ಅಸ್ಸಾಮಿ ಹಬ್ಬವಾದ ರೊಂಗಲಿ ಬಿಹುವಿನ ಆಸುಪಾಸಿನ ದಿನಗಳಲ್ಲಿ ಈ ಊರಿನಲ್ಲಿ ಮಗ್ಗಗಳ ಲಯಬದ್ಧ ಸದ್ದು ಒಂದಿಷ್ಟು ಹೆಚ್ಚೇ ಕೇಳಿಸುತ್ತಿರುತ್ತದೆ.
ಭೆಲ್ಲಾಪಾರ ಪಕ್ಕದ ಶಾಂತ ಓಣಿಯೊಂದರಲ್ಲಿ ನೇಕಾರರದಾದ ಪಟ್ನಿ ದೇವೂರಿ ತಮ್ಮ ಕೈಮಗ್ಗದ ಕೆಲಸದಲ್ಲಿ ನಿರತರಾಗಿದ್ದರು. ಅವರು ಬಜ್ಜಾರ್ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಎಂಡಿ ಗಮುಸಾ ನೇಯುತ್ತಿದ್ದರು. ಏಪ್ರಿಲ್ ತಿಂಗಳಲ್ಲಿ ನಡೆಯುವ ಅಸ್ಸಾಮಿ ಹೊಸ ವರ್ಷ ಮತ್ತು ಸುಗ್ಗಿಯ ಸಮಯಕ್ಕೆ ಅವರ ಉತ್ಪನ್ನಗಳು ಸಿದ್ಧವಿರಬೇಕು.
ಆದರೆ ಇವು ಯಾವುದೋ ಸಾಮನ್ಯ ಗಮುಸಾ ಉಡುಪಲ್ಲ. ತಾನು ಮಾತ್ರ ನೇಯಬಹುದಾದ ಹೂವಿನ ವಿನ್ಯಾಸಗಳ ಗಮುಸಾಕ್ಕೆ ಈ 58ರ ಹಿರಿಯ ಮಹಿಳೆ ಪ್ರಸಿದ್ಧರು. “ಬಿಹು ಹಬ್ಬಕ್ಕೂ ಮೊದಲು 30 ಗಮುಸಾಗಳನ್ನು ನೇಯ್ದು ಮುಗಿಸಬೇಕಾಗಿದೆ. ಅತಿಥಿಗಳಿಗೆ ಕೊಡುಗೆ ನೀಡುವ ಸಲುವಾಗಿ ಇವುಗಳಿಗೆ ಜನರು ನನಗೆ ಬೇಡಿಕೆ ಸಲ್ಲಿಸಿದ್ದಾರೆ” ಎಂದು ಅವರು ಹೇಳುತ್ತಾರೆ. ಗಮುಸಾ - ಸರಿಸುಮಾರು ಒಂದೂವರೆ ಮೀಟರ್ ಉದ್ದದ ನೇಯ್ದ ಬಟ್ಟೆಯ ತುಂಡು – ಅಸ್ಸಾಮಿ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಹಬ್ಬದ ಸಂದರ್ಭಗಳಲ್ಲಿ ಸ್ಥಳೀಯವಾಗಿ ವಿಶೇಷ ಬೇಡಿಕೆಯಿರುತ್ತದೆ. ಅದರಲ್ಲಿನ ಕೆಂಪು ದಾರಗಳು ಹಬ್ಬಕ್ಕೆ ವಿಶೇಷ ಮೆರುಗನ್ನು ನೀಡುತ್ತವೆ.
“ಹೂವಿನ ವಿನ್ಯಾಸಗಳನ್ನು ಬಟ್ಟೆಯ ಮೇಲೆ ಮೂಡಿಸುವುದು ನನ್ನ ನೆಚ್ಚಿನ ಹವ್ಯಾಸ. ಯಾವ ಹೂವನ್ನು ನೋಡಿದರೂ ನಾನು ಅದನ್ನು ಬಟ್ಟೆಯ ಮೇಲೆ ಮೂಡಿಸಬಲ್ಲೆ. ಯಾವುದೇ ಹೂವನ್ನು ಒಂದು ಬಾರಿ ನೋಡಿದರು ಸಾಕು ನಂತರ ಅದನ್ನು ನಾನು ನೆನಪಿನಿಂದಲೇ ಬಟ್ಟೆಯ ಮೇಲೆ ಮೂಡಿಸಬಲ್ಲೆ” ಎಂದು ದೇವೂರಿ ಹೆಮ್ಮೆಯಿಂದ ನಗುತ್ತಾ ಹೇಳುತ್ತಾರೆ. ಅಸ್ಸಾಂನಲ್ಲಿ ದೇವೂರಿ ಸಮುದಾಯವನ್ನು ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ.
ಅಸ್ಸಾಂನ ಮಜ್ಬತ್ ಉಪವಿಭಾಗದ ಈ ಹಳ್ಳಿಯ ನೇಕಾರರು ರಾಜ್ಯದ 12.69 ಲಕ್ಷ ಕೈಮಗ್ಗ ಕುಟುಂಬಗಳ ಭಾಗವಾಗಿದ್ದು, ಈ ರಾಜ್ಯ 12 ಲಕ್ಷಕ್ಕೂ ಹೆಚ್ಚು ನೇಕಾರರನ್ನು ಹೊಂದಿದೆ – ಇದು ದೇಶದಲ್ಲೇ ಹೆಚ್ಚು . ಕೈಮಗ್ಗ ಉತ್ಪನ್ನಗಳನ್ನು, ವಿಶೇಷವಾಗಿ ರೇಷ್ಮೆಯನ್ನು ನಾಲ್ಕು ವಿಧಗಳಲ್ಲಿ ಉತ್ಪಾದಿಸುವ ದೇಶದ ಅಗ್ರ ರಾಜ್ಯಗಳಲ್ಲಿ ಅಸ್ಸಾಂ ಒಂದಾಗಿದೆ - ಎರಿ, ಮುಗಾ, ಹಿಪ್ಪುನೇರಳೆ ಮತ್ತು ಟಸ್ಸರ್.
ದೇವೂರಿ ನೇಯ್ಗೆಗೆ ಎರಿ (ಹತ್ತಿ ಮತ್ತು ರೇಶ್ಮೆ ಎರಡಕ್ಕೂ ಇದೇ ಪದವನ್ನು ಬಳಸಲಾಗುತ್ತದೆ.) ಯನ್ನು ಬಳಸುತ್ತಾರೆ. ಸ್ಥಳೀಯ ಬೋಡೊ ಭಾಷೆಯಲ್ಲಿ ಇದನ್ನು ʼಎಂಡಿʼ ಎಂದು ಕರೆಯಲಾಗುತ್ತದೆ. “ನಾನು ಚಿಕ್ಕವಳಿದ್ದಾಗ ತಾಯಿಯಿಂದ ಮಗ್ಗದ ಕೆಲಸವನ್ನು ಕಲಿತೆ. ಕೆಲಸ ಕಲಿತ ನಂತರ ನಾನೇ ಸ್ವತಃ ನೇಯಲು ಆರಂಭಿಸಿದೆ. ಅಂದಿನಿಂದ ಈ ಕೆಲಸ ಮಾಡುತ್ತಲೇ ಇದ್ದೇನೆ” ಎಂದು ಈ ಹಿರಿಯ ಕುಶಲಕರ್ಮಿ ಹೇಳುತ್ತಾರೆ. ಅವರು ಗಮುಸಾ ಮತ್ತು ಫುಲಾಮ್ ಗಮುಸಾ (ಎರಡೂ ಬದಿಯಲ್ಲಿ ಹೂವಿನ ಚಿತ್ರವಿರುವ ಅಸ್ಸಾಮಿ ಟವೆಲ್) ಮೆಖೆಲಾ-ಚಾದರ್ (ಎರಡು ತುಂಡುಗಳ ಅಸ್ಸಾಮಿ ಮಹಿಳೆಯರ ಉಡುಪು) ಮತ್ತು ಎಂಡಿ ಚಾದರ್ (ದೊಡ್ಡ ಶಾಲು) ಗಳನ್ನು ನೇಯುತ್ತಾರೆ.
ತಾವು ನೇಯ್ದ ಉಡುಪುಗಳ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಅವರು 1996ರಲ್ಲಿ ಸ್ವಸಹಾಯ ಗುಂಪೊಂದನ್ನು [ಎಸ್‌ಎಚ್‌ಜಿ] ಸ್ಥಾಪಿಸಿದರು. “"ನಾವು ಭೆಲ್ಲಾಪರ್ ಖುದ್ರಸಂಚೋಯ್ [ಸಣ್ಣ ಉಳಿತಾಯ] ಸ್ವಸಹಾಯ ಸಂಘವನ್ನು ಸ್ಥಾಪಿಸಿದ ನಂತರ ನಾನು ನೇಯ್ದಿದ್ದನ್ನು ಸ್ವತಃ ಮಾರಲು ಪ್ರಾರಂಭಿಸಿದೆ” ಎಂದು ಅವರು ತನ್ನ ವ್ಯವಹಾರ ಜ್ಞಾನದ ಕುರಿತು ಹೆಮ್ಮೆಯಿಂದ ಹೇಳಿಕೊಂಡರು.
ಆದರೆ ನೂರು ತರುವುದೇ ತಮ್ಮ ಸುಧಾರಿತ ಗಳಿಕೆಗೆ ಅಡಚಣೆಯಾಗಿದೆ ಎನ್ನುವುದು ದೇವೂರಿಯವರಂತಹ ನೇಕಾರರ ಅಭಿಪ್ರಾಯ. ಈ ನೂಲು ಖರೀದಿಗೆ ಅವರು ಭರಿಸಬಹುದಾದ ಮೊತ್ತಕ್ಕಿಂತಲೂ ಹೆಚ್ಚಿನ ಹಣ ಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಅವರು ಕಮಿಷನ್ ಆಧಾರದ ಮೇಲೆ ನೂಲನ್ನು ವ್ಯಾಪಾರಿಗಳಿಂದ ತರುತ್ತಾರೆ. ಆ ನೂಲಿನಿಂದ ಅವರು ವ್ಯಾಪಾರಿಗಳನ್ನು ಹೇಳಿದ್ದನ್ನು ತಯಾರಿಸಿ ಕೊಡುತ್ತಾರೆ. “ಗಮುಸಾ ತಯಾರಿಸಲು ನಾನು ಕನಿಷ್ಟ ಮೂರು ಕೇಜಿ ನೂಲನ್ನು ಖರೀದಿಸಬೇಕಾಗುತ್ತದೆ. ಒಂದು ಕಿಲೋ ಎಂಡಿಯ ಬೆಲೆ 700 ರೂಪಾಯಿ. ನನ್ನಿಂದ 2,100 ರೂಪಾಯಿಗಳನ್ನು ಭರಿಸಲು ಸಾಧ್ಯವಿಲ್ಲ.” ವ್ಯಾಪಾರಿಗಳು ಅವರಿಗೆ 10 ಗಮುಸಾ ಅಥವಾ ಮೂರು ಸೀರೆಗಳಿಗೆ ಸಾಕಾಗುವಷ್ಟು ನೂಲನ್ನು ಒಂದು ಬಾರಿಗೆ ನೀಡುತ್ತಾರೆ. “ನಾನು ಅದನ್ನು ಬಳಸಿ ನೇಯ್ಗೆ ಆರಂಭಿಸಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮುಗಿಸುತ್ತೇನೆ” ಎಂದು ಅವರು ಹೇಳುತ್ತಾರೆ.
ನೂಲು ಖರೀದಿಸುವುದು ಕಷ್ಟವಾಗಿರುವ ಕಾರಣ ತಾನು ನಿಧಾನವಾಗಿ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಮಾಧೊಬಿ ಚಹಾರಿಯ. ಇವರು ದೇವೂರಿಯವರ ನೆರೆಮನೆಯವರಾಗಿದ್ದು, ಇವರು ತಾನು ನೇಯುವ ಗಮುಸಾಕ್ಕೆ ಬೇಕಾಗುವ ನೂಲು ಖರೀದಿಗಾಗಿ ಇತರರನ್ನು ಅವಲಂಬಿಸಿದ್ದಾರೆ. “ನನ್ನ ಗಂಡ ದಿನಗೂಲಿ ಕಾರ್ಮಿಕ. ಅವರಿಗೆ ಒಮ್ಮೆ ಕೆಲಸ ಸಿಕ್ಕರೆ ಇನ್ನೊಮ್ಮೆ ಸಿಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನೂಲು ಖರೀದಿ ಸಾಧ್ಯವಾಗುವುದಿಲ್ಲ” ಎಂದು ಅವರು ಪರಿಗೆ ತಿಳಿಸಿದರು.
ಅಸ್ಸಾಂ 12.69 ಲಕ್ಷ ಕೈಮಗ್ಗ ಕುಟುಂಬಗಳನ್ನು ಹೊಂದಿದ್ದು ಕೈಮಗ್ಗದ ವಸ್ತುಗಳ ಉತ್ಪಾದನೆಯಲ್ಲಿ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದು
ಮಾಧೊಬಿ ಮತ್ತು ದೇವೂರಿ ಎದುರಿಸುತ್ತಿರುವ ಈ ಪರಿಸ್ಥಿತಿ ರಾಜ್ಯದ ಇತರ ಗುಡಿ ಕೈಗಾರಿಕಾ ನೇಕಾರರ ಸ್ಥಿತಿಯೂ ಹೌದು ಎನ್ನುತ್ತದೆ ಬಡ್ಡಿರಹಿತ ಸಾಲ ಮತ್ತು ಉತ್ತಮ ಸಾಲ ಸೌಲಭ್ಯಗಳನ್ನು ಪ್ರತಿಪಾದಿಸುವ ದಿಬ್ರುಘರ್ ವಿಶ್ವವಿದ್ಯಾಲಯದ 2020ರ ವರದಿ . ಮಹಿಳಾ ನೇಕಾರರ ಸಂಘಟನೆಯ ಕೊರತೆಯು ಅವರನ್ನು ಹೆಚ್ಚಾಗಿ ಸರ್ಕಾರಿ ಯೋಜನೆಗಳು, ಆರೋಗ್ಯ ವಿಮೆ, ಸಾಲ ಮತ್ತು ಮಾರುಕಟ್ಟೆ ಸಂಪರ್ಕಗಳಿಂದ ದೂರವಿರಿಸಿದೆ ಎಂದು ಅದು ಹೇಳಿದೆ.
“ನಾನು ಮೂರು ದಿನಗಳಲ್ಲಿ ನಾನು ಒಂದು ಚಾದರ್ ನೇಯ್ದು ಪೂರ್ಣಗೊಳಿಸಬಲ್ಲೆ" ಎಂದು ದೇವೂರಿ ಹೇಳುತ್ತಾರೆ. ಒಂದು ಮಧ್ಯಮ ಗಾತ್ರದ ಗಮುಸಾ ತಯಾರಿಸಲು ಒಂದಿಡೀ ದಿನವನ್ನು ನೇಯ್ಗೆಯಲ್ಲಿ ಕಳೆಯಬೇಕಾಗುತ್ತದೆ. ಇಂತಹ ಒಂದು ಗಮುಸಾ ನೇಯ್ಗೆಗೆ ದೇವೂರಿ ಅವರಿಗೆ 400 ರೂಪಾಯಿಗಳ ಸಂಬಳ ಕೊಡಲಾಗುತ್ತದೆ. ಮಾರುಕಟ್ಟೆಯಲ್ಲಿ ಅಸ್ಸಾಮಿ ಮೆಖೆಲಾ ಚಾದರ್ ಒಂದರ ಬೆಲೆ 5,000 ರೂಪಾಯಿಗಳಿಂದ ಕೆಲವು ಲಕ್ಷಗಳ ತನಕ ಇರುತ್ತದೆ. ಆದರೆ ದೇವೂರಿಯವರಂತಹ ಕುಶಲಕರ್ಮಿಗಳು ತಿಂಗಳಿಗೆ ಸುಮಾರು 6,000 ರಿಂದ 8,000 ರೂ.ಗಳನ್ನು ಸಂಪಾದಿಸಿದರೆ ಹೆಚ್ಚು.
ನೇಯ್ಗೆಯಿಂದ ಬರುವ ಸಂಪಾದನೆ ಏಳು ಜನರ ಕುಟುಂಬದ ಪೋಷಣೆಗೆ ಸಾಕಾಗುತ್ತಿಲ್ಲ - ಅವರ ಪತಿ 66 ವರ್ಷದ ನಬಿನ್ ದೇವೂರಿ ಮತ್ತು ಇಬ್ಬರು ಮಕ್ಕಳು: 34 ವರ್ಷದ ರಜೋನಿ ಮತ್ತು 26 ವರ್ಷದ ರೂಮಿ ಮತ್ತು ಅವರ ದಿವಂಗತ ಹಿರಿಯ ಮಗನ ಕುಟುಂಬ – ಈ ಕಾರಣಕ್ಕಾಗಿ ಅವರು ಸ್ಥಳೀಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೆಲಸವನ್ನೂ ಮಾಡುತ್ತಾರೆ.
ಅಸ್ಸಾಂ ರಾಜ್ಯದ ನೇಕಾರರ ಸಂಖ್ಯೆಯಲ್ಲಿ ಮಹಿಳೆಯರದೇ (11.79 ಲಕ್ಷ) ಮೇಲುಗೈ ನಾಲ್ಕನೇ ಅಖಿಲ ಭಾರತ ಕೈಮಗ್ಗ ಗಣತಿ (2019-2020) ಹೇಳುತ್ತದೆ. ಈ ಮಹಿಳೆಯರಿಗೆ ಮಗ್ಗದ ಜೊತೆಗೆ ಮನೆ ಕೆಲಸವನ್ನು ಸಹ ಮಾಡಬೇಕಿರುತ್ತದೆ. ಈ ನಡುವೆ ದೇವೂರಿಯವರಂತಹ ಕೆಲವು ನೇಕಾರರು ಇವೆರಡರ ಜೊತೆಗೆ ಬೇರೆ ಕೆಲಸಕ್ಕೂ ಹೋಗುತ್ತಾರೆ.
ಒಂದು ದಿನದಲ್ಲಿ ಅನೇಕ ಕೆಲಸಗಳನ್ನು ಮುಗಿಸಬೇಕಾಗಿರುವುದರಿಂದ, ದೇವೂರಿ ತಮ್ಮ ದಿನವನ್ನು ಬೇಗನೆ ಆರಂಭಿಸುತ್ತಾರೆ - ಮುಂಜಾನೆ 4 ಗಂಟೆಗೆ ಅವರು ಮಗ್ಗದ ಮುಂಭಾಗದ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಾರೆ, ಅದರ ತುಕ್ಕು ಹಿಡಿದ ಕಾಲುಗಳನ್ನು ಸಮತೋಲನಕ್ಕಾಗಿ ಇಟ್ಟಿಗೆಗಳ ಮೇಲೆ ಇರಿಸಲಾಗಿದೆ. "ಬೆಳಗ್ಗೆ 7:30ರಿಂದ 8ರವರೆಗೆ ಕೆಲಸ ಮಾಡಿದ ನಂತರ, ನಾನು ಶಾಲೆಗೆ [ಅಡುಗೆ ಮಾಡಲು] ಹೋಗುತ್ತೇನೆ. ಮಧ್ಯಾಹ್ನ 2-3 ಗಂಟೆಗೆ ಹಿಂದಿರುಗಿ ಒಂದಷ್ಟು ವಿಶ್ರಾಂತಿ ಪಡೆಯುತ್ತೇನೆ. ಸಂಜೆ 4 ಗಂಟೆಯ ಹೊತ್ತಿಗೆ ನಾನು ಮತ್ತೆ ಮಗ್ಗದ ಕೆಲಸ ಪ್ರಾರಂಭಿಸುತ್ತೇನೆ ಮತ್ತು ರಾತ್ರಿ 10-11ರವರೆಗೆ ಮುಂದುವರಿಸುತ್ತೇನೆ" ಎಂದು ಅವರು ಹೇಳುತ್ತಾರೆ.
ಆದರೆ ನೇಯ್ಗೆಯ ಕೆಲಸವಷ್ಟೇ ಇರುವುದಿಲ್ಲ. ದೇವೂರಿ ಅದರ ಜೊತೆಗೆ ಬಹಳಷ್ಟು ಶ್ರಮವನ್ನು ಬೇಡುವ ನೂಲು ಸಿದ್ಧಪಡಿಸುವ ಕೆಲಸವನ್ನು ಸಹ ಮಾಡಬೇಕು. “ನೂಲನ್ನು ನೆನೆಸಿ ಅದನ್ನು ಗಂಜಿಯಲ್ಲಿ ನೆನಸಬೇಕು. ನಂತರ ಅದನ್ನು ಒಣಗಿಸಿ ಎಂಡಿಯನ್ನು ಬಲಪಡಿಸಬೇಕು. ದಾರಗಳನ್ನು ಹರಡಲು ಎರಡು ಬಿದಿರಿನ ಕಂಬಗಳನ್ನು ನೆಟ್ಟಿದ್ದೇನೆ. ದಾರ ಸಿದ್ಧವಾದ ನಂತರ ಅದನ್ನು ರಾ [ವಾರ್ಪ್ ಬೀಮ್/ದಾರವನ್ನು ಸುತ್ತಿಟ್ಟುಕೊಳ್ಳುವ ಮಗ್ಗದ ಭಾಗ] ಗೆ ಸುತ್ತುತ್ತೇನೆ, ಇದಾದ ನಂತರ ವಾರ್ಪ್ ಬೀಮ್ ಉಪಕರಣವನ್ನು ಮಗ್ಗದ ತುದಿಗೆ ತಳ್ಳಬೇಕು. ಇದಾದ ಮೇಲೆ ಮಗ್ಗವನ್ನು ಓಡಿಸಲು ಕೈಕಾಲು ಆಡಿಸಲು ಆರಂಭಿಸಬೇಕು” ಎಂದು ಅವರು ವಿವರಿಸುತ್ತಾರೆ.
ದೇವೂರಿ ಬಳಸುವ ಎರಡೂ ಮಗ್ಗಗಳು ಸಾಂಪ್ರದಾಯಿಕವಾಗಿದ್ದು, ಅವುಗಳನ್ನು ಅವರು ಮೂರು ದಶಕಗಳ ಹಿಂದೆ ಖರೀದಿಸಿದ್ದಾಗಿ ಹೇಳುತ್ತಾರೆ. ಈ ಮಗ್ಗಕ್ಕೆ ಅಡಿಕೆ ಮರದ ಎರಡು ಕಂಬಗಳ ಮೇಲೆ ಮರದ ಚೌಕಟ್ಟುಗಳನ್ನು ಅಳವಡಿಸಲಾಗಿದೆ; ಪೆಡ್ಲರ್ ಗಳನ್ನು ಬಿದಿರಿನಿಂದ ತಯಾರಿಸಲಾಗುತ್ತದೆ. ಸಂಕೀರ್ಣ ವಿನ್ಯಾಸಗಳಿಗಾಗಿ, ಸಾಂಪ್ರದಾಯಿಕ ಮಗ್ಗಗಳನ್ನು ಬಳಸುವ ಹಳೆಯ ನೇಕಾರರು ತೆಂಗಿನ ಗರಿಯ ಮಧ್ಯಭಾಗದೊಂದಿಗೆ ತೆಳುವಾದ ಬಿದಿರಿನ ಪಟ್ಟಿಗಳನ್ನು ಬಳಸುತ್ತಾರೆ. ಯಾವುದೇ ವಿನ್ಯಾಸವನ್ನು ಮಾಡಲು ಅವರು ಆಯ್ದ ಉದ್ದನೆಯ ದಾರದ ಮೂಲಕ ದಾರಗಳನ್ನು ಕೈಯಿಂದ ತೆಗೆದುಕೊಳ್ಳುತ್ತಾರೆ. ಬಟ್ಟೆಯಲ್ಲಿ ಬಣ್ಣದ ದಾರಗಳನ್ನು ನೇಯಲು, ಅವರು ಟ್ರೆಡಲ್ ತಳ್ಳಿದ ನಂತರ ಪ್ರತಿ ಬಾರಿಯೂ ಉದ್ದದ ದಾರಗಳ ಮೂಲಕ ಸೆರಿ (ತೆಳುವಾದ ಬಿದಿರಿನ ಪಟ್ಟಿ) ನೇಯಬೇಕಾಗುತ್ತದೆ. ಇದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ ಮತ್ತು ಕೆಲಸವನ್ನು ನಿಧಾನಗೊಳಿಸುತ್ತದೆ.
2017-2018 ರಲ್ಲಿ ಅಂಗೀಕರಿಸಲಾದ ಅಸ್ಸಾಂ ಸರ್ಕಾರದ ಕೈಮಗ್ಗ ನೀತಿಯು ಮಗ್ಗಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನೂಲನ್ನು ಕೈಗೆಟುಕುವಂತೆ ಮಾಡುವ ಅಗತ್ಯವಿದೆ ಎಂದು ಗುರುತಿಸಿದರೂ, ಇದುವರೆಗೆ ಯಾವುದೇ ಹಣಕಾಸಿನ ಬೆಂಬಲ ಸಿಕ್ಕಿಲ್ಲ ಎಂದು ದೇವೂರಿ ಹೇಳುತ್ತಾರೆ. “ನನಗೆ ಕೈಮಗ್ಗ ಇಲಾಖೆಯೊಂದಿಗೆ ಯಾವುದೇ ಸಂಪರ್ಕವಿಲ್ಲ. ಈ ಮಗ್ಗಗಳು ಹಳೆಯವು ಮತ್ತು ನಾನು ಇಲಾಖೆಯಿಂದ ಯಾವುದೇ ಪ್ರಯೋಜನಗಳನ್ನು ಪಡೆದಿಲ್ಲ.”
ನೇಯ್ಗೆಯನ್ನು ಜೀವನೋಪಾಯದ ದಾರಿಯಾಗಿ ಉಳಿಸಿಕೊಳ್ಳಲು ಸಾಧ್ಯವಾಗದೆ, ಉದಲ್ಗುರಿ ಜಿಲ್ಲೆಯ ಹಾತಿಘರ್ ಗ್ರಾಮದ ತಾರು ಬರುವಾ ಈ ಕರಕುಶಲತೆಯನ್ನು ತೊರೆದಿದ್ದಾರೆ. "ನಾನು ನೇಯ್ಗೆಯಲ್ಲಿ ಪರಿಣಿತನಾಗಿದ್ದೆ. ಜನರು ಮೆಖೆಲಾ ಚಾದರ್ ಮತ್ತು ಗಮುಸಾ ಹುಡುಕಿಕೊಂಡು ನನ್ನ ಬಳಿಗೆ ಬರುತ್ತಿದ್ದರು. ಆದರೆ ವಿದ್ಯುತ್ ಮಗ್ಗಗಳು ಮತ್ತು ಆನ್ ಲೈನಿನಲ್ಲಿ ಸಿಗುತ್ತಿರುವ ಅಗ್ಗದ ಉತ್ಪನ್ನಗಳ ಸ್ಪರ್ಧೆಯಿಂದಾಗಿ, ನಾನು ನೇಯ್ಗೆ ಮಾಡುವುದನ್ನು ನಿಲ್ಲಿಸಿದೆ" ಎಂದು 51 ವರ್ಷದ ತಾರು ಹೇಳುತ್ತಾರೆ, ಅವರು ರೇಷ್ಮೆ ಹುಳುಗಳಿಲ್ಲದ ತನ್ನ ಪಾಳುಬಿದ್ದ ಎರಿ ಗೂಡಿನ ಪಕ್ಕದಲ್ಲಿ ನಿಂತು ನಮ್ಮೊಂದಿಗೆ ಮಾತನಾಡುತ್ತಿದ್ದರು.
“ಜನರು ಈಗ ಕೈಮಗ್ಗದ ಬಟ್ಟೆಗಳನ್ನು ಧರಿಸುತ್ತಿಲ್ಲ. ಅವರು ಹೆಚ್ಚಾಗಿ ವಿದ್ಯುತ್ ಮಗ್ಗಗಳಿಂದ ತಯಾರಿಸಿದ ಅಗ್ಗದ ಬಟ್ಟೆಗಳನ್ನು ಖರೀದಿಸಿ ಧರಿಸುತ್ತಾರೆ. ಆದರೆ ನಾನು ಮನೆಯಲ್ಲಿ ತಯಾರಿಸಿದ ನೈಸರ್ಗಿಕ ಬಟ್ಟೆಯ ಬಟ್ಟೆಗಳನ್ನು ಮಾತ್ರ ಧರಿಸುತ್ತೇನೆ ಮತ್ತು ನಾನು ಬದುಕಿರುವವರೆಗೂ ನೇಯ್ಗೆಯನ್ನು ಮುಂದುವರಿಸುತ್ತೇನೆ" ಎನ್ನುತ್ತಾ ದೇವೂರಿ ಮಗ್ಗದ ಪೆಡಲನ್ನು ನೂಕಿ ಮಗ್ಗದ ಮಾಕು (ಶಟಲ್) ಚಲಿಸುವಂತೆ ಮಾಡಿದರು. ಅವರು ಅಸ್ಸಾಮಿ ಟವೆಲ್ ಒಂದರ ಮೇಲೆ ಹೂವಿನ ಚಿತ್ರವನ್ನು ಮೂಡಿಸುವಲ್ಲಿ ನಿರತರಾಗಿದ್ದರು.
ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಸಹಾಯ ದೊರೆತಿರುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು