“ಪಂಖೇ ವಾಲೇ (ಗಾಳಿ ವಿದ್ಯುತ್), ಬ್ಲೇಡ್ ವಾಲೇ [ಸೋಲಾರ್ ಫಾರ್ಮ್‌ಗಳು] ನಮ್ಮ ಒರಾಣ್ ನಾಶ ಮಾಡುತ್ತಿವೆ” ಎನ್ನುತ್ತಾರೆ ಸೋಂಟಾ ಗ್ರಾಮದ ಸುಮೇರ್ ಸಿಂಗ್ ಭಾಟಿ. ರೈತ ಮತ್ತು ಪಶುಪಾಲಕನಾಗಿರುವ ಅವರ ಮನೆ ಜೈಸಲ್ಮೇರ್ ಜಿಲ್ಲೆಯ ದೇಗ್ರಾಯ್ ಒರಾಣ್ ಪಕ್ಕದಲ್ಲಿದೆ.
ಒರಾಣ್ ಎನ್ನುವುದು ಎನ್ನುವುದು ದೇವರ ಕಾಡುಗಳಾಗಿದ್ದು ಅಲ್ಲಿಗೆ ಎಲ್ಲಾ ಜನರಿಗೂ ಪ್ರವೇಶವಿದೆ. ಅದನ್ನೂ ಊರಿನ ಸಾಮಾನ್ಯ ಆಸ್ತಿ ಸಂಪನ್ಮೂಲವೆಂದು ಪರಿಗಣಿಸಲಾಗುತ್ತದೆ. ಇಂತಹ ಪ್ರತಿ ಒರಾಣ್‌ನಲ್ಲೂ ಒಂದು ದೇವರಿರುತ್ತದೆ ಮತ್ತು ಅದು ಅದರ ಸುತ್ತಲಿನ ಊರಿನ ಜನರಿಂದ ಪೂಜಿಸಲ್ಪಡುತ್ತದೆ. ಈ ದೇವರು ಊರಿನ ಜನರು ಈ ಜಾಗವನ್ನು ಆಕ್ರಮಿಸದಂತೆ ಕಾಯುತ್ತದೆ. ಈ ಕಾಡುಗಳಲ್ಲಿ ಊರಿನ ಜನರು ಬಿದ್ದಿರುವ ಸೌದೆ ತರಬಹುದು ಆದರೆ ಮರಗಳನ್ನು ಕಡಿಯುವಂತಿಲ್ಲ. ಇಲ್ಲಿ ಯಾವುದೇ ನಿರ್ಮಾಣಗಳಿಗೆ ಅವಕಾಶವಿರುವುದಿಲ್ಲ ಮತ್ತು ಇಲ್ಲಿನ ಜಲಮೂಲಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಆದರೆ, ಸುಮೇರ್ ಸಿಂಗ್ ಹೇಳುತ್ತಾರೆ, "ಅವರು [ನವೀಕರಿಸಬಹುದಾದ ಇಂಧನ ಕಂಪನಿಗಳು] ಶತಮಾನಗಳಷ್ಟು ಹಳೆಯ ಮರಗಳನ್ನು ಕಡಿದುಹಾಕಿದ್ದಾರೆ ಮತ್ತು ಹುಲ್ಲು ಮತ್ತು ಪೊದೆಗಳನ್ನು ಬೇರುಸಹಿತ ಕಿತ್ತುಹಾಕಿದ್ದಾರೆ. ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆನ್ನಿಸುತ್ತದೆ.”
ಸುಮೇರ್ ಸಿಂಗ್ ಅವರ ಆಕ್ರೋಶ ಜೈಸಲ್ಮೇರ್ ಜಿಲ್ಲೆಯ ನೂರಾರು ಹಳ್ಳಿಗಳ ಜನರ ಮಾತಿನಲ್ಲಿ ಪ್ರತಿಧ್ವನಿಸುತ್ತದೆ. ಅವರು ರಿನಿವೇಬಲ್ ಎನರ್ಜಿ (ಆರ್ ಇ) ಕಂಪನಿಗಳು ಅವರ ಊರಿನ ಒರಾಣ್‌ಗಳನ್ನು ವಶಪಡಿಸಿಕೊಳ್ಳುವುದನ್ನು ಅಸಹಾಯಕರಾಗಿ ನೋಡುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ಸಾವಿರಾರು ಹೆಕ್ಟೇರುಗಳಷ್ಟು ಭೂಮಿಯನ್ನು ವಿಂಡ್ ಮಿಲ್ ಮತ್ತು ಬೇಲಿ ಹಾಕಲ್ಪಟ್ಟಿರುವ ಸೋಲಾರ್ ಫಾರ್ಮ್‌ಗಳಿಗೆ ನೀಡಲಾಗಿದೆ ಎನ್ನುತ್ತಾರೆ. ಇದರ ಜೊತೆಗೆ ಹೈ ಟೆನ್ಷನ್ ವೈರ್‌ಗಳು ಮತ್ತು ಮೈಕ್ರೋ ಗ್ರಿಡ್‌ಗಳನ್ನೂ ವಿದ್ಯುತ್ತನ್ನು ಜಿಲ್ಲೆಯಿಂದ ಹೊರಗೆ ಕೊಂಡೊಯ್ಯುವ ಸಲುವಾಗಿ ಆಳವಡಿಸಲಾಗಿದೆ.
“ಜಾನುವಾರುಗಳನ್ನು ಮೇಯಿಸಲು ಸ್ಥಳವೇ ಉಳಿದಿಲ್ಲ. ಹುಲ್ಲು ಆಗಲೇ ಮುಗಿದು ಹೋಗಿದೆ [ಮಾರ್ಚ್ ತಿಂಗಳಿನಲ್ಲಿ] ಈಗ ನಮ್ಮ ಜಾನುವಾರುಗಳಿಗೆ ತಿನ್ನಲು ಇರುವುದು ಕೇರ್ ಮತ್ತು ಕೇಜ್ರಿ ಮರದ ಎಲೆಗಳು ಮಾತ್ರ. ಅವುಗಳಿಗೆ ಸಾಕಷ್ಟು ಮೇವು ಸಿಗದ ಕಾರಣ ಹಾಲಿನ ಕರಾವು ಕೂಡಾ ಕಡಿಮೆಯಾಗಿದೆ. ಮೊದಲು 5 ಲೀಟರ್ ಕರೆಯುತ್ತಿದ್ದವು ಈಗ 2 ಲೀಟರ್ ಕರೆಯುತ್ತಿವೆ” ಎನ್ನುತ್ತಾರೆ ಪಶುಪಾಲಕ ಜೋರಾ ರಾಮ್.
ಈ ಅರೆ-ಶುಷ್ಕ ಸವನ್ನಾ ಹುಲ್ಲುಗಾವಲು ಒರಾಣ್‌ಗಳು ಸಮುದಾಯದ ಕಲ್ಯಾಣಕ್ಕಾಗಿ ಇವೆ - ಅವು ತಮ್ಮ ಸುತ್ತಲೂ ವಾಸಿಸುವ ಸಾವಿರಾರು ಜನರಿಗೆ ಮೇವು, ಹುಲ್ಲು, ನೀರು, ಆಹಾರ ಮತ್ತು ಉರುವಲು ಒದಗಿಸುತ್ತವೆ.
ಕೆಲವು ವರ್ಷಗಳಿಂದ ತನ್ನ ಒಂಟೆಗಳು ಸಣಕಲಾಗಿ ದುರ್ಬಲವಾಗಿ ಕಾಣುತ್ತಿವೆಯೆಂದು ಹೇಳುತ್ತಾರೆ ಜೋರಾ ರಾಮ್. “ನಮ್ಮ ಒಂಟೆಗಳು ಒಂದು ಕಾಲದಲ್ಲಿ 50 ಬಗೆಯ ಹುಲ್ಲುಗಳು ಮತ್ತು ಎಲೆಗಳನ್ನು ತಿನ್ನುತ್ತಿದ್ದವು” ಎನ್ನುತ್ತಾರವರು. ಹೈ-ಟೆನ್ಷನ್ ವೈರ್‌ಗಳು 30 ಮೀಟರ್ ಎತ್ತರದಲ್ಲಿವೆಯಾದರೂ, ಕೆಳಗಿನ ಸ್ಥಾವರಗಳು 750 ಮೆಗಾವ್ಯಾಟ್ ಶಕ್ತಿಯೊಂದಿಗೆ ಕಂಪಿಸುತ್ತಿರುತ್ತವೆ. ಇದರಿಂದ ಶಾಕ್ ಹೊಡೆಯುತ್ತದೆ. “ಸಣ್ಣ ಒಂಟೆ ಮರಿ ಗಿಡಕ್ಕೆ ತನ್ನ ಇಡೀ ಬಾಯಿ ಹಾಕಿದರೆ ಏನಾಗಬಹುದೆನ್ನುವುದನ್ನು ಕಲ್ಪಿಸಿಕೊಳ್ಳಿ” ಎಂದು ತಲೆ ಕೊಡವುತ್ತಾ ಹೇಳುತ್ತಾರೆ ಜೋರಾ ರಾಮ್.
ರಾಸ್ಲಾ ಪಂಚಾಯತ್ ವ್ಯಾಪ್ತಿಯ ಅವರು ಮತ್ತು ಅವರ ಸಹೋದರ ಮಸಿಂಗಾ ರಾಮ್ ಬಳಿ ಒಟ್ಟು 70 ಒಂಟೆಗಳಿವೆ. ಇವು ಮೇವು ಮಾಳಗಳನ್ನು ಹುಡುಕುತ್ತಾ, ಜೈಸಲ್ಮೇರ್ ಜಿಲ್ಲೆಯಲ್ಲಿ ದಿನಕ್ಕೆ 20 ಕಿಲೋಮೀಟರಿಗಿಂತಲೂ ಹೆಚ್ಚು ಪ್ರಯಾಣಿಸುತ್ತವೆ.
“ಗೋಡೆಗಳು ನಿರ್ಮಾಣಗೊಂಡಿವೆ, [ಹೈ ಟೆನ್ಷನ್] ವೈರ್‌ಗಳು ಮತ್ತು ಪಿಲ್ಲರ್‌ಗಳು [ಗಾಳಿ ವಿದ್ಯುತ್] ನಮ್ಮ ಒಂಟೆಗಳ ಮೇವಿನ ಸ್ಥಳವನ್ನು ಸೀಮಿತಗೊಳಿಸಿವೆ. ಅವು [ಕಂಬಗಳಿಗಾಗಿ ಅಗೆದ] ಗುಂಡಿಗಳಲ್ಲಿ ಬಿದ್ದು ಗಾಯಗೊಂಡು ಆ ಗಾಯಗಳು ನಂಜಾಗಿ ಹರಡುತ್ತದೆ. ಈ ಸೌರ ಫಲಕಗಳಿಂದ ನಮಗೆ ಯಾವುದೇ ಪ್ರಯೋಜನವಿಲ್ಲ” ಎಂದು ಮಸಿಂಗ ರಾಮ್ ಹೇಳುತ್ತಾರೆ.
ರಾಯ್ಕಾ ಸಮುದಾಯಕ್ಕೆ ಸೇರಿದ ಈ ಸಹೋದರರು ಒಂಟೆ ಸಾಕಣೆಯ ಪರಂಪರೆಗೆ ಸೇರಿದವರು. ಆದರೆ ಈಗ ಸಾಕಷ್ಟು ಹಾಲು ಸಿಗದ ಕಾರಣ “ನಾವು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಕೂಲಿ ಕೆಲಸಕ್ಕೆ ಹೋಗಬೇಕಾಗಿದೆ.” ಇಲ್ಲಿ ಸುಲಭಕ್ಕೆ ಬೇರೆ ಕೆಲಸಗಳೂ ಸಿಗುವುದಿಲ್ಲ. ಅವರು ಹೇಳುವಂತೆ “ಕುಟುಂಬದಲ್ಲಿ ಒಬ್ಬರಿಗೆ ಕೆಲಸ ಸಿಕ್ಕರೆ ಹೆಚ್ಚು.” ಉಳಿದವರು ಒಂಟೆ ಮೇಯಿಸುವ ಕೆಲಸವನ್ನೇ ಮಾಡಬೇಕು.
ಇದು ಕೇವಲ ಒಂಟೆ ಸಾಕಣೆದಾರರ ಸಮಸ್ಯೆಯಲ್ಲ. ಇಲ್ಲಿನ ಎಲ್ಲಾ ಬಗೆಯ ಪಶುಪಾಲಕರೂ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನಜಾಮ್ಮುದ್ದೀನ್ ಅವರು ಸುಮಾರು 50 ಕಿಲೋಮೀಟರ್ ಎಂದರೆ ಒಂದು ಕಾಗೆ ಹಾರುವಷ್ಟು ದೂರಕ್ಕೆ, ಬೆಳಗಿನ ಜಾವ 10 ಗಂಟೆಗೆ ತಮ್ಮ ಕುರಿಗಳನ್ನು ಹೊಡೆದುಕೊಂಡು ಬಂದಿದ್ದಾರೆ. ಇಲ್ಲಿನ ಜೈಸಲ್ಮೇರ್ ಜಿಲ್ಲೆಯ ಗಂಗಾ ರಾಮ್ ಕಿ ಧನಿ ಎಂದು ಕರೆಯಲ್ಪಡುವ ಒರಾಣ್‌ನಲ್ಲಿ ಅವರ 200 ಕುರಿ, ಮೇಕೆಗಳು ಹುಲ್ಲಿರುವ ಜಾಗವನ್ನು ಹುಡುಕುತ್ತಾ ಅತ್ತಿಂದಿತ್ತ ಜಿಗಿದಾಡುತ್ತಿದ್ದವು.
ಅವರೊಂದಿಗಿದ್ದ ನಾಟಿ ಗ್ರಾಮದ ಪಶುಪಾಲಕ ಸುತ್ತಲೂ ನೋಡುತ್ತಾ, “ಈಗ ಇದೊಂದೇ ಒರಾಣ್ ಉಳಿದಿರುವುದು. ಇನ್ನು ಮುಂದೆ ತೆರೆದ ಸ್ಥಳದಲ್ಲಿ ಪ್ರಾಣಿಗಳನ್ನು ಮೇಯಿಸುವುದು ಸಾಧ್ಯವಿಲ್ಲ” ಎಂದರು. ಅವರು ವರ್ಷಕ್ಕೆ 2 ಲಕ್ಷ ರೂಪಾಯಿಗಳಷ್ಟು ಹಣವನ್ನು ಮೇವಿಗೆ ವ್ಯಯಿಸುವುದಾಗಿ ಅಂದಾಜಿಸುತ್ತಾರೆ.
2019ರ ಹೊತ್ತಿಗೆ ರಾಜಸ್ಥಾನದಲ್ಲಿ 14 ಮಿಲಿಯನ್ ಜಾನುವಾರುಗಳಿದ್ದು, ಅವುಗಳಲ್ಲಿ ಅತಿ ಹೆಚ್ಚು ಮೇಕೆಗಳು (20.8 ಮಿಲಿಯನ್), 7 ಮಿಲಿಯನ್ ಕುರಿಗಳು ಮತ್ತು 2 ಮಿಲಿಯನ್ ಒಂಟೆಗಳಿವೆ. ಈ ಸಾಮಾನ್ಯ ಸಂಪನ್ಮೂಲದ ಮುಚ್ಚುವಿಕೆಯಿಂದಾಗಿ ಅವರಿಗೆ ಕೆಟ್ಟ ಹೊಡೆತ ಬಿದ್ದಿದೆ.
ಮತ್ತು ಮುಂದೆ ಇದು ಇನ್ನಷ್ಟು ಹದಗೆಡಲಿದೆ.
ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ ಹಸಿರು ಇಂಧನ ಕಾರಿಡಾರ್ ಯೋಜನೆಯ ಎರಡನೇ ಹಂತದಲ್ಲಿ ಅಂದಾಜು 10,750 ಸರ್ಕ್ಯೂಟ್ ಕಿಲೋಮೀಟರ್ (ಸಿಕೆಎಂ) ಪ್ರಸರಣ ಮಾರ್ಗಗಳನ್ನು ಹಾಕಲಾಗುವುದು ಎನ್ನಲಾಗಿದೆ. ಇದನ್ನು ಜನವರಿ 6, 2022ರಂದು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಅನುಮೋದಿಸಿದೆ ಮತ್ತು ರಾಜಸ್ಥಾನ ಸೇರಿದಂತೆ ಏಳು ರಾಜ್ಯಗಳಲ್ಲಿ ಈ ಯೋಜನೆ ಬರಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂಎನ್ಆರ್‌ಇ) 2021-2022 ವಾರ್ಷಿಕ ವರದಿ ತಿಳಿಸಿದೆ.
ಇದರಿಂದ ಕೇವಲ ಮೇವು ಮಾಳವಷ್ಟೇ ನಷ್ಟವಾಗುವುದಿಲ್ಲ. "ಆರ್‌ಇ ಕಂಪನಿಗಳು ಬಂದಾಗ, ಅವರು ಮೊದಲಿಗೆ ಈ ಪ್ರದೇಶದ ಎಲ್ಲಾ ಮರಗಳನ್ನು ಕತ್ತರಿಸುತ್ತಾರೆ. ಇದರಿಂದ, ಎಲ್ಲಾ ಸ್ಥಳೀಯ ಜಾತಿಯ ಕೀಟಗಳು, ಪಕ್ಷಿಗಳು ಮತ್ತು ಚಿಟ್ಟೆಗಳು, ಪತಂಗಗಳು ಇತ್ಯಾದಿ ಸಾಯುತ್ತವೆ, ಮತ್ತು ಪರಿಸರ ಚಕ್ರವು ತೊಂದರೆಗೊಳಗಾಗುತ್ತದೆ; ಪಕ್ಷಿಗಳು ಮತ್ತು ಕೀಟಗಳ ಸಂತಾನೋತ್ಪತ್ತಿ ಪ್ರದೇಶಗಳು ಸಹ ನಾಶವಾಗುತ್ತವೆ" ಎಂದು ಸ್ಥಳೀಯ ಪರಿಸರ ಕಾರ್ಯಕರ್ತ ಪಾರ್ಥ್ ಜಗಾನಿ ಹೇಳುತ್ತಾರೆ.
ಮತ್ತು ನೂರಾರು ಕಿಲೋಮೀಟರ್ ವಿದ್ಯುತ್ ಲೈನುಗಳು ಸೃಷ್ಟಿಸಿರುವ ಗಾಳಿ ಬೇಲಿಗಳು ರಾಜಸ್ಥಾನದ ರಾಜ್ಯ ಪಕ್ಷಿ ಜಿಐಬಿ ಸೇರಿದಂತೆ ಸಾವಿರಾರು ಪಕ್ಷಿಗಳನ್ನು ಕೊಲ್ಲುತ್ತಿದೆ. ಓದಿ: ಗ್ರೇಟ್ ಇಂಡಿಯನ್ ಬಸ್ಟರ್ಡ್: ವಿದ್ಯುಚ್ಛಕ್ತಿಗೆ ಬಲಿಯಾಗುತ್ತಿರುವ ಅಳಿವಿನಂಚಿನ ಹಕ್ಕಿಗಳು
ಸೌರ ಫಲಕಗಳ ಆಗಮನವು ಸ್ಥಳೀಯ ತಾಪಮಾನವನ್ನು ಅಕ್ಷರಶಃ ಹೆಚ್ಚಿಸುತ್ತಿದೆ. ಭಾರತವು ತೀವ್ರ ಶಾಖದ ಅಲೆಗಳನ್ನು ಎದುರಿಸುತ್ತಿದೆ; ರಾಜಸ್ಥಾನದ ಮರುಭೂಮಿ ಹವಾಮಾನದಲ್ಲಿ, ತಾಪಮಾನವು ವಾರ್ಷಿಕವಾಗಿ ಗರಿಷ್ಟ 50 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗುತ್ತದೆ. ನ್ಯೂಯಾರ್ಕ್ ಟೈಮ್ಸ್ ಜಾಗತಿಕ ತಾಪಮಾನ ಏರಿಕೆಯ ಕುರಿತ ಸಂವಾದಾತ್ಮಕ ಪೋರ್ಟಲ್‌ನ ದತ್ತಾಂಶವು ಇಂದಿನಿಂದ 50 ವರ್ಷಗಳ ನಂತರ ಜೈಸಲ್ಮೇರ್ ಹೆಚ್ಚುವರಿ ಒಂದು ತಿಂಗಳು 'ತುಂಬಾ ಬಿಸಿಯಾದ ದಿನಗಳನ್ನು' ಹೊಂದಿರುತ್ತದೆ ಎಂದು ಹೇಳುತ್ತದೆ – ಒಟ್ಟು ದಿನಗಳ ಸಂಖ್ಯೆ 253ರಿಂದ 283ಕ್ಕೆ ಏರುತ್ತದೆ.
ಡಾ.ಸುಮಿತ್ ಡೂಕಿಯಾ ಅವರು ಸೌರ ಫಲಕಗಳಿಂದ ಬರುವ ಶಾಖವು ಆರ್‌ಇಗೆ ದಾರಿ ಮಾಡಿಕೊಡಲು ಕತ್ತರಿಸಿದ ಮರಗಳ ನಷ್ಟದಿಂದ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಸಂರಕ್ಷಣಾ ಜೀವಶಾಸ್ತ್ರಜ್ಞರಾಗಿರುವ ಅವರು ದಶಕಗಳಿಂದ ಒರಾಣ್‌ಗಳಲ್ಲಿನ ಬದಲಾವಣೆಯನ್ನು ಅಧ್ಯಯನ ಮಾಡುತ್ತಿದ್ದಾರೆ. "ಗಾಜಿನ ಫಲಕಗಳ ಪ್ರತಿಫಲನದಿಂದಾಗಿ ಸ್ಥಳೀಯ ಪರಿಸರ ತಾಪಮಾನವು ಏರುತ್ತಿದೆ." ಮುಂದಿನ 50 ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ತಾಪಮಾನದಲ್ಲಿ 1-2 ಡಿಗ್ರಿ ಏರಿಕೆಯನ್ನು ನಿರೀಕ್ಷಿಸಲಾಗಿದ್ದರೂ, "ಈಗ ಅದು ವೇಗಗೊಂಡಿದೆ ಮತ್ತು ತಾಪಮಾನ ಹೆಚ್ಚಾದಂತೆ ಸ್ಥಳೀಯ ಜಾತಿಯ ಕೀಟಗಳು, ವಿಶೇಷವಾಗಿ ಪರಾಗಸ್ಪರ್ಶಕಗಳು ಈ ಪ್ರದೇಶವನ್ನು ತೊರೆಯಲೇಬೇಕಾದ ಸ್ಥಿತಿಗೆ ಬರುತ್ತವೆ" ಎಂದು ಅವರು ಹೇಳುತ್ತಾರೆ.
2021ರ ಡಿಸೆಂಬರ್ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ಇನ್ನೂ ಆರು ಸೌರ ಉದ್ಯಾನವನಗಳಿಗೆ ಅನುಮೋದನೆ ನೀಡಲಾಗಿದೆ. ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ರಾಜಸ್ಥಾನವು ಗರಿಷ್ಠ ಆರ್‌ಇ ಸಾಮರ್ಥ್ಯವನ್ನು ಹೊಂದಿದೆ. 2021ರಲ್ಲಿ ಕೇವಲ ಒಂಬತ್ತು ತಿಂಗಳಿನಲ್ಲಿ (ಮಾರ್ಚಿಯಿಂದ ಡಿಸೆಂಬರ್ ತನಕ) 4,247 ಮೆಗವ್ಯಾಟ್ ಉತ್ಪನ್ನದ ಯೋಜನೆಯನ್ನು ಸೇರಿಸಲಾಗಿದೆ ಎಂದು ಎಮ್‌ಎನ್‌ಆರ್‌ಇ ವರದಿ ಹೇಳುತ್ತದೆ.
ಇದು ರಹಸ್ಯ ಕಾರ್ಯಾಚರಣೆಯಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ: "ಲಾಕ್‌ಡೌನ್ ಸಲುವಾಗಿ ಇಡೀ ಜಗತ್ತು ಮುಚ್ಚಲ್ಪಟ್ಟ ಸಮಯದಲ್ಲಿ, ಇದರ ಕೆಲಸವು ನಿರಂತರವಾಗಿ ನಡೆಯಿತು" ಎಂದು ಸ್ಥಳೀಯ ಕಾರ್ಯಕರ್ತ ಪಾರ್ಥ್ ಹೇಳುತ್ತಾರೆ. ದಿಗಂತದವರೆಗೆ ವಿಸ್ತರಿಸಿರುವ ಗಾಳಿಯಂತ್ರಗಳನ್ನು ತೋರಿಸುತ್ತಾ ಅವರು ಹೇಳುತ್ತಾರೆ, "ದೇವಿಕೋಟ್‌ನಿಂದ ದೇಗ್ರಾಯ್ ಮಂದಿರದವರೆಗಿನ ಈ 15 ಕಿ.ಮೀ ರಸ್ತೆಯ ಎರಡೂ ಬದಿಗಳಲ್ಲಿ ಲಾಕ್‌ಡೌನಿಗೂ ಯಾವುದೇ ರಚನೆಗಳಿರಲಿಲ್ಲ."
ಇವೆಲ್ಲ ಹೇಗೆ ನಡೆಯುತ್ತವೆ ಎನ್ನುವುದನ್ನು ವಿವರಿಸುತ್ತಾ ನಾರಾಯಣ್ ರಾಮ್ ಹೇಳುತ್ತಾರೆ, “ಅವರು ಪೊಲೀಸ್ ಲಾಠಿಗಳೊಡನೆ ಬಂದು ಮೊದಲು ನಮ್ಮನ್ನು ಓಡಿಸುತ್ತಾರೆ. ನಂತರ ಮರಗಳನ್ನು ಕಡಿದು ನೆಲ ಸಮತಟ್ಟುಗೊಳಿಸುತ್ತಾರೆ.” ನಾರಾಯಣ್ ರಾಮ್ ಅವರು ರಾಸ್ಲಾ ಪಂಚಾಯತ್‌ಗೆ ಸೇರಿದವರಾಗಿದ್ದು, ಒರಾಣ್ ಮೇಲ್ವಿಚಾರಣೆ ಮಾಡುವ ದೇಗ್ರಾಯ್ ಮಂದಿರದ ಎದುರು ಊರಿನ ಇತರ ಹಿರಿಯರೊಡನೆ ಕುಳಿತಿದ್ದರು.
“ನಾವು ಈ ಒರಾಣ್‌ಗಳಿಗೆ ನಮ್ಮ ದೇವರುಗಳಿಗೆ ಕೊಡುವಷ್ಟೇ ಗೌರವವನ್ನು ಕೊಡುತ್ತೇವೆ. ಇದು ನಮ್ಮ ಪಾಲಿಗೆ ದೇವಸ್ಥಾವಿದ್ದ ಹಾಗೆ. ಇದು ನಮ್ಮ ನಂಬಿಕೆ. ಇದು ನಮ್ಮ ಜಾನುವಾರುಗಳಿಗೆ ಮೇಯುವ ಸ್ಥಳ, ಕಾಡು ಪ್ರಾಣಿಗಳು ಮತ್ತು ಹಕ್ಕಿಗಳಿಗೆ ವಾಸ ಸ್ಥಳ. ಇಲ್ಲಿ ಅವುಗಳ ಜಲಮೂಲವೂ ಇದೆ̤ ಹೀಗಾಗಿ ಇದು ನಮಗೆ ದೇವತೆಯಿದ್ದಂತೆ. ಒಂಟೆ, ಕುರಿ, ಆಡು ಎಲ್ಲವಕ್ಕೂ ಈ ಸ್ಥಳ ಬೇಕು” ಎಂದು ಅವರು ಹೇಳುತ್ತಾರೆ.
ಈ ವಿಷಯದ ಕುರಿತು ಈ ವರದಿಗಾರರು ಜೈಸಲ್ಮೇರ್ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಪ್ರಯತ್ನಿಸಿದರಾದರೂ ಯಾವುದೇ ಭೇಟಿಯ ಅವಕಾಶ ದೊರೆಯಲಿಲ್ಲ. ಎಮ್‌ಎಎನ್‌ಆರ್‌ಇ ಅಡಿಯಲ್ಲಿ ಬರುವ ಬರುವ ರಾಷ್ಟ್ರೀಯ ಸೌರ ಶಕ್ತಿ ಸಂಸ್ಥೆಗೆ ಯಾವುದೇ ಸಂಪರ್ಕ ವಿವರಗಳಿಲ್ಲ; ಮತ್ತು ಎಮ್‌ಎಎನ್‌ಆರ್‌ಇ ಸಂಸ್ಥೆಗೆ ಕಳುಹಿಸಿದ ಇ-ಮೇಲ್‌ಗೆ ಈ ವರದಿ ಪ್ರಕಟವಾಗುವ ತನಕ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.
ರಾಜ್ಯ ವಿದ್ಯುತ್ ನಿಗಮದ ಸ್ಥಳೀಯ ಅಧಿಕಾರಿಯೊಬ್ಬರು ಈ ವಿಷಯವನ್ನು ಚರ್ಚಿಸಲು ತಮಗೆ ಅಧಿಕಾರವಿಲ್ಲ ಎಂದು ಹೇಳಿದರು, ಆದರೆ ಯಾವುದೇ ವಿದ್ಯುತ್ ಗ್ರಿಡ್ ಯೋಜನೆ ಅಥವಾ ಅದರ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಬಗ್ಗೆ ಯಾವುದೇ ಮಾರ್ಗಸೂಚಿಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದರು.
*****
ರಾಜಸ್ಥಾನದಲ್ಲಿ ಆರ್‌ಇ ಕಂಪನಿಗಳು ಭೂಮಿಯನ್ನು ಪಡೆಯುವ ತಂತ್ರದಲ್ಲಿ ವಸಾಹತುಶಾಹಿ ಕಾಲದ ಭಾಷೆಯ ಬೇರುಗಳಿವೆ, ಅದು ಎಲ್ಲಾ ಆದಾಯರಹಿತ ಭೂಮಿಯನ್ನು 'ಬಂಜರು ಭೂಮಿ' ಎಂದು ಕರೆಯುತ್ತದೆ. ಇದರಲ್ಲಿ ಇಲ್ಲಿ ಕಂಡುಬರುವ ಅರೆ-ಶುಷ್ಕ ಮುಕ್ತ ಸವನ್ನಾಗಳು ಮತ್ತು ಹುಲ್ಲುಗಾವಲುಗಳು ಸೇರಿವೆ.
ಹಿರಿಯ ವಿಜ್ಞಾನಿಗಳು ಮತ್ತು ಸಂರಕ್ಷಣಾವಾದಿಗಳು ಈ ತಪ್ಪು ವರ್ಗೀಕರಣವನ್ನು ಸಾರ್ವಜನಿಕವಾಗಿ ವಿರೋಧಿಸುತ್ತಿದ್ದರೂ, ಭಾರತ ಸರ್ಕಾರವು 2005ರಿಂದ ಬಂಜರು ಭೂಮಿ ಅಟ್ಲಾಸ್ ಪ್ರಕಟಿಸುವುದನ್ನು ಮುಂದುವರೆಸಿದೆ; ಇದರ ಐದನೇ ಆವೃತ್ತಿಯು 2019ರಲ್ಲಿ ಬಂದಿದೆ. ಆದರೆ ಅದನ್ನು ಸಂಪೂರ್ಣವಾಗಿ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
2015-16ರ ಬಂಜರು ಭೂಮಿ ಅಟ್ಲಾಸ್ ಭಾರತದ 17 ಪ್ರತಿಶತ ಭೂಮಿಯನ್ನು ಹುಲ್ಲುಗಾವಲು ಎಂದು ವರ್ಗೀಕರಿಸಿದೆ. ಸರ್ಕಾರದ ನೀತಿಯು ಅಧಿಕೃತವಾಗಿ ಹುಲ್ಲುಗಾವಲುಗಳು, ಕುರುಚಲು ಮತ್ತು ಮುಳ್ಳು ಕಾಡುಗಳನ್ನು 'ಬಂಜರು' ಅಥವಾ 'ಅನುತ್ಪಾದಕ ಭೂಮಿ' ಎಂದು ಘೋಷಿಸುತ್ತದೆ.
"ಭಾರತವು ಒಣ ಭೂಮಿ ಪರಿಸರ ವ್ಯವಸ್ಥೆಯನ್ನು ಸಂರಕ್ಷಣೆ, ಜೀವನೋಪಾಯದ ವಿಧಾನಗಳು ಮತ್ತು ಜೈವಿಕ ವೈವಿಧ್ಯತೆಯ ದೃಷ್ಟಿಯಿಂದ ಉಪಯುಕ್ತವೆಂದು ಒಪ್ಪಿಕೊಳ್ಳುವುದಿಲ್ಲ. ಇದರಿಂದಾಗಿ ಈ ಪ್ರದೇಶಗಳು ಪರಿವರ್ತನೆಗೆ ಸುಲಭ ಗುರಿಯಾಗುತ್ತವೆ. ಮತ್ತು ಈ ಮೂಲಕ ಸರಿಪಡಿಸಲಾಗದಷ್ಟು ಹಾನಿಯಾಗುತ್ತದೆ” ಎಂದು ಎರಡು ದಶಕಗಳಿಗೂ ಹೆಚ್ಚು ಕಾಲ ಹುಲ್ಲುಗಾವಲುಗಳ ಈ ತಪ್ಪು ವರ್ಗೀಕರಣದ ವಿರುದ್ಧ ಹೋರಾಡುತ್ತಿರುವ ಸಂರಕ್ಷಣಾ ವಿಜ್ಞಾನಿ ಡಾ. ಅಬಿ ಟಿ. ವನಕ್ ಹೇಳುತ್ತಾರೆ.
“ಈ ಸೋಲಾರ್ ಫಾರ್ಮ್‌ಗಳು ಹಿಂದೆ ಬಂಜರಾಗಿಲ್ಲದ ಭೂಮಿಯನ್ನು ಬಂಜರು ಭೂಮಿಯನ್ನಾಗಿ ಮಾಡುತ್ತವೆ. ನೀವು ಉತ್ತಮ ಪರಿಸರ ವ್ಯವಸ್ಥೆಯನ್ನು ಬಲಿ ಕೊಟ್ಟು ಸೋಲಾರ್ ಫಾರ್ಮ್ ರಚಿಸಿದ್ದೀರಿ. ಇದು ಶಕ್ತಿಯನ್ನೇನೋ ಉತ್ಪಾದಿಸುತ್ತಿದೆ. ಆದರೆ ಇದು ನಿಜಕ್ಕೂ ಹಸಿರು ವಿದ್ಯುತ್ತೇ? ಎಂದು ಅವರು ಕೇಳುತ್ತಾರೆ. ರಾಜಸ್ಥಾನದ 33 ಪ್ರತಿಶತ ಭಾಗವು ಮುಕ್ತ ನೈಸರ್ಗಿಕ ಪರಿಸರ ವ್ಯವಸ್ಥೆಯಾಗಿದೆ ಮತ್ತು ಅವು ದಾಖಲೆಗಳಲ್ಲಿ ವರ್ಗೀಕರಿಸಿದಂತೆ ಬಂಜರು ಭೂಮಿಯಲ್ಲ ಎಂದು ಅವರು ಹೇಳುತ್ತಾರೆ.
ನೇಚರ್ ಕನ್ಸರ್ವೇಶನ್ ಫೌಂಡೇಶನ್ ಸಂಸ್ಥೆಯ ಪರಿಸರಶಾಸ್ತ್ರಜ್ಞ ಎಂ.ಡಿ.ಮಧುಸೂದನ್ ಅವರೊಂದಿಗೆ ಸಹ-ಲೇಖಕರಾಗಿ ಅವರು ಬರೆದ ಪ್ರಬಂಧದಲ್ಲಿ, "ಒಎನ್‌ಇಗಳು ಭಾರತದ ಶೇಕಡಾ 10ರಷ್ಟು ಭೂಮಿಯನ್ನು ಒಳಗೊಂಡಿವೆ ಆದರೆ ಅದರಲ್ಲಿ ಕೇವಲ 5 ಪ್ರತಿಶತದಷ್ಟು ಮಾತ್ರ ಸಂರಕ್ಷಿತ ಪ್ರದೇಶಗಳ (ಪಿಎ) ಅಡಿಯಲ್ಲಿದೆ" ಎಂದು ಬರೆದಿದ್ದಾರೆ. ಭಾರತದ ಅರೆ-ಶುಷ್ಕ ಮುಕ್ತ ನೈಸರ್ಗಿಕ ಪರಿಸರ ವ್ಯವಸ್ಥೆಗಳ ವ್ಯಾಪ್ತಿ ಮತ್ತು ವಿತರಣೆಯ ಮ್ಯಾಪಿಂಗ್ ಎಂಬ ಶೀರ್ಷಿಕೆಯನ್ನು ಈ ಪ್ರಬಂಧ ಹೊಂದಿದೆ.
ಈ ಪ್ರಮುಖ ಮೇವು ಮಾಳಗಳನ್ನು ಉಲ್ಲೇಖಿಸುತ್ತಾ ಜೋರಾ ರಾಮ್ ಹೇಳುತ್ತಾರೆ, “ಸರ್ಕಾರ ನಮ್ಮ ಭವಿಷ್ಯವನ್ನು ಬಲಿ ಕೊಡುತ್ತಿದೆ. ನಮ್ಮ ಸಮುದಾಯವನ್ನು ಉಳಿಸಿಕೊಳ್ಳಲು ನಾವು ಒಂಟೆಗಳನ್ನು ಉಳಿಸಿಕೊಳ್ಳಬೇಕಿದೆ.”
ಪರಿಸ್ಥಿತಿಯನ್ನು ಹದಗೆಡಿಸಲೆಂಬಂತೆ 1999 ರಲ್ಲಿ, ಹಿಂದಿನ ಬಂಜರು ಭೂಮಿ ಅಭಿವೃದ್ಧಿ ಇಲಾಖೆಯನ್ನು ಭೂ ಸಂಪನ್ಮೂಲ ಇಲಾಖೆ (ಡಿಒಎಲ್ಆರ್) ಎಂದು ಮರುನಾಮಕರಣ ಮಾಡಲಾಯಿತು.
"ಈ ಬಗ್ಗೆ ಸರ್ಕಾರದ ತಿಳುವಳಿಕೆ ತಂತ್ರಜ್ಞಾನ ಕೇಂದ್ರಿತವಾಗಿದೆ. "ಸ್ಥಳೀಯ ಪರಿಸರವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ, ಮತ್ತು ಸಾಮಾನ್ಯ ಜನರು ಭೂಮಿಯೊಡನೆ ಹೊಂದಿರುವ ಸಂಬಂಧವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ" ಎಂದು ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್ (ಎಟಿಆರ್‌ಇಇ) ನ ಪ್ರಾಧ್ಯಾಪಕರಾಗಿರುವ ವನಕ್ ಹೇಳುತ್ತಾರೆ.
ಸೌಂಟಾ ಗ್ರಾಮದ 30 ವರ್ಷದ ಕಮಲ್ ಕುಂವರ್ ಹೇಳುತ್ತಾರೆ, “ಈಗ ಒರಾಣ್‌ನಿಂದ ಕೇರ್ ಸಂಗ್ರಿ ತರುವುದು ಕೂಡಾ ಸಾಧ್ಯವಿಲ್ಲ” ಎಂದು. ಕೇರ್ ಮರದ ಹಣ್ಣುಗಳು ಮತ್ತು ಕೋಡುಗಳನ್ನು ಸ್ಥಳೀಯರು ಅಡುಗೆಗೆ ಬಳಸುತ್ತಾರೆ. ಅದು ಈಗ ಸಿಗದಿರುವುದು ಅವರಿಗೆ ಸಿಟ್ಟು ತರಿಸಿದೆ.
ಡಿಒಎಲ್ಆರ್ ನಡೆಸುತ್ತಿರುವ ಅಭಿಯಾನದ ಘೋಷಿತ ಧ್ಯೇಯವು 'ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು' ಮುಂತಾದ ಕಾರ್ಯಕ್ರಮಗಳನ್ನು ಸಹ ಒಳಗೊಂಡಿದೆ, ಆದರೆ ಅದು ಆರ್‌ಇ ಕಂಪನಿಗಳಿಗೆ ಭೂ ಹಕ್ಕುಗಳನ್ನು ನೀಡುವ ಮೂಲಕ, ಹುಲ್ಲುಗಾವಲುಗಳ ಸಾರ್ವಜನಿಕ ಬಳಕೆಯನ್ನು ನಿಷೇಧಿಸುವ ಮೂಲಕ ಮತ್ತು ಅರಣ್ಯೇತರ ಮರದ ಉತ್ಪನ್ನಗಳನ್ನು (ಎನ್‌ಟಿಎಫ್‌ಪಿ) ಕೈಗೆಟುಕದಂತೆ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ವಿರುದ್ಧವಾಗಿ ಕ್ರಮ ಕೈಗೊಂಡಿದೆ.
ಕುಂದನ್ ಸಿಂಗ್ ಜೈಸಲ್ಮೇರ್ ಜಿಲ್ಲೆಯ ಮೊಕಲಾ ಗ್ರಾಮದ ಪಶುಪಾಲಕ. 25 ವರ್ಷದ ಕುಂದನ್ ಅವರ ಊರಿನಲ್ಲಿ ಸುಮಾರು 30 ಕುಟುಂಬಗಳು ಕೃಷಿ ಮತ್ತು ಪಶುಸಂಗೋಪನೆಯನ್ನು ಮಾಡುತ್ತವೆ ಎಂದು ಹೇಳುತ್ತಾರೆ. ಈಗೀಗ ತಮ್ಮ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವುದು ಅವರಿಗೆ ಬಹಳ ಕಷ್ಟದ ಕೆಲಸವಾಗಿದೆ. "ಅವರು [ಆರ್‌ಇ ಕಂಪನಿಗಳು] ಬೇಲಿ ನಿರ್ಮಿಸಿರುವ ಕಾರಣ ನಮಗೆ ಜಾನುವಾರುಗಳನ್ನು ಮೇಯಿಸಲು ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ."
ಜೈಸಲ್ಮೇರ್ ಜಿಲ್ಲೆಯು ಶೇಕಡಾ 87ರಷ್ಟು ಭೂಮಿಯು ಗ್ರಾಮೀಣ ಪ್ರದೇಶವಾಗಿದೆ, ಮತ್ತು ಇಲ್ಲಿನ ಶೇಕಡಾ 60 ಕ್ಕೂ ಹೆಚ್ಚು ಜನರು ಕೃಷಿ ಕೆಲಸ ಮಾಡುತ್ತಾರೆ ಮತ್ತು ಜಾನುವಾರುಗಳನ್ನು ಸಾಕುತ್ತಾರೆ. "ಈ ಪ್ರದೇಶದ ಪ್ರತಿಯೊಂದು ಮನೆಯಲ್ಲೂ ಜಾನುವಾರುಗಳಿವೆ" ಎಂದು ಸುಮೇರ್ ಸಿಂಗ್ ಹೇಳುತ್ತಾರೆ. "ಈಗೀಗ ಜಾನುವಾರಿಗೆ ಸಾಕಷ್ಟು ಆಹಾರ ಹೊಂದಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ."
ಈ ಪ್ರಾಣಿಗಳು ಹುಲ್ಲನ್ನು ತಿನ್ನುತ್ತವೆ, ಅದರಲ್ಲಿ ರಾಜಸ್ಥಾನದಲ್ಲಿ 375 ಜಾತಿಗಳಿವೆ ಎಂದು ಜೂನ್ 2014 ರಲ್ಲಿ ಪ್ರಕಟವಾದ ಸಸ್ಯ ಪ್ರಭೇದಗಳ ವೈವಿಧ್ಯತೆಯ ಮಾದರಿ ಎಂಬ ಶೀರ್ಷಿಕೆಯ ಈ ಪ್ರಬಂಧವು ಹೇಳುತ್ತದೆ. ಇಲ್ಲಿನ ಕಡಿಮೆ ಮಳೆಗೆ ಅವು ಹೆಚ್ಚು ಹೊಂದಿಕೊಳ್ಳುತ್ತವೆ.
ಆದರೆ ಆರ್‌ಇ ಕಂಪನಿಗಳು ಈ ಭುಮಿಯನ್ನು ಸ್ವಾಧೀನಪಡಿಸಿಕೊಂಡಾಗ, “ಮಣ್ಣು ತೊಂದರೆಗೀಡಾಗುತ್ತದೆ. ಸ್ಥಳೀಯ ಸಸ್ಯಗಳ ಪೊದೆಗಳು ಹಲವು ದಶಕಗಳಷ್ಟು ಹಳೆಯವು. ಜೊತೆಗೆ ಇಲ್ಲಿನ ಪರಿಸರ ವ್ಯವಸ್ಥೆ ನೂರಾರು ವರ್ಷಗಳಷ್ಟು ಹಳೆಯದು. ಇವುಗಳನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ! ಅವುಗಳನ್ನು ನಾಶಪಡಿಸುವುದೆಂದರೆ ಮರುಭೂಮೀಕರಣವನ್ನು ಉತ್ತೇಜಿಸುವುದು” ಎಂದು ವನಕ್ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ.
ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2021ರ ಪ್ರಕಾರ, ರಾಜಸ್ಥಾನವು 34 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಹೊಂದಿದೆ, ಆದರೆ ಈ ಭೂಮಿಯಲ್ಲಿ ಕೇವಲ 8 ಪ್ರತಿಶತದಷ್ಟು ಮಾತ್ರ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ, ಏಕೆಂದರೆ ಉಪಗ್ರಹಗಳನ್ನು ದತ್ತಾಂಶ ಸಂಗ್ರಹಣೆಗೆ ಬಳಸಿದಾಗ, ಮರಗಳಿಂದ ಆವೃತವಾದ ಭೂಮಿಯನ್ನು ಮಾತ್ರ 'ಅರಣ್ಯ ಪ್ರದೇಶ' ಎಂದು ಪರಿಗಣಿಸಲಾಗುತ್ತದೆ.
ಆದರೆ ಈ ರಾಜ್ಯದ ಅರಣ್ಯ ಪ್ರದೇಶಗಳು ಅನೇಕ ಹುಲ್ಲುಗಾವಲು ಅವಲಂಬಿತ ಪ್ರಾಣಿ ಪ್ರಭೇದಗಳಿಗೆ ಆಶ್ರಯ ತಾಣಗಳಾಗಿವೆ, ಅವುಗಳಲ್ಲಿ ಅನೇಕವು ಅಳಿವಿನ ಅಪಾಯವನ್ನು ಎದುರಿಸುತ್ತಿವೆ. ಇವುಗಳಲ್ಲಿ, ಲೇಸರ್ ಫ್ಲೋರಿಕನ್ ಜಾತಿಗಳು, ಗ್ರೇಟ್ ಇಂಡಿಯನ್ ಬಸ್ಟರ್ಡ್, ಇಂಡಿಯನ್ ಗ್ರೇ ವುಲ್ಫ್, ಗೋಲ್ಡನ್ ವುಲ್ಫ್, ಇಂಡಿಯನ್ ಫಾಕ್ಸ್, ಇಂಡಿಯನ್ ಗೆಜೆಲ್, ಕೃಷ್ಣಮೃಗ, ಪಟ್ಟೆ ಹೈನಾ, ಕ್ಯಾರಾಕಲ್, ಮರುಭೂಮಿ ಬೆಕ್ಕು, ಭಾರತೀಯ ಮುಳ್ಳುಹಂದಿ ಮತ್ತು ಇತರ ಅನೇಕ ಜಾತಿಗಳು ಪ್ರಮುಖವಾಗಿವೆ. ಇದಲ್ಲದೆ, ಮರುಭೂಮಿ ಮಾನಿಟರ್ ಹಲ್ಲಿಗಳು ಮತ್ತು ಉಂಗುರ ಬಾಲದ ಹಲ್ಲಿಗಳಂತಹ ಜಾತಿಗಳನ್ನು ಸಹ ತುರ್ತಾಗಿ ರಕ್ಷಿಸಬೇಕಾಗಿದೆ.
ವಿಶ್ವಸಂಸ್ಥೆಯು 2021-2030ರ ದಶಕವನ್ನು ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯ ದಶಕವೆಂದು ಘೋಷಿಸಿದೆ: "ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯು ನಾಶವಾದ ಅಥವಾ ವೇಗವಾಗಿ ಹಾನಿಗೊಳಗಾಗುತ್ತಿರುವ ಪರಿಸರ ವ್ಯವಸ್ಥೆಗಳ ಆರೋಗ್ಯಕ್ಕೆ ಕೊಡುಗೆ ನೀಡುವುದನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ, ಇದು ಇನ್ನೂ ಸುರಕ್ಷಿತವಾಗಿರುವ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ". ಇದಲ್ಲದೆ, ಐಯುಸಿಎನ್ ನೇಚರ್ 2023 ಕಾರ್ಯಕ್ರಮವು 'ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ' ಯನ್ನು ಮೊದಲ ಆದ್ಯತೆಯಾಗಿ ಪಟ್ಟಿ ಮಾಡುತ್ತದೆ.
"ಹುಲ್ಲುಗಾವಲುಗಳನ್ನು ಉಳಿಸುವ" ಮತ್ತು "ತೆರೆದ ಅರಣ್ಯ ಪರಿಸರವನ್ನು ಉಳಿಸುವ" ಉದ್ದೇಶಕ್ಕಾಗಿ ಭಾರತ ಸರ್ಕಾರವು ವಿದೇಶದಿಂದ ಚಿರತೆಗಳನ್ನು ತರಿಸುತ್ತಿದೆ, ಅಥವಾ 2022ರ ಜನವರಿಯಲ್ಲಿ 224 ಕೋಟಿ ರೂ.ಗಳ ಚೀತಾ ಆಮದು ಯೋಜನೆಯನ್ನು ಘೋಷಿಸಲಾಗಿದೆ ಎಂದು ಹೇಳಬಹುದು. ಆದರೆ ಚಿರತೆಗಳು ತಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಹೆಚ್ಚು ಯಶಸ್ವಿಯಾಗಿಲ್ಲ. ಆಮದು ಮಾಡಿಕೊಂಡ 20 ಚಿರತೆಗಳಲ್ಲಿ ಐದು ಚಿರತೆಗಳು ಈವರೆಗೆ ಮೃತಪಟ್ಟಿವೆ. ಇಲ್ಲಿ ಜನಿಸಿದ ಮೂರು ಮರಿಗಳು ಸಹ ಬದುಕುಳಿದಿಲ್ಲ.
*****
ಒರಾಣ್‌ಗೆ ಸಂಬಂಧಿಸಿದಂತೆ, 2018ರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶವೊಂದರಲ್ಲಿ "... ಶುಷ್ಕ ಪ್ರದೇಶಗಳಲ್ಲಿ ಹಸಿರು, ಹುಲ್ಲುಗಾವಲುಗಳು ಮತ್ತು ಪರಿಸರಕ್ಕೆ ಅರಣ್ಯ ಪ್ರದೇಶದ ಸ್ಥಾನಮಾನವನ್ನು ನೀಡಬೇಕು.” ಎಂದು ಹೇಳಿತು
ಆದಾಗ್ಯೂ, ವಾಸ್ತವದಲ್ಲಿ ಏನೂ ಬದಲಾಗಿಲ್ಲ ಮತ್ತು ಆರ್‌ಇ ಕಂಪನಿಗಳೊಂದಿಗೆ ನಿರಂತರವಾಗಿ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ. ಈ ಅರಣ್ಯಗಳಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಮನ್ ಸಿಂಗ್ ಅವರು "ನಿರ್ದೇಶನ ಮತ್ತು ಮಧ್ಯಪ್ರವೇಶ" ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಫೆಬ್ರವರಿ 13, 2023 ರಂದು ರಾಜಸ್ಥಾನ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ನೋಟಿಸ್ ನೀಡಿತು.
"ಸರಕಾರದ ಬಳಿ ಒರಾಣ್‌ಗಳ ಕುರಿತು ಸಾಕಷ್ಟು ಡೇಟಾಬೇಸ್ ಲಭ್ಯವಿಲ್ಲ. ಕಂದಾಯ ದಾಖಲೆಗಳು ಸಹ ನವೀಕೃತವಾಗಿಲ್ಲ, ಮತ್ತು ಅನೇಕ ಒರಾಣ್‌ಗಳನ್ನು ದಾಖಲಿಸಿಲ್ಲ. ಅವುಗಳನ್ನು ಅತಿಕ್ರಮಿಸಲಾಗಿದೆ" ಎಂದು ಕೃಷಿ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಮನ್ ಹೇಳುತ್ತಾರೆ. ಈ ಸಂಸ್ಥೆಗಳು ಸಾಮೂಹಿಕ ಭೂಮಿಯನ್ನು, ವಿಶೇಷವಾಗಿ ಒರಾಣ್‌ಗಳನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಿವೆ.
'ಡೀಮ್ಡ್ ಫಾರೆಸ್ಟ್' ಸ್ಥಾನಮಾನವು ಒರಾಣ್‌ಗಳಿಗೆ ಗಣಿಗಾರಿಕೆ, ಸೌರ ಮತ್ತು ಪವನ ಫಾರ್ಮ್ಸ್, ನಗರೀಕರಣ ಮತ್ತು ಅವು ಎದುರಿಸುತ್ತಿರುವ ಇತರ ಬೆದರಿಕೆಗಳ ವಿರುದ್ಧ ಹೆಚ್ಚಿನ ಕಾನೂನು ರಕ್ಷಣೆಯನ್ನು ಒದಗಿಸಬೇಕು ಎಂದು ಅವರು ಹೇಳುತ್ತಾರೆ. "ಅವು ಬಂಜರು ಭೂಮಿ ಕಂದಾಯ ವಿಭಾಗದಲ್ಲಿ ಉಳಿದರೆ, ಇತರ ಉದ್ದೇಶಗಳಿಗೆ ಹಂಚಿಕೆಯಾಗುವುದು ಮುಂದುವರೆಯುತ್ತದೆ" ಎಂದು ಅವರು ಹೇಳುತ್ತಾರೆ.
ಆದರೆ 2019 ರಾಜಸ್ಥಾನ ಸೌರ ಶಕ್ತಿ ನೀತಿಯು ಸೌರ ವಿದ್ಯುತ್ ಸ್ಥಾವರಗಳು ಮತ್ತು ಕಂಪನಿಗಳಿಗೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ನೀಡಿದ್ದು, ಇದಕ್ಕೆ ಇರುವ ಮಿತಿಯನ್ನೂ ತೆಗೆದುಹಾಕಿದೆ. ಈ ಮೂಲಕ ಜನರಿಗೆ ಒರಾಣ್ ಮೇಲಿದ್ದ ನಿಯಂತ್ರಣವನ್ನು ಇನ್ನಷ್ಟು ಮಿತಿಗೊಳಿಸಿದೆ.
"ಭಾರತದ ಪರಿಸರ ಕಾನೂನುಗಳು ಹಸಿರು ಶಕ್ತಿಯನ್ನು ಆಡಿಟ್ ಮಾಡುತ್ತಿಲ್ಲ" ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಮತ್ತು ನವದೆಹಲಿಯ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸುಮಿತ್ ಡೂಕಿಯಾ ಹೇಳುತ್ತಾರೆ. ಅವರು ಹೇಳುತ್ತಾರೆ, "ಆದರೆ ಕಾನೂನು ಆರ್‌ಇ ಪರವಾಗಿರುವುದರಿಂದ ಸರ್ಕಾರವು ಯಾವುದೇ ಕ್ರಮ ತೆಗೆದುಕೊಳ್ಳಲಾಗದೆ ಅಸಹಾಯಕವಾಗಿದೆ."
ಆರ್ ಇ ಸ್ಥಾವರಗಳು ಹೊರಸೂಸುವ ಬೃಹತ್ ಪ್ರಮಾಣದ ಜೈವಿಕ ವಿಘಟನೀಯವಲ್ಲದ ತ್ಯಾಜ್ಯದ ಬಗ್ಗೆ ಡುಕಿಯಾ ಮತ್ತು ಪಾರ್ಥ್ ಕಳವಳ ವ್ಯಕ್ತಪಡಿಸುತ್ತಾರೆ. "ಈ ಗುತ್ತಿಗೆಗಳನ್ನು ಆರ್‌ಇ ಕಂಪನಿಗಳಿಗೆ 30 ವರ್ಷಗಳ ಅವಧಿಗೆ ನೀಡಲಾಗಿದೆ ಆದರೆ ಗಾಳಿಯಂತ್ರಗಳು ಮತ್ತು ಸೌರ ಫಲಕಗಳ ಜೀವಿತಾವಧಿ 25 ವರ್ಷಗಳು. ಅವುಗಳನ್ನು ಯಾರು ನಾಶಪಡಿಸುತ್ತಾರೆ ಮತ್ತು ಈ ಕೆಲಸ ಎಲ್ಲಿ ನಡೆಯುತ್ತದೆ" ಎಂದು ಡೂಕಿಯಾ ಕೇಳುತ್ತಾರೆ.
*****
“ಸರ್ ಸಾಂತೆ ರೋಕ್ ರಹೇ ತೋ ಭೀ ಸಸ್ತಾ ಜಾನ್ [ಒಂದು ವೇಳೆ ಒಂದು ಮರದ ಸಲುವಾಗಿ ಒಬ್ಬನ ಜೀವವೇ ಹೋದರೂ ಅದು ನಷ್ಟವಲ್ಲ].” ಎನ್ನುವ ಸ್ಥಳೀಯ ಗಾದೆಯನ್ನು ಉಲ್ಲೇಖಿಸುತ್ತಾ ರಾಧೇಶ್ಯಾಮ್ ಬಿಷ್ಣೋಯ್ ಹೇಳುತ್ತಾರೆ, “ಇದು ನಮಗೆ ಮರಗಳೊಡನೆ ಇರುವ ಸಂಬಂಧವನ್ನು ವಿವರಿಸುತ್ತದೆ”. ಸ್ಥಳೀಯರಿಂದ ಗೋದ್ವಾನ್ ಎಂದೂ ಕರೆಯಲ್ಪಡುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣೆಯನ್ನು ಬೆಂಬಲಿಸುವ ಪ್ರಮುಖ ಮತ್ತು ಬಲವಾದ ಧ್ವನಿಯಾಗಿ ಬಿಷ್ಣೋಯ್ ಹೆಸರುವಾಸಿಯಾಗಿದ್ದಾರೆ.
"ಸುಮಾರು 300 ವರ್ಷಗಳ ಹಿಂದೆ, ಜೋಧಪುರದ ರಾಜನು ಕೋಟೆಯನ್ನು ನಿರ್ಮಿಸಲು ನಿರ್ಧರಿಸಿ ಹತ್ತಿರದ ಗ್ರಾಮವಾದ ಖೇತೋಲೈನಿಂದ ಮರವನ್ನು ತರಲು ತನ್ನ ಮಂತ್ರಿಗೆ ಆದೇಶಿಸಿದನು. ಮಂತ್ರಿ ಆದೇಶವನ್ನು ಅನುಸರಿಸಿ ಸೈನ್ಯವನ್ನು ಅಲ್ಲಿಗೆ ಕಳುಹಿಸಿದನು. ಆದರೆ ಅವರು ಅಲ್ಲಿಗೆ ತಲುಪಿದಾಗ, ಬಿಷ್ಣೋಯ್ ಜನರು ಮರಗಳನ್ನು ಕಡಿಯದಂತೆ ತಡೆದರು. "ಮರಗಳನ್ನು ಮತ್ತು ಅವುಗಳನ್ನು ತಬ್ಬಿಕೊಂಡಿರುವ ಜನರನ್ನು ಕಡಿದುಹಾಕಿ" ಎಂದು ಮಂತ್ರಿ ಘೋಷಿಸಿದ.
ಸ್ಥಳೀಯ ದಂತಕಥೆಯ ಪ್ರಕಾರ ಅಮೃತಾ ದೇವಿಯ ಹೆಸರಿನಲ್ಲಿ ಎಲ್ಲಾ ಗ್ರಾಮಸ್ಥರು ತಲಾ ಒಂದು ಮರವನ್ನು ದತ್ತು ಪಡೆದರು. ಆದರೆ ಸೈನಿಕರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಮತ್ತು 363 ಜನರನ್ನು ಕೊಂದರು.
"ಪರಿಸರಕ್ಕಾಗಿ ನಮ್ಮ ಜೀವವನ್ನು ತ್ಯಾಗ ಮಾಡುವ ಆ ಮನೋಭಾವವು ನಮ್ಮಲ್ಲಿ ಇನ್ನೂ ಜೀವಂತವಾಗಿದೆ" ಎಂದು ಅವರು ಹೇಳುತ್ತಾರೆ.
ದೇಗ್ರಾಯ್‌ಯಲ್ಲಿ 60,000 ಬಿಘಾ ವಿಸ್ತಾರಕ್ಕೆ ಹರಡಿರುವ ಒರಾಣ್‌ನ, 24,000 ಬಿಘಾಗಳು ದೇವಾಲಯದ ಟ್ರಸ್ಟ್ ಅಡಿಯಲ್ಲಿವೆ ಎಂದು ಸುಮೇರ್ ಸಿಂಗ್ ಹೇಳುತ್ತಾರೆ. ಉಳಿದ 36,000 ಬಿಘಾಗಳನ್ನು ಸರ್ಕಾರವು ಟ್ರಸ್ಟಿಗೆ ವರ್ಗಾಯಿಸಲಿಲ್ಲ, ಮತ್ತು 2004ರಲ್ಲಿ ಸರ್ಕಾರವು ಭೂಮಿಯನ್ನು ಪವನ ವಿದ್ಯುತ್ ಕಂಪನಿಗಳಿಗೆ ಮಂಜೂರು ಮಾಡಿತು. ಆದರೆ ನಾವು ನಮ್ಮ ಹೋರಾಟವನ್ನು ಮಾಡಿದ್ದೇವೆ ಮತ್ತು ಈಗಲೂ ಹೋರಾಡುತ್ತಿದ್ದೇವೆ" ಎಂದು ಸುಮೇರ್ ಸಿಂಗ್ ಹೇಳುತ್ತಾರೆ.
ಜೈಸಲ್ಮೇರ್‌ನ ಇತರೆಡೆ ಸಣ್ಣ ಒರಾಣ್‌ಗಳು ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ, ಯಾಕೆಂದರೆ ಅವುಗಳನ್ನು ʼಬಂಜರು ಭೂಮಿʼ ಎಂದು ವರ್ಗೀಕರಿಸಲಾಗಿರುವುದರಿಂದಾಗಿ ಅವುಗಳನ್ನು ಆರ್‌ಇ ಕಂಪನಿಗಳು ಅವುಗಳನ್ನು ಸುಲಭವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿವೆ.
"ಈ ಭೂಮಿ ಬಂಡೆಯಂತೆ ಕಾಣುತ್ತದೆ" ಎಂದು ಅವರು ಸೌಂಟಾದಲ್ಲಿನ ತಮ್ಮ ಹೊಲಗಳ ಸುತ್ತಲೂ ನೋಡುತ್ತಾ ಹೇಳುತ್ತಾರೆ. "ಆದರೆ ನಾವು ಇಲ್ಲಿ ಅತ್ಯಂತ ಸುಧಾರಿತ ಮತ್ತು ಪೌಷ್ಟಿಕ ತಳಿಯ ಬಾಜ್ರಾ ಬೆಳೆಯುತ್ತೇವೆ." ಮೊಕ್ಲಾ ಗ್ರಾಮದ ಬಳಿಯ ಡೋಂಗರ್ ಪೀರ್ ಜೀ ಒರಾಣ್ ಕೇಜ್ರಿ, ಕೆರ್, ಜಾಲ್ ಮತ್ತು ಬೆರ್ ಮರಗಳಿಂದ ಕೂಡಿದೆ. ಇವು ಇಲ್ಲಿನ ಮಾನವರು ಮತ್ತು ಪ್ರಾಣಿಗಳಿಗೆ ಅತ್ಯಗತ್ಯ ಆಹಾರಗಳಾಗಿವೆ ಮತ್ತು ಸ್ಥಳೀಯ ರುಚಿಗಳ ಅವಿಭಾಜ್ಯ ಅಂಗವಾಗಿದೆ.
"ಬಂಜಾರ್ ಭೂಮಿ [ಬಂಜರು ಭೂಮಿ]!" ಸುಮೇರ್ ಸಿಂಗ್ ಈ ವರ್ಗೀಕರಣವನ್ನು ಅನುಮಾನದಿಂದ ನೋಡುತ್ತಾರೆ. "ಈ ಭೂಮಿಯನ್ನು ಬೇರೆ ಜೀವನೋಪಾಯದ ಆಯ್ಕೆಯಿಲ್ಲದ ಸ್ಥಳೀಯ ಭೂರಹಿತರಿಗೆ ನೀಡಿ. ಈ ಭೂಮಿಯನ್ನು ಅವರಿಗೆ ಹಸ್ತಾಂತರಿಸಿ. ಅವರು ಅವುಗಳ ಮೇಲೆ ರಾಗಿ ಮತ್ತು ಬಾಜ್ರಾವನ್ನು ಬೆಳೆಯಬಹುದು ಮತ್ತು ಈ ಮೂಲಕ ಪ್ರತಿಯೊಬ್ಬ ಮನುಷ್ಯನಿಗೂ ಆಹಾರವನ್ನು ನೀಡಬಹುದು."
ಜೈಸಲ್ಮೇರ್ ಮತ್ತು ಖೇತೋಲೈ ನಡುವಿನ ಹೆದ್ದಾರಿಯಲ್ಲಿ ಮಂಗಿಲಾಲ್ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. "ನಾವು ಬಡವರು. ನಮ್ಮ ಭೂಮಿಗೆ ಬದಲಾಗಿ ಯಾರಾದರೂ ಹಣವನ್ನು ನೀಡಿದರೆ, ನಾವು ಹೇಗೆ ನಿರಾಕರಿಸಲು ಸಾಧ್ಯ?” ಎಂದು ಕೇಳುತ್ತಾರೆ.
ಈ ವರದಿಗೆ ಸಹಾಯ ಮಾಡಿದ ಬಯೋ ಡೈವರ್ಸಿಟಿ ಕೊಲ್ಯಾಬೋರೇಟಿವ್ ಸದಸ್ಯ ಡಾ.ರವಿ ಚೆಲ್ಲಂ ಅವರಿಗೆ ವರದಿಗಾರ ರು ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಅನುವಾದ : ಶಂಕರ . ಎನ್ . ಕೆಂಚನೂರು