದ್ದರು. ಒಂಬತ್ತು ದಶಕಗಳುದ್ದಕ್ಕೂ ನಡೆದು ಬಂದಿದ್ದನ್ನು ನಮಗೆ ಹೇಳಿದರು. ಈಗ ಅವರು ತಮ್ಮ ಕಾಲಿಗೆ ಗುಂಡೇಟು ಬಿದ್ದದ್ದರ ಬಗ್ಗೆ ಮಾತನಾಡುತ್ತಿದ್ದರು.

ʻಸಭೆ ನಡೆಯುತ್ತಿತ್ತು. ಯಾರೋ ಒಬ್ಬರು ಬ್ರಿಟಿಷ್‌ ರಾಜ್‌ ವಿರುದ್ಧ ಸ್ವಲ್ಪ ಅತಿಯಾಗಿ ಮಾತನಾಡಿದರು. ಪೊಲೀಸರು ಕೆಲವು ಸ್ವಾತಂತ್ರ್ಯ ಹೋರಾಟಗಾರರನ್ನು ವಶಕ್ಕೆ ತೆಗೆದುಕೊಂಡರು. ಅವರು ತಿರುಗೇಟು ನೀಡಿದಾಗ ಪೊಲೀಸರು ಎಲ್ಲರ ಮೇಲೂ ಹಲ್ಲೆ ಮಾಡಿದರು. ಇದು ನಡೆದಿದ್ದು ಸ್ವಾತಂತ್ರತಾ ಸೇನಾನಿ ಭವನದಲ್ಲಿ. ಆ ಹೆಸರನ್ನು ನಾವು ಕೊಟ್ಟಿದ್ದು, ಸ್ವಾತಂತ್ರ್ಯ ಬಂದ ನಂತರ. ಆದರೆ ಆಗ ಅದಕ್ಕೆ ಇಂತಹದ್ದು ಎನ್ನುವ ಯಾವ ಹೆಸರೂ ಇರಲಿಲ್ಲ.

ಅಲ್ಲಿನ ಸಾರ್ವಜನಿಕ ಸಭೆಗಳಲ್ಲಿ ಸ್ವಾತಂತ್ರ್ಯ ಯೋಧರು ಕ್ವಿಟ್‌ ಇಂಡಿಯಾ ಚಳವಳಿಯ ಬಗ್ಗೆ ಜನರಿಗೆ ಅರಿವು ಮಾಡಿಕೊಡುತ್ತಿದ್ದರು. ಅವರು ಬ್ರಿಟಿಷ್‌ ರಾಜ್‌ನ ಬಣ್ಣ ಬಯಲು ಮಾಡುತ್ತಿದ್ದರು. ಅಜ್ಮೇರ್‌ನ ಎಲ್ಲೆಡೆಯಿಂದ ಜನ ಪ್ರತೀದಿನ 3 ಗಂಟೆಗೆ ಅಲ್ಲಿ ಸೇರುತ್ತಿದ್ದರು. ನಾವು ಯಾರಿಗೂ ಬನ್ನಿ ಎಂದು ಹೇಳಬೇಕಾಗಿಯೇ ಇರಲಿಲ್ಲ. ಅವರು ತಾವಾಗಿಯೇ ಬರುತ್ತಿದ್ದರು. ಅಲ್ಲೇ ಕಟು ಭಾಷಣ ನಡೆದದ್ದು. ಗುಂಡನ್ನು ಹಾರಿಸಿದ್ದು.

ʻನನಗೆ ಆಸ್ಪತ್ರೆಯಲ್ಲಿ ಮತ್ತೆ ಪ್ರಜ್ಞೆ ಮರಳಿದಾಗ, ಪೊಲೀಸರು ನನ್ನನ್ನು ಭೇಟಿ ಮಾಡಿದರು. ಅವರ ಕೆಲಸ ಅವರು ಮಾಡಿದರು. ಅವರು ಏನನ್ನೋ ಬರೆದುಕೊಂಡರು. ಆದರೆ, ಅವರು ನನ್ನನ್ನು ಅರೆಸ್ಟ್‌ ಮಾಡಲಿಲ್ಲ. ʻಅವನಿಗೆ ಗುಂಡೇಟು ಬಿದ್ದಿದೆ. ಅವನಿಗೆ ಅಷ್ಟೇ ಶಿಕ್ಷೆ ಸಾಕುʼ ಎಂದರು.

The freedom fighter shows us the spot in his leg where a bullet wounded him in 1942. Hit just below the knee, the bullet did not get lodged in his leg, but the blow was painful nonetheless
PHOTO • P. Sainath
The freedom fighter shows us the spot in his leg where a bullet wounded him in 1942. Hit just below the knee, the bullet did not get lodged in his leg, but the blow was painful nonetheless
PHOTO • P. Sainath

ಹಿರಿಯ ಸ್ವಾತಂತ್ರ್ಯ ಹೋರಾಟಗಾರ 1942ರಲ್ಲಿ ತಮ್ಮ ಕಾಲಿಗೆ ಗುಂಡು ಬಿದ್ದ ಜಾಗವನ್ನು ತೋರಿಸುತ್ತಿರುವುದು. ಮೊಣಕಾಲಿಗಿಂತ ಚೂರು ಕೆಳಗೆ ಬಿದ್ದ ಗುಂಡು ಒಳಗೆ ಸೇರಿಕೊಳ್ಳಲಿಲ್ಲ. ಆದರೆ ಅದರ ಹೊಡೆತವು ಬಹಳಷ್ಟು ನೋವನ್ನು ನೀಡಿತ್ತು

ಅವರೇನೋ ದಯೆಯಿಂದ ನನಗೆ ಹಾಗೇ ಬಿಡಲಿಲ್ಲ. ಅವರೇನಾದರೂ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರೆ, ಅವರು ಶೋಭಾರಾಂ ಗುಂಡು ಹಾರಿಸಿದ್ದರು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿ ಬರುತ್ತಿತ್ತು. ಅವರು ತಾವಾಗಿಯೇ ಉದ್ರೇಕಕಾರಿ ಭಾಷಣ ಮಾಡಿರಲಿಲ್ಲ ಅಥವಾ ಯಾರ ವಿರುದ್ಧವೂ ತಿರುಗೇಟು ನೀಡಿರಲಿಲ್ಲ.

ʻಬ್ರಿಟಿಷರಿಗೆ ತಮ್ಮ ಮುಖ ಉಳಿಸಿಕೊಳ್ಳಬೇಕಾಗಿತ್ತು – ಅಷ್ಟೇʼ ಎನ್ನುತ್ತಾರೆ. ಅವರಿಗೆ ನಾವು ಸತ್ತರೂ ಏನೂ ಯೋಚನೆ ಇರಲಿಲ್ಲ. ವರ್ಷಗಳುದ್ದಕ್ಕೂ ಲಕ್ಷಾಂತರ ಜನ ಸತ್ತ ಕಾರಣದಿಂದಾಗಿಯೇ ಸ್ವಾತಂತ್ರ್ಯ ಬಂದಿದ್ದು. ಕುರುಕ್ಷೇತ್ರದಂತೆಯೇ ಸೂರ್ಯಕುಂಡವೂ ಸಹಾ ಹೋರಾಟಗಾರರ ರಕ್ತದಿಂದ ತುಂಬಿತ್ತು. ಇದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನಾವು ನಮ್ಮ ಸ್ವಾತಂತ್ರ್ಯವನ್ನು ಸುಲಭವಾಗಿ ಪಡೆಯಲಿಲ್ಲ. ಇದಕ್ಕಾಗಿ ರಕ್ತ ಹರಿಸಬೇಕಾಯಿತು. ಕುರುಕ್ಷೇತ್ರಕ್ಕಿಂತಲೂ ಹೆಚ್ಚು ರಕ್ತ. ಹೋರಾಟ ಅಜ್ಮೇರ್‌ನಲ್ಲಿ ಮಾತ್ರವಲ್ಲ, ಎಲ್ಲೆಡೆ ಹಬ್ಬಿತ್ತು. ಮುಂಬೈ, ಕಲ್ಕತ್ತಾ… ಎಲ್ಲೆಡೆ.

ʻಗುಂಡೇಟು ಬಿದ್ದ ನಂತರ ನಾನು ಮದುವೆಯಾಗಬಾರದು ಎಂದು ನಿರ್ಧಿರಿಸಿದ್ದೆʼ ಎನ್ನುತ್ತಾರೆ ಅವರು. ನಾನು ಈ ಹೋರಾಟದಲ್ಲಿ ಬದುಕುಳಿಯುತ್ತೇನೆ ಎನ್ನುವುದು ಯಾರಿಗೆ ಗೊತ್ತು? ನಾನು ಸಂಸಾರವನ್ನು ನಡೆಸುತ್ತಾ ಸಮಾಜಸೇವೆಯನ್ನು ಮಾಡುವುದು ಸಾಧ್ಯವಿರಲಿಲ್ಲ. ಶೋಭಾರಾಂ ಈಗ ತಮ್ಮ ಸಹೋದರಿ ಶಾಂತಿ, ಆಕೆಯ ಮಕ್ಕಳು, ಮೊಮ್ಮಕ್ಕಳ ಜೊತೆ ಇದ್ದಾರೆ. 75 ವರ್ಷದ ಇವರು ಶೋಭಾರಾಂ ಅವರಿಗಿಂತ 21 ವರ್ಷ ಕಿರಿಯರು.

ʻನಾನು ಒಂದಿಷ್ಟು ಹೇಳಲಾʼ ಎಂದು ಶಾಂತಿ ಕೇಳಿದರು. ತುಂಬಾ ಶಾಂತಚಿತ್ತರಾಗಿ, ದೃಢವಾಗಿ ಮಾತನಾಡಿದರು. ʻನನ್ನಿಂದಾಗಿಯೇ ಇವರು ಈಗಲೂ ಬದುಕುಳಿದಿದ್ದಾರೆ. ನಾನು ಮತ್ತು ಮಕ್ಕಳು ಇವರನ್ನು ಅವರ ಜೀವನನುದ್ದಕ್ಕೂ ಕಾಳಜಿ ಮಾಡಿದ್ದೇವೆ. ನನಗೆ 20ನೆಯ ವಯಸ್ಸಿನಲ್ಲಿ ಮದುವೆಯಾಯಿತು. ಕೆಲ ವರ್ಷಗಳ ನಂತರ ನಾನು ವಿಧವೆಯಾದೆ. ನನ್ನ ಗಂಡ ಸತ್ತಾಗ ಅವರಿಗೆ 45 ವರ್ಷ ವಯಸ್ಸಾಗಿತ್ತು. ನಾನು ಶೋಭಾರಾಂ ಅವರನ್ನು ಸದಾ ಜೋಪಾನವಾಗಿ ನೋಡಿಕೊಂಡೆ. ಆ ಬಗ್ಗೆ ನನಗೆ ಹೆಮ್ಮೆಯಿದೆ. ಈಗ ನನ್ನ ಮೊಮ್ಮಕ್ಕಳು ಹಾಗೂ ಅವರ ಸಂಗಾತಿಗಳು ಅವರನ್ನು ನೋಡಿಕೊಳ್ಳುತ್ತಿದ್ದಾರೆʼ.

ʻಕೆಲ ಸಮಯದ ಹಿಂದೆ, ಅವರಿಗೆ ತೀರಾ ಅನಾರೋಗ್ಯವಾಗಿತ್ತು. ಇನ್ನೇನೂ ಸತ್ತೇ ಹೋದರು ಎನ್ನುವಷ್ಟು. ಅದು 2020ರಲ್ಲಿ. ನಾನು ಅವರನ್ನು ನನ್ನ ತೋಳಿನಲ್ಲಿ ಹಿಡಿದು ಅವರಿಗಾಗಿ ಪ್ರಾರ್ಥಿಸಿದೆ. ಈಗ ಅವರು ಜೀವಂತವಾಗಿ ಚೆನ್ನಾಗಿ ಇರುವುದುನ್ನು ನೀವು ನೋಡುತ್ತಿದ್ದೀರಿʼ.

Shobharam with his family outside their home in Ajmer. In his nineties, the over six feet tall gentleman still stands ramrod straight
PHOTO • P. Sainath

ಶೋಭಾರಾಮ್‌ ತಮ್ಮ ಕುಟುಂಬದೊಂದಿಗೆ ಆಜ್ಮೇರಿನ ಮನೆಯೆದುರು. ನೂರರ ಪ್ರಾಯಕ್ಕೆ ಹತ್ತಿರದಲ್ಲಿರುವ ಈ ಆರು ಅಡಿ ಎತ್ತರದ ಹಿರಿಯಜ್ಜ ಒಂದಿಷ್ಟೂ ಬಾಗದೆ ನೇರ ನಿಲ್ಲುತ್ತಾರೆ

*****

ಸರಿ, ಆ ಭೂಗತ ಶಿಬಿರದಲ್ಲಿ ತಯಾರು ಮಾಡಿದ್ದ ಬಾಂಬುಗಳೇನಾದವು?

ನಾವು ಎಲ್ಲೆಲ್ಲಿ ಅದಕ್ಕೆ ಬೇಡಿಕೆಯಿತ್ತೋ ಅಲ್ಲೆಲ್ಲಾ ಕಡೆ ಹೋದೆವು. ಹಾಗೇ ಬೇಡಿಕೆ ತುಂಬಾನೆ ಇತ್ತು. ನಾನು ಬಾಂಬ್‌ ಹೊತ್ತುಕೊಂಡು ಈ ದೇಶದ ಎಲ್ಲಾ ಮೂಲೆಗೂ ಹೋಗಿದ್ದೆ ಅನಿಸುತ್ತದೆ. ನಾವು ರೈಲಿನಲ್ಲಿಯೇ ಪ್ರಯಾಣ ಮಾಡುತ್ತಿದ್ದೆವು. ಅಲ್ಲಿಂದ ಇತರೆ ಮಾರ್ಗಗಳಲ್ಲಿ ಬ್ರಿಟಿಷ್‌ ಪೊಲೀಸರೂ ಸಹಾ ನಮ್ಮ ಬಗ್ಗೆ ಭಯಪಟ್ಟುಕೊಳ್ಳುತ್ತಿದ್ದರು.

ಆ ಬಾಂಬ್‌ಗಳು ನೋಡಲು ಹೇಗಿರುತ್ತಿದ್ದವು?

ಅವರು ತಮ್ಮ ಕೈಯನ್ನು ಗುಂಡಗೆ ಗ್ರನೇಡ್‌ ಆಕಾರದಂತೆ ತಿರುಗಿಸುತ್ತಾ, ಇಷ್ಟು ಗಾತ್ರವಿತ್ತು ಎಂದು ತೋರಿಸಿದರು. ಕಾಲಕ್ಕೆ ತಕ್ಕಂತೆ ಅದರಲ್ಲಿ ವಿವಿಧ ರೀತಿಗಳಿರುತ್ತಿದ್ದವು. ಕೆಲವು ತಕ್ಷಣ ಸ್ಫೋಟಿಸುತ್ತಿದ್ದವು. ಇನ್ನು ಕೆಲವು ನಾಲ್ಕು ದಿನಗಳ ನಂತರ. ನಮ್ಮ ನಾಯಕರು ಅವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನೂ ಹೇಳಿಕೊಟ್ಟು, ನಮ್ಮನ್ನು ವಾಪಸ್‌ ಕಳಿಸುತ್ತಿದ್ದರು.

ʻನಾವು ಆಗ ತುಂಬಾ ಬೇಡಿಕೆಯಲ್ಲಿದ್ದೆವು. ಆಗ ನಾನು ಕರ್ನಾಟಕಕ್ಕೂ ಹೋಗಿದ್ದೇನೆ. ಮೈಸೂರಿಗೆ, ಬೆಂಗಳೂರಿಗೆ ಹೀಗೆ ನಾನಾ ಸ್ಥಳಕ್ಕೆ ಹೋಗಿದ್ದೆ. ಕ್ವಿಟ್‌ ಇಂಡಿಯಾ ಚಳವಳಿ ಹೋರಾಟಕ್ಕೆ ಅಜ್ಮೇರ್‌ ಪ್ರಮುಖ ಕೇಂದ್ರವಾಗಿತ್ತು. ಹಾಗೆಯೇ ವಾರಣಾಸಿ, ಗುಜರಾತ್‌ನಲ್ಲಿ ಬರೋಡಾ, ಮಧ್ಯಪ್ರದೇಶದಲ್ಲಿ ದಾಮೋಹ ಹೀಗೆ… ಆದರೆ ಜನ ನಮ್ಮ ಚಳವಳಿಯೇ ಅತ್ಯಂತ ಬಲಿಷ್ಠ ಎಂದು ಅಜ್ಮೇರ್‌ನತ್ತ ನೋಡುತ್ತಿದ್ದರಲ್ಲದೆ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಹೆಜ್ಜೆಗಳನ್ನೇ ಅನುಸರಿಸುತ್ತಿದ್ದರು. ಇನ್ನೂ ಅನೇಕ ಕೇಂದ್ರಗಳಿದ್ದವು ಎನ್ನುವುದೂ ನಿಜʼ ಎಂದರು.

ಆದರೆ ಅವರು ರೈಲು ಪ್ರಯಾಣ ಹೇಗೆ ಮಾಡುತ್ತಿದ್ದರು? ಮತ್ತೆ ಹೇಗೆ ಬಂಧಿತರಾಗದೆ ಪಾರಾಗುತ್ತಿದ್ದರು? ನಾವು ಅಂಚೆ ಸೆನ್ಸಾರ್‌ ಕಾರಣದಿಂದಾಗಿ ನಾಯಕರ ನಡುವೆ ಗುಪ್ತ ಪತ್ರಗಳನ್ನು ಹೊತ್ತೊಯ್ಯುತ್ತಿದ್ದೆವು ಎಂದು ಬ್ರಿಟಿಷರು ಭಾವಿಸಿದ್ದರು. ಕೆಲವು ತರುಣರು ಬಾಂಬ್‌ಗಳನ್ನು ಹೊತ್ತೊಯ್ಯುತ್ತಿದ್ದಾರೆ ಎನ್ನುವ ಬಗ್ಗೆಯೂ ಅವರಿಗೆ ಗುಮಾನಿ ಇತ್ತು.

The nonagenarian tells PARI how he transported bombs to different parts of the country. ‘We travelled to wherever there was a demand. And there was plenty of that. Even the British police were scared of us'
PHOTO • P. Sainath
The nonagenarian tells PARI how he transported bombs to different parts of the country. ‘We travelled to wherever there was a demand. And there was plenty of that. Even the British police were scared of us'
PHOTO • P. Sainath

ತಾವು ಆ ಕಾಲದಲ್ಲಿ ಬಾಂಬುಗಳನ್ನು ಹೇಗೆ ಸಾಗಿಸಿದೆವು ಎನ್ನುವುದನ್ನು ಈ ಹಿರಿಯಜ್ಜ ಪರಿಗೆ ಉತ್ಸಾಹದಿಂದ ವಿವರಿಸಿದರು. ʼಬೇಡಿಕೆ ಇದ್ದಲ್ಲಿಗೆಲ್ಲ ನಾವು ಅದನ್ನು ಸಾಗಿಸುತ್ತಿದ್ದೆವು. ಆಗ ಬೇಡಿಕೆಯೂ ಸಾಕಷ್ಟಿತ್ತು. ಬ್ರಿಟಿಷ್‌ ಪೊಲೀಸರು ಸಹ ನಮ್ಮನ್ನು ನೋಡಿ ಹೆದರುತ್ತಿದ್ದರುʼ

ಆ ಕಾಲದಲ್ಲಿ ಯಾವುದೇ ಪತ್ರವನ್ನಾದರೂ ಒಡೆದು ಓದಿ, ತನಿಖೆ ಮಾಡುತ್ತಿದ್ದರು. ಇದನ್ನು ತಪ್ಪಿಸಲು ನಮ್ಮ ನಾಯಕರು ಯುವಕರ ಗುಂಪೊಂದನ್ನು ಮಾಡಿ, ನಿರ್ದಿಷ್ಟ ಸ್ಥಳಕ್ಕೆ ಪತ್ರಗಳನ್ನು ತೆಗೆದುಕೊಂಡು ಹೋಗಿ ಕೊಡುವುದಕ್ಕೂ ತರಬೇತಿ ನೀಡಿದರು. ಇದನ್ನು ನೀವು ಬರೋಡಾದಲ್ಲಿ ಡಾ. ಅಂಬೇಡ್ಕರ್‌ ಅವರಿಗೆ ತೆಗೆದುಕೊಂಡು ಹೋಗಿ ಕೊಡಬೇಕು ಅಥವಾ ಇನ್ನಾವುದೋ ಸ್ಥಳದಲ್ಲಿ ಇನ್ಯಾರೋ ವ್ಯಕ್ತಿಗೆ ಕೊಡಲು ಹೇಳುತ್ತಿದ್ದರು. ನಾವು ನಮ್ಮ ಒಳ ಉಡುಪಿನಲ್ಲಿ ಅದನ್ನು ಗೋಪ್ಯವಾಗಿ ಇರಿಸಿಕೊಳ್ಳುತ್ತಿದ್ದೆವು.

ಬ್ರಿಟಿಷ್‌ ಪೊಲೀಸರು ನಮ್ಮನ್ನು ತಡೆದು ಪ್ರಶ್ನಿಸುತ್ತಿದ್ದರು. ನಮ್ಮನ್ನು ರೈಲಿನಲ್ಲೇನಾದರೂ ಕಂಡರೆ, ʻನೀವು ಆಗ ಆ ಸ್ಥಳಕ್ಕೆ ಹೋಗುತ್ತೇವೆ ಎಂದು ಹೇಳಿ, ಈಗ ಬೇರೆ ಕಡೆಗೆ ಹೋಗುತ್ತಿದ್ದೀರಿʼ ಎಂದು ಕೇಳುತ್ತಿದ್ದರು. ನಮಗೆ ಹಾಗೂ ನಮ್ಮ ನಾಯಕರಿಗೆ ಹೀಗಾಗಬಹುದು ಎನ್ನುವುದು ಗೊತ್ತಿರುತ್ತಿತ್ತು. ಹಾಗಾಗಿ ನಾವು ಬನಾರಸ್‌ಗೆ ಹೋಗಬೇಕಿದ್ದರೆ, ನಾವು ಆ ನಗರಕ್ಕೆ ಒಂದಷ್ಟು ದೂರ ಹಿಂದೆಯೇ ಇಳಿದುಬಿಡುತ್ತಿದ್ದೆವು.

ನಾವು ಆಗಲೇ ಬನಾರ್‌ಸ್‌ಗೆ ಪತ್ರ ತಲುಪಿಸಬೇಕೆಂದು ಹೇಳಿದ್ದೇವೆ. ನೀವು ನಗರಕ್ಕೆ ಒಂದಷ್ಟು ದೂರ ಇರುವಾಗಲೇ ಚೈನ್‌ ಎಳೆದು ಇಳಿದುಬಿಡಿ ಎಂದು ನಮ್ಮ ನಾಯಕರು ಸಲಹೆ ನೀಡುತ್ತಿದ್ದರು. ನಾವು ಅದರಂತೆ ಮಾಡುತ್ತಿದ್ದೆವು.

ಆ ಕಾಲದ ರೈಲುಗಳಿಗೆ ಉಗಿ ಎಂಜಿನ್‌ಗಳಿರುತ್ತಿತ್ತು. ನಾವು ಆ ಎಂಜಿನ್‌ ರೂಂನೊಳಗೆ ಹೋಗಿ ಚಾಲಕನಿಗೆ ಪಿಸ್ತೂಲು ತೋರಿಸಿ, ʻನಾವು ಇನ್ನನ್ನು ಸಾಯಿಸಿದ ನಂತರವೇ ಸಾಯವುದುʼ ಎಂದು ಎಚ್ಚರಿಸುತ್ತಿದ್ದೆವು. ಆತ ನಮಗೆ ಸ್ಥಳ ಹುಡುಕಿ ಕೊಡುತ್ತಿದ್ದ. ಸಿಐಡಿ, ಪೊಲೀಸರು ಎಲ್ಲರೂ ಬಂದು ಪರಿಶೀಲನೆ ಮಾಡುತ್ತಿದ್ದರು. ಅವರಿಗೆ ಮುಖ್ಯ ಬೋಗಿಗಳಲ್ಲಿ ಸಾಮಾನ್ಯ ಪ್ರಯಾಣಿಕರೇ ಕಾಣಿಸುತ್ತಿದ್ದರು.

ಹೇಳಿಕೊಟ್ಟಂತೆ ನಾವು ನಿರ್ದಿಷ್ಟ ಸ್ಥಳದಲ್ಲಿ ಚೈನ್‌ ಎಳೆಯುತ್ತಿದ್ದೆವು. ರೈಲು ದೀರ್ಘಕಾಲದವರೆಗೆ ನಿಲ್ಲುತ್ತಿತ್ತು. ಕತ್ತಲಿರುವಾಗ ಕೆಲವು ನಾಯಕರು ಕುದುರೆಯನ್ನು ಕರೆತರುತ್ತಿದ್ದರು. ನಾವು ಅದನ್ನು ಏರಿ ಪರಾರಿಯಾಗುತ್ತಿದ್ದೆವು. ನಿಜ ಹೇಳಬೇಕೆಂದರೆ, ರೈಲು ಬನಾರಸ್‌ ತಲುಪುವ ಮುಂಚೆಯೇ ನಾವು ಅಲ್ಲಿ ಸೇರಿರುತ್ತಿದ್ದೆವು.

Former Prime Minister Indira Gandhi being welcomed at the Swatantrata Senani Bhavan
PHOTO • P. Sainath

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸ್ವತಂತ್ರ ಸೇನಾನಿ ಭವನದಲ್ಲಿ ಸ್ವಾಗತ್ತಿಸಲ್ಪಡುತ್ತಿರುವುದು

ನನ್ನ ಹೆಸರಿನಲ್ಲಿ ಒಂದು ವಾರೆಂಟ್‌ ಇತ್ತು. ನಾವು ಸ್ಫೋಟಕಗಳನ್ನು ಸಾಗಿಸುವಾಗ ಸಿಕ್ಕಿಬಿದ್ದಿದ್ದೆವು. ಆದರೆ, ನಾವು ಅದನ್ನು ಎಸೆದು ಪರಾರಿಯಾಗಿದ್ದೆವು. ಪೊಲೀಸರು ಅದನ್ನು ನೋಡಿ ನಾವು ಎಂತಹ ಸ್ಫೋಟಕಗಳನ್ನು ಬಳಸುತ್ತಿದ್ದೆವು ಎಂದು ಅಧ್ಯಯನ ಮಾಡಿದ್ದರು. ಅವರು ನಮ್ಮ ಬೆನ್ನ ಹಿಂದೆ ಬಿದ್ದಿದ್ದರು. ಹಾಗಾಗಿ ನಾವು ಅಜ್ಮೇರ್‌ ಬಿಡುವುದು ಎಂದು ನಿರ್ಧಿರಿಸಿದ್ದೆವು. ನನ್ನನ್ನು ಬಾಂಬೆಗೆ ಕಳಿಸಲಾಯಿತು.

ಮುಂಬೈನಲ್ಲಿ ಅವರಿಗೆ ಯಾರು ನೆಲೆ ಕೊಟ್ಟು ಕಾಪಾಡಿದರು?

ʻಪೃಥ್ವಿರಾಜ್‌ ಕಪೂರ್‌ʼ ಎಂದು ಅವರು ಹೆಮ್ಮೆಯಿಂದ ಹೇಳಿದರು. 1941ರ ವೇಳೆಗೆ ಈ ನಟ ತಮ್ಮ ಸ್ಟಾರ್‌ಗಿರಿಯ ಉನ್ನತ ಹಂತ ತಲುಪುವ ಹಾದಿಯಲ್ಲಿದ್ದರು. 1943ರಲ್ಲಿ ಇವರೂ ಸಹಾ ಇದನ್ನು ಖಚಿತಪಡಿಸಲು ಆಗಿದ್ದರೂ, ʻಇಂಡಿಯನ್‌ ಪೀಪಲ್ಸ್‌ ಥಿಯೇಟರ್‌ ಅಸೋಸಿಯೇಷನ್‌ – ಇಪ್ಟಾದ ಸ್ಥಾನಿಕ ಸದಸ್ಯರಾಗಿದ್ದರು. ಕಪೂರ್‌ ಹಾಗೂ ಬಾಂಬೆಯ ರಂಗಭೂಮಿ ಹಾಗೂ ಸಿನೆಮಾ ಜಗತ್ತಿನ ಇತರ ಹಲವು ಪ್ರಮುಖರು ಸ್ವಾತಂತ್ರ್ಯ ಚಳವಳಿಗೆ ಬೆಂಬಲವಾಗಿದ್ದರು. ಇನ್ನು ಕೆಲವರು ನೇರವಾಗಿ ಸಂಬಂಧದಲ್ಲಿದ್ದರು.

ʻಅವರು ನನ್ನನ್ನು ತಮ್ಮ ಸಂಬಂಧಿ ತ್ರಿಲೋಕ್‌ ಕಪೂರ್‌ ಬಳಿಗೆ ಕಳಿಸಿದರು. ನಂತರ ಅವರು ಹರ ಹರ ಮಹಾದೇವ್‌ನಲ್ಲಿ ನೆಲೆಸಿದ್ದರು ಎನಿಸುತ್ತದೆʼ. ತ್ರಿಲೋಕ್‌ ಅವರು ಶೋಭಾರಾಂಗೆ ಗೊತ್ತಿರಲಿಲ್ಲ ಅವರು ಪೃಥ್ವಿರಾಜ್‌ರ ತಮ್ಮ. ಅವರೂ ಸಹಾ ತಮ್ಮ ಕಾಲದ ಪ್ರಮುಖ ನಟರೇ. 1950ರಲ್ಲಿ ʻಹರ ಹರ ಮಹಾದೇವʼ ಗಲ್ಲಾಪೆಟ್ಟಿಗೆಯಲ್ಲಿ ಅತಿಹೆಚ್ಚು ಹಣ ಗಳಿಸಿತ್ತು.

ಪೃಥ್ವಿರಾಜ್‌ ಕೆಲಕಾಲ ತಮ್ಮ ಕಾರ್‌ ಅನ್ನು ನೀಡಿದ್ದರು. ನಾವು ಅದರಲ್ಲಿ ಬಾಂಬೆ ಸುತ್ತಿದ್ದೆವು. ನಾನು ಆ ನಗರದಲ್ಲಿ ಎಂಟು ತಿಂಗಳಿದ್ದೆ. ನಂತರ ಹಿಂದಿರುಗಿದೆವು. ಬೇರೆ ಕೆಲಸಗಳಿಗೆ ನಮ್ಮ ಅಗತ್ಯವಿತ್ತು. ಆ ವಾರೆಂಟ್‌ನ್ನು ನಾನು ನಿಮಗೆ ತೋರಿಸಲು ಸಾಧ್ಯವಾಗಬೇಕಿತ್ತು. ಅದು ನನ್ನ ಹೆಸರಲ್ಲಿಯೇ ಇತ್ತು. ಬೇರೆ ಯುವಕರ ಹೆಸರಲ್ಲೂ ವಾರೆಂಟ್‌ ಹೊರಡಿಸಲಾಗಿತ್ತುʼ.

ಆದರೆ, 1975ರಲ್ಲಿನ ಪ್ರವಾಹ ಇಲ್ಲಿ ಎಲ್ಲವನ್ನೂ ನಾಶ ಮಾಡಿ ಹಾಕಿತುʼ ಎಂದು ಅವರು ದುಃಖದಿಂದ ಹೇಳಿದರು. ʻನನ್ನ ಎಲ್ಲಾ ದಾಖಲೆಗಳು ನಾಶವಾದವು. ಜವಹರಲಾಲ್‌ ನೆಹರೂ ಅವರು ಕೊಟ್ಟಿದ್ದ ಪ್ರಮಾಣಪತ್ರಗಳೂ ಸೇರಿ ಎಲ್ಲವೂ ನಾಶವಾದವು. ಆ ದಾಖಲೆಗಳನ್ನೇನಾದರೂ ನೋಡಿದ್ದರೆ, ನಿಮಗೆ ಹುಚ್ಚು ಹಿಡಿಯುತ್ತಿತ್ತು. ಆದರೆ, ಎಲ್ಲ ಕೊಚ್ಚಿ ಹೋಯಿತುʼ.

*****

Shobharam Gehervar garlands the statue in Ajmer, of one of his two heroes, B. R. Ambedkar, on his birth anniversary (Ambedkar Jayanti), April 14, 2022
PHOTO • P. Sainath
Shobharam Gehervar garlands the statue in Ajmer, of one of his two heroes, B. R. Ambedkar, on his birth anniversary (Ambedkar Jayanti), April 14, 2022
PHOTO • P. Sainath

2022ರ ಎಪ್ರಿಲ್‌ ತಿಂಗಳ 14ನೇ ತಾರೀಖಿನಂದು ತನ್ನ ಇಬ್ಬರು ನೆಚ್ಚಿನ ನಾಯಕರಲ್ಲಿ ಒಬ್ಬರಾದ ಬಿ. ಆರ್‌. ಅಂಬೇಡ್ಕರ್‌ ಅವರ ಜನ್ಮದಿನದಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿರುವುದು

ʻನಾನು ಗಾಂಧಿ ಮತ್ತು ಅಂಬೇಡ್ಕರ್‌ ನಡುವೆ ಏಕೆ ಆಯ್ಕೆ ಮಾಡಿಕೊಳ್ಳಬೇಕು. ನಾನು ಇಬ್ಬರನ್ನೂ ಆಯ್ಕೆ ಮಾಡಿಕೊಳ್ಳಬಹುದು ಅಲ್ಲವೇ?ʼ

ನಾವು ಅಜ್ಮೇರ್‌ನ ಅಂಬೇಡ್ಕರ್‌ ಪ್ರತಿಮೆ ಬಳಿ ಇದ್ದೆವು. ಅದು ಆ ಮಹಾ ನಾಯಕನ 131ನೇ ಜನ್ಮದಿನ ಆಚರಣೆ. ನಾವು ಇದಕ್ಕೆ ಶೋಭಾರಾಂ ಗೆಹೆರ್ವಾರ್‌ ಅವರನ್ನು ನಮ್ಮೊಡನೆ ಕರೆತಂದಿದ್ದೆವು. ಈ ಗಾಂಧಿವಾದಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ತನ್ನನ್ನು ಆ ಸ್ಥಳದಿಂದ ಕರೆದೊಯ್ಯುವಂತೆ ಕೇಳಿದರಿದ್ದರು. ನೀವು ಈ ಇಬ್ಬರು ನಾಯಕರ ನಡುವೆ ಎಲ್ಲಿ ನಿಲ್ಲಲು ಬಯಸುತ್ತೀರಿ ಎಂದು ನಾವು ಕೇಳಿದಾಗ, ಅವರು ಈ ಮೇಲಿನ ಮಾತನ್ನು ಹೇಳಿದ್ದು.

ಅವರು ತಮ್ಮ ಮನೆಯಲ್ಲಿ ಹೇಳಿದ್ದನ್ನು ಇಲ್ಲಿ ಪುನರ್‌ರೂಪಿಸಿ ಹೇಳಿದರು. ʻನೋಡಿ ಅಂಬೇಡ್ಕರ್‌ ಮತ್ತು ಗಾಂಧಿ ಇಬ್ಬರೂ ತುಂಬಾ ಒಳ್ಳೆಯ ಕೆಲಸ ಮಾಡಿದರು. ಒಂದು ರಥ ಸಾಗಬೇಕಾದರೆ ಅದಕ್ಕೆ ಎರಡೂ ಕಡೆ ಚಕ್ರವಿರಬೇಕು. ಭಿನ್ನತೆ ಎಲ್ಲಿದೆ? ಮಹಾತ್ಮರ ಕೆಲವು ಸಿದ್ಧಾಂತಗಳಲ್ಲಿ ನನಗೆ ಮುಖ್ಯವಾದದ್ದು ಕಂಡರೆ ಅದನ್ನು ಆಚರಿಸುತ್ತೇನೆ. ಅಂಬೇಡ್ಕರ್‌ ಅವರ ವಿಚಾರಗಳಲ್ಲಿ ಹಿರಿದಾದದ್ದು ಕಂಡಾಗ ಅದನ್ನೂ ಹಿಂಬಾಲಿಸುತ್ತೇನೆʼ.

ಗಾಂಧಿ ಮತ್ತು ಅಂಬೇಡ್ಕರ್‌ ಇಬ್ಬರೂ ಅಜ್ಮೇರ್‌ಗೆ ಭೇಟಿ ನೀಡಿದ್ದರು. ಅಂಬೇಡ್ಕರ್‌ ವಿಚಾರಕ್ಕೆ ಬರುವುದಾದರೆ, ನಾವು ಅವರನ್ನು ರೈಲ್ವೆ ನಿಲ್ದಾಣದಲ್ಲಿ ರೈಲು ಎಲ್ಲಿಗೋ ಹೋಗುವ ಮಧ್ಯೆ ಒಂದಿಷ್ಟು ಹೊತ್ತು ನಿಂತಾಗ ಅವರನ್ನು ಭೇಟಿ ಮಾಡಿ, ಮಾಲಾರ್ಪಣೆ ಮಾಡುತ್ತಿದ್ದೆವು. ಶೋಭಾರಾಂ ಎಮ್ಮ ಎಳೆವಯಸ್ಸಿನಲ್ಲಿಯೇ ಈ ಇಬ್ಬರನ್ನೂ ಭೇಟಿಯಾಗಿದ್ದಾರೆ.

1943ರಲ್ಲಿ, ನಾನಿನ್ನೂ ತುಂಬಾ ಚಿಕ್ಕವನಾಗಿದ್ದಾಗ ಮಹಾತ್ಮ ಗಾಂಧಿಯವರು ಇಲ್ಲಿ, ನಾವು ಕುಳಿತಿರುವ ಇದೇ ಜಾಗದಲ್ಲಿ ಇದೇ ಜಾದೂಗಾರ ಬಸ್ತಿಯಲ್ಲಿ ಕುಳಿತಿದ್ದರು. ಶೋಭಾರಾಂ ಅವರಿಗೆ ಆಗ 8 ವರ್ಷ ಇರಬೇಕು.

ಅಂಬೇಡ್ಕರ್‌ ಅವರ ವಿಚಾರಕ್ಕೆ ಬರುವುದಾದರೆ, ನಾನು ಒಮ್ಮೆ ನಮ್ಮ ನಾಯಕರಿಂದ ಬರೋಡಾಗೆ ಪತ್ರವನ್ನು ಒಯ್ದು ಅಂಬೇಡ್ಕರ್‌ ಅವರಿಗೆ ಮುಟ್ಟಿಸಿದ್ದೆ. ನಾವು ಮುಖ್ಯವಾದ ಕಾಗದ ಪತ್ರಗಳನ್ನು ಖುದ್ದಾಗಿ ತೆಗೆದುಕೊಂಡು ಹೋಗುತ್ತಿದ್ದೆವು. ಆಗ ಅವರು ನನ್ನ ತಲೆ ಸವರಿ, ʻನೀನು ಅಜ್ಮೇರ್‌ನಲ್ಲಿ ವಾಸಿಸುತ್ತೀಯಾ?ʼ ಎಂದು ಕೇಳಿದ್ದರು.

Postcards from the Swatantrata Senani Sangh to Shobharam inviting him to the organisation’s various meetings and functions
PHOTO • P. Sainath
Postcards from the Swatantrata Senani Sangh to Shobharam inviting him to the organisation’s various meetings and functions
PHOTO • P. Sainath
Postcards from the Swatantrata Senani Sangh to Shobharam inviting him to the organisation’s various meetings and functions
PHOTO • P. Sainath

ಸ್ವಾತಂತ್ರ್ಯ ಸೇನಾನಿ ಸಂಘದಿಂದ ಶೋಭಾರಾಮ್‌ ಅವರಿಗೆ ಬಂದ ಪತ್ರಗಳು. ಸಂಘಟನೆಯು ವಿವಿಧ ಸಭೆ ಸಮಾರಂಭಗಳಿಗೆ ಅವರನ್ನು ಆಹ್ವಾನಿಸುತ್ತಿರುತ್ತದೆ

ಅವರಿಗೆ ಶೋಭಾರಾಂ ಕೋಲಿ ಸಮಾಜದವರು ಎಂದು ಗೊತ್ತಿತ್ತಾ?

ʻಹೌದು, ನಾನು ಅವರಿಗೆ ಹೇಳಿದ್ದೆ. ಆದರೆ, ಅವರು ಆ ಬಗ್ಗೆಯೇನೂ ತುಂಬಾ ಚರ್ಚಿಸಲಿಲ್ಲ. ಅವರಿಗೆ ಈ ವಿಷಯಗಳು ಅರ್ಥವಾಗುತ್ತಿತ್ತು. ಅವರು ತುಂಬಾ ವಿದ್ಯಾವಂತರು. ನನಗೆ ಅಗತ್ಯಬಿದ್ದರೆ ನಾನು ಅವರಿಗೆ ಬರೆಯಬಹುದುʼ ಎಂದು ಹೇಳಿದರು.

ಶೋಭಾರಾಂ ಅವರಿಗೆ ʻದಲಿತʼ, ʻಹರಿಜನʼ ಎರಡೂ ಪದಗಳೂ ಒಪ್ಪಿತವೇ. ʻಒಬ್ಬರು ಕೋಲಿ ಜಾತಿಯವರಾಗಿದ್ದರೆ ಇರಲಿ ಬಿಡಿ. ಅದರಲ್ಲಿ ಮುಚ್ಚಿಡುವಂತಹದ್ದು ಏನಿದೆ? ನಾವು ಹರಿಜನ ಅಥವಾ ದಲಿತ ಎಂದು ಹೇಳಿದಾಗ ಅದರಲ್ಲಿ ವ್ಯತ್ಯಾಸವೇನಿಲ್ಲ. ಕೊನೆಗೆ, ನೀವು ಯಾವ ಹೆಸರಿನಿಂದ ಕರೆದೂ ಅವರು ಪರಿಶಿಷ್ಟ ಜಾತಿಯವರೇ ಆಗಿರುತ್ತಾರೆʼ.

ಶೋಭಾರಾಂ ಅವರ ಪಾಲಕರು ರೈಲ್ವೆ ಯೋಜನೆ ನಡೆಯುತ್ತಿದ್ದ ಕಡೆ ಕೂಲಿ ಕಾರ್ಮಿಕರಾಗಿದ್ದರು.

ಎಲ್ಲರೂ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದೆವು. ಕುಟುಂಬದಲ್ಲಿ ಯಾರೂ ಮದ್ಯ ಸೇವಿಸುತ್ತಿರಲಿಲ್ಲʼ ಎನ್ನುವ ಶೋಭಾರಾಂ, ʻಭಾರತದ ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ ಅವರ ಸಾಮಾಜಿಕ ಹಿನ್ನೆಲೆಯೇ ನಮ್ಮದೂ. ಕೋವಿಂದ ಅವರು ಒಮ್ಮೆ ನಮ್ಮ ಅಖಿಲ ಭಾರತೀಯ ಕೋಲಿ ಸಮಾಜದ ಅಧ್ಯಕ್ಷರಾಗಿದ್ದರುʼ ಎಂದರು.

ಶೋಭಾರಾಂ ಅವರ ಸಮುದಾಯವನ್ನು ಶಿಕ್ಷಣದಿಂದ ಹೊರಗಿಡಲಾಗಿತ್ತು. ಬಹುಶಃ ಅವರು ತುಂಬಾ ತಡವಾಗಿ ಶಾಲೆಗೆ ಕಾಲಿಡಲು ಇದೂ ಮುಖ್ಯ ಕಾರಣವಾಗಿತ್ತು. ಹಿಂದೂಸ್ಥಾನದಲ್ಲಿ ಮೇಲ್ಜಾತಿಯ ಜನರು, ಬ್ರಾಹ್ಮಣರು, ಜೈನರು ಹಾಗೂ ಇತರರು ಬ್ರಿಟಿಷರ ಗುಲಾಮರಾದರು. ಈ ಜನರೇ ಸದಾ ಅಸ್ಪೃಶ್ಯತೆ ಆಚರಿಸುತ್ತಿದ್ದದ್ದು.

ʻಆಗ ಕಾಂಗ್ರೆಸ್‌ ಅಥವಾ ಆರ್ಯ ಸಮಾಜ ಇಲ್ಲದಿದ್ದಲ್ಲಿ, ಇಲ್ಲಿರುವ ಎಷ್ಟೋ ಪರಿಶಿಷ್ಟ ಜಾತಿಯವರು ಇಸ್ಲಾಂಗೆ ಮತಾಂತರವಾಗಬಹುದಿತ್ತು. ನಾವು ಹಳೆಯ ರೀತಿಯಲ್ಲೇ ಬದುಕಿದ್ದರೆ ಎಂದಿಗೂ ಸ್ವಾತಂತ್ರ್ಯ ದೊರಕಲು ಸಾಧ್ಯವಾಗುತ್ತಿರಲಿಲ್ಲʼ.

The Saraswati Balika Vidyalaya was started by the Koli community in response to the discrimination faced by their students in other schools. Shobharam is unhappy to find it has been shut down
PHOTO • P. Sainath

ಬೇರೆ ಶಾಲೆಗಳಲ್ಲಿ ತಮ್ಮ ಸಮುದಾಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ತಾರತಮ್ಯವನ್ನು ಕಂಡು ಕೋಲಿ ಸಮುದಾಯವು ಸರಸ್ವತಿ ಬಾಲಿಕಾ ವಿದ್ಯಾಲಯವನ್ನು ಪ್ರಾರಂಭಿಸಿತು. ಪ್ರಸ್ತುತ ಅದನ್ನು ಮುಚ್ಚಿರುವುದರ ಕುರಿತು ಶೋಭಾರಾಮ್‌ ಅವರಿಗೆ ಅಸಮಾಧಾನವಿದೆ

The school, which once awed Mahatma Gandhi, now stands empty and unused
PHOTO • P. Sainath

ಒಂದು ಕಾಲದಲ್ಲಿ ಮಹಾತ್ಮಾ ಗಾಂಧಿಯವರನ್ನು ಬೆರಗುಗೊಳಿಸಿದ್ದ ಈ ಶಾಲೆ ಪ್ರಸ್ತುತ ಪಾಠಗಳಿಲ್ಲದೆ, ಮಕ್ಕಳಿಲ್ಲದೆ ಖಾಲಿ ನಿಂತಿದೆ

ʻಆ ಸಮಯದಲ್ಲಿ ಯಾರೂ ಅಸ್ಪೃಶ್ಯರನ್ನು ಶಾಲೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವನು ಕಂಜಾರ್‌, ಅವನು ದೋಂಮ ಎನ್ನುತ್ತಿದ್ದರು. ನಮ್ಮನ್ನು ಆಚೆ ಇರಿಸಲಾಗುತ್ತಿತ್ತು. ನಾನು ಒಂದನೇ ತರಗತಿಗೆ ಕಾಲಿಟ್ಟಾಗ ನನ್ನ ವಯಸ್ಸು 11. ಆ ವೇಳೆಗೆ ಆರ್ಯ ಸಮಾಜದ ಮಂದಿ ಕ್ರಿಶ್ಚಿಯನ್ನರನ್ನು ಎದುರಿಸಲು ಯತ್ನಿಸುತ್ತಿದ್ದರು. ನನ್ನ ಜಾತಿಯ ಎಷ್ಟೋ ಜನ ಲಿಂಕ್‌ ರೋಡ್‌ ಪ್ರದೇಶದವರು. ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡಿದ್ದರು. ಹಾಗಾಗಿ ಹಿಂದೂ ಸಮುದಾಯದವರು ನಮ್ಮನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಲ್ಲದೆ, ದಯಾನಂದ ಆಂಗ್ಲೋ ವೇದಿಕೆ ಶಾಲೆಗಳಿಗೆ ಸೇರಲು ಉತ್ತೇಜಿಸಿದರುʼ.

ಆದರೆ, ತಾರತಮ್ಯ ಅಳಸಿ ಹೋಗಲಿಲ್ಲ. ಕೋಲಿ ಸಮಾಜ ತನ್ನದೇ ಶಾಲೆಯನ್ನು ಆರಂಭಿಸಿತು.

ಆ ಶಾಲೆಗೇ ಗಾಂಧಿ ಅವರು ಬಂದದ್ದು. ಸರಸ್ವತಿ ಬಾಲಿಕಾ ವಿದ್ಯಾಲಯಕ್ಕೆ. ನಮ್ಮ ಸಮುದಾಯದ ಹಿರಿಯರು ಅರಂಭಿಸಿದ ಶಾಲೆ ಇದು. ಅದು ಈಗಲೂ ಚಾಲ್ತಿಯಲ್ಲಿದೆ. ಗಾಂಧಿ ನಮ್ಮ ಕೆಲಸ ನೋಡಿ ಬೆರಗಾದರು. ನೀವು ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಾನು ಅಂದುಕೊಂಡದ್ದಕ್ಕಿಂತಲೂ ಮುಂದೆ ಹೋಗಿದ್ದೀರಿʼ ಎಂದರು.

ಕೋಲಿ ಸಮಾಜದವರು ಆರಂಭಿಸಿದರೂ ಇತರೆ ಜಾತಿಗಳವರೂ ಸಹಾ ಶಾಲೆಗೆ ಸೇರಿದರು. ಮೊದಲು ಆ ಎಲ್ಲರೂ ಪರಿಶಿಷ್ಟ ಜಾತಿಯವರಾಗಿದ್ದರು. ನಂತರದ ದಿನಗಳಲ್ಲಿ ಇತರೆ ಜಾತಿಯವರೂ ಸೇರಿದರು. ಹೀಗಾಗಿ ಮೇಲ್ವರ್ಗದ ಅಗರವಾಲ್‌ಗಳು ಈ ಶಾಲೆಯ ಮೇಲುಸ್ತುವಾರಿ ಕೈಗೆತ್ತಿಕೊಂಡರು. ನೋಂದಣಿ ನಮ್ಮ ಹೆಸರಿನಲ್ಲಿಯೇ ಇತ್ತು. ಆದರೆ, ಅವರು ಆಡಳಿತವನ್ನು ತಮ್ಮ ಕೈಗೆತ್ತಿಕೊಂಡರು. ಶೋಭಾರಾಂ ಅವರು ಈಗಲೂ ಶಾಲೆಗೆ ಭೇಟಿ ಕೊಡುತ್ತಾರೆ. ಅಥವಾ ಕೋವಿಡ್‌-19 ಕಾಲಿಟ್ಟು ಎಲ್ಲಾ ಶಾಲೆಗಳು ಮುಚ್ಚುವವರೆಗೆ.

ಹೌದು, ಈಗಲೂ ಹೋಗುತ್ತೇನೆ. ಆದರೆ ಈಗ ಶಾಲೆ ನಡೆಸುವವರು ಅವರೇ. ಅವರು ಬಿಎಡ್‌ ಕಾಲೇಜ್‌ ಸಹಾ ಆರಂಭಿಸಿದ್ದರೆ?

ನಾನು ಒಂಬತ್ತನೆಯ ತರಗತಿಯವರೆಗೆ ಮಾತ್ರ ಓದಿದೆ. ಅದರ ಬಗ್ಗೆ ನನಗೆ ಪಶ್ಚಾತ್ತಾಪವಿದೆ. ನನ್ನ ಕೆಲವು ಗೆಳೆಯರು ಚೆನ್ನಾಗಿ ಓದಿ ಸ್ವಾತಂತ್ರ್ಯಾನಂತರ ಐಎಎಸ್‌ ಅಧಿಕಾರಿಗಳಾದರು. ಇನ್ನು ಕೆಲವರು ಉನ್ನತ ಮಟ್ಟ ತಲುಪಿದರು. ಆದರೆ, ನಾನು ಸೇವೆಗೆ ಮುಡಿಪಾದೆ.

Former President of India, Pranab Mukherjee, honouring Shobharam Gehervar in 2013
PHOTO • P. Sainath

2013ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರು ಶೋಭಾರಾಮ್‌ ಅವರನ್ನು ಗೌರವಿಸುತ್ತಿರುವುದು

ಶೋಭಾರಾಂ ಅವರು ದಲಿತರು ಹಾಗೂ ಸ್ವಯಂಘೋಷಿತ ಗಾಂಧಿವಾದಿ. ಅವರು ಆಳದಲ್ಲಿ ಅಂಬೇಡ್ಕರ್‌ ಅವರನ್ನೂ ಇಷ್ಟಪಡುತ್ತಾರೆ. ನಾನು ಇಬ್ಬರ ಜೊತೆಯೂ ಇದ್ದೆ. ಗಾಂಧಿವಾದ ಹಾಗೂ ಕ್ರಾಂತಿವಾದ. ಎರಡಕ್ಕೂ ನಿಕಟ ನಂಟಿತ್ತು. ಅವರು ಗಾಂಧಿವಾದಿಯಾಗಿದ್ದಾಗ ಮೂರು ರಾಜಕೀಯ ಧಾರೆಗಳ ಜೊತೆ ಒಡನಾಟ ಹೊಂದಿದ್ದರು.

ಶೋಭಾರಾಂ ಅವರು ಗಾಂಧಿಯನ್ನು ಪ್ರೀತಿಸಿ, ಪ್ರಶಂಶಿಸಿದರೂ ಸಹಾ ಅವರನ್ನು ವಿಮರ್ಶೆ ಮಾಡದೆ ಬಿಡುವುದಿಲ್ಲ. ಅದರಲ್ಲೂ ಅಂಬೇಡ್ಕರ್‌ ಜೊತೆಗೆ ಸಂಬಂಧದ ವಿಷಯ ಬಂದಾಗ.

ಅಂಬೇಡ್ಕರ್‌ ಅವರ ಸವಾಲನ್ನು ಎದುರಿಸಬೇಕಾಗಿ ಬಂದಾಗ ಗಾಂಧಿ ಭಯಗೊಂಡರು. ಎಲ್ಲಾ ಪರಿಶಿಷ್ಟರೂ ಅಂಬೇಡ್ಕರ್‌ ಜೊತೆ ಹೋಗುತ್ತೇವೆ ಎಂಬುದು ಅವರಿಗೆ ಭಯ ತಂದಿತ್ತು. ನೆಹರೂ ಅವರಿಗೂ ಸಹಾ. ಇದರಿಂದ ಚಳವಳಿಯ ಅಗಾಧತೆಗೆ ಧಕ್ಕೆ ಬರುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ಅವರಿಬ್ಬರಿಗೂ ಅಂಬೇಡ್ಕರ್‌ ಅವರು ಮಹಾನ್‌ ವ್ಯಕ್ತಿ ಎಂಬುದು ಗೊತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಎಲ್ಲರೂ ಈ ಸಂಘರ್ಷದ ಬಗ್ಗೆ ಆತಂಕಿತರಾಗಿದ್ದರು.

ಅವರು ಅಂಬೇಡ್ಕರ್‌ ಅಲ್ಲದೆ, ಈ ದೇಶದ ಕಾನೂನು ಹಾಗೂ ಸಂವಿಧಾನವನ್ನು ರಚಿಸಲು ಸಾಧ್ಯವಿಲ್ಲ ಎಂದು ಮನಗಂಡಿದ್ದರು. ಅವರೊಬ್ಬರೇ ಇದಕ್ಕೆ ತಕ್ಕುನಾದ ವ್ಯಕ್ತಿ. ಅವರೇನೂ ಈ ಕೆಲಸಕ್ಕಾಗಿ ಬೇಡಲಿಲ್ಲ. ಎಲ್ಲರೂ ಅವರಿಗೆ ನಮ್ಮ ಕಾನೂನಿನ ಚೌಕಟ್ಟು ಸಿದ್ಧಪಡಿಸಿಕೊಡುವಂತೆ ಬೇಡಿದರು. ಅವರು ಒಂದು ರೀತಿ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಬ್ರಹ್ಮನಂತೆ. ಬುದ್ಧಿವಂತ ಹಾಗೂ ಇಳಿವಳಿಕಯುಳ್ಳ ವ್ಯಕ್ತಿ. ಆದರೂ ನಾವು ಈ ಹಿಂದೂಸ್ಥಾನವಾಸಿಗಳು ಅತಿ ಭಯಂಕರ. 1947ರ ಮೊದಲು ಹಾಗೂ ನಂತರವೂ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡೆವು. ಈ ಸ್ವಾತಂತ್ರ್ಯ ಚಳವಳಿಯ ಕಥನದಿಂದಲೂ ಅವರನ್ನು ಹೊರಗಿಡಲಾಯಿತು. ಅವರು ಇಂದಿಗೂ ನನಗೆ ಸ್ಫೂರ್ತಿಸೆಲೆʼ ಎಂದರು.

ನಾನು ಹೃದಯದಾಳದಿಂದ ಒಬ್ಬ ಕಾಂಗ್ರೆಸ್ಸಿಗ, ನಿಜವಾದ ಕಾಂಗ್ರೆಸ್ಸಿಗ. ಹಾಗೆನ್ನುವ ಮೂಲಕ ಅವರು ಪಕ್ಷದ ಈಗಿನ ದಿಕ್ಕಿನ ಬಗ್ಗೆ ಟೀಕಿಸಿದರು. ಭಾರತದ ಈಗಿನ ನಾಯಕತ್ವ ಈ ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತಿದೆ. ಕಾಂಗ್ರೆಸ್‌ ಪುನರ್‌ರೂಪಿಸಿಕೊಂಡು ದೇಶದ ಸಂವಿಧಾನವನ್ನು ಉಳಿಸಲು ಮುಂದಾಗಬೇಕುʼ ಎಂದರು. ಶೋಭಾರಾಂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರನ್ನು ಪ್ರಶಂಸಿಸಿದರು. ಅವರಿಗೆ ಜನರ ಬಗ್ಗೆ ಕಾಳಜಿಯಿದೆ. ನಮ್ಮಂತಹ ಸ್ವಾತಂತ್ರ್ಯ ಯೋಧರನ್ನು ಹುಡುಕುತ್ತಾರೆ. ಈ ರಾಜ್ಯದ ಸ್ವಾತಂತ್ರ್ಯ ಯೋಧರ ಪಿಂಚಣಿ ಪ್ರಮಾಣ ಇಡೀ ದೇಶದಲ್ಲೇ ಹೆಚ್ಚು. ಮಾರ್ಚ್‌ 2021ರಲ್ಲಿ ಗೆಹ್ಲೋಟ್‌ ಸರ್ಕಾರ ಪಿಂಚಣಿ ಮೊತ್ತವನ್ನು 50 ಸಾವಿರ ರೂ.ಗೆ ಹೆಚ್ಚಿಸಿದೆ. ಕೇಂದ್ರದಿಂದ ನೀಡುವ ಪಿಂಚಣಿ ಮೊತ್ತ 30 ಸಾವಿರ ಮಾತ್ರ.

ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಳಿಯುವಾಗಲೂ ಶೋಭಾರಾಂ ತಮ್ಮನ್ನು ಗಾಂಧಿವಾದಿ ಎಂದೇ ಬಣ್ಣಿಸಿಕೊಳ್ಳುತ್ತಾರೆ.

ನಾನು ಯಾರನ್ನು ಇಷ್ಟಪಟ್ಟೆನೋ ಅವರನ್ನು ಅನುಸರಿಸಿದೆ. ನನಗೆ ಒಪ್ಪಿಗೆಯಾದ ಎಲ್ಲರ ಚಿಂತನೆಗಳನ್ನೂ ಆಚರಿಸಿದೆ. ಹಾಗೆ ಮಾಡುವುದರಲ್ಲಿ ನನಗೆ ಏನೂ ಸಮಸ್ಯೆಯಾಗಲಿಲ್ಲ. ಅಥವಾ ಈ ಇಬ್ಬರನ್ನು ಅನುಸರಿಸುವುದರಲ್ಲೂ ಆಗಲಿಲ್ಲ ಎನ್ನುತ್ತಾರೆ.

*****

‘This [Swatantrata Senani] bhavan was special. There was no single owner for the place. There were many freedom fighters, and we did many things for our people,’ says Gehervar. Today, he is the only one looking after it
PHOTO • Urja

ʼಈ [ಸ್ವಾತಂತ್ರ್ಯ ಸೇನಾನಿ] ಭವನವು ವಿಶೇಷವಾದದ್ದು. ಈ ಸ್ಥಳ ಒಬ್ಬನ ಮಾಲಿಕತ್ವದಲ್ಲಿರಲಿಲ್ಲ. ಆಗ ಹಲವು ಸ್ವಾತಂತ್ರ್ಯ ಹೋರಾಟಗಾರರಿದ್ದರು, ಅವರು ಜನರಿಗಾಗಿ ಹಲವು ಕೆಲಸಗಳನ್ನು ಮಾಡುತ್ತಿದ್ದರು,ʼ ಎನ್ನುತ್ತಾರೆ ಗೆಹರ್ವಾರ್.‌ ಇಂದು ಅವರೊಬ್ಬರೇ ಈ ಭವನವನ್ನು ನೋಡಿಕೊಳ್ಳುತ್ತಿದ್ದಾರೆ

ಶೋಭಾರಾಂ ಗೆಹೆರ್ವಾರ್‌ ಅವರು ನಮ್ಮೊಂದಿಗೆ ಅಜ್ಮೇರ್‌ನಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಸೇರುತ್ತಿದ್ದ ಸ್ವಾತಂತ್ರತಾ ಸೇನಾನಿ ಭವನದಲ್ಲಿ ಮಾತನಾಡುತ್ತಿದ್ದರು. ಇದು ಜನನಿಬಿಡ ಮಾರುಕಟಟೆ ಕೇಂದ್ರದಲ್ಲಿಯೇ ಇದೆ. ನಾನು ಅಂಕೆ ಮೀರಿದ ಈ ಟ್ರಾಫಿಕ್‌ ಅನ್ನು ಸರಾಗವಾಗಿ, ರಭಸವಾಗಿ ದಾಟಿಕೊಂಡು ಹೋಗುತ್ತಿದ್ದ ಈ ವ್ಯಕ್ತಿಯ ಜತೆ ಹೆಜ್ಜೆಯಿಡಲು ಯತ್ನಿಸುತ್ತಿದ್ದೆ. ಅವರು ಯಾವುದೇ ಊರುಗೋಲು ಬಳಸದೆ ರಭಸವಾಗಿ ಹೆಜ್ಜೆ ಇಡುತ್ತಾರೆ.

ಅವರು ಸ್ವಲ್ಪ ಗೊಂದಲಗೊಂಡವರಂತೆ ಕಂಡರು. ಅದನ್ನು ನಿಭಾಯಿಸಲು ಒದ್ದಾಡುತ್ತಿದ್ದದ್ದನ್ನು ನಾವು ಕಂಡ ಘಟನೆ ಆದದ್ದು ಒಂದಿಷ್ಟು ನಂತರ. ನಾವು ಶಾಲೆಗೆ ಭೇಟಿ ಕೊಟ್ಟಾಗ ಅವರಲ್ಲಿ ಅತೀವ ಹೆಮ್ಮೆಯಿತ್ತು. ಅಲ್ಲಿ ನಿಜ ಅರ್ಥದಲ್ಲಿ ಗೋಡೆಯ ಮೇಲಿನ ಬರಹವಿತ್ತು. ಸರಸ್ವತಿ ಶಾಲೆ ಮುಚ್ಚಿದೆ ಎಂದು ಬಣ್ಣದಲ್ಲಿ ಬರೆದದ್ದು ಕಂಡಿತು. ಆ ಶಾಲೆ ಮತ್ತು ಕಾಲೇಜು ಎರಡೂ ಮುಚ್ಚಿದ್ದವು. ಅಲ್ಲಿದ್ದ ಕಾವಲುಗಾರ ಹಾಗೂ ಇತರರು ಶಾಶ್ವತವಾಗಿ ಮುಚ್ಚಿದೆ ಎಂದರು. ಇದು ಇಷ್ಟರಲ್ಲೇ ಅತಿ ಬೆಲೆಯ ಆಸ್ತಿಯಾಗಿ ಬದಲಾಗಲಿತ್ತು.

ಸ್ವಾತಂತ್ರತಾ ಭವನದಲ್ಲಿ ಅವರು ಹೆಚ್ಚು ಭಾವನಾತ್ಮಕವಾಗಿ, ಬೇಸರದ ಭಾವದಲ್ಲಿದ್ದರು.

1947ರ ಆಗಸ್ಟ್‌ 15ರಂದು ಕೆಂಪು ಕೋಟೆಯ ಮೇಲೆ ಅವರು ಭಾರತದ ಬಾವುಟ ಹಾರಿಸಿದಾಗ ನಾವು ಇಲ್ಲಿ ತಿರಂಗಾವನ್ನು ಹಾರಿಸಿದೆವು. ನಾವು ಈ ಕಟ್ಟಡವನ್ನು ನವವಧುವಿನಂತೆ ಸಿಂಗರಿಸಿದ್ದೆವು. ಸ್ವಾತಂತ್ರ್ಯ ಯೋಧರೆಲ್ಲಾ ಇಲ್ಲಿದ್ದೆವು. ಆಗ ನಾವಿನ್ನೂ ಯುವಕರು. ನಾವೆಲ್ಲರೂ ಉತ್ಸಾಹದಲ್ಲಿದ್ದೆವುʼ.

ಈ ಭವನ ವಿಶೇಷವಾದದ್ದು. ಈ ಸ್ಥಳಕ್ಕೆ ಒಬ್ಬರೇ ಮಾಲೀಕ ಎಂದು ಇರಲಿಲ್ಲ. ಎಷ್ಟೊಂದು ಸ್ವಾತಂತ್ರ್ಯ ಯೋಧರಿದ್ದರು. ನಮ್ಮ ದೇಶಕ್ಕಾಗಿ ನಾವು ಎಷ್ಟೊಂದೆಲ್ಲಾ ಮಾಡಿದೆವು. ನಾವು ಕೆಲವು ಬಾರಿ ದೆಹಲಿಗೆ ಹೋಗಿ ನೆಹರೂರವರನ್ನು ಭೇಟಿ ಮಾಡುತ್ತಿದ್ದೆವು. ನಂತರ ಇಂದಿರಾ ಗಾಂಧಿಯವರನ್ನು ಕಾಣುತ್ತಿದ್ದೆವು. ಈಗ ಇವರಾರೂ ಜೀವಂತವಾಗಿಲ್ಲ.

ನಾವು ಎಷ್ಟೊಂದು ಸ್ವಾತಂತ್ರ್ಯ ಯೋಧರನ್ನು ಹೊಂದಿದ್ದೆವು. ಎಷ್ಟೊಂದು ಜನರ ಜೊತೆ ನಾವು ಕ್ರಾಂತಿ ವಿಭಾಗದಲ್ಲೂ, ಸೇವಾ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ ಎನ್ನುತ್ತಾ ಅವರು ಒಂದಷ್ಟು ಹೆಸರುಗಳನ್ನು ಹೇಳುತ್ತಾ ಹೋದರು.

ಡಾ. ನಿಜದಾನಂದ್‌, ವೀರ್‌ ಸಿಂಗ್‌ ಮೆಹ್ತಾ, ರಾಮ್‌ನಾರಾಯಣ್‌ ಚೌಧರಿ, ರಾಮ್‌ನಾರಾಯಣ್‌ ಅವರು ದೈನಿಕ ನವಜ್ಯೋತಿಯ ಸಂಪಾದಕರಾಗಿದ್ದ, ದುರ್ಗಾಪ್ರಸಾದ್‌ ಚೌಧರಿಯವರ ಅಣ್ಣ. ಅಜ್ಮೇರ್‌ನ ಭಾರ್ಗವ ಕುಟುಂಬ, ಅಂಬೇಡ್ಕರ್‌ ಅವರ ಜೊತೆ ಸಂವಿಧಾನದ ಕರಡು ಛಾಪಿಸಿದ ಸಮಿತಿಯ ಸದಸ್ಯರಲ್ಲೊಬ್ಬರು. ಮುಕುಟ್‌ ಬಿಹಾರ್‌ ಭಾರ್ಗವ್‌. ಈ ಯಾರೂ ಈಗ ಬದುಕಿಲ್ಲ. ನಮ್ಮ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರರಲೊಬ್ಬರಾದ ಗೋಕುಲಬಾಯಿ ಭಟೆ. ಇವರನ್ನು ರಾಜಸ್ಥಾನದ ಗಾಂಧೀಜಿ ಎಂದೇ ಕರೆಯುತ್ತಿದ್ದರು. ಅವರು ಕೆಲಕಾಲ ಸಿರೋಹಿ ರಾಜ ಮನೆತನದ ಮುಖ್ಯಮಂತ್ರಿ ಸಹಾ ಆಗಿದ್ದರು. ಆದರೆ, ಸಮಾಜಸೇವೆ ಹಾಗೂ ಸ್ವಾತಂತ್ರ್ಯ ಹೋರಾಟ ನಡೆಸಲು ಅವರು ಅದನ್ನು ಬಿಟ್ಟುಕೊಟ್ಟರು.

The award presented to Shobharam Gehervar by the Chief Minister of Rajasthan on January 26, 2009, for his contribution to the freedom struggle
PHOTO • P. Sainath

ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ ಜನವರಿ 26, 2009ರಂದು ಅಂದಿನ ರಾಜಸ್ಥಾನದ ಮುಖ್ಯಮಂತ್ರಿ ಶೋಭರಾಮ್ ಗೆಹರ್ವಾರ್ ಅವರಿಗೆ ನೀಡಿದ ಪ್ರಶಸ್ತಿ

ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ – ಆರ್‌ಎಸ್‌ಎಸ್‌ನ ಯಾರೊಬ್ಬರ ಪಾತ್ರವೂ ಇರಲಿಲ್ಲ ಎನ್ನುವುದನ್ನು ಶೋಭಾರಾಂ ಒತ್ತಿ ಹೇಳಿದರು.

ʼವೋ? ಉನ್ಹೋನೇ ತೋ ಉಂಗ್ಲಿ ಭೀ ನಹೀ ಕಟಾಯಿʼ [ಅವರು ತಮ್ಮ ಬೆರಳಿಗೆ ಸಹಾ ಗಾಯವಾಗಿ ನೋವು ಅನುಭವಿಸಲಿಲ್ಲ].

ಅವರನ್ನು ಈಗ ಕಾಡುತ್ತಿರುವ ಮುಖ್ಯ ವಿಷಯವೆಂದರೆ, ಆ ಸ್ವಾತಂತ್ರತಾ ಸೇನಾನಿ ಭವನದ ಭವಿಷ್ಯ ಏನಾಗುತ್ತದೋ ಎನ್ನುವುದು.

ʻಈಗ ನನಗೆ ವಯಸ್ಸಾಗಿದೆ. ನಾನು ದಿನನಿತ್ಯ ಇಲ್ಲಿಗೆ ಬರಲಾಗುವುದಿಲ್ಲ. ನನಗೆ ಆರೋಗ್ಯ ಸರಿಯಾಗಿದ್ದರೆ ನಾನು ಬಂದು ಇಲ್ಲಿ ಕೆಲ ಗಂಟೆ ಕೂತು ಹೋಗುತ್ತೇನೆ. ಇಲ್ಲಿಗೆ ಬರುವವರನ್ನು ಭೇಟಿ ಮಾಡಿ ನನಗೆ ಸಾಧ್ಯವಾದಾಗಲೆಲ್ಲ ಅವರ ಸಮಸ್ಯೆಗೆ ಪರಿಹಾರ ಒದಗಿಸಲು ಯತ್ನಿಸುತ್ತೇನೆʼ.

ʻನನ್ನ ಜೊತೆ ಯಾರೂ ಇಲ್ಲ. ಈ ನಡುವೆ ನಾನು ಒಂಟಿಯಾಗಿದ್ದೇನೆ. ಇತರೆ ಸ್ವಾತಂತ್ರ್ಯ ಯೋಧರೆಲ್ಲಾ ನಿಧನ ಹೊಂದಿದ್ದಾರೆ. ಈಗ ಬದುಕಿರುವ ಇತರರೂ ಸಹಾ ಗಟ್ಟಿಮುಟ್ಟಾಗಿಲ್ಲ. ಅನಾರೋಗ್ಯದಿಂದ ನರಳುತ್ತಿದ್ದಾರೆ. ಹಾಗಾಗಿ ಈಗ ಈ ಸ್ವಾತಂತ್ರತಾ ಸೇನಾನಿ ಭವನವನ್ನು ನೋಡಿಕೊಳ್ಳುತ್ತಿರುವವನು ನಾನೊಬ್ಬನೇ. ಇಂದಿಗೂ ಸಹಾ ನಾನು ಇದನ್ನು ಕಾಪಾಡುವ, ಉಳಿಸುವ ಬಗ್ಗೆ ಯೋಚಿಸುತ್ತೇನೆ. ಆದರೆ, ನನ್ನ ಜೊತೆ ಯಾರೂ ಇಲ್ಲದಿರುವುದನ್ನು ನೆನೆದಾಗ ನನ್ನ ಕಣ್ಣು ತುಂಬಿಬರುತ್ತದೆʼ.

ನಾನು ಇನ್ನರಾದರೂ ಈ ಭವನವನ್ನು ವಶಕ್ಕೆ ತೆಗೆದುಕೊಳ್ಳುವ ಮುಂಚೆ ಇದನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಬರೆದಿದ್ದೇನೆ.

ಈ ಜಾಗ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ. ಇದು ನಗರದ ಹೃದಯಭಾಗದಲ್ಲಿದೆ. ಸುಮಾರು ಜನ ನನಗೆ ಆಮಿಷ ಒಡ್ಡಲು ಯತ್ನಿಸಿದ್ದಾರೆ. ಶೋಭಾರಾಂಜೀ, ನೀವೊಬ್ಬರೇ ಏನು ಮಾಡಲು ಸಾಧ್ಯ? ಈ ಜಾಗವನ್ನು ನಮಗೆ ಕೊಟ್ಟುಬಿಡಿ. ನಾವು ನಿಮಗೆ ಕೋಟ್ಯಂತರ ರೂಪಾಯಿ ನೀಡುತ್ತೇವೆʼ ಎನ್ನುತ್ತಾರೆ. ನಾನು ಸತ್ತ ನಂತರ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದ್ದೇನೆ. ನಾನೇನು ಮಾಡಲು ಸಾಧ್ಯ? ಅವರು ಹೇಳಿದಂತೆ ನಾನು ಹೇಗೆ ಮಾಡಲಾಗುತ್ತದೆ. ಇದಕ್ಕಾಗಿ, ನಮ್ಮ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಪ್ರಾಣಬಿಟ್ಟಿದ್ದಾರೆ. ಆ ಎಲ್ಲಾ ಹಣದಿಂದ ನಾನೇನು ಮಾಡಲಿ?

ನಾನು ಈ ವಿಷಯವನ್ನು ನಿಮ್ಮ ಗಮನಕ್ಕೆ ತರಬೇಕು. ನಮ್ಮನ್ನು ಯಾರೂ ಲೆಕ್ಕಕ್ಕಿಟ್ಟಲ್ಲ. ಯಾರೂ ಸ್ವಾತಂತ್ರ್ಯ ಯೋಧರನ್ನು ವಿಚಾರಿಕೊಳ್ಳುವುದಿಲ್ಲ. ಯಾವೊಂದು ಪುಸ್ತಕವೂ ಶಾಲಾಮಕ್ಕಳಿಗೆ ನಾವು ಹೇಗೆ ಹೋರಾಡಿ, ಸ್ವಾತಂತ್ರ್ಯ ಗಳಿಸಿದೆವು ಎನ್ನುವುದನ್ನು ಹೇಳುವುದಿಲ್ಲ. ನಮ್ಮ ಬಗ್ಗೆ ಜನರಿಗೆ ಏನು ಗೊತ್ತಾಗುತ್ತದೆ?ʼ

ಬೆಂಗಳೂರಿನ ಬಹುರೂಪಿ ಪಬ್ಲಿಕೇಷನ್ಸ್ ಪ್ರಕಟಿಸಲಿರುವ ಕನ್ನಡ ಆವೃತ್ತಿಯ ಆಯ್ದ ಭಾಗ.

ಕನ್ನಡಕ್ಕೆ: ಜಿ ಎನ್ ಮೋಹನ್

P. Sainath

পি. সাইনাথ পিপলস আর্কাইভ অফ রুরাল ইন্ডিয়ার প্রতিষ্ঠাতা সম্পাদক। বিগত কয়েক দশক ধরে তিনি গ্রামীণ ভারতবর্ষের অবস্থা নিয়ে সাংবাদিকতা করেছেন। তাঁর লেখা বিখ্যাত দুটি বই ‘এভরিবডি লাভস্ আ গুড ড্রাউট’ এবং 'দ্য লাস্ট হিরোজ: ফুট সোলজার্স অফ ইন্ডিয়ান ফ্রিডম'।

Other stories by পি. সাইনাথ
Translator : G N Mohan

G N Mohan is a senior journalist based in Bangalore. The former Editor-in-chief for ETV and News 18 channels, he translated 'Everybody Loves a good drought' into Kannada.

Other stories by G N Mohan