ಅಸ್ಸಾಮಿ ಖೋಲ್ ಡೋಲುಗಳು ಬಂಗಾಳಿ ಖೋಲ್‌ಗಿಂತ ಕಡಿಮೆ (ಬಾಸ್) ಸದ್ದು ಹೊಮ್ಮಿಸುತ್ತವೆ. ಈ ಡೋಲಿನ ಪಿಚ್‌ ನೆಗೆರಾಕ್ಕಿಂತ ಹೆಚ್ಚು. ಗಿರಿಪೋದ್ ಬಾದಯೋಕರ್ ಅವರಿಗೆ ಇದು ಚೆನ್ನಾಗಿ ಗೊತ್ತಿದೆ. ಇದು ತಾಳವಾದ್ಯಗಳ ತಯಾರಕರಾಗಿರುವ ಇವರು ತಮ್ಮ ದಿನನಿತ್ಯದ ಕೆಲಸದಲ್ಲಿ ಬಳಸುವ ಸಾಮಾನ್ಯ ಜ್ಞಾನವಾಗಿದೆ.

"ಹರೆಯದ ಹುಡುಗರು ನನಗೆ ಸ್ಮಾರ್ಟ್‌ಫೋನ್‌ಗಳನ್ನು ತೋರಿಸಿ, ಟ್ಯೂನಿಂಗನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊಂದಿಸಿಕೊಡಲು ಹೇಳುತ್ತಾರೆ. ನಮಗೆ ಯಾವುದೇ ಆಪ್‌ನ ಆಗತ್ಯವಿಲ್ಲ," ಎಂದು ಅಸ್ಸಾಂನ ಮಜುಲಿ ಮೂಲದ ನುರಿತ ಕುಶಲಕರ್ಮಿ ಗಿರಿಪೋದ್‌ ಹೇಳುತ್ತಾರೆ.

ಟ್ಯೂನರ್ ಆಪ್‌ಗಳಲ್ಲೂ ಕೂಡ ಈ ಪ್ರಕ್ರಿಯೆ ಒಂದು ರೀತಿಯ ಟ್ರಯಲ್‌ ಆಂಡ್‌ ಎರರ್ ಎಂದು ಗಿರಿಪೋದ್‌ ವಿವರಿಸುತ್ತಾರೆ. ಅದಕ್ಕಾಗಿಯೇ ತಾಳವಾದ್ಯದ ಚರ್ಮವನ್ನು ಸರಿಯಾಗಿ ಜೋಡಿಸಬೇಕು, ಬಿಗಿಗೊಳಿಸಬೇಕು. "ಆಗ ಮಾತ್ರ ಟ್ಯೂನರ್ ಆಪ್‌ ಕೆಲಸ ಮಾಡುತ್ತದೆ,” ಎಂದು ಅವರು ಹೇಳುತ್ತಾರೆ.

ಗಿರಿಪೋದ್‌ ಮತ್ತು ಅವರ ಮಗ ಪೊದುಮ್ ಬಾದ್ಯೋಕಾರರ (ಅಥವಾ ಬಾದ್ಯಕಾರ್) ಸುದೀರ್ಘ ಪರಂಪರೆಯಿಂದ ಬಂದವರು.  ಸಂಗೀತ ವಾದ್ಯಗಳನ್ನು ತಯಾರಿಸುವುದರಲ್ಲಿ ಮತ್ತು ರಿಪೇರಿ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಸಮುದಾಯಕ್ಕೆ ಸೇರಿದ ಇವರನ್ನು ಧೂಲಿ ಅಥವಾ ಸಬ್ದಕಾರ್ ಎಂದೂ ಕರೆಯುತ್ತಾರೆ. ಈ ಸಮುದಾಯವನ್ನು ತ್ರಿಪುರಾದಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿದೆ.

ಪೊದುಮ್ ಮತ್ತು ಗಿರಿಪೊದ್ ಮುಖ್ಯವಾಗಿ ಡೋಲ್, ಖೋಲ್ ಮತ್ತು ತಬಲಾವನ್ನು ತಯಾರಿಸುತ್ತಾರೆ. "ಸತ್ರಗಳು ಇಲ್ಲಿರುವುದರಿಂದ, ನಮಗೆ ವರ್ಷಪೂರ್ತಿ ಕೆಲಸ ಸಿಗುತ್ತದೆ. ನಮಗೆ ಬೇಕಾದಷ್ಟು ಸಿಗುವಂತೆ ಮಾಡಬಹುದು," ಎಂದು ಪೊದುಮ್ ಹೇಳುತ್ತಾರೆ.

Left: Podum Badyokar sits in his family’s shop in Majuli, Assam.
PHOTO • Prakash Bhuyan
Right: Negeras and small dhols that have come in for repairs line the shelves
PHOTO • Prakash Bhuyan

ಎಡ: ಅಸ್ಸಾಂನ ಮಜುಲಿಯಲ್ಲಿರುವ ತಮ್ಮ ಅಂಗಡಿಯಲ್ಲಿ ಕುಳಿತಿರುವ ಪೊದಮ್ ಬಾದಯೋಕರ್. ಬಲ: ಕಪಾಟಿನಲ್ಲಿ ಸಾಲಾಗಿ ಪೇರಿಸಿರಲಾಗಿರುವ ರಿಪೇರಿಗಾಗಿ ಬಂದಿರುವ ನೆಗೆರಾಗಳು ಮತ್ತು ಸಣ್ಣ ಡೋಲ್‌ಗಳು

ಫಗುನ್ (ಫೆಬ್ರವರಿ-ಮಾರ್ಚ್) ಮತ್ತು ಮಿಸಿಂಗ್ (ಅಥವಾ ಮಿಶಿಂಗ್) ಸಮುದಾಯದ ಅಲಿ ಆಯೆ ಲಿಗಾಂಗ್ ವಸಂತಕಾಲದ ಹಬ್ಬದೊಂದಿಗೆ ಆರಂಭವಾಗುವ ಹಬ್ಬಗಳ ಸೀಸನ್‌ನಲ್ಲಿ ಇವರ ಗಳಿಕೆಯೂ ಹೆಚ್ಚಾಗುತ್ತದೆ. ಡೋಲುಗಳು ಹಬ್ಬದ ಸಮಯದಲ್ಲಿ ಕುಣಿಯಲಾಗುವ ಗುಮ್ರಾಗ್ ಕುಣಿತದ ಅವಿಭಾಜ್ಯ ಅಂಗ. ಆಗ ಹೊಸ ಡೋಲುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಸೋತ್ (ಮಾರ್ಚ್-ಏಪ್ರಿಲ್) ತಿಂಗಳಲ್ಲಿ ಹಳೆಯ ಡೋಲುಗಳನ್ನು ರಿಪೇರಿ ಮಾಡಿಸುವುದೂ ಹೆಚ್ಚಾಗುತ್ತದೆ. ವಸಂತಕಾಲದಲ್ಲಿ ಬರುವ ರಾಜ್ಯದ ಪ್ರಮುಖ ಹಬ್ಬವಾದ ಬೋಹಾಗ್ ಬಿಹುವಿನ ಆಚರಣೆಯ ಸಂದರ್ಭದಲ್ಲೂ ಡೋಲುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.

ಭದ್ರೋ ಮಾಸದಲ್ಲಿ ನೆಗೆರಾ ಮತ್ತು ಖೋಲ್‌ಗಳಿಗಿರುವ ಬೇಡಿಕೆಯೂ ಹೆಚ್ಚು. ರಾಸ್‌ನಿಂದ ಬಿಹುವರೆಗೆ ಅಸ್ಸಾಮಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ತಾಳವಾದ್ಯಗಳು ಇರಲೇಬೇಕು. ಅಸ್ಸಾಂನಲ್ಲಿ ವಿಶೇಷವಾಗಿ ಸುಮಾರು ಆರು ವಿಧದ ಡೋಲುಗಳು ಜನಪ್ರಿಯವಾಗಿವೆ. ಅವುಗಳಲ್ಲಿ ಹಲವನ್ನು ಈ ಮಜುಲಿಯಲ್ಲಿಯೇ ತಯಾರಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ ಕೂಡ. ಇದನ್ನೂ ಓದಿ: ರಾಸ್ ಮಹೋತ್ಸವ ಮತ್ತು ಮಜುಲಿಯ ಸತ್ರಗಳು

ಪೊದಮ್ ಏಪ್ರಿಲ್ ತಿಂಗಳ ಬಿಸಿಲಿನಲ್ಲಿ ತನ್ನ ಅಂಗಡಿಯ ಹೊರಗೆ ಕುಳಿತುಕೊಂಡು ದನದ ಚರ್ಮದಿಂದ ಕೂದಲನ್ನು ಕೆರೆದು ಕೀಳುತ್ತಿದ್ದರು. ಇದನ್ನು ತಬಲಾ, ನೆಗೆರಾ ಅಥವಾ ಖೋಲ್‌ಗೆ ಚರ್ಮದ ಪೊರೆ ಅಥವಾ ತಾಲಿಯಾಗಿ ಬಳಸಲಾಗುತ್ತದೆ. ಬ್ರಹ್ಮಪುತ್ರದ ಮಜುಲಿ ದ್ವೀಪದಲ್ಲಿರುವ ಎಲ್ಲಾ ಐದು ಸಂಗೀತ ಉಪಕರಣಗಳ ಮಳಿಗೆಗಳನ್ನು ವಲಸೆ ಬಂದಿರುವ ಬಂಗಾಳಿ ಸಮುದಾಯಕ್ಕೆ ಸೇರಿದ ಬಾದಯೋಕರ್ ಕುಟುಂಬಗಳು ನಡೆಸುತ್ತಿವೆ.

"ನನ್ನ ತಂದೆ ನೋಡಿಯೇ ಕಲಿತದ್ದು ಎಂದು ಹೇಳುತ್ತಾರೆ. ನಾನೂ ಅದೇ ರೀತಿ ಮಾಡಬೇಕು," ಎಂದು 23 ವರ್ಷ ಪ್ರಾಯದ ಪೊದಮ್ ಹೇಳುತ್ತಾರೆ. “ಹತೋತ್ ಧೋರಿ ಕ್ಸಿಕೈ ನಿದಿಯೇ [ಅವರು ಕೈಹಿಡಿದು ಕಲಿಸುವುದಿಲ್ಲ]. ಅವರು ನನ್ನ ತಪ್ಪುಗಳನ್ನು ತಿದ್ದುವುದಿಲ್ಲ. ನಾನೇ ಅವುಗಳನ್ನು ಗಮನಿಸಿ ಸರಿಪಡಿಸಿಕೊಳ್ಳಬೇಕು,” ಎಂದು ಪೊದಮ್ ಹೇಳುತ್ತಾರೆ.

ಪೊದುಮ್ 2,000 ರುಪಾಯಿ ಕೊಟ್ಟು ತಂದಿರುವ ಎತ್ತಿನ ಚರ್ಮವನ್ನು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದರು. ಮೊದಲ ಹಂತದಲ್ಲಿ ಫುಟ್‌ಸೈ (ಒಲೆಯ ಬೂದಿ) ಅಥವಾ ಒಣ ಮರಳನ್ನು ಬಳಸಿ ತೊಗಲಿನ ಮೇಲಿರುವ ಕೂದಲನ್ನು ತಿಕ್ಕಿ ಉಜ್ಜಲಾಗುತ್ತದೆ. ನಂತರ ಅದನ್ನು ಬೋಟಾಲಿ, ಚಪ್ಪಟೆ ಅಂಚಿನ ಉಳಿಯನ್ನು ಬಳಿಸಿ ಕೆರೆಯಲಾಗುತ್ತದೆ.

Podum scrapes off the matted hair from an animal hide using some ash and a flat-edged chisel
PHOTO • Prakash Bhuyan

ಸ್ವಲ್ಪ ಬೂದಿ ಮತ್ತು ಚಪ್ಪಟೆ ಅಂಚಿನ ಉಳಿ ಬಳಸಿ ತೊಗಲಿನ ಮೇಲಿರುವ ಕೂದಲನ್ನು ತೆಗೆಯುತ್ತಿರುವ ಪೊದುಮ್

ಎಕ್ಟೆರಾ ಎಂಬ ಬಾಗಿದ ಡಾವೊ ಬ್ಲೇಡನ್ನು ಬಳಸಿ ಸ್ವಚ್ಛಗೊಳಿಸಿದ ತೊಗಲಿನಿಂದ ವೃತ್ತಾಕಾರದ ಹಾಳೆಗಳನ್ನು ಕತ್ತರಿಸಲಾಗುತ್ತದೆ. ಇವೇ ತಾಲಿ [ಚರ್ಮದ ಪೊರೆ] ಗಳಾಗುತ್ತವೆ. "ತಾಲಿಯನ್ನು ವಾದ್ಯಕ್ಕೆ ಕಟ್ಟಲು ಬಳಸುವ ಹಗ್ಗಗಳನ್ನೂ ಕೂಡ ಚರ್ಮದಿಂದ ಮಾಡಲಾಗುತ್ತದೆ. ಇದನ್ನು ಎಳೆಯ ಪಶುವಿನ ಚರ್ಮದಿಂದ ಮಾಡುವುದರಿಂದ ಮೃದುವೂ, ಸೂಕ್ಷ್ಮವೂ ಆಗಿರುತ್ತದೆ," ಎಂದು ಪೊದುಮ್ ವಿವರಿಸುತ್ತಾರೆ.

ಸಯಾಹಿಯನ್ನು (ತಾಲಿಯ ಮಧ್ಯದಲ್ಲಿ ವೃತ್ತಾಕಾರದ ಕಪ್ಪು ಭಾಗ) ಪುಡಿಮಾಡಿದ ಕಬ್ಬಿಣ ಅಥವಾ ಘುನ್ ಅನ್ನು ಬೇಯಿಸಿದ ಅನ್ನದೊಂದಿಗೆ ಬೆರೆಸಿ ತಯಾರಿಸಿದ ಪೇಸ್ಟ್‌ನಿಂದ ಮಾಡಲಾಗುತ್ತದೆ. "ಇದನ್ನು [ಘುನ್] ಮೆಷಿನ್‌ನಿಂದ ತಯಾರಿಸಲಾಗುತ್ತದೆ," ಎಂದು ಒಂದು ಹಿಡಿ ಘುನ್ನನ್ನು ಕೈಯಲ್ಲಿ ಹಿಡಿದುಕೊಂಡು ಹೇಳುತ್ತಾರೆ. "ಇದು ಸ್ಥಳೀಯ ಕಮ್ಮಾರನಲ್ಲಿ ಸಿಗುವುದಕ್ಕಿಂತ ಉತ್ತಮವಾಗಿರುತ್ತದೆ. ಅದು ಒರಟು, ಚಪ್ಪಟೆಯಾದ್ದರಿಂದ ನಿಮ್ಮ ಕೈಯಗೆ ಗಾಯ ಮಾಡುತ್ತದೆ," ಎಂದು ಅವರು ಹೇಳುತ್ತಾರೆ.

ಈ ಯುವ ಕುಶಲಕರ್ಮಿ ವರದಿಗಾರರ ಕೈಗೆ ಈ ಗಾಢ ಬೂದು ಬಣ್ಣದ ಘುನ್ ಅನ್ನು ನೀಡುತ್ತಾರೆ. ಪ್ರಮಾಣ ಕಡಿಮೆಯಿದ್ದರೂ, ಈ ಪುಡಿ ಭಾರವಾಗಿರುವುದು ಆಶ್ಚರ್ಯಕರ.

ಘುನ್ ಅನ್ನು ತಾಲಿಗೆ ಹಚ್ಚಲು ಹೆಚ್ಚಿನ ಗಮನ ಮತ್ತು ಕಾಳಜಿ ಬೇಕು. ಕುಶಲಕರ್ಮಿಗಳು ತಾಲಿಯನ್ನು ಮೂರ್ನಾಲ್ಕು ಬಾರಿ ಸ್ವಚ್ಛಗೊಳಿಸುತ್ತಾರೆ. ಅದಕ್ಕೆ ಬೇಯಿಸಿದ ಅಕ್ಕಿಯ ಪದರವನ್ನು ಹಚ್ಚುತ್ತಾರೆ, ನಂತರ ಬಿಸಿಲಿನಲ್ಲಿ ಒಣಗಿಸುತ್ತಾರೆ. ಅಕ್ಕಿಯ ಗಂಜಿ ತಾಲಿಯನ್ನು ಅಂಟಂಟಾಗಿಸುತ್ತದೆ. ತಾಲಿ ಪೂರ್ತಿಯಾಗಿ ಒಣಗುವ ಮೊದಲು, ಸಯಾಹಿಯ ಲೇಪನ ಮಾಡಬೇಕು. ನಂತರ ಅದರ ಮೇಲ್ಮೈಯನ್ನು ಕಲ್ಲಿನಿಂದ ಉಜ್ಜಿ ಹೊಳಪು ಮಾಡಲಾಗುತ್ತದೆ. ಪ್ರತಿ ಪದರದ ನಡುವೆ 20-30 ನಿಮಿಷಗಳ ಬಿಡುವು ತೆಗೆದುಕೊಂಡು ಈ ಪ್ರಕ್ರಿಯೆಯನ್ನು ಮೂರು ಬಾರಿ ಮಾಡಬೇಕು. ನಂತರ ಸುಮಾರು ಒಂದು ಗಂಟೆ ನೆರಳಿನಲ್ಲಿ ಇಡಲಾಗುತ್ತದೆ.

"ಇದು ಪೂರ್ತಿಯಾಗಿ ಒಣಗುವವರೆಗೆ ನಾವು ಉಜ್ಜುತ್ತಲೇ ಇರಬೇಕು. ಸಾಂಪ್ರದಾಯಿಕವಾಗಿ, ಇದನ್ನು 11 ಬಾರಿ ಮಾಡಲಾಗುತ್ತದೆ. ಮೋಡ ಕವಿದ ವಾತಾವರಣವಿದ್ದರೆ ಈ ಪ್ರಕ್ರಿಯೆ ಇಡೀ ವಾರದವರೆಗೆ ನಡೆಯುತ್ತದೆ.”

Left: The curved dao blade, two different botalis (flat-edged chisels) and a screwdriver used like an awl are some of the tools used by the craftsmen.
PHOTO • Prakash Bhuyan
Right: The powdered iron or ghun used to paint the circular section of the taali is heavier than it looks
PHOTO • Prakash Bhuyan

ಎಡಕ್ಕೆ: ಬಾಗಿದ ಡಾವೊ ಬ್ಲೇಡ್, ಎರಡು ಬೇರೆ ಬೇರೆ ರೀತಿಯ ಬೊಟಾಲಿಗಳು (ಚಪ್ಪಟೆಯಾದ-ಅಂಚುಗಳ ಉಳಿ) ಮತ್ತು ತೂತು ಕೊರೆಯುವ ಸ್ಕ್ರೂಡ್ರೈವರ್ - ಇವು  ಕುಶಲಕರ್ಮಿಗಳು ಬಳಸುವ ಕೆಲವು ಸಲಕರಣೆಗಳು. ಬಲ: ತಾಲಿಯ ವೃತ್ತಾಕಾರದ ಭಾಗವನ್ನು ಮಾಡಲು ಬಳಸುವ ಪುಡಿಮಾಡಿದ ಕಬ್ಬಿಣ ಅಥವಾ ಘುನ್ ನೋಡಿದಂತಲ್ಲ, ಭಾರವಾಗಿರುತ್ತದೆ

Giripod and Podum cut small sheets from the hide to fit the instruments being worked on. A toolbox holds the many items necessary for preparing the leather: different types of chisels, blades, a hammer, mallet, stones and sandpaper
PHOTO • Prakash Bhuyan
Giripod and Podum cut small sheets from the hide to fit the instruments being worked on. A toolbox holds the many items necessary for preparing the leather: different types of chisels, blades, a hammer, mallet, stones and sandpaper
PHOTO • Prakash Bhuyan

ಗಿರಿಪೋದ್ ಮತ್ತು ಪೊದುಮ್ ತಾವು ಕೆಲಸ ಮಾಡುತ್ತಿರುವ ಉಪಕರಣವನ್ನು ತಯಾರಿಸಲು ಚರ್ಮವನ್ನು ಸಣ್ಣ ಹಾಳೆಗಳಾಗಿ ಕತ್ತರಿಸುತ್ತಾರೆ. ಇವರ ಟೂಲ್‌ಬಾಕ್ಸ್‌ನಲ್ಲಿ ಚರ್ಮದ ಕೆಲಸ ಮಾಡಲು ಬೇಕಾದ ತಯಾರಿಸಲು ಅಗತ್ಯವಾದ ವಿವಿಧ ರೀತಿಯ ಉಳಿಗಳು, ಬ್ಲೇಡ್‌ಗಳು, ಸುತ್ತಿಗೆ, ಮರದ ಬಡಿಗೆ, ಕಲ್ಲುಗಳು ಮತ್ತು ಮರಳು ಕಾಗದಗಳಿವೆ

*****

ಗಿರಿಪೊದ್‌ ಅವರು ನಾಲ್ಕು ಸಹೋದರರಲ್ಲಿ ಕೊನೆಯವರು. ಇವರು ತಮ್ಮ 12 ನೇ ವಯಸ್ಸಿನಲ್ಲಿಯೇ ಮನೆಗೆ ನೆರವಾಗಲು ಕೆಲಸ ಮಾಡಲು ಆರಂಭಿಸಿದರು. ಆಗ ಅವರು ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದರು. ಅವರ ಹೆತ್ತವರು ತೀರಿಕೊಂಡ ಮೇಲೆ ಒಬ್ಬಂಟಿಯಾಗಿ ಬದುಕು ಕಟ್ಟಿಕೊಂಡರು.

"ಈ ಕರಕುಶಲತೆಯನ್ನು ಕಲಿಯಲು ನನಗೆ ಮನಸಿರಲಿಲ್ಲ," ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಕೆಲವು ವರ್ಷಗಳ ನಂತರ ಅವರಿಗೆ ಈ ವೃತ್ತಿಯ ಮೇಲೆ ಪ್ರೀತಿ ಹುಟ್ಟಿತು. ಆಮೇಲೆ ಅವರು ಅಸ್ಸಾಂಗೆ ಹೋಗಲು ನಿರ್ಧರಿಸಿದರು. ಆರಂಭದ ದಿನಗಳಲ್ಲಿ ಅವರು ಡೋಲು ತಯಾರಿಸುವ ಅಂಗಡಿಯಲ್ಲಿ ಕೆಲಸ ಮಾಡಿದರು. ನಂತರ ಕೆಲವು ವರ್ಷಗಳ ಕಾಲ ಮರದ ಮಿಲ್‌ನಲ್ಲಿ ಕೆಲಸ ಮಾಡಿದರು ಮತ್ತು ನಂತರ ಮರ ಕಡಿಯುವ ವ್ಯವಹಾರದಲ್ಲಿ ತೊಡಗಿಸಿಕೊಂಡರು. ಮಾನ್ಸೂನ್‌ನಲ್ಲಿ ಕೆಸರು ತುಂಬಿದ ರಸ್ತೆಗಳಲ್ಲಿ ಮರದ ದಿಮ್ಮಿಗಳು ತುಂಬಿದ ಟ್ರಕ್‌ಗಳಲ್ಲಿ ತಾವು ಮಾಡಿದ ಅಪಾಯಕಾರಿ ಪ್ರಯಾಣವನ್ನು ನೆನೆಸಿಕೊಂಡು, "ನನ್ನ ಕಣ್ಣುಗಳ ಮುಂದೆಯೇ ಅನೇಕ ಸಾವುಗಳು ನಡೆದುಹೋದವು," ಎಂದು ಎನ್ನುತ್ತಾರೆ.

ಆ ನಂತರ ಈ ಕರಕುಶಲ ವೃತ್ತಿಯನ್ನು ಕೈಗೆತ್ತಿಕೊಂಡು, ಜೋರಹಾಟ್‌ನಲ್ಲಿ 10-12 ವರ್ಷಗಳ ಕಾಲ ಕೆಲಸ ಮಾಡಿದರು. ಅವರ ಮಕ್ಕಳಾದ ಮೂರು ಹುಡುಗಿಯರು ಮತ್ತು ಒಬ್ಬ ಹುಡುಗ – ಎಲ್ಲರೂ ಇಲ್ಲಿಯೇ ಹುಟ್ಟಿದರು. ಡೋಲನ್ನು ಎರವಲು ಪಡೆವ ವಿಚಾರದಲ್ಲಿ ಕೆಲವು ಅಸ್ಸಾಮಿ ಹುಡುಗರ ಜೊತೆಗೆ ನಡೆದ ಗಲಾಟೆಯಿಂದಾಗಿ ಸ್ಥಳೀಯ ಪೋಲೀಸರು ಗಿರಿಪೊದ್‌ ಅವರಿಗೆ ಡೋಲಿನ ಅಂಗಡಿ ತೆರೆಯುವಂತೆ ಪ್ರೇರೇಪಿಸಿದರು. ಏಕೆಂದರೆ ಈ ಗೂಂಡಾ ಹುಡುಗರಿಂದ ಹೆಚ್ಚಿನ ತೊಂದರೆ ಉಂಟಾಗಬಹುದು ಎಂಬುದು ಪೊಲೀಸರಿಗೆ ತಿಳಿದಿತ್ತು.

"ನಾವು ಬಂಗಾಳಿಗಳು, ಅವರು ಗುಂಪುಗೂಡಿ ಬಂದರೆ, ವಿಚಾರ ಕೋಮುಗಲಭೆಯಾಗಿ ಬದಲಾದರೆ, ನನ್ನ ಜೀವಕ್ಕೆ ಮತ್ತು ನನ್ನ ಕುಟುಂಬಕ್ಕೆ ಅಪಾಯ ಸಂಭವಿಸಬಹುದು. ಆದ್ದರಿಂದ ನಾನು ಜೋರ್ಹತವನ್ನು ಬಿಟ್ಟು [ಮಜುಲಿಗೆ] ಹೋಗಲು ತೀರ್ಮಾನಿಸಿದೆ," ಎಂದು ಅವರು ಹೇಳುತ್ತಾರೆ. ಮಜುಲಿಯಲ್ಲಿ ಸ್ಥಾಪಿಸಲಾಗಿರುವ ಹಲವಾರು ಸತ್ರಗಳಲ್ಲಿ (ವೈಷ್ಣವ ಮಠಗಳು) ನಡೆಯುವ ಸತ್ರಿಯಾ ಆಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಖೋಲ್ ಡ್ರಮ್‌ಗಳನ್ನು ತಯಾರಿಸುವ, ರಿಪೇರಿ ಮಾಡುವ ಕೆಲಸ ಇವರಿಗೆ ಸ್ಥಿರವಾಗಿ ಸಿಗುತ್ತದೆ.

"ಇವು ಕಾಡು ಪ್ರದೇಶಗಳಾಗಿದ್ದವು, ಸುತ್ತಮುತ್ತ ಹೆಚ್ಚಿನ ಅಂಗಡಿಗಳಿರಲಿಲ್ಲ," ಎನ್ನುವ ಇವರು ತಮ್ಮ ಮೊದಲ ಅಂಗಡಿಯನ್ನು ಬಲಿಚಪೋರಿ (ಅಥವಾ ಬಾಲಿ ಚಪೋರಿ) ಗ್ರಾಮದಲ್ಲಿ ತೆರೆದರು. ನಾಲ್ಕು ವರ್ಷಗಳ ನಂತರ ಅಂಗಡಿಯನ್ನು ಗರಮೂರ್‌ಗೆ ಸ್ಥಳಾಂತರಿಸಿದರು. 2021 ರಲ್ಲಿ ಮೊದಲ ಅಂಗಡಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ನಯಾ ಬಜಾರ್‌ನಲ್ಲಿ ಸ್ವಲ್ಪ ದೊಡ್ಡದಾದ ಮತ್ತೊಂದು ಅಂಗಡಿಯನ್ನು ತೆರೆದರು.

Left: Surrounded by other musical instruments, a doba (tied with green thread) sits on the floor awaiting repairs.
PHOTO • Prakash Bhuyan
Right: Bengali khols (in blue) are made from clay and have a higher pitch than the wooden Assamese khols (taller, in the back)
PHOTO • Prakash Bhuyan

ಎಡಕ್ಕೆ: ರಿಪೇರಿಗೆ ಕಾಯುತ್ತಿರುವ ಇತರ ಸಂಗೀತ ವಾದ್ಯಗಳ ಮಧ್ಯೆ ಇರುವ ಡೋಬಾ (ಹಸಿರು ದಾರದಿಂದ ಕಟ್ಟಲಾಗಿದೆ). ಬಲ: ಬೆಂಗಾಳಿ ಖೋಲ್‌ಗಳನ್ನು (ನೀಲಿ ಬಣ್ಣದಲ್ಲಿ) ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ, ಮರದಿಂದ ತಯಾರಿಸಿದ ಅಸ್ಸಾಮಿ ಖೋಲ್‌ಗಳಿಗಿಂತ ಹೆಚ್ಚಿನ ಪಿಚ್ ಅನ್ನು ಇದು ಕೊಡುತ್ತದೆ (ಎತ್ತರವಾಗಿರುವ, ಹಿಂಭಾಗದಲ್ಲಿ ಇಟ್ಟಿರುವ ಖೋಲ್)

ಖೋಲ್‌ಗಳ ಸಾಲು ಅಂಗಡಿಯ ಗೋಡೆಗಳ ತುಂಬೆಲ್ಲಾ ತುಂಬಿದೆ. ಜೇಡಿಮಣ್ಣಿನಿಂದ ಮಾಡಿದ ಬಂಗಾಳಿ ಖೋಲ್‌ಗಳನ್ನು ಪಶ್ಚಿಮ ಬಂಗಾಳದಲ್ಲಿ ತಯಾರಿಸಲಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ಇವುಗಳ ಬೆಲೆ 4,000 ರುಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು. ಅಸ್ಸಾಮಿ ಖೋಲ್‌ಗಳನ್ನು ಮರದಿಂದ ತಯಾರಿಸಲಾಗುತ್ತದೆ. ಡೋಲ್‌ಗಳನ್ನು ಮರವನ್ನು ಬಳಸಿ ತಯಾರಿಸಿರುವುದರಿಂದ, ಅವುಗಳ ಬೆಲೆ 5,000 ರುಪಾಯಿ ಮತ್ತು ಅದಕ್ಕಿಂತಲೂ ಹೆಚ್ಚು. ಚರ್ಮ ಬದಲಾಯಿಸಿ, ರಿಬೈಂಡ್ ಮಾಡಿದರೆ ಸುಮಾರು 2,500 ರುಪಾಯಿಯಾಗುತ್ತದೆ.

ಮಜುಲಿಯಲ್ಲಿನ ನಾಮಘರ್ (ಪ್ರಾರ್ಥನಾ ಮನೆ) ಒಂದರ ಡೋಬಾವನ್ನು ಗಿರಿಪೋದ್‌ ಅವರ ಅಂಗಡಿಯ ನೆಲದ ಮೇಲೆ ಇಡಲಾಗಿದೆ. ಇದನ್ನು ಸೀಮೆಎಣ್ಣೆಯ ಡಬ್ಬದಿಂದ ತಯಾರಿಸಲಾಗಿದೆ. ಕೆಲವು ಡೋಬಾಗಳನ್ನು ಹಿತ್ತಾಳೆ ಅಥವಾ ಅಲ್ಯೂಮಿನಿಯಂನಿಂದಲೂ ತಯಾರಿಸುತ್ತಾರೆ. "ಡ್ರಮ್ಮನ್ನು ಹುಡುಕಿ, ನಂತರ ಅದರಿಂದ ಡೋಬಾ ಮಾಡಲು ಹೇಳಿದರೆ, ನಾವು ಅದನ್ನು ಮಾಡಿ ಕೊಡುತ್ತೇವೆ. ಇಲ್ಲದಿದ್ದರೆ, ಗ್ರಾಹಕರೇ ಡ್ರಮ್ಮನ್ನು ತರಬಹುದು, ನಾವು ಚರ್ಮ ಹಾಕಿ ಸರಿಪಡಿಸುತ್ತೇವೆ,” ಎಂದು ಪೊದಮ್ ಹೇಳುತ್ತಾರೆ. ಈ ಡೋಬಾ ರಿಪೇರಿಗಾಗಿ ಅಂಗಡಿಗೆ ಬಂದಿದೆ.

"ಕೆಲವೊಮ್ಮೆ ನಾವು ಡೋಬಾವನ್ನು ಸರಿಪಡಿಸಲು ಸತ್ರ ಮತ್ತು ನಾಮಘರ್‌ಗೇ ಹೋಗಬೇಕು. ಮೊದಲ ದಿನ ನಾವು ಹೋಗಿ ಅಳತೆ ತೆಗೆದುಕೊಂಡು ಬರುತ್ತೇವೆ. ಮರುದಿನ ಚರ್ಮ ತೆಗೆದುಕೊಂಡು ಹೋಗಿ ಸತ್ರದಲ್ಲೇ ರಿಪೇರಿ ಮಾಡುತ್ತೇವೆ. ಈ ಕೆಲಸಕ್ಕೆ ಸುಮಾರು ಒಂದು ಗಂಟೆ ಬೇಕು,” ಎಂದು ಅವರು ಹೆಚ್ಚಿನ ವಿವರ ಕೊಡುತ್ತಾರೆ.

ಚಮ್ಮಾರರು ತಾರತಮ್ಯಕ್ಕೆ ಒಳಗಾಗಿರುವುದಕ್ಕೆ ಒಂದು ಸುದೀರ್ಘ ಇತಿಹಾಸವಿದೆ. “ಡೋಲು ನುಡಿಸುವ ಜನರು ಡೋಲು ಭಾರಿಸಲು ತಮ್ಮ ಬೆರಳುಗಳಿಗೆ ಎಂಜಲನ್ನು ಹಚ್ಚುತ್ತಾರೆ. ಕೊಳವೆಬಾವಿಯ ವಾಷರ್‌ನ್ನು ಕೂಡ ಚರ್ಮದಿಂದಲೇ ತಯಾರಿಸುತ್ತಾರೆ. ಆದ್ದರಿಂದ ಜಾತಿಯ ವಿಚಾರದಲ್ಲಿ ತಾರತಮ್ಯ ಮಾಡುವುದಕ್ಕೆ ಅರ್ಥವಿಲ್ಲ. ಚರ್ಮದ ಬಗ್ಗೆ ಅಸಹ್ಯಭಾವ ಹೊಂದುವುದರಿಂದ ಯಾವುದೇ ಪ್ರಯೋಜನವಿಲ್ಲ,” ಎಂದು ಗಿರಿಪೋದ್ ಹೇಳುತ್ತಾರೆ.

ಐದು ವರ್ಷಗಳ ಹಿಂದೆ‌ ಇವರ ಕುಟುಂಬ ನಯಾ ಬಜಾರ್‌ನಲ್ಲಿ ಒಂದು ತುಂಡು ಭೂಮಿಯನ್ನು ಖರೀದಿಸಿ ಮನೆ ಕಟ್ಟಿಕೊಂಡಿತು. ಅವರು ಮಿಸಿಂಗ್, ಅಸ್ಸಾಮಿ, ದಿಯೋರಿ ಮತ್ತು ಬಂಗಾಳಿ – ಹೀಗೆ ಬೇರೆ ಬೇರೆ ಸಮುದಾಯಗಳ ಜನರ ನಡುವೆ ವಾಸಿಸುತ್ತಿದ್ದಾರೆ. ಅವರು ಯಾವತ್ತಾದರೂ ತಾರತಮ್ಯ ಎದುರಿಸಿದ್ದಾರೆಯೇ?‌ ಈ ಪ್ರಶ್ನೆಗೆ “ನಾವು ಮಣಿದಾಸರು. ಸತ್ತ ದನಗಳ ಚರ್ಮ ಸುಲಿಯುವ ರಾಬಿದಾಸ್ ಸಮುದಾಯದ ಜನರು ಸ್ವಲ್ಪ ತಾರತಮ್ಯ ಅನುಭವಿಸುತ್ತಾರೆ. ಬಂಗಾಳದಲ್ಲಿ ಜಾತಿ ಆಧಾರಿತ ತಾರತಮ್ಯ ಹೆಚ್ಚು. ಇಲ್ಲಿ ಆ ರೀತಿ ಇಲ್ಲ,” ಎಂದು ಗಿರಿಪೋದ್ ಉತ್ತರಿಸುತ್ತಾರೆ.

*****

ಬಾದಯೋಕರರು ಎತ್ತುಗಳ ಇಡೀ ಚರ್ಮವನ್ನು ಸುಮಾರು 2,000 ರುಪಾಯಿ ಕೊಟ್ಟು ಸಾಮಾನ್ಯವಾಗಿ ಜೋರ್ಹತ್‌ನ ಕಾಕೋಜನ್‌ನಲ್ಲಿರುವ ಮುಸ್ಲಿಂ ವ್ಯಾಪಾರಿಗಳಿಂದ ಖರೀದಿಸುತ್ತಾರೆ. ಇಲ್ಲಿನ ಚರ್ಮ ಹೆಚ್ಚು ದುಬಾರಿ, ಆದರೆ ಹತ್ತಿರದ ಲಖಿಂಪುರ ಜಿಲ್ಲೆಗಿಂತ ಉತ್ತಮ ಗುಣಮಟ್ಟದ ಚರ್ಮ ಇಲ್ಲಿ ಸಿಗುತ್ತದೆ. "ಅವರು ಚರ್ಮವನ್ನು ಉಪ್ಪಿನಲ್ಲಿ ಇಡುತ್ತಾರೆ, ಹಾಗಾಗಿ ಈ ಚರ್ಮದ ಬಾಳಿಕೆ ಕಡಿಮೆಯಾಗುತ್ತದೆ," ಎಂದು ಪೊದುಮ್ ಹೇಳುತ್ತಾರೆ.

Procuring skins for leather has become difficult these days, craftsmen say. Rolls of leather and a set of khols awaiting repairs are stored in one corner of the shop
PHOTO • Prakash Bhuyan
Procuring skins for leather has become difficult these days, craftsmen say. Rolls of leather and a set of khols awaiting repairs are stored in one corner of the shop
PHOTO • Prakash Bhuyan

ತೊಗಲು ಮಾಡಲು ಚರ್ಮವನ್ನು ಸಂಗ್ರಹಿಸುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಕಷ್ಟಕರವಾಗುತ್ತಿದೆ ಎಂದು ಈ ಕುಶಲಕರ್ಮಿಗಳು ಹೇಳುತ್ತಾರೆ. ಚರ್ಮದ ಬಂಡಲ್ ಮತ್ತು ರಿಪೇರಿಗಾಗಿ ಕಾಯುತ್ತಿರುವ ಖೋಲ್‌ಗಳ ಸೆಟ್ಟನ್ನು ಅಂಗಡಿಯ ಒಂದು ಮೂಲೆಯಲ್ಲಿ ತೆಗೆದಿಡಲಾಗಿದೆ

ಹೊಸಹೊಸ ಕಾನೂನುಗಳಿಂದಾಗಿ ಚರ್ಮವನ್ನು ಸಂಗ್ರಹಿಸುವುದು ಇತ್ತೀಚಿನ ದಿನಗಳಲ್ಲಿ ಕಷ್ಟವಾಗಿ ಹೋಗಿದೆ. ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ, 2021 ಗೋಹತ್ಯೆಯನ್ನು ನಿಷೇಧಿಸುತ್ತದೆ. ಇದು ಇತರ ಜಾನುವಾರುಗಳನ್ನು ಕೊಲ್ಲಲು ಅನುಮತಿ ನೀಡುತ್ತದೆ, ಆದರೆ ಈ ಪಶುವಿಗೆ 14 ವರ್ಷಕ್ಕಿಂತ ಹೆಚ್ಚು ಪ್ರಾಯವಾಗಿದೆ ಅಥವಾ ಇದೊಂದು ಗೊಡ್ಡು ಜಾನುವಾರು ಎಂದು ನೋಂದಾಯಿತ ಪಶುವೈದ್ಯಾಧಿಕಾರಿ ಪ್ರಮಾಣೀಕರಿಸಿದರೆ ಮಾತ್ರ ಸಾಧ್ಯ. ಇದರಿಂದಾಗಿ ಚರ್ಮದ ಬೆಲೆಯೂ ಹೆಚ್ಚಾಗಿದೆ, ಹಾಗಾಗಿ ಹೊಸ ಉಪಕರಣಗಳ ಬೆಲೆ ಮತ್ತು ರಿಪೇರಿ ಕೆಲಸದ ಬೆಲೆ ಕೂಡ ಹೆಚ್ಚಾಗುತ್ತದೆ. "ಜನರು ಬೆಲೆ ಹೆಚ್ಚಾಗಿದೆ ಎಂದು ದೂರು ಹೇಳುತ್ತಾರೆ, ಆದರೆ ಏನೂ ಮಾಡಲು ಸಾಧ್ಯವಿಲ್ಲ," ಎಂದು ಪೊದಮ್ ಹೇಳುತ್ತಾರೆ.

ಗಿರಿಪೋದ್ ಒಮ್ಮೆ ಚರ್ಮದ ಕೆಲಸಕ್ಕೆ ಬಳಸುವ ತಮ್ಮ ಉಪಕರಣಗಳು ಮತ್ತು ದಾವೊ ಬ್ಲೇಡ್‌ಗಳೊಂದಿಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಪೊಲೀಸರು ಅವರನ್ನು ಚೆಕ್‌ಪೋಸ್ಟ್‌ನಲ್ಲಿ ನಿಲ್ಲಿಸಿ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದರು. "ನನ್ನ ತಂದೆ ಅವರಿಗೆ ತಾನು ಮಾಡುವ ಕೆಲಸವನ್ನು ವಿವರಿಸಿದರು, ವಾದ್ಯವೊಂದನ್ನು ಕೊಡಲು ಇಲ್ಲಿಗೆ ಬಂದಿದ್ದೆ ಎಂದು ಹೇಳಿದರು. ಆದರೆ ಪೊಲೀಸರು ಅವರನ್ನು ಮನೆಗೆ ಹೋಗಲು ಬಿಡಲಿಲ್ಲ,” ಎಂದು ಪೊದಮ್ ಹೇಳುತ್ತಾರೆ.

“ನಿಮಗೆ ಗೊತ್ತಿದೆ, ಪೊಲೀಸರು ನಮ್ಮನ್ನು ನಂಬುವುದಿಲ್ಲ. ಅವರು ನಮ್ಮನ್ನು ಹಸುಗಳನ್ನು ಕೊಲ್ಲಲು ಹೋಗುವವರು ಎಂದು ಭಾವಿಸಿದ್ದರು,” ಎಂದು ಪೊದಮ್ ನೆನಪಿಸಿಕೊಳ್ಳುತ್ತಾರೆ. ಕೊನೆಗೆ ಗಿರಿಪೋದ್ ಪೊಲೀಸರಿಗೆ 5,000 ರುಪಾಯಿ ಕೊಟ್ಟು ಮನೆಗೆ ಹಿಂತುರುಗಿದರು.

ಘುನ್ ಸಾಗಾಟ ಅಪಾಯಕಾರಿ ಕೆಲಸ, ಏಕೆಂದರೆ ಇದನ್ನು ಬಾಂಬ್ ತಯಾರಿಕೆಯಲ್ಲಿಯೂ ಬಳಸುತ್ತಾರೆ. ಗಿರಿಪೋದ್ ಪರವಾನಗಿ ಹೊಂದಿರುವ ಗೋಲಘಾಟ್ ಜಿಲ್ಲೆಯ ದೊಡ್ಡ ಅಂಗಡಿಯೊಂದರಿಂದ ಒಂದೇ ಬಾರಿಗೆ ಒಂದು ಅಥವಾ ಎರಡು ಕೆಜಿ ಖರೀದಿಸುತ್ತಾರೆ. ಹತ್ತಿರದ ಮಾರ್ಗದಲ್ಲಿ ಪ್ರಯಾಣಿಸಿದರೂ ಈ ಅಂಗಡಿಗೆ  ಹೋಗಿ ಬರಲು ಸುಮಾರು 10 ಗಂಟೆಗಳು ಬೇಕು, ದೋಣಿಯ ಮೂಲಕ ಬ್ರಹ್ಮಪುತ್ರ ನದಿಯನ್ನೂ ದಾಟಬೇಕು.

"ಪೊಲೀಸರು ಅದನ್ನು ನೋಡಿದರೆ ಅಥವಾ ನಾವು ಅದನ್ನು ಸಾಗಿಸುವಾಗ ಹಿಡಿದರೆ, ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ," ಎಂದು ಗಿರಿಪೋದ್ ಹೇಳುತ್ತಾರೆ. "ನಾವು ಅದನ್ನು ತಬಲಾ‌ ತಯಾರಿಕೆಯಲ್ಲಿ ಹೇಗೆ ಬಳಸುತ್ತೇವೆ ಎಂಬುದನ್ನು ತೋರಿಸುವ ಮೂಲಕ ಅವರಿಗೆ ಮನವರಿಕೆ ಮಾಡದಿದ್ದರೆ, ನಾವು ಜೈಲಿಗೆ ಹೋಗಬೇಕಾಗುತ್ತದೆ,” ಎಂದು ಅವರು ಹೇಳುತ್ತಾರೆ.

ಈ ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಅಡಿಯಲ್ಲಿ ತಯಾರಿಸಲಾಗಿದೆ.

ಅನುವಾದ: ಚರಣ್‌ ಐವರ್ನಾಡು

Prakash Bhuyan

প্রকাশ ভূঞা অসম-নিবাসী কবি এবং চিত্রগ্রাহক। তিনি ২০২২-২৩ সালে প্রাপ্ত এমএমএফ-পারি ফেলোশিপের অধীনে অসমের মাজুলির শিল্প ও সংস্কৃতি নিয়ে প্রতিবেদন রচনা করছেন।

Other stories by Prakash Bhuyan
Editor : Swadesha Sharma

স্বদেশা শর্মা পিপলস্‌ আর্কাইভ অফ রুরাল ইন্ডিয়ায় গবেষক এবং কন্টেন্ট এডিটর হিসেবে কর্মরত। পারি গ্রন্থাগারের জন্য নানা নথিপত্র সংগ্রহের লক্ষ্যে স্বেচ্ছাকর্মীদের সঙ্গেও কাজ করেন তিনি।

Other stories by Swadesha Sharma
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad