ಈ ಬೃಹದಾಕಾರದ ಮರಗಳು ಬೇರು ಸಹಿತವಾಗಿ ಕಿತ್ತು ಬಿದ್ದಿರುವುದನ್ನು ನೋಡಿದಾಗ, ನನಗೆ ನನ್ನ ಮಕ್ಕಳನ್ನು ಕಳೆದುಕೊಂಡಿದ್ದೇನೆ ಎನ್ನಿಸುತ್ತದೆ. ನನ್ನ ಇಡೀ ಜೀವನದಲ್ಲಿ ಮರಗಳು ಮತ್ತು ಸಸ್ಯಗಳೊಂದಿಗೆಯೇ ಬದುಕುತ್ತಾ ಬಂದಿದ್ದೇನೆ" ಎಂದು ತಮ್ಮ ಸುತ್ತಮುತ್ತಲಿನ ವಿನಾಶದ ಚಿತ್ರಣವನ್ನು ನೋಡುತ್ತಾ 40 ರ ಹರೆಯದ ತೋಟದ ಮಾಲಿ ಮದನ್ ಬೈದ್ಯ ವಿವರಿಸುತ್ತಿದ್ದರು. "ಇವು ಕೇವಲ ಮರಗಳಲ್ಲ, ಅವು ಅನೇಕ ಪಕ್ಷಿಗಳು ಮತ್ತು ಚಿಟ್ಟೆಗಳ ನೆಲೆಗಳಾಗಿದ್ದವು. ಅವು ನಮಗೆ ಬಿಸಿಲಿನಲ್ಲಿ ನೆರಳು ನೀಡಿದರೆ, ಮಳೆಯಲ್ಲಿ ಕೊಡೆಗಳಾಗಿದ್ದವು" ಎಂದು ಹೇಳುತ್ತಿದ್ದರು. ಅವರು ವಾಸಿಸುವ ಶಾಹಿದ್ ಸ್ಮೃತಿ ಕಾಲೋನಿ ಬಳಿಯ ಕೋಲ್ಕತ್ತಾದ ಈಸ್ಟರ್ನ್ ಮೆಟ್ರೋಪಾಲಿಟನ್ ಬೈಪಾಸ್‌ನಲ್ಲಿರುವ ಬೈದ್ಯರವರ ಸ್ವಂತ ನರ್ಸರಿ ಅಪಾರ ಹಾನಿಗೆ ಒಳಗಾಗಿದೆ.
ಮೇ 20ರಂದು ನಗರದ ಸುಮಾರು 5,000 ಬೃಹದಾಕಾರದ ಮರಗಳು ಅಮ್ಫಾನ್ ನಿಂದಾಗಿ ಮುರಿದು ಬಿದ್ದಿವೆ ಎಂದು ಕೋಲ್ಕತಾ ಮಹಾನಗರ ಪಾಲಿಕೆ ಅಂದಾಜಿಸಿದೆ. ಅತಿ ಅಪಾಯಕಾರಿಯೆಂದು ವರ್ಗೀಕರಿಸಲ್ಪಟ್ಟ ಅಮ್ಫಾನ್ ಚಂಡಮಾರುತವು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ 140-150 ಕಿಲೋಮೀಟರ್ ವೇಗದಲ್ಲಿ ಬೀಸಿ 165 ಕಿ.ಮೀ ವೇಗದವರೆಗೂ ತಲುಪಿತ್ತು. ಈ ಚಂಡಮಾರುತದಿಂದಾಗಿ ಕೇವಲ 24 ಗಂಟೆಗಳಲ್ಲಿ 236 ಮಿ.ಮೀ ಮಳೆಯಾಗಿದೆ ಎಂದು ಅಲಿಪೋರ್ ವಿಭಾಗದ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಸುಂದರ್‌ಬನ್ಸ್ ನಂತಹ ಪ್ರದೇಶಗಳಲ್ಲಿ ಅಮ್ಫಾನ್ ನಿಂದ ಉಂಟಾದ ಹಾನಿಯನ್ನು ಈ ಹಂತದಲ್ಲಿ ಅಂದಾಜು ಮಾಡುವುದು ಕಷ್ಟ. ಕೋಲ್ಕತಾ ಸೇರಿದಂತೆ ಉತ್ತರ ಮತ್ತು ದಕ್ಷಿಣ 24 ಪರಗಣಗಳು ಈ ಚಂಡಮಾರುತದಿಂದ ತತ್ತರಿಸಿಹೋಗಿವೆ. ಈವರೆಗೆ ಕೋಲ್ಕತ್ತಾದಲ್ಲಿ 19 ಮಂದಿ ಸೇರಿದಂತೆ ಕನಿಷ್ಠ 80 ಜನರು ರಾಜ್ಯಾದ್ಯಂತ ಚಂಡಮಾರುತಕ್ಕೆ ಬಲಿಯಾಗಿದ್ದಾರೆ.
ಅನೇಕ ಪ್ರದೇಶಗಳು ಈಗ ತತ್ತರಿಸಿಹೋಗಿವೆ, ಮತ್ತು ಸಾರಿಗೆ ಮತ್ತು ರಸ್ತೆ ಸಂಪರ್ಕಗಳಿಗೆ ಉಂಟಾಗಿರುವ ಹಾನಿ ಜೊತೆಗೆ ಮೇಳೈಸಿದ ಕೊರೋನಾ ಲಾಕ್ ಡೌನ್ ನಿರ್ಬಂಧ ನಿಜಕ್ಕೂ ಮಾರಕವಾಗಿದೆ. ಇದರಿಂದಾಗಿ ಆ ಪ್ರದೇಶಗಳಿಗೆ ಭೇಟಿ ನೀಡುವುದೇ ಈಗ ಅಸಾಧ್ಯವಾಗಿದೆ.ಲಾಕ್‌ಡೌನ್‌ನಿಂದ ಉಂಟಾಗಿರುವ ಪರಿಣಾಮಗಳು ಇದನ್ನೂ ಮೀರುವಂತಿವೆ.ಸಾಮಾನ್ಯವಾಗಿ ಇಂತಹ ಕೆಲಸಕ್ಕೆ ಆಸರೆಯಾಗುತ್ತಿದ್ದ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ಬಹಳ ಹಿಂದೆಯೇ ನಗರವನ್ನು ತೊರೆದು ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿನ ತಮ್ಮ ಗ್ರಾಮಗಳಿಗೆ ತೆರಳಿದ್ದರಿಂದ, ಈಗ ಪುನಃಸ್ಥಾಪನೆ ಪ್ರಯತ್ನಗಳು ಅತ್ಯಂತ ಕಷ್ಟಕರವಾಗಿವೆ.
ಚಂಡಮಾರುತದ ಹೊಡೆತಕ್ಕೆ ಮುರಿದು ಬಿದ್ದಿರುವ ಮರಗಳ ಪಕ್ಕದಲ್ಲಿ, ಮರುದಿನ ಬೆಳಿಗ್ಗೆ ಕೋಲ್ಕತ್ತಾದ ಐತಿಹಾಸಿಕ ಕಾಲೇಜು ಬೀದಿ (Kolkata’s historic College Street) ಯಲ್ಲಿ ಸಾವಿರಾರು ಪುಸ್ತಕಗಳು ಮತ್ತು ಪುಟಗಳು ನೀರಿನಲ್ಲಿ ತೇಲುತ್ತಿದ್ದವು. ಅಲ್ಲಿರುವ ಅನೇಕ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಇದರ ಹೆಸರು ಬಂದಿದೆ.ಬೋಯಿ ಪ್ಯಾರಾ ಎಂದೂ ಕರೆಯಲ್ಪಡುವ ಇದು ಭಾರತದ ಅತಿದೊಡ್ಡ ಪುಸ್ತಕ ಮಾರುಕಟ್ಟೆಗಳಲ್ಲಿ ಒಂದಾಗಿದೆ, ಇದು ಸುಮಾರು 1.5 ಕಿಲೋಮೀಟರ್ ವರೆಗೆ ಹರಡಿದೆ.ಸಾಮಾನ್ಯವಾಗಿ, ದಟ್ಟವಾಗಿ ಕೂಡಿಕೊಂಡಿರುವ ಪುಟ್ಟ ಪುಸ್ತಕ ಮಳಿಗೆಗಳು ಅವುಗಳ ಹಿಂದಿನ ಗೋಡೆಗಳನ್ನು ಸಹ ಆವರಿಸಿಕೊಂಡಿವೆ. ಈಗ ಗೋಡೆಗಳು ಗೋಚರಿಸುತ್ತವೆ,ಮತ್ತು ಅನೇಕ ಮಳಿಗೆಗಳು ತೀವ್ರ ಹಾನಿಗೊಳಗಾಗಿ ಅವಶೇಷಗಳಂತಾಗಿವೆ.ಪತ್ರಿಕೆಗಳ ವರದಿಯ ಅಂದಾಜಿನ ಪ್ರಕಾರ ಸುಮಾರು 50ರಿಂದ 60 ಲಕ್ಷ ರೂ ಮೌಲ್ಯದ ಪುಸ್ತಕಗಳು ಚಂಡಮಾರುತದಿಂದಾಗಿ ಹಾನಿಗೊಳಗಾಗಿವೆ ಎನ್ನಲಾಗಿದೆ.
ಈ ಬೀದಿಯುದ್ದಕ್ಕೂ ಅನೇಕ ಸಣ್ಣ ಅಂಗಡಿಗಳು ಮತ್ತು ತಗಡಿನಿಂದ ಹೊದಿಸಿರುವ ಛಾವಣಿಗಳು ಚದುರಿಹೋಗಿವೆ ಮತ್ತು ಇತರ ಪ್ರದೇಶಗಳಲ್ಲಿ ಬಹುತೇಕ ಮನೆಗಳು ಕುಸಿದಿವೆ, ಟೆಲಿಕಾಂ ಸಂಪರ್ಕವು ಕಡಿತಗೊಂಡಿದೆ, ಮತ್ತು ಪ್ರವಾಹಕ್ಕೆ ಸಿಲುಕಿದ ಬೀದಿಗಳಲ್ಲಿ ವಿದ್ಯುತ್ ಕಂಬಗಳು ಬಿದ್ದರಿಂದಾಗಿ, ಇವು ಈಗ ವಿದ್ಯುನ್ಮರಣಕ್ಕೆ ಕಾರಣವಾಗಿವೆ. ನಗರದ ಏಕೈಕ ವಿದ್ಯುತ್ ಸರಬರಾಜುದಾರ ಸಂಸ್ಥೆಯಾಗಿರುವ ಕಲ್ಕತ್ತಾ ವಿದ್ಯುತ್ ಸರಬರಾಜು ನಿಗಮವು ವಿದ್ಯುತ್ ನ್ನು ಪುನಃಸ್ಥಾಪಿಸಲು ನಿರಂತರವಾಗಿ ಕಾರ್ಯ ನಿರ್ವಹಿಸಿದ್ದರೂ ಕೆಲವು ಪ್ರದೇಶಗಳು ಇನ್ನೂ ಕಗ್ಗತ್ತಲೆಯಲ್ಲಿವೆ. ಈಗ ವಿದ್ಯುತ್ ಮತ್ತು ನೀರಿನ ಸರಬರಾಜು ಸ್ಥಗಿತಗೊಂಡಿರುವ ಸ್ಥಳಗಳಲ್ಲಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
“ನಾವು ನಿನ್ನೆ ಸಂಜೆಯಷ್ಟೇ ಮೊಬೈಲ್ ಸಂಪರ್ಕವನ್ನು ಪಡೆದುಕೊಂಡಿದ್ದೇವೆ. ನಮ್ಮ ಫೋನ್‌ಗಳನ್ನು ಚಾರ್ಜ್ ಮಾಡಲು ಸಾಧ್ಯವಾಗದಿದ್ದರೆ ನಾವು ಅದನ್ನು ಏನು ಮಾಡಬೇಕು ಹೇಳಿ? ನಾವು ಆ ದಿನ ಮಳೆ ನೀರನ್ನು ಸಂಗ್ರಹಿಸಿದ್ದೇವೆ. ಈಗ ನಾವು ಆ ನೀರನ್ನು ಕುದಿಸಿ ಕುಡಿಯಲು ಬಳಸುತ್ತಿದ್ದೇವೆ.ನಮ್ಮ ಪ್ರದೇಶದ ಎಲ್ಲಾ ವಾಟರ್‌ಲೈನ್‌ಗಳು ಕಲುಷಿತಗೊಂಡಿವೆ." ಎಂದು ದಕ್ಷಿಣ ಕೋಲ್ಕತ್ತಾದ ನರೇಂದ್ರಪುರ ಪ್ರದೇಶದಲ್ಲಿ ಅಡುಗೆ ಕೆಲಸ ಮಾಡುವ 35 ವರ್ಷದ ಸೋಮಾ ದಾಸ್ ಹೇಳುತ್ತಾರೆ.
38 ವರ್ಷದ ಪತಿ ಸತ್ಯಜಿತ್ ಮೊಂಡಾಲ್ ಗೌಂಡಿ ಕೆಲಸವನ್ನು ಮಾಡುತ್ತಾನೆ, ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಈಗ ಯಾವುದೇ ಕೆಲಸವಿಲ್ಲದಿರುವುದರಿಂದಾಗಿ, ಸಂಪಾದನೆಯೂ ಇಲ್ಲದಂತಾಗಿದೆ, ಮತ್ತು ಈಗ ಸೋಮಾ ಅವರಿಗೆ 14 ವರ್ಷದ ತನ್ನ ಮಗಳಿಗೆ ಆಹಾರವನ್ನು ಹೇಗೆ ನೀಡಬೇಕೆಂದು ತಿಳಿಯದ ಅಸಹಾಯಕ ತಾಯಿಯ ಸ್ಥಿತಿಯಾಗಿದೆ. ಆಕೆ ನಾಲ್ಕು ಮನೆಗಳಲ್ಲಿ ಅಡುಗೆ ಕೆಲಸವನ್ನು ಮಾಡುತ್ತಾಳೆ, ಅದರಲ್ಲಿ ಎರಡು ಮಾತ್ರ ಲಾಕ್‌ಡೌನ್ ಸಮಯದಲ್ಲಿ ಅವಳಿಗೆ ಪಗಾರವನ್ನು ನೀಡುತ್ತಿವೆ.
ಶಾಹಿದ್ ಸ್ಮೃತಿ ಕಾಲೋನಿಯಲ್ಲಿ ಕಿತ್ತು ಹೋಗಿರುವ ಮರಗಳನ್ನು ಸಮೀಕ್ಷೆ ಮಾಡುತ್ತಿರುವ ಬೈದ್ಯಾ "ಇದು ನಮ್ಮದೇ ತಪ್ಪು. ನಗರದಲ್ಲಿ ಎಲ್ಲಿಯೂ ಯಾವುದೇ ಮಣ್ಣು ಉಳಿದಿಲ್ಲ. ಎಲ್ಲಾ ಕಾಂಕ್ರೀಟಮಯವಾಗಿದೆ. ಹೀಗಾದಲ್ಲಿ ಬೇರುಗಳು ಹೇಗೆ ಉಳಿಯುತ್ತವೆ ಹೇಳಿ? ಎಂದು ಅವರು ಪ್ರಶ್ನಿಸುತ್ತಾರೆ.
ಅನುವಾದ - ಎನ್ . ಮಂಜುನಾಥ್