ಆಕಿಫ್ ಎಸ್ ಕೆ ಪ್ರತಿ ದಿನ ಬೆಳಗ್ಗೆ ಹೇಸ್ಟಿಂಗ್ ಸೇತುವೆ ಬಳಿಯಿರುವ ತನ್ನ ತಾತ್ಕಾಲಿಕ ಜುಪ್ರಿಯಿಂದ (ಗುಡಿಸಲು) ಹೊರಟು ಕೋಲ್ಕತ್ತಾದ ಜನಪ್ರಿಯ ಪ್ರವಾಸಿ ಆಕರ್ಷಣೆಯಾದ ವಿಕ್ಟೋರಿಯಾ ಸ್ಮಾರಕವನ್ನು ತಲುಪುತ್ತಾರೆ. ದಾರಿಯಲ್ಲಿ ಅವರು ತಮ್ಮೊಂದಿಗೆ ರಾಣಿ ಮತ್ತು ಬಿಜ್ಲಿಯರನ್ನೂ ಕರೆದುಕೊಳ್ಳುತ್ತಾರೆ.
ಇವೆರಡು ಅವರಿಂದಲೇ ಹೆಸರಿಸಲ್ಪಟ್ಟಿರುವ ಕುದುರೆಗಳು ಅವರ ಹಂಗಾಮಿ ದುಡಿಮೆಗೆ ಸಹಾಯ ಮಾಡುತ್ತವೆ. “ಅಮಿ ಗಾರಿ ಚಲಾಯಿ [ನಾನು ಗಾಡಿ ಓಡಿಸುತ್ತೇನೆ]" ಎಂದು ಆಕಿಫ್ ಹೇಳುತ್ತಾರೆ. ಅವರು ಹೇಸ್ಟಿಂಗ್ಸ್ ಬಳಿಯಿರುವ ಲಾಯವೊಂದರಲ್ಲಿ ತಮ್ಮ ಕುದುರೆಗಳನ್ನು ಬಿಡುತ್ತಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಕೆಲಸಕ್ಕೆ ತೆರಳುವಾಗ ಅವುಗಳನ್ನು ಹೊಡೆದುಕೊಂಡು ಹೋಗುತ್ತಾರೆ. ರಾಣಿ ವಿಕ್ಟೋರಿಯಾ – ಸೆಂಟ್ರಲ್ ಕೋಲ್ಕತ್ತಾದ ಅಮೃತಶಿಲೆಯ ಕಟ್ಟಡ ಮತ್ತು ತೆರೆದ ಮೈದಾನದ ಸುತ್ತಲಿನ ಪ್ರದೇಶದ ಸ್ಥಳೀಯ ಹೆಸರು – ಬಳಿ ಅವರು ತಮ್ಮ ಗಾಡಿ ಓಡಿಸುತ್ತಾರೆ. ಬ್ರಿಟಿಷ್ ರಾಜವಂಶವು, ರಾಣಿ ವಿಕ್ಟೋರಿಯಾ ಅವರ ಸ್ಮಾರಕವನ್ನು 1921ರಲ್ಲಿ ಸಾರ್ವಜನಿಕರಿಗೆ ತೆರವುಗೊಳಿಸಿತು.
ಆಕಿಫ್ ದಿನವೂ ಬಾಡಿಗೆ ಪಡೆಯುವ ಗಾಡಿಯು ವಿಕ್ಟೋರಿಯಾ ಮೆಮೋರಿಯಲ್ ಪಕ್ಕದಲ್ಲಿ ಕ್ವೀನ್ಸ್ ವೇ ಎಂದು ಕರೆಯಲ್ಪಡುವ ಬೀದಿಯಲ್ಲಿ ನಿಲ್ಲಿಸಲಾಗಿರುತ್ತದೆ. ಅಲ್ಲಿ ನಿಲ್ಲಿಸಲಾಗಿದ್ದ 10 ಗಾಡಿಗಳತ್ತ ಕೈ ತೋರಿಸುತ್ತಾ, “ನನ್ನದು ಚಿನ್ನದ ಬಣ್ಣದ ಗಾಡಿ” ಎಂದು ತನ್ನ ಗಾಡಿಯನ್ನು ತೋರಿಸಿದರು. ಇಲ್ಲಿನ ಬಹುತೇಕ ಗಾಡಿಗಳು ಒಂದೇ ಬಗೆಯ ಬಣ್ಣದ ಸಂಯೋಜನೆಯನ್ನು ಹೊಂದಿರುತ್ತವೆ. ಜೊತೆಗೆ ವಿಸ್ತಾರವಾದ ಹೂವಿನ ಮಾದರಿಗಳು ಮತ್ತು ಪಕ್ಷಿಗಳ ರೀತಿಯ ಚಿತ್ರಗಳನ್ನು ಸಹ ಇವು ಹೊಂದಿರುತ್ತವೆ. ಇವುಗಳ ವಿಶೇಷವೆಂದರೆ ಮೊದಲ ನೋಟಕ್ಕೆ ಇವು ರಾಜರ ರಥಗಳಂತೆ ಕಾಣುತ್ತವೆ. ಬ್ರಿಟಿಷ್ ರಾಜ್ ಕಾಲದ ಅನುಭವವನ್ನು ಕೊಡಲೆಂದೇ ಈ ಗಾಡಿಗಳನ್ನು ಸ್ವಚ್ಛಗೊಳಿಸಲು ಮತ್ತು ಅದಕ್ಕೆ ಹೊಳಪು ನೀಡಲು ದಿನಕ್ಕೆ ಎರಡು ಗಂಟೆಗಳನ್ನು ವ್ಯಯಿಸುತ್ತಾರೆ.
ನಾವು ಅಲ್ಲಿಗೆ ಹೋಗುವ ಹೊತ್ತಿಗೆ ಆಗಲೇ ರಸ್ತೆಯುದ್ದಕ್ಕೂ ಹಾಗೂ ವಿಕ್ಟೋರಿಯಾ ಸ್ಮಾರಕದ ಬಾಗಿಲುಗಳಲ್ಲಿ ಜನರು ಜಮಾಯಿಸತೊಡಗಿದ್ದರು. “ಹಿಂದಿನ ದಿನಗಳಲ್ಲಿ ಇಲ್ಲಿ ರಾಜರು ವಾಸಿಸುತ್ತಿದ್ದರು. ಅವರು ಈ ಕುದುರೆ ಗಾಡಿಗಳಲ್ಲಿ ಸವಾರಿ ಮಾಡುತ್ತಿದ್ದರು. ಈ ಇಲ್ಲಿಗೆ ಭೇಟಿ ಕೊಡುವ ಜನರು ಆ ದಿನಗಳ ಅನುಭವವನ್ನು ತಾವೂ ಪಡೆಯಬಯಸುತ್ತಾರೆ” ಎಂದು 2017ರಲ್ಲಿ ಗಾಡಿ ಓಡಿಸಲು ಆರಂಭಿಸಿದ ಆಕಿಫ್ ಹೇಳುತ್ತಾರೆ. "ವಿಕ್ಟೋರಿಯಾ [ಸ್ಮಾರಕ] ಇರುವವರೆಗೂ, ಕುದುರೆ ಗಾಡಿಗಳೂ ಇಲ್ಲಿ ಇರುತ್ತವೆ” ಎಂದು ಅವರು ಹೇಳುತ್ತಾರೆ. ಈ ಕುದುರೆ ಗಾಡಿಗಳೊಂದಿಗೆ ಅವುಗಳನ್ನು ಓಡಿಸುವವರೂ ಇರಲಿದ್ದಾರೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಪ್ರದೇಶದಲ್ಲಿ ಪ್ರಸ್ತುತ ಸುಮಾರು 50 ಜಟಕಾ ಗಾಡಿಗಳು ಕಾರ್ಯನಿರ್ವಹಿಸುತ್ತಿವೆ.
ಚಳಿಗಾಲ ಬರುತ್ತಿದ್ದ ಹಾಗೆ ಕೋಲ್ಕತ್ತಾದ ಜನರು ಹಗಲಿನ ಬಿಸಿಲಿಗೆ ಬೆಚ್ಚಗಾಗಲೆಂದು ಹೊರಗೆ ಸುತ್ತಾಡಲು ಬರತೊಡಗುತ್ತಾರೆ. ಆಕಿಫ್ ಈ ದಿನಗಳಲ್ಲೇ, ಅದರಲ್ಲೂ ಸಂಜೆಯ ಹೊತ್ತು ಹೆಚ್ಚು ಚಟುವಟಿಕೆಯಲ್ಲಿರುತ್ತಾರೆ. ಇಂತಹದ್ದೊಂದು ಹವಮಾನ ಇಲ್ಲಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ತನಕ ಇರುತ್ತದೆ. ನಂತರ ಇಲ್ಲಿ ವಿಪರೀತ ಸೆಕೆಯಿರುತ್ತದೆ. ಆ ಸಮಯದಲ್ಲಿ ಕೆಲವರು ತೆರೆದ ಗಾಡಿಯಲ್ಲಿ ಸವಾರಿ ಮಾಡಲು ಬರುತ್ತಾರೆ ಎಂದು ಅವರು ಹೇಳುತ್ತಾರೆ.
ನಾವು ಸ್ಮಾರಕದ ಎದುರಿಗೆ ಸಾಲುಗಟ್ಟಿ ನಿಂತಿರುವ ಅನೇಕ ಚಹಾ-ತಿಂಡಿ ಅಂಗಡಿಗಳೆದುರು ಕುಳಿತಿದ್ದೆವು. ಇಲ್ಲಿ ಗಾಡಿ ಓಡಿಸುವವರಿಗೆ ಸುಲಭವಾಗಿ ಪ್ರವಾಸಿಗರು ಸಿಗುತ್ತಾರೆ.
ರಾಣಿ ಮತ್ತು ಬಿಜ್ಲಿ ನಮ್ಮಿಂದ ಸ್ವಲ್ಪ ದೂರದಲ್ಲಿ ನಿಂತು ತಮ್ಮ ಉಪಾಹಾರವಾದ ಗೋಮ್-ಎರ್ ಭುಶಿ [ಗೋಧಿ ಹೊಟ್ಟು], ಬಿಚಾಲಿ, ದಾನಾ [ಧಾನ್ಯಗಳು] ಮತ್ತು ಘಶ್ [ಹುಲ್ಲು] ತಿನ್ನುತ್ತಾ ತಲೆಯಾಡಿಸುತ್ತಿದ್ದರು. ಅವರಿಬ್ಬರೂ ತಮ್ಮ ಹೊಟ್ಟೆ ತುಂಬಿಸಿಕೊಂಡ ನಂತರ ತಮ್ಮ ಮಾಲಿಕನ ಆಧುನಿಕ ಕಾಲದ ರಥಕ್ಕೆ ಭುಜ ಕೊಟ್ಟು ದುಡಿಯಲು ಹೊರಡುತ್ತಾರೆ. ಈ ಗಾಡಿಗಳ ಚಾಲಕರಿಗೆ ತಮ್ಮ ಗಾಡಿಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಮತ್ತು ಕುದುರೆಗಳಿಗೆ ಹೊಟ್ಟೆ ತುಂಬಾ ಮೇವು ಕೊಡುವುದು ಬಹಳ ಮುಖ್ಯವಾದದ್ದು. ಇವುಗಳಿಂದಲೇ ಅವರ ಜೀವನೋಪಾಯ ಸಾಗುತ್ತದೆ. “ಒಂದು ಕುದುರೆಯನ್ನು ನೋಡಿಕೊಳ್ಳಲು ದಿನಕ್ಕೆ 500 ರೂಪಾಯಿ ಖರ್ಚಾಗುತ್ತದೆ” ಎನ್ನುವ ಆಕಿಫ್. ಧಾನ್ಯ ಮತ್ತು ಹುಲ್ಲಿನ ಜೊತೆಗೆ ಅವುಗಳಿಗೆ ಬಿಚ್ಚಾಲಿ (ಭತ್ತದ-ಹುಲ್ಲು) ಸಹ ನೀಡಲಾಗುತ್ತದೆ ಮತ್ತು ಅದನ್ನು ಅವರು ಕಿಡ್ಡರ್ಪೋರ್ ಬಳಿಯ ವಾಟ್ಗುಂಗೆ ಅಂಗಡಿಯಿಂದ ಖರೀದಿಸುತ್ತಾರೆ.
ಅವರ ಪಾಲಿನ ಊಟ ಮಧ್ಯಾಹ್ನ ಬರುತ್ತದೆ. ಅದನ್ನು ಅವರ ಅಕ್ಕ ಅಡುಗೆ ಮಾಡಿ ಕಟ್ಟಿಕೊಂಡು ತರುತ್ತಾರೆ.
ನಾವು ಬೆಳಗ್ಗೆ ಆಕಿಫ್ ಅವರ ಭೇಟಿಗೆ ಹೋಗಿದ್ದ ಸಮಯದಲ್ಲಿ ಇನ್ನೂ ನೂಕುನುಗ್ಗಲು ಆರಂಭಗೊಂಡಿರಲಿಲ್ಲ. ಅಲ್ಲಿ ಆಗಾಗ ಪ್ರವಾಸಿಗರ ಗುಂಪು ಗಾಡಿಗಳಿದ್ದಲ್ಲಿಗೆ ಬರುತ್ತಿತ್ತು. ಕೂಡಲೇ ಅಲ್ಲಿದ್ದ ಸಾರಥಿಗಳು ಅಂದಿನ ಮೊದಲ ಬಾಡಿಗೆ ಪಡೆಯುವ ಭರವಸೆಯೊಂದಿಗೆ ಅವರನ್ನು ಸುತ್ತುವರೆಯುತ್ತಿದ್ದರು.
“ಒಳ್ಳೆಯ ವ್ಯವಹಾರ ನಡೆದ ದಿನ ನನಗೆ ಮೂರರಿಂದ ನಾಲ್ಕು ಸವಾರಿ ಸಿಗುತ್ತದೆ” ಎನ್ನುವ ಆಕಿಫ್ ರಾತ್ರಿ ಒಂಬತ್ತು ಗಂಟೆಯ ತನಕ ದುಡಿಯುತ್ತಾರೆ. ಪ್ರತಿ ಸವಾರಿ 10ರಿಂದ 15 ನಿಮಿಷಗಳಷ್ಟು ಇರುತ್ತದೆ. ವಿಕ್ಟೋರಿಯಾ ಸ್ಮಾರಕದ ಬಾಗಿಲಿನಿಂದ ಆರಂಭಗೊಳ್ಳುವ ಈ ಸವಾರಿ ರೇಸ್ ಕೋರ್ಸ್ ದಾಟಿ ಅಲ್ಲಿಂದ ಪೋರ್ಟ್ ವಿಲಿಯಂನ ದಕ್ಷಿಣ ದ್ವಾರದಿಂದ ತಿರುವು ತೆಗೆದುಕೊಳ್ಳುತ್ತದೆ. ಪ್ರತಿ ಸವಾರಿಗೆ ಇಲ್ಲಿನ ಚಾಲಕರು 500 ರೂ.ಗಳಷ್ಟು ಶುಲ್ಕ ವಿಧಿಸುತ್ತಾರೆ.
“ಪ್ರತಿ 100 [ರೂಪಾಯಿ] ಕ್ಕೆ, ನನಗೆ 25 ಸಿಗುತ್ತದೆ” ಎನ್ನುತ್ತಾರೆ ಆಕಿಫ್. ಉಳಿದ ಹಣ ಮಾಲಿಕನಿಗೆ ಸೇರುತ್ತದೆ. ವ್ಯವಹಾರ ಉತ್ತಮವಾಗಿದ್ದ ದಿನ ಸುಮಾರು 2,000–3,000 ರೂಪಾಯಿಗಳಷ್ಟು ಹಣ ಗಾಡಿ ಸವಾರಿಯಿಂದ ಬರುತ್ತದೆ.
ಆದರೆ ಜೊತೆಗೆ ಇದರಲ್ಲಿ ಗಳಿಕೆಯ ಇತರ ಮಾರ್ಗಗಳೂ ಇವೆ. “ಮದುವೆ ಸಮಾರಂಭಗಳಿಗೆ ಗಾಡಿಯನ್ನು ಬಾಡಿಗೆ ಬಿಟ್ಟಾಗ” ಹೆಚ್ಚು ಸಹಾಯವಾಗುತ್ತದೆ ಎಂದು ಅವರು ಹೇಳುತ್ತಾರೆ. ವರನನ್ನು ಕೂರಿಸಿಕೊಂಡು ಬರಲು ಗಾಡಿಯನ್ನು ಬಾಡಿಗೆಗೆ ಪಡೆಯಲಾಗುತ್ತದೆ. ದೂರವನ್ನು ಅವಲಂಬಿಸಿ ಇದಕ್ಕೆ ಬಾಡಿಗೆ ವಿಧಿಸಲಾಗುತ್ತದೆ. ನಗರದೊಳಗೆ ಬಾಡಿಗೆ 5,000-6,000 ರೂಪಾಯಿಗಳ ನಡುವೆ ಇರುತ್ತದೆ.
“ವರನನ್ನು ಮದುವೆ ಸ್ಥಳಕ್ಕೆ ತಲುಪಿಸುವುದು ನಮ್ಮ ಕೆಲಸ. ಅವನನ್ನು ತಲುಪಿಸಿದ ನಂತರ ನಾವು ಅಲ್ಲಿಂದ ಹಿಂತಿರುತ್ತೇವೆ” ಎಂದು ಆಕಿಫ್ ವಿವರಿಸುತ್ತಾರೆ. ಈ ಕೆಲಸದ ಸಂದರ್ಭಗಳಲ್ಲಿ ಅವರು ಕೆಲವೊಮ್ಮೆ ನಗರದಿಂದ ಹೊರಗೆ ಹೋಗುವುದೂ ಇರುತ್ತದೆ. ಅವರು ಇದೇ ಕೆಲಸದ ಮೇಲೆ ತನ್ನ ಗಾಡಿಯನ್ನು ತೆಗೆದುಕೊಂಡು ಮೇದಿನಿಪುರ ಮತ್ತು ಖರಗ್ಪುರಕ್ಕೆ ಹೋಗಿದ್ದಾರೆ. “ಆಗ ಹೆದ್ದಾರಿಯಲ್ಲಿ ನಿರಂತರ ಎರಡ-ಮೂರು ಗಂಟೆಗಳ ಕಾಲ ಗಾಡಿ ಓಡಿಸಿದ್ದೆ. ಆಗಾಗ ಅಗತ್ಯವೆನ್ನಿಸಿದಾಗಲೆಲ್ಲ ವಿಶ್ರಾಂತಿಯನ್ನು ಸಹ ಪಡೆಯುತ್ತಿದ್ದೆ” ಎನ್ನುವ ಅವರು ರಾತ್ರಿಯ ಹೊತ್ತು ಹೆದ್ದಾರಿ ಪಕ್ಕದಲ್ಲಿ ಗಾಡಿ ನಿಲ್ಲಿಸಿ, ಕುದುರೆಗಳನ್ನು ಗಾಡಿಯಿಂದ ಬೇರ್ಪಡಿಸುತ್ತಿದ್ದರು. ನಂತರ ಅಲ್ಲೇ ಮಲಗಿ ರಾತ್ರಿ ಕಳೆಯುತ್ತಿದ್ದರು.
"ಕೆಲವೊಮ್ಮೆ ಚಲನಚಿತ್ರ ಚಿತ್ರೀಕರಣಕ್ಕೂ ಗಾಡಿಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ" ಎಂದು ಆಕಿಫ್ ಹೇಳುತ್ತಾರೆ. ಕೆಲವು ವರ್ಷಗಳ ಹಿಂದೆ, ಅವರು ಬಂಗಾಳಿ ಟಿವಿ ಧಾರಾವಾಹಿಯೊಂದರ ಚಿತ್ರೀಕರಣಕ್ಕಾಗಿ ಬೋಲ್ಪುರ್ ಪಟ್ಟಣಕ್ಕೆ ಸುಮಾರು 160 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು. ಆದರೆ ಮದುವೆಗಳು ಮತ್ತು ಚಿತ್ರೀಕರಣಗಳು ಅವರ ನಿಯಮಿತ ಆದಾಯದ ಮೂಲಗಳಲ್ಲ ಮತ್ತು ಇಲ್ಲಿ ಕೆಲಸ ಕಡಿಮೆಯಿದ್ದಾಗ ಅವರು ಸಂಪಾದನೆಗೆ ಇತರ ಮಾರ್ಗಗಳನ್ನು ಹುಡುಕಬೇಕಾಗುತ್ತದೆ.
ಅಕಿಫ್ 2023ರ ಅಕ್ಟೋಬರ್ ತಿಂಗಳಿನಿಂದ ಈ ಎರಡು ಕುದುರೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. "ನಾನು ಈ ಸಾಲಿನ ಕೆಲಸ ಪ್ರಾರಂಭಿಸಿದಾಗ, ನಾನು ನನ್ನ [ವಿವಾಹಿತ] ಸಹೋದರಿಯ ಕುಟುಂಬದ ಕುದುರೆಗಳೊಂದಿಗೆ ಅರೆಕಾಲಿಕ ಕೆಲಸ ಮಾಡುತ್ತಿದ್ದೆ" ಎಂದು 22 ವರ್ಷದ ಅವರು ಹೇಳುತ್ತಾರೆ. ಸ್ವಲ್ಪ ಸಮಯದವರೆಗೆ, ಆಕಿಫ್ ಬೇರೊಬ್ಬರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು, ಮತ್ತು ಈಗ, ಅವರು ತಮ್ಮ ಸಹೋದರಿಯ ಕುಟುಂಬದ ಒಡೆತನದ ಗಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆಕಿಫ್ ಸೇರಿದಂತೆ ಇಲ್ಲಿನ ಅನೇಕ ಕೆಲಸಗಾರರ ಪಾಲಿಗೆ, ಗಾಡಿ ಓಡಿಸುವುದು ಅಥವಾ ಕುದುರೆಗಳನ್ನು ನೋಡಿಕೊಳ್ಳುವುದು ಪೂರ್ಣ ಸಮಯದ ಉದ್ಯೋಗವಲ್ಲ.
“ನಾನು ಮನೆಗಳಿಗೆ ಬಣ್ಣ ಬಳಿಯುವ ಕೆಲಸ ಕಲಿತಿದ್ದೇನೆ. ಜೊತೆಗೆ ಬುರ್ರಾ ಬಜಾರಿನಲ್ಲಿರುವ ಗೆಳೆಯನ ಬಟ್ಟೆಯಂಗಡಿಯಲ್ಲೂ ಕೆಲಸ ಮಾಡುತ್ತೇನೆ” ಎನ್ನುವ ಆಕಿಫ್ ಮುಂದುವರೆದು "ನನ್ನ ತಂದೆ ರೋಂಗ್-ಮಿಸ್ತ್ರಿಯಾಗಿದ್ದರು [ಮನೆಗಳು ಮತ್ತು ಕಟ್ಟಡಗಳಿಗೆ ಬಣ್ಣ ಬಳಿಯುವ ಮೇಸ್ತ್ರಿ].” ಎನ್ನುತ್ತಾರೆ. ಅವರು ನಾನು ಹುಟ್ಟುವ ಮೊದಲೇ, 1998ರಲ್ಲಿ ಕೋಲ್ಕತ್ತಾಗೆ ಬಂದಿದ್ದರು. ಅದಕ್ಕೂ ಮೊದಲು ಬಾರಾಸಾತ್ ಎನ್ನುವಲ್ಲಿ ವಾಸವಿದ್ದ ಅವರ ತಂದೆ ಅಲ್ಲಿ ತರಕಾರಿ ವ್ಯಾಪಾರಿಯಾಗಿದ್ದರು. ನಂತರ ಆಕಿಫ್ ಅವರ ಪೋಷಕರು ಉತ್ತಮ ಆದಾಯ ಗಳಿಸುವ ಉದ್ದೇಶದಿಂದ ಅವರ ಚಿಕ್ಕಮ್ಮ ವಾಸವಿದ್ದ ಕೋಲ್ಕತ್ತಾ ನಗರಕ್ಕೆ ಬಂದರು. “ನನ್ನ ಚಿಕ್ಕಮ್ಮ ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ನನ್ನನ್ನು ಸಾಕಿಕೊಂಡಿದ್ದರು” ಎಂದು ಆಕಿಫ್ ಹೇಳುತ್ತಾರೆ. ಪ್ರಸ್ತುತ ಅವರ ತಂದೆ ಅಲ್ಲಾವುದ್ದೀನ್ ಶೇಖ್ ಮತ್ತು ತಾಯಿ ಸಯೀದಾ ಉತ್ತರ 24 ಪರಗಣದ ಬರಾಸತ್ ಎನ್ನುವ ಊರಿನಲ್ಲಿರುವ ತಮ್ಮ ಪೂರ್ವಜರ ಮನೆಗೆ ಮರಳಿದ್ದಾರೆ, ಅಲ್ಲಿ ಅಲ್ಲಾವುದ್ದೀನ್ ಸೌಂದರ್ಯವರ್ಧಕ ವಸ್ತುಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.
ಅಕಿಫ್ ಈಗ ಒಬ್ಬಂಟಿಯಾಗಿ ವಾಸಿಸುತ್ತಾರೆ; ಅವರ ತಮ್ಮ ತನ್ನ ಸಹೋದರಿಯೊಂದಿಗೆ ವಾಸಿಸುತ್ತಾರೆ ಮತ್ತು ಸಾಂದರ್ಭಿಕವಾಗಿ ಅಕ್ಕನ ಅತ್ತೆ ಮಾವಂದಿರ ಒಡೆತನದ ಗಾಡಿಗಳನ್ನು ಓಡಿಸುತ್ತಾರೆ.
ಈ ಕಾರ್ಮಿಕರನ್ನು ಕಾಡುತ್ತಿರುವುದು ಕೆಲಸದ ಕೊರತೆಯೊಂದೇ ಅಲ್ಲ. ಜೊತೆಗೆ ಕಾನೂನು ಪಾಲಕರಿಗೂ ಹಣ ನೀಡಬೇಕು. “ನಾನು ದಿನಾಲು ಎರಡು ಪೊಲೀಸ್ ಠಾಣೆಗಳಿಗೆ 50 ರೂಪಾಯಿಗಳಂತೆ ಕೊಡಬೇಕು” ಎಂದು ಆಕಿಫ್ ಹೇಳುತ್ತಾರೆ. ಕುದುರೆ ಚಾಲಿತ ಗಾಡಿಗಳನ್ನು ನಿಷೇಧಿಸುವಂತೆ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಸಲ್ಲಿಸಿದ ಅರ್ಜಿಯ ಬಗ್ಗೆ ನೀವು ಕೇಳಿದ್ದೀರಾ ಎಂದು ನಾವು ಅವರನ್ನು ಕೇಳಿದಾಗ, ಅವರು ಹೀಗೆ ಪ್ರತಿಕ್ರಿಯಿಸಿದರು: “ಪ್ರತಿ ತಿಂಗಳೂ ಒಬ್ಬರಲ್ಲ ಒಬ್ಬರು ಬಂದು ಕುದುರೆ ಗಾಡಿ ಓಡಿಸುವುದನ್ನು ನಿಲ್ಲಿಸಿ ಎಂದು ಹೇಳುತ್ತಾರೆ. ಆಗ ನಾವು ಅವರಿಗೆ ʼನೀವೇಕೆ ಈ ಕುದುರೆಗಳು ಮತ್ತು ಗಾಡಿಗಳನ್ನು ಖರೀದಿಸಿ ಹಣ ನೀಡಬಾರದು?ʼ ಎಂದು ಕೇಳುತ್ತೇವೆ. ಈ ಕುದುರೆಗಳು ನಮ್ಮ ಬದುಕಿನ ದಾರಿ.”
ಪೆಟಾ ಸಲ್ಲಿಸಿರುವ ಅರ್ಜಿಯು ಕುದುರೆ ಎಳೆಯುವ ಗಾಡಿಗಳ ಬದಲಿಗೆ ಎಲೆಕ್ಟ್ರಿಕ್ ಗಾಡಿಗಳನ್ನು ಬಳಸುವಂತೆ ಕರೆ ನೀಡುತ್ತದೆ. "ಕುದುರೆಗಳಿಲ್ಲದಿದ್ದರೆ ನೀವು ಅದನ್ನು ಘೋರಾರ್ ಗಾರಿ (ಕುದುರೆ ಗಾಡಿ) ಎಂದು ಹೇಗೆ ಕರೆಯುತ್ತೀರಿ?" ಎಂದು ಯುವ ಸಾರಥಿ ಮುಗುಳ್ನಕ್ಕು ಕೇಳುತ್ತಾರೆ.
"ಕೆಲವರು ತಮ್ಮ ಕುದುರೆಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ" ಎನ್ನುವುದನ್ನು ಆಕಿಫ್ ಒಪ್ಪಿಕೊಳ್ಳುತ್ತಾರೆ. "ಆದರೆ ನಾನು ನನ್ನ ಕುದುರೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅವುಗಳನ್ನ ನೋಡಿದರೆ ನಿಮಗೇ ಗೊತ್ತಾಗುತ್ತದೆ!"
ಅನುವಾದಕರು: ಶಂಕರ ಎನ್ ಕೆಂಚನೂರು