"ಸುಮಾರು 30 ವರ್ಷಗಳ ಹಿಂದೆ ಸ್ಪಿಟಿಯಲ್ಲಿ ಭಾರಿ ಹಿಮಪಾತವಾಗುತ್ತಿತ್ತು. ಅದು ಹಸಿರಿನಿಂದ ಕೂಡಿರುತ್ತಿತ್ತು ಮತ್ತು ಹುಲ್ಲು ಕೂಡ ಚೆನ್ನಾಗಿ ಬೆಳೆಯುತ್ತಿತ್ತು," ಎಂದು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಜಿಲ್ಲೆಯ ಪಶುಪಾಲಕ ಮತ್ತು ರೈತ ಚೆರಿಂಗ್ ಆಂಗ್ದುಯಿ ಹೇಳುತ್ತಾರೆ.
43 ವರ್ಷ ಪ್ರಾಯದ ಅವರು ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಮತ್ತು 158 ಜನರಿಗೆ ನೆಲೆಯಾಗಿರುವ ( ಜನಗಣತಿ 2011 ) ಲಾಂಗ್ಜಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ರಾಜ್ಯದಲ್ಲಿ ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾದ ಭೋಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಳ್ಳಿಯ ನಿವಾಸಿಗಳು ಹೆಚ್ಚಾಗಿ ಕೃಷಿ, ಜಾನುವಾರು ಸಾಕಾಣಿಕೆ ಮತ್ತು ಸ್ಪಿಟಿಗೆ ಭೇಟಿ ನೀಡುವ ಪ್ರವಾಸಿಗರನ್ನು ನಿರ್ವಹಿಸುವಲ್ಲಿ ನಿರತರಾಗಿದ್ದಾರೆ.
ಜುಲೈ 2021ರ ಕೊನೆಯಲ್ಲಿ, ನಾವು ಚೆರಿಂಗ್ ಮತ್ತು ಲ್ಯಾಂಗ್ಜಾದಲ್ಲಿ ಕೆಲವು ಪಶುಪಾಲಕರನ್ನು ಭೇಟಿಯಾದೆವು, ಅವರು ತಮ್ಮ ಜಾನುವಾರುಗಳು, ಕುರಿಗಳು ಮತ್ತು ಆಡುಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ತಮ್ಮ ಜಾನುವಾರುಗಳಿಗೆ ಹುಲ್ಲನ್ನು ಹುಡುಕಲು ಹೆಚ್ಚು ದೂರ ಪ್ರಯಾಣಿಸಬೇಕಾದ ಬಗ್ಗೆ ಮಾತನಾಡಿದರು.
"ಈಗ ಇಲ್ಲಿನ ಪರ್ವತಗಳಲ್ಲಿ ಕಡಿಮೆ ಹಿಮ ಬೀಳುತ್ತಿದೆ. ಇಲ್ಲಿ ಹೆಚ್ಚು ಮಳೆಯೂ ಆಗುವುದಿಲ್ಲ. ಇದರಿಂದಾಗಿ ಈಗೀಗ ಹೆಚ್ಚು ಹುಲ್ಲು ಬೆಳೆಯುವುದಿಲ್ಲ," ಎಂದು ಚೆರಿಂಗ್ ಹೇಳುತ್ತಾರೆ, "ಅದಕ್ಕಾಗಿಯೇ ನಾವು ಜಾನುವಾರುಗಳನ್ನು ಮೇಯಲು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯಬೇಕಾಗಿದೆ."
ಸ್ಪಿಟಿ ಹಿಮಾಚಲ ಪ್ರದೇಶದ ಈಶಾನ್ಯ ಭಾಗದಲ್ಲಿದೆ. ಇದು ಹಲವಾರು ನದಿಗಳ ಎತ್ತರದ ಕಣಿವೆಗಳನ್ನು ಹೊಂದಿದೆ. ಈ ಪ್ರದೇಶವು ತಂಪಾದ ಮರುಭೂಮಿಯಂತಹ ಪರಿಸರವನ್ನು ಹೊಂದಿದ್ದು, ಭಾರತದ ಉಳಿದ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ - ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ. ಸಂದರ್ಶಕರು ಇಲ್ಲಿ ಸ್ಪಷ್ಟವಾದ ಆಕಾಶವಿರುವ ರಾತ್ರಿಗಳಲ್ಲಿ ಗೋಚರಿಸುವ ಆಕಾಶಗಂಗೆಯ ನೋಟವನ್ನು ಸಹ ನೋಡಬಹುದು.
ಈ ಚಿತ್ರದಲ್ಲಿ ಹೇಳಲಾದ ಪಶುಪಾಲಕರ ಕಥೆಯು ಅನಿಯಮಿತ ಹಿಮಪಾತದ ಮಾದರಿಗಳು ಚೆರಿಂಗ್ ಮತ್ತು ಅವರ ಊರಿನ ಪಶುಪಾಲಕ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ನಮಗೆ ತೋರಿಸುತ್ತದೆ.
"ಮುಂಬರುವ ವರ್ಷಗಳಲ್ಲಿ ಏನಾದರೂ ಅನಾಹುತ ಸಂಭವಿಸುತ್ತದೆ ಮತ್ತು ಇಲ್ಲಿನ ಭೇಡ್ ಬಕ್ರಿಯಾ [ಕುರಿಗಳು ಮತ್ತು ಮೇಕೆಗಳು] ಅಳಿದುಹೋಗುತ್ತವೆ ಎಂದು ನಾವು [ಗ್ರಾಮಸ್ಥರು] ಚಿಂತಿಸುತ್ತಿದ್ದೇವೆ. ಏಕೆಂದರೆ ನಮ್ಮಲ್ಲಿ ಹೆಚ್ಚು ಹುಲ್ಲು ಉಳಿದಿಲ್ಲ. ನಾವು ಅದನ್ನು ಎಲ್ಲಿಂದ ತರಲು ಸಾಧ್ಯ?" ಎಂದು ಅವರು ಕೇಳುವ ಅವರ ಮುಖದಲ್ಲಿ ಚಿಂತೆಯ ಗೆರೆ ಎದ್ದು ಕಾಣುತ್ತಿತ್ತು.
ಅನುವಾದ : ಶಂಕರ. ಎನ್. ಕೆಂಚನೂರು