ಲಾತೂರ್ ನಗರದಲ್ಲಿ ತನ್ನ ಶಾಲೆಯನ್ನು ಮುಚ್ಚಿದ್ದರ ಬಗ್ಗೆ ಪಾರಾಸ್ ಮದಿಕರ್ ಯಾವುದೇ 11 ವರ್ಷದ ವಿದ್ಯಾರ್ಥಿ ಪ್ರತಿಕ್ರಿಯಿಸಬಹುದಾದ ರೀತಿಯಲ್ಲಿಯೇ ಪ್ರತಿಕ್ರಿಯಿಸಿದ್ದ. ತಮ್ಮ 4ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಮತ್ತು ರಜೆ ಮತ್ತಷ್ಟು ವಿಸ್ತರಿಸಲಾಗುವುದು ಎಂದು ಅವನು ಸಂತೋಷಪಟ್ಟಿದ್ದ.
ಆದರೆ ಆ ರೀತಿ ಆಗಲಿಲ್ಲ. ಅವನ ತಂದೆ, 45 ವರ್ಷದ ಶ್ರೀಕಾಂತ್, ತನ್ನ ಡ್ರೈವರ್ ಕೆಲಸ ಕಳೆದುಕೊಂಡಿದ್ದರು ಮತ್ತು ಅವರು ಸಿಕ್ಕಿದ ಕೆಲಸವನ್ನು ಮಾಡಬೇಕಾದ ಒತ್ತಡಕ್ಕೆ ಸಿಲುಕಿದರು. ಅದೂ ಅವರ ಹಿಂದಿನ ಆದಾಯದ ಮೂರನೇ ಎರಡರಷ್ಟು ಕಡಿಮೆಗೆ. ಮಾರ್ಚ್ 25ರಂದು ಲಾಕ್ ಡೌನ್ ಘೋಷಿಸಿದ ನಂತರ, ತಾಯಿ 35 ವರ್ಷದ ಸರಿತಾ ಸಹ ತಾವು ಮಾಡುತ್ತಿದ್ದ ಅಡುಗೆ ಕೆಲಸವನ್ನು ಕಳೆದುಕೊಂಡರು.
ಪಾರಸ್ ದಿನದ ಆರಂಭದ ಭಾಗವನ್ನು ತನ್ನ ತಲೆಯ ಮೇಲೆ ಸೊಪ್ಪುಗಳನ್ನು ಹೊತ್ತು ಮಾರುವ ಮೂಲಕ ಕಳೆಯುತ್ತಾನೆ. ವಿಪರ್ಯಾಸವೆಂದರೆ, ಈ ಬಡ ವಿದ್ಯಾರ್ಥಿ ತರಕಾರಿಗಳನ್ನು ಮಾರುವ ಎರಡು ಪ್ರದೇಶಗಳನ್ನು ಸರಸ್ವತಿ ಮತ್ತು ಲಕ್ಷ್ಮಿ ಕಾಲೋನಿ ಎಂದು ಕರೆಯಲಾಗುತ್ತದೆ (ಜ್ಞಾನ ಮತ್ತು ಸಂಪತ್ತಿನ ದೇವತೆಯ ಹೆಸರನ್ನು ಇಡಲಾಗಿದೆ). ಅವನ 12 ವರ್ಷದ ಸಹೋದರಿ, ಸೃಷ್ಟಿ, ರಾಮ್ ನಗರ ಮತ್ತು ಸೀತಾರಾಮ್ ನಗರ ಕಾಲೋನಿಗಳಲ್ಲಿ ತರಕಾರಿಗಳನ್ನು ಮಾರುತ್ತಾಳೆ.
"ಪ್ರತಿದಿನ ಸಂಜೆ ನನ್ನ ಕುತ್ತಿಗೆ ಎಷ್ಟು ನೋಯುತ್ತಿರತ್ತದೆಂದು ಎಂದು ನಾನು ನಿಮಗೆ ಹೇಳಲು ಸಾಧ್ಯವಿಲ್ಲ! ಮನೆಗೆ ತಲುಪಿದಾಗ, ನನ್ನ ತಾಯಿ ಬೆಚ್ಚಗಿನ ಬಟ್ಟೆ ಮತ್ತು ಎಣ್ಣೆಯಿಂದ ಮಸಾಜ್ ಮಾಡುತ್ತಾರೆ, ಇದರಿಂದಾಗಿ ಮರುದಿನ ಬೆಳಿಗ್ಗೆ ನಾನು ಮತ್ತೆ ಭಾರವನ್ನು ಹೊತ್ತುಕೊಳ್ಳಲು ಸಾಧ್ಯವಾಗುತ್ತಿದೆ” ಎಂದು ಪುಟ್ಟ ಪಾರಸ್ ಹೇಳುತ್ತಾನೆ. ಸೃಷ್ಟಿಯ ಸಮಸ್ಯೆ ವಿಭಿನ್ನವಾದುದು: "ಮಧ್ಯಾಹ್ನದ ಹೊತ್ತಿಗೆ ನನ್ನ ಹೊಟ್ಟೆ ಕೆಟ್ಟದಾಗಿ ನೋಯುತ್ತದೆ" ಎಂದು ಅವಳು ಹೇಳುತ್ತಾಳೆ. "ಊಟ ಮಾಡುವ ಮೊದಲು ನಾನು ನಿಂಬೂ ಪಾನಿ ಕುಡಿಯುತ್ತೇನೆ - ಇದು ನನಗೆ ಸ್ವಲ್ಪ ಸಮಾಧಾನ ನೀಡುತ್ತದೆ." ಲಾಕ್‌ಡೌನ್‌ಗೆ ಮೊದಲು ಇಬ್ಬರು ಮಕ್ಕಳಲ್ಲಿ ಯಾರೊಬ್ಬರೂ ದೈಹಿಕ ಶ್ರಮದ ಕೆಲಸವನ್ನು ಮಾಡಿಲ್ಲ. ಈಗ ಅವರು ಕೆಟ್ಟ ಪರಿಸ್ಥಿತಿಯಲ್ಲಿ, ಒಂದು ತುಂಡು ರೊಟ್ಟಿ ಸಂಪಾದಿಸುವ ಸಲುವಾಗಿ ಹೊರಗೆ ಬೀದಿಗಳಲ್ಲಿ ತಿರುಗುತ್ತಿದ್ದಾರೆ.
ಪಾರಸ್ ಮತ್ತು ಸೃಷ್ಟಿ ಏಪ್ರಿಲ್ 2ರಿಂದ ಬೆಳಿಗ್ಗೆ 8ರಿಂದ 11ರವರೆಗೆ ಲಾತೂರ್‌ನ ಆಯಾ ಮಾರ್ಗಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸಮಯದಲ್ಲಿ, ಪ್ರತಿಯೊಬ್ಬರೂ ಮೂರು ಕಿಲೋಮೀಟರ್ ದೂರವನ್ನು 4-5 ಕಿಲೋಗ್ರಾಂಗಳಷ್ಟು ತೂಕವನ್ನು ಹೊತ್ತು ಸಾಗಬೇಕಿರುತ್ತದೆ. ಸೃಷ್ಟಿ ಹೆಚ್ಚು ಕಷ್ಟವನ್ನು ಎದುರಿಸುತ್ತಾಳೆ, ಏಕೆಂದರೆ ಅವಳು ಸುಮಾರು ಒಂದು ತಕ್ಕಡಿ ಮತ್ತು 500 ಗ್ರಾಂ ತೂಕ ದ ಕಲ್ಲನ್ನು ಸಹ ಹೊಂದಿದ್ದಾಳೆ, ಅದು ಅವಳ ಬುಟ್ಟಿಯ ತೂಕವನ್ನು ಹೆಚ್ಚಿಸುತ್ತದೆ. ಪಾರಸ್ ಪ್ರತ್ಯೇಕ ಕಟ್ಟುಗಳಿರುವ ಸೊಪ್ಪುಗಳನ್ನು ಹೊಂದಿದ್ದು, ಅದನ್ನು ಅವನ ತಾಯಿ ಕಟ್ಟಿ ಕೊಡುತ್ತಾರೆ, ಮತ್ತು ಪ್ರತಿ ಕಟ್ಟಿನ ಬೆಲೆಯನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಅವರು ಈ ಕೆಲಸ ಮಾಡುವ ಸಮಯದಲ್ಲಿ, ಲಾತೂರ್‌ನಲ್ಲಿ ಸರಾಸರಿ ತಾಪಮಾನವು ಸುಮಾರು 27° C ನಿಂದ 30. C ಗೆ ಏರುತ್ತದೆ.
ಅವರು ತರಕಾರಿಗಳು ಮತ್ತು ಇತರ ಉತ್ಪನ್ನಗಳನ್ನು ಎಲ್ಲಿಂದ ತರುತ್ತಾರೆ? ಹೌದು, ಅವರಲ್ಲಿ ಸೃಷ್ಟಿಯ ಕೆಲಸ ಬೆಳಿಗ್ಗೆ 8 ಗಂಟೆಗೂ ಮುಂಚೆಯೇ ಪ್ರಾರಂಭವಾಗುತ್ತದೆ. "ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ನಾನು ಗೋಲೈಗೆ ಹೋಗುತ್ತೇನೆ (ಲಾತೂರ್‌ನ ಮುಖ್ಯ ತರಕಾರಿ ಮಾರುಕಟ್ಟೆ, ಅವರ ಮನೆಯಿಂದ ಐದು ಕಿಲೋಮೀಟರ್ ದೂರದಲ್ಲಿದೆ)." ಆಕೆ ತನ್ನ ತಂದೆ ಅಥವಾ ರಾಜ್ಯ ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನೆರೆಯ ಗೋವಿಂದ್ ಚವಾಣ್ (23) ಜೊತೆಗೂಡಿ ಹೋಗುತ್ತಾಳೆ. ಅವರು ಗೋಲೈವರೆಗೂ ಪ್ರಯಾಣಿಸಲು ಗೋವಿಂದ್ ಅವರ ಸ್ಕೂಟರ್ ಬಳಸುತ್ತಾರೆ (ಇದಕ್ಕಾಗಿ ಅವರು ಅವರಿಂದ ಒಂದು ಪೈಸೆಯನ್ನೂ ಪಡೆಯುವುದಿಲ್ಲ, ಪೆಟ್ರೋಲ್ ಕೂಡ ಹಾಕಿಸಿಕೊಳ್ಳುವುದಿಲ್ಲ). ಅವರು ಉತ್ಪನ್ನಗಳೊಂದಿಗೆ ಹಿಂದಿರುಗಿದಾಗ, ಅವರ ತಾಯಿ ಅವರಿಗೆ ಬುಟ್ಟಿಗಳು ಅಥವಾ ಇತರ ಪಾತ್ರೆಗಳಲ್ಲಿ ಪ್ಯಾಕ್ ಮಾಡಿ ಜೋಡಿಸಿ ಕೊಡುತ್ತಾರೆ.
“ನಾವು ಏನು ಮಾರಾಟ ಮಾಡಬೇಕೆಂದು ನಾವೇ ಆರಿಸಿಕೊಳ್ಳುವುದಿಲ್ಲ. ನಮ್ಮ ತಂದೆ ಅಥವಾ ಗೋವಿಂದ್ ಭೈಯಾ ಏನೇ ವ್ಯವಸ್ಥೆ ಮಾಡಿದರೂ ನಾವು ಅದನ್ನು ಮಾರಾಟ ಮಾಡುತ್ತೇವೆ ”ಎಂದು ಪಾರಸ್ ಹೇಳುತ್ತಾನೆ." ನಾವುಸೆಣಬಿನ ಚೀಲದಲ್ಲಿ 350-400 [ಪ್ರತಿದಿನ] ಬೆಲೆ ಬಾಳುವ ವಸ್ತುಗಳನ್ನು ತರುತ್ತೇವೆ”ಎಂದು ಸೃಷ್ಟಿ ವಿವರಿಸುತ್ತಾಳೆ. “ಆದರೆ ಒಟ್ಟಿಗೆ ಸೇರಿ ನಾವು [ನಿವ್ವಳ] ರೂ. 100 ಗಳಿಸಿದರೆ ಹೆಚ್ಚು.”
ಅವರ ತಂದೆ ಶ್ರೀಕಾಂತ್ ಅವರು ಚಾಲಕರಾಗಿ ದಿನಕ್ಕೆ 700-800 ರೂ. ಗಳಿಸುತ್ತಿದ್ದರು - ಮತ್ತು ಅವರಿಗೆ ಪ್ರತಿ ತಿಂಗಳು ಕನಿಷ್ಠ 20 ದಿನಗಳ ಕೆಲಸ ಸಿಗುತ್ತಿತ್ತು. ಕರ್ತವ್ಯದಲ್ಲಿದ್ದಾಗ ಅವರ ಆಹಾರ ಆಹಾರದ ಖರ್ಚನ್ನೂ ಭರಿಸಲಾಗುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಎಲ್ಲವೂ ಕೊನೆಗೊಂಡಿತು. ಪಾರಸ್ ತರಕಾರಿಗಳನ್ನು ಮಾರುವ ಓಲ್ಡ್ ಆವುಸಾ ರಸ್ತೆಯ ಲಕ್ಷ್ಮಿ ಕಾಲೋನಿಯಲ್ಲಿ ಶ್ರೀಕಾಂತ್ ಈಗ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಈ ಉದ್ಯೋಗವು ಶ್ರೀಕಾಂತ್‌ಗೆ ತಿಂಗಳಿಗೆ ಕೇವಲ 5,000 ರೂಪಾಯಿಗಳ ಗಳಿಕೆ ತರುತ್ತಿದೆ - ಇದು ಚಾಲಕನಾಗಿರುವಾಗಿನ ಆದಾಯಕ್ಕಿಂತ ಶೇಕಡಾ 70ರಷ್ಟು ಕಡಿಮೆ.
ಕುಟುಂಬವು ಶ್ರೀಕಾಂತ್ ಅವರ ಹೊಸ ಕೆಲಸದ ಸ್ಥಳದ ಬಳಿ ಒಂದು ಮನೆಯನ್ನು ಹುಡುಕಬೇಕಾಗಿಯಿತು - ಮತ್ತು ಲಾಕ್‌ಡೌನ್ ಪ್ರಾರಂಭದ ದಿನಗಳಲ್ಲಿ ಅವರು ಇಲ್ಲಿಗೆ ತೆರಳಿದ್ದರು. ಆದರೆ ಇಲ್ಲಿ ಮಾಸಿಕ ಬಾಡಿಗೆ 2,500 ರೂ - ಅಂದರೆ ಅವರ ಮಾಸಿಕ ಆದಾಯದ ಶೇಕಡಾ 50 - ಅವರು ಮೊದಲಿದ್ದ ಸ್ಥಳದಲ್ಲಿ 2,000 ರೂ ಬಾಡಿಗೆ ಪಾವತಿಸುತ್ತಿದ್ದರು.
ಲಾಕ್‌ಡೌನ್‌ಗೆ ಮುಂಚಿತವಾಗಿ ತಾವು ಈ ಕೆಲಸವನ್ನು ಮಾಡಲಿದ್ದೇವೆ ಎಂದುಸೃಷ್ಟಿಯಾಗಲಿ ಅಥವಾ ಪಾರಸ್ ಇಬ್ಬರೂ ಊಹಿಸಿರಲಿಲ್ಲ. ಇಬ್ಬರೂ ಶ್ರದ್ಧೆಯಿಂದ ಓದುವ ವಿದ್ಯಾರ್ಥಿಗಳಾಗಿದ್ದಾರೆ
ಲಾಕ್‌ಡೌನ್ ಆಗುವ ಮೊದಲು, ಅವರ ತಾಯಿ ಸರಿತಾ ಸ್ಥಳೀಯ ಸಾಯಿ ಮೆಸ್‌ನಲ್ಲಿ ಅಡುಗೆಯಾಳಾಗಿ ಕೆಲಸ ಮಾಡುತ್ತಿದ್ದರು ಮತ್ತು ತಿಂಗಳಿಗೆ 5,000 ರೂ. ಸಂಪಾದಿಸುತ್ತಿದ್ದರು “ನನ್ನ ತಾಯಿ ಅಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಮತ್ತು ನಂತರ ಸಂಜೆ 5ರಿಂದ 11ರವರೆಗೆ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಮನೆಯಿಂದ ಹೊರಡುವ ಮೊದಲು ಅವರು ನಮಗಾಗಿ ಆಹಾರವನ್ನು ತಯಾರಿಸುತ್ತಿದ್ದರು” ಎಂದು ಸೃಷ್ಟಿ ಹೇಳುತ್ತಾಳೆ. ಈಗ ಸರಿತಾಗೆ ಯಾವುದೇ ಆದಾಯವಿಲ್ಲ ಪ್ರಸ್ತುತ ಸೃಷ್ಟಿ ಮತ್ತು ಪಾರಸ್‌ಗಾಗಿ ಮಾರಾಟಕ್ಕೆ ವಸ್ತುಗಳನ್ನು ತಯಾರು ಮಾಡಿಕ ಕೊಡುವುದರ ಜೊತೆಗೆ ಮನೆ ನಡೆಸುತ್ತಿದ್ದಾರೆ.
ಲಾಕ್‌ಡೌನ್‌ಗೆ ಮುಂಚಿತವಾಗಿ, ಇಬ್ಬರು ಮಕ್ಕಳಲ್ಲಿ ಒಬ್ಬರೂ ಇಷ್ಟು ಕೆಲಸ ಮಾಡಬೇಕಾಗಬಹುದೆಂದು ಊಹಿಸಿರಲಿಲ್ಲ. ಇಬ್ಬರೂ ಶ್ರದ್ಧೆಯಿಂದ ಓದುವ ವಿದ್ಯಾರ್ಥಿಗಳಾಗಿದ್ದಾರೆ. 4ನೇ ತರಗತಿಯಲ್ಲಿ ಓದುತ್ತಿರುವ ಪಾರಸ್ ತನ್ನ ಮೊದಲ ಪರೀಕ್ಷೆಯಲ್ಲಿ 95 ಶೇಕಡಾ ಮತ್ತು ಸೃಷ್ಟಿ 5ನೇ ತರಗತಿಯಲ್ಲಿ ಶೇಕಡಾ 84 ಅಂಕಗಳನ್ನು ಗಳಿಸಿದ್ದಾಳೆ. "ನಾನು ಐಎಎಸ್ ಅಧಿಕಾರಿಯಾಗಲು ಬಯಸುತ್ತೇನೆ" ಎಂದು ಪಾರಸ್ ಹೇಳುತ್ತಾನೆ. "ನಾನು ವೈದ್ಯಳಾಗಲು ಬಯಸುತ್ತೇನೆ" ಎಂದು ಸೃಷ್ಟಿ ಹೇಳುತ್ತಾಳೆ. ಅವರ ಶಾಲೆ - ಸರ್ಕಾರಿ ನೆರವಿನ ಖಾಸಗಿ ಸಂಸ್ಥೆಯಾದ ಛತ್ರಪತಿ ಶಿವಾಜಿ ಪ್ರಾಥಮಿಕ ಶಾಲೆ, ಇಬ್ಬರಿಗೂ ಶುಲ್ಕವನ್ನು ಮನ್ನಾ ಮಾಡಿದೆ.
ನಾನು ಪಾರಸ್ ಮತ್ತು ಸೃಷ್ಟಿ ಅವರೊಂದಿಗೆ ಮಾತನಾಡುವಾಗ, ದೂರದರ್ಶನದ ಆರ್ಕೈವ್ ಕೆಲವು ಹಳೆಯ ಹಾಡುಗಳನ್ನು, 'ಜನರಿಗೆ ಸಂಪರ್ಕತಡೆಯನ್ನು ಆಹ್ಲಾದಕರವಾಗಿಸಲು' ಪ್ರಸಾರ ಮಾಡುತ್ತಿತ್ತು. ನನ್ನ ಗಮನ ಸೆಳೆದ ಹಾಡು 1954ರ ಹಿಂದಿಯ ಬೂಟ್ ಪಾಲಿಷ್ ಸಿನೆಮಾದ:
“ಓ ನನ್ಹೆ ಮುನ್ನೆ ಬಚ್ಚೇ
ತೇರೇ
ಮುಟ್ಠಿ ಮೇ ಕ್ಯಾ ಹೈ
ಮುಟಟ್ಠಿ
ಮೇ ಹೈ ತಕ್‌ದೀರ್
ಹಮಾರಿ,
ಹಮ್ನೆ
ಕಿಸ್ಮತ್ ಕೋ ಬಸ್ ಮೇ
ಕಿಯಾ ಹೈ. ”
("ಓ
ಪುಟ್ಟ ಮಗುವೇ
ನಿನ್ನ
ಮುಷ್ಟಿಯೊಳಗೆ ಏನಿದೆ
ನಮ್ಮ
ಬದುಕಿನ ದಾರಿ ನನ್ನ ಮುಷ್ಟಿಯಲ್ಲಿದೆ,
ನಮ್ಮ
ಅದೃಷ್ಟವನ್ನು ಮುಷ್ಟಿಯೊಳಗಿಟ್ಟುಕೊಂಡಿದ್ದೇನೆ.”)
ಇದು ಸೃಷ್ಟಿ ಮತ್ತು ಪಾರಸ್ ವಿಷಯದಲ್ಲೂ ಸಾಧ್ಯವಾಗುವಂತಿದ್ದಿದ್ದರೆ…
ಅನುವಾದ: ಶಂಕರ ಎನ್. ಕೆಂಚನೂರು