ಮಹಮ್ಮದ್ ಅಸ್ಗರ್‌ರವರ ಕೈಗಳು ಯಂತ್ರದಂತೆ ಕೆಲಸ ಮಾಡುತ್ತಿವೆ, ಮಾತನಾಡುತ್ತಿದ್ದರೂ ಅವರ ಕೈಗಳು ಮಾತ್ರ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ.
“ಕುಛ್ ಪಲ್ ಕೆ ಲಿಯೇ ಭಿ ಹಾತ್ ರುಕ್ ಗಯಾ ತೊ ಕಾಮ್ ಖರಾಬ್ ಹೊ ಜಾಯೇಗಾ [ನನ್ನ ಕೈಗಳು ಕೆಲವು ಕಾಲ ಕೆಲಸ ನಿಲ್ಲಿಸಿದರೆ, ಇಡೀ ಕೆಲಸವೇ ಹಾಳಾಗಿ ಹೋಗುತ್ತದೆ],” ಎಂದು
ಅಸ್ಗರ್ ಓರ್ವ ಛಾಪಾ ಕಾರಿಗರ್ (ಕೈಯಿಂದ ಬ್ಲೋಕ್ ಪ್ರಿಂಟ್ ಮಾಡುವ ಕುಶಕಕರ್ಮಿ) ಮತ್ತು ಇವರು ಈ ಕೆಲಸವನ್ನು ಕಳೆದ ಒಂದು ದಶಕದಿಂದ ಮಾಡುತ್ತಿದ್ದಾರೆ. ಬೇರೆ ಬ್ಲೋಕ್ ಪ್ರಿಂಟಿಂಗ್ ಕುಶಲಕರ್ಮಿಗಳು ಮರದ ಅಚ್ಚನ್ನು ಡೈಯಲ್ಲಿ ಅದ್ದಿ ಬಟ್ಟೆಯ ಮೇಲೆ ಅಚ್ಚು ಹಾಕಿದರೆ, ಅಸ್ಗರ್ ಮಾತ್ರ ತುಂಬಾ ತೆಳುವಾದ ಅಲ್ಯುಮೀನಿಯಂ ಹಾಳೆಯನ್ನು ಬಳಸಿ ಬಟ್ಟೆಯ ಮೇಲೆ ಲೋಹದ ಹೂವುಗಳನ್ನು ಮತ್ತು ಇತರ ಡಿಸೈನ್‌ಗಳನ್ನು ಮಾಡುತ್ತಾರೆ.
ತಬಕ್ ಎಂದು ಕರೆಯುವ ಈ ಅಲ್ಯುಮೀನಿಯಂ ಹಾಳೆಗಳನ್ನು ಸೀರೆಗಳು, ಶರಾರಾಗಳು, ಲೆಹಂಗಾ ಮತ್ತು ಮಹಿಳೆಯರ ಇತರ ಉಡುಗೆಗಳ ಮೇಲೆ ಅಚ್ಚು ಹಾಕಿದಾಗ ಅವುಗಳ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ. ಅವರ ಹಿಂದಿರುವ ಕವಾಟಿನಲ್ಲಿ ಡಜನ್‌ಗಟ್ಟಲೆ ಬೇರೆ ಬೇರೆ ವಿನ್ಯಾಸಗಳ ಮರದ ಅಚ್ಚುಗಳಿದ್ದು, ಇವು ಸರ್ವೇ ಸಾಮಾನ್ಯ ಬಟ್ಟೆಗೂ ಚಿತ್ತಾಕರ್ಷಕವಾದ ಮೆರುಗನ್ನು ನೀಡಬಲ್ಲವು.
ಬಿಹಾರದ ನಳಂದಾ ಜಿಲ್ಲೆಯ ಬಿಹಾರ್‌ಶರೀಫ್ ಪಟ್ಟಣದಲ್ಲಿ ಆರೇಳು ಛಾಪಾ ಅಂಗಡಿಗಳು ಮಾತ್ರ ಉಳಿದಿವೆ. ಛಾಪಾ ಕಾರಿಗರರು ಮುಸಲ್ಮಾನರು, ಅದರಲ್ಲೂ ಇವರು ಬಿಹಾರದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯ ವೆಂದು ಗುರುತಿಸಲಾಗಿರುವ ರಂಗ್‌ರೇಜ್ (ಡೈ ಹಾಕುವವರು) ಜಾತಿಗೆ ಸೇರಿದವರು. ಅವರ ಬಹುತೇಕ ಗ್ರಾಹಕರೂ ಮುಸಲ್ಮಾನರೇ. ಇತ್ತೀಚೆಗೆ ಬಿಹಾರ ಸರ್ಕಾರ ಮಾಡಿದ ಜಾತಿ ಸಮೀಕ್ಷೆಯ ಪ್ರಕಾರ ಇಲ್ಲಿ ಸುಮಾರು 43,347 ರಂಗ್‌ರೇಜ್ ಜಾತಿಯವರು ಇದ್ದಾರೆ.
“ಮೂವತ್ತು ವರ್ಷಗಳ ಹಿಂದೆ, ನನಗೆ ಬೇರೆ ಕೆಲಸ (ಅವಕಾಶ) ಇಲ್ಲದೇ ಇದ್ದಾಗ ಈ ವೃತ್ತಿಯನ್ನು ಕೈಗೆತ್ತಿಕೊಂಡೆ,” ಎಂದು ಹೇಳುತ್ತಾರೆ ಪಪ್ಪು. “ನನ್ನ ತಾಯಿಯ ಕಡೆಯ ಅಜ್ಜ ಛಾಪಾ ಮಾಡುತ್ತಿದ್ದರು. ಅವರಿಂದ ಈ ಕೆಲಸವನ್ನು ಕಲಿತೆ. ಇದರಲ್ಲಿಯೇ ಅವರು ತಮ್ಮ ದಿನಗಳನ್ನು ಕಳೆದರು, ಈಗ ನಾನೂ,” ಎಂದು ಅತ್ಯಂತ ಜನನಿಬಿಡ ಹಾಗೂ ಸದಾ ಬ್ಯುಸಿಯಾಗಿರುವ ಬಿಹಾರದ ರಾಜಧಾನಿ ಪಾಟ್ನಾದ ಸಬ್ಜೀಬಾಗ್‌ನಲ್ಲಿ ಕಳೆದ ಮೂವತ್ತು ವರ್ಷಗಳಿಂದ ಛಾಪಾ ಉಡುಗೆ ಮಾರುವ 55 ವರ್ಷ ಪ್ರಾಯದ ಪಪ್ಪು ಹೇಳುತ್ತಾರೆ.
ದಿನಗಳು ಕಳೆದಂತೆ ಈ ಕುಶಲತೆಗೆ ಇರುವ ಬೇಡಿಕೆಯೂ ಕುಸಿಯುತ್ತಿದೆ ಎಂದು ಹೇಳುವ ಇವರು: “ಹಿಂದೆ ಪಾಟ್ನಾದಲ್ಲಿ 300 ಅಂಗಡಿಗಳಿದ್ದವು, ಈಗ ಕೇವಲ 100 ಇವೆ,” ಎನ್ನುತ್ತಾರೆ. ಈಗ ಚಿನ್ನ ಮತ್ತು ಬೆಳ್ಳಿಯ ಪ್ರಿಂಟಿಗನ್ನು ಯಾರೂ ಬಳಸುತ್ತಿಲ್ಲ, ಅವುಗಳ ಜಾಗಕ್ಕೆ ಅಲ್ಯುಮೀನಿಯಂ ಬಂದಿದೆ.
ಶಬ್ಜೀ ಬಜಾರಿನಲ್ಲಿ ಸಣ್ಣ ವರ್ಕ್‌ಶಾಪ್ ಇಟ್ಟುಕೊಂಡಿರುವ ಅಸ್ಗರ್, ಇಪ್ಪತ್ತು ವರ್ಷಗಳ ಹಿಂದೆ ತಬಕ್‌ಗಳನ್ನು ಬಿಹಾರ್‌ಶರೀಫ್ ಪಟ್ಟಣದಲ್ಲಿಯೇ ಮಾಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. “ಹಿಂದೆಲ್ಲಾ ತಬಕ್‌ಗಳನ್ನು ಸಿಟಿಯಲ್ಲಿಯೇ ತಯಾರಿಸುತ್ತಿದ್ದರು. ಆದರೆ ಈಗ ಕೆಲಸಕ್ಕೆ ಜನ ಸಿಗದೆ ಇರುವುದರಿಂದ ಅವುಗಳನ್ನು ಇಲ್ಲಿ ಮಾಡುತ್ತಿಲ್ಲ. ಈಗ ಪಾಟ್ನಾದಿಂದ ತರಿಸುತ್ತೇವೆ,” ಎನ್ನುತ್ತಾರೆ ಅವರು.
ಛಾಪಾ ಶೋನ ಸ್ಟಾರ್ ಎಂದರೆ ಅದು ತಬಕ್. ಇವು ಗಾಳಿಯಲ್ಲಿ ಹಾರುತ್ತಾ ಒಮ್ಮೊಮ್ಮೆ ಅಸ್ಗರ್‌ರವರ ಮುಖ ಹಾಗೂ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತವೆ. ದಿನದ ಕೊನೆಯಲ್ಲಿ ಅವರು ಇವನ್ನು ತೊಳೆಯಬೇಕು ಮತ್ತು ಅಂಗೈಗೆ ದಪ್ಪನೆ ಅಂಟಿರುವ ಅಂಟನ್ನು ತೆಗೆಯಬೇಕು. “ಕೈಯಿಂದ ಈ ಅಂಟನ್ನು ತೆಗೆಯಲು ಎರಡು ಗಂಟೆ ಬೇಕು. ನಾನು ಇದಕ್ಕೆ ಬಿಸಿ ನೀರು ಬಳಸುತ್ತೇನೆ” ಎನ್ನುತ್ತಾರೆ ಅವರು.
“ಈ ಅಂಟು ಬೇಗನೆ ಗಟ್ಟಿಯಾಗುತ್ತದೆ, ಹಾಗಾಗಿ ಇಡೀ ಕೆಲಸವನ್ನು ಬೇಗ ಬೇಗ ಮಾಡಿ ಮುಗಿಸಬೇಕು,” ಎನ್ನುತ್ತಾ ಟಿನ್ ಡಬ್ಬದಿಂದ ಅಂಟನ್ನು ತೆಗೆದುಕೊಂಡು ಎಡ ಅಂಗೈಗೆ ಹಚ್ಚಿಕೊಂಡು ಛಾಪಾ ಮಾಡುವ ವಿಧಾನವನ್ನು ವಿವರಿಸುತ್ತಾರೆ. ಅಂಗೈ ತುಂಬಾ ಅಂಟನ್ನು ಹಚ್ಚಿದ ಮೇಲೆ, ಅದರ ಮೇಲೆ ಮರದ ಅಚ್ಚನ್ನು ತಿರುಗಿಸುತ್ತಾ ಅದನ್ನು ಅಂಟಿನಲ್ಲಿ ಅದ್ದುತ್ತಾರೆ. ಇದಾದ ತಕ್ಷಣ ಅಚ್ಚನ್ನು ಬಟ್ಟೆಯ ಮೇಲೆ ಒತ್ತುತ್ತಾರೆ.
ವೇಗವಾಗಿ ಕೆಲಸ ಮಾಡುತ್ತಾ, ಎಚ್ಚರಿಕೆಯಿಂದ ಪೇಪರ್ ವೇಟ್‌ನ ಕೆಳಗೆ ಇಟ್ಟಿರುವ ತೆಳುವಾದ ಅಲ್ಯುಮೀನಿಯಂ ಹಾಳೆಗಳನ್ನು ಕೈಯಲ್ಲಿ ತೆಗೆದುಕೊಂಡು, ಬಟ್ಟೆಯ ಮೇಲೆ ಅಂಟನ್ನು ಒತ್ತಿರುವ ಭಾಗಕ್ಕೆ ಹಾಳೆಯನ್ನು ಅಂಟಿಸುತ್ತಾರೆ. ಆಗ ಗೋಂದು ಹಾಕಿದ ಜಾಗದಲ್ಲಿ ಹಾಳೆ ಅಂಟಿಕೊಂಡು ಬ್ಲೋಕ್‌ನಲ್ಲಿರುವ ಡಿಸೈನ್ ಮೂಡುತ್ತದೆ.
ಬಟ್ಟೆಯ ಮೇಲೆ ಅಲ್ಯುಮೀನಿಯಂ ಫಾಯಿಲ್ ಸರಿಯಾಗಿ ಅಂಟಲು ಮೆತ್ತನೆಯ ಬಟ್ಟೆಯಿಂದ ಒತ್ತುತ್ತಾರೆ. “ಹೀಗೆ ಮಾಡುವುದರಿಂದ ತಬಾಕ್ ಅಂಟು ಹಾಕಿದ ಜಾಗದಲ್ಲಿ ಸರಿಯಾಗಿ ಕೂರುತ್ತದೆ,” ಎಂದು ಹೇಳುತ್ತಾರೆ ಅಸ್ಗರ್. ತುಂಬಾ ಸೂಕ್ಷ್ಮವಾದ ಈ ಕೆಲಸವನ್ನು ಬೇಗ ಬೇಗನೇ ಮಾಡಿ ಮುಗಿಸಿದರೆ, ಕೆಲವೇ ಸೆಕೆಂಡಿನಲ್ಲು ಹೊಳೆಯುವ ವೃತ್ತಾಕಾರ ಡಿಸೈನ್ ಬಟ್ಟೆಯ ಮೇಲೆ ಮೂಡುತ್ತದೆ. ಹೀಗೆ ಹೊಸದಾಗಿ ಮಾಡಿದ ಛಾಪಾ ಬಟ್ಟೆಯನ್ನು ಅಂಟು ಸರಿಯಾಗಿ ಒಣಗಲು ಮತ್ತು ಅಲ್ಯುಮೀನಿಯಂ ಹಾಳೆ ಶಾಶ್ವತವಾಗಿ ಅಂಟಿಕೊಳ್ಳಲು ಸುಮಾರು ಒಂದು ಗಂಟೆಯ ಕಾಲ ಬಿಸಿಲಿನಲ್ಲಿ ಒಣಗಲು ಹಾಕಬೇಕು.
ಕಾರಿಗರ್ ಒಮ್ಮೆಯೂ ನಿಲ್ಲಿಸದೆ ಈ ಪ್ರಕ್ರಿಯೆಯನ್ನು ಮತ್ತೆ ಮತ್ತೆ ಮಾಡುತ್ತಾರೆ. ಸದ್ಯ ಅವರು ಪೈಂಟಿಂಗ್ ಮಾಡುತ್ತಿರುವ, ಬಿದಿರಿನ ಬುಟ್ಟಿಯನ್ನು ಮುಚ್ಚಲು ಬಳಸುವ ಕೆಂಪು ಬಣ್ಣದ ಬಟ್ಟೆಯ ಹೆಸರು ದಲ್‌ದಖ್ಖನ್.
10-12 ಚದರ ಸೆಂಟಿಮೀಟರ್ ಇರುವ ಈ ಅಲ್ಯುಮೀನಿಯಂ ಹಾಳೆಗಳ 400 ಪೀಸ್‌ಗಳಿಗೆ 400 ರುಪಾಯಿ, ಒಂದು ಕಿಲೋ ಅಂಟಿಗೆ 100 ರಿಂದ 150 ರುಪಾಯಿ. “ಛಾಪಾದ ಬೆಲೆ 700-800 ರುಪಾಯಿಯಾಗುತ್ತದೆ. ಅಷ್ಟು ಬೆಲೆಗೆ ಕೊಳ್ಳಲು ಗ್ರಾಹಕರು ಬರುವುದಿಲ್ಲ,” ಎಂದು ತಮ್ಮನ್ನು ಪಪ್ಪು ಎಂದೇ ಕರೆಯಲು ಬಯಸುವ ಛಾಪಾ ಅಂಗಡಿ ಮಾಲಿಕ ಹೇಳುತ್ತಾರೆ.
ಛಾಪಾ ಉಡುಗೆಗಳನ್ನು ಹೆಚ್ಚಾಗಿ ಬಿಹಾರದ, ಅದರಲ್ಲೂ ರಾಜ್ಯದ ದಕ್ಷಿಣದಲ್ಲಿರುವ ಮಗಧಾ ಭಾಗದ ಮುಸಲ್ಮಾನರ ಮದುವೆಗಳಲ್ಲಿ ಬಳಸಲಾಗುತ್ತದೆ. ಸಮಾಜದಲ್ಲಿ ಅವರ ಸ್ಥಾನಮಾನ ಏನೇ ಇರಲಿ, ಸಂಪ್ರದಾಯದ ಅವಿಭಾಜ್ಯ ಅಂಗವಾಗಿರುವ ಈ ಉಡುಗೆಯನ್ನು, ಅದರಲ್ಲೂ ವಧು ಹಾಗೂ ವಧುವಿನ ಕಡೆಯವರು ಛಾಪಾ ಸೀರೆಯನ್ನು ಅಥವಾ ಯಾವುದೇ ಛಾಪಾ ಮದುವೆ ತೊಡುಗೆಯನ್ನು ಧರಿಸಲೇ ಬೇಕು.
ಸಾಂಪ್ರದಾಯಿಕವಾಗಿ ಎಷ್ಟೇ ಪ್ರಾಮಖ್ಯತೆ ಇರಲಿ, ಈ ಛಾಪಾ ತೊಡುಗೆಯನ್ನು ದೀರ್ಘ ಕಾಲದ ವರೆಗೆ ಧರಿಸಲು ಸಾಧ್ಯವಿಲ್ಲ. “ಪೈಂಟ್ ಮಾಡಲು ಬಳಸಿರುವ ಅಂಟಿನಿಂದ ಕೆಟ್ಟ ವಾಸನೆ ಬರುತ್ತದೆ. ಈ ಪೈಂಟಿಂಗ್ ತುಂಬಾ ವೀಕ್ ಆಗಿರುವುದರಿಂದ, ಒಂದೆರಡು ಬಾರಿ ತೊಳೆದರೆ ಅಲ್ಯುಮೀನಿಯಂ ಹಾಳೆ ಮಾಸಿ ಹೋಗುತ್ತದೆ,” ಎಂದು ಪಪ್ಪು ಹೇಳುತ್ತಾರೆ.
ಮೂರ್ನಾಲ್ಕು ತಿಂಗಳ ಮದುವೆ ಸೀನಸ್‌ನ ನಂತರ ಛಾಪಾ ಕೆಲಸ ನಿಂತು ಹೋಗುತ್ತದೆ, ಆಗ ಕುಶಲಕರ್ಮಿಗಳು ಬೇರೆ ಕೆಲಸಗಳನ್ನು ಹುಡುಕಬೇಕು.
“ನಾನು ಅಂಗಡಿಯಲ್ಲಿ ಎಂಟರಿಂದ ಹತ್ತು ಗಂಟೆ ಕೆಲಸ ಮಾಡುತ್ತೇನೆ ಮತ್ತು ಮೂರು ಸೀರೆಗಳ ಛಾಪಾ ಕೆಲಸವನ್ನು ಮುಗಿಸುತ್ತೇನೆ. ಈ ಕೆಲಸದಲ್ಲಿ ದಿನಾ 500 ರುಪಾಯಿ ಸಿಗುತ್ತದೆ. ಆದರೆ ಈ ಕೆಲಸ ಕೇವಲ ಮೂರ್ನಾಲ್ಕು ತಿಂಗಳು ಮಾತ್ರ ಸಿಗುತ್ತದೆ. ಛಾಪಾ ಕೆಲಸ ಇಲ್ಲದೇ ಇದ್ದಾಗ ನಾನು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತೇನೆ,” ಎಂದು ಅಸ್ಗರ್ ಹೇಳುತ್ತಾರೆ.
ಅಸ್ಗರ್ ತಾವು ಮುಂಜಾನೆ 10 ರಿಂದ ರಾತ್ರಿ 8 ಗಂಟೆಯ ವರೆಗೆ ಕೆಲಸ ಮಾಡುವ ವರ್ಕ್‌ಶಾಪ್‌ನಿಂದ ಸರಿಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಬಿಹಾರ್‌ಶರೀಫ್ ಎಂಬ ಪಟ್ಟಣದಲ್ಲಿ ವಾಸಿಸುತ್ತಾರೆ. “ಹಣ ಉಳಿಸಲು ಮಧ್ಯಾಹ್ನದ ಊಟವನ್ನು ನಾನು ಕೆಲಸ ಮಾಡುವಲ್ಲಿಗೆ ಮನೆಯಿಂದ ನನ್ನ ಮಗ ತರುತ್ತಾನೆ,” ಎನ್ನುತ್ತಾರೆ ಅವರು.
ಐದು ವರ್ಷಗಳ ಕೆಲ ಸಮಯದ ವರೆಗೆ ಅಸ್ಗರ್ ದೆಹಲಿಗೆ ವಲಸೆ ಹೋಗಿ ಕಟ್ಟಡ ನಿರ್ಮಾಣದ ಕೆಲಸ ಮಾಡಿದರು. ಈಗ ತಮ್ಮ ಪತ್ನಿ, ಹದಿನಾಲ್ಕು-ಹದಿನಾರು ವರ್ಷದ ಶಾಲೆಗೆ ಹೋಗುವ ತಮ್ಮ ಗಂಡು ಮಕ್ಕಳ ಜೊತೆಗೆ ತಮ್ಮ ಪಟ್ಟಣದಲ್ಲಿಯೇ ನೆಲೆಸಿದ್ದಾರೆ. ಬಿಹಾರ್‌ಶರೀಫ್ ಪಟ್ಟಣದಲ್ಲಿ ಬರುವ ಆದಾಯ ಇವರಿಗೆ ತೃಪ್ತಿ ತಂದಿದೆ ಮತ್ತು ತಮ್ಮ ಕುಟುಂಬದ ಜೊತಗೆ ವಾಸಿಸುವುದು ಹೆಚ್ಚಿನ ನೆಮ್ಮದಿ ನೀಡಿದೆ. "ಯಹಾನ್ ಭೀ ಕಾಮ್ ಹೋಯೀ ರಹಾ ಹೈ ತೋ ಕಾಹೇ ಲಾ ಬಹರ್ ಜಾಯೇಂಗೆ [ನಂಗೆ ಇಲ್ಲಿ ಕೆಲಸ ಸಿಗುತ್ತಿದೆ, ಬೇರೆ ಕಡೆ ಯಾಕೆ ಹೋಗಬೇಕು]? ಎಂದು ವರದಿಗಾರರಿಗೆ ಹೇಳುತ್ತಾರೆ.
ಮಹಮ್ಮದ್ ರಿಯಾಝ್ ಪಪ್ಪುರವರ ಅಂಗಡಿಯಲ್ಲಿ ಛಾಪಾ ಕಾರಿಗರ್ ಆಗಿ ಕೆಲಸ ಮಾಡುತ್ತಾರೆ. ಅರವತ್ತೈದು ವರ್ಷ ಪ್ರಾಯದ ಇವರಲ್ಲಿ ಬದುಕುವುದಕ್ಕೆ ಬೇಕಾದ ಅನೇಕ ಕೌಶಲ್ಯಗಳಿವೆ: “ಛಾಪಾ ಕೆಲಸ ಇಲ್ಲದೇ ಇದ್ದಾಗ, ನಾನು ಮ್ಯೂಸಿಕ್ ಬ್ಯಾಂಡ್ ಒಂದರಲ್ಲಿ ಕೆಲಸ ಮಾಡುತ್ತೇನೆ. ಇದಲ್ಲದೇ, ನಾನು ಪೈಪ್ ರಿಪೇರಿ ಪ್ಲಮ್ಮಿಂಗ್ ಕೆಲಸ ಕೂಡ ಮಾಡುತ್ತೇನೆ. ಈ ಎಲ್ಲಾ ಕೆಲಸಗಳು ನನ್ನನ್ನು ವರ್ಷ ಪೂರ್ತಿ ಕೆಲಸದಲ್ಲಿ ತೊಡಗಿರುವಂತೆ ಮಾಡುತ್ತವೆ” ಎಂದು ರಿಯಾಝ್ ಹೇಳುತ್ತಾರೆ.
ಈ ಆದಾಯ ಸಾಕಾಗಲ್ಲ, ಕುಟುಂಬ ನಡೆಸಲು ಕಷ್ಟವಿದೆ ಎಂದು ಪಪ್ಪು ಹೇಳುತ್ತಾರೆ. ಅವರು ತಮ್ಮ ಪತ್ನಿ ಹಾಗೂ ಏಳು ಮತ್ತು ಹದಿನಾರರ ಮಧ್ಯ ಪ್ರಾಯದ ಮೂವರು ಮಕ್ಕಳನ್ನು ನೋಡಿಕೊಳ್ಳಬೇಕು. “ಇದರಿಂದ ಏನೂ ಗಳಿಕೆಯಿಲ್ಲ. ಇಲ್ಲಿಯವರೆಗೆ ಛಾಪಾ ಬಟ್ಟೆಯಿಂದ ಎಷ್ಟು ಸಿಗುತ್ತದೆ ಎಂಬ ಲೆಕ್ಕವೂ ಹಾಕಿಲ್ಲ. ಹೇಗಾದರೂ ಮಾಡಿ ಕುಟುಂಬದವರ ಹೊಟ್ಟೆ ತುಂಬಿಸುತ್ತೇನೆ,” ಎಂದು ಅವರು ಹೇಳುತ್ತಾರೆ.
ಯಾವುದೇ ಲಾಭ ನೀಡದ ಈ ವೃತ್ತಿಯನ್ನು ತನ್ನ ಗಂಡು ಮಕ್ಕಳಿಗೆ ಹೇಳಿಕೊಡಲು ಇವರು ಸಿದ್ಧರಿಲ್ಲ. “ಹಮ್ ಪಾಗಲ್ ನಹೀ ಹೈ ಹೈ ಜೋ ಚಾಹೆಂಗೆ ಕಿ ಮೇರೆ ಬೇಟೆ ಈಸ್ ಲೈನ್ ಮೇ ಆಯೇ [ನನ್ನ ಮಕ್ಕಳು ಈ ವ್ಯವಹಾರ ಮಾಡಬೇಕೆಂದು ಹೇಳಲು ನಾನೇನು ಹುಚ್ಚನಲ್ಲ],” ಎಂದು ಹೇಳುತ್ತಾರೆ ಅವರು.
ಛಾಪಾ ಶೋನ ಸ್ಟಾರ್ ಎಂದರೆ ತಬಕ್ (ಅಲ್ಯುಮೀನಿಯಂ ಹಾಳೆ), ಇವು ಗಾಳಿ ಬೀಸುವಾಗ ಮೆಲ್ಲಗೆ ಹಾರುತ್ತಾ ಕುಶಲಕರ್ಮಿಯ ಮುಖ ಮತ್ತು ಬಟ್ಟೆಗಳ ಮೇಲೆಲ್ಲಾ ಅಂಟಿಕೊಳ್ಳುತ್ತವೆ
*****
ಛಾಪಾದ ಹುಟ್ಟಿನ ಬಗ್ಗೆ ಹೆಚ್ಚು ತಿಳಿದಿಲ್ಲ. ಬಿಹಾರಿ ಮುಸ್ಲೀಮರ ಸಂಸ್ಕೃತಿಯ ಭಾಗವಾಗಿ ಅದು ಬದಲಾದ ಬಗ್ಗೆ ಕೂಡ ಹೆಚ್ಚಿನ ಅರಿವಿಲ್ಲ. ಬ್ರಿಟಿಷ್ ಇಂಡಿಯಾದಲ್ಲಿ ಶಸ್ತ್ರಚಿಕಿತ್ಸಕ ಮತ್ತು ಸರ್ವೇಯರ್ ಆಗಿದ್ದ ಫ್ರಾನ್ಸಿಸ್ ಬುಕಾನನ್ ಬಿಹಾರದಲ್ಲಿ ಕೈಯಿಂದ ಮಾಡಿದ ಬ್ಲೋಕ್ ಪ್ರಿಂಟಿಂಗ್ ಮಾಡುವ ಕುಶಲಕರ್ಮಿಗಳಿಗೆ 'ಛಾಪಾಗರ್' ಎಂದು ಕರೆದಿದ್ದಾನೆ.
“ಮುಸ್ಲಿಂ ವಿವಾಹಗಳಲ್ಲಿ ಪ್ರಿಂಟೆಡ್ ಉಡುಗೆಗಳನ್ನು ಧರಿಸುವ ಸಂಸ್ಕೃತಿ ಬಿಹಾರಕ್ಕೆ ಹೇಗೆ ಬಂತು ಎಂಬುದನ್ನು ಕಂಡುಹಿಡಿಯುವುದು ಕಷ್ಟ. ಆದರೆ ಈ ಸಂಸ್ಕೃತಿ ಬಿಹಾರದ ಮಗಧ ಪ್ರದೇಶದ ಮುಸ್ಲಿಮರಲ್ಲಿ ಹೆಚ್ಚು ಕಂಡುಬರುತ್ತದೆ., ಹಾಗಾಗಿ ಇದು ಆ ಪ್ರದೇಶದಲ್ಲೇ ಹುಟ್ಟಿತು ಎಂದು ನಂಬಲಾಗಿದೆ,” ಪಾಟ್ನಾ ಮೂಲದ ಉತ್ಸಾಹಿ ಇತಿಹಾಸ ತಜ್ಞ ಉಮರ್ ಅಶ್ರಫ್ ಹೇಳುತ್ತಾರೆ.
ಅವರು ಹೆರಿಟೇಜ್ ಟೈಮ್ಸ್ ಎಂಬ ವೆಬ್ ಪೋರ್ಟಲ್ ಮತ್ತು ಫೇಸ್‌ಬುಕ್ ಪೇಜನ್ನು ನಡೆಸುತ್ತಿದ್ದಾರೆ. ಇವುಗಳಲ್ಲಿ ಅವರು ಬಿಹಾರದ ಮುಸ್ಲೀಂ ಸಮುದಾಯದ ಅಳಿದು ಹೋಗಿರುವ ಸಂಸ್ಕೃತಿ ಮತ್ತು ಪರಂಪರೆಯನ್ನು ದಾಖಲಿಸುತ್ತಾರೆ.
ಈ ಪ್ರದೇಶದ ಈ ಕರಕುಶಲತೆಯ ಬೆಳವಣಿಗೆ 12 ನೇ ಶತಮಾನದಲ್ಲಿ ಮಗಧ ಪ್ರದೇಶಕ್ಕೆ ಮುಸ್ಲಿಮರ ವಲಸೆಯ ಕಾರಣದಿಂದ ಆಗಿದೆ. "ಬಹುಶಃ ಅವರ ಮದುವೆಯಲ್ಲಿ ಛಾಪಾ ಉಡುಗೆಗಳನ್ನು ಧರಿಸುವ ತಮ್ಮ ಸಂಸ್ಕೃತಿಯನ್ನು ಇಲ್ಲಿಗೆ ತಂದು, ಮಗಧದಲ್ಲಿಯೂ ಮುಂದುವರಿಸಿದರು" ಎಂದು ಅಶ್ರಫ್ ಹೇಳುತ್ತಾರೆ.
ಛಾಪಾ ಪ್ರಪಂಚದ ಬೇರೆ ಭಾಗಗಳಿಗೆ ಹೋಗಿದೆ: "ಬಿಹಾರಿ ಮುಸ್ಲಿಮರು ಯುರೋಪ್, ಅಮೇರಿಕಾ, ಕೆನಡಾ ಮತ್ತು ಇತರ ದೇಶಗಳಲ್ಲಿ ನೆಲೆಸಿದ್ದಾರೆಂದು ತೋರಿಸುವ ಅನೇಕ ಉದಾಹರಣೆಗಳಿವೆ, ಅಲ್ಲಿ ನಡೆಯುವ ಮದುವೆಗಳಲ್ಲಿ ಧರಿಸಲು ಭಾರತದಿಂದ ಛಾಪಾ ಉಡುಗೆಗಳನ್ನು ತೆಗೆದುಕೊಂಡು ಹೋಗುತ್ತಾರೆ" ಎಂದು ಅವರು ಹೇಳುತ್ತಾರೆ.
ಈ ವರದಿಯನ್ನು ಬಿಹಾರದಲ್ಲಿ ಅಂಚಿನಲ್ಲಿರುವ ಜನರಿಗಾಗಿ ಹೋರಾಡುವ ಟ್ರೇಡ್ ಯೂನಿಯನಿಸ್ಟ್ ನೆನಪಿಗಾಗಿ ನೀಡುವ ಫೆಲೋಶಿಪ್‌ನ ಬೆಂಬಲದಿಂದ ತಯಾರಿಸಲಾಗಿದೆ.
ಅನುವಾದ: ಚರಣ್ ಐವರ್ನಾಡು