“ಯಾರು ಗೆದ್ದರೆ ನಮಗೇನು? ಅದು ಐಪಿಎಲ್ ಮ್ಯಾಚೋ ಅಥವಾ ವರ್ಲ್ಡ್ ಕಪ್ ಮ್ಯಾಚೋ ಯಾವ್ದಾದ್ರೂ ನಮಗೇನು ಪ್ರಯೋಜನ?
ಕ್ರಿಕೆಟ್ ಎನ್ನುವುದು ಧರ್ಮವೇ ಆಗಿರುವ ದೇಶದಲ್ಲಿ ಮದನ್ ಕೇಳುತ್ತಿರುವ ಪ್ರಶ್ನೆ ಅಪವಿತ್ರವಾದುದು.
ಅವರು ಮುಂದುವರೆದು ಹೇಳುತ್ತಾರೆ, “ಕೋಯಿ ಭೀ ಜೀತೇ ಹಮೇ ಕಾಮ್ ಮಿಲ್ ಜಾತಾ ಹೈ [ಯಾರೇ ಗೆಲ್ಲಲಿ, ನಮಗೆ ಕೆಲಸ ಸಿಗುತ್ತೆ].” 51 ವರ್ಷದ ಮದನ್ ಅವರು ಮೀರತ್ ನಗರದಲ್ಲಿ ಈ ಆಟದಲ್ಲಿ ಬಳಸಲಾಗುವ ಹೊಳೆಯುವ ಕೆಂಪು ಮತ್ತು ಬಿಳಿ ಬಣ್ಣದ ಚೆಂಡುಗಳನ್ನು ತಯಾರಿಸುವ ಘಟಕವೊಂದನ್ನು ಹೊಂದಿದ್ದಾರೆ. ಈ ನಗರದಲ್ಲಿ ಇಂತಹ ಹಲವು ಕಾರ್ಖಾನೆಗಳಿವೆ.
ಮಾರ್ಚ್ ತಿಂಗಳಿನಲ್ಲಿ ನಾವು ಅವರಲ್ಲಿಗೆ ಹೋದಾಗ ಅವರ ಸುತ್ತಲೂ 100 ಪೆಟ್ಟಿಗಗಳಿದ್ದವು. ಒಂದೊಂದು ಪೆಟ್ಟಿಗೆಯಲ್ಲೂ ಆರು ಚೆಂಡುಗಳಿದ್ದವು. ಇವು ಮುಂದೆ ಬರಲಿರುವ ಕಿಕ್ಕಿರಿದ ಜನಸಂದಣಿಯ ಪುರುಷರ ಕ್ರಿಕೆಟ್ ಸರಣಿಯಲ್ಲಿ ಆಡಲು ತಯಾರಿಗಿದ್ದವು. ಎರಡು ತಿಂಗಳ ಕಾಲ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸರಣಿಯ ಮೊದಲ ಪಂದ್ಯ ಮಾರ್ಚ್ ಅಂತ್ಯದಲ್ಲಿ ಶುರುವಾಗುವುದಿತ್ತು. ಅದರ ನಂತರ ಜೂನ್ ತಿಂಗಳಿನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯುವುದಿತ್ತು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಭಾರತವು ಭಾರತ ಏಕದಿನ ಅಂತಾರಾಷ್ಟ್ರೀಯ ಪಂದ್ಯಾವಳಿಗಳ ಆತಿಥ್ಯ ವಹಿಸಲಿದೆ.
“ಯಾವ ಹಂತದಲ್ಲಿ ಚೆಂಡನ್ನು ಬಳಸಲಾಗುತ್ತದೆ, ಯಾರು ಚೆಂಡನ್ನು ಬಳಸಿ ಆಡಲಿದ್ದಾರೆ, ಆಡಲಿರುವ ಒಟ್ಟು ಓವರ್‌ಗಳು ಆಟ ಎನ್ನುವುದರ ಮೇಲೆ[ಚೆಂಡಿನ] ಗುಣಮಟ್ಟ ನಿರ್ಧರಿತವಾಗುತ್ತದೆ” ಎಂದು ಮದನ್ ಹೇಳುತ್ತಾರೆ.
“ದೊಡ್ಡ ಪಂದ್ಯಾವಳಿಗಳಿರುವಾಗ ಕ್ರೀಡಾ ಸರಕುಗಳ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳು ನಮ್ಮನ್ನು ಮುಂಚಿತವಾಗಿ ತಲುಪುತ್ತಾರೆ" ಎಂದು ಅವರು ಹೇಳುತ್ತಾರೆ, ಈ ಆಟದ ಕುರಿತು ಜನರಿಗಿರುವ ಹುಚ್ಚಿನ ಕುರಿತು ಅವರು ಒತ್ತಿ ಹೇಳುತ್ತಾರೆ. “ಎರಡು ತಿಂಗಳಿಗೂ ಮೊದಲೇ ಡಿಮ್ಯಾಂಡ್ ಹೆಚ್ಚಿ ಬಿಡುತ್ತದೆ. ಎಲ್ಲಾ ಅಂಗಡಿಗಳು ಆ ಸಮಯದಲ್ಲಿ ಸಾಕಷ್ಟು ಸ್ಟಾಕ್ ಇಟ್ಟುಕೊಳ್ಳಲು ಬಯಸುತ್ತಾರೆ.” ಯಾರು ಆಡುತ್ತಿದ್ದಾರೆ ಮತ್ತು ಯಾವ ಹಂತದಲ್ಲಿ ಆಡುತ್ತಿದ್ದಾರೆ ಎನ್ನುವುದನ್ನು ಅವಲಂಬಿಸಿ ಒಂದು ಚೆಂಡಿನ ಬೆಲೆಯು 250 ರೂ.ಗಳಿಂದ 3,500 ರೂ.ಗಳವರೆಗೆ ಇರುತ್ತವೆ.
ಮದನ್ ಮುಂಬೈ, ಅಹಮದಾಬಾದ್, ಬರೋಡಾ, ಜೈಪುರ, ಬೆಂಗಳೂರು ಮತ್ತು ಪುಣೆಯ ಕ್ರಿಕೆಟ್ ಅಕಾಡೆಮಿಗಳು, ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ನೇರ ಬೇಡಿಕೆಗಳನ್ನು ಪಡೆಯುತ್ತಾರೆ. ಇಲ್ಲಿನ ಅವರ ಘಟಕದಲ್ಲಿ ತಯಾರಿಸಿದ ಚೆಂಡುಗಳನ್ನು ಅಭ್ಯಾಸ ಮತ್ತು ಪಂದ್ಯಗಳಿಗಾಗಿ ಆಟದ ಕೆಳ ಹಂತಗಳಲ್ಲಿ ಬಳಸಲಾಗುತ್ತದೆ.
ನಾವು ಅವರ ಚೆಂಡು ತಯಾರಿಕ ಘಟಕದಲ್ಲಿದ್ದೆವು, ಅಲ್ಲೇ ಇದ್ದ ಸಣ್ಣ ಟಿವಿಯಲ್ಲಿ ಕ್ರಿಕೆಟ್ ಮ್ಯಾಚಿನ ನೇರ ಪ್ರಸಾರ ಪ್ರದರ್ಶಿತವಾಗುತ್ತಿತ್ತು. ಪರದೆಯು ಅಲ್ಲಿದ್ದ ಎಂಟು ಮೂಕ ಪ್ರೇಕ್ಷಕರಾದ ಕಾರಿಗಾರ್ (ಕುಶಲಕರ್ಮಿಗಳು) ಗಳ ಕಡೆ ತಿರುಗಿತ್ತು. ಆದರೆ ಅವರು ಟಿವಿ ನೋಡುತ್ತಿರಲಿಲ್ಲ ಕೇವಲ ಅದರಲ್ಲಿ ಸದ್ದನ್ನು ಕೇಳುತ್ತಾ ಕೆಲಸದ ಮೇಲೆ ಕಣ್ಣಿಟ್ಟಿದ್ದರು: “ಹಮೇ ಅಭಿ ಬಿಲ್ಕುಲ್ ಪುರ್ಸತ್ ನಹೀ ಹೇ [ಈಗ ನಮಗೆ ಚೂರಂದ್ರೆ ಚೂರೂ ಪುರ್ಸೊತ್ತಿಲ್ಲ]” ಎನ್ನುತ್ತಾರೆ ಮದನ್.
ಅವರು ಕಬ್ಬಿಣದ ಕ್ಲ್ಯಾಂಪ್ ಒಂದರ ಮೇಲೆ 600 ಮಧ್ಯಮ ಗುಣಮಟ್ಟದ ಚೆಂಡಿಗಾಗಿ ಬಂದಿದ್ದ ಬೇಡಿಕೆಯನ್ನು ಪೂರೈಸಲು ಚೆಂಡಿನ ಎರಡು ಭಾಗವನ್ನು ಜೋಡಿಸಿ ಹೊಲಿಯುವ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿದ್ದರು. ಇದು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಿಂದ ಬಂದ ಬೇಡಿಕೆಯಾಗಿತ್ತು ಮತ್ತು ಅದನ್ನು ಮೂರು ದಿನಗಳಲ್ಲಿ ಪೂರೈಸಬೇಕಿತ್ತು.
ಮದನ್ ಅವರು ರವಾನೆಗೆ ಸಿದ್ಧವಾಗಿರುವ ಹೊಳೆಯುವ ಕೆಂಪು ಚೆಂಡುಗಳಲ್ಲಿ ಒಂದನ್ನು ಕೈಯಲ್ಲಿ ಹಿಡಿದು. “ಒಂದು ಚೆಂಡು ತಯಾರಿಸಲು ಮೂರು ವಸ್ತುಗಳು ಬೇಕು. ಮೇಲ್ಭಾಗಕ್ಕೆ ಅಲ್ಯೂಮ್ ಟ್ಯಾನ್ ಮಾಡಿದ ಮಾಡಿದ ಚರ್ಮ, ಕಾರ್ಕ್ ಬಳಸಿ ಮಾಡಿದ ಒಳಗಿನ ಗೋಳ [ಗೋಲ] ಮತ್ತು ಹೊಲಿಯಲು ಹತ್ತಿಯ ದಾರ.” ಇವೆಲ್ಲವೂ ಮೀರತ್ ನಗರದಲ್ಲೇ ಸಿಗುತ್ತವೆ. “ಖರೀದಿದಾರರು ಸಲ್ಲಿಸಿದ ಗುಣಮಟ್ಟದ ಬೇಡಿಕೆಗೆ ಅನುಗುಣವಾಗಿ ನಾವು ಲೆದರ್ ಮತ್ತು ಕಾರ್ಕ್ ಖರೀದಿಸುತ್ತೇವೆ.”
ಜಿಲ್ಲಾ ಕೈಗಾರಿಕಾ ಉತ್ತೇಜನ ಮತ್ತು ಉದ್ಯಮಿ ಅಭಿವೃದ್ಧಿ ಕೇಂದ್ರ (ಡಿಐಪಿಇಡಿಸಿ) ಅಂದಾಜಿನ ಪ್ರಕಾರ ಮೀರತ್ ನಗರದಲ್ಲಿ 347 ಕ್ರಿಕೆಟ್ ಬಾಲ್ ತಯಾರಿಕಾ ಘಟಕಗಳಿವೆ. ಈ ಸಂಖ್ಯೆಯು ಕೈಗಾರಿಕಾ ಪ್ರದೇಶಗಳಲ್ಲಿರುವ ದೊಡ್ಡ ಕಾರ್ಖಾನೆಗಳು; ಮತ್ತು ಮೀರತ್ ಜಿಲ್ಲೆಯ ನಗರ ಮತ್ತು ಗ್ರಾಮೀಣ ವಸತಿ ಪ್ರದೇಶಗಳಲ್ಲಿರುವ ಸಣ್ಣ ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ.
ಆದಾಗ್ಯೂ, ಈ ಅಂದಾಜಿನಲ್ಲಿ ಹಲವಾರು ಅಲ್ಲಲ್ಲಿ ಚದುರಿದಂತಿರುವ ಅಸಂಘಟಿತ ಉತ್ಪಾದನಾ ಕೇಂದ್ರಗಳು ಮತ್ತು ಸಂಪೂರ್ಣ ಚೆಂಡುಗಳನ್ನು ತಯಾರಿಸುವ ಅಥವಾ ಒಂದು ಕೆಲಸವನ್ನು ಹೊರಗುತ್ತಿಗೆ ಪಡೆಯುವ ಗೃಹ ಘಟಕಗಳನ್ನು ಒಳಗೊಂಡಿಲ್ಲ. ಇವುಗಳಲ್ಲಿ ಮೀರತ್ ಜಿಲ್ಲೆಯ ಜಂಗೇತಿ, ಗಗಾಲ್ ಮತ್ತು ಭವವನಪುರದಂತಹ ಗ್ರಾಮಗಳು ಸೇರಿವೆ. "ಆಜ್ ಗಾಂವೋ ಕೆ ಬಿನಾ ಬಿಲ್ಕುಲ್ ಪೂರ್ತಿ ನಹೀ ಹೋಗಿ ಮೀರತ್ ಮೇ [ಮೀರತ್‌ನ ಹಳ್ಳಿಗಳಿಲ್ಲದೆ ಹೋಗಿದ್ದರೆ ಚೆಂಡಿನ ಸರಬರಾಜು ಇರುತ್ತಲೇ ಇರಲಿಲ್ಲ] ಎಂದು ಮದನ್ ಹೇಳುತ್ತಾರೆ.
" ಕ್ರಿಕೆಟ್ ಚೆಂಡುಗಳನ್ನು ಚರ್ಮದಿಂದ ತಯಾರಿಸಲಾಗುವುದರಿಂದ ಹಳ್ಳಿಗಳಲ್ಲಿ ಮತ್ತು ನಗರದ ದೊಡ್ಡ ಕಾರ್ಖಾನೆಗಳಲ್ಲಿ ಹೆಚ್ಚಿನ ಕಾರಿಗಾರ್‌ಗಳು ಜಾಟವ ಸಮುದಾಯಕ್ಕೆ ಸೇರಿದವರಾಗಿದ್ದಾರೆ" ಎಂದು ಅವರು ವಿವರಿಸುತ್ತಾರೆ. 1904ರ ಜಿಲ್ಲಾ ಗೆಜೆಟಿಯರ್ ಪ್ರಕಾರ, ಜಾಟವ ಅಥವಾ ಚಮಾರ್ ಸಮುದಾಯವು (ಯುಪಿಯಲ್ಲಿ ಪರಿಶಿಷ್ಟ ಜಾತಿ ಎಂದು ಪಟ್ಟಿಯಡಿ ಬರುತ್ತದೆ) ಮೀರತ್‌ನ ಚರ್ಮದ ಉದ್ಯಮದಲ್ಲಿ ಕಾರ್ಮಿಕರ ಅತಿದೊಡ್ಡ ಸಾಮಾಜಿಕ ಗುಂಪನ್ನು ರೂಪಿಸಿತು. " ಚರ್ಮದ ವಿಷಯದಲ್ಲಿ ಕ್ರಿಕೆಟ್ ಚೆಂಡಿನ ರೂಪದಲ್ಲಿ ಸಮಸ್ಯೆ ಜನರಿಗೆ ಇಲ್ಲ, ಆದರೆ ಅದರೊಂದಿಗೆ ಕೆಲಸ ಮಾಡುವಾಗ ಅವರಿಗೆ ಸಮಸ್ಯೆಯಾಗುತ್ತದೆ" ಎಂದು ಅವರು ಹೇಳುತ್ತಾರೆ.
ಅವರ ಕುಟುಂಬವು ಶೋಭಪುರದಲ್ಲಿ ಒಂದು ಟ್ಯಾನರಿಯನ್ನು ಸಹ ಹೊಂದಿದೆ, ಇದು ಕ್ರಿಕೆಟ್-ಬಾಲ್ ಉದ್ಯಮಕ್ಕಾಗಿ ಕಚ್ಚಾ ಚರ್ಮವನ್ನು ಟ್ಯಾನ್ ಮಾಡುವ ಏಕೈಕ ಪ್ರದೇಶವಾಗಿದೆ (ಓದಿ: ಸಂಕಟದ ಸುಳಿಯಲ್ಲಿ ಮೀರತ್ ನಗರದ ಚರ್ಮೋದ್ಯಮದ ಕಾರ್ಮಿಕರು ). "ಹಳೆಯ ಟ್ಯಾನ್ ಮಾಡಿದ ಚರ್ಮಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ನೋಡಿದಾಗ, ಕ್ರಿಕೆಟ್ ಚೆಂಡುಗಳ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲವೆನ್ನುವುದು ನನ್ನ ಅರಿವಿಗೆ ಬಂತು" ಎಂದು ಅವರು ಹೇಳುತ್ತಾರೆ. ಈ ಭರವಸೆಯ ಮಾರುಕಟ್ಟೆಯು 20 ವರ್ಷಗಳ ಹಿಂದೆ ಮೆಸರ್ಸ್ ಬಿ.ಡಿ & ಸನ್ಸ್ ಅನ್ನು ಪ್ರಾರಂಭಿಸಲು ಅವರನ್ನು ಪ್ರೇರೇಪಿಸಿತು - ಈ ಪ್ರದೇಶದ ಎರಡು ಕ್ರಿಕೆಟ್-ಬಾಲ್ ತಯಾರಿಕಾ ಘಟಕಗಳಲ್ಲಿ ಇದೂ ಒಂದಾಗಿದೆ.
ಇದರಲ್ಲಿ ಅನೇಕ ಪ್ರಕ್ರಿಯೆಗಳು ಇರುವುದರಿಂದಾಗಿ ಮತ್ತು ಅವು ಹಂಚಿ ಹೋಗುವುದರಿಂದಾಗಿ ಒಂದು ಚೆಂಡನ್ನು ತಯಾರಿಸಲು ಇಷ್ಟೇ ಹೊತ್ತು ಬೇಕಾಗುತ್ತದೆಯೆಂದು ಹೇಳುವುದು ಕಷ್ಟ ಎನ್ನುತ್ತಾರೆ ಮದನ್. ಜೊತೆಗೆ ಕಾಲಮಾನ ಮತ್ತು ಚರ್ಮದ ಗುಣಮಟ್ಟವೂ ತಯಾರಿಕೆಗೆ ತಗಲುವ ಹೊತ್ತಿನ ಮೇಲೆ ಪರಿಣಾಮ ಬೀರುತ್ತವೆ. “ಏಕ್ ಹಫ್ತೇ ಲಗ್ತೇ ಹೈ ಏಕ್ ಗೇಂದ್ ಕೋ ತಯ್ಯಾರ್ ಹೋನೇ ಮೇ ಕಮ್ ಸೇ ಕಮ್ [ಒಂದು ಚೆಂಡನ್ನು ತಯಾರಿಸಲು ಕನಿಷ್ಠ ಎರಡು ವಾರಗಳಾದರೂ ಬೇಕು]” ಎನ್ನುತ್ತಾರವರು.
ಮದನ್ ಅವರ ಘಟಕದಲ್ಲಿನ ಕೆಲಸಗಾರರು ಮೊದಲು ಚರ್ಮವನ್ನು ಅಲ್ಯೂಮ್ ಬಳಸಿ ಸಂಸ್ಕರಿಸುತ್ತಾರೆ, ಅದಕ್ಕೆ ಕೆಂಪು ಬಣ್ಣ ಹಚ್ಚಿ, ಬಿಸಿಲಿನಲ್ಲಿ ಒಣಗಿಸಿ, ಟಾಲೋ ಅಥವಾ ಪ್ರಾಣಿಗಳ ಕೊಬ್ಬನ್ನು ಸವರಿ ನಂತರ ಅದನ್ನು ಮೃದುವಾಗಿಸಲು ಮರದ ಸುತ್ತಿಗೆಯಿಂದ ಬಡಿಯುತ್ತಾರೆ. "ಬಿಳಿ ಚೆಂಡುಗಳಿಗೆ, ಅಲ್ಯೂಮ್-ಟ್ಯಾನ್ ಮಾಡಿದ ಚರ್ಮಗಳು ಈಗಾಗಲೇ ಬಿಳಿಯಾಗಿರುವುದರಿಂದ ಯಾವುದೇ ಬಣ್ಣ ಹಾಕುವ ಅಗತ್ಯವಿಲ್ಲ. ಹಸುವಿನ ಹಾಲಿನಿಂದ ತಯಾರಿಸಿದ ಮೊಸರನ್ನು ಅವುಗಳಿಗೆ ಗ್ರೀಸ್ ಆಗಿ ಬಳಸಲಾಗುತ್ತದೆ" ಎಂದು ಮದನ್ ಹೇಳುತ್ತಾರೆ.
“ಲೈನ್ ಸೇ ಕಾಮ್ ಹೋವೆ ಹೈ ಔರ್ ಏಕ್ ಕಾರಿಗಾರ್ ಏಕ್ ಹೀ ಕಾಮ್ ಕರೇ ಹೈ [ಕೆಲಸಗಳು ಇಲ್ಲಿ ಅನುಕ್ರಮವಾಗಿರುತ್ತವೆ. ಒಬ್ಬ ಕುಶಲಕರ್ಮಿ ಒಂದು ಕೆಲಸವನ್ನಷ್ಟೇ ಮಾಡುವ ಪರಿಣತಿ ಹೊಂದಿರುತ್ತಾರೆ]” ಎಂದು ಅವರು ವಿವರಿಸುತ್ತಾರೆ. ನಿಯೋಜಿತ ಕಾರಿಗಾರ್ ಚರ್ಮವನ್ನು ವೃತ್ತಾಕಾರದ ಎರಡು ತುಂಡುಗಳನ್ನಾಗಿ ಅಥವಾ ಅಂಡಾಕಾರದ ನಾಲ್ಕು ಭಾಗಗಳನ್ನಾಗಿ ಕತ್ತರಿಸುತ್ತಾನೆ. ಕ್ರಿಕೆಟ್ ಚೆಂಡುಗಳನ್ನು ಎರಡು ತುಂಡುಗಳು ಅಥವಾ ನಾಲ್ಕು ಚರ್ಮದ ತುಂಡುಗಳಿಂದ ತಯಾರಿಸಲಾಗುತ್ತದೆ.
“ತುಂಡುಗಳ ದಪ್ಪ ಒಂದೇ ಅಳತೆಯಲ್ಲಿರಬೇಕು ಮತ್ತು ಚರ್ಮದ ಮಾದರಿ ಕೂಡಾ ಒಂದೇ ರೀತಿಯಿರಬೇಕು” ಎನ್ನುತ್ತಾರೆ ಮದನ್. “ಇಸ್ ವಕ್ತ್ ಚಾಟ್ನೇ ಮೇ ಗಲ್ತೀ ಹೋ ಗಯೀ ತೋ ಸಮಜ್ಲೋ ಕೀ ಗೇಂದ್ ದೆಶಾಪೆ ಹೋಗಾ ಹೀ [ಈ ಹಂತದಲ್ಲಿ ಬೇರ್ಪಡಿಸುವಾಗ ತಪ್ಪು ಮಾಡಿದರೆ, ಚೆಂಡು ಖಂಡಿತವಾಗಿಯೂ ತನ್ನ ಆಕಾರವನ್ನು ಕಳೆದುಕೊಳ್ಳುತ್ತದೆ” ಎಂದು ಅವರು ಹೇಳುತ್ತಾರೆ.
ಚೆಂಡು ತಯಾರಿಕೆಯಲ್ಲಿ ಅತ್ಯಂತ ನುರಿತ ದೈಹಿಕ ಪರಿಶ್ರಮದ ಕೆಲಸವೆಂದರೆ ಹಂದಿಗೂದಲು ಬಳಸಿ ಹತ್ತಿಯ ದಾರದಿಂದ ಚರ್ಮದ ಅಂಚನ್ನು ಹೊಲಿಯುವುದು. “ಈ ಹಂದಿಗೂದಲು ಬಳಸುವ ಕಾರಣವೆಂದರೆ ಅದು ನಮಗೆ ಬೇಕಾದಂತೆ ಬಳುಕಬಲ್ಲದು ಮತ್ತು ಗಟ್ಟಿಯಿರುತ್ತದೆ ಆದರೆ ಹರಿತವಿರುವುದಿಲ್ಲ. ಮತ್ತು ಇವುಗಳಿಂದ ಹೊಲಿಯುವಾಗ ಚರ್ಮ ಹರಿಯುವ ಸಾಧ್ಯತೆಯಿರುವುದಿಲ್ಲ” ಎನ್ನುತ್ತಾರೆ ಮದನ್. “ಅವು ಉದ್ದವಿರುತ್ತವೆಯಾದ್ದರಿಂದ ಹಿಡಿದುಕೊಳ್ಳಲು ಸುಲಭವಾಗಿರುತ್ತದೆ, ಜೊತೆಗೆ ಹೊಲಿಯುವವರ ಕೈಗೆ ಚುಚ್ಚುವ ಸಾಧ್ಯತೆಯೂ ಕಡಿಮೆಯಿರುತ್ತದೆ.”
“ಲೇಕಿನ್ ಸಿರ್ಫ್ ಇಸೀ ಜೀಜ್ ಕೀ ವಜಾಹ್ ಸೇ ಹಮಾರೇ ಮುಸಲ್ಮಾನ್ ಭಾಯಿ ಯಂಹಾ ಕಾಮ್ ನಹೀ ಕರ್ ಸಕ್ತೇ. ಉನ್ಕೋ ಸುವರ್ ಸೇ ದಿಕ್ಕತ್ ಹೋತಿ ಹೇನಾ [ಇದೇ ಕಾರಣಕ್ಕಾಗಿ ನಮ್ಮ ಮುಸ್ಲಿಂ ಸಹೋದರರು ಈ ಚೆಂಡು ತಯಾರಿಸುವ ಕೆಲಸಕ್ಕೆ ಬರುವುದಿಲ್ಲ. ಅವರಿಗೆ ಹಂದಿಯೆಂದರೆ ಆಗುವುದಿಲ್ಲ” ಎನ್ನುತ್ತಾರವರು.
“ನಾಲ್ಕು ಎಳೆಗಳ ಚೆಂಡಿನ ತಯಾರಿಕೆಯಲ್ಲಿ ಬಳಸಲಾಗುವ ಮೂರು ರೀತಿಯ ಹೊಲಿಗೆಯ ಕರಕುಶಲತೆಯನ್ನು ಕರಗತ ಮಾಡಿಕೊಳ್ಳಲು ವರ್ಷಗಟ್ಟಲೆ ಸಮಯ ಬೇಕು” ಎಂದು ಮದನ್ ಅವರ ಘಟಕದಲ್ಲಿನ ಅತ್ಯಂತ ಅನುಭವಿ ಚೆಂಡು ತಯಾರಕ ಧರಮ್ ಸಿಂಗ್ ಹೇಳುತ್ತಾರೆ. 50 ವರ್ಷದ ಅವರು ಜಮ್ಮು-ಕಾಶ್ಮೀರದ ಗ್ರಾಹಕರೊಬ್ಬರು ಬೇಡಿಕೆ ಸಲ್ಲಿಸಿದ್ದ ಚೆಂಡುಗಳಿಗೆ ವಾರ್ನಿಶ್ ಹಚ್ಚುತ್ತಿದ್ದರು. “ಕಾರಿಗಾರ್ ಒಂದು ಹಂತದ ಹೊಲಿಗೆ ಕಲಿತು ಎರಡನೇ ಹಂತಕ್ಕೆ ಹೋಗುತ್ತಿದ್ದಂತೆ ಸಂಬಳವೂ ಹೆಚ್ಚುತ್ತದೆ.” ಇದರಲ್ಲಿನ ಪ್ರತಿ ಹೊಲಿಗೆಯೂ ಬೇರೆ ಬೇರೆ ತಂತ್ರಗಳನ್ನು ಹೊಂದಿದೆ ಮತ್ತು ಭಿನ್ನ ಕಾರ್ಯವನ್ನು ನಿರ್ವಹಿಸುತ್ತವೆ.
ಮೊದಲನೆಯದಾಗಿ, ಎರಡು ಅಂಡಾಕಾರದ ಚರ್ಮದ ತುಂಡುಗಳನ್ನು ಆಂತರಿಕ ಹೊಲಿಗೆಯೊಂದಿಗೆ ಸೇರಿಸಿ ಗೋಳಾರ್ಧ ಅಥವಾ ಕಪ್ ಅನ್ನು ತಯಾರಿಸಲಾಗುತ್ತದೆ, ಇದನ್ನು ಸ್ಥಳೀಯವಾಗಿ ಪೀಸ್ ಜುದಾಯಿ ಎಂದು ಕರೆಯಲಾಗುತ್ತದೆ . ಮೊದಲ ಹೊಲಿಗೆಯನ್ನು ಸಾಮಾನ್ಯವಾಗಿ ಹೊಸಬರು ಮಾಡುತ್ತಾರೆ, ಅವರು ಪ್ರತಿ ಗೋಳಾರ್ಧಕ್ಕೆ 7.50 ರೂ.ಗಳನ್ನು ಗಳಿಸುತ್ತಾರೆ. "ಪೀಸ್ ಜುದಾಯಿಯ ನಂತರ ಕಪ್ ಗಳನ್ನು ಲ್ಯಾಪೆ ಎಂದು ಕರೆಯಲಾಗುವ ತೆಳುವಾದ ಚರ್ಮದ ತುಂಡುಗಳಿಂದ ಬಲಪಡಿಸಲಾಗುತ್ತದೆ " ಎಂದು ಧರಮ್ ವಿವರಿಸುತ್ತಾರೆ. ಮೆತ್ತನೆಯ ಚರ್ಮದ ಗೋಳಾರ್ಧಗಳನ್ನು ನಂತರ ಗೋ ಲಾಯ್ (ರೌಂಡಿಂಗ್) ಯಂತ್ರದಿಂದ ಅಚ್ಚು ಬಳಸಿ ನಿರ್ದಿಷ್ಟ ಸುತ್ತಿಗೆ ಆಕಾರಗೊಳಿಸಲಾಗುತ್ತದೆ.
ಕಪ್ ಜುದಾಯಿ ಎಂದು ಕರೆಯಲ್ಪಡುವ ಚೆಂಡನ್ನು ತಯಾರಿಸಲು ಕಾರ್ಮಿಕರು ಎರಡು ಗೋಳಾರ್ಧಗಳನ್ನು ಎರಡೂ ಬದಿಗಳಿಂದ ಏಕಕಾಲದಲ್ಲಿ ಹೊಲಿಗೆಗಳೊಂದಿಗೆ ಜೋಡಿಸುತ್ತಾರೆ . ಕಪ್ ಜುದಾಯಿಯ ಕೂಲಿ 17-19 ರೂಪಾಯಿಗಳ ನಡುವೆ ಇರುತ್ತದೆ. ಎರಡು ತುಂಡು ಚೆಂಡುಗಳು ಕಪ್ ಜುದಾಯಿ ಎನ್ನಲಾಗುವ ಕೈ ಹೊಲಿಗೆಗೆ ಒಳಗಾಗುತ್ತವೆ.
"ಎರಡನೇ ಹೊಲಿಗೆ ಪೂರ್ಣಗೊಂಡ ನಂತರವೇ, ಚೆಂಡು [ ಗೇಂದ್ ] ಎಂಬ ಪದವನ್ನು ಬಳಸಲಾಗುತ್ತದೆ " ಎಂದು ಧರಮ್ ಹೇಳುತ್ತಾರೆ, " ಪೆಹ್ಲಿ ಬಾರ್ ಚಮ್ರಾ ಏಕ್ ಗೇಂದ್ ಕಾ ಆಕಾರ್ ಲೇತಾ ಹೈ [ಚರ್ಮವು ಚೆಂಡಿನ ಆಕಾರವನ್ನು ತೆಗೆದುಕೊಳ್ಳುವ ಮೊದಲ ಹಂತ ಇದು].
ಧರಮ್ ಅವರು ಸುಮಾರು 35 ವರ್ಷಗಳ ಹಿಂದೆ ಸೂರಜ್ ಕುಂಡ್ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಚೆಂಡು ತಯಾರಿಕೆಯ ಕೌಶಲವನ್ನು ಕಲಿತರು, ಅಲ್ಲಿ 1950ರ ದಶಕದಲ್ಲಿ ಕ್ರೀಡಾ ಸರಕುಗಳನ್ನು ತಯಾರಿಸಲು ಆರಂಭಿಸಲಾಯಿತು. ವಿಭಜನೆಯ ನಂತರ, ಕ್ರೀಡಾ ಸರಕುಗಳ ಉದ್ಯಮವನ್ನು ಸಿಯಾಲ್‌ಕೋಟ್‌ನಿಂದ (ಈಗ ಪಾಕಿಸ್ತಾನದಲ್ಲಿದೆ) ಸ್ಥಳಾಂತರಗೊಂಡ ವ್ಯಕ್ತಿಗಳು ಸ್ಥಾಪಿಸಿದರು. ಅವರನ್ನು ಸೂರಜ್ ಕುಂಡ್ ರಸ್ತೆ ಮತ್ತು ಮೀರತ್‌ನ ವಿಕ್ಟೋರಿಯಾ ಪಾರ್ಕ್ ಸುತ್ತಮುತ್ತಲಿನ ಕ್ರೀಡಾ ವಸಾಹತುಗಳಲ್ಲಿ ಪುನರ್ವಸತಿಗೊಳಿಸಲಾಗಿತ್ತು. "ಮೀರತ್ ಸುತ್ತಮುತ್ತಲಿನ ಹಳ್ಳಿಗಳ ಜನರು ನಗರಕ್ಕೆ ಹೋಗಿ, ಕೌಶಲವನ್ನು ಕಲಿತರು ಮತ್ತು ಅದನ್ನು ಮರಳಿ ತಂದರು."
ನಾಲ್ಕು ತುಣುಕುಗಳ ಚೆಂಡಿಗೆ ಮೂರನೇ ಹಂತದ ಹೊಲಿಗೆಯು ಅತ್ಯಂತ ನಿರ್ಣಾಯಕವಾದದ್ದು. ಇದಕ್ಕೆ ಪಕ್ಕ ಪಕ್ಕದಲ್ಲಿ ನಾಲ್ಕು ಸಾಲು ಸೀಮ್ ಬೇಕಾಗುತ್ತದೆ (ಗೇಂದ್ ಸಿಲಾಯಿ/ಚೆಂಡು ಹೊಲಿಗೆ). “ಅತ್ಯುತ್ತಮವೆನ್ನಬಹುದಾದ ಚೆಂಡುಗಳು ಸುಮಾರು 80 ಹೊಲಿಗೆಗಳನ್ನು ಹೊಂದಿರುತ್ತವೆ” ಎಂದು ಅವರು ಹೇಳುತ್ತಾರೆ. ಹೊಲಿಗೆಗಳ ಸಂಖ್ಯೆಯನ್ನು ಅವಲಂಬಿಸಿ, ಒಬ್ಬ ಕಾರ್ಮಿಕನು ಪ್ರತಿ ಚೆಂಡಿಗೆ 35-50 ರೂ.ಗಳವರೆಗೆ ಗಳಿಸುತ್ತಾನೆ. ಎರಡು ತುಣುಕಿನ ಚೆಂಡುಗಳಿಗೆ, ಅಂಚನ್ನು ಯಂತ್ರದಿಂದ ಹೊಲಿಯಲಾಗುತ್ತದೆ.
“ಸ್ಪಿನ್ನರ್ ಹೋ ಯಾ ಫಾಸ್ಟ್ ಬೌಲರ್, ದೋನೋ ಸೀಮ್ ಕೇ ಸಹಾರೇ ಹೀ ಗೇಂದ್ ಫೇಕ್ತೇ ಹೈ [ಸ್ಪಿನ್ನರ್ ಇರಲಿ ಫಾಸ್ಟ್ ಬೌಲರ್ ಇರಲಿ ಅವರು ಸೀಮ್ ಮೂಲಕವೇ ಬಾಲ್ ಎಸೆಯುತ್ತಾರೆ]” ಎಂದು ಧರಮ್ ಹೇಳುತ್ತಾರೆ. ಒಮ್ಮೆ ಅಂಚಿನ ಹೊಲಿಗೆಗಳು ಮುಗಿದ ನಂತರ, ಹೊರಬಂದ ಅಂಚನ್ನು ಕೈಯಿಂದ ಒತ್ತಲಾಗುತ್ತದೆ. ನಂತರ ಚೆಂಡಿಗೆ ಪಾಲಿಷ್ ಹಚ್ಚಿ ಮೊಹರು ಹಾಕಲಾಗುತ್ತದೆ. “ಖಿಲಾಡಿ ಕ್ಯಾ ಪಹಚಾನ್ತೇ ಹೈ? ಸಿರ್ಫ್ ಚಮಕ್ತೇ ಹುಯೇ ಗೇಂಧ್, ಸೋನೇ ಕೀ ಮುಹರ್ ಕೇ ಸಾಥ್ [ಆಟಗಾರ ಏನು ನೋಡುತ್ತಾನೆ? ಹೊಳೆಯುವ ಚೆಂಡು ಮತ್ತು ಅದರ ಮೇಲಿನ ಚಿನ್ನದ ಮೊಹರನ್ನು ಮಾತ್ರ]”
" ಕ್ರಿಕೆಟ್ ಬಾಲ್ ಕಿ ಏಕ್ ಖಾಸ್ ಬಾತ್ ಬತಾಯಿಯೇ [ಕ್ರಿಕೆಟ್ ಚೆಂಡುಗಳ ವಿಶೇಷತೆ ಏನು ಹೇಳಿ ನೋಡೋಣ?] ಮದನ್ ಕೇಳುತ್ತಾರೆ.
“ತನ್ನ ಸ್ವರೂಪಗಳನ್ನು ಬದಲಾಯಿಸಿಕೊಂಡ ಏಕೈಕ ಆಟ ಇದಾಗಿದೆ” ಎನ್ನುತ್ತಾರವರು, “ಲೇಕಿನ್ ಬನಾನೇವಾಲಾ ಔರ್ ಬನಾನೇ ಕೀ ತಕ್ನೀಕ್, ತರಿಖಾ, ಔರ್ ಚೀಜೇ ಬಿಲ್ಕುಲ್ ನಹೀ ಬದ್ಲೀ [ಆದರೆ ಚೆಂಡು ಮಾಡುವವರು, ಮಾಡುವ ತಂತ್ರ, ವಿಧಾನ ಮತ್ತು ಮೂಲವಸ್ತುಗಳು ಮಾತ್ರ ಇದರಲ್ಲಿ ಬದಲಾಗಿಲ್ಲ].
ದಿನಕ್ಕೆ ಸರಾಸರಿ 200 ಚೆಂಡುಗಳನ್ನು ಮದನ್ ಅವರ ಕಾರಿಗಾರ್‌ಗಳು ತಯಾರಿಸಬಲ್ಲರು . ಒಂದು ಚೆಂಡು ಅಥವಾ ಒಂದು ಬ್ಯಾಚ್ ಚೆಂಡುಗಳನ್ನು ತಯಾರಿಸಲು, ಸುಮಾರು 2 ವಾರ ಬೇಕಾಗುತ್ತದೆ. ಚರ್ಮವನ್ನು ಸಂಸ್ಕರಿಸುವುದರಿಂದ ಹಿಡಿದು ಚೆಂಡು ಪೂರ್ಣ ತಯಾರಾಗಲು, "ಒಂದು ತಂಡವಾಗಲು ಹನ್ನೊಂದು ಆಟಗಾರರು ಬೇಕಾಗುವಂತೆ, ಚೆಂಡು ತಯಾರಿಸಲು ಕನಿಷ್ಠ 11 ಬಗೆಯ ಕೌಶಲಗಳು ಗೊತ್ತಿರುವ ಕಾರಿಗಾರ್‌ಗಳು ಬೇಕಾಗುತ್ತಾರೆ" ಎಂದು ಮದನ್ ತಮ್ಮ ಉದಾಹರಣೆಗೆ ತಾವೇ ನಗುತ್ತಾ ಹೇಳುತ್ತಾರೆ.
"ಪರ್ ಖೇಲ್ ಕಾ ಅ ಸ್ಲೀ ಕಾರಿಗಾ ರ್ ತೋ ಖಿಲಾಡಿ ಹಿ ಹೋ ವೇ ಹೈ [ಆದರೆ ಕ್ರೀಡೆಯಲ್ಲಿ ನಿಜವಾದ ಕುಶಲಕರ್ಮಿಯೆಂದು ಪರಿಗಣಿಸಲ್ಪಡುವುದು ಆಟಗಾರರು ಮಾತ್ರ]" ಎಂದು ಅವರು ಹೇಳುತ್ತಾರೆ.
ಈ ವರದಿಯನ್ನು ತಯಾರಿಸುವ ಸಮಯದಲ್ಲಿ ಅಮೂಲ್ಯವಾದ ಸಹಾಯವನ್ನು ನೀಡಿದ ಭರತ್ ಭೂಷಣ್ ಅವರಿಗೆ ವರದಿಗಾರರು ಆಭಾರಿಯಾಗಿರುತ್ತಾರೆ.
ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬಲ ದೊರೆತಿರುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು