“ನನಗೆ ಈಗಷ್ಟೇ ಮಡಿವಾಳ ಹಕ್ಕಿಯ ಕೂಗು ಕೇಳಿಸಿತು.”
ಮೀಕಾ ರೈ ಉತ್ಸಾಹದಲ್ಲಿದ್ದರು. ಅವರು ಅವುಗಳ ಕೂಗನ್ನು ಸುಮಧುರ ಚಿಲಿಪಿಲಿಯ ಸರಣಿ ಎಂದು ಕರೆಯುತ್ತಾರೆ.
ಆದರೆ ಅವರ ಉತ್ಸಾಹದಲ್ಲಿ ಈ ಸಣ್ಣ ಕಪ್ಪು, ಬಿಳಿ ಮತ್ತು ಹಳದಿ ರೆಕ್ಕೆಗಳ ಹಕ್ಕಿಗಳ ಕುರಿತು ಚಿಂತೆಯ ಗೆರೆಯೂ ಇತ್ತು. “ಸಾಮಾನ್ಯವಾಗಿ ಇವು ಕೆಳ ಹಂತದಲ್ಲಿ ಕಂಡುಬರುತ್ತಿದ್ದವು [900 ಮೀಟರ್], ಆದರೆ ಇತ್ತೀಚೆ ಅವುಗಳ ಸದ್ದನ್ನು ನಾನು ಇಲ್ಲಿ [2,000 ಮೀಟರ್ ಎತ್ತರದಲ್ಲಿ] ಕೇಳುತ್ತಿದ್ದೇನೆ” ಎಂದು ಅರುಣಾಚಲ ಪ್ರದೇಶದ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯದಲ್ಲಿ ಕಳೆದ ದಶಕದಿಂದ ಪಕ್ಷಿಗಳನ್ನು ಗಮನಿಸುತ್ತಿರುವ 30 ವರ್ಷದ ಕ್ಷೇತ್ರ ಸಿಬ್ಬಂದಿಯಾದ ಅವರು ಹೇಳುತ್ತಾರೆ.
ಸ್ಥಳೀಯರಾದ ಮೀಕಾ ಅವರು ಕಳೆದ 10 ವರ್ಷಗಳಿಂದ ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಉಷ್ಣವಲಯದ ಮಾಂಟೆನ್ (ಪರ್ವತ) ಕಾಡುಗಳಲ್ಲಿ ಪಕ್ಷಿ ಪ್ರಭೇದಗಳನ್ನು ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು, ಸಂಶೋಧಕರು ಮತ್ತು ಕ್ಷೇತ್ರ ಸಿಬ್ಬಂದಿಯ ತಂಡದ ಭಾಗವಾಗಿದ್ದಾರೆ.
ಬಾಲದ ಮೇಲೆ ಬಿಳಿ ಗೆರೆಗಳನ್ನು ಹೊಂದಿರುವ ಗಾಢ ನೀಲಿ ಮತ್ತು ಕಪ್ಪು ಬಣ್ಣದ ಹಕ್ಕಿಯನ್ನು ಹಿಡಿದಿರುವ ಡಾ.ಉಮೇಶ್ ಶ್ರೀನಿವಾಸನ್, "ಇದು ಬಿಳಿ ಬಾಲದ ರಾಬಿನ್. ಇದರ ಗರಿಷ್ಠ ಮಿತಿ 1,800 ಮೀಟರ್ ಆಗಿತ್ತು, ಆದರೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇದು 2,000 ಮೀಟರ್ ಎತ್ತರದಲ್ಲಿ ಕಂಡುಬಂದಿದೆ” ಎನ್ನುತ್ತಾರೆ
ಪಕ್ಷಿವಿಜ್ಞಾನಿಯಾಗಿರುವ ಶ್ರೀನಿವಾಸನ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಅರುಣಾಚಲ ಪ್ರದೇಶದಲ್ಲಿ ಕೆಲಸ ಮಾಡುವ ತಂಡದ ಮುಖ್ಯಸ್ಥರಾಗಿದ್ದಾರೆ. "ಕಳೆದ 12 ವರ್ಷಗಳಿಂದ, ಪೂರ್ವ ಹಿಮಾಲಯದಲ್ಲಿನ ಪಕ್ಷಿ ಪ್ರಭೇದಗಳು ತಮ್ಮ ವ್ಯಾಪ್ತಿಯನ್ನು ಬದಲಾಯಿಸುತ್ತಿವೆ" ಎಂದು ಶ್ರೀನಿವಾಸನ್ ಹೇಳುತ್ತಾರೆ.
ಈ ತಂಡದಲ್ಲಿ ಸ್ಥಳೀಯರ ಭಾಗವಹಿಸುವಿಕೆಯು ಹವಾಮಾನ ವೈಪರೀತ್ಯದ ಕುರಿತು ಯೋಚಿಸುವಂತೆ ಹುರಿದುಂಬಿಸಿದೆ. ಅವರು ಈಗ ಈ ತಾಪಮಾನ ಬದಲಾವಣೆಯನ್ನು ತಗ್ಗಿಸುವ ಮಾರ್ಗವನ್ನು ಹುಡುಕತೊಡಗಿದ್ದಾರೆ. (ಈಕುರಿತು ಇನ್ನಷ್ಟು ವಿವರಗಳನ್ನು ಈ ವರದಿಯ ಮುಂದಿನ ಭಾಗದಲ್ಲಿ ನೀಡಲಿದ್ದೇವೆ)
ಪಶ್ಚಿಮ ಕಾಮೆಂಗ್ ಪ್ರದೇಶದ ಈ ತಂಡದಲ್ಲಿ ಆರು ಜನರಿದ್ದಾರೆ. ತಂಡದಲ್ಲಿನ ಸ್ಥಳೀಯರು ಮತ್ತು ವಿಜ್ಞಾನಿಗಳಿಬ್ಬರೂ ಆವಾಸಸ್ಥಾನದ ಅವನತಿ ಮತ್ತು ಹೆಚ್ಚುತ್ತಿರುವ ತಾಪಮಾನವು ಪಕ್ಷಿಗಳ ನಡವಳಿಕೆಯನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಳ ಹಂತದಲ್ಲಿ ಬದುಕುವ ಇತರ ಹಕ್ಕಿಗಳಾದ ಹಸಿರು ಮಡಿವಾಳ ಹಕ್ಕಿ, ಉದ್ದ ಬಾಲದ ಬ್ರೋಡ್ ಬಿಲ್ ಮತ್ತು ಸುಲ್ತಾನ್ ಟಿಟ್ಸ್ ಹಕ್ಕಿಗಳು ಕೂಡಾ ಎತ್ತರದ ಪ್ರದೇಶಗಳಿಗೆ ತಮ್ಮ ಆವಾಸ ಸ್ಥಾನವನ್ನು ಬದಲಾಯಿಸುತ್ತಿವೆ. ಇದು ಅವುಗಳ ಉಳಿವಿನ ಸರಾಸರಿಯ ಮೇಲೂ ಪರಿಣಾಮ ಬೀರುತ್ತಿದೆ.
"ಇದು ವಲಸೆಯಲ್ಲ" ಎಂದು ಪಕ್ಷಿಶಾಸ್ತ್ರಜ್ಞರು ಎಚ್ಚರಿಸುತ್ತಾರೆ. "ಇದು ಹೆಚ್ಚುತ್ತಿರುವ ತಾಪಮಾನಕ್ಕೆ ಪ್ರತಿಕ್ರಿಯೆಯಾಗಿದ್ದು, ಅದು ಈ ಪಕ್ಷಿಗಳನ್ನು ಮೇಲಕ್ಕೆ ಚಲಿಸುವಂತೆ ಒತ್ತಾಯಿಸುತ್ತಿದೆ." ಸದಾ ಮೋಡ ಕವಿದಂತಿರುವ ಈ ಕಾಡಿನಲ್ಲಿ ತಾಪಮಾನ ಹೆಚ್ಚುತ್ತಿರುವುದು ಕೇವಲ ಹಕ್ಕಿಗಳ ಅನುಭವಕ್ಕಷ್ಟೇ ಬಂದಿಲ್ಲ. “ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಟ್ಟಗಳಲ್ಲಿ ಸೆಕೆ ಹೆಚ್ಚಾಗಿದೆ” ಎಂದು ಐತಿ ಥಾಪಾ ಹೇಳುತ್ತಾರೆ.
ಈ ತಂಡಕ್ಕೆ ಹೊಸದಾಗಿ ಸೇರ್ಪಡೆಯಾದವರಲ್ಲಿ ಒಬ್ಬರಾದ 20 ವರ್ಷದ ಯುವಕ, ಪಶ್ಚಿಮ ಕಾಮೆಂಗ್ ಜಿಲ್ಲೆಯ ಸಿಂಗ್ಚುಂಗ್ ತಹಸಿಲ್ ಬಳಿಯ ರಾಮಲಿಂಗಂ ಗ್ರಾಮದವರು. ಅವರ ಕುಟುಂಬವು ರಾಮಲಿಂಗಂನಲ್ಲಿ ಟೊಮೆಟೊ, ಎಲೆಕೋಸು ಮತ್ತು ಬಟಾಣಿಗಳನ್ನು ಬೆಳೆಯುತ್ತದೆ. "ಮಳೆಯ ಮಾದರಿಗಳು ಸಹ ಅನಿರೀಕ್ಷಿತವಾಗಿರುವುದರಿಂದ ಈ ಬೆಳೆಗಳನ್ನು ಬೆಳೆಯುವುದು ಈಗ ಕಷ್ಟವಾಗುತ್ತಿದೆ. ಈಗ ಇಲ್ಲಿನ ವಾತಾವರಣ ಮೊದಲಿನಂತಿಲ್ಲ" ಎಂದು ಅವರು ಹೇಳುತ್ತಾರೆ.
ಹಿಮಾಲಯದ ವಾರ್ಷಿಕ ಸರಾಸರಿ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಹಿಮಾಲಯದಲ್ಲಿ ವ್ಯಾಪಕ ಹವಾಮಾನ ಬದಲಾವಣೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳಲ್ಲಿನ ಸಂಬಂಧಿತ ಬದಲಾವಣೆಗಳು ಎನ್ನುವ ಈ ಪ್ರಬಂಧವು ಹೇಳುತ್ತದೆ. "ಹಿಮಾಲಯದಲ್ಲಿ ತಾಪಮಾನ ಏರಿಕೆಯ ಪ್ರಮಾಣವು ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ, ಇದು ಹಿಮಾಲಯವು ಹವಾಮಾನ ಬದಲಾವಣೆಗೆ ಹೆಚ್ಚು ಗುರಿಯಾಗುತ್ತಿರುವ ಪ್ರದೇಶಗಳಲ್ಲಿ ಒಂದಾಗಿದೆ ಎಂದು ದೃಢಪಡಿಸುತ್ತದೆ." ಈ ಪರ್ವತಗಳು ವಿಶ್ವದ 85 ಪ್ರತಿಶತದಷ್ಟು ಭೂ ಜೀವವೈವಿಧ್ಯತೆಗೆ ನೆಲೆಯಾಗಿದೆ, ಹೀಗಾಗಿ ಇಲ್ಲಿನ ಸಂರಕ್ಷಣಾ ಕಾರ್ಯವು ನಿರ್ಣಾಯಕವಾಗಿದೆ.
ಪಕ್ಷಿಗಳು, ತುಲನಾತ್ಮಕವಾಗಿ ಚಲಿಸುವ ಗುಂಪಾಗಿರುವುದರಿಂದ, ಹವಾಮಾನ ಬದಲಾವಣೆಯು ಇತರ ಉಷ್ಣವಲಯದ ಮಲೆನಾಡಿನ ಜೀವವೈವಿಧ್ಯತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸೂಚಕವಾಗಿ ತೋರಿಸುತ್ತದೆ
“ಜಾಗತಿಕವಾಗಿ ಮನುಷ್ಯರ ಚಟುವಟಿಕೆಯಿಂದ ಅತಿ ಹೆಚ್ಚು ಹಾನಿಗೊಂಡಿರುವುದು ಹಿಮಾಲಯ” ಎನ್ನುತ್ತಾರೆ ಉಮೇಶ್. ಅವರು ಹೊರಾಂಗಣ ಪ್ರಯೋಗಾಲಯವನ್ನು ಹೊಂದಿದ್ದಾರೆ. ಈ ಪ್ರಯೋಗಾಲಯವು ಅರುಣಾಚಲ ಪ್ರದೇಶದ 218 ಚದರ ಕಿಲೋಮೀಟರ್ ಪ್ರದೇಶವನ್ನು ವ್ಯಾಪಿಸಿರುವ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯದ ರಾಷ್ಟ್ರೀಯ ಉದ್ಯಾನದ ಬೊಂಗ್ಪು ಬ್ಲಾಂಗ್ಸಾದಲ್ಲಿನ ಕ್ಯಾಂಪ್ ಸೈಟಿನಲ್ಲಿದೆ.
ಈ ಅಭಯಾರಣ್ಯದ ಎತ್ತರವು 500 ಮೀಟರ್ ಗಳಿಂದ 3,250 ಮೀಟರ್ ತನಕ ಇರುತ್ತದೆ. ಜಗತ್ತಿನ ಅತಿ ಎತ್ತರದ ಆನೆಗಳ ಆವಾಸ ಸ್ಥಾನಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ಕಂಡುಬರುವ ಇತರ ಪ್ರಾಣಿಗಳೆಂದರೆ ಚಿರತೆಗಳು (clouded leopards), ಮಾರ್ಬಲ್ಡ್ ಕ್ಯಾಟ್ಸ್, ಏಷ್ಯನ್ ಗೋಲ್ಡನ್ ಕ್ಯಾಟ್ಸ್ ಮತ್ತು ಲೆಪಾರ್ಡ್ ಕ್ಯಾಟ್ಸ್. ಅಳಿವಿನಂಚಿನಲ್ಲಿರುವ ಲಂಗೂರ್, ಕೆಂಪು ಪಾಂಡಾ, ಏಷ್ಯಾಟಿಕ್ ಕಪ್ಪು ಕರಡಿ ಮತ್ತು ದುರ್ಬಲ ಅರುಣಾಚಲ ಕೋತಿ ಮತ್ತು ಗೌರ್ ಸಹ ಈ ಕಾಡುಗಳನ್ನು ತಮ್ಮ ಮನೆಯನ್ನಾಗಿಸಿಕೊಂಡಿವೆ.
ಇಪ್ಪತ್ತರ ಆಸುಪಾಸಿನಲ್ಲಿರು ಇಬ್ಬರು ಯುವತಿಯರಾದ ಐತಿ ಮತ್ತು ದೇಮಾ ತಮಾಂಗ್ ರಾಮಲಿಂಗಂ ಗ್ರಾಮದವರು ಮತ್ತು ಹಕ್ಕಿಗಳ ವಿವರ ದಾಖಲಿಸುವ ಮತ್ತು ಅವುಗಳ ಕುರಿತು ಅಧ್ಯಯನದಲ್ಲಿ ತೊಡಗಿಕೊಂಡಿರುವ ರಾಜ್ಯದ ಮೊದಲ ಮಹಿಳೆಯರು. ಮೊದಲಿಗೆ ಹೆಣ್ಣು ಮಕ್ಕಳಿಗೆ ಇಂತಹ ಕೆಲಸ ಸಿಕ್ಕಾಗ ಅವರನ್ನು ಕಳುಹಿಸಲು ಮನೆಯಲ್ಲಿನ ಹಿರಿಯರು ಹಿಂಜರಿಯುತ್ತಿದ್ದರು. “ನೀವೇಕೆ ಹೆಣ್ಣು ಮಕ್ಕಳನ್ನು ಕಾಡಿಗೆ ಕರೆದೊಯ್ಯಲು ಬಯಸುತ್ತೀರಿ? ಇವು ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿದ ಕೆಲಸವಲ್ಲ” ಎಂದು ಅವರು ಹೇಳುತ್ತಿದ್ದರು.
“ಈಗ ಮೊದಲಿನಂತಿಲ್ಲ ಕಾಲ ಬದಲಾಗಿದೆ, ಗಂಡು ಮಕ್ಕಳು ಮಾಡುವ ಕೆಲಸವನ್ನು ಹೆಣ್ಣುಮಕ್ಕಳು ಕೂಡಾ ಮಾಡಬಹುದು ಎಂದು ನಾನು ಹೇಳಿದೆ” ಎನ್ನುತ್ತಾರೆ ರಾಮಲಿಂಗಂ ಗ್ರಾಮಕ್ಕೆ ಸೇರಿದವರಾದ ಮೀಕಾ. ಇವರಿಗೆ ಈ ಪ್ರದೇಶವಲ್ಲದೆ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡದ ಕಾಡುಗಳಲ್ಲಿಯೂ ಹಕ್ಕಿ ದಾಖಲೀಕರಣ ಕೆಲಸ ಮಾಡಿದ ಅನುಭವವಿದೆ.
ಐತಿಯವರಂತಹ ಕ್ಷೇತ್ರ ಕಾರ್ಯ ಮಾಡುವ ಸಿಬ್ಬಂದಿ ತಿಂಗಳಿಗೆ 18,000 ರೂ.ಗಳನ್ನು ಸಂಪಾದಿಸುತ್ತಾರೆ. ಇವರಲ್ಲಿ ಹೆಚ್ಚಿನವರು ಗೇಣಿದಾರ ರೈತ ಕುಟುಂಬದ ಹಿನ್ನೆಲೆಯವರಾಗಿದ್ದು ಈ ಸಂಬಳ ಅವರ ಕುಟುಂಬ ಪೋಷಣೆಗೆ ಸಹಾಯ ಮಾಡುತ್ತದೆ.
ಬಹಳಷ್ಟು ಶ್ರಮವನ್ನು ಬೇಡುವ ಅವರ ಸಂಶೋಧನಾ ಕಾರ್ಯಗಳ ಹೊರತಾಗಿಯೂ “ಹಕ್ಕಿಗಳ ಇಂಗ್ಲಿಷ್ ಹೆಸರುಗಳನ್ನು ಕಲಿಯುವುದೇ ಬಹಳ ಕಷ್ಟವಾಗಿತ್ತು” ಎಂದು ಐತಿ ನಗುತ್ತಾ ಹೇಳುತ್ತಾರೆ.
*****
19ನೇ ಶತಮಾನದಲ್ಲಿ ಕಲ್ಲಿದ್ದಲು ಗಣಿ ಕೆಲಸಗಾರರು ಕ್ಯಾನರಿ ಹಕ್ಕಿಗಳನ್ನು ಅಪಾಯ ಕಂಡು ಹಿಡಿಯುವ ಸಲುವಾಗಿ ಬಳಸುತ್ತಿದ್ದರು. ಈ ಸಣ್ಣ ಸೂಕ್ಷ್ಮ ಹಕ್ಕಿಗಳು ವಿಶೇಷವಾಗಿ ಇಂಗಾಲದ ಮಾನಾಕ್ಸೈಡ್ ಸಹಿಸಲಾರವು. ಅದರ ತೀವ್ರತೆಗೆ ಇವು ಸತ್ತೇ ಹೋಗುತ್ತವೆ. ಈ ಹಕ್ಕಿಗಳನ್ನು ಗಣಿಗಳ ಒಳಗೆ ಪ್ರವೇಶಿಸುವ ಮೊದಲು ಗಣಿಗೆ ಇಳಿಸಿ ಪರೀಕ್ಷಿಸಲಾಗುತ್ತಿತ್ತು. ಅವು ಸತ್ತರೆ ಅವರು ಅದರೊಳಗೆ ಇಳಿಯುತ್ತಿರಲಿಲ. ಇದರಿಂದಲೇ ಅಮಾಯಕರ ಬಲಿಯನ್ನು ಸೂಚಿಸಲು ʼಅವರು ಕಲ್ಲಿದ್ದಲು ಗಣಿಯ ಕ್ಯಾನರಿ ಆದರುʼ ಎನ್ನುವ ನುಡಿಗಟ್ಟು ಬಹಳ ಹೆಸರುವಾಸಿ.
ಪಕ್ಷಿಗಳು, ತುಲನಾತ್ಮಕವಾಗಿ ಚಲಿಸುವ ಗುಂಪಾಗಿರುವುದರಿಂದ, ಹವಾಮಾನ ಬದಲಾವಣೆಯು ಇತರ ಉಷ್ಣವಲಯದ ಮಲೆನಾಡಿನ ಜೀವವೈವಿಧ್ಯತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸೂಚಕವಾಗಿ ತೋರಿಸುತ್ತದೆ.
ಈಗಲ್ ನೆಸ್ಟ್ ಉದ್ಯಾನವು 600 ಜಾತಿಯ ಹಕ್ಕಿಗಳ ನೆಲೆಯಾಗಿದೆ. “ಇಲ್ಲಿ ಒಂದು ಚಮಚೆ ಸಕ್ಕರೆಗಿಂತಲೂ ಕಡಿಮೆ ತೂಕವಿರುವ ಅಥವಾ 10 ಗ್ರಾಂಗಿಂತಲೂ ಕಡಿಮೆ ತೂಕವಿರುವ ಹಕ್ಕಿಗಳನ್ನು ನೋಡಬಹುದು” ಎನ್ನುತ್ತಾರೆ ಉಮೇಶ್. ಹಲವು ಅಪರೂಪದ ಹಕ್ಕಿಗಳೂ ಈ ಕಾಡನ್ನು ತಮ್ಮ ಮನೆಯನ್ನಾಗಿಸಿಕೊಂಡಿವೆ. ಇಲ್ಲಿ ಮರಗುಬ್ಬಿ, ಆಳಿವಿನಂಚಿನಲ್ಲಿರುವ ಸುಂದರ Bugun Liocichla ಸೇರಿದಂತೆ ಹಲವು ಹಕ್ಕಿಗಳು ಇಲ್ಲಿ ಗೂಡು ಕಟ್ಟುತ್ತವೆ.
ಈ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡುಬರುವ ಪಕ್ಷಿಗಳು ಸವಾಲಿನ ಜೀವನ ಪರಿಸ್ಥಿತಿಗಳು, ಕಠಿಣ ಹವಾಮಾನ ಮತ್ತು ಒರಟು ನೆಲದ ಹೊರತಾಗಿಯೂ ಜಗತ್ತಿನೆಲ್ಲೆಡೆಯ ಹಕ್ಕಿ ವೀಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರುನ್ನು ಸೆಳೆಯುತ್ತವೆ.
ಸಂಶೋಧನಾ ತಂಡವು ಆಳ ಕಾಡಿನಲ್ಲಿ ಹರಿಯುವ ನೀರು, ವಿದ್ಯುತ್ ಸರಬರಾಜು ಇಲ್ಲದ, ಸರಿಯಾದ ಛಾವಣಿಯ ವ್ಯವಸ್ಥೆಯೂ ಇಲ್ಲದ ಒಂದು ಕೋಣೆಯ ಕಟ್ಟಡದಲ್ಲಿ ವಾಸಿಸುತ್ತಿದೆ. ಬೊಂಗ್ಪು ಬ್ಲಾಂಗ್ಸಾದಲ್ಲಿನ ಈ ಶಿಬಿರದಲ್ಲಿ ಎಲ್ಲಾ ಕೆಲಸಗಳನ್ನು ಹಂಚಿಕೊಳ್ಳಲಾಗಿದೆ. ಅವುಗಳಲ್ಲಿ ಅಡುಗೆ, ಪಾತ್ರೆ ತೊಳೆಯುವುದು, ಹತ್ತಿರದ ಹೊಳೆಯಿಂದ ನೀರು ತರುವುದು ಇವೆಲ್ಲವೂ ಸೇರಿವೆ. ಸ್ಥಳೀಯ ಸಿಬ್ಬಂದಿಗಳು ಇಲ್ಲಿಂದ ಎರಡು ಗಂಟೆಗಳ ಪ್ರಯಾಣದ ರಾಮಲಿಂಗಂ ಎನ್ನುವ ಊರಿನವರಾದರೆ, ಸಂಶೋಧಕರು ದೇಶದ ಇತರ ಭಾಗಗಳಿಗೆ ಸೇರಿದವರು.
ಅಂದು ಅಡುಗೆ ಮಾಡುವ ಸರದಿ ಐತಿಯವರದಾಗಿತ್ತು. ಅವರು ಕಟ್ಟಿಗೆ ಒಲೆಯ ಮೇಲಿದ್ದ ದೊಡ್ಡ ಪಾತ್ರೆಯೊಂದರಲ್ಲಿ ಬೇಳೆ ಬೇಯಿಸುತ್ತಿದ್ದರು. “ನನ್ನ ಕೆಲಸವು ಈ ಜನರಿಗೆ ಇಲ್ಲಿನ ಪ್ರಾಣಿಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆಯೆನ್ನುವುದು ನನಗೆ ಸಂತೋಷ ಕೊಡುವ ವಿಷಯ” ಎಂದು ಅವರು ಹೇಳುತ್ತಾರೆ. ಐತಿ ಕಳೆದ ಎರಡು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ತಂಡವು ಪ್ರತಿ ರಾತ್ರಿ ಒಂದು ಸಣ್ಣ ಆಟವನ್ನು ಆಡುತ್ತದೆ. ಇಷ್ಟು ವರ್ಷಗಳಲ್ಲಿ ಹಿಡಿದ ಹಕ್ಕಿಗಳಲ್ಲಿ ಯಾವ ಹಕ್ಕಿ ನಾಳೆ ಬೆಳಗ್ಗೆ ಸಿಗಬಹದು ಎನ್ನುವ ಕುರಿತು ಪಂದ್ಯ ಕಟ್ಟಲಾಗುತತದೆ. ಅಂದೂ ಎಲ್ಲರೂ ಭಾಗವಹಿಸಿದ್ದರು. ಸ್ವಲ್ಪ ಹೊತ್ತಿನಲ್ಲೇ ಮಳೆ ಬಂದ ಕಾರಣ ಎಲ್ಲರೂ ತಮ್ಮ ತಲೇ ಮೇಲಿ ಪ್ಲಾಸ್ಟಿಕ್ ಹಾಳೆಯತ್ತ ತಲೆಯೆತ್ತಿ ನೋಡಿದರು. ಅವರ ತಲೆಗೆ ಕಟ್ಟಿಕೊಂಡಿದ್ದ ಹೆಡ್ ಲೈಟಿನ ಬೆಳಕು ಅದರ ಮೇಲೆ ಅಲೆದಾಡುತ್ತಿತ್ತು.
“ನಾಳೆ ಬೆಳಗ್ಗೆ ಬಲೆಯಲ್ಲಿ ಯಾವ ಹಕ್ಕಿ ಮೊದಲು ಸಿಗುತ್ತದೆ?” ಐತಿ ಸುತ್ತಲಿದ್ದವರ ಬಳಿ ಕೇಳಿದರು.
“ಬಹುಶ ಹಳದಿ ಎದೆಯ ಹರಟೆಮಲ್ಲ ಹಕ್ಕಿ ಸಿಗಬಹುದು” ಎಂದು ಆಕೆ ಆತ್ಮವಿಶ್ವಾಸದಿಂದ ನುಡಿದರು.
ಮೀಕಾ “ಬಿಳಿ ಕಣ್ಣಿನ ವಾರ್ಬ್ಲರ್” ಎಂದು ಕೂಗಿದರು. ಆಗ ದಂಬರ್ ಅದನ್ನು ಅಲ್ಲಗಳೆಯುತ್ತಾ ದೃಢವಾದ ದನಿಯಲ್ಲಿ, “ಹಳದಿ ಕತ್ತಿನ ಫುಲ್ವೆಟ್ಟ” ಎಂದರು.
ಮೀಕಾ ಮತ್ತು ದಂಬರ್ ಹೆಚ್ಚು ಅನುಭವ ಹೊಂದಿದ್ದಾರೆ. ಅವರು ಉಮೇಶ್ ಅವರಿಂದ ಮೊದಲು ನೇಮಕಗೊಂಡವರು. ಇಬ್ಬರೂ ಇಪ್ಪತ್ತು-ಇಪ್ಪತೈದು ವರ್ಷದ ಒಳಗಿನವರು. ಇಬ್ಬರೂ ರಾಮಲಿಂಗಪುರದ ಸ್ಥಳೀಯ ಶಾಲೆಯಲ್ಲಿ ಓದಿದ್ದಾರೆ. ದಂಬರ್ 11ನೇ ತರಗತಿಯವರೆಗೆ ಓದಿದ್ದರೆ, ಮೀಕಾ 5ನೇ ಕ್ಲಾಸಿಗೆ ಓದು ನಿಲ್ಲಿಸಿದರು. “ನಾನು ಓದಿನ ಕಡೆ ಹೆಚ್ಚು ಗಮನ ಕೊಡಲಿಲ್ಲ” ಎಂದು ವಿಷಾದದಿಂದ ಹೇಳುತ್ತಾರವರು.
ಹಕ್ಕಿಗಳನ್ನು ಸೆರೆಹಿಡಿಯುವುದು ಮತ್ತು ಅಗತ್ಯ ವಿವರಗಳನ್ನು ದಾಖಲಿಸಲು ಬೆಳಗಿನ ಹೊತ್ತು ಉತ್ತಮವಾದ್ದರಿಂದ ಅವರೆಲ್ಲ ಬೇಗನೆ ಮಲಗಿದರು. “ಸ್ಯಾಂಪ್ಲಿಂಗ್ ಪ್ಲಾಟ್ಸ್ ಎಲ್ಲಿದೆಯೆನ್ನುವುದನ್ನು ಅವಲಂಬಿಸಿ ಒಮ್ಮೊಮ್ಮೆ ನಾವು ಬೆಳಗಿನ ಜಾವ 3:30ಕ್ಕೆಲ್ಲ ಎದ್ದೇಳುತ್ತೇವೆ” ಎನ್ನುತ್ತಾರೆ ಕಳಿಂಗ್ ದಂಗೇನ್. ಐಐಎಸ್ಸಿಯಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿರುವ 27 ವರ್ಷದ ಅವರು ಪಕ್ಷಿಗಳಲ್ಲಿ ಒತ್ತಡದ ಶರೀರಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರು ಅವರು ಬೆಳಗಿನ ಜಾವದ ಮಂದ ಬೆಳಕಿನಲ್ಲಿ ತಮ್ಮ ಸ್ಯಾಂಪಲ್ ಪ್ಲಾಟ್ ಇರುವಲ್ಲಿಗೆ ತೆರಳುವವರಿದ್ದರು.
*****
ಹಿಮಾಲಯದ ಈ ಮೇಘ ಕಾಡುಗಳಲ್ಲಿನ ಆವಾಸ ಸ್ಥಾನಗಳು ಇಷ್ಟು ಎತ್ತರ ಮತ್ತು ದೂರದಲ್ಲಿದ್ದೂ ಅವನತಿಯತ್ತ ಸಾಗಿವೆ. ವಿಶೇಷವಾಗಿ ಮರ ಕಡಿಯುವಿಕೆಯು ಒತ್ತಡಕ್ಕೆ ಕಾರಣವಾಗಿದೆ. ಮೂರು ದಶಕಗಳ ಹಿಂದೆ ಸುಪ್ರೀಂ ಕೋರ್ಟ್ ಮರ ಕಡಿಯುವುದನ್ನು ನಿಷೇಧಿಸಿದ್ದರೂ, ಪರಿಸರ ಸಮತೋಲನಕ್ಕೆ ಹಾನಿಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
“ಮರ ಕಡಿಯುವಿಕೆಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಸೂರ್ಯನ ಬೆಳಕು ಕಾಡಿನ ಒಳಗೆ ಹರಿಯತೊಡಗುತ್ತದೆ. ನೀವು ಕಾಡು ಕಡಿದರೆ ಇಡೀ ವಾತಾವರಣವೇ ಕೆಡುತ್ತದೆ” ಎನ್ನುತ್ತಾರೆ ಸಂಶೋಧಕ ಕಳಿಂಗ. ಮರಗಳನ್ನು ಕಡಿದ ಕಾಡು ಮಾಮೂಲಿ ಕಾಡುಗಳಿಗಿಂತಲೂ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಉಷ್ಣಾಂಶವನ್ನು ಹೊಂದಿರುತ್ತದೆ.
“ಸೆಕೆ ಹೆಚ್ಚಾಗುವ ಕಾರಣ ಹಕ್ಕಿಯು ಹೆಚ್ಚು ಸಮಯವನ್ನು ನೆರಳಿನಲ್ಲಿ ಕಳೆಯುತ್ತದೆ. ಮೇವು ಹುಡುಕುವುದನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ದೇಹ ಸ್ಥಿತಿ, ಉಳಿವು ಮತ್ತು ಜೀವಿತಾವಧಿ ಕಡಿಮೆಯಾಗುತ್ತದೆ. ಅಥವಾ ಇದೆಲ್ಲದರ ಸಂಯೋಜನೆಯೂ ಆಗಬಹುದು. ಮತ್ತು ಅದು ಇಷ್ಟಪಡುವ ಆಹಾರವು ಮರ ಕಡಿಯಲ್ಪಟ್ಟ ಕಾಡುಗಳಲ್ಲಿ ಹೇರಳವಾಗಿ ದೊರೆಯದೆ ಹೋಗಬಹುದು” ಎಂದು ಕಳಿಂಗ ಹೇಳುತ್ತಾರೆ. ಅವರು ಹಕ್ಕಿಗಳ ತೂಕ ಮತ್ತು ರೆಕ್ಕೆಗಳ ವಿವರವನ್ನು ದಾಖಲಿಸುತ್ತಾರೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಪಕ್ಷಿಗಳು ಅನುಭವಿಸುವ ಒತ್ತಡವನ್ನು ಅರ್ಥಮಾಡಿಕೊಳ್ಳಲು ರಕ್ತದ ಮಾದರಿಗಳು ಮತ್ತು ಮಲವನ್ನು ಅಧ್ಯಯನ ಮಾಡುತ್ತಾರೆ.
“ಬಿಳಿ ಬಾಲದ ರಾಬಿನ್ ಹಕ್ಕಿಗಳು ಮರಿಹುಳಗಳನ್ನು ತಿನ್ನುತ್ತವೆ. ಮತ್ತು ಅವುಗಳನ್ನು ʼನಿಜವಾದ ಹುಳಗಳುʼ ಎಂದು ಕರೆಯಲಾಗುತ್ತದೆ. ಮತ್ತು ಇಂತಹ ಹುಳಗಳು ಮರಗಳನ್ನು ಕಡಿದಿರುವ ಕಾಡಿನಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿರುತ್ತವೆ” ಎಂದು ಉಮೇಶ್ ಹೇಳುತ್ತಾರೆ. ಬಿಳಿ ಬಾಲದ ರಾಬಿನ್ ಗಳ ಸಂಖ್ಯೆಯಲ್ಲಿನ ಕುಸಿತಕ್ಕೆ ಮರಗಳ ಕಡಿತ ಕಾರಣವೆನ್ನಬಹುದೆಂದು ಅವರು ಹೇಳುತ್ತಾರೆ. “ವಾತಾವರಣದಲ್ಲನ ಹೆಚ್ಚಿನ ಬಿಸಿಯು ಹಕ್ಕಿಗೆ ಶಾರೀರಿಕ ಒತ್ತಡವನ್ನು ಉಂಟುಮಾಡಬಹುದು.”
ಹೆಚ್ಚುತ್ತಿರುವ ತಾಪಮಾನಕ್ಕೆ ಪ್ರತಿಕ್ರಿಯೆಯಾಗಿ ಹಿಮಾಲಯದ ಸಸ್ಯಗಳು ಮೇಲಕ್ಕೆ ಚಲಿಸಲು ಪ್ರಾರಂಭಿಸಿವೆ. ಪಕ್ಷಿಗಳು ಈ ಸಸ್ಯವರ್ಗದ ಬದಲಾವಣೆಗಳನ್ನು ಪತ್ತೆಹಚ್ಚುತ್ತವೆ ಎಂದು ನಂಬಲಾಗಿದೆ. "ಐತಿಹಾಸಿಕವಾಗಿ 1,000-2,000 ಮೀಟರು ಎತ್ತರಗಳಲ್ಲಿ ಕಂಡುಬರುವ ಹಕ್ಕಿ ಜಾತಿಗಳು ಈಗ ತಮ್ಮ ಉಳಿವಿಗಾಗಿ 1,200-2,200 ಮೀಟರು ಎತ್ತರದ ಸ್ಥಳದಲ್ಲಿವೆ" ಎಂದು ಉಮೇಶ್ ಹೇಳುತ್ತಾರೆ. ಪಪುವಾ ನ್ಯೂ ಗಿನಿಯಾ ಮತ್ತು ಆಂಡಿಸ್ ನಂತಹ ಇತರ ಉಷ್ಣವಲಯದ ಪ್ರದೇಶಗಳಲ್ಲಿ ಎತ್ತರದ ಪ್ರದೇಶಗಳಿಗೆ ಚಲಿಸುವ ಪಕ್ಷಿಗಳನ್ನು ದಾಖಲಿಸಲಾಗಿದೆ.
ಈ ಪ್ರಭೇದಗಳು ಮೇಲಕ್ಕೆ ಸಾಗುತ್ತಾ ತುತ್ತ ತುದಿ ತಲುಪಿದರೆ ಮುಂದೆ ಸ್ಥಳದ ಕೊರತೆ ಎದುರಿಸಿ ನೋಡನೋಡುತ್ತಲೇ ಕಣ್ಮರೆಯಾಗಬಹದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಈಗಲ್ ನೆಸ್ಟ್ ಅಭಯಾರಣ್ಯವು ಕೆಳಗಿನ ಭಾಗದಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳನ್ನು, ಮಧ್ಯ-ಎತ್ತರದಲ್ಲಿ ಸಮಶೀತೋಷ್ಣ ವಿಶಾಲ-ಎಲೆಯ ಕಾಡುಗಳನ್ನು ಮತ್ತು ಅತ್ಯುನ್ನತ ಶಿಖರಗಳಲ್ಲಿ ಕೋನಿಫರ್‌ಗಳು (conifers) ಮತ್ತು ರೋಡೋಡೆಂಡ್ರನ್ಗಳನ್ನು (rhododendrons) ಹೊಂದಿದೆ. ಮತ್ತು ಈ ಎಲ್ಲದರ ನಡುವೆ, "ನಮಗೆ ಈಗ ಬೇಕಾಗಿರುವುದು ಹವಾಮಾನ ಸಂಪರ್ಕ. ಪ್ರಭೇದಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲು ಸಾಧ್ಯವಾಗಬೇಕು" ಎಂದು ತರಬೇತಿ ಪಡೆದ ವೈದ್ಯಕೀಯ ವೈದ್ಯರೂ ಆಗಿರುವ ಉಮೇಶ್ ಹೇಳುತ್ತಾರೆ. ಪಕ್ಷಿಗಳ ಮೇಲಿನ ಅವರ ಪ್ರೀತಿಯು ಅವರನ್ನು ವೃತ್ತಿಗಳನ್ನು ಬದಲಾಯಿಸುವಂತೆ ಮಾಡಿತು.
“ಪರ್ವತಗಳ ನಡುವಿನಲ್ಲಿ ಕೃಷಿ ಅಥವಾ ನಗರೀಕರಣ ಪ್ರಕ್ರಿಯೆ ನಡೆಯುತ್ತಿದ್ದರೆ ಈ ಕನೆಕ್ಟಿವಿಟಿ ಸಾಧ್ಯವಿಲ್ಲ. ಈ ಪ್ರಭೇದಗಳನ್ನು ರಕ್ಷಿಸಬೇಕೆಂದರೆ ನಮಗೆ ದೊಡ್ಡ ಎತ್ತರದ ವ್ಯಾಪ್ತಿಯನ್ನು ವ್ಯಾಪಿಸಬಲ್ಲ ಕಾರಿಡಾರುಗಳು ಬೇಕಾಗುತ್ತವೆ” ಎಂದು ಅವರು ಹೇಳುತ್ತಾರೆ.
*****
ಸ್ಥಳೀಯ ಕ್ಷೇತ್ರ ಸಿಬ್ಬಂದಿಗಳಾದ ಮೀಕಾ ರಾಯ್, ದಂಬರ್ ಪ್ರಧಾನ್, ಐತಿ ಥಾಪಾ ಮತ್ತು ದೇಮಾ ತಮಾಂಗ್ ಅಧ್ಯಯನ ವಿಷಯದಲ್ಲಿ ನಿರ್ಣಾಯಕರಾಗಿ ಪಾತ್ರ ವಹಿಸುತ್ತಿದ್ದಾರೆ - ಅವರು ಪ್ರಮುಖ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಅವರನ್ನು ಹಲವಾರು ಅಧ್ಯಯನಗಳಲ್ಲಿ ಸಹ-ಲೇಖಕರಾಗಿ ಉಲ್ಲೇಖಿಸಲಾಗಿದೆ.
ಕ್ಷೇತ್ರ ಸಿಬ್ಬಂದಿಗಳಿಗೆ ಬಲೆಗಳನ್ನು ನೀಡಲಾಗಿರುತ್ತದೆ. ಅವರು ಮಿಸ್ಟ್-ನೆಟ್ಟಿಂಗ್ ಎಂದು ಕರೆಯಲಾಗುವ ತಂತ್ರ ಬಳಸಿ ಹಕ್ಕಿಗಳನ್ನು ಹಿಡಿಯುತ್ತಾರೆ. ಹಕ್ಕಿಗಳಿಗೆ ಮುಂದೆ ನೋಡಲು ಕಷ್ಟವಾಗುವಂತಹ ಪ್ರದೇಶದಲ್ಲಿ ಈ ಬಲೆಯನ್ನು ಮರಗಳ ನಡುವೆ ಕಟ್ಟಲಾಗಿರುತ್ತದೆ. ಹಾರಿ ಬಂದ ಹಕ್ಕಿಗಳು ಇದರಲ್ಲಿ ಸಿಕ್ಕಿಕೊಳ್ಳುತ್ತವೆ.
“ನಮಗೆಲ್ಲರಿಗೂ ತಲಾ 8 – 10 ಬಲೆಗಳನ್ನು ನೀಡಲಾಗಿದೆ” ಎಂದು 28 ವರ್ಷದ ದಂಬಾರ್ ಹೇಳುತ್ತಾರೆ. ಅವರು ತಮ್ಮ ಪಾಲಿನ ಬಲೆಗಳನ್ನು ಇರಿಸಿದ್ದ ಜಾಗವೊಂದು ಜಾರುತ್ತಿತ್ತು. ಅಲ್ಲಿಗೆ ನಿಧಾನವಾಗಿ ಹೋಗಿ ಬಲೆಯಲ್ಲಿ ಸಿಕ್ಕಿದ್ದ ಹಕ್ಕಿಗಳನ್ನು ಬಿಡಿಸಿ ಸಣ್ಣ ಹಸಿರು ಚೀಲವೊಂದರಲ್ಲಿ ಹಾಕಿಕೊಂಡರು.
ಪಕ್ಷಿಗಳನ್ನು 15 ನಿಮಿಷಗಳಿಗಿಂತ ಹೆಚ್ಚು ಕಾಲ ಬಲೆಯಲ್ಲಿ ಹಿಡಿದಿಡಲಾಗುವುದಿಲ್ಲ. ಮಳೆಯ ಸಣ್ಣ ಅವಕಾಶವಿದ್ದರೂ, ತಂಡದ ಸದಸ್ಯರು ಬಲೆಯಿರುವ ಸ್ಥಳಗಳಿಗೆ ಚದುರಿಹೋಗುತ್ತಾರೆ ಮತ್ತು ಅವುಗಳ ಒತ್ತಡವನ್ನು ಕಡಿಮೆ ಮಾಡಲು ಆ ಜೀವಿಗಳನ್ನು ತಕ್ಷಣ ಬಿಡುಗಡೆ ಮಾಡುತ್ತಾರೆ.
ಹಕ್ಕಿಯ ಎದೆಯ ಸುತ್ತಲೂ ಮೃದುವಾಗಿ ಹಿಡಿದು ಕೊಳ್ಳುವ ತಂತ್ರಕ್ಕೆ ರಿಂಗರ್ ಗ್ರಿಪ್ ಎಂದು ಕರೆಯಲಾಗುತ್ತದೆ. ಚೀಲದಿಂದ ಹಕ್ಕಿಯನ್ನು ಇದೇ ರೀತಿ ತೆಗೆದು ಹಿಡಿಯಲಾಗುತ್ತದೆ. ಸಣ್ಣ ಒತ್ತಡ ಕೂಡಾ ಈ ಸೂಕ್ಷ್ಮ ಹಕ್ಕಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿರುತ್ತದೆಯಾದ್ದರಿಂದ ಈ ವಿಷಯದಲ್ಲಿ ಬಹಳ ಜಾಗರೂಕತೆ ಬೇಕು. ನಂತರ ಹಕ್ಕಿಗಳನ್ನು ತೂಕ ಮಾಡಿ, ಅಳೆತೆ ಕೂಡಾ ಮಾಡಲಾಗುತ್ತದೆ. ನಂತರ ರಿಂಗ್ ಮಾಡಲಾಗುತ್ತದೆ.
"ನಾನು ಈ ಕೆಲಸವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ" ಎಂದು ದೇಮಾ ಹೇಳುತ್ತಾರೆ. "ನನಗೆ ಹಕ್ಕಿಗಳೊಡನೆ ಕೆಲಸ ಮಾಡುವುದೆಂದರೆ ಪ್ರೀತಿ. ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಬರುತ್ತಾರೆ. ಅವರು ಹಕ್ಕಿಗಳನ್ನು ಬೈನಾಕ್ಯುಲರ್ ಮೂಲಕವಷ್ಟೇ ನೋಡಬಹುದು. ಆದರೆ ನಾನು ಅವುಗಳನ್ನು ಕೈಯಲ್ಲಿ ಹಿಡಿದು ಹತ್ತಿರದಿಂದ ನೋಡುತ್ತೇನೆ"
10 ನೇ ತರಗತಿಯ ನಂತರ ಶಾಲೆ ಬಿಟ್ಟಿ ಐತಿ, "ಈ ಕೆಲಸವನ್ನು ಮಾಡಲು ನಾನು 2021ರಲ್ಲಿ ತಂಡವನ್ನು ಸೇರದೇ ಹೋಗಿದ್ದರೆ, ನನ್ನ ಕುಟುಂಬದೊಂದಿಗೆ ಗೇಣಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆ" ಎಂದು ಹೇಳುತ್ತಾರೆ. ದೇಮಾ ಮತ್ತು ಐತಿಯಂತಹ ಯುವತಿಯರು ಮೀಕಾ ಅವರ ಕೆಲಸದಿಂದ ಪ್ರೇರಿತರಾಗಿದ್ದಾರೆ ಮತ್ತು ಯುವಕರು ಈಗ ಈ ಕಾಡುಗಳಲ್ಲಿ ಬೇಟೆಯಾಡುವ ಸಂಪ್ರದಾಯವನ್ನು ಪ್ರಶ್ನಿಸುತ್ತಿದ್ದಾರೆ.
“ಹುಡುಗರ ಹಕ್ಕಿಗಳನ್ನು ಗುರಿಯಾಗಿಸಿ ಕವಣೆ ಬೀಸುತ್ತಿದ್ದರು. ಶಾಲೆಯಿಂದ ಬಂದ ತಕ್ಷಣ ಸಮಯ ಕಳೆಯುವ ಸಲುವಾಗಿ ಮಾಡುತ್ತಿದ್ದರು.” ಆದರೆ ಈಗ ಮೀಕಾ ಉಮೇಶ್ ಅವರೊಡನೆ ಕೆಲಸ ಮಾಡಲು ಆರಂಭಿಸಿದಾಗಿನಿಂದ ಅವರು ಊರಿಗೆ ಹೋದಾಗ ಅಲ್ಲಿನ ಮಕ್ಕಳಿಗೆ ವನ್ಯಜೀವಿಗಳ ಚಿತ್ರವನ್ನು ತೋರಿಸಲಾರಂಭಿಸಿದರು. “ಈಗ ನಮ್ಮ ಮನೆಯ ಮಕ್ಕಳು ಮತ್ತು ಸಂಬಂಧಿಕರು ಹಾಗೂ ಸ್ನೇಹಿತರು ಬೇಟೆ ಮತ್ತು ಪ್ರಾಣಿ ರಕ್ಷಣೆಯನ್ನು ಭಿನ್ನವಾಗಿ ನೋಡತೊಡಗಿದ್ದಾರೆ” ಎಂದು ಅವರು ಹೇಳುತ್ತಾರೆ.
ಈಗಲ್ ನೆಸ್ಟ್ ಕಾಡಿನ ಮೂಲೆ ಮೂಲೆಯನ್ನು ಬಲ್ಲ ಮೀಕಾ ಅವರನ್ನು ತಂಡದವರು ಮಾನವ ಜಿಪಿಎಸ್ ಎಂದು ಕರೆಯುತ್ತಾರೆ. ಅವರು ಹೇಳುತ್ತಾರೆ, “ನಾನು ಸಣ್ಣವನಿದ್ದಾಗ ಯಾವಾಗಲೂ ನಗರದಲ್ಲಿ ಹೋಗಿ ವಾಸಿಸಬೇಕೆಂದು ಬಯಸುತ್ತಿದ್ದೆ. ಆದರೆ ಈಗ ಭಾರತದ ಹಲವೆಡೆ ಹೋಗಿ ಬಂದ ನಂತರ ಹೊಸ ಹಕ್ಕಿ ನೋಡಲು ಬಯಸುವ ಹಕ್ಕಿ ವೀಕ್ಷಕನಂತೆ ಅರುಣಾಚಲದ ಕಾಡುಗಳಿಗೆ ಹೋಗಲು ಹಂಬಲಿಸುತ್ತಿರುತ್ತೇನೆ” ಎಂದು ಹೇಳುತ್ತಾರೆ.
ಕಣಿವೆಗಳು ಮತ್ತು ಸೊಂಪಾದ ಹಸಿರು ಪರ್ವತ ಕಾಡುಗಳನ್ನು ನೋಡುತ್ತಾ ಅವರಿಟ್ಟಿದ್ದ ಬಲೆಗಳಲ್ಲಿ ಒಂದನ್ನು ತಲುಪಿದಾಗ, "ಎಷ್ಟು ಸಲ ಇಲ್ಲಿಗೆ ಬಂದಿದ್ದರೂ, ಪ್ರತಿ ಸಲ ಭಯವಾಗುತ್ತದೆ" ಎಂದು ಅವರು ಹೇಳುತ್ತಾರೆ.
ಈ ಕಥೆಯ ಭಾಗ 2ರಲ್ಲಿ ಹವಾಮಾನದಲ್ಲಿನ ಬದಲಾವಣೆಯನ್ನು ತಗ್ಗಿಸಲು ಸ್ಥಳೀಯ ಸಮುದಾಯವು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಓದಿ.
ಅನುವಾದ: ಶಂಕರ. ಎನ್. ಕೆಂಚನೂರು