ರೇಷ್ಮೆ ಅಥವಾ ಹತ್ತಿ ಬಟ್ಟೆಗಳನ್ನು ಬಳಸಿ ರಚಿಸಲಾಗಿರುವ ಬೌದ್ಧ ದೇವತೆಯ ಚಿತ್ರಗಳಾದ ಥಾಂಕ್ಗಳಿಗೆ ಮರುಜೀವ ನೀಡುವುದು ಸಣ್ಣ ಕೆಲಸವೇನಲ್ಲ. "ಈ ಸಂರಕ್ಷಣೆಯ ಕೆಲಸದಲ್ಲಿ ಒಂದು ಸಣ್ಣ ತಪ್ಪಾದರೂ, ಕಿವಿಯ ಆಕಾರವು ಸ್ವಲ್ಪ ತಿರುಚಿ ಹೋದರೂ, ಜನರು ತಪ್ಪಾಗಿ ಭಾವಿಸುತ್ತಾರೆ," ಎಂದು ಮಾಥೋ ಗ್ರಾಮದ ದೋರ್ಜಯ್ ಆಂಗ್ಚೋಕ್ ಹೇಳುತ್ತಾರೆ.
ಲೇಹ್ನಿಂದ 26 ಕಿಲೋಮೀಟರ್ಗಳಷ್ಟು ದೂರ ಇರುವ ಮಾಥೋ ಎಂಬ ಹಳ್ಳಿಯ ನಿವಾಸಿಯಾದ ಇವರು "ಇದೊಂದು ಅತ್ಯಂತ ಸೂಕ್ಷ್ಮ ಕೆಲಸ" ಎಂದು ಹೇಳುತ್ತಾರೆ. ಮಾಥೋ 1,165 ಜನಸಂಖ್ಯೆ (ಜನಗಣತಿ 2011), ಅದರಲ್ಲೂ ಬಹುತೇಕ ಸಂಪೂರ್ಣವಾಗಿ ಬೌದ್ಧರೇ ಇರುವ ಹಳ್ಳಿ.
ಆಂಗ್ಚೋಕ್ ಮತ್ತು ಅವರ ಸಮುದಾಯದ ಇತರರಿಗೆ ಇದ್ದ ಭಯವನ್ನು ಒಂಬತ್ತು ನುರಿತ ಥಂಕಾಗಳು ಕಲಾಕೃತಿಗಳಿಗೆ ಪುನರುಜ್ಜೀವ ನೀಡುವ ತಂಡ ಕಡಿಮೆಮಾಡಿದೆ. ಈ ತಂಡ ನೂರಾರು ವರ್ಷಗಳ ಹಿಂದೆ ಹೋಗಿ ಶತಮಾನದಷ್ಟು ಹಳೆಯದಾದ ಈ ಕಲಾಕೃತಿಗಳ ಒಳಗೆ ಅಡಗಿರುವ ಪ್ರಾಚೀನ ಚಿತ್ರಕಲೆಯ ಮಾದರಿಗಳನ್ನು ಅರ್ಥೈಸಿಕೊಂಡು, ಗುರುತಿಸಿ ಗ್ರಹಿಸಲು ಪ್ರಯತ್ನಿಸುತ್ತಿದೆ. ಪ್ರತಿ ಶತಮಾನವೂ ತನ್ನದೇ ಆದ ಅಂಶ, ಶೈಲಿ ಮತ್ತು ಪ್ರತಿಮಾಶಾಸ್ತ್ರವನ್ನು ಹೊಂದಿತ್ತು.
ಈ ಮಹಿಳೆಯರು ಮಾಥೋದಲ್ಲಿ ಪುನರುಜ್ಜೀವ ನೀಡಿದ ಎಲ್ಲಾ ಥಾಂಕಾಗಳು 15-18 ನೇ ಶತಮಾನಕ್ಕೆ ಸೇರಿದವು ಎಂದು ನೆಲ್ಲಿ ರಿಯುಫ್ ಹೇಳುತ್ತಾರೆ. ಫ್ರಾನ್ಸ್ನ ಕಲಾ ಪುನರುಜ್ಜೀವಕ ನೆಲ್ಲಿ ರಿಯುಫ್ ಈ ಮಹಿಳೆಯರಿಗೆ ಕಲಾಕೃತಿಗಳಿಗೆ ಪುನರುಜ್ಜೀವ ನೀಡುವ ತರಬೇತಿ ನೀಡಿದ್ದಾರೆ. "ಮೊದಮೊದಲು ಗ್ರಾಮದ ಜನರು ಮಹಿಳೆಯರು ಥಂಕಾಗಳ ದುರಸ್ತಿ ಮಾಡುವುದನ್ನು ವಿರೋಧಿಸುತ್ತಿದ್ದರು. ಆದರೆ ನಾವು ಯಾವುದೇ ತಪ್ಪು ಕೆಲಸ ಮಾಡುತ್ತಿಲ್ಲ ಎಂದು ನಮಗೆ ಗೊತ್ತಿತ್ತು; ನಾವು ನಮ್ಮ ಇತಿಹಾಸಕ್ಕಾಗಿ ಇದನ್ನು ಮಾಡುತ್ತಿದ್ದೇವೆ,” ಎಂದು ತ್ಸೆರಿಂಗ್ ಸ್ಪ್ಯಾಲ್ದಾನ್ ಹೇಳುತ್ತಾರೆ.
ಬೌದ್ಧ ಸನ್ಯಾಸಿನಿ ಥುಕ್ಚೆ ದೋಲ್ಮಾ "ಥಾಂಕಾಗಳು ಬುದ್ಧನ ಜೀವನದ ಬಗ್ಗೆ ಮತ್ತು ಇತರ ಪ್ರಮುಖ ಲಾಮಾಗಳು ಹಾಗೂ ಬೋಧಿಸತ್ವರ ಬೋಧನೆಗಳನ್ನು ತಿಳಿಸುವ ಸಾಧನಗಳು," ಎಂದು ಹೇಳುತ್ತಾರೆ. ದೋಲ್ಮಾ ಹೊಸದಾಗಿ ರಚನೆಯಾಗಿರುವ ಕೇಂದ್ರಾಡಳಿತ ಪ್ರದೇಶ ಲಡಾಖ್ನ ಕಾರ್ಗಿಲ್ ಜಿಲ್ಲೆಯ ಕೆಲವೇ ದೂರದಲ್ಲಿರುವ ಝನ್ಸ್ಕಾರ್ ತೆಹಸಿಲ್ನಲ್ಲಿರುವ ಕರ್ಶಾ ಸನ್ಯಾಸಿನಿಯರ ಮಠದಲ್ಲಿ ಇರುತ್ತಾರೆ.
ಹಿಮಾಲಯನ್ ಆರ್ಟ್ ಪ್ರಿಸರ್ವರ್ಸ್ (ಹೆಚ್ಎಎಫ್) ಎಂಬ ಸಂಸ್ಥೆಯ ಭಾಗವಾಗಿರುವ ಕಲಾಕೃತಿಗಳಿಗೆ ಪುನರುಜ್ಜೀವ ನೀಡುವ ತ್ಸೆರಿಂಗ್ ಮತ್ತು ಇತರರು ಕೃಷಿಕ ಕುಟುಂಬಗಳಿಂದ ಬಂದವರು ಮತ್ತು ಅವರು ಥಾಂಕಾಗಳನ್ನು ಸಂರಕ್ಷಿಸುವ ಪರಿಣತಿಯನ್ನು ಹೊಂದಿದ್ದಾರೆ. "ಇತರ ಐತಿಹಾಸಿಕ ವರ್ಣಚಿತ್ರಗಳಿಗೆ ಹೋಲಿಸಿದರೆ ಥಾಂಕಾಗಳಿಗೆ ಮರುಜೀವ ನೀಡುವುದು ಕಷ್ಟದ ಕೆಲಸ, ಏಕೆಂದರೆ ರೇಷ್ಮೆ ಬಟ್ಟೆ ಅಪರೂಪ ಮತ್ತು ಅತ್ಯಂತ ಶುದ್ಧ ಗುಣಮಟ್ಟದ್ದಾಗಿದೆ. ಬಣ್ಣಗಳಿಗೆ ಮತ್ತು ಬಟ್ಟೆಗೆ ಹಾನಿಯಾಗದಂತೆ ಕೊಳೆಯನ್ನು ತೆಗೆಯುವುದು ಒಂದು ಟ್ರಿಕ್,” ಎಂದು ನೆಲ್ಲಿ ಹೇಳುತ್ತಾರೆ.
"ನಾವು 2010 ರಲ್ಲಿ ಮಾಥೋ ಗೊಂಪಾದಲ್ಲಿ (ಬೌದ್ಧ ಮಠ) ಈ ಸಂರಕ್ಷಣಾ ಕೆಲಸವನ್ನು ಕಲಿಯಲು ಪ್ರಾರಂಭಿಸಿದ್ದೆವು. 10 ನೇ ತರಗತಿ ಮುಗಿಸಿದ ನಂತರ ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಇದು ಒಳ್ಳೆಯದು," ಎಂದು ತ್ಸೆರಿಂಗ್ ಹೇಳುತ್ತಾರೆ.
ತ್ಸೆರಿಂಗ್ ಜೊತೆಗೆ ಕೆಲಸ ಮಾಡುವ ಇತರ ಮಹಿಳೆಯರೆಂದರೆ: ಥಿನ್ಲೆಸ್ ಆಂಗ್ಮೋ, ಉರ್ಗೇನ್ ಚೋದೊಲ್, ಸ್ಟಾಂಜಿನ್ ಲಾದೋಲ್, ಕುನ್ಜಾಂಗ್ ಆಂಗ್ಮೋ, ರಿಂಚನ್ ದೋಲ್ಮಾ, ಇಶೆ ದೋಲ್ಮಾ, ಸ್ಟ್ಯಾನ್ಜಿನ್ ಆಂಗ್ಮೊ ಮತ್ತು ಚುಂಜಿನ್ ಆಂಗ್ಮೊ. ಅವರಿಗೆ ದಿನಕ್ಕೆ 270 ರೂಪಾಯಿ ಸಂಬಳ ಸಿಗುತ್ತದೆ, "ಇದು ಅಗತ್ಯವಾದ ಹಣ, ಅದರಲ್ಲೂ ಕಡಿಮೆ ಉದ್ಯೋಗಾವಕಾಶಗಳಿರುವ ರಿಮೋಟ್ ಏರಿಯಾಗಳಲ್ಲಿ. ನಮಗೆ ಈ ವರ್ಣಚಿತ್ರಗಳಿಗೆ ಮರುಜೀವ ನೀಡುವ ಅಗತ್ಯತೆಯ ಅರಿವಾಗಿದೆ. ನಾವು ಕಲೆ ಮತ್ತು ಇತಿಹಾಸವನ್ನು ಇನ್ನಷ್ಟು ಮೆಚ್ಚಲು ಪ್ರಾರಂಭಿಸಿದ್ದೇವೆ," ಎಂದು ತ್ಸೆರಿಂಗ್ ಹೇಳುತ್ತಾರೆ.
2010 ರಲ್ಲಿ ಮಾಥೋ ಬೌದ್ಧಮಠದ ಮ್ಯೂಸಿಯಂ ಹಾನಿಗೊಳಗಾದ ಥಾಂಕಾಗಳನ್ನು ಸಂರಕ್ಷಿಸುವ ಕೆಲಸ ವೇಗವಾಗಿ ನಡೆಯಲು ಸಹಾಯ ಮಾಡಿತು. “ಥಾಂಕಾಗಳು ಮತ್ತು ಧಾರ್ಮಿಕವಾಗಿ ಪ್ರಾಮುಖ್ಯತೆ ಇರುವ ಇತರ ಕಲಾಕೃತಿಗಳಿಗೆ ಮರುಜೀವ ನೀಡಿ ಸಂರಕ್ಷಿಸುವ ತುರ್ತು ಅಗತ್ಯವಿತ್ತು. ನಾವು 2010 ರ ಸುಮಾರಿಗೆ ಈ ದುರಸ್ತಿ ಕೆಲಸದ ಬಗ್ಗೆ ಕಲಿಯಲು ಪ್ರಾರಂಭಿಸಿದೆವು,” ಎಂದು ತ್ಸೆರಿಂಗ್ ಹೇಳುತ್ತಾರೆ. ಅವರು ಇತರರೊಂದಿಗೆ ಈ ಅವಕಾಶವನ್ನು ಪಡೆದು, ಚಿತ್ರಕಲೆಯನ್ನು ಸಂರಕ್ಷಿಸುವ ತರಬೇತಿ ಪಡೆಯಲು ನಿರ್ಧರಿಸಿದ್ದರು.
ಥಂಕಾವನ್ನು ದುರಸ್ತಿ ಮಾಡಲು ತೆಗೆದುಕೊಳ್ಳುವ ಸಮಯವು ಅದರ ಗಾತ್ರ ಮೇಲೆ ಅವಲಂಬಿಸಿದೆ. ಇದು ಕೆಲವು ದಿನಗಳಿಂದ ಹಿಡಿದು ಕೆಲವು ತಿಂಗಳುಗಳವರೆಗೆ ನಡೆಯಬಹುದು." ಥಾಂಕಾ ರಿಸ್ಟೋರೇಷನ್ ರೋಕ್ನಾ ಪಡ್ತಾ ಹೈ ಸರ್ದಿಯೋನ್ ಮೇ ಕ್ಯೂಕಿ ಫ್ಯಾಬ್ರಿಕ್ ಥಂಡ್ ಮೇ ಖರಾಬ್ ಹೋ ಜಾತಾ ಹೈ [ಚಳಿಗಾಲದಲ್ಲಿ ನಾವು ಥಾಂಕಾದ ದುರಸ್ತಿ ಕೆಲಸವನ್ನು ನಿಲ್ಲಿಸುತ್ತೇವೆ, ಏಕೆಂದರೆ ಚಳಿಯಲ್ಲಿ ಬಟ್ಟೆ ಹಾಳಾಗುತ್ತದೆ]."
ಸ್ಟ್ಯಾನ್ಜಿನ್ ಲಾದೋಲ್ ವರ್ಕ್ ಸ್ಯಾಂಪಲ್ಗಳನ್ನು ಎಚ್ಚರಿಕೆಯಿಂದ ಕ್ಯಟಲಾಗ್ ಮಾಡಲಾಗಿರುವ ದೊಡ್ಡ ರಿಜಿಸ್ಟರ್ ಅನ್ನು ತೆರೆಯುತ್ತಾರೆ. ಪ್ರತಿ ಪುಟದಲ್ಲಿ ಎರಡು ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಇರಿಸಲಾಗಿದ್ದು, ಒಂದು ದುರಸ್ತಿಯ ಮೊದಲು ಮತ್ತು ಇನ್ನೊಂದು ನಂತರದ ಸುಧಾರಣೆಯನ್ನು ತೋರಿಸುತ್ತದೆ.
"ನಾವು ಈ ಕೆಲಸವನ್ನು ಹೇಗೆ ಮಾಡಬೇಕೆಂದು ಕಲಿತಿರುವುದು ತುಂಬಾ ಸಂತೋಷ ತಂದಿದೆ. ಇದು ನಮಗೆ ಬದುಕಲು ವಿಭಿನ್ನವಾದ ವೃತ್ತಿಯೊಂದನ್ನು ನೀಡಿದೆ. ನಮಗೆಲ್ಲರಿಗೂ ಮದುವೆಯಾಗಿದೆ, ನಮಗೆ ಮಕ್ಕಳಿದ್ದಾರೆ, ಅವರ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಾವು ದುರಸ್ತಿ ಕೆಲಸದಲ್ಲಿ ತುಂಬಾ ಸಮಯವನ್ನು ಕಳೆಯುತ್ತೇವೆ," ಎಂದು ಅಡುಗೆಗೆ ತರಕಾರಿಗಳನ್ನು ಕತ್ತರಿಸುತ್ತಾ ಥಿನ್ಲೆಸ್ ಹೇಳುತ್ತಾರೆ.
"ನಾವು ಬೆಳಿಗ್ಗೆ 5 ಗಂಟೆಗೆ ಎದ್ದು, ನಮ್ಮ ಎಲ್ಲಾ ಮನೆಕೆಲಸ ಮತ್ತು ಕೃಷಿ ಕೆಲಸಗಳನ್ನು ಬೇಗನೆ ಮುಗಿಸಲು ಪ್ರಯತ್ನಿಸುತ್ತೇವೆ," ಎಂದು ಥಿನ್ಲೆಸ್ ಹೇಳುತ್ತಾರೆ. ಅವರ ಸಹೋದ್ಯೋಗಿ ತ್ಸೆರಿಂಗ್ " ಖೇತಿ ಬೊಹೋತ್ ಜರೂರಿ ಹೈ, ಸ್ವಾವಲಂಬಿ ರೆಹ್ನೆ ಕೆ ಲಿಯೇ [ನಾವು ಸ್ವಾವಲಂಬಿಯಾಗಿರಲು ಕೃಷಿ ಕೆಲಸ ತುಂಬಾ ಮುಖ್ಯ],” ಎಂದು ಹೇಳುತ್ತಾರೆ
ಮಹಿಳೆಯರಿಗೆ ದಿನವಿಡೀ ಕೆಲಸ. “ನಾವು ಹಾಲು ಕರೆಯುತ್ತೇವೆ, ಅಡುಗೆ ಮಾಡುತ್ತೇವೆ, ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ, ನಂತರ ಮೇಯಿಸಲು ಹೋದ ದನಗಳ ಮೇಲೂ ಕಣ್ಣಿಡಬೇಕು. ಇದೆಲ್ಲದರ ನಂತರ, ನಾವು ಹೆಚ್ಎಪಿಗೆ ಬಂದು ಕೆಲಸ ಆರಂಭಿಸುತ್ತೇವೆ,” ಎಂದು ಥಿನ್ಲೆಸ್ ಹೇಳುತ್ತಾರೆ.
ಬಹುತೇಕ ಎಲ್ಲಾ ಫಂಡ್ ಹೊಸ ಥಾಂಕಾಗಳನ್ನು ತಯಾರಿಸುವುದಕ್ಕೆ ಹೋಗುತ್ತದೆ ಎಂದು ಥಂಕಾ ಸಂರಕ್ಷಕರು ಹೇಳುತ್ತಾರೆ. "ಇತ್ತೀಚಿನ ದಿನಗಳಲ್ಲಿ ಯಾರೂ ಈ ಶತಮಾನಗಳಷ್ಟು ಹಳೆಯದಾದ ಥಾಂಕಾಗಳ ಪಾರಂಪರಿಕ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಮತ್ತು ಅವುಗಳಿಗೆ ಮರುಜೀವ ಬದಲು ಅವುಗಳನ್ನು ಎಸೆಯುತ್ತಿದ್ದಾರೆ," ಎಂದು ಬೌದ್ಧ ವಿದ್ವಾಂಸ ಡಾ. ಸೋನಮ್ ವಾಂಗ್ಚೋಕ್ ಹೇಳುತ್ತಾರೆ. ಇವರು ಲೇಹ್ನ ಹಿಮಾಲಯನ್ ಕಲ್ಚರಲ್ ಹೆರಿಟೇಜ್ ಫೌಂಡೇಶನ್ನ ಸಂಸ್ಥಾಪಕರು.
"ಈಗ ಯಾರೂ ನಮ್ಮನ್ನು ಕೇಳುವುದಿಲ್ಲ, ಏಕೆಂದರೆ ಹಲವು ವರ್ಷಗಳು ಕಳೆದರೂ ನಾವು ಮಾತ್ರ ಇದನ್ನು ನಿತ್ಯ ಮಾಡುತ್ತಿದ್ದೇವೆ," ಎಂದು ಮೊದಮೊದಲು ಹಳ್ಳಿಯ ಜನರಿಂದ ಅವರು ಎದುರಿಸಿದ ವಿರೋಧದ ಬಗ್ಗೆ ತ್ಸೆರಿಂಗ್ ಹೇಳುತ್ತಾರೆ. ಶೆಸ್ರಿಗ್ ಲಡಾಖ್ನ ಲೇಹ್ನಲ್ಲಿರುವ ಕಲಾ ಸಂರಕ್ಷಣಾ ಅಟೆಲಿಯರ್ನ ಸಂಸ್ಥಾಪಕರಾದ ನೂರ್ ಜಹಾನ್ "ಒಬ್ಬನೇ ಒಬ್ಬ ಪುರುಷ ಈ ಕೆಲಸವನ್ನು ಮಾಡುವುದಿಲ್ಲ," ಎಂದು ಹೇಳುತ್ತಾರೆ. ಅವರ ಕೆಲಸ ಕೇವಲ ಥಾಂಕಾಗಳನ್ನು ಉಳಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಸ್ಮಾರಕಗಳು ಮತ್ತು ಗೋಡೆಯ ವರ್ಣಚಿತ್ರಗಳನ್ನು ಕೂಡ ಸಂರಕ್ಷಿಸುತ್ತಾರೆ.
"ಹೆಚ್ಚು ಹೆಚ್ಚು ಜನ ಇಲ್ಲಿಗೆ ಬಂದು ನಮ್ಮ ಕೆಲಸವನ್ನು ನೋಡಬೇಕೆಂಬುದು ನಮ್ಮ ಬಯಕೆ" ಎಂದು ತ್ಸೆರಿಂಗ್ ಹೇಳುತ್ತಾರೆ. ಸೂರ್ಯ ಪರ್ವತಗಳ ಮಧ್ಯೆ ಮರೆಯಾದಂತೆ ಇವರು ಇತರರೊಂದಿಗೆ ಮನೆಗೆ ತೆರಳುತ್ತಾರೆ. ಕಲಾಕೃತಿಯನ್ನು ಉಳಿಸುವ ಕಾಳಜಿ ಇದ್ದರೂ, ಜೀರ್ಣೋದ್ಧಾರಕ್ಕೆ ಬೇಕಾದ ವಸ್ತುಗಳ ಕೊರತೆಯಿಂದಾಗಿ ಕೆಲಸ ದುಬಾರಿಯಾಗಿದೆ. ಈ ಕೆಲಸವು ತುಂಬಾ ಮುಖ್ಯ. ನಾವು ಇದರಿಂದ ದೊಡ್ಡ ಲಾಭವನ್ನೇನು ಗಳಿಸದಿದ್ದರೂ, ನಮಗೆ ಇದರಿಂದ ತೃಪ್ತಿ ಸಿಗುತ್ತದೆ," ಎಂದು ಸ್ಟಾಂಜಿನ್ ಲಾದೋಲ್ ಹೇಳುತ್ತಾರೆ.
ಈ ಪ್ರಾಚೀನ ವರ್ಣಚಿತ್ರಗಳನ್ನು ಉಳಿಸುವ ಕೌಶಲ್ಯಕ್ಕಿಂತ ಹೆಚ್ಚಿನದನ್ನು ಕೆಲಸವು ಅವರಿಗೆ ಕೊಟ್ಟಿದೆ. ಈ ಕೆಲಸ ಅವರಿಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡಿದೆ. "ಇದರಿಂದಾಗಿ ನಮ್ಮ ಮಾತಿನ ದಾಟಿ ಕೂಡಾ ಕ್ರಮೇಣ ಬದಲಾಗಿದೆ. ಮೊದಲು ನಾವು ಲಡಾಖಿ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದೆವು, ಆದರೆ ಈಗ ನಾವು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಹೆಚ್ಚು ನಿರರ್ಗಳವಾಗಿ ಮಾತನಾಡಬಲ್ಲೆವು," ಎಂದು ನಗುತ್ತಾ ಹೇಳುತ್ತಾರೆ.
ಅನುವಾದ: ಚರಣ್ ಐವರ್ನಾಡು