ಮೊಹಮ್ಮದ್ ಶಮೀಮ್ ಅವರ ಕುಟುಂಬದಲ್ಲಿ ಮೂರು ಜನರಿದ್ದರೂ, ವೇಟಿಂಗ್ ಲಿಸ್ಟಿನಲ್ಲಿರುವ ತಮ್ಮ ಟಿಕೆಟ್‌ನಲ್ಲಿ ಒಂದನ್ನಾದರೂ ಕನ್ಫರ್ಮ್ ಮಾಡಿಸಲು ರೈಲ್ವೆ ಟಿಕೆಟ್ ಮಾಡುವ ಏಜೆಂಟ್ ಬಳಿ ವಿನಂತಿಸುತ್ತಿದ್ದರು. ಉತ್ತರ ಪ್ರದೇಶದಲ್ಲಿರುವ ತನ್ನ ಊರನ್ನು ತಲುಪಲು ಪ್ರಯತ್ನಿಸುತ್ತಿರುವ ಶಮೀಮ್, "ನನ್ನ ಹೆಂಡತಿಗೆ ಸೀಟ್ ಕೊಡಿ" ಎಂದು ಒತ್ತಾಯ ಮಾಡುತ್ತಿದ್ದರು. "ನಾನು ಹೇಗಾದರೂ ಏರುತ್ತೇನೆ. ನಾನು ಯಾವುದೇ ಸ್ಥಿತಿಯಲ್ಲಿ ಪ್ರಯಾಣಿಸಬಹುದು. ಕಳೆದ ಬಾರಿಯಂತೆ ಪರಿಸ್ಥಿತಿ ಹದಗೆಡುವ ಮೊದಲು ನಾವು ನಮ್ಮ ಮನೆಗೆ ತಲುಪಲು ಬಯಸುತ್ತೇವೆ."
"ಕನ್ಫರ್ಮ್ ಆಗಿರುವ ಸೀಟ್ ಪಡೆಯಲು ಏಜೆಂಟ್ ಪ್ರತಿ ಟಿಕೆಟ್ಗೆ 1,600 ರೂ.ಗಳನ್ನು ಕೇಳುತ್ತಿದ್ದಾನೆ. ನಾನು ಅದನ್ನು 1,400 ರೂ.ಗೆ ಇಳಿಸಲು ಮಾತುಕತೆ ನಡೆಸಿದ್ದೇನೆ" ಎಂದು ಅವರು ಹೇಳಿದರು. "ನಮಗೆ ಒಂದು ಸೀಟು ಸಿಕ್ಕರೆ, ರೈಲು ಹತ್ತುತ್ತೇವೆ ಮತ್ತು ನಂತರ ಯಾವುದೇ ಪೆನಾಲ್ಟಿ ಅಥವಾ ಫೈನ್ ಹಾಕಿದರೆ ಅದನ್ನು ಕಟ್ಟುತ್ತೇವೆ." ಮುಂಬೈನಿಂದ ಉತ್ತರ ಪ್ರದೇಶಕ್ಕೆ ಅಗ್ಗದ ರೈಲು ಟಿಕೆಟ್ ಸಾಮಾನ್ಯವಾಗಿ 380-500 ರೂ.ಗಳಷ್ಟು ಇದೆ. ಯುಪಿಯಲ್ಲಿ, ಫೈಜಾಬಾದ್ ಜಿಲ್ಲೆಯ ಮಸೋಧಾ ಬ್ಲಾಕ್ನ ಅಬ್ಬೂ ಸರಾಯ್ ಗ್ರಾಮದಲ್ಲಿ, ಶಮೀಮ್ ಅವರ ಇಬ್ಬರು ಹಿರಿಯ ಸಹೋದರರು ಭೂ ಮಾಲೀಕತ್ವದ ಕುಟುಂಬಗಳಿಗೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ, ಇದು ಹಂಗಾಮಿ ಉದ್ಯೋಗವಾಗಿದೆ
22 ವರ್ಷದ ಶಮೀಮ್ ಮತ್ತು ಮುಂಬೈನ ಸಾವಿರಾರು ವಲಸೆ ಕಾರ್ಮಿಕರಿಗೆ, ಕೋವಿಡ್-19 ಹರಡುವಿಕೆಯನ್ನು ನಿಭಾಯಿಸಲು ಮಹಾರಾಷ್ಟ್ರ ಸರ್ಕಾರವು ಪರಿಚಯಿಸಿದ ಹೊಸ ನಿರ್ಬಂಧಗಳು ಮತ್ತೊಂದು ಸುತ್ತಿನ ಕಾರ್ಖಾನೆ ಮುಚ್ಚುವಿಕೆ, ಕೆಲಸದಿಂದ ತೆಗೆದುಹಾಕುವಿಕೆ ಮತ್ತು ನಿರ್ಮಾಣ ಸ್ಥಳಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಲು ಪ್ರೇರೇಪಿಸುವುದರಿಂದ ಸುಮಾರು 10 ತಿಂಗಳ ಅವಧಿಯಲ್ಲಿ ಇದು ಎರಡನೇ ಮನೆ ಪ್ರಯಾಣವಾಗಿದೆ.
ಮುಂಬಯಿಯ ಪ್ರಮುಖ ರೈಲು ನಿಲ್ದಾಣಗಳು, ವಿಶೇಷವಾಗಿ ಬಾಂದ್ರಾ ಟರ್ಮಿನಸ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಅಲ್ಲಿಂದ ಹಲವಾರು ರೈಲುಗಳು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಹೊರಡುತ್ತವೆ, ಏಪ್ರಿಲ್ 11-12ರಿಂದ ವಲಸೆ ಕಾರ್ಮಿಕರು ಏಪ್ರಿಲ್ 14ರಂದು ರಾಜ್ಯದಲ್ಲಿ ಕೆಲಸ ಮತ್ತು ಚಲನೆಯ ಮೇಲೆ ಹೊಸ ನಿರ್ಬಂಧಗಳು ಪ್ರಾರಂಭವಾಗುವ ಮೊದಲು ಹೊರಡಲು ನಿರ್ಧರಿಸಿದ್ದರಿಂದ ಏಪ್ರಿಲ್ 11-12ರಿಂದ ಹೆಚ್ಚಿನ ಜನಸಂದಣಿಯನ್ನು ಕಂಡಿವೆ. ಹೆಚ್ಚಿನ ನಿರ್ಬಂಧಗಳಿಗೆ ಹೆದರಿ ಅನೇಕರು ಇನ್ನೂ ಹೊರಡಲು ಪ್ರಯತ್ನಿಸುತ್ತಿದ್ದಾರೆ.
ಶಿವಸೇನೆ ನೇತೃತ್ವದ ರಾಜ್ಯ ಸರ್ಕಾರವು ಕರ್ಫ್ಯೂ ಮತ್ತು ನಿರ್ಬಂಧಗಳನ್ನು ಮತ್ತೊಂದು 'ಲಾಕ್ಡೌನ್' ಎಂದು ಕರೆದಿಲ್ಲವಾದರೂ, ಶಮೀಮ್ ಈ ಪರಿಭಾಷೆಯನ್ನು ತಳ್ಳಿಹಾಕುತ್ತಾರೆ: "ನಮಗೆ ಇದು ಎರಡನೇ ಸುತ್ತಿನ ವೇತನ-ನಷ್ಟವಾಗಿದೆ. ಮತ್ತು ಅದು ಈಗಾಗಲೇ ನಮ್ಮ ಮೇಲೆ ಪರಿಣಾಮ ಬೀರಿಯಾಗಿದೆ."
ಅವರು ಕೆಲಸಕ್ಕಿದ್ದ ಗಾರ್ಮೆಂಟ್ಸ್ ಕಾರ್ಖಾನೆಯು ಏಪ್ರಿಲ್ 13, ಮಂಗಳವಾರದಂದು ಮುಚ್ಚಲ್ಪಟ್ಟಿತು. “ಸೇಠ್ ಸದ್ಯಕ್ಕೆ ಕಾರ್ಖಾನೆ ತೆರೆಯುವ ಹಾಗೆ ಕಾಣುತ್ತಿಲ್ಲ. ಅವರು ನಮಗೆ 13 ದಿನಗಳ ಬಾಕಿ ಸಂಬಳವನ್ನು ಕೊಟ್ಟು ಕಳುಹಿಸಿದ್ದಾರೆ,” ಎಂದು ಶಮೀಮ್ ಹೇಳುತ್ತಾರೆ. ಆ ಬಟವಾಡೆಯಿಂದ ಅವರಿಗೆ ಸಿಕ್ಕಿದ ಮೊತ್ತವು 5,000 ಕ್ಕಿಂತಲೂ ಕಡಿಮೆಯಿದೆ. ಪ್ರಸ್ತುತ ಅವರ ಬಳಿ ಇರುವುದು ಆ ಹಣ ಮಾತ್ರ. ಅದರಲ್ಲಿ ಅವರು ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಫೈಜಾಬಾದ್‌ಗೆ ಹೋಗುವ ರೈಲಿನಲ್ಲಿ ಎರಡು ವೇಟಿಂಗ್ ಲಿಸ್ಟ್ ಟಿಕೆಟ್ ಗಳಿಗಾಗಿ ಅವರು 780 ರೂ.ಗಳನ್ನು ಖರ್ಚು ಮಾಡಿದರು ಮತ್ತು ಈಗ ಕನ್ಫರ್ಮ್ ಟಿಕೆಟ್ ಖಾತರಿಪಡಿಸುವ ಏಜೆಂಟ್ ಒಬ್ಬರಿಗಾಗಿ ಹುಡುಕುತ್ತಿದ್ದಾರೆ. "ಕಳೆದ ವಾರವಷ್ಟೇ, ನಾನು ಈ ಕೋಣೆಯ ಮಾಲೀಕರಿಗೆ ಒಂದು ತಿಂಗಳ ಮುಂಗಡ ಬಾಡಿಗೆಯಾಗಿ 5,000 ರೂಪಾಯಿಗಳನ್ನು ಪಾವತಿಸಿದೆ, ಮತ್ತು ಈಗ ಅವರು ಮುಂದಿನ ಕೆಲವು ತಿಂಗಳುಗಳವರೆಗೆ ಸ್ಥಳವನ್ನು ಖಾಲಿ ಮಾಡಲಿದ್ದರೂ ಒಂದು ಪೈಸೆಯನ್ನೂ ಸಹ ಹಿಂದಿರುಗಿಸಲು ನಿರಾಕರಿಸುತ್ತಿದ್ದಾರೆ."
ಕಳೆದ ವರ್ಷ, ಮಾರ್ಚ್ 2020ರಲ್ಲಿ ಲಾಕ್ಡೌನ್ ಘೋಷಿಸಿದಾಗ ದೊಡ್ಡ ನಗರಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗಾಗಿ ರೈಲ್ವೆಯು ನಿರ್ವಹಿಸುವ 'ಶ್ರಮಿಕ್ ವಿಶೇಷ' ರೈಲುಗಳಲ್ಲಿ ಒಂದರಲ್ಲಿ ಕುಟುಂಬವು ಮುಂಬಯಿಯಿಂದ ಹೊರಡುವಲ್ಲಿ ಯಶಸ್ವಿಯಾಗಿತ್ತು.
ಅಂದು ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ಹೋಗಲು ಕಾಯ್ದಿರಿಸಿದ ಸೀಟುಗಳ ವಿವರ ಶಮೀಮ್ ಕೈಗೆ ಸಿಗುವ ಹೊತ್ತಿಗೆ ಮೇ ಅಂತ್ಯವಾಗಿತ್ತು. "ನಾವು ಬಾಡಿಗೆ, ನೀರು, ವಿದ್ಯುತ್ ಬಾಕಿಯಾಗಿ ರೂ. 10000 ನೀಡಬೇಕಿತ್ತು (ಕಳೆದ ವರ್ಷದ ಲಾಕ್‌ಡೌನ್‌ನ ಮೊದಲ ಎರಡು ತಿಂಗಳುಗಳಿಗೆ). ನಾನು ನಾಲ್ಕು ತಿಂಗಳಿನಿಂದ ಕೆಲಸವಿಲ್ಲದೆ ಇದ್ದೇನೆ. ರೂ. 36,000 ಸಂಬಳ ನಷ್ಟವಾಗಿದೆ. ಈಗ ಮತ್ತೆ ಐದು ಸಾವಿರ ಕಳೆದುಕೊಂಡಿದ್ದೇನೆ” ಎಂದು ಶಮೀಮ್ ಹೇಳುತ್ತಾರೆ. ಕಳೆದುಹೋದ ಪ್ರತಿಯೊಂದು ರೂಪಾಯಿಯು ಅವರನ್ನು ಆಳವಾಗಿ ಕಾಡುತ್ತದೆ.
ಶಮೀಮ್ ಪತ್ನಿ ಗೌಸಿಯಾ ಬಹಳ ದಣಿದಿದ್ದರು. ಆಕೆಗೆ 20 ವರ್ಷ. ಉತ್ತರ ಮುಂಬೈನ ಬಾಂದ್ರಾದ ನರ್ಗೀಸ್ ದತ್ ನಗರದಲ್ಲಿರುವ 8x8 ಅಡಿ ಮನೆಯೊಂದರಲ್ಲಿ ಅವರ ಎಂಟು ತಿಂಗಳ ಗಂಡು ಮಗು ಗುಲಾಮ್ ಮುಸ್ತಫಾ ಬೋಸಿ ನಗುವಿನ ನಗೆ ಬೀರುವ ಮೂಲಕ ನಿವಾಸಿಗಳನ್ನು ಆಕರ್ಷಿಸುತ್ತಾನೆ. ಕೊನೆಯ ಲಾಕ್‌ಡೌನ್ ಮುಗಿದ ನಂತರ 2020ರ ಆಗಸ್ಟ್‌ನಲ್ಲಿ ಮುಸ್ತಫಾ ಮುಂಬೈಗೆ ಹಿಂದಿರುಗುವ ಮೊದಲು ಒಂದು ತಿಂಗಳು ಕೂಡ ಆಗಿರಲಿಲ್ಲ. ''ಕೆಲವು ವಾರಗಳಿಂದ ಅವನು ಅಸ್ವಸ್ಥನಾಗಿದ್ದ. ಜ್ವರ, ಹೊಟ್ಟೆಯ ತೊಂದರೆಗಳು ಕಾಡುತ್ತಿದ್ದವು. ಬಹುಶಃ ಉಷ್ಣತೆಯಿಂದ ಹೀಗಾಗಿರಬಹುದು” ಎಂದು ಗೌಸಿಯಾ ಹೇಳಿದರು. "ಈಗ ನಾವು ಹಿಂತಿರುಗುತ್ತಿದ್ದೇವೆ. ನಮಗೆ ಬೇರೆ ವಿಧಿಯಿಲ್ಲ. ಪರಿಸ್ಥಿತಿ ಸುಧಾರಿಸಿದಾಗ ನಾವು ಮತ್ತೆ ಹಿಂತಿರುಗುತ್ತೇವೆ.”
ಒಳ್ಳೆಯ ದಿನಗಳ ಬರವಿಗಾಗಿ ಶಮೀಮ್ ಕುಟುಂಬ ಕಾತರದಿಂದ ಕಾಯುತ್ತಿದೆ. ಕಳೆದ ವರ್ಷ ಲಾಕ್‌ಡೌನ್ ನಂತರ ಆಗಸ್ಟ್‌ನಲ್ಲಿ ಮುಂಬೈಗೆ ಮರಳಿದ ನಂತರ, ಶಮೀಮ್ ಅವರು ಸಾಂತಾಕ್ರೂಜ್ ವೆಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ ಪ್ಯಾಕಿಂಗ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಮರಳಿದರು. ಆದರೆ, ಈ ವರ್ಷದ ಫೆಬ್ರವರಿಯಲ್ಲಿ ಹೆಚ್ಚುವರಿಯಾಗಿ 1000 ರೂಪಾಯಿ ಪಡೆಯುವ ಅವಕಾಶ ಸಿಕ್ಕಾಗ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಾಂತಾಕ್ರೂಜ್ ವೆಸ್ಟ್ ಕಾರ್ಖಾನೆಯಲ್ಲಿ ಕೆಲಸ ಬಿಟ್ಟು ಸಾಂತಾಕ್ರೂಜ್ ಪೂರ್ವದಲ್ಲಿರುವ ಸಣ್ಣ ಬಟ್ಟೆ ತಯಾರಿಕಾ ಕೇಂದ್ರಕ್ಕೆ ಸೇರಿಕೊಂಡರು. ಇಲ್ಲಿ ಅವರ ಸಂಬಳ ರೂ. 10,000.
ನರ್ಗೀಸ್ ದತ್ ನಗರದ ಕಿರಿದಾದ ಲೇನ್‌ನ ಎರಡು ಅಥವಾ ನಾಲ್ಕು ಮನೆಗಳ ಮುಂದೆ ವಾಸವಿರುವ, ಮೋನಿನಿಸಾ ಮತ್ತು ಅವರ ಪತಿ ಮೊಹಮ್ಮದ್ ಶಹನವಾಜ್ ಕೂಡ ಊರಿಗೆ ಹೋಗಲು ಯೋಜಿಸುತ್ತಿದ್ದಾರೆ. ಅವರೂ ಅಬ್ಬು ಸರಾಯಿ ಗ್ರಾಮದವರು. "ನನ್ನ ಪತಿ [ಕಳೆದ ವರ್ಷದ ಲಾಕ್‌ಡೌನ್‌ಗೆ ಮೊದಲು, ಸಾಂಟಾ ಕ್ರೂಜ್ ವೆಸ್ಟ್‌ನಲ್ಲಿ] ಬಟ್ಟೆ ಕಾರ್ಖಾನೆಯಲ್ಲಿ ಪ್ಯಾಕರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ತಿಂಗಳಿಗೆ ರೂ 6,000 ಗಳಿಸುತ್ತಿದ್ದರು" ಎಂದು ಅವರು ಹೇಳುತ್ತಾರೆ. ಆದರೆ ನಾವು ಮುಂಬೈಗೆ ಹಿಂತಿರುಗಿದಾಗ ಯಾವುದೇ ಕೆಲಸ ಇರಲಿಲ್ಲ. ಕುಟುಂಬವು ಮೇ ಅಂತ್ಯದಲ್ಲಿ ಶ್ರಮಿಕ್ ವಿಶೇಷ ರೈಲಿನಲ್ಲಿ ಹೊರಟು ಆಗಸ್ಟ್‌ನಲ್ಲಿ ಮರಳಿತ್ತು. “ಆದ್ದರಿಂದ ಅವರು ಮೂರು ತಿಂಗಳ ಹಿಂದೆ ಬಾಂದ್ರಾದ ಮನೆಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರಿಗೆ ಪ್ರತಿದಿನ ಅಗತ್ಯವಿಲ್ಲದ ಕಾರಣ ಅವರು ತಿಂಗಳಿಗೆ ಕೇವಲ 5,000 ರೂ ಪಾವತಿಸುತ್ತಿದ್ದರು,” ಎಂದು ಮೊನಿನಿಸ್ಸಾ ಹೇಳುತ್ತಾರೆ. “ಈಗ ಅವರು ಚಾಲಕರ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಈ ಲಾಕ್‌ಡೌನ್‌ನಲ್ಲಿ ನಮಗೆ ಎಲ್ಲಿ ಕೆಲಸ ಸಿಗುತ್ತದೆ?"
ಅದೇ ಕೊಳೆಗೇರಿಯಲ್ಲಿ, ವಿವಿಧ ಕೆಲಸದ ಪ್ರದೇಶಗಳಲ್ಲಿ ಉದ್ಯೋಗದಲ್ಲಿರುವ ಹಲವಾರು ವಲಸೆ ಕಾರ್ಮಿಕರು ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಎರಡನೇ ಬಾರಿಗೆ ತಮ್ಮ ಹಳ್ಳಿಗಳಿಗೆ ಮರಳಲು ತಯಾರಿ ನಡೆಸುತ್ತಿದ್ದಾರೆ. 2020ರ ಮೊದಲ ಸುತ್ತಿನಲ್ಲಿ, ಜೀವನೋಪಾಯದ ನಷ್ಟವು ಅವರಲ್ಲಿ ಕೆಲವರು ತಮ್ಮ ಹಳ್ಳಿಗಳಲ್ಲಿ ಮತ್ತು ಕುಟುಂಬದ ಸಂಬಂಧಿಕರೊಂದಿಗೆ ಆಶ್ರಯ ಪಡೆಯಲು ಒತ್ತಾಯಿಸಿತು. ಮತ್ತು ಈ ಬಾರಿಯೂ ಸಫಿಯಾ ಅಲಿ, ಅವರ ಕುಟುಂಬದವರು ಹಳ್ಳಿಗೆ ಹೋದರೆ, ಅದೇ ರೀತಿ ಮಾಡಲು ಯೋಚಿಸಿದ್ದಾರೆ.
100 ಚದರ ಅಡಿಯ ಇಕ್ಕಟ್ಟಾದ ಮನೆಯಲ್ಲಿ 25 ವರ್ಷ ಮೇಲ್ಪಟ್ಟ ಸಫಿಯಾ ಅಲಿ, ಅವರ ಪತಿ ಮತ್ತು ನಾಲ್ಕು ಮಕ್ಕಳು ವಾಸಿಸುತ್ತಿದ್ದಾರೆ. “ಅಮ್ಮನ ಮನೆಯಲ್ಲಿ ಸ್ವಲ್ಪ ದಿನ, ಅಣ್ಣನ ಮನೆಯಲ್ಲಿ, ಕೆಲವು ವರ್ಷ ಇನ್ನೊಬ್ಬ ತಂಗಿಯ ಮನೆಯಲ್ಲಿ ಕಳೆದರೆ ಒಂದು ತಿಂಗಳು ಅಥವಾ ಎರಡು ತಿಂಗಳು ಕಳೆಯುತ್ತದೆ. ನಮ್ಮ ಹಳ್ಳಿಯಲ್ಲಿ ನಮ್ಮಂತೆ ಇಲ್ಲ. ಅಲ್ಲಿ ಭೂಮಿಯಾಗಲೀ, ಉದ್ಯೋಗವಾಗಲೀ ಇಲ್ಲ. ಅದಕ್ಕಾಗಿಯೇ ಕಳೆದ ಲಾಕ್‌ಡೌನ್ ಸಮಯದಲ್ಲಿ ನಾವು ನಮ್ಮ ಹಳ್ಳಿಗೆ ಹೋಗಲಿಲ್ಲ,” ಎಂದು ಸಫಿಯಾ ಹೇಳಿದರು. ಈ ಮಾತುಗಳನ್ನು ಹೇಳುತ್ತಾ, ಅವರು ತನ್ನ ಹದಿನಾಲ್ಕು ವರ್ಷದ ಹಿರಿಯ ಮಗಳು ನೂರ್‌ಗೆ ತನ್ನ ಮೂರು ವರ್ಷದ ಮಗನನ್ನು ಸಾರ್ವಜನಿಕ ಸ್ನಾನಕ್ಕೆ ಕರೆದೊಯ್ಯಲು ಆದೇಶಿಸಿದರು. ಕಳೆದೊಂದು ವರ್ಷದಿಂದ ನೂರ್ ಬಾನೋ ಶಾಲೆಗೆ ಹೋಗಿರಲಿಲ್ಲ. ಪರೀಕ್ಷೆ ಇಲ್ಲದೆ 7ನೇ ತರಗತಿಗೆ ಪಾಸ್ ಮಾಡಿದ್ದಕ್ಕೆ ನೂರ್ ಸಂತಸ ವ್ಯಕ್ತಪಡಿಸುತ್ತಾರೆ.
ಸಫಿಯಾ ಅವರ ಪತಿ ಬಾಂದ್ರಾದ ಬಜಾರ್ ರಸ್ತೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಾರೆ. ಏಪ್ರಿಲ್ 5ರ ನಂತರ, ಮಹಾರಾಷ್ಟ್ರ ಸರ್ಕಾರವು ರಾತ್ರಿ ಕರ್ಫ್ಯೂ ವಿಧಿಸಿದ ನಂತರ ಮತ್ತು ಹಗಲಿನಲ್ಲಿ ಬೀದಿ ಮಾರಾಟ ಮತ್ತು ಅಂಗಡಿಗಳಲ್ಲಿ ಮಾರಾಟವನ್ನು ನಿಲ್ಲಿಸಿದ ಕಾರಣ ಅವರ ಕುಟುಂಬದ ದೈನಂದಿನ ಆದಾಯವು 100-150 ರೂ.ಗೆ ಕುಸಿಯಿತು. 2020ರ ರಂಜಾನ್ ತಿಂಗಳಲ್ಲಿ ಸಫಿಯಾ ರೂ. 600 ಗಳಿಸಿದರು ಎಂದು ಲೆಕ್ಕ ಹಾಕಿದರು. "ರಾಜಕಾರಣಿಗಳು ಮತ್ತು ಸಂಸ್ಥೆಗಳು ನಮಗೆ ನೀಡಿದ ಪಡಿತರದಿಂದಾಗಿ ನಾವು (ಕಳೆದ ಲಾಕ್‌ಡೌನ್ ದಿನಗಳಲ್ಲಿ) ಇಲ್ಲಿ ನಿಲ್ಲಲು ಸಾಧ್ಯವಾಯಿತು" ಎಂದು ಸಫಿಯಾ ಹೇಳಿದರು. “ಹಗಲಿನಲ್ಲಿ ದುಡಿದರೆ ರಾತ್ರಿ ಉಣ್ಣಲು ಸಾಧ್ಯವಿತ್ತು. ಆದಾಯವಿಲ್ಲದಿದ್ದರೆ ನಾವು ಬಡವರಾಗುತ್ತೇವೆ," ಎಂದು ಅವರು ಹೇಳಿದರು.
ಬಾಂದ್ರಾ ರಿಕ್ಲಮೇಶನ್ ಫ್ಲೈ-ಓವರ್ ಅಡಿಯಲ್ಲಿ, ನರ್ಗಿಸ್ ದತ್ ನಗರವು ಅದರ ಸುತ್ತಲೂ ಹರಡಿಕೊಂಡಿದೆ, ಇದು ಸುಮಾರು 1200 ಮನೆಗಳನ್ನು ಹೊಂದಿದೆ. ಈ ಭಾಗದ ಹಲವು ಕುಟುಂಬಗಳಂತೆ ಸಫಿಯಾರ ಮನೆಯವರು ಆಕೆಯನ್ನು ಕೆಲಸಕ್ಕೆ ಹೋಗಲು ಬಿಡುತ್ತಿಲ್ಲ. ಯಾರೋ ತಮ್ಮ ಪಕ್ಕದ ಹಳ್ಳಿಯ ಪ್ರಧಾನ್ ಇಲ್ಲಿಗೆ ಬಸ್ ಕಳುಹಿಸುತ್ತಿದ್ದಾರೆ ಎಂದು ಸೋಫಿಯಾಗೆ ಹೇಳಿದರು. ಅವರು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ತಮ್ಮ ಗ್ರಾಮದ ಪಕ್ಕದ ಹಳ್ಳಿಯ ಪಂಚಾಯತ್ ಪ್ರಧಾನರಾಗಿದ್ದಾರೆ. ಆ ಬಸ್ಸಿನಲ್ಲಿ ತನ್ನ ಕುಟುಂಬಕ್ಕೂ ಸೀಟು ಸಿಗಲಿ ಎಂದು ಸಫಿಯಾ ಆಶಿಸುತ್ತಿದ್ದಾರೆ.
“ಗೊಂಡಾ ಪಂಚಾಯಿತಿಗೆ ಚುನಾವಣೆ ಬರುತ್ತಿದೆ. ಹೀಗಾಗಿ ಚುನಾವಣಾ ದಿನಾಂಕಕ್ಕೂ ಮುನ್ನ ತನ್ನ ಗ್ರಾಮಸ್ಥರೆಲ್ಲ ಗ್ರಾಮಕ್ಕೆ ಮರಳಬೇಕು ಎಂದು ಅವರು ಬಯಸಿದ್ದಾರೆ” ಎಂದು ಸಫಿಯಾ ಹೇಳಿದರು. ಹಲ್‌ಧರ್ಮಾವೊ ಬ್ಲಾಕ್‌ನಲ್ಲಿರುವ ಅವರ ಸ್ಥಳೀಯ ಗ್ರಾಮ ಅಖಾಡೆರಾ ಕೂಡ ಚುನಾವಣೆಗಳನ್ನು ಎದುರಿಸುತ್ತದೆಯೇ ಅಥವಾ ಇಲ್ಲವೇ ಎಂದು ಅವರಿಗೆ ಖಚಿತವಾಗಿ ತಿಳಿದಿಲ್ಲ. ಆದರೆ ಈ ಬಾರಿ ಮುಂಬೈನಿಂದ ತನ್ನ ಊರಿಗೆ ಹೋಗುವ ನಿರೀಕ್ಷೆಯಲ್ಲಿದ್ದಾರೆ. “ಮತ್ತೊಂದು ಲಾಕ್‌ಡೌನ್ ಸಮಯದಲ್ಲಿ ಇಲ್ಲಿ ಉಳಿಯಲು ಸಾಧ್ಯವಿಲ್ಲ. ನಮ್ಮ ಘನತೆ ಕಾಪಾಡಿಕೊಳ್ಳಬೇಕಿದೆ,’’ ಎಂದರು.
ಕಾಲೊನಿಯ ಕೆಲವರು ತಾವು ಯೋಜಿಸಿದಂತೆ ತಮ್ಮ ಸ್ಥಳೀಯ ಹಳ್ಳಿಗಳಿಗೆ ಹೋದರು. ಲಾಕ್‌ಡೌನ್ ಷರತ್ತುಗಳನ್ನು ತೆಗೆದುಹಾಕುವವರೆಗೆ ಈ ಜನರು ಹಿಂತಿರುಗುವುದಿಲ್ಲ. ಇಪ್ಪತ್ತು ವರ್ಷದ ಸಂದೀಪ್ ಬಿಹಾರಿ ಲಾಲ್ ಶರ್ಮಾ ಮೇ 5ರಂದು ಪ್ರಯಾಣಿಸಲು ಟಿಕೆಟ್ ಪಡೆದಿದ್ದಾರೆ. ಶರ್ಮಾ ಗೊಂಡಾಗೆ ಹೋಗಬೇಕು ಮತ್ತು ಅಲ್ಲಿಂದ ಚಾಪಿಯಾ ಬ್ಲಾಕ್‌ನಲ್ಲಿರುವ ತನ್ನ ಬಬಾನನ್ ಗ್ರಾಮವನ್ನು ತಲುಪಬೇಕು. “ನಮ್ಮ ಕುಟುಂಬದಲ್ಲೊಂದು ಮದುವೆಯಿದೆ. ಕಳೆದ ವಾರ ತಂದೆ ಮತ್ತು ಸಹೋದರಿ ಅಲ್ಲಿಗೆ ಬಂದಿದ್ದಾರೆ. ಕೆಲಸ ಸಾಕಷ್ಟಿದೆಯೆನ್ನುವುದು ಖಚಿತವಾಗುವ ತನಕ ಮತ್ತೆ ಇಲ್ಲಿಗೆ ಬರುವುದಿಲ್ಲ’ ಎಂದು ಶರ್ಮಾ ಹೇಳಿದರು.
ಬಧಾಯಿ ಸಮುದಾಯಕ್ಕೆ ಸೇರಿದ ಸಂದೀಪ್ ಅವರು ಬಡಗಿಯಾಗಿ ಕೆಲಸ ಮಾಡುತ್ತಾರೆ ಮತ್ತು ಗೃಹೋಪಯೋಗಿ ಉಪಕರಣ ತಯಾರಕರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾರೆ. “ಈಗ ಕೆಲಸವಿಲ್ಲ. ಯಾರೂ ಹೊಸ ಪೀಠೋಪಕರಣಗಳನ್ನು ಖರೀದಿಸಲು ಅಥವಾ ಮನೆಯನ್ನು ನವೀಕರಿಸಲು ಬಯಸುವುದಿಲ್ಲ,” ಎಂದು ಸಂದೀಪ್ ಹೇಳಿದರು. “ಸರ್ಕಾರವು ಮತ್ತೊಂದು ಲಾಕ್‌ಡೌನ್ ಅನ್ನು ಹೇಗೆ ಹೇರುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರಿಗೆ ಬಡವರು ಎಷ್ಟು ಕಳೆದುಕೊಳ್ಳುತ್ತಾರೆ ಎಂದು ನಿಜವಾಗಿಯೂ ತಿಳಿದಿದೆಯೇ?”
ಈ ವರ್ಷದ ಮಾರ್ಚಿಯಲ್ಲಿ, ಹೊಸ ಆರ್ಡರ್‌ಗಳು ಒಂದೊಂದಾಗಿ ಬಂದವು ಮತ್ತು ಕೆಲಸ ಮತ್ತು ಆದಾಯವು ನಿಧಾನವಾಗಿ ಸುಧಾರಿಸಲು ಪ್ರಾರಂಭಿಸಿತು, ಕೋವಿಡ್‌ನ ಎರಡನೇ ಅಲೆಯು ಪ್ರಾರಂಭವಾಯಿತು ಎಂದು ಸಂದೀಪ್ ಹೇಳಿದರು.
ಈ ನಡುವೆ ಸ್ವಯಂ ಉದ್ಯೋಗವನ್ನೇ ನೆಚ್ಚಿಕೊಂಡವರಿಗೂ ಸಂಕಷ್ಟ ಎದುರಾಗಿದೆ. ಮುಫೈ ವರ್ಷದ ಸೊಹೈಲ್ ಖಾನ್ ಅವರಲ್ಲಿ ಒಬ್ಬರು. ಅವರು ಮೂರು ದಶಕಗಳಿಂದ ನರ್ಗೀಸ್ ದತ್ ನಗರದಲ್ಲಿ ವಾಸಿಸುತ್ತಿದ್ದಾರೆ. ಆತ ಮೀನು ವ್ಯಾಪಾರಿ. ವರ್ಸೊವಾ ಮೀನು ಮಾರುಕಟ್ಟೆಯಲ್ಲಿ ಮೀನುಗಳನ್ನು ಖರೀದಿಸುತ್ತಾರೆ. ತನ್ನ ಕಾಲೋನಿಯ ಸುತ್ತಲೂ ಅವುಗಳನ್ನು ಮರುಮಾರಾಟ ಮಾಡುತ್ತಾರೆ. “ರಂಜಾನ್ ತಿಂಗಳಿನಲ್ಲಿ, ಮಾರಾಟವನ್ನು ಸಂಜೆ ಮಾಡಲಾಗುತ್ತದೆ. ಆದರೆ ಸಂಜೆ 7 ಗಂಟೆಯ ಹೊತ್ತಿಗೆ ಪೊಲೀಸರು ಮಾರಾಟ ಮಾಡುವುದನ್ನು ನಿಲ್ಲಿಸಿ ಎಂದು ತಿರುಗಾಡಲು ಪ್ರಾರಂಭಿಸುತ್ತಾರೆ,'' ಎಂದು ಸಂದೀಪ್ ಆಕ್ರೋಶ ವ್ಯಕ್ತಪಡಿಸುತ್ತಾರೆ. “ನಮಗೆ ಯಾವುದೇ ಕೂಲಿಂಗ್ ಸೌಲಭ್ಯಗಳು ಅಥವಾ ಯಾವುದೇ ಇತರ ಸೌಲಭ್ಯಗಳಿಲ್ಲ. ಮಾರಾಟ ಮಾಡಿದ ನಂತರ ಉಳಿದ ಮೀನು ಹಾಳಾಗುತ್ತದೆ’ ಎಂದು ಸಂದೀಪ್ ಹೇಳಿದರು.
ಕಳೆದ ವಾರ, ಮಹಾರಾಷ್ಟ್ರದಲ್ಲಿ ಹೊಸ ನಿರ್ಬಂಧಗಳನ್ನು ಘೋಷಿಸಿದಾಗ ಖಾನ್ ತನ್ನ ಪತ್ನಿಯನ್ನು ಗೊಂಡಾದ ತನ್ನ ಸ್ಥಳೀಯ ಗ್ರಾಮವಾದ ಅಖಾಡೆರಾಗೆ ಕಳುಹಿಸಿದರು. ಅವರು ಮತ್ತು ಅವರ ಸಹೋದರ ಆಜಮ್ ಸ್ವಲ್ಪ ಸಮಯದಿಂದ ಕಾಯುತ್ತಿದ್ದರು. ಕಳೆದ ವರ್ಷ ಅವರ ಕುಟುಂಬದ ಆದಾಯದಲ್ಲಿ ಭಾರಿ ಹೊಡೆತ ಬಿದ್ದಿತ್ತು. ಈ ವರ್ಷ ರಂಜಾನ್ ತಿಂಗಳಲ್ಲಿ ಆ ನಷ್ಟವನ್ನು ಸ್ವಲ್ಪಮಟ್ಟಿಗೆ ಸರಿದೂಗಿಸುವ ಆಶಯದಲ್ಲಿದ್ದಾರೆ.
ಸೊಹೈಲ್ ತಮ್ಮ ಆಜಂ ಖಾನ್ ರಿಕ್ಷಾ ಓಡಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಅವರು ಬಜಾಜ್ ಆಟೋ ರಿಕ್ಷಾ ಖರೀದಿಸಿದ್ದರು. ಈ ಉದ್ದೇಶಕ್ಕಾಗಿ ಮಾಡಿದ ಸಾಲವನ್ನು ತೀರಿಸಲು ಕಂತುಗಳಲ್ಲಿ ಮಾಸಿಕ ರೂ. 4,000 ಕಟ್ಟಬೇಕು. ಕಂತು ಕಟ್ಟುವುದು ಅವರಿಗೆ ಕಷ್ಟವಾಗುತ್ತಿದೆ. “ಸಿ. ಎಂ.ಆಟೋಗಳನ್ನು ಓಡಿಸಲು ಅನುಮತಿ ನೀಡಿದ್ದಾರೆ. ಆದರೆ ಪ್ರಯಾಣಿಕರಿಗೆ ಹೊರಗೆ ಓಡಾಡಲು ಅವಕಾಶ ನೀಡದಿದ್ದರೆ ಆಟೋ ಚಾಲಕರು ಹೇಗೆ ಹಣ ಸಂಪಾದಿಸುತ್ತಾರೆ?” ಸೊಹೈಲ್ ಕೇಳಿದರು.
“ಹಿಂದಿನಂತೆ ಸಾಲದ ಕಂತುಗಳನ್ನು ಪಾವತಿಸಬೇಕಾದವರಿಗೆ ರಾಜ್ಯ ಸರ್ಕಾರ ಸಹಾಯ ಮಾಡಬೇಕು,” ಎಂದು ಸೊಹೈಲ್ ಹೇಳಿದರು. “ಪರಿಸ್ಥಿತಿ ಹೀಗೇ ಮುಂದುವರಿದರೆ ಕಳೆದ ವರ್ಷದಂತೆ ಗೊಂಡಾಕ್ಕೆ ಮರಳಬೇಕಾಗುತ್ತದೆ. ಮತ್ತೆ, ನಾವು ಸರ್ಕಾರದ ದಯೆಯ ಮೇಲೆ ಅವಲಂಬಿತರಾಗಿದ್ದೇವೆ,” ಸೊಹೈಲ್ ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು