ಮುಂಗಾರಿನ ಅಬ್ಬರ ಕಡಿಮೆಯಾಗತೊಡಗಿತ್ತು. ಬಿಹಾರದ ಬರಗಾಂವ್ ಖುರ್ದ್ ಗ್ರಾಮದ ಮಹಿಳೆಯರು ತಮ್ಮ ಕಚ್ಛಾ ಮನೆಗಳ ಹೊರ ಗೋಡೆಗಳನ್ನು ಒಪ್ಪವಾಗಿಸಲು ಹೊಲಗಳಿಂದ ಮಣ್ಣನ್ನು ತರುತ್ತಿದ್ದರು, ಅವರು ಆಗಾಗ್ಗೆ ಇದನ್ನು ಮಾಡುತ್ತಿರುತ್ತಾರೆ, ವಿಶೇಷವಾಗಿ ಇದೊಂದು ಹಬ್ಬಗಳಿಗೆ ಮೊದಲು ಮನೆಯನ್ನು ಬಲಪಡಿಸುವ ಮತ್ತು ಸುಂದರಗೊಳಿಸುವ ಕಾರ್ಯ.

22 ವರ್ಷದ ಲೀಲಾವತಿ ದೇವಿ ಇತರ ಮಹಿಳೆಯರೊಂದಿಗೆ ಮಣ್ಣು ಸಂಗ್ರಹಿಸಲು ಹೊರಬರಲು ಬಯಸಿದ್ದರು. ಆದರೆ ಅವರ ಮೂರು ತಿಂಗಳ ಪ್ರಾಯದ ಗಂಡು ಮಗು ಗೋಳಾಡುತ್ತಾ ನಿದ್ರೆಗೆ ಜಾರಲು ನಿರಾಕರಿಸುತ್ತಿತ್ತು. ಅವರ ಪತಿ 24 ವರ್ಷದ ಅಜಯ್ ಒರಾನ್ ಅವರು ಅಲ್ಲಿನ ಪ್ರದೇಶದಲ್ಲಿ ತಾನು ನಡೆಸುತ್ತಿರುವ ಕಿರಾಣಿ ಅಂಗಡಿಯಲ್ಲಿದ್ದರು. ಮಗು ಲೀಲಾವತಿಯವರ  ತೋಳುಗಳಲ್ಲಿ ಮಲಗಿತ್ತು ಮತ್ತು ಅವರು ಪ್ರತಿ ಕೆಲವು ನಿಮಿಷಗಳಿಗೊಮ್ಮೆ, ತನ್ನ ಅಂಗೈಯನ್ನು ಅವನ ಹಣೆಯ ಮೇಲಿಟ್ಟು ಜ್ವರವನ್ನು ಪರೀಕ್ಷಿಸುತ್ತಿದ್ದರು. "ಅವನು ಆರಾಮಿದ್ದಾನೆ, ಕನಿಷ್ಠ ನನಗೆ ಹಾಗನ್ನಿಸುತ್ತದೆ," ಅವರು ಹೇಳಿದರು.

2018ರಲ್ಲಿ ಲೀಲಾವತಿಯವರ 14 ತಿಂಗಳ ಹೆಣ್ಣು ಮಗು ಜ್ವರ ಬಂದು ಕೊನೆಯುಸಿರೆಳೆದಿತ್ತು. "ಅದು ಕೇವಲ ಎರಡು ದಿನಗಳ ಜ್ವರವಾಗಿತ್ತು, ಹೆಚ್ಚಿರಲಿಲ್ಲ" ಎಂದು ಲೀಲಾವತಿ ಹೇಳಿದರು. ಅದರಾಚೆಗೆ, ಸಾವಿಗೆ ಕಾರಣವೇನೆಂದು ಪೋಷಕರಿಗೆ ತಿಳಿದಿಲ್ಲ. ಆಸ್ಪತ್ರೆಯ ದಾಖಲೆ, ಔಷಧಿ ಚೀಟಿ, ಔಷಧಿಗಳಾಗಲಿ ಅವರ ಬಳಿ ಇರಲಿಲ್ಲ. ಇನ್ನೂ ಕೆಲವು ದಿನಗಳವರೆಗೆ ಜ್ವರ ಕಡಿಮೆಯಾಗದಿದ್ದರೆ, ತಮ್ಮ ಗ್ರಾಮದಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಕೈಮೂರ್ ಜಿಲ್ಲೆಯ ಅಧೌರಾ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್ ಸಿ) ಕರೆದೊಯ್ಯಲು ದಂಪತಿಗಳು ಯೋಜಿಸಿದ್ದರು. ಆದರೆ ಅವರು ಹಾಗೆ ಮಾಡಲು ಅವಕಾಶವೇ ಸಿಗಲಿಲ್ಲ.

ಕೈಮೂರ್ ವನ್ಯಜೀವಿ ಅಭಯಾರಣ್ಯದ ಅರಣ್ಯ ಪ್ರದೇಶಕ್ಕೆ ಹತ್ತಿರವಿರುವ ಪಿಎಚ್‌ಸಿಗೆ ಗಡಿ ಗೋಡೆಯಿಲ್ಲ. ಬರಗಾಂವ್ ಖುರ್ದ್ ಗ್ರಾಮ ಮತ್ತು ಪಕ್ಕದ ಬರ್ಗಾಂವ್ ಕಲಾನ್ ನಿವಾಸಿಗಳು ಕಾಡು ಪ್ರಾಣಿಗಳ ಕಥೆಗಳನ್ನು ವಿವರಿಸುತ್ತಾರೆ – ಕರಡಿಗಳು (sloth bears), ಚಿರತೆಗಳು ಮತ್ತು ನೀಲ್‌ ಗಾಯ್ – ಕಟ್ಟಡದ ಬಳಿ ಅಲೆದಾಡುತ್ತಾ (ಎರಡು ಗ್ರಾಮಕ್ಕೆ ಸೇರಿ ಒಂದು ಪಿಎಚ್‌ಸಿ ಇದೆ), ರೋಗಿಗಳು ಮತ್ತು ಸಂಬಂಧಿಕರನ್ನು ಹೆದರಿಸುತ್ತವೆ, ಮತ್ತು ಇಲ್ಲಿ ಆರೋಗ್ಯ ಕಾರ್ಯಕರ್ತರು ಸಹ ಸೇವೆ ಮಾಡಲು ಆಸಕ್ತಿಯಿಲ್ಲದವರಾಗಿದ್ದಾರೆ.

"ಒಂದು ಉಪಕೇಂದ್ರವೂ ಇದೆ (ಬರಗಾಂವ್ ಖುರ್ದ್ ನಲ್ಲಿ), ಆದರೆ ಅದರ ಕಟ್ಟಡವು ಈಗ ಅನಾಥವಾಗಿದೆ. ಇದು ಆಡುಗಳು ಮತ್ತು ಇತರ ಪ್ರಾಣಿಗಳಿಗೆ ವಿಶ್ರಾಂತಿ ಧಾಮವಾಗಿ ಮಾರ್ಪಟ್ಟಿದೆ" ಎಂದು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಫುಲ್ವಾಸಿ ದೇವಿ ಹೇಳುತ್ತಾರೆ, ಅವರು 2014ರಿಂದ ಈ ಕೆಲಸದಲ್ಲಿದ್ದಾರೆ - ಅವರದೇ ಮಾನದಂಡಗಳ ಮೂಲಕ, ಸೀಮಿತ ಯಶಸ್ಸಿನೊಂದಿಗೆ.

In 2018, Leelavati Devi and Ajay Oraon's (top row) baby girl developed a fever and passed away before they could take her to the PHC located close to the Kaimur Wildlife Sanctuary. But even this centre is decrepit and its broken-down ambulance has not been used for years (bottom row)
PHOTO • Vishnu Narayan

2018ರಲ್ಲಿ, ಲೀಲಾವತಿ ದೇವಿ ಮತ್ತು ಅಜಯ್ ಒರಾನ್ ಅವರ (ಮೇಲಿನ ಸಾಲು) ಹೆಣ್ಣು ಮಗುವಿಗೆ ಜ್ವರ ಕಾಣಿಸಿಕೊಂಡಿತು ಮತ್ತು ಆ ಮಗು ಕೈಮೂರ್ ವನ್ಯಜೀವಿ ಅಭಯಾರಣ್ಯಕ್ಕೆ ಹತ್ತಿರವಿರುವ ಪಿಎಚ್ ಸಿಗೆ ಕರೆದೊಯ್ಯುವ ಮೊದಲೇ ನಿಧನಹೊಂದಿತು. (ಕೆಳಗಿನ ಸಾಲು) ಆದರೆ ಈ ಕೇಂದ್ರವು ಸಹ ದುರ್ಬಲವಾಗಿದೆ ಮತ್ತು ಅದರ ಕೆಟ್ಟು ಹೋಗಿರುವ ಆಂಬ್ಯುಲೆನ್ಸ್ ಅನ್ನು ವರ್ಷಗಳಿಂದ ಬಳಸಲಾಗುತ್ತಿಲ್ಲ

"ವೈದ್ಯರು ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಅಧೌರಾದಲ್ಲಿ (ಪಟ್ಟಣ) ವಾಸಿಸುತ್ತಿದ್ದಾರೆ. ಮೊಬೈಲ್ ಸಂಪರ್ಕ ಲಭ್ಯವಿಲ್ಲದ ಕಾರಣ ತುರ್ತು ಪರಿಸ್ಥಿತಿಯಲ್ಲಿ ನಾನು ಯಾರನ್ನೂ ಸಂಪರ್ಕಿಸಲು ಸಾಧ್ಯವಿಲ್ಲ" ಎಂದು ಫುಲ್ವಾಸಿ ಹೇಳುತ್ತಾರೆ. ಇದರ ಹೊರತಾಗಿಯೂ, ಇತ್ತೀಚಿನ ವರ್ಷಗಳಲ್ಲಿ, ಅವರು ಕನಿಷ್ಠ 50 ಮಹಿಳೆಯರನ್ನು ಪಿಎಚ್‌ಸಿ ಅಥವಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ರೆಫರಲ್ ಘಟಕಕ್ಕೆ (ಪಿಎಚ್‌ಸಿ ಪಕ್ಕದಲ್ಲಿದೆ) ಕರೆತಂದಿದ್ದಾರೆಂದು ಅಂದಾಜಿಸುತ್ತಾರೆ, ಇದು ಕೂಡಾ ಮಹಿಳಾ ವೈದ್ಯರಿಲ್ಲದ ಮತ್ತೊಂದು ದುರ್ಬಲ ಕಟ್ಟಡವಾಗಿದೆ. ಇಲ್ಲಿನ ಎಲ್ಲಾ ಜವಾಬ್ದಾರಿಗಳನ್ನು ಆಕ್ಸಿಲರಿ ನರ್ಸ್ ಮಿಡ್‌ವೈಫ್ (ಎಎನ್‌ಎಂ) ಮತ್ತು ಪುರುಷ ವೈದ್ಯರು ನಿರ್ವಹಿಸುತ್ತಾರೆ, ಇಬ್ಬರೂ ಹಳ್ಳಿಯಲ್ಲಿ ವಾಸಿಸುವುದಿಲ್ಲ ಮತ್ತು ಟೆಲಿಕಾಂ ಸಿಗ್ನಲ್ ಇಲ್ಲದಿದ್ದರೆ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸುವುದು ಕಷ್ಟ.

ಆದರೆ ಫುಲ್ವಾಸಿ ಬರಗಾಂವ್ ಖುರ್ದ್‌ನಲ್ಲಿರುವ 85 ಕುಟುಂಬಗಳನ್ನು (ಜನಸಂಖ್ಯೆ 522) ನೋಡಿಕೊಳ್ಳುತ್ತಿದ್ದರು. ಫುಲ್ವಾಸಿ ಸೇರಿದಂತೆ ಹೆಚ್ಚಿನವರು ಒರಾನ್ ಸಮುದಾಯವರು, ಇವರದು ಪರಿಶಿಷ್ಟ ಪಂಗಡ, ಅವರ ಜೀವನ ಮತ್ತು ಜೀವನೋಪಾಯಗಳು ಕೃಷಿ ಮತ್ತು ಅರಣ್ಯಗಳ ಸುತ್ತ ಕೇಂದ್ರೀಕೃತವಾಗಿವೆ. ಅವರಲ್ಲಿ ಕೆಲವರು ಮುಖ್ಯವಾಗಿ ಭತ್ತವನ್ನು ಬೆಳೆಯುವ ತುಂಡು ನೆಲಗಳನ್ನು ಹೊಂದಿದ್ದಾರೆ, ಕೆಲವರು ಅಧೌರಾ ಮತ್ತು ಇತರ ಪಟ್ಟಣಗಳಿಗೆ ದಿನಗೂಲಿ ಕೆಲಸಗಳನ್ನು ಹುಡುಕಿ ಹೋಗುತ್ತಾರೆ.

"ನೀವು ಇದು ಸಣ್ಣ ಸಂಖ್ಯೆಯೆಂದು ಭಾವಿಸಬಹುದು, ಆದರೆ ಸರ್ಕಾರದ ಉಚಿತ ಆಂಬ್ಯುಲೆನ್ಸ್ ಸೇವೆ ಇಲ್ಲಿ ನಡೆಯುವುದಿಲ್ಲ," ಎಂದು ಹೇಳುತ್ತಾ ಫುಲ್ವಾಸಿ, ಪಿಎಚ್ ಸಿಯ ಹೊರಗೆ ವರ್ಷಗಳಿಂದ ನಿಂತಿರುವ ಹಳೆಯ ಮತ್ತು ಜರ್ಝರಿತ ವಾಹನವನ್ನು ತೋರಿಸುತ್ತಾರೆ. "ಮತ್ತು ಜನರು ಆಸ್ಪತ್ರೆಗಳು, ಕಾಪರ್‌-ಟಿ ಮತ್ತು ಗರ್ಭನಿರೋಧಕ ಮಾತ್ರೆಗಳ ಬಗ್ಗೆ [ಕಾಪರ್-ಟಿ ಯನ್ನು ಹೇಗೆ ಸೇರಿಸಲಾಗುತ್ತದೆ, ಅಥವಾ ಮಾತ್ರೆಗಳು ದೌರ್ಬಲ್ಯ ಮತ್ತು ತಲೆತಿರುಗುವಿಕೆಗೆ ಕಾರಣವಾಗುತ್ತವೆ] ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ,‌ ಮನೆಯ ಕೆಲಸಗಳ ನಡುವೆ ತಾಯಿ ಮತ್ತು ಮಗು, ಪೋಲಿಯೊ ಮತ್ತು ಇತ್ಯಾದಿಗಳ ಬಗ್ಗೆ 'ಜಾಗೃತಿ' ಅಭಿಯಾನಗಳಿಗಾಗಿ ಯಾರ ಬಳಿ ಸಮಯವಿದೆ?"

ಬರಗಾಂವ್ ಖುರ್ದ್‌ನಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಚೊಚ್ಚಲ ತಾಯಂದಿರೊಂದಿಗಿನ ನಮ್ಮ ಸಂಭಾಷಣೆಯಲ್ಲಿ ಈ ಆರೋಗ್ಯ ಆರೈಕೆಯಲ್ಲಿನ ಅಡೆತಡೆಗಳು ಪ್ರತಿಫಲಿಸಿದವು. ನಾವು ಮಾತನಾಡಿದ ಎಲ್ಲಾ ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಹೆತ್ತಿದ್ದರು - ಕೈಮೂರ್ ಜಿಲ್ಲೆಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( ಎನ್ ಎಫ್ ಎಚ್ ಎಸ್-4, 2015-16 ) ದತ್ತಾಂಶವು ಹಿಂದಿನ ಐದು ವರ್ಷಗಳಲ್ಲಿ ಶೇಕಡಾ 80ರಷ್ಟು ಹೆರಿಗೆಗಳು ಸಾಂಸ್ಥಿಕ ಹೆರಿಗೆಗಳಾಗಿವೆ ಎಂದು ಹೇಳುತ್ತದೆ. ಮನೆಯಲ್ಲಿ ಜನಿಸಿದ ಯಾವುದೇ ಮಗುವನ್ನು ಹುಟ್ಟಿದ 24 ಗಂಟೆಗಳಲ್ಲಿ ತಪಾಸಣೆಗಾಗಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿಲ್ಲ ಎಂದು ಎನ್ಎಫ್ ಎಚ್ಎಸ್-4 ಹೇಳುತ್ತದೆ.

ಬರಗಾಂವ್ ಖುರ್ದ್‌ನ ಮತ್ತೊಂದು ಮನೆಯಲ್ಲಿ, 21 ವರ್ಷದ ಕಾಜಲ್ ದೇವಿ ತನ್ನ ತವರಿನಲ್ಲಿ ಹೆರಿಗೆಯ ನಂತರ ತನ್ನ ನಾಲ್ಕು ತಿಂಗಳ ಗಂಡು ಮಗುವಿನೊಂದಿಗೆ ತನ್ನ ಅತ್ತೆ-ಮಾವಂದಿರ ಮನೆಗೆ ಮರಳಿದ್ದಾರೆ. ಇಡೀ ಗರ್ಭಾವಸ್ಥೆಯಲ್ಲಿ ವೈದ್ಯರೊಂದಿಗೆ ಯಾವುದೇ ಸಮಾಲೋಚನೆ ಅಥವಾ ತಪಾಸಣೆ ಇರಲಿಲ್ಲ. ಮಗುವಿಗೆ ಈವರೆಗೆ ಲಸಿಕೆ ಹಾಕಲಾಗಿಲ್ಲ. "ನಾನು ನನ್ನ ತಾಯಿಯ ಮನೆಯಲ್ಲಿದ್ದೆ, ಹೀಗಾಗಿ ನಾನು ಮನೆಗೆ ಹಿಂದಿರುಗಿದ ನಂತರ ಅವನಿಗೆ ಲಸಿಕೆ ಹಾಕಿಸಬಹುದೆಂದು ನಾನು ಭಾವಿಸಿದ್ದೆ" ಎಂದು ಕಾಜಲ್ ಹೇಳುತ್ತಾರೆ, ನೆರೆಯ ಬರ್ಗಾಂವ್ ಕಲಾನ್‌ನಲ್ಲಿರುವ ತನ್ನ ಹೆತ್ತವರ ಮನೆಯಲ್ಲೂ ಸಹ ತನ್ನ ಮಗುವಿಗೆ ಲಸಿಕೆ ಹಾಕಬಹುದಿತ್ತು ಎಂದು ಅವರಿಗೆ ತಿಳಿದಿಲ್ಲ, ಇದು 108 ಕುಟುಂಬಗಳು ಮತ್ತು 619 ಜನಸಂಖ್ಯೆಯನ್ನು ಹೊಂದಿರುವ ಸ್ವಲ್ಪ ದೊಡ್ಡ ಗ್ರಾಮವಾಗಿದೆ, ಇದು ತನ್ನದೇ ಆದ ಆಶಾ ಕಾರ್ಯಕರ್ತೆಯನ್ನು ಸಹ ಹೊಂದಿದೆ.

'I have heard that children get exchanged in hospitals, especially if it’s a boy, so it’s better to deliver at home', says Kajal Devi
PHOTO • Vishnu Narayan
'I have heard that children get exchanged in hospitals, especially if it’s a boy, so it’s better to deliver at home', says Kajal Devi
PHOTO • Vishnu Narayan

'ಮಕ್ಕಳನ್ನು ಆಸ್ಪತ್ರೆಗಳಲ್ಲಿ ಬದಲಿಸಲಾಗುತ್ತದೆಂದು ನಾನು ಕೇಳಿದ್ದೇನೆ, ವಿಶೇಷವಾಗಿ ಅದು ಗಂಡು ಮಗುವಾಗಿದ್ದರೆ, ಆದ್ದರಿಂದ ಮನೆಯಲ್ಲಿ ಹೆರಿಗೆ ಮಾಡುವುದು ಉತ್ತಮ' ಎಂದು ಕಾಜಲ್ ದೇವಿ ಹೇಳುತ್ತಾರೆ

ವೈದ್ಯರನ್ನು ಸಂಪರ್ಕಿಸಲು ಎದುರಾಗುವ ಹಿಂಜರಿಕೆ, ಭಯಗಳು ಅನೇಕ ಸಂದರ್ಭಗಳಲ್ಲಿ, ಗಂಡು ಮಗುವಿಗೆ ನೀಡಲಾಗುವ ಆದ್ಯತೆಯಿಂದ ಉದ್ಭವಿಸುತ್ತದೆ. ಹಳ್ಳಿಯ ವಯಸ್ಸಾದ ಮಹಿಳೆಯರ ಸಹಾಯದಿಂದ ತನ್ನ ಮಗುವನ್ನು ಮನೆಯಲ್ಲಿಯೇ ಏಕೆ ಹೆರಲು ಆಯ್ಕೆ ಮಾಡಿಕೊಂಡರು ಎಂದು ಕೇಳಿದಾಗ "ಮಕ್ಕಳನ್ನು ಆಸ್ಪತ್ರೆಗಳಲ್ಲಿ ಬದಲಾಯಿಸುತ್ತಾರೆಂದು ನಾನು ಕೇಳಿದ್ದೇನೆ, ವಿಶೇಷವಾಗಿ ಅದು ಗಂಡು ಮಗುವಾಗಿದ್ದರೆ, ಆದ್ದರಿಂದ ಮನೆಯಲ್ಲಿ ಹೆರುವುದು ಉತ್ತಮ" ಎಂದು ಕಾಜಲ್ ಉತ್ತರಿಸುತ್ತಾರೆ.

ಬರಗಾಂವ್ ಖುರ್ದ್‌ನ ಇನ್ನೊಬ್ಬ ನಿವಾಸಿ, 28 ವರ್ಷದ ಸುನೀತಾ ದೇವಿ, ತಾನು ಸಹ ತರಬೇತಿ ಪಡೆದ ನರ್ಸ್ ಅಥವಾ ವೈದ್ಯರ ಸಹಾಯವಿಲ್ಲದೆ ಮನೆಯಲ್ಲಿ ಹೆತ್ತಿದ್ದಾಗಿ ಹೇಳುತ್ತಾರೆ. ಅವರ ನಾಲ್ಕನೇ ಮಗು, ಹೆಣ್ಣು, ಅವರ ತೊಡೆಯ ಮೇಲೆ ಗಾಢನಿದ್ರೆಯಲ್ಲಿತ್ತು. ತನ್ನ ಎಲ್ಲಾ ಗರ್ಭಧಾರಣೆಗಳಲ್ಲಿಯೂ ಸುನೀತಾ ಎಂದಿಗೂ ತಪಾಸಣೆ ಅಥವಾ ಹೆರಿಗೆಗೆಂದು ಆಸ್ಪತ್ರೆಗೆ ಹೋಗಿಲ್ಲ.

"ಆಸ್ಪತ್ರೆಯಲ್ಲಿ ಅನೇಕ ಜನರಿರುತ್ತಾರೆ. ನಾನು ಜನರ ಮುಂದೆ ಹೆರಲು ಸಾಧ್ಯವಿಲ್ಲ. ನನಗೆ ನಾಚಿಕೆಯಾಗುತ್ತದೆ, ಮತ್ತು ಅದರಲ್ಲೂ ಹೆಣ್ಣಾಗಿದ್ದರೆ, ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ," ಎಂದು ಸುನೀತಾ ಹೇಳುತ್ತಾರೆ, ಆಸ್ಪತ್ರೆಗಳು ಖಾಸಗಿತನವನ್ನು ಖಚಿತಪಡಿಸಬಲ್ಲವು ಎಂದು ಹೇಳಿದರೂ ಅವರು ಫುಲ್ವಾಸಿಯನ್ನು ನಂಬಲು ಬಯಸುವುದಿಲ್ಲ.

"ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವುದು ಉತ್ತಮ – ಮುದುಕಿಯ ಸಹಾಯ ಪಡೆದು. ನಾಲ್ಕು ಮಕ್ಕಳ ನಂತರ, ಹೇಗಿದ್ದರೂ ನಿಮಗೆ ಹೆಚ್ಚಿನ ಸಹಾಯದ ಅಗತ್ಯವಿಲ್ಲ," ಎಂದು ಸುನೀತಾ ನಗುತ್ತಾರೆ. "ನಂತರ ಈ ವ್ಯಕ್ತಿಯು ಚುಚ್ಚುಮದ್ದು ನೀಡಲು ಬರುತ್ತಾನೆ ಮತ್ತು ನೀವು ಆರೋಗ್ಯವಂತಾರಾಗುತ್ತೀರಿ."

ಚುಚ್ಚುಮದ್ದು ನೀಡಲು ಬರುವ ವ್ಯಕ್ತಿಯು ಏಳು ಕಿಲೋಮೀಟರ್ ದೂರದಲ್ಲಿರುವ ತಾಲಾ ಮಾರುಕಟ್ಟೆಯಿಂದ ಬರುತ್ತಾನೆ. ಹಳ್ಳಿಯ ಕೆಲವರು ಅವನನ್ನು ಕರೆಯುವಂತೆ "ಬಿನಾ-ಡಿಗ್ರಿ ಡಾಕ್ಟರ್" (ಪದವಿಯಿಲ್ಲದ ವೈದ್ಯ). ಅವನ ಅರ್ಹತೆಗಳು ಯಾವುವು ಅಥವಾ ಅವನು ನೀಡುವ ಚುಚ್ಚುಮದ್ದು ಏನನ್ನು ಒಳಗೊಂಡಿದೆ ಎನ್ನುವುದು ಯಾರಿಗೂ ಸಂಪೂರ್ಣವಾಗಿ ತಿಳಿದಿಲ್ಲ.

ಸುನೀತಾ ನಮ್ಮ ಸಂಭಾಷಣೆಯ ಸಮಯದಲ್ಲಿ ತನ್ನ ತೊಡೆಯ ಮೇಲೆ ಮಲಗಿದ್ದ ಮಗುವನ್ನು ನೋಡುತ್ತಾ, ಇನ್ನೊಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರಾಧದ ನಡುವೆ, ಅವರು ತನ್ನ ಎಲ್ಲಾ ಹೆಣ್ಣುಮಕ್ಕಳಿಗೆ ಹೇಗೆ ಮದುವೆ ಮಾಡುವುದು ಎಂಬುದರ ಬಗ್ಗೆ ಚಿಂತಿಸಿದರು ಮತ್ತು ಈ ವಿಷಯದಲ್ಲಿ ಸಹಾಯ ಮಾಡಲು ಪುರುಷ ಕುಟುಂಬ ಸದಸ್ಯರನ್ನು ಹೊಂದಿರದ ತನ್ನ ಗಂಡನ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

Top left: 'After four children, you don’t need much assistance', says Sunita Devi. Top right: Seven months pregnant Kiran Devi has not visited the hospital, daunted by the distance and expenses. Bottom row: The village's abandoned sub-centre has become a resting shed for animals
PHOTO • Vishnu Narayan

ಮೇಲಿನ ಎಡ ಚಿತ್ರ: 'ನಾಲ್ಕು ಮಕ್ಕಳ ನಂತರ, ನಿಮಗೆ ಹೆಚ್ಚಿನ ಸಹಾಯದ ಅಗತ್ಯವಿಲ್ಲ' ಎಂದು ಸುನೀತಾ ದೇವಿ ಹೇಳುತ್ತಾರೆ. ಮೇಲಿನ ಬಲ ಚಿತ್ರ: ಏಳು ತಿಂಗಳ ಗರ್ಭಿಣಿ ಕಿರಣ್ ದೇವಿ ದೂರ ಮತ್ತು ವೆಚ್ಚಗಳ ಕಾರಣಕ್ಕೆ ಎದೆಗುಂದಿ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಕೆಳಗಿನ ಸಾಲು: ಹಳ್ಳಿಯ ಪಾಳುಬಿದ್ದ ಉಪ ಕೇಂದ್ರವು ಪ್ರಾಣಿಗಳ ಕೊಟ್ಟಿಗೆಯಾಗಿ  ಮಾರ್ಪಟ್ಟಿದೆ

ತನ್ನ ಹೆರಿಗೆಗಳಿಗೆ 3-4 ವಾರಗಳ ಮೊದಲು ಮತ್ತು ನಂತರ, ಸುನೀತಾ ಪ್ರತಿದಿನ ಮಧ್ಯಾಹ್ನ ಮನೆಯ ಕೆಲಸವನ್ನು ಮುಗಿಸಿ ನಂತರ ಹೊಲಕ್ಕೆ ಹೋಗುತ್ತಾರೆ. "ಅಷ್ಟೇನೂ ದೊಡ್ಡ ಕೆಲಸವಲ್ಲ, ಸಣ್ಣ ಕೆಲಸ - ಬಿತ್ತನೆ ಇತ್ಯಾದಿ, ಹೆಚ್ಚೇನಿಲ್ಲ," ಅವರು ಗೊಣಗುತ್ತಾರೆ.

ಸುನೀತಾರ ಮನೆಯಿಂದ ಕೆಲವು ಮನೆಗಳ ಅಂತರದಲ್ಲಿ ವಾಸಿಸುವ, 22 ವರ್ಷದ ಕಿರಣ್ ದೇವಿ, ತನ್ನ ಮೊದಲ ಚೊಚ್ಚಲ ಮಗುವಿನ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಅವರು ಒಮ್ಮೆಯೂ ಆಸ್ಪತ್ರೆಗೆ ಹೋಗಿಲ್ಲ, ಅವರು ಅಲ್ಲಿಗೆ ತಲುಪಲು ನಡೆಯಬೇಕಾದ ದೂರ ಮತ್ತು ವಾಹನದ ಬಾಡಿಗೆಗೆ ಹೆದರಿದರು. ಕಿರಣ್ ಅವರ ಅತ್ತೆ ಕೆಲವು ತಿಂಗಳ ಹಿಂದೆ (2020ರಲ್ಲಿ) ನಿಧನರಾದರು. "ನಡುಗುತ್ತಾ, ಅವರು ಇಲ್ಲಿಯೇ ಸತ್ತರು. ನಾವು ಆಸ್ಪತ್ರೆಗೆ ಹೋಗುವುದಾದರೂ ಹೇಗೆ?" ಕಿರಣ್ ಕೇಳುತ್ತಾರೆ.

ಬರಗಾಂವ್ ಖುರ್ದ್ ಅಥವಾ ಬರ್ಗಾಂವ್ ಕಲಾನ್ ಈ ಎರಡೂ ಹಳ್ಳಿಗಳಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರೆ, ಇಲ್ಲಿನವರಿಗೆ ಆಯ್ಕೆಗಳು ಸೀಮಿತವಾಗಿವೆ: ಸಾಮಾನ್ಯ ಪಿಎಚ್ ಸಿ, ಗಡಿ ಗೋಡೆಯಿಲ್ಲದೆ ಅಸುರಕ್ಷಿತ; ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ರೆಫರಲ್ ಘಟಕ (ಈ ಆಸ್ಪತ್ರೆ ಕೈಮೂರ್ ಜಿಲ್ಲಾ ಆಸ್ಪತ್ರೆಯ ಭಾಗವಾಗಿದೆ) ಅಲ್ಲಿನ ಏಕೈಕ ವೈದ್ಯರು ಲಭ್ಯವಿಲ್ಲದಿರಬಹುದು; ಅಥವಾ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಭಬುವಾದ ಕೈಮೂರ್ ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆ.

ಆಗಾಗ್ಗೆ, ಕಿರಣ್ ಅವರ ಹಳ್ಳಿಯ ಜನರು ಕಾಲ್ನಡಿಗೆಯಲ್ಲಿ ಈ ದೂರವನ್ನು ಕ್ರಮಿಸುತ್ತಾರೆ. ನಿಗದಿತ ವೇಳಾಪಟ್ಟಿ ಇಲ್ಲದ ಕೆಲವು ಬಸ್ಸುಗಳು ಮತ್ತು ಖಾಸಗಿ ಪಿಕ್ ಅಪ್ ವಾಹನಗಳು ಸಂಪರ್ಕದ ಹೆಸರಿನಲ್ಲಿ ಚಲಿಸುತ್ತವೆ. ಮತ್ತು ಮೊಬೈಲ್ ಫೋನುಗಳಲ್ಲಿ ನೆಟ್ವರ್ಕ್ ಇರುವ ಸ್ಥಳವನ್ನು ಹುಡುಕುವ ಹೋರಾಟವು ತೀವ್ರವಾಗಿಯೇ ಉಳಿದಿದೆ. ಇಲ್ಲಿನ ಗ್ರಾಮಸ್ಥರು ಯಾರೊಂದಿಗೂ ಸಂಪರ್ಕಹೊಂದದೆ ವಾರಗಟ್ಟಲೆ ಕಳೆಯಬೇಕಾಗಬಹುದು.

ಫೋನ್‌ ನಿಮ್ಮ ಕೆಲಸದಲ್ಲಿ ಸಹಾಯಕ್ಕೆ ಬರುತ್ತದೆಯೇ ಎಂದು ಕೇಳಿದಾಗ ಫುಲ್ವಾಸಿ ತನ್ನ ಗಂಡನ ಫೋನ್ ಅನ್ನು ಹೊರತಂದು, "ಇದೊಂದು ಚೆನ್ನಾಗಿ ಇರಿಸಲಾದ ನಿಷ್ಪ್ರಯೋಜಕ ಆಟಿಕೆ," ಎಂದು ಹೇಳುತ್ತಾರೆ.

ಇದು ಒಬ್ಬ ವೈದ್ಯ ಅಥವಾ ನರ್ಸ್ ಕುರಿತ ಪ್ರಶ್ನೆಯಲ್ಲ - ಆದರೆ ಉತ್ತಮ ಸಂಪರ್ಕ ಮತ್ತು ಸಂವಹನದ್ದು - ಅವರು ಹೇಳುತ್ತಾರೆ: "ಈ ಒಂದು ಸಮಸ್ಯೆಯ ಪರಿಹಾರ ಅನೇಕ ವಿಷಯಗಳನ್ನು ಬದಲಾಯಿಸುತ್ತದೆ."

ಗ್ರಾಮೀಣ ಭಾರತದಲ್ಲಿ ಹದಿಹರೆಯದ ಹುಡುಗಿಯರು ಮತ್ತು ಯುವತಿಯರ ಬಗ್ಗೆ ಪರಿ ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್ನ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಸಾಮಾನ್ಯ ಜನರ ಧ್ವನಿಗಳು ಮತ್ತು ಜೀವಂತ ಅನುಭವದ ಮೂಲಕ ಈ ಪ್ರಮುಖ ಆದರೆ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ ಬೆಂಬಲಿತ ಉಪಕ್ರಮದ ಭಾಗವಾಗಿದೆ.

ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಇದಕ್ಕಾಗಿ - ಮೈಲ್ ವಿಳಾಸವನ್ನು ಸಂಪರ್ಕಿಸಿ : [email protected] ಒಂದು ಪ್ರತಿಯನ್ನು [email protected] . ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Anubha Bhonsle

২০১৫ সালের পারি ফেলো এবং আইসিএফজে নাইট ফেলো অনুভা ভোসলে একজন স্বতন্ত্র সাংবাদিক। তাঁর লেখা “মাদার, হোয়্যারস মাই কান্ট্রি?” বইটি একাধারে মণিপুরের সামাজিক অস্থিরতা তথা আর্মড ফোর্সেস স্পেশাল পাওয়ারস অ্যাক্ট এর প্রভাব বিষয়ক এক গুরুত্বপূর্ণ দলিল।

Other stories by Anubha Bhonsle
Vishnu Narayan

বিষ্ণু সিং পাটনা নিবাসী স্বতন্ত্র সাংবাদিক।

Other stories by Vishnu Narayan
Illustration : Labani Jangi

২০২০ সালের পারি ফেলোশিপ প্রাপক স্ব-শিক্ষিত চিত্রশিল্পী লাবনী জঙ্গীর নিবাস পশ্চিমবঙ্গের নদিয়া জেলায়। তিনি বর্তমানে কলকাতার সেন্টার ফর স্টাডিজ ইন সোশ্যাল সায়েন্সেসে বাঙালি শ্রমিকদের পরিযান বিষয়ে গবেষণা করছেন।

Other stories by Labani Jangi
Editor : Hutokshi Doctor
Series Editor : Sharmila Joshi

শর্মিলা জোশী পিপলস আর্কাইভ অফ রুরাল ইন্ডিয়ার (পারি) পূর্বতন প্রধান সম্পাদক। তিনি লেখালিখি, গবেষণা এবং শিক্ষকতার সঙ্গে যুক্ত।

Other stories by শর্মিলা জোশী
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru