ಆನೆಯು ತನ್ನ ಫಂದಿಯನ್ನು (ಹಿರಿಯ ತರಬೇತುದಾರ) ಯಾವತ್ತಿಗೂ ಮರೆಯುವುದಿಲ್ಲ ಎಂದು ಶರತ್ ಮೋರನ್ ಹೇಳುತ್ತಾರೆ. ಇವರು 90ಕ್ಕೂ ಹೆಚ್ಚು ಆನೆಗಳಿಗೆ ತರಬೇತಿ ನೀಡಿ ಪಳಗಿಸಿದ್ದಾರೆ. ಈ ದಪ್ಪ ಚರ್ಮದ ಪ್ರಾಣಿಯ ಇಡೀ ಜೀವಿತಾವಧಿಯಲ್ಲಿ, ತಾನು ದಟ್ಟವಾದ ಕಾಡಿನಲ್ಲಿ ಇತರ ಕಾಡು ಆನೆಗಳ ಹಿಂಡಿನ ನಡುವೆ ಇದ್ದರೂ ಕೂಡ ತನ್ನ ಫಂದಿಯನ್ನು ಕಂಡ ಕೂಡಲೇ ಓಡೋಡಿ ಬರುತ್ತದೆ ಎಂದು ಅವರು ಹೇಳುತ್ತಾರೆ.

ತಾತ್ಕಾಲಿಕ ತರಬೇತಿ ಶಿಬಿರ ಪಿಲ್ಖಾನಾದಲ್ಲಿ ನವಜಾತ ಹಸುಳೆ ಆನೆಮರಿಗೆ ಸ್ವಲ್ಪ ಸ್ವಲ್ವವೇ ನಿಧಾನವಾಗಿ ಮಾನವ ಸ್ಪರ್ಶದ ಅನುಭವವನ್ನು ನೀಡಲಾಗುತ್ತದೆ. ದಿನನಿತ್ಯ ಅನೆಯನ್ನು ಸ್ಪರ್ಶಿಸಲಾಗುತ್ತದೆ. "ತರಬೇತಿ ಸಮಯದಲ್ಲಿ ಅವುಗಳಿಗೆ ಆಗುವ ಸಣ್ಣ ನೋವು ಕೂಡ ಅವಕ್ಕೆ ತುಂಬಾ ದೊಡ್ಡದು," ಎಂದು ಶರತ್ ಹೇಳುತ್ತಾರೆ.

ದಿನದಿಂದ ದಿನಕ್ಕೆ ಆ ಮರಿ ಆನೆಯ ಸುತ್ತ ಹೆಚ್ಚೆಚ್ಚು ಜನರನ್ನು ಸೇರಿಸಿ ಅದಕ್ಕೆ ಕಿರಿಕಿರಿಯಾಗದೇ ಇರುವ ಮಟ್ಟಕ್ಕೆ ಬೆಳಸಲಾಗುತ್ತದೆ.

ಶರತ್ ಮತ್ತು ಇತರರು ತರಬೇತಿ ನೀಡುವ ಸಮಯದಲ್ಲಿ ಆನೆ ಹಾಗೂ ಮಾವುತರ ಸ್ನೇಹದ ಕಥೆಯನ್ನು ಹೇಳುವ ಹಾಡುಗಳನ್ನು ಹಾಡುತ್ತಾರೆ.

"ಬೆಟ್ಟಗಳಲ್ಲಿ ಇದ್ದ ನೀನು,
ಕಾಕೋ ಬಿದಿರನ್ನು ತಿನ್ನುತ್ತಿದ್ದೆ.
ಕಣಿವೆಗೆ ಬಂದ ನೀನು
ಮಾವುತನ ಮಾತಿಗೆ ಬಗ್ಗಿದೆ.
ನಾನು ನಿನಗೆ ಪಾಠ ಹೇಳುವೆ,
ನಿನ್ನ ನಾ ಹುರಿದುಂಬಿಸುವೆ,
ಇದು ನಿನಗೆ ಕಲಿಯುವ ಸಮಯ!
ಈ ಫಂದಿಯು
ನಿನ್ನ ಬೆಣ್ಣನ್ನು ಏರಿ
ಬೇಟೆಗೆ ಹೋಗುತ್ತಾನೆ.”

ತರಬೇತಿಯ ಕೆಲ ಕಾಲದ ನಂತರ ಆನೆಯ ಚಲನವಲನವನ್ನು ನಿಯಂತ್ರಿಸುವ ಹಗ್ಗಗಳನ್ನು ನಿಧಾನವಾಗಿ ಕಡಿಮೆ ಮಾಡಲಾಗುತ್ತದೆ. ಕೊನೆಗೆ ಹಗ್ಗಗಳ ಬಂಧನದಿಂದ ಸಂಪೂರ್ಣವಾಗಿ ಅದನ್ನು ಬಿಡಿಸಲಾಗುತ್ತದೆ. ಆನೆಗೆ ತರಬೇತಿ ನೀಡಲು ಹಲವು ಬಗೆಯ ಹಗ್ಗಗಳು ಬೇಕು ಎಂದು ಈ ತರಬೇತುದಾರರು ಹೇಳುತ್ತಾರೆ. ಪ್ರತಿಯೊಂದು ಹಗ್ಗಕ್ಕೂ ಒಂದೊಂದು ಹೆಸರು ಇರುತ್ತದೆ ಮತ್ತು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತದೆ. ಇವರೇ ಕಟ್ಟಿ ಹಾಡುವ ಸುಮಧುರ ಹಾಡುಗಳ ಜೊತೆಗೆ ಆನೆಯು ಆತ್ಮೀಯ ಸ್ನೇಹವನ್ನು ಬೆಳೆಸಿಕೊಂಡಿರುತ್ತದೆ. ಈ ರೀತಿ ಸೃಷ್ಟಿಸಿದ ನಂಬಿಕೆಯನ್ನು ಹಿಂದಿನ ಕಾಲದಲ್ಲಿ ಕಾಡು ಆನೆಗಳನ್ನು ಹಿಡಿಯಲು ಮತ್ತು ಬೇಟೆಯಾಡಲು ಬಳಸಲಾಗುತ್ತಿತ್ತು.

ಶರತ್ ಮೋರಾನ್ ಅವರು ಬೀರಬಲ್ಲನಿಗೆ ತರಬೇತಿ ನೀಡುವ ಈ ವೀಡಿಯೊವನ್ನು ವೀಕ್ಷಿಸಿ

ಪರಿಣಿತ ತರಬೇತುದಾರರಾಗಿರುವ ಶರತ್ ಮೋರನ್ ಅವರು ತಾವು ಫಂದಿಯಾದ ಬಗ್ಗೆ ಹೀಗೆ ಹೇಳುತ್ತಾರೆ: “ನನ್ನ ಊರು ಕಾಡಿನಲ್ಲಿದೆ. ಅಲ್ಲಿ ತುಂಬಾ ಆನೆಗಳಿವೆ. ಬಾಲ್ಯದಲ್ಲಿ ನಾವು ಅವುಗಳೊಂದಿಗೆ ಆಟವಾಡಿದ್ದೇವೆ. ಹೀಗಾಗಿ ನಾನು ಅವುಗಳಿಗೆ ತರಬೇತಿ ನೀಡಲು ಕಲಿತೆ.”

ಆನೆಗಳಿಗೆ ತರಬೇತಿ ನೀಡುವ ಕೆಲಸಕ್ಕಾಗಿ ಒಂದು ತಂಡವನ್ನು ಕಟ್ಟಿಕೊಳ್ಳಲಾಗುತ್ತದೆ. “ತಂಡದ ನಾಯಕ ಫಂದಿ. ಇವನ ಅಡಿಯಲ್ಲಿ ಲುಹೋಟಿಯ, ಮಾವುತ ಮತ್ತು ಘಾಸಿ ಎಂಬ ಸಹಾಯಕರು ಬರುತ್ತಾರೆ. ಅಷ್ಟು ದೈತ್ಯವಾಗಿರುವ ಪ್ರಾಣಿಯನ್ನು ನಿಯಂತ್ರಿಸಲು ಕನಿಷ್ಠ ಐದು ಜನರು ಬೇಕು. ನಾವು ಅದಕ್ಕೆ ಕೊಡುವ ಆಹಾರವನ್ನು ಕೂಡ ಸಂಗ್ರಹಿಸಬೇಕಾಗುತ್ತದೆ,” ಎಂದು ಶರತ್ ಹೇಳುತ್ತಾರೆ. ಗ್ರಾಮದ ಜನರು ಅವರಿಗೆ ಈ ಕೆಲಸದಲ್ಲಿ ಸಹಾಯ ಮಾಡುತ್ತಾರೆ.

ಅವರು ಅಸ್ಸಾಂನ ತಿನ್‌ಸುಕಿಯಾ ಜಿಲ್ಲೆಯ ಅಪ್ಪರ್ ದಿಹಿಂಗ್ ಮೀಸಲು ಅರಣ್ಯದ ಗಡಿಯಲ್ಲಿರುವ ತೊರಾನಿ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಾರೆ. ತರಬೇತಿ ನೀಡುವುದರಲ್ಲಿ ಮೊರಾನ್ ಸಮುದಾಯದ ಕೌಶಲ್ಯಗಳು ಶತಮಾನಗಳಿಂದ ಖ್ಯಾತಿಯನ್ನು ಪಡೆದಿವೆ. ಹಿಂದೆ ಅವರು ಯುದ್ಧಕ್ಕಾಗಿ ಆನೆಗಳನ್ನು ಸೆರೆಹಿಡಿಯುವುದರಲ್ಲಿ ಮತ್ತು ತರಬೇತಿ ನೀಡುವುದರಲ್ಲಿ ಹೆಸರುವಾಸಿಯಾಗಿದ್ದರು. ಸ್ಥಳೀಯ ಸಮುದಾಯವಾಗಿರುವ ಇವರು ಅಪ್ಪರ್ ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಮತ್ತು ಪಕ್ಕದ‌ ರಾಜ್ಯ ಅರುಣಾಚಲ ಪ್ರದೇಶದಲ್ಲಿ ನೆಲೆಸಿದ್ದಾರೆ.

ಈ ಕಾಲದಲ್ಲಿ ಕಾಡು ಆನೆಗಳನ್ನು ಪಳಗಿಸುವುದು ಕಾನೂನುಬಾಹಿರ. ಆದರೆ ನವಜಾತ ಆನೆಮರಿಗಳಿಗೆ ಮಾನವ ಸ್ಪರ್ಶದ ಅನುಭವವನ್ನು ನೀಡಲೇ ಬೇಕು. ಶರತ್ ಅವರಂತಹ ಫಂದಿ ಮತ್ತು ಅವರ ತಂಡಕ್ಕೆ ಒಂದು ತಿಂಗಳಿಂದ ಮೂರು ತಿಂಗಳವರೆಗೆ ಮಾಡುವ ಈ ಕೆಲಸಕ್ಕೆ ಒಂದು ಲಕ್ಷ ರುಪಾಯಿ ಬೇಕಾಗುತ್ತದೆ.

PHOTO • Pranshu Protim Bora
PHOTO • Pranshu Protim Bora

ಎಡ: ತಾತ್ಕಾಲಿಕ ಶಿಬಿರ ಪಿಲ್ಖಾನಾದಲ್ಲಿ ತರಬೇತಿ ಪಡೆಯುತ್ತಿರುವ ಆನೆ ಬೀರಬಲ್ಲ. ಬಲ: ಶಾಲೆ ಮುಗಿದ ತಕ್ಷಣ ಹಳ್ಳಿಯ ಮಕ್ಕಳು ಬೀರಬಲ್ಲನನ್ನು ನೋಡಲು ಬರುತ್ತಾರೆ. ಎಡದಿಂದ ಬಲಕ್ಕೆ ನಿಂತಿರುವವರು ಉಜ್ಜಲ್ ಮೋರನ್, ದೊಂಡೋ ದೋಹುತಿಯಾ, ಸುಬಖಿ ದೋಹುತಿಯಾ, ಹಿರುಮೋನಿ ಮೋರನ್, ಫಿರುಮೋನಿ ಮೋರನ್, ಲೋಕಿಮೋನಿ ಮೋರನ್ ಮತ್ತು ರೋಶಿ ಮೋರನ್

PHOTO • Pranshu Protim Bora

ತರಬೇತಿ ನೀಡುವುದರಲ್ಲಿ ಮೊರಾನ್ ಸಮುದಾಯದ ಕೌಶಲ್ಯಗಳು ಶತಮಾನಗಳಿಂದ ಖ್ಯಾತಿಯನ್ನು ಪಡೆದಿವೆ. ಬೀರಬಲ್ಲನನ್ನು ಅನೇಕರು ಪ್ರೀತಿಯಿಂದ ಕಾಳಜಿ ಮಾಡುತ್ತಾರೆ: (ಎಡದಿಂದ ಬಲಕ್ಕೆ) ಡಿಕೋಮ್ ಮೋರಾನ್, ಸುಸೆನ್ ಮೋರನ್, ಶರತ್ ಮೋರನ್ ಮತ್ತು ಜಿತೇನ್ ಮೋರನ್

ಗ್ರಾಮದ ಹೊರಗೆ ನಿರ್ಮಿಸಲಾಗಿರುವ ಈ ಶಿಬಿರವು ಜನಾಕರ್ಷಣೆಯ ಕೇಂದ್ರವಾಗಿದೆ. ಜನರು ಜೀವಂತ ದೇವರೆಂದು ನಂಬುವ ಆನೆಯಿಂದ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ. ಬೀರಬಲ್ಲನ ತರಬೇತುದಾರ ಫಂದಿಯನ್ನು ಅರ್ಚಕನಂತೆ ಅವರು ಕಾಣುತ್ತಾರೆ. ಫಂದಿಯಾದವನು ಎಲ್ಲಿಗೂ ಹೊರಗೆ ಹೋಗುವಂತಿಲ್ಲ, ತನ್ನ ಮನೆಗೆ ಕೂಡ. ಇವನು ಇತರರು ತಯಾರಿಸಿದ ಆಹಾರವನ್ನು ಸೇವಿಸುವಂತಿಲ್ಲ. ಈ ಪದ್ಧತಿಯನ್ನು ಸುವ ಎಂದು ಕರೆಯುತ್ತಾರೆ. ಆನೆಯನ್ನು ನೋಡಲು ಬರುವ ಮಕ್ಕಳ ಕೈಯಲ್ಲಿ ತಮ್ಮ ಮನೆಗೆ ಹಣವನ್ನು ಕಳುಹಿಸುತ್ತೇನೆ ಎಂದು ಶರತ್ ಹೇಳುತ್ತಾರೆ.

ಈ ಸಾಕ್ಷ್ಯಚಿತ್ರವನ್ನು ಮಾಘ್ ಬಿಹು ಸಮಯದಲ್ಲಿ ತಯಾರಿಸಲಾಗಿದೆ. ಈ ಸುಗ್ಗಿಯ ಹಬ್ಬಕ್ಕೆ ಜನರು ಬೂದುಕುಂಬಳಕಾಯಿಯ ಜೊತೆಗೆ ಬೇಯಿಸಿದ ಬಾತುಕೋಳಿಯನ್ನು ಹುರಿದು ಖಾದ್ಯವೊಂದನ್ನು ತಯಾರಿಸುತ್ತಾರೆ. “ನಾವು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತಿದ್ದೇವೆ. ಅಂದರೆ, ಒಂದು ಕಡೆ ನಾವು ಆನೆಗೆ ತರಬೇತಿ ನೀಡುತ್ತೇವೆ. ಅದೇ ಸಮಯದಲ್ಲೇ ಮಾಘ್ ಬಿಹುವನ್ನು ಆಚರಿಸುತ್ತಿದ್ದೇವೆ. ನಾವು ಬಾತುಕೋಳಿಯ ಮಾಂಸವನ್ನು ಹುರಿದು ಎಲ್ಲರೂ ಜೊತೆಯಾಗಿ ತಿನ್ನುತ್ತೇವೆ,” ಎನ್ನುತ್ತಾರೆ ಶರತ್.

ಸುತ್ತಮುತ್ತ ಆಚರಣೆಯ ಸಡಗರ ತುಂಬಿದ್ದರೂ, ದೀರ್ಘ ಅವಧಿಯ ಕಲಿಕೆಯನ್ನು ಒಳಗೊಂಡಿರುವ ಈ ವೃತ್ತಿಯನ್ನು ಎಳೆಯ ಹುಡುಗರು ತೆಗೆದುಕೊಳ್ಳದ ಕಾರಣ ಈ ಸಂಪ್ರದಾಯವು ಶೀಘ್ರದಲ್ಲೇ ಸಾಯುತ್ತದೆ ಎಂಬ ಭಯವೂ ಮನಸ್ಸಿನ ಆಳದಲ್ಲಿ ಅವರನ್ನು ಕಾಡುತ್ತಿದೆ. ಹಳ್ಳಿಯ ಯುವಕರು ಈ ವಿದ್ಯೆಯನ್ನು ಕಲಿತು, ಸಂಪ್ರದಾಯವನ್ನು ಜೀವಂತವಾಗಿಡುವಂತೆ ಪ್ರೇರೇಪಿಸಲು ಅವರು ಪ್ರಯತ್ನಿಸುತ್ತಿದ್ದಾರೆ. "ನಿಧಾನವಾಗಿ ನನ್ನ ಶಕ್ತಿಯೂ ಕಡಿಮೆಯಾಗುತ್ತಿದೆ. ಹಳ್ಳಿಯ ಹುಡುಗರಿಗೆ ಇದನ್ನು ಕಲಿಯಬೇಕು ಎಂದು ಹೇಳುತ್ತೇನೆ. ನಾನು ಅಸೂಯೆ ಪಡುವ ಮನುಷ್ಯನಲ್ಲ, ಪ್ರತಿಯೊಬ್ಬರೂ ಕಲಿಯಬೇಕೆಂಬುದು ನನ್ನ ಬಯಕೆ. ಹೀಗಾದಾಗ ಮಾತ್ರ ಈ ನಮ್ಮ ಜ್ಞಾನವು ಮುಂದಿನ ಪೀಳಿಗೆಗೆ ಹಾದುಹೋಗುತ್ತದೆ,” ಎಂದು ಅವರು ಹೇಳುತ್ತಾರೆ.

ಕನ್ನಡ ಅನುವಾದ: ಚರಣ್‌ ಐವರ್ನಾಡು

Himanshu Chutia Saikia

হিমাংশু চুটিয়া শইকীয়া স্বাধীনভাবে কর্মরত দস্তাবেজি ফিল্ম নির্মাতা, সংগীত প্রযোজক, আলোকচিত্রী এবং অসমের জোরহাট ভিত্তিক ছাত্রকর্মী। হিমাংশু ২০২১ সালে পারি ফেলোশিপ পেয়েছেন।

Other stories by Himanshu Chutia Saikia
Photographs : Pranshu Protim Bora

মুম্বই-নিবাসী প্রাংশু প্রতিম বোরা একজন সিনেমাটোগ্রাফার ও ফটোগ্রাফার। আদতে জোরহাট, আসামের মানুষ প্রাংশু উত্তরপূর্ব ভারতের লোকসংস্কৃতির ধারা অন্বেষণে আগ্রহী।

Other stories by Pranshu Protim Bora
Editor : Priti David

প্রীতি ডেভিড পারি-র কার্যনির্বাহী সম্পাদক। তিনি জঙ্গল, আদিবাসী জীবন, এবং জীবিকাসন্ধান বিষয়ে লেখেন। প্রীতি পারি-র শিক্ষা বিভাগের পুরোভাগে আছেন, এবং নানা স্কুল-কলেজের সঙ্গে যৌথ উদ্যোগে শ্রেণিকক্ষ ও পাঠক্রমে গ্রামীণ জীবন ও সমস্যা তুলে আনার কাজ করেন।

Other stories by Priti David
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad