ಅದು ಪುರಾತನವಷ್ಠೇ ಅಲ್ಲ, ಹೊಸದೂ ಹೌದು. ಪ್ರಾಚೀನವಷ್ಟೇ ಅಲ್ಲ, ಸಮಕಾಲೀನವೂ ಸಹ. ಬಹಳ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ವರ್ತಮಾನದಲ್ಲಿ ಅದರ ಪ್ರಸ್ತುತತೆಯು ಕಂಡುಬರುತ್ತದೆ. ಪುದು ಮಂಡಪಂ, ಮಧುರೈನ ಚಿಕ್ಕ ಪ್ರತಿರೂಪದಂತಿದೆ. 384 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ನಿರ್ಮಿತಿಯಲ್ಲಿ ಅಂಗಡಿಗಳ ಸಮುಚ್ಚಯವಿದ್ದು, ಇಲ್ಲಿ ಆ ಪ್ರಾಚೀನ ಪಟ್ಟಣದ ವೈಶಿಷ್ಟ್ಯವು ಅದರ ಬೇರೆ ಯಾವುದೇ ಭಾಗವು ಒಳಗೊಂಡಿರದ ರೀತಿಯಲ್ಲಿ ಸಮ್ಮಿಳಿತಗೊಂಡಿದೆ. ಪ್ರಕಾಶಮಾನವಾದ, ಹೊಳೆಯುವ ಬಟ್ಟೆಯ ಮೇಲೆ ಕೆಲಸ ಮಾಡುವ ಉಡುಪುಗಳ ತಯಾರಕರಿಂದ ಮೊದಲ್ಗೊಂಡು, ಪಾರಂಪರಿಕ ಪಾತ್ರೆಗಳನ್ನು ಮಾರಾಟ ಮಾಡುವ ಅಂಗಡಿಗಳವರೆಗೆ, ಈ ಸ್ಥಳವು ಅನೇಕ ಛಾಯೆಗಳನ್ನು ಹೊಂದಿದೆ.
ತಮಿಳುನಾಡಿನ ಪ್ರಮುಖ ಹಿಂದೂ ದೇವಾಲಯದ ಉತ್ಸವಗಳಲ್ಲಿ ಒಂದೆಂದು ಪರಿಗಣಿಸಲಾಗುವ ಈ ಉತ್ಸವಕ್ಕೆ ಬರುವ ಭಕ್ತರಿಗೆ ಬಟ್ಟೆಗಳನ್ನು ಹೊಲಿಯುವುದು ಇಲ್ಲಿಯೇ. ಉಡುಪುಗಳ 150 ತಯಾರಕರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಮುಸ್ಲಿಮರು. ಅವರು ರಚಿಸುವ ಆ ವೇಷಭೂಷಣಗಳನ್ನು ಧರಿಸುವ ಭಕ್ತರು ಹೆಚ್ಚಾಗಿ ಮಧುರೈ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಹಿಂದೂಗಳು.
ಉಡುಪುಗಳ ತಯಾರಕರು ಮುಸ್ಲಿಮರು; ಹಿಂದೂ ಹಬ್ಬಕ್ಕೆ ವೇಷಭೂಷಣಗಳನ್ನು ಹೊಲಿಯುತ್ತಾರೆಯೇ ಎಂದು ಕೇಳಿದಾಗ ಅವರು ಈ ಮಾತಿನ ವರಸೆಯನ್ನು ತಿರಸ್ಕರಿಸುತ್ತಾರೆ. "ಇದು ಉತ್ತರ ಭಾರತವಲ್ಲ ಮೇಡಂ, "ನಾವು ತಲೆಮಾರುಗಳಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಮತ್ತು ಪರಸ್ಪರ ಸಂಬಂಧಿಕರಂತೆ ಸಂಬೋಧಿಸುತ್ತೇವೆ. ಇಲ್ಲಿ ಏನಾದರೂ ತಪ್ಪಾಗಲು ಹೇಗೆ ಸಾಧ್ಯ?” ಎನ್ನುತ್ತಾರೆ ಅಮೀರ್ ಜಾನ್.
"ಇದರಲ್ಲಿ ಆಶ್ಚರ್ಯಪಡಲು ಏನಿದೆ? ನಾವು ತಲೆಮಾರುಗಳಿಂದ ಇದರಲ್ಲಿ ತೊಡಗಿದ್ದೇವೆ" ಎನ್ನುತ್ತಾರೆ ಪುದು ಮಂಡಪಂನ ಮತ್ತೊಬ್ಬ ಉಡುಪುಗಳ ತಯಾರಕ, 42 ವರ್ಷದ ಮುಬಾರಕ್ ಅಲಿ
ತಮಿಳಿನಲ್ಲಿ ದೇವಾಲಯದ ಮುಖಮಂಟಪ ಎಂಬ ಅರ್ಥವನ್ನು ನೀಡುವ 'ಮಂಡಪಂ' ಎಂಬ ಪದವನ್ನು ಸಾಮಾನ್ಯವಾಗಿ, ಮದುವೆ ಸಭಾಂಗಣಗಳಿಗೆ ಅಥವಾ ಕಂಬಗಳನ್ನು ಒಳಗೊಂಡಿದ್ದು, ಸಾಮಾಜಿಕ-ಸಾಂಸ್ಕೃತಿಕ ಅಥವಾ ಧಾರ್ಮಿಕ ಚಟುವಟಿಕೆಗಳಿಗೆ ಬಳಸುವ ನಿರ್ಮಾಣಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಇದು ಮಧುರೈನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಮೀನಾಕ್ಷಿ ಅಮ್ಮನ್ ದೇವಾಲಯದ ಪೂರ್ವ ಗೋಪುರಕ್ಕೆ ಎದುರಿನಲ್ಲಿದೆ.
ಸುಮಾರು ನಾಲ್ಕು ಶತಮಾನಗಳಷ್ಟು ಹಳೆಯದಾದ ಈ ನಿರ್ಮಾಣದ ಹೆಸರು, 'ಪುಧು' (ಅಂದರೆ, ತಮಿಳಿನಲ್ಲಿ 'ಹೊಸದು' ಎಂಬ ಅರ್ಥ) ಎಂಬ ಪದವನ್ನು ಒಳಗೊಂಡಿರುವುದು ವಿಚಿತ್ರವೆನಿಸಬಹುದು. ಆದರೆ 1635ರಲ್ಲಿ ಮಧುರೈನ ಆಗಿನ ರಾಜ ತಿರುಮಲೈ ನಾಯಕ್ಕರ್ ವಸಂತದ ಹಬ್ಬಗಳನ್ನು ಆಚರಿಸಲು ಇದನ್ನು ನಿರ್ಮಿಸಿದಾಗ ಇದು ಖಂಡಿತವಾಗಿಯೂ ಹೊಸದೆನಿಸಿತ್ತು.
ಅದರ ಧಾರ್ಮಿಕ-ಸಾಂಸ್ಕೃತಿಕ ಗುಣಲಕ್ಷಣವು ಎರಡು ಸಹಸ್ರಮಾನಗಳ ಹಿಂದಿನ ಗಹನವಾದ ರಾಜಕೀಯ ಪರಿಸ್ಥಿತಿಯೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ, ಅದರ ಹೆಚ್ಚಿನ ಅವಧಿಯಲ್ಲಿ, ಮಧುರೈನ ನಿಯಂತ್ರಣವೆಂದರೆ, ತಮಿಳು ಭೂಮಿಯ ನಿಯಂತ್ರಣ ಎಂಬುದಾಗಿತ್ತು. ತೀರ ಇತ್ತೀಚೆಗೆ - ಕಳೆದ ವಾರವಷ್ಟೇ - ಮಧುರೈ ಲೋಕಸಭಾ ಕ್ಷೇತ್ರದ ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ವಿ.ವಿ.ಆರ್ ರಾಜ್ ಸತ್ಯನ್ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ)ಸಿ ಸು. ವೆಂಕಟೇಶನ್ ಅವರ ನಡುವಿನ ಹೋರಾಟದಲ್ಲಿ 'ರಾಜಕಾರಣ'ವನ್ನು ಕಾಣಬಹುದಿತ್ತು. ಮಧುರೈ ಸ್ಥಾನವನ್ನು ಅದರ ಎಲ್ಲಾ ಧಾರ್ಮಿಕ ಮಹತ್ವದ ಹೊರತಾಗಿಯೂ, ಎಡಪಂಥೀಯರು ಮೂರು ಬಾರಿ ಗೆದ್ದಿದ್ದಾರೆ.
ಇಂದು, ಏಪ್ರಿಲ್ 22. ʼಅಳಗರ್ ಉತ್ಸವʼವೆಂದು ಕರೆಯಲ್ಪಡುವ ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯ ದಿನ. ಇಲ್ಲಿ, ಉಡುಪುಗಳ ತಯಾರಕರು ಪ್ರಮುಖ ಪಾತ್ರ ವಹಿಸುತ್ತಾರೆ - ಏಪ್ರಿಲ್ 18ರಂದು ಮತದಾನ ಮುಗಿದ ಕೇವಲ 100 ಗಂಟೆಗಳ ನಂತರ.
ಕಲ್ಲಳಗರ್ ಎಂಬ ಪದದ ಸಂಕ್ಷಿಪ್ತ ರೂಪವಾದ ಅಳಗರ್, ಮಧುರೈ ನಗರದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ಮೇಲೂರ್ ವಲಯದಲ್ಲಿರುವ ಅದೇ ಹೆಸರಿನ ಚಿಕ್ಕ ಹಳ್ಳಿಯಲ್ಲಿರುವ ಅಳಗರ್ ಕೋವಿಲ್ನ (ದೇವಾಲಯ) ಪ್ರಧಾನ ದೇವರು. ಜನಪ್ರಿಯ ಸಂಸ್ಕೃತಿಯಲ್ಲಿ, ಅಳಗರ್ ತನ್ನ ಸಹೋದರಿ ಮೀನಾಕ್ಷಿಯ ಮದುವೆಯಲ್ಲಿ ಪಾಲ್ಗೊಳ್ಳಲು ವೈಗೈ ನದಿಯನ್ನು ದಾಟಿದನೆಂದು ನಂಬಲಾಗಿದೆ, ಆದರೆ ಮದುವೆ ಈಗಾಗಲೇ ನಡೆದಿದೆ ಎಂದು ತಿಳಿದಾಗ ಇದ್ದಕ್ಕಿದ್ದಂತೆ, ಸ್ವಲ್ಪಮಟ್ಟಿನ ಕೋಪದಿಂದ ಹಿಂದಿರುಗುತ್ತಾನೆ.
ಈ ವರ್ಷ ಏಪ್ರಿಲ್ 8ರಂದು ಪ್ರಾರಂಭವಾದ ಮೀನಾಕ್ಷಿ ದೇವಸ್ಥಾನದ ಉತ್ಸವವು ಸುಮಾರು 12 ದಿನಗಳವರೆಗೆ ನಡೆಯಿತು. ಈ ವರ್ಷ ಏಪ್ರಿಲ್ 14ರಂದು ಪ್ರಾರಂಭಗೊಂಡ ಒಂಬತ್ತು ದಿನಗಳ ಅಳಗರ್ ಹಬ್ಬವು ಇಂದು, ಏಪ್ರಿಲ್ 22ರಂದು ಕೊನೆಗೊಳ್ಳುತ್ತದೆ. ಬಹುತೇಕ ಏಕಕಾಲದಲ್ಲಿ ನಡೆಯುವ ಎರಡು ಹಬ್ಬಗಳನ್ನು ಚಿತಿರೈ ತಿರುವಿಳ ಎಂದು ಕರೆಯಲಾಗುತ್ತದೆ. ಮೊದಲನೆಯದು ಮೀನಾಕ್ಷಿ ತಿರು ಕಲ್ಯಾಣಂ (ಮೀನಾಕ್ಷಿಯ ಸ್ವರ್ಗೀಯ ವಿವಾಹ) ಮತ್ತು ತೇರೋಟ್ಟಂ ರಥದ ಓಟ)ನೊಂದಿಗೆ ಮುಕ್ತಾಯಗೊಳ್ಳುತ್ತದೆ.
ಪುದು ಮಂಡಪಂ, 333 ಅಡಿ ಉದ್ದ ಮತ್ತು 25 ಅಡಿ ಅಗಲವಿದ್ದು, 125 ಕಂಬಗಳನ್ನು ಹೊಂದಿದೆ, ಪ್ರತಿಯೊಂದೂ ನಾಯಕ್ ರಾಜರು ಮತ್ತು ದೇವತೆಗಳ ಮೂರ್ತಿಗಳನ್ನು ಒಳಗೊಂಡಿದೆ. ಇದು ಹೊಂದಿರುವ ಅಂಗಡಿ ಮಳಿಗೆಗಳು ಬಹುಶಃ ತಮಿಳುನಾಡಿನಲ್ಲಿ ಅತ್ಯಂತ ಹಳೆಯವುಗಳಲ್ಲಿ ಕೆಲವು. ಪುಸ್ತಕಗಳು, ಪಾತ್ರೆಗಳು, ಬಟ್ಟೆಗಳು, ಬಳೆಗಳು, ಕಡಿಮೆ ಬೆಲೆಯ ಆಭರಣಗಳು, ಆಟಿಕೆ ಮುಂತಾದುವನ್ನು ಮಾರಾಟ ಮಾಡುವ 300 ಅಂಗಡಿಗಳಿವೆ. “ನನಗೆ ತಿಳಿದಂತೆ, ಈ ಅಂಗಡಿಗಳು ಕನಿಷ್ಠ ಎರಡು ಶತಮಾನಗಳಿಂದ ಪುದು ಮಂಡಪಂನಲ್ಲಿ ನೆಲೆಗೊಂಡಿರಬೇಕು. "ನಮಗೆ ತಿಳಿದಿರುವಂತೆ, ಉಳಿದಿರುವ ಅತ್ಯಂತ ಹಳೆಯದಾದ ಸಿಕ್ಕಂದರ್ ಕಬ್ಬಿಣದ ಪಾತ್ರೆಗಳ ಅಂಗಡಿಯು, ಕನಿಷ್ಠ 150 ವರ್ಷಗಳಷ್ಟು ಹಳೆಯದು" ಎಂದು ಮಧುರೈ ಪುದು ಮಂಡಪಂ ವ್ಯಾಪಾರಿಗಳು ಮತ್ತು ಉಡುಪುಗಳ ತಯಾರಕರ ಸಂಘದ ಅಧ್ಯಕ್ಷ ಹಾಗೂ ಸ್ವತಃ ಉಡುಪುಗಳ ತಯಾರಕರಾದ, ಜಿ. ಮುತ್ತು ಪಾಂಡಿ ಹೇಳುತ್ತಾರೆ.
ಪ್ರತಿ ವರ್ಷ ಚಿತ್ತಿರೈ ಎಂಬ ತಮಿಳು ತಿಂಗಳಿನಲ್ಲಿ - ಏಪ್ರಿಲ್ 15ರಿಂದ ಮೇ 15ರವರೆಗೆ - ದರ್ಜಿಗಳು-ಉಡುಪುಗಳ ತಯಾರಕರು ಇತರ ಅಂಗಡಿಯವರಿಗಿಂತ ಹೆಚ್ಚು ಕಾರ್ಯಮಗ್ನರಾಗುತ್ತಾರೆ. ಈ ಅವಧಿಯಲ್ಲಿ ಅವರು ದೇವಾಲಯದ ಉತ್ಸವದ ಭಾಗವಾಗಿ ಅಳಗರ್‌ನಂತೆ ತಮ್ಮನ್ನು ಅಲಂಕರಿಸಿಕೊಳ್ಳುವ ನೂರಾರು ಭಕ್ತರಿಗೆ ವೇಷಭೂಷಣಗಳನ್ನು ಹೊಲಿಯುತ್ತಾರೆ. ಹಿಂದೂ ಭಕ್ತರಿಗಾಗಿ ಎದ್ದುಕಾಣುವ ಬಣ್ಣದ ಬಟ್ಟೆಯನ್ನು ಕತ್ತರಿಸಿ ಹೊಲಿಯುವವರಲ್ಲಿ ಅಮೀರ್ ಜಾನ್ ಸಹ ಒಬ್ಬರು. ಅವರು ಈ ವ್ಯಾಪಾರದಲ್ಲಿ ತಮ್ಮ ಕುಟುಂಬದ ಮೂರನೇ ತಲೆಮಾರಿನ ಮುಸ್ಲಿಂ ದರ್ಜಿ. ಭಕ್ತರು ತಮ್ಮ ಪಾತ್ರ ಮತ್ತು ಪ್ರಾರ್ಥನೆಗಳಿಗೆ ಅನುಗುಣವಾಗಿ ಧರಿಸುವ ಬಟ್ಟೆಗಳನ್ನು ತಾಳ್ಮೆಯಿಂದ ನಮಗೆ ತೋರಿಸುವಾಗಲೂ, ಅವರು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಅವರ ನಿಪುಣ ಬೆರಳುಗಳು ಜಟಿಲವಾದ ಸೂಜಿಯ ಕೆಲಸವನ್ನು ಮಗುವಿನ ಆಟದ ರೀತಿಯಲ್ಲಿ ಸುಲಭವಾಗಿ ನಿಭಾಯಿಸುತ್ತವೆ. "ನಾವು ಸುಮಾರು 60 ವರ್ಷಗಳಿಂದ ಈ ಅಂಗಡಿಯನ್ನು ಹೊಂದಿದ್ದು, ನನ್ನ ತಂದೆ ಶೇಖ್ ನವಾಬ್ ಜಾನ್ ಅವರಿಂದ ಈ ವ್ಯಾಪಾರವನ್ನು ಕಲಿತಿದ್ದೇನೆ" ಎಂದರವರು.
ತಾವು ಆಯ್ಕೆ ಮಾಡುವ ಪಾತ್ರಕ್ಕೆ ಅನುಗುಣವಾಗಿ, ಭಕ್ತರಿಗೆ ಸಲ್ಲಡಂ (ಷರಾಯಿಗಳು), ಕಚೈ (ಸೊಂಟದ ಸುತ್ತಲೂ ಕಟ್ಟುವ ಬಟ್ಟೆ), ಮಾರಡಿ ಮಾಲೈ (ಮಾಲೆಗಳು), ಉರುಮ (ತಲೆಗೆ ಕಟ್ಟುವ ಕವಚ) ಅಥವಾ ಸಾತ್ತೈ (ಚಾವಟಿ) ಅಗತ್ಯವಿರುತ್ತದೆ. ಅವರಲ್ಲಿ ಕೆಲವರು ಥೋಪರೈ (ದ್ರವವು ನಿಯಂತ್ರಿತ ರೀತಿಯಲ್ಲಿ ಸುರಿಯಲು ಅನುವುಮಾಡಿಕೊಡುವ ರಂಧ್ರವಿರುವ ಬಟ್ಟೆಯಿಂದ ಮಾಡಿದ ನೀರಿನ ಕ್ಯಾನ್) ಅಥವಾ ಬಟ್ಟೆಯ ತುಂಡುಗಳಿಂದ ಮಾಡಿದ 'ಪಂಜು'ಗಳನ್ನು ಖರೀದಿಸಬಹುದು.
ತಮಿಳುನಾಡಿನ ತಿರುನಲ್ವೇಲಿಯಲ್ಲಿರುವ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ ತಮಿಳು ವಿಭಾಗದ ಮಾಜಿ ಮುಖ್ಯಸ್ಥರಾದ ಪ್ರೊಫೆಸರ್ ಥೋ ಪರಮಶಿವನ್ ಅವರ 1989ರ ಪುಸ್ತಕ ಅಳಗರ್ ಕೋವಿಲ್ ಪ್ರಕಾರ, ಭಕ್ತರು ಹಬ್ಬದ ಸಮಯದಲ್ಲಿ ನಾಲ್ಕು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾರೆ: ತಿರಿಯೆದುತಾಡುವೋರ್ (ಬೆಂಕಿಯನ್ನು ಹೊತ್ತುಕೊಂಡು ನೃತ್ಯ ಮಾಡುವವರು), ತಿರಿಯಿಂದ್ರಿ ಆಡುವೋರ್ (ಬೆಂಕಿಯಿಲ್ಲದೆ ನೃತ್ಯ ಮಾಡುವವರು), ಸಾತ್ತೈ ಅಡಿತಾಡುವೋರ್ (ನೃತ್ಯದ ಸಮಯದಲ್ಲಿ ತಮ್ಮನ್ನು ತಾವು ಚಾವಟಿಯಿಂದ ಹೊಡೆದುಕೊಳ್ಳುವವರು) ಮತ್ತು ತಿರುಥಿ ನೀರ್ ತೆಲಿಪ್ಪೋರ್ (ದೇವರು ಮತ್ತು ಭಕ್ತರ ಮೇಲೆ ನೀರು ಸಿಂಪಡಿಸುವವರು).
'ಅವರು [ಮುಸ್ಲಿಂ ಉಡುಪು ತಯಾರಕರು] ನಮ್ಮ ಭಾಗವಿದ್ದಂತೆ. ನಾವು ಸಂಬಂಧಿಕರಂತಿದ್ದು, ಒಬ್ಬರನ್ನೊಬ್ಬರು ಹಾಗೆ ಕರೆಯುತ್ತೇವೆ. ಪರಸ್ಪರರನ್ನು ಬೆಂಬಲಿಸುತ್ತೇವಲ್ಲದೆ, ರಕ್ಷಿಸುತ್ತೇವೆ'
ಮೊದಲ ಮೂರು ಗುಂಪುಗಳು ಸಾಮಾನ್ಯವಾಗಿ ಕೆಂಪು ಷರಾಯಿ ಧರಿಸುತ್ತಾರೆ, ಬೆಂಕಿಯೊಂದಿಗೆ ನೃತ್ಯ ಮಾಡುವವರು ಸಹ ಕೆಂಪು ಶಿರವಸ್ತ್ರವನ್ನು ಧರಿಸುತ್ತಾರೆ. ನೀರು ಸಿಂಪಡಿಸುವವರು ಅಥವಾ ವಿತರಿಸುವವರು ಯೋಧರಂತೆ ಉಡುಪು ಧರಿಸಿ, ಉರುಮಾ ಮತ್ತು ಮಾರಡಿ ಮಾಲೈ ಧರಿಸುತ್ತಾರೆ. ದಲಿತ ಸಮುದಾಯಗಳೂ ಸೇರಿದಂತೆ ಎಲ್ಲಾ ಜಾತಿಗಳ ಜನರು ಅಂತಹ ಆಚಾರಗಳಲ್ಲಿ ಭಾಗವಹಿಸುತ್ತಾರೆಂಬುದನ್ನು ಪರಮಶಿವನ್ ಗಮನಿಸುತ್ತಾರೆ. ಅನೇಕ ಬಾರಿ ಅವರಿಗೆ ಆಚಾರಗಳ ಪೂರ್ವವರ್ತಿಗಳ ಬಗ್ಗೆ ತಿಳಿದಿರುವುದಿಲ್ಲ. "ಅವರಲ್ಲಿ ಹೆಚ್ಚಿನವರು ಹರಕೆಯನ್ನು ತೀರಿಸಲು ಮತ್ತು ಪಾರಂಪರಿಕವಾಗಿ ಅದನ್ನು ಮಾಡುತ್ತಿದ್ದಾರೆ" ಎಂದು ಅವರು ಗಮನಿಸುತ್ತಾರೆ. ಮಹಿಳೆಯರು ಅಂತಹ ಪಾತ್ರಗಳನ್ನು ನಿರ್ವಹಿಸುವುದು ವಿರಳ. ಅವರು ಹಾಗೆ ಮಾಡುವುದರ ಕುರಿತು ಯಾವುದೇ ನಿಷೇಧವಿಲ್ಲ. ಮೀನಾಕ್ಷಿ ಹಬ್ಬವನ್ನು ಮಧುರೈ ನಗರ ಪ್ರದೇಶದ ಜನರು ಹಾಗೂ ಅಳಗರ್ ಕಾರ್ಯಕ್ರಮವನ್ನು ಗ್ರಾಮೀಣ ಜನರು ಹೆಚ್ಚಾಗಿ ಆಚರಿಸುತ್ತಾರೆ ಎಂಬುದನ್ನು ಸಹ ಪರಮಶಿವನ್ ಅವರು ಗಮನಿಸುತ್ತಾರೆ.
ತಮ್ಮ ಅನೇಕ ಪ್ರತಿಸ್ಥಾನಿಕರಿಗಿಂತ ಭಿನ್ನವಾಗಿ, 53 ವರ್ಷದ ಅಬು ಬಕರ್ ಸಿದ್ದಿಕಿ, 2007ರಲ್ಲಿ ಅಳಗರ್ ಪ್ರಪಂಚಕ್ಕೆ ಕಾಲಿಟ್ಟರು. "ನಾನು ಮೂಲತಃ ಪುದು ಮಂಡಪಂನಲ್ಲಿ ಫ್ಯಾನ್ಸಿ ಅಂಗಡಿಯನ್ನು [ವಿವಿಧ ಸಣ್ಣ ವಸ್ತುಗಳನ್ನು ಮಾರುವ] ಹೊಂದಿದ್ದೆ, ಆದರೆ ಇದು ನನ್ನನ್ನು ಆಕರ್ಷಿಸಿತು. ಇದು ಕೇವಲ ಮಧುರೈಗೆ ಸೀಮಿತವಾಗಿಲ್ಲ. "ಪುದು ಮಂಡಪಂನ ಉಡುಪುಗಳ ತಯಾರಕರು ರಾಜ್ಯದಾದ್ಯಂತ ಯಾವುದೇ ದೇವಾಲಯ ಉತ್ಸವದಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ವೇಷಭೂಷಣಗಳನ್ನು ತಯಾರಿಸುತ್ತಾರೆ."
ಅವರಲ್ಲಿ ಶೇಖ್ ದಾವೂದ್ (59) ಕೂಡ ಒಬ್ಬರಾಗಿದ್ದು, ಕೇವಲ 13 ವರ್ಷದವರಾಗಿದ್ದಾಗ ಅಳಗರ್‌ಗೆ ಬಟ್ಟೆಗಳನ್ನು ತಯಾರಿಸಲು ಪ್ರಾರಂಭಿಸಿದರು. "ನಾನು ಶಿವರಾತ್ರಿ, ಕಂದಸಾಮಿ ದೇವಾಲಯ ಉತ್ಸವ ಮತ್ತು ಇತರವುಗಳಿಗೆ ಬಟ್ಟೆಗಳನ್ನು ಹೊಲಿಯುತ್ತೇನೆ" ಎನ್ನುತ್ತಾರವರು.
ಸಾಮಾನ್ಯವಾಗಿ, ಅಳಗರ್ ವೈಗೈ ನದಿಯನ್ನು ಪ್ರವೇಶಿಸುವ ಮತ್ತು ದಾಟುವ ಆಚರಣೆಯನ್ನು ವೀಕ್ಷಿಸಲು ಒಂದೇ ದಿನ ಲಕ್ಷಾಂತರ ಜನರು ಸೇರುತ್ತಾರೆ. ಆ ಘಟನೆಯ ಆಚರಣೆಯು ಅಳಗರ್ ಹಬ್ಬದ ಪ್ರಮುಖ ಅಂಶವೆನಿಸಿದೆ. ಅಂದು, ಭಕ್ತರು ವಿವಿಧ ಪಾತ್ರಗಳನ್ನು ಧರಿಸಿ ಮೆರವಣಿಗೆ ನಡೆಸುತ್ತಾರೆ.
ಖರೀದಿದಾರರ ಅವಶ್ಯಕತೆಗೆ ಅನುಗುಣವಾಗಿ ಅಳಗರ್ ಉಡುಗೆಯ ಸೆಟ್ನ ಬೆಲೆಯು ರೂ. 750ರಿಂದ ರೂ. 1,500ರವರೆಗೆ ಇರಬಹುದು. ಕೆಲವೊಮ್ಮೆ, ಗ್ರಾಹಕರು ಅಳಗರ್ ಕೋವಿಲ್‌ನ ರಕ್ಷಕ ದೇವರು, ಕರುಪ್ಪಸ್ವಾಮಿಗೆ ಅರ್ಪಿಸಲು ಕುಡಗೋಲುಗಳನ್ನು ಸಹ ಖರೀದಿಸುತ್ತಾರೆ. ಉಡುಗೆಯ ತಯಾರಕರು ಒಂದು ದಿನದಲ್ಲಿ ಸರಾಸರಿ ಎರಡು ಅಥವಾ ಹೆಚ್ಚೆಂದರೆ, ಮೂರು ವೇಷಭೂಷಣಗಳನ್ನು ತಯಾರಿಸಬಹುದು. ಆದಾಗ್ಯೂ, ಹಬ್ಬದ ಅವಧಿಯಲ್ಲಿ ಯಾವುದೇ ದಿನದಂದು, ಅವರು ಮಾಡಿದ ನಿರ್ದಿಷ್ಟ ಉಡುಪುಗಳಿಗೆ ಅನುಸಾರವಾಗಿ ಮತ್ತು ತಮ್ಮ ಸಹಾಯಕರಿಗೆ ಹಣವನ್ನು ಪಾವತಿಸಿದ ನಂತರ ಅವರ ಗಳಿಕೆಯು ರೂ. 500-600ಕ್ಕಿಂತ ಕಡಿಮೆಯಿರುವುದಿಲ್ಲ.
ಮುಸ್ಲಿಂ ಎಂದು ತಿಳಿದ ನಂತರ, "ನನಗೆ ಹೆಚ್ಚಿನ ಹಣವನ್ನು ನೀಡಿ, ತಾವು ಇಲ್ಲಿ ವಸ್ತುಗಳನ್ನು ಖರೀದಿಸಲು ಅದೃಷ್ಟವಂತರು” ಎಂಬುದಾಗಿ ತಿಳಿಸುವ ಕೆಲವು ಗ್ರಾಹಕರಿದ್ದಾರೆ ಎನ್ನುತ್ತಾರೆ ಸಿದ್ಧಿಕಿ.
ಮಧುರೈ ಪುದು ಮಂಡಪಂನಲ್ಲಿನ 150 ವಸ್ತ್ರ ತಯಾರಕರಲ್ಲಿ ಕನಿಷ್ಠ 60 ಜನರು ಮುಸ್ಲಿಮರು ಎಂದು ಮಧುರೈ ಪುದು ಮಂಟಪದ ವ್ಯಾಪಾರಿಗಳು ಮತ್ತು ಉಡುಪುಗಳ ತಯಾರಕರ ಸಂಘದ ಅಧ್ಯಕ್ಷ, ಜಿ. ಮುತ್ತು ಪಾಂಡಿ ಅಂದಾಜಿಸಿದ್ದಾರೆ. "ಅವರಿಗೆ ಯಾವುದೇ ಹಾನಿ" ಮಾಡುವುದನ್ನು ಊಹಿಸಲೂ ಸಾಧ್ಯವಿಲ್ಲ. ಅವರು ನಮ್ಮ ಭಾಗವಿದ್ದಂತೆ. ನಾವು ಸಂಬಂಧಿಕರಂತಿದ್ದು, ಹಾಗೆಯೇ ಕರೆಯುತ್ತೇವೆ. ಪರಸ್ಪರನ್ನು ಬೆಂಬಲಿಸಿ, ರಕ್ಷಿಸುತ್ತೇವೆ. ಇದು ದೇಶದ ಬೇರೆಡೆಗಳಲ್ಲಿ ವಿಭಿನ್ನವಾಗಿರಬಹುದು, ಆದರೆ ಮಧುರೈನಲ್ಲಿ ನೀವು ನಮ್ಮನ್ನು ಪರಸ್ಪರರ ತೋಳುಗಳಲ್ಲಿ ಮಾತ್ರ ಕಾಣಬಹುದು, ಶತ್ರುಗಳಾಗಿ ಅಲ್ಲ" ಎನ್ನುತ್ತಾರವರು.
ಬಹುಶಃ ಫೆಬ್ರವರಿ 2018ರಲ್ಲಿ ಮೀನಾಕ್ಷಿ ದೇವಸ್ಥಾನದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಪುದು ಮಂಡಪಂ ಅನ್ನು ಆರು ತಿಂಗಳ ಕಾಲ ಮುಚ್ಚಿದಾಗ ಹೊರತುಪಡಿಸಿ. ಉಡುಪುಗಳ ತಯಾರಕರು ತಮ್ಮ ವ್ಯಾಪಾರವು ಎಂದಿಗೂ ಯಾವುದೇ ತೊಂದರೆಯನ್ನು ಕಂಡಿಲ್ಲವೆಂಬುದನ್ನು ಒಪ್ಪುತ್ತಾರೆ. ನಂತರ ಅದನ್ನು ಮತ್ತೆ ತೆರೆಯಲಾಯಿತು, ಆದರೆ ಅಧಿಕಾರಿಗಳು ಅಂಗಡಿಗಳನ್ನು ಅವುಗಳ ಪ್ರಸ್ತುತ, ಹೆಚ್ಚು ಜನದಟ್ಟಣೆಯ ಸ್ಥಳದಿಂದ ಸ್ಥಳಾಂತರಿಸಲು ಯೋಜಿಸಿದ್ದಾರೆ, ಇದನ್ನು ನವೀಕರಿಸಿ, ಪಾರಂಪರಿಕ ತಾಣವಾಗಿ ಸಂರಕ್ಷಿಸಲಾಗುತ್ತದೆ. "ನಾವು ಕೂಡ ಪುದು ಮಂಡಪಂನ ಐತಿಹಾಸಿಕ ಮಹತ್ವವನ್ನು ಅರ್ಥೈಸಿಕೊಂಡಿದ್ದು, ಅದನ್ನು ಸಂರಕ್ಷಿಸಲು ಬಯಸುತ್ತೇವೆ. ಆಡಳಿತವು ಕೇವಲ ಎರಡು ಕಟ್ಟಡಗಳ ದೂರದಲ್ಲಿರುವ ಕುನ್ನತೂರ್ ಛತ್ರಂನಲ್ಲಿ ನಮಗೆ ಸ್ಥಳಾವಕಾಶದ ಭರವಸೆ ನೀಡಿದೆ. ಅದು ಸಿದ್ಧವಾದಾಗ, ನಾವು ಸ್ಥಳಾಂತರಗೊಳ್ಳುತ್ತೇವೆ" ಎನ್ನುತ್ತಾರೆ ಸಿದ್ದಿಕಿ. ಸ್ಥಳಾಂತರವು ತಮ್ಮ ವ್ಯವಹಾರಗಳಿಗೆ ಹಾನಿ ಮಾಡುವುದಿಲ್ಲವೆಂಬ ವಿಶ್ವಾಸ ಅವರಿಗಿದೆ.
"ಇದು ಬಹುಶಃ ಎಂದಿಗೂ ನಷ್ಟವನ್ನು ಅನುಭವಿಸದ ವ್ಯಾಪಾರವಾಗಿದೆ" ಎನ್ನುತ್ತಾರೆ ಸಿದ್ದಿಕಿ. "ಹೆಚ್ಚುತ್ತಿರುವ ಜನದಟ್ಟಣೆಯ ಜಗತ್ತಿನಲ್ಲಿ, ಚಿತ್ತಿರೈನಂತಹ ಹಬ್ಬಗಳು ಜನರಿಗೆ ಉಸಿರಾಡಲು ಅವಕಾಶವನ್ನು ನೀಡುತ್ತವೆ. ಅವರು ಒಟ್ಟಿಗೆ ಬರುತ್ತಾರೆ, ದಿನಗಗಟ್ಟಲೆ ಒಟ್ಟಾಗಿ ಉತ್ತಮ ಸಮಯವನ್ನು ಕಳೆಯುತ್ತಾರೆ. ಹೀಗಾಗಿ, ನಾವು ಎಂದಿಗೂ ನಷ್ಟವನ್ನು ಅನುಭವಿಸುವುದಿಲ್ಲವೆಂದು ಭಾವಿಸುತ್ತೇನೆ."
ಅನುವಾದ: ಶೈಲಜಾ ಜಿ.ಪಿ.