ಶೈಲ ನೃತ್ಯವು ಛತ್ತೀಸಗಢದ ಸರ್ಗುಜಾ ಮತ್ತು ಜಶ್ಪುರ್ ಜಿಲ್ಲೆಗಳಲ್ಲಿ ಜನಪ್ರಿಯ ಜಾನಪದ ಕುಣಿತವಾಗಿದೆ. ರಾಜ್ವಾಡೆ, ಯಾದವ್, ನಾಯಕ್, ಮಾಣಿಕ್ಪುರಿ ಸಮುದಾಯಗಳ ಸದಸ್ಯರು ಈ ನೃತ್ಯವನ್ನು ಪ್ರದರ್ಶಿಸುತ್ತಾರೆ. “ಛತ್ತೀಸಗಢ ಮತ್ತು ಒಡಿಶಾದ ಉಳಿದ ಭಾಗಗಳಲ್ಲಿ ಛೆರ್ಛೇರಾ ಎಂದೂ ಕರೆಯಲ್ಪಡುವ ಈ ನೃತ್ಯವನ್ನು ನಾವು ಶೇಟ್ ಹಬ್ಬದ ದಿನದಿಂದ ಆರಂಭಿಸುತ್ತೇವೆ” ಎಂದು ಸುರ್ಗುಜಾ ಜಿಲ್ಲೆಯ ಲಹಪಾತ್ರ ಗ್ರಾಮದ ಕೃಷ್ಣ ಕುಮಾರ್ ರಾಜ್ವಾಡೆ ಹೇಳುತ್ತಾರೆ.
ಛತ್ತೀಸಗಢದ ರಾಜಧಾನಿ ರಾಯ್ಪುರದಲ್ಲಿ ನಡೆಯುತ್ತಿದ್ದ ಸರ್ಕಾರಿ ಪ್ರಾಯೋಜಿತ ಕರಕುಶಲ ಉತ್ಸವದಲ್ಲಿ ಪ್ರದರ್ಶನ ನೀಡಲು 15 ಜನ ಶೈಲ ನೃತ್ಯ ನೃತ್ಯಗಾರರ ಗುಂಪೊಂದು ಬಂದಿತ್ತು. ಅವರಲ್ಲಿ ಕೃಷ್ಣ ಕುಮಾರ್ ಕೂಡ ಒಬ್ಬರು.
ಈ ನೃತ್ಯವು ವರ್ಣರಂಜಿತವಾಗಿದ್ದ, ನರ್ತಕರು ಗಾಢ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ, ಅಲಂಕರಿಸಿದ ಪೇಟಗಳನ್ನು ಧರಿಸುತ್ತಾರೆ ಮತ್ತು ಕೈಯಲ್ಲಿ ಕೋಲುಗಳನ್ನು ಹಿಡಿದಿರುತ್ತಾರೆ. ಈ ನೃತ್ಯದಲ್ಲಿ ಬಳಸುವ ಸಂಗೀತ ವಾದ್ಯಗಳೆಂದರೆ ಕೊಳಲು, ಮಂದರ್, ಮಹುರಿ ಮತ್ತು ಝಾಲ್.
ಈ ಪ್ರಕಾರದಲ್ಲಿ ಕೇವಲ ಗಂಡಸರು ಮಾತ್ರವೇ ನರ್ತಿಸುತ್ತಾರೆ ಮತ್ತು ಅವರಲ್ಲಿ ಕೆಲವರು ತಮ್ಮ ಉಡುಪುಗಳಿಗೆ ನವಿಲುಗರಿಗಳನ್ನು ಸಿಕ್ಕಿಸಿಕೊಂಡಿರುತ್ತಾರೆ. ಇದು ನವಿಲು ಹಿಂಡು ಕುಣಿಯುತ್ತಿರುವ ಭಾವವನ್ನು ನೋಡುಗರಲ್ಲಿ ಹುಟ್ಟಿಸುತ್ತದೆ.
ಛತ್ತೀಸಗಢವು ಆದಿವಾಸಿಗಳೇ ಪ್ರಧಾನವಾಗಿರುವ ರಾಜ್ಯವಾಗಿದ್ದು, ಇಲ್ಲಿನ ಜನರು ಬಹುತೇಕ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಈ ಸಂಗತಿಗಳು ಈ ಪ್ರದೇಶದ ಸಂಗೀತ ಮತ್ತು ಕುಣಿತಗಳಲ್ಲಿ ಪ್ರತಿಫಲಿಸುತ್ತವೆ. ಕೊಯ್ಲು ಮುಗಿದ ನಂತರ ಇಲ್ಲಿನ ಜನರು ಹಳ್ಳಿಗಳಲ್ಲಿ ನೃತ್ಯವನ್ನು ಆನಂದಿಸುತ್ತಾರೆ ಮತ್ತು ಊರಿಂದೂರಿಗೆ ಹೋಗಿ ಪ್ರದರ್ಶನಗಳನ್ನು ನೀಡುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು