ಕಲಿದಾಸ್ಪುರ್ ಹಳ್ಳಿಯ ನಿವಾಸಿಯಾದ ಅಮಿನ ಬೀಬಿ ಮೇ ತಿಂಗಳ ಅಂತ್ಯದಲ್ಲಿ ,“ಈಗ ಚಂಡಮಾರುತವು ನಿಂತಿದ್ದು, ನಮಗೆ ಇಲ್ಲಿಂದ ತೆರಳುವಂತೆ ಸೂಚಿಸಲಾಗಿದೆ. ಆದರೆ ನಾವು ಹೋಗುವುದಾದರೂ ಎಲ್ಲಿಗೆ?” ಎಂದು ನನ್ನನ್ನು ಕೇಳಿದ್ದರು.
ಪಶ್ಚಿಮ ಬಂಗಾಳದ ದಕ್ಷಿಣದ 24 ಪರಗಣಗ ಜಿಲ್ಲೆಯಲ್ಲಿನ ಅಮೀನ ಅವರ ಹಳ್ಳಿಯಿಂದ 150 ಕಿ.ಮೀ. ದೂರದಲ್ಲಿ ಅಂಫನ್ ಚಂಡಮಾರುತವು ಭೂ ಕುಸಿತವನ್ನುಂಟುಮಾಡಿದ ಒಂದು ದಿನದ ಮೊದಲು ಸ್ಥಳೀಯ ಪ್ರಾಧಿಕಾರದವರು ಅನೇಕ ಹಳ್ಳಿಗಳಲ್ಲಿನ ಪರಿವಾರಗಳನ್ನು ತೆರವುಗೊಳಿಸಿ, ಪರಿಹಾರ ಶಿಬಿರಗಳಲ್ಲಿ ಅವರನ್ನು ನೆಲೆಗೊಳಿಸಿತು. ಅಮಿನ ಹಾಗೂ ಆಕೆಯ ಪರಿವಾರದವರನ್ನು ಈ ವರ್ಷದ ಮೇ 19ರಂದು ಪಕ್ಕದ ಹಳ್ಳಿಯಲ್ಲಿನ ತಾತ್ಕಾಲಿಕ ಕೊಠಡಿಗಳಿಗೆ ರವಾನಿಸಲಾಯಿತು.
ಸುಂದರ್ಬನ್ನಲ್ಲಿನ ಗೊಸಬ ವಿಭಾಗದಲ್ಲಿ ಸುಮಾರು 5,800 ಜನರು ವಾಸವಾಗಿರುವ ಹಳ್ಳಿಯೊಂದರಲ್ಲಿನ ಅಮೀನ ಅವರ ಮಣ್ಣಿನ ಗುಡಿಸಲು, ಚಂಡಮಾರುತದಲ್ಲಿ ಕೊಚ್ಚಿಕೊಂಡು ಹೋಯಿತು. ಆಕೆಯ ವಸ್ತುಗಳೆಲ್ಲವೂ ನಾಶವಾದವು. 48 ವರ್ಷದ ಅಮಿನ, ಆಕೆಯ ಪತಿ 56 ವರ್ಷದ ಮೊಹಮ್ಮದ್ ಮೊಲ್ಲ ಮತ್ತು 2ರಿಂದ ಹದಿನಾರು ವರ್ಷದ ಅವರ ಆರು ಮಕ್ಕಳು ಸುರಕ್ಷಿತವಾಗಿದ್ದರು.
ಮೊಹಮ್ಮದ್ ಮೊಲ್ಲ ಚಂಡಮಾರುತಕ್ಕೂ ಮೊದಲು ಎರಡು ವಾರಗಳ ಹಿಂದೆ ಹಳ್ಳಿಗೆ ಹಿಂದಿರುಗಿದ್ದರು. ಮಹಾರಾಷ್ಟ್ರದ ಪುಣೆಯ ಅಂಗಡಿಸಾಲಿನಲ್ಲಿ ಇವರು ಸ್ವಚ್ಛತಾ ಕಾರ್ಮಿಕರಾಗಿ ದುಡಿಯುತ್ತಿದ್ದು, ಮಾಹೆಯಾನ 100,000 ರೂ.ಗಳನ್ನು ಗಳಿಸುತ್ತಿದ್ದರು. ಈ ಬಾರಿ, ಅವರು ಇಲ್ಲಿಯೇ ಉಳಿದು, ಹತ್ತಿರದ ಮೊಲ್ಲ ಖಲಿ ಬಜಾ಼ರಿನಲ್ಲಿ ಚಹಾದ ಅಂಗಡಿಯೊಂದನ್ನು ತೆರೆಯುವ ಯೋಜನೆಯಲ್ಲಿದ್ದರು.
ಮನೆಗೆಲಸಗಳನ್ನು ಮುಗಿಸಿದ ತರುವಾಯ ಹತ್ತಿರದ ಗೊಮೊರ್ ನದಿಗೆ ತೆರಳಿ, ಏಡಿ ಹಾಗೂ ಮೀನುಗಳನ್ನು ಹಿಡಿದು ತರುತ್ತಿದ್ದ ಅಮೀನ ಕುಟುಂಬದ ಸಂಪಾದನೆಗೆ ಕೈಜೋಡಿಸುತ್ತಿದ್ದರು. ಮಾರುಕಟ್ಟೆಯಲ್ಲಿ ಅವನ್ನು ಮಾರುತ್ತಿದ್ದರಾದರೂ “ಅದರಿಂದ ದಿನಕ್ಕೆ 100 ರೂ.ಗಳಷ್ಟು ಸಂಪಾದನೆಯೂ ಗಿಟ್ಟುವುದಿಲ್ಲ” ಎಂದು ಅವರು ನನಗೆ ತಿಳಿಸಿದ್ದರು.
2018ರಲ್ಲಿ ಇವರ ಹಿರಿಯ ಮಗ ರಖ್ವಿಬ್ ಅಲಿ, ತನ್ನ ೧೪ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದ. “ಅಬ್ಬ ಮನೆಗೆ ಕಳುಹಿಸುವ ದುಡ್ಡು ನಮ್ಮ ಜೀವನೋಪಾಯಕ್ಕೆ ಸಾಲುವುದಿಲ್ಲ. ಹೀಗಾಗಿ ನಾನು ಕೆಲಸಕ್ಕೆ ತೆರಳಿದೆ” ಎನ್ನುತ್ತಾನೆ ಆತ. ಕೊಲ್ಕತ್ತದಲ್ಲಿನ ಹೊಲಿಗೆ ಅಂಗಡಿಯಲ್ಲಿ ತಿಂಗಳಿಗೆ 5,000 ರೂ.ಗಳನ್ನು ಸಂಪಾದಿಸುವ ಈತ, ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ ಅಂಫನ್ ಚಂಡಮಾರುತವು ಅಪ್ಪಳಿಸಿದಾಗ ಮನೆಗೆ ವಾಪಸ್ಸಾಗಿದ್ದ.
ಈ ಪರಿವಾರದ ಹುಲ್ಲುಮಾಡಿನ ಮಣ್ಣಿನ ಮನೆಯು ಗೊಮೊರ್ ನದಿಯ ದಡದಲ್ಲಿದೆ. ಸಿದ್ರ್ (2007), ಐಲ (2009) ಮತ್ತು ಬುಲ್ಬುಲ್ (2019) ಚಂಡಮಾರುತಗಳು ಅಪ್ಪಳಿಸಿದಾಗಲೆಲ್ಲ, ನದಿಯ ಹರಿವು ಇವರ ಮನೆಗೆ ನಿಕಟವಾಗುತ್ತಿತ್ತಲ್ಲದೆ, ಕೆಲವು ತರಕಾರಿಗಳೊಂದಿಗೆ ವರ್ಷಕ್ಕೊಮ್ಮೆ ಭತ್ತವನ್ನು ಬೆಳೆಯುತ್ತಿದ್ದ ಇವರ ಮೂರು ಬಿಘ (ಒಂದು ಎಕರೆ) ಭೂಮಿಯೆಲ್ಲವನ್ನು ನಿಧಾನವಾಗಿ ಆಪೋಶನ ತೆಗೆದುಕೊಂಡಿತು.
ಈ ವರ್ಷದ ಮೇ 20ರಂದು ಅಂಫನ್ ಚಂಡಮಾರುತದ ಮಹಾಪೂರವು ಹಳ್ಳಿಯ ಮನೆಗಳು ಹಾಗೂ ಜಮೀನುಗಳನ್ನು ಮತ್ತೊಮ್ಮೆ ಲವಣಯುಕ್ತ ನೀರಿನಿಂದ ಜಲಾವೃತಗೊಳಿಸುವುದಕ್ಕೂ ಮೊದಲೇ ಅಮಿನ ಅವರ ಪರಿವಾರ ಮತ್ತು ಇತರ ಅನೇಕರು ಛೋಟ ಮೊಲ್ಲ ಖಲಿ ಹಳ್ಳಿಯ ಬಿದ್ಯಾದರಿ ಹಾಗೂ ಗೊಮೊರ್ ನದಿಗಳ ಬಿರುಕು ಬಿಟ್ಟ ಏರಿಗಳಲ್ಲಿ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಿಕೊಂಡಿದ್ದರು. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಆ ಪರಿವಾರಗಳಿಗೆ ಆಹಾರ ಹಾಗೂ ನೀರಿನ ಪೊಟ್ಟಣಗಳನ್ನು ಹಂಚಿದವು. ತಾತ್ಕಾಲಿಕ ಕೊಠಡಿಗಳು ಜನರಿಂದ ಕಿಕ್ಕಿರಿದಿತ್ತಲ್ಲದೆ, ಅಲ್ಲಿ ವಿದ್ಯುತ್ ವ್ಯವಸ್ಥೆಯಿರಲಿಲ್ಲ. ಕೋವಿಡ್-19 ಸರ್ವವ್ಯಾಪಿ ವ್ಯಾಧಿಯ ಸಮಯದಲ್ಲಿ ದೈಹಿಕ ದೂರವನ್ನು ಪಾಲಿಸಲು ಅಲ್ಲಿ ಜಾಗವೇ ಇರಲಿಲ್ಲ.
ಪರಿಹಾರ ಶಿಬಿರದಲ್ಲಿ ಆಹಾರವನ್ನು ಹಂಚುತ್ತಿದ್ದ ಸುಂದರ್ಬನ್ ನಾಗರಿಕ್ ಮಂಚ ಎಂಬ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಚಂದನ್ ಮೈಟಿ ಅವರು, “ಒಂದು ತಿಂಗಳು, ಎರಡು ತಿಂಗಳು ಹೀಗೆ ಎಲ್ಲಿಯವರೆಗೂ ಇಲ್ಲಿ ನೆಲೆಸಲು ಸಾಧ್ಯ? ಇವರು ಹೋಗುವುದಾದರೂ ಎಲ್ಲಿಗೆ? ಎಂದು ಪ್ರಶ್ನಿಸುತ್ತಾರೆ. “ಪುರುಷರು, ಯುವಕರು ಜೀವನೋಪಾಯವನ್ನು ಹುಡುಕುತ್ತ ಇಲ್ಲಿಂದ ಹೊರಡಬೇಕಿದೆ. ವಲಸೆ ಹೋಗಲು ಸಾಧ್ಯವಾಗದವರು ಇಲ್ಲಿಯೇ ನೆಲೆಸಿ, ತಮ್ಮ ಜೀವನೋಪಾಯಕ್ಕೆ ನದಿ ಹಾಗೂ ಕಾಡುಗಳಲ್ಲಿನ ಮೀನು, ಏಡಿ ಮತ್ತು ಜೇನುತುಪ್ಪವನ್ನು ಅವಲಂಬಿಸುತ್ತಾರೆ.”
ಎತ್ತರದ ಅಲೆಗಳು, ಪ್ರವಾಹ ಮತ್ತು ಚಂಡಮಾರುತಗಳು ಹೊತ್ತು ತರುವ ಲವಣಯುಕ್ತ ನೀರಿನಿಂದಾಗಿ ಕಳೆದ ಎರಡು ದಶಕಗಳಿಂದಲೂ ಸುಂದರ್ಬನ್ ಪ್ರದೇಶದ ನಿವಾಸಿಗಳು ಎಕರೆಗಟ್ಟಲೆ ಕೃಷಿಯುಕ್ತ ಭೂಮಿಯನ್ನು ಅಪಾರ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿದ್ದಾರೆ. ವರ್ಲ್ಡ್ ವೈಲ್ಡ್ಲೈಫ್ ಫಂಡ್ನ ಟಿಪ್ಪಣಿಯ ಪ್ರಕಾರ ಈ ಪ್ರದೇಶದ ಸುಮಾರು ಶೇಕಡ 85ರಷ್ಟು ನಿವಾಸಿಗಳು ಪ್ರತಿ ವರ್ಷವೂ ಭತ್ತದ ಒಂದು ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಲವಣಯುಕ್ತ ನೀರು, ಮಣ್ಣಿನ ಫಲವತ್ತತೆಯನ್ನು ನಾಶಗೊಳಿಸಿ, ತಾಜಾ ನೀರಿನ ಕೊಳಗಳನ್ನು ಒಣಗಿಸುತ್ತಿದ್ದು, ಅಲ್ಲಿಯ ಮೀನಿನ ವಂಶವನ್ನೇ ನಿರ್ನಾಮಗೊಳಿಸುತ್ತಿದೆ. ಭೂಮಿಯು ಮತ್ತೊಮ್ಮೆ ಕೃಷಿಯುಕ್ತವೆನಿಸಲು ವರ್ಷಗಳೇ ಬೇಕು.
“ನೀರು ಜಮೀನುಗಳಲ್ಲಿ 10ರಿಂದ 15 ದಿನಗಳವರೆಗೂ ಮುಂದಕ್ಕೆ ಹರಿದು ಹೋಗದೆ ಹಾಗೆಯೇ ನಿಂತಿರುತ್ತದೆ” ಎಂಬುದಾಗಿ ನಮ್ಖನ ವಿಭಾಗದ ಮೌಸುನಿ ದ್ವೀಪದಲ್ಲಿನ ಬಲಿಯರ ಹಳ್ಳಿಯ 52ರ ವಯಸ್ಸಿನ ಅಬು ಜಬಯೆರ್ ಶಾ ತಿಳಿಸುತ್ತಾರೆ. ಉಪ್ಪಿನ ಕಾರಣದಿಂದಾಗಿ, ಈ ಭೂಮಿಯ ಮೇಲೆ ಬೆಳೆ ಬೆಳೆಯುವುದಿಲ್ಲವಷ್ಟೇ ಅಲ್ಲ, ಕೊಳಗಳಲ್ಲಿ ಮೀನುಗಳೂ ಕಂಡುಬರುವುದಿಲ್ಲ. ಅಲಿ ಶಾ ಅವರು ಸೀಗಡಿಯ ವ್ಯಾಪಾರಸ್ಥರು. ಹತ್ತಿರದ ನದಿಗಳಲ್ಲಿ ಸೀಗಡಿಗಳನ್ನು ಹಿಡಿಯುವ ಹಳ್ಳಿಗರಿಂದ ಅವನ್ನು ಕೊಂಡು, ಸ್ಥಳೀಯ ಮಾರಾಟಗಾರರಿಗೆ ಮಾರುತ್ತಾರೆ.
ಇವರ ಪತ್ನಿ 45ರ ವಯಸ್ಸಿನ ರುಕಿಯ ಬೀಬಿ, ಗೃಹಿಣಿ. ಕೆಲವೊಮ್ಮೆ ಇವರು ಕಸೂತಿಯ ಕೆಲಸದಿಂದ ಸ್ವಲ್ಪ ಹಣವನ್ನು ಸಂಪಾದಿಸುತ್ತಾರೆ. ಅಲಿ ಶಾ, ಅವರ ಪತ್ನಿ ಹಾಗೂ ಮನೆಯಲ್ಲಿರುವ ಇಬ್ಬರು ಮಕ್ಕಳ ಪರಿವಾರವು 24ರ ವಯಸ್ಸಿನ ತಮ್ಮ ಹಿರಿಯ ಮಗ, ಸಾಹೇಬ್ ಅಲಿ ಶಾ ಮನೆಗೆ ಕಳುಹಿಸುವ ಹಣವನ್ನು ಅವಲಂಬಿಸಿದ್ದಾರೆ. ಸಾಹೇಬ್, ಕೇರಳದಲ್ಲಿ ಕಟ್ಟಡ ಕಾರ್ಮಿಕನಾಗಿದ್ದಾನೆ. “ಅಲ್ಲಿ ಆತನು ಇತರರ ಮನೆಗಳನ್ನು ನಿರ್ಮಿಸುತ್ತಿದ್ದಾನೆ. ಇಲ್ಲಿ ಆತನ ಸ್ವಂತ ಮನೆಯೇ ನಿರ್ನಾಮಗೊಂಡಿದೆ” ಎನ್ನುತ್ತಾರೆ ಅಬು ಜಬಯೆರ್.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ನಡೆಸುತ್ತಿರುವ ಡೆಲ್ಟಾ ವಲ್ನರೆಬಿಲಿಟಿ ಎಂಡ್ ಕ್ಲೈಮೆಟ್ ಚೇಂಜ್: ಮೈಗ್ರೇಷನ್ ಎಂಡ್ ಅಡಾಪ್ಷನ್ ಎಂಬ ಅಧ್ಯಯನವು, 2014 ಮತ್ತು 2018ರ ನಡುವಿನ ಸುಂದರ್ಬನ್ ಪ್ರದೇಶದ ಶೇಕಡ 64ರಷ್ಟು ವಲಸೆಗೆ, ಅರಕ್ಷಣೀಯ ಕೃಷಿಯಿಂದಾಗಿ ಉಂಟಾದ ಆರ್ಥಿಕ ಸಂಕಷ್ಟವೇ ಕಾರಣವೆಂಬುದಾಗಿ ತಿಳಿಸಿದೆ. ಅಂತೆಯೇ ಅವಿಜಿತ್ ಮಿಸ್ತ್ರಿ (ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿನ ನಿಸ್ತರಿನಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು) ಅವರು ಸುಂದರ್ಬನ್ನಲ್ಲಿ ನಡೆಸಿದ ಸಮೀಕ್ಷೆಯು, ಸಮೀಕ್ಷೆಗೆ ಒಳಪಡಿಸಲಾದ ಮೂರನೇ ನಾಲ್ಕು ಭಾಗ ಕುಟುಂಬಗಳಲ್ಲಿ ಕನಿಷ್ಟ ಒಬ್ಬ ಸದಸ್ಯರು ಕೆಲಸವನ್ನು ಅರಸಿ, ಇತರೆ ಜಿಲ್ಲೆಗಳು ಮತ್ತು ರಾಜ್ಯಗಳಿಗೆ ವಲಸೆ ಹೋಗಿದ್ದಾರೆಂದು ತಿಳಿಸುತ್ತದೆ.
ಗೊಸಬ ವಿಭಾಗದ ಕುಮಿರ್ಮರಿ ಹಳ್ಳಿಯ ಪ್ರಾಥಮಿಕ ಶಾಲಾ ಉಪಾಧ್ಯಾಯರಾದ ಪೊಬಿತ್ರ ಗಯೆನ್, ಈ ಪ್ರದೇಶದಲ್ಲಿನ ಅನೇಕ ಮಕ್ಕಳು ವಲಸೆಯಿಂದಾಗಿ ತಮ್ಮ ವಿದ್ಯಾಭ್ಯಾಸವನ್ನು ತೊರೆಯಬೇಕಾಯಿತು ಎನ್ನುತ್ತಾರೆ. “ನದಿಯು ನಿಧಾನವಾಗಿ ನಮ್ಮ ಮನೆಗಳು ಮತ್ತು ಭೂಮಿಯನ್ನು ಆಪೋಶನ ತೆಗೆದುಕೊಳ್ಳುತ್ತಿರುವಂತೆಯೇ, ಶಿಕ್ಷಣ ಕ್ಷೇತ್ರವೂ ಸಹ ಕ್ರಮೇಣ ವಿದ್ಯಾರ್ಥಿಗಳನ್ನು ಕಳೆದುಕೊಳ್ಳುತ್ತಿದೆ” ಎಂತಲೂ ಅವರು ಅಲವತ್ತುಕೊಂಡರು.
ಘೊರಮರ ಪಂಚಾಯತ್ ಪ್ರಧಾನರಾದ ಸಂಜಿಬ್ ಸಾಗರ್, ಕಳೆದ 3-4 ವರ್ಷಗಳಲ್ಲಿ ಪರಿಸ್ಥಿತಿಯು ಸ್ವಲ್ಪ ಸುಧಾರಿಸಿತ್ತು (2009ರ ಐಲ ಚಂಡಮಾರುತದ ನಂತರ) ಎಂದು ತಿಳಿಸಿದರು. “ಅನೇಕ ವಲಸೆಗಾರರು ವಾಪಸ್ಸು ಬಂದು (ಸುಂದರ್ಬನ್ ಪ್ರದೇಶಕ್ಕೆ), ಕೃಷಿಯನ್ನು ಪ್ರಾರಂಭಿಸಿದರಲ್ಲದೆ ಮೀನು ಸಾಕಣೆ ಅಥವಾ ಚಿಕ್ಕ ಉದ್ಯಮಗಳಲ್ಲಿ ತೊಡಗಿದರು. ಆದರೆ ಮೊದಲು ಬುಲ್ಬುಲ್, ನಂತರದಲ್ಲಿ ಅಂಫನ್ ಎಲ್ಲವನ್ನೂ ನಿರ್ನಾಮಗೊಳಿಸಿತು.”
ಪಕ್ಕದಲ್ಲಿನ ಉತ್ತರ 24 ಪರಗಣ ಜಿಲ್ಲೆಯಲ್ಲಿನ 56ರ ವಯಸ್ಸಿನ ನಜ಼ರುಲ್ ಮೊಲ್ಲ ಹಾಗೂ ಅವರ 6 ಸದಸ್ಯರ ಪರಿವಾರವು ಅಂಫನ್ ಚಂಡಮಾರುತದಿಂದ ಬದುಕುಳಿದರಾದರೂ, ಮಣ್ಣು ಹಾಗೂ ಜೊಂಡಿನಿಂದ ನಿರ್ಮಿಸಲ್ಪಟ್ಟ ಅವರ ಮನೆಯು ಕೊಚ್ಚಿಹೋಯಿತು. ಮೊಲ್ಲ ಅವರೂ ಸಹ ಕೇರಳದಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಕೋವಿಡ್-19 ಲಾಕ್ಡೌನ್ ಕಾರಣದಿಂದಾಗಿ ಅಂಫನ್ಗಿಂತಲೂ ಒಂದು ತಿಂಗಳ ಮೊದಲು, ಮಿನಖನ್ ವಿಭಾಗದ ಉಚ್ಛಿಲ್ದಹ ಹಳ್ಳಿಗೆ ವಾಪಸಾದರು.
ಚಂಡಮಾರುತವು ಅಪ್ಪಳಿಸಿದ ಮಾರನೆಯ ದಿನವಾದ ಮೇ 21ರಂದು ನಜ಼ರುಲ್, ಸ್ಥಳೀಯ ಆಡಳಿತವು ಹಂಚುತ್ತಿದ್ದ ಪ್ಲಾಸ್ಟಿಕ್ ಹಾಳೆಗಳನ್ನು ಸೂರಿಗೆ ಹೊದಿಸುವ ಉದ್ದೇಶದಿಂದ ಅದನ್ನು ಪಡೆಯಲು ತೆರಳಿದರಾದರೂ, ಅವರ ಪಾಳಿಯು ಬರುವ ವೇಳೆಗೆ ಅದು ಮುಗಿದುಹೋಯಿತು. “ನಾವೀಗ ಭಿಕ್ಷುಕರಿಗಿಂತ ಕಡೆಯಾಗಿದ್ದೇವೆ” ಎಂದರವರು. “ಈ ಸಲದ ಈದ್ (ಮೇ 24ರಂದು) ಆಚರಣೆಗೆ ಆಕಾಶವೇ ಸೂರು.”
ಉತ್ತರ ಪ್ರದೇಶದ ಪಥರ್ಪ್ರತಿಮ ವಿಭಾಗದ ಗೋಪಾಲ್ನಗರ್ ಉತ್ತರದ ಹಳ್ಳಿಯಲ್ಲಿ, ೪೬ರ ವಯಸ್ಸಿನ ಛಬಿ ಭುನಿಯ, ಐಲಾ ಚಂಡಮಾರುತದಿಂದಾಗಿ 2009ರಲ್ಲಿ ತಮ್ಮ ಮನೆಯು ಕುಸಿದುಬಿದ್ದಾಗ ಸಾವಿಗೀಡಾದ ತನ್ನ ತಂದೆ ಸಂಕರ್ ಸರ್ದಾರ್ ಅವರ ಮುರಿದ ಭಾವಚಿತ್ರದ ಫ್ರೇಂಅನ್ನು ಬಿಗಿಯಾಗಿ ಹಿಡಿದಿದ್ದರು. “ಈ ಚಂಡಮಾರುತವು (ಅಂಫನ್) ನಮ್ಮ ಮನೆಯಷ್ಟೇ ಅಲ್ಲದೆ, ನನ್ನನ್ನು ನನ್ನ ಪತಿಯಿಂದಲೂ ದೂರಮಾಡಿತು (ಮೊಬೈಲ್ ನೆಟ್ವರ್ಕ್ನ ಲೋಪದಿಂದಾಗಿ)” ಎಂದರಾಕೆ.
ಛಬಿ ಅವರ ಪತಿ, ಸ್ರಿದಂ ಭುನಿಯ, ಐಲ ಚಂಡಮಾರುತವು ಅಪ್ಪಳಿಸಿದ ಕೆಲವೇ ದಿನಗಳ ನಂತರ ತಮಿಳು ನಾಡಿಗೆ ವಲಸೆ ಹೋದರು. ಅಲ್ಲಿ ಅವರು ಉಪಾಹಾರ ಗೃಹವೊಂದರಲ್ಲಿ ಪರಿಚಾರಕರಾಗಿದ್ದರು. ಹಠಾತ್ತಾಗಿ ಲಾಕ್ಡೌನ್ ಘೋಷಣೆಯಾದ ಕಾರಣ, ಅವರು ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಮೇ ತಿಂಗಳಿನಲ್ಲಿ ನಾನು ಛಬಿಯೊಂದಿಗೆ ಮಾತನಾಡಿದಾಗ, “ಎರಡು ದಿನಗಳ ಹಿಂದೆ ನಾವು ಕೊನೆಯ ಬಾರಿ ಮಾತನಾಡಿದ್ದೆವು. ತನ್ನಲ್ಲಿದ್ದ ಆಹಾರ ಹಾಗೂ ಹಣವು ಮುಗಿದುಹೋಗಿದ್ದು, ಅಪಾರ ಕಷ್ಟಕ್ಕೀಡಾಗಿರುವುದಾಗಿ ಅವರು ನನಗೆ ತಿಳಿಸಿದ್ದರು” ಎಂದರಾಕೆ.
ಗೋಪಾಲ್ನಗರ್ ಉತ್ತರ್ ಹಳ್ಳಿಯ ವಯೋವೃದ್ಧ ಸುಮಾರು 88ರ ವಯಸ್ಸಿನ ಸನಾತನ್ ಸರ್ದಾರ್ ಮೃದಂಗಭಂಗ (ಸ್ಥಳೀಯವಾಗಿ ಇದನ್ನು ಗಬೊಡಿಯ ಎಂದು ಕರೆಯಲಾಗುತ್ತದೆ) ನದಿಯ ಏರಿಯ ಮೇಲೆ ನಿಂತು, “ವರ್ಷಗಳ ಹಿಂದೆ ಒಂದರ ಹಿಂದೊಂದು ಪಕ್ಷಿ ಹಿಂಡು ಈ ಸ್ಥಳಕ್ಕೆ (ಸುಂದರ್ಬನ್) ಭೇಟಿ ನೀಡುತ್ತಿದ್ದವು. ಅವಿನ್ನು ಬರಲಾರವು. ನಾವೇ ಈಗ ವಲಸಿಗರಾಗಿಬಿಟ್ಟಿದ್ದೇವೆ” ಎಂದರು.
ಉಪಲೇಖ : ಅಮಿನ ಬೀಬಿ ಮತ್ತು ಆಕೆಯ ಪರಿವಾರವನ್ನು ಈ ವರದಿಗಾರ ಜುಲೈ 23ರಂದು ಮತ್ತೊಮ್ಮೆ ಭೇಟಿಯಾದಾಗ, ಅವರು ತಮ್ಮ ಹಳ್ಳಿಗೆ ವಾಪಸ್ಸಾಗಿದ್ದರು. ನೀರು ಹಿಂದಕ್ಕೆ ಸರಿದಿತ್ತಲ್ಲದೆ, ಅವರು ಬಿದಿರು ಹಾಗೂ ಪ್ಲಾಸ್ಟಿಕ್ ಹಾಳೆಗಳಿಂದ ತಾತ್ಕಾಲಿಕ ಗುಡಿಸಲೊಂದನ್ನು ಪುನಃ ನಿರ್ಮಿಸಿದ್ದರು. ರಂಜಾ಼ನ್ ಈಗಲೂ ಮನೆಯಲ್ಲೇ ಇದ್ದರು. ಲಾಕ್ಡೌನ್ ನಿರ್ಬಂಧಗಳಿಂದಾಗಿ ಅವರು ಕೆಲಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ತಮ್ಮ ಸ್ವಂತ ಚಹಾದ ಅಂಗಡಿಯನ್ನು ತೆರೆಯಲು ಅವರ ಬಳಿ ಹಣವಿರಲಿಲ್ಲ.
ನಜ಼ರುಲ್ ಮೊಲ್ಲ, ಅವರ ಪರಿವಾರ ಹಾಗೂ ಇತರರೂ ಸಹ ತಮ್ಮ ಮುರಿದು ಬಿದ್ದ ಮನೆಗಳು ಹಾಗೂ ಜೀವನವನ್ನು ಪುನಃ ಸರಿಪಡಿಸಲು ತಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಕೈಗೊಂಡಿದ್ದಾರೆ.
ಅನುವಾದ - ಶೈಲಜ ಜಿ . ಪಿ .