ಅದು ದಿನದ ಮೊದಲ ಮಾರಾಟದ ಸಮಯ. ಶಿವಪುರವಾ ಗ್ರಾಮದ ಕೈಪಂಪ್ ಬಳಿ ನಿಂತಿದ್ದ 9-10 ಮಹಿಳೆಯರ ಗುಂಪಿನ ಬಳಿ ಬಚ್ಚು ತನ್ನ ಮೋಟಾರ್ ಸೈಕಲ್ ನಿಲ್ಲಿಸಿ ವ್ಯಾಪಾರಕ್ಕಿಳಿದಿದ್ದಾರೆ. "ದೀದಿ, ಪ್ಲೀಸ್ ಡಿಸೈನ್ ನೋಡಿ, ಸಿದ್ಧಿ ಬಜಾರ್ನ ದೊಡ್ಡ ದೊಡ್ಡ ಅಂಗಡಿಗಳಲ್ಲಿಯೂ ನಿಮಗೆ ಇಂತಹ ಸೀರೆಗಳು ಸಿಗಲಿಕ್ಕಿಲ್ಲ, ನಿಮಗೆ ಇಷ್ಟವಿಲ್ಲದಿದ್ದರೆ ತಗೋಬೇಡಿ" ಎಂದು ಮಹಿಳಾ ತಂಡದೆದುರು ತಮ್ಮ ವ್ಯಾಪಾರದ ಕೌಶಲವನ್ನು ತೋರಿಸುತ್ತಿದ್ದರು.
ಇದಾದ ನಂತರ, ಬಚ್ಚು ದಿನದ ಬೋಣಿಗಾಗಿ ಭಾರಿ ರಿಯಾಯಿತಿಯನ್ನು ಕೊಡಲೂ ಒಪ್ಪುತ್ತಾರೆ: "ಒಂದೊಂದ್ ಸೀರೆಗೆ 700 ರೂ. ಆದ್ರೆ ನಾನು 400ಕ್ಕೆ ಕೊಡ್ತೀನಿ..."
ಗಥಾರ್ (ಚೀಲ)ನಲ್ಲಿರುವ 15-20 ನೈಲಾನ್ ಸೀರೆಗಳನ್ನು ಪರೀಕ್ಷಿದ ಮಹಿಳೆಯರಲ್ಲಿ ಒಬ್ಬರು 150 ರೂಪಾಯಿ ಕೊಡುವುದಾಗಿ ಹೇಳಿದರು. ಕೋಪಗೊಂಡ ಬಚ್ಚು ತನ್ನ ಸೀರೆಗಳನ್ನು ಒಟ್ಟುಗೂಡಿಸಲು ಪ್ರಾರಂಭಿಸುತ್ತಾರೆ, ಸೀರೆಯ ಖರೀದಿ ಬೆಲೆಯೇ 250 ರೂಪಾಯಿ ಎಂದು ಗೊಣಗುತ್ತಾ ಹಗ್ಗದಿಂದ ಚೀಲವನ್ನು ಕಟ್ಟತೊಡಗಿದರು.
ನಿರಾಶೆಗೊಂಡ ಬಚ್ಚು ತಮ್ಮ ಮೋಟಾರು ಸೈಕಲ್ನಲ್ಲಿ ದಾರಿಯಲ್ಲಿ ಸಿಗುವ ಮುಂದಿನ ಹಳ್ಳಿಯಾದ ಮಡ್ವಾ ಕಡೆಗೆ ಹೊರಟರು. "ಕೆಲವೊಮ್ಮೆ ಜನರು ಹೆಚ್ಚು ಸಮಯ ವ್ಯರ್ಥ ಮಾಡುತ್ತಾರೆ, ಆದರೆ ಏನನ್ನೂ ಖರೀದಿಸುವುದಿಲ್ಲ. ನಮ್ಮ ಸಮಯವು ಸೀರೆಗಳನ್ನು ತೆರೆಯುವುದು, ಮಡಚುವುದು ಮತ್ತು ನಂತರ ಕಟ್ಟುವುದರಲ್ಲಿ ವ್ಯರ್ಥವಾಗುತ್ತದೆ" ಎಂದು ಅವರು ಸ್ಥಳೀಯ ಬಗೇಲಿ ಭಾಷೆಯಲ್ಲಿ ಗೊಣಗಿದರು.
ಸುಮಾರು ಮೂರು ಕಿಲೋಮೀಟರ್ ನಂತರ, ಅವರು ಮದ್ವಾ ಗ್ರಾಮದ ಕೈಪಂಪ್ನಲ್ಲಿ ನೀರು ಕುಡಿಯಲು ನಿಂತವರು, "ನಾನು ಮನೆಯಿಂದ ಹೊರಟು ನಾಲ್ಕು ಗಂಟೆಗಳು ಕಳೆದಿವೆ, ಆದರೆ ಬೋಣಿಯನ್ನೂ ಮಾಡಿಲ್ಲ [ಬೋಣಿಯೆನ್ನುವುದು ಶುಭವೆಂದು ಪರಿಗಣಿಸಲಾಗುವ ದಿನದ ಮೊದಲ ಮಾರಾಟವಾಗಿದೆ,] ಇಂದು ಬೆಳಿಗ್ಗೆ ನಾನು ಕಾರಿನಲ್ಲಿ 150 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕಿದ್ದೇನೆ ಮತ್ತು ಇದುವರೆಗೆ. ಅಷ್ಟನ್ನೂ ಸಂಪಾದಿಸಲಾಗಲಿಲ್ಲ." ಎಂದು ಹೇಳಿದರು.
ಅಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಗಡಿಭಾಗದ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸಿಧಿ ಪಟ್ಟಣದಲ್ಲಿರುವ ತನ್ನ ಮನೆಯಿಂದ ಬಚ್ಚು ಜೈಸ್ವಾಲ್ ತೆರಳಿದ್ದರು. ಅವರು ಮತ್ತು ಇತರ ವ್ಯಾಪಾರಿಗಳು ಈ ಪ್ರದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸೀರೆಗಳು, ಹೊದಿಕೆಗಳು, ಬೆಡ್ಶೀಟ್ಗಳು, ಕುಶನ್ ಕವರ್ಗಳು, ಚಾಪೆಗಳು, ಪ್ಲಾಸ್ಟಿಕ್ ಶೂಗಳು ಮತ್ತು ಇತರ ವಸ್ತುಗಳನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಅವರು ಸಾಮಾನ್ಯವಾಗಿ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ದೊಡ್ಡ ಮಾರುಕಟ್ಟೆಗಳಿಂದ ಈ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಈ ಮಾರುಕಟ್ಟೆಗಳು ಅವರ ಮನೆಯಿಂದ ಸುಮಾರು 200 ಕಿ.ಮೀ. ಅವರ ಗ್ರಾಹಕರಲ್ಲಿ ಹೆಚ್ಚಿನವರು ಮಹಿಳೆಯರು, ಅವರು ಹೆಚ್ಚಾಗಿ ದೊಡ್ಡ ಮಾರುಕಟ್ಟೆಗಳಿಗೆ ಹೋಗುವುದಿಲ್ಲ.
ಈ ಮಹಿಳೆಯರಲ್ಲಿ ಸಿಧಿ ಪಟ್ಟಣದಿಂದ ಸುಮಾರು 20 ಕಿಮೀ ದೂರದಲ್ಲಿರುವ ಸದ್ಲಾ ಗ್ರಾಮದ 32 ವರ್ಷದ ರೈತ ಮಧು ಮಿಶ್ರಾ ಕೂಡಾ ಒಬ್ಬರು. ಅವರು ಹೇಳುತ್ತಾರೆ, “ನನಗೆ ವ್ಯಾಪಾರಿಯಿಂದ ಸರಕುಗಳನ್ನು ಖರೀದಿಸುವುದು ಸುಲಭ, ಏಕೆಂದರೆ ನನಗೆ ಕೃಷಿ ಕೆಲಸಗಳಿಂದಾಗಿ ಮಾರುಕಟ್ಟೆಗೆ ಹೋಗಲು ಸಾಕಷ್ಟು ಸಮಯ ಸಿಗುವುದಿಲ್ಲ. ನಾನು ಪ್ರತಿ ವರ್ಷ 3-4 ಸೀರೆಗಳು ಮತ್ತು 4-5 ಬೆಡ್ಶೀಟ್ಗಳನ್ನು ಖರೀದಿಸುತ್ತೇನೆ. ಈ ಹಿಂದೆ ಬಚ್ಚು 200 ರೂ.ಗೆ ಒಳ್ಳೆಯ ಸೀರೆ, 100 ರೂ.ಗೆ ಬೆಡ್ಶೀಟ್ ಕೊಡುತ್ತಿದ್ದರು. ಆದರೆ ಈಗ ಸೀರೆಗೆ 250 ರೂ.ಗಿಂತ ಹೆಚ್ಚು, ಬೆಡ್ ಶೀಟ್ ಗೆ 150 ರೂ. ಹೇಳುತ್ತಾರೆ. ಅಷ್ಟು ಖರ್ಚು ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ."
ಆದರೆ, ಹಾಗೆ ಮಾಡಲೇಬೇಕಾದ ಅನಿವಾರ್ಯತೆ ಬಂದಿದೆ ಎನ್ನುತ್ತಾರೆ ಬಚ್ಚು. ಅವರ ಪ್ರಕಾರ, ನಿರಂತರವಾಗಿ ಏರುತ್ತಿರುವ ಪೆಟ್ರೋಲ್ ಬೆಲೆಗಳು ಅವರಂತಹ ಸಣ್ಣ ವ್ಯಾಪಾರಿಗಳನ್ನು ಕಂಗಾಲು ಮಾಡುತ್ತಿವೆ.
ಸೆಪ್ಟೆಂಬರ್ 29, 2021ರಂದು, ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 110 ರೂ. ತಲುಪಿದೆ. ಇದೇ ಸಮಯದಲ್ಲಿ, ಸೆಪ್ಟೆಂಬರ್ 2019ರಲ್ಲಿ, ಈ ಬೆಲೆ ಪ್ರತಿ ಲೀಟರ್ಗೆ ರೂ 78 ಆಗಿತ್ತು (ದರವು 3 ನವೆಂಬರ್ 2021ರಂದು ಪ್ರತಿ ಲೀಟರ್ಗೆ ರೂ 120 ತಲುಪಿತು, ಸ್ವಲ್ಪ ಇಳಿಯುವ ಮೊದಲು). ಬಹಳ ದಿನಗಳಿಂದ ಬಚ್ಚು ಮನೆಯಿಂದ ಹೊರಡುವ ಮುನ್ನ ಮೋಟಾರ್ ಸೈಕಲ್ಗೆ ದಿನಕ್ಕೆ 100 ರೂಪಾಯಿ ಪೆಟ್ರೋಲ್ ತುಂಬಿಸುತ್ತಿದ್ದರು. ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿದ ನಂತರ, ಅವರು ಪ್ರತಿದಿನ 150 ರೂಪಾಯಿ ಮೌಲ್ಯದ ಪೆಟ್ರೋಲ್ ತುಂಬಲು ಪ್ರಾರಂಭಿಸಿದರು, ಆದರೆ ಪೆಟ್ರೋಲ್ ಪ್ರಮಾಣ ಇನ್ನೂ ಕಡಿಮೆಯಾಯಿತು; ಮತ್ತು ಈ ಕಾರಣದಿಂದಾಗಿ, ಈಗ ಅವರು ತನ್ನ ವಸ್ತುಗಳ ಜೊತೆ ಕೆಲವೇ ಹಳ್ಳಿಗಳನ್ನಷ್ಟೇ ಸುತ್ತಲು ಸಾಧ್ಯವಾಗುತ್ತದೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಸಂಚಾರಿ ಮಾರಾಟಗಾರರಾಗಿ ಕೆಲಸ ಮಾಡುತ್ತಿರುವ ಬಚ್ಚು, ಕುಟುಂಬದ ಸಾಲಗಳು, ಅನಾರೋಗ್ಯ ಮತ್ತು ಲಾಕ್ಡೌನ್ನ ಹೊರತಾಗಿಯೂ ಬದುಕುಳಿಯುವಲ್ಲಿ ಯಶಸ್ವಿಯಾದರು. ಆದರೆ, ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಈಗ ಅವರಿಗೆ ಸಮಸ್ಯೆ ಸೃಷ್ಟಿಸುವ ಹಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಮಾರಾಟದ ಕುಸಿತದಿಂದಾಗಿ, ಅನೇಕ ಬೀದಿ ಬದಿ ವ್ಯಾಪಾರಿಗಳು ಈ ಕೆಲಸವನ್ನು ತೊರೆದಿದ್ದಾರೆ ಮತ್ತು ಈಗ ದಿನಗೂಲಿ ಮಾಡುತ್ತಿದ್ದಾರೆ ಅಥವಾ ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ಗಮನಸೆಳೆಯುತ್ತಾರೆ. ಮಾರಾಟಗಾರರಿಗೆ ಸರ್ಕಾರದಿಂದ ಒದಗಿಸಲಾಗುವ ಯಾವುದೇ ಸೌಲಭ್ಯವನ್ನು ಪಡೆಯಲು ಅವರು ಅರ್ಹರಾಗಿರುವುದಿಲ್ಲ, ಏಕೆಂದರೆ ಅವರು ಪರವಾನಗಿ ಹೊಂದಿಲ್ಲ ಅಥವಾ ಮಾರಾಟಗಾರರೆಂದು ಗುರುತಿಸಲ್ಪಟ್ಟಿಲ್ಲ ಅಥವಾ ಯಾವುದೇ ಯೋಜನೆಯಡಿ ಒಳಪಡುವುದಿಲ್ಲ. (ಈ ವರದಿಯಲ್ಲಿ ಸೇರಿಸಲಾಗಿರುವ ವೀಡಿಯೊದಲ್ಲಿ, ಸಿಧಿ ಜಿಲ್ಲೆಯ ಟಿಕಟ್ ಕಲಾ ಗ್ರಾಮದ ಬೀದಿ ಬದಿ ವ್ಯಾಪಾರಿ ಜಗನಾರಾಯಣ ಜೈಸ್ವಾಲ್ ಅವರು ಇದೇ ರೀತಿಯ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.)
ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಮಾರಾಟದ ಕುಸಿತದಿಂದಾಗಿ, ಅನೇಕ ಬೀದಿ ಬದಿ ವ್ಯಾಪಾರಿಗಳು ಈ ಕೆಲಸವನ್ನು ತೊರೆದಿದ್ದಾರೆ ಮತ್ತು ಈಗ ದಿನಗೂಲಿ ಮಾಡುತ್ತಿದ್ದಾರೆ ಅಥವಾ ನಿರುದ್ಯೋಗಿಗಳಾಗಿದ್ದಾರೆ
45 ವರ್ಷದ ಬಚ್ಚು ಹೇಳುತ್ತಾರೆ, ಸಾಮಾನ್ಯವಾಗಿ, ಬೀದಿ ಬದಿ ವ್ಯಾಪಾರಿಗಳ ಈ ವ್ಯವಹಾರವು ಕುಟುಂಬದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತದೆ ಮತ್ತು ಮೊದಲು ಈ ಕೆಲಸವು ಲಾಭದಾಯಕವಾಗಿತ್ತು. 1995ರಲ್ಲಿ ಈ ವ್ಯಾಪಾರವನ್ನು ಆರಂಭಿಸಿದ ಸಂದರ್ಭವನ್ನು ನೆನಪಿಸಿಕೊಂಡ ಅವರು, "ಮೊದಲ ಆರು ವರ್ಷ ಬಟ್ಟೆಯ ಮೂಟೆಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದೆ. ಮೂಟೆಯ ತೂಕ ಸುಮಾರು 10 ಕೆ.ಜಿ ಇದ್ದಿರಬಹುದು" ಎಂದು ಅವರು ಅಂದಾಜಿಸುತ್ತಾರೆ. ‘ಮೊದಲು ಪ್ರತಿದಿನ ಸುಮಾರು 7-8 ಕಿಲೋಮೀಟರ್ ನಡೆದು 50ರಿಂದ 100 ರೂಪಾಯಿ ಗಳಿಸುತ್ತಿದ್ದೆ” ಎನ್ನುತ್ತಾರೆ ಅವರು.
2001ರಲ್ಲಿ, ಬಚ್ಚು ಸೈಕಲ್ ಖರೀದಿಸಿದರು. ಅವರು ಹೇಳುತ್ತಾರೆ, "ಆ ನಂತರ ನಾನು ಪ್ರತಿದಿನ ಸುಮಾರು 15-20 ಕಿಲೋಮೀಟರ್ ದೂರ ಹೋಗಲು ಪ್ರಾರಂಭಿಸಿದೆ ಮತ್ತು ಈಗ ನಾನು ಮೊದಲಿಗಿಂತ ಕಡಿಮೆ ದಣಿಯುತ್ತಿದ್ದೆ. 500ರಿಂದ 700 ರೂ ಮೌಲ್ಯದ ಸರಕುಗಳನ್ನು ಮಾರಾಟ ಮಾಡುತ್ತಿದ್ದೆ ಮತ್ತು 100ರಿಂದ 200 ರೂಗಳವರೆಗೆ [ಲಾಭ] ಗಳಿಸುತ್ತಿದ್ದೆ."
2015ರಲ್ಲಿ, ಬಚ್ಚು ತನ್ನ ಸ್ನೇಹಿತನಿಂದ 15,000 ರೂ.ಗೆ ಸೆಕೆಂಡ್ ಹ್ಯಾಂಡ್ ಹೀರೋ ಹೋಂಡಾ ಮೋಟಾರ್ ಸೈಕಲ್ ಖರೀದಿಸಿ ವ್ಯಾಪಾರಿಯಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟರು. ಆ ನಂತರ ಬೈಕಿನಲ್ಲಿ 30ರಿಂದ 40 ಕಿ.ಮೀ ಸುತ್ತು ಹಾಕಲು ಆರಂಭಿಸಿ ದಿನಕ್ಕೆ 500ರಿಂದ 700 ರೂ. ಸಂಪಾದಿಸಲಾರಂಭಿಸಿದರು. ತಮ್ಮ ಗಾಡಿಯಲ್ಲಿ ಅವರು 9ರಿಂದ 10 ಹಳ್ಳಿಗಳಿಗೆ ಹೋಗುತ್ತಿದ್ದರು, ಅವುಗಳಲ್ಲಿ ಕೆಲವು 50-60 ಕಿಮೀ ದೂರದಲ್ಲಿವೆ.
ಹಿಂದಿನ ಕಾಲದಲ್ಲಿ ಮತ್ತು ಇಂದಿಗೂ ಸಹ, ಬಚ್ಚು ಚಳಿಗಾಲ ಮತ್ತು ಬೇಸಿಗೆಯ ತಿಂಗಳುಗಳಲ್ಲಿ (ನವೆಂಬರ್ ತಿಂಗಳಿನಿಂದ ಮೇವರೆಗೆ) ಸರಕುಗಳನ್ನು ಮಾರಾಟ ಮಾಡಲು ಹೋಗುತ್ತಾರೆ. ಅವರು ಹೇಳುತ್ತಾರೆ, “ನಾವು ಮಳೆಗಾಲದಲ್ಲಿ [ಜೂನ್ ಮಧ್ಯದಿಂದ ಸೆಪ್ಟೆಂಬರ್ವರೆಗೆ] ಸರಕುಗಳನ್ನು ಮಾರಾಟ ಮಾಡಲು ಸುತ್ತಾಡುವುದನ್ನು ತಪ್ಪಿಸುತ್ತೇವೆ ಏಕೆಂದರೆ ನಮ್ಮ ವಸ್ತುಗಳಿರುವ ಕಟ್ಟು ಒದ್ದೆಯಾಗಿ ಅದರೊಳಗಿನ ವಸ್ತುಗಳು ಹಾಳಾಗುವ ಭಯವಿರುತ್ತದೆ. ಅಲ್ಲದೆ, ಈ ಋತುವಿನಲ್ಲಿ ಹಳ್ಳಿಯ ರಸ್ತೆಗಳು ಕೆಸರಿನಿಂದ ತುಂಬಿಕೊಂಡಿರುತ್ತವೆ."
ಬೇಸಿಗೆ ಕಾಲದಲ್ಲೂ ಸರಕು ಮಾರಾಟ ಮಾಡುವುದು ಕಷ್ಟ. ಅವರು ಹೇಳುತ್ತಾರೆ, “45 ಡಿಗ್ರಿ [ಸೆಲ್ಸಿಯಸ್] ತಾಪಮಾನದೊಂದಿಗೆ ಈ ಸುಡುವ ಬಿಸಿಲಿನಲ್ಲಿ ಗಂಟೆಗಟ್ಟಲೆ ಮೋಟಾರ್ ಸೈಕಲ್ ಸವಾರಿ ಮಾಡುವುದು ತುಂಬಾ ಕಷ್ಟ, ಆದರೂ, ನಾವು ಬೇಸಿಗೆಯಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಂಪಾದಿಸಲು ಪ್ರಯತ್ನಿಸುತ್ತೇವೆ. ಮಳೆಗಾಲದಲ್ಲಿ ಮನೆಯಲ್ಲಿ ಕುಳಿತು ಉಂಟಾದ ನಷ್ಟವನ್ನು ಸರಿದೂಗಿಸಲು."
ಬಚ್ಚು ಉಳಿತಾಯ ಮತ್ತು ಕೃಷಿಯ ಸಹಾಯದಿಂದ ಲಾಕ್ಡೌನ್ ಸಮಯವನ್ನು ಕಳೆದರು. ಅವರು ಸಿಧಿ ಪಟ್ಟಣದಿಂದ ಸುಮಾರು 20 ಕಿಮೀ ದೂರದಲ್ಲಿರುವ ಕುಬರಿ ಗ್ರಾಮದಲ್ಲಿ 0.5 ಎಕರೆ ಜಮೀನನ್ನು ಹೊಂದಿದ್ದಾರೆ. ಇವರು ತಮ್ಮ ಹೊಲದಲ್ಲಿ ಖಾರಿಫ್ ಋತುವಿನಲ್ಲಿ ಭತ್ತ ಮತ್ತು ರಬಿ ಋತುವಿನಲ್ಲಿ ಗೋಧಿಯನ್ನು ಬಿತ್ತುತ್ತಾರೆ. ಕೃಷಿ ಮಾಡಲು, ಅವರು ಪ್ರತಿ ತಿಂಗಳು ತಮ್ಮ ವ್ಯಾಪಾರದ ಕೆಲಸದಿಂದ ಕೆಲವು ದಿನಗಳ ರಜೆ ತೆಗೆದುಕೊಳ್ಳುತ್ತಾರೆ. "ಪ್ರತಿ ವರ್ಷ, ಸುಮಾರು 300 ಕೆಜಿ ಗೋಧಿ ಮತ್ತು 400 ಕೆಜಿ ಭತ್ತವನ್ನು [ಕುಟುಂಬದ ಆಹಾರಕ್ಕಾಗಿ ಬಳಸಲಾಗುತ್ತದೆ] ಉತ್ಪಾದಿಸಲಾಗುತ್ತದೆ, ಆದರೆ ನಾವು ಮಾರುಕಟ್ಟೆಯಿಂದ ಬೇಳೆಕಾಳುಗಳು ಮತ್ತು ಇತರ ಧಾನ್ಯಗಳನ್ನು ಖರೀದಿಸುತ್ತೇವೆ" ಎಂದು ಅವರು ಹೇಳುತ್ತಾರೆ.
ಮಾರ್ಚ್ 2021ರಲ್ಲಿ, ಕೋವಿಡ್ -19ರ ಎರಡನೇ ಅಲೆಯ ಆರಂಭದಲ್ಲಿ, ಕೊರೋನಾ ಸೋಂಕಿಗೆ ಒಳಗಾದ ಬಚ್ಚು ಹೇಳುತ್ತಾರೆ, "ಎರಡು ತಿಂಗಳಿಗೂ ಹೆಚ್ಚು ಕಾಲ ಹಾಸಿಗೆ ಹಿಡಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸುಮಾರು 25 ಸಾವಿರ ರೂ. ಖರ್ಚು ಮಾಡಿದೆ."
ಬಚ್ಚು ಅವರ ಪತ್ನಿ ಪ್ರಮೀಳಾ ಜೈಸ್ವಾಲ್, 43, ಹೇಳುತ್ತಾರೆ, "ಆ ಕಾಲದಲ್ಲಿ ನಮಗೆ ದುಡಿಯಲು ಯಾವುದೇ ದಾರಿಯಿರಲಿಲ್ಲ, ಆಗ ನನ್ನ ತಂದೆ [ಕೃಷಿಕ] ನಮಗೆ ನಾಲ್ಕು ಹಸುಗಳನ್ನು ಉಡುಗೊರೆಯಾಗಿ ನೀಡಿದರು, ಈಗ ನಾನು ಆ ಹಸುಗಳಿಂದ ಪ್ರತಿದಿನ ಐದು ಲೀಟರ್ ಹಾಲು ಕರೆಯುತ್ತೇನೆ. ಹಾಲನ್ನು ನನ್ನ ಕಾಲೋನಿಯಲ್ಲಿ ಮಾರಾಟ ಮಾಡುವ ಮೂಲಕ ಪ್ರತಿ ತಿಂಗಳು 3,000-4,000 ರೂ ಗಳಿಸುತ್ತಿದ್ದೇನೆ."
ಮಧ್ಯಾಹ್ನ ಪ್ರಮೀಳಾ ಅವರ ಮನೆಯ ಹಸುಗಳಿಗೆ ಮೇವು ತರಲು ಸಿಧಿ ಪಟ್ಟಣದ ಹೊರವಲಯದಲ್ಲಿರುವ ಹುಲ್ಲುಗಾವಲುಗಳಿಗೆ ಹೋಗುತ್ತಾರೆ. ಸಂಜೆ ಸುಮಾರು 6 ಗಂಟೆಗೆ, ಬಚ್ಚು ತನ್ನ ವ್ಯಾಪಾರದಿಂದ ಹಿಂದಿರುಗಿದ ನಂತರ, ತನ್ನ ಹೆಂಡತಿಗೆ ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಲು ಮತ್ತು ಪ್ರಾಣಿಗಳಿಗೆ ಮೇವು ತಯಾರಿಸಲು ಸಹಾಯ ಮಾಡುತ್ತಾರೆ.
ಲಾಕ್ಡೌನ್ಗೂ ಮುನ್ನ ಪ್ರಮೀಳಾ ತರಕಾರಿ ಮಾರುತ್ತಿದ್ದರು. ಅವರು ಹೇಳುತ್ತಾರೆ, ‘‘2010ರಲ್ಲಿ ತಲೆಯ ಮೇಲೆ ತರಕಾರಿ ಬುಟ್ಟಿ ಇಟ್ಟುಕೊಂಡು ಸುತ್ತಮುತ್ತಲಿನ ಕಾಲೋನಿಗಳಲ್ಲಿ ತರಕಾರಿ ಮಾರಲು ಆರಂಭಿಸಿದ್ದೆ. ಕಡಿಮೆ ದರದಲ್ಲಿ ತರಕಾರಿ ಖರೀದಿಸಲು ಮತ್ತು ದಿನಕ್ಕೆ 100-150 ರೂ ಗಳಿಸಲು ನಾನು ಪ್ರತಿದಿನ ತರಕಾರಿ ಮಾರುಕಟ್ಟೆಗೆ ಮೂರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದೆ." ಫೆಬ್ರವರಿ 2020ರಲ್ಲಿ, ತನ್ನ 22 ವರ್ಷದ ಕಿರಿಯ ಮಗಳು ಪೂಜಾ, ಮದುವೆಯ ನಂತರ, ಅವರು ತರಕಾರಿ ವ್ಯಾಪಾರವನ್ನು ನಿಲ್ಲಿಸಿದ್ದರು. "ನಾನು ತರಕಾರಿ ಮಾರಲು ಹೋಗುತ್ತಿದ್ದಾಗ, ಅವಳು ಕುಟುಂಬಕ್ಕೆ ಅಡುಗೆ ತಯಾರಿಸುತ್ತಿದ್ದಳು, ಅವಳ ಮದುವೆಯ ನಂತರ, ನಾನು ಅಡುಗೆ ಜವಬ್ದಾರಿ ನನ್ನ ಮೇಲೆ ಬಂದಿತು," ಎಂದು ಅವರು ಹೇಳುತ್ತಾರೆ.
ಪ್ರಮೀಳಾ ಮತ್ತು ಬಚ್ಚು ದಂಪತಿಗೆ ಇನ್ನೂ ಇಬ್ಬರು ಮಕ್ಕಳಿದ್ದು, ಅವರಲ್ಲಿ ಒಬ್ಬರು ಅವರ ಹಿರಿಯ ಮಗಳು ಸಂಗೀತಾ ಮತ್ತು ಇನ್ನೊಬ್ಬರು ಪುಷ್ಪರಾಜ್. ಸಂಗೀತಾ 26 ವರ್ಷ ವಯಸ್ಸಿನವರು ಮತ್ತು 2013ರಲ್ಲಿ ವಿವಾಹವಾದರು; ಪುಷ್ಪರಾಜ್ 18 ವರ್ಷ ವಯಸ್ಸಿನವರಾಗಿದ್ದು, ಕಾಲೇಜಿನಲ್ಲಿ ಓದುತ್ತಿದ್ದಾರೆ.
"ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಸಾಮರ್ಥ್ಯ ಇಲ್ಲದಿದ್ದರೂ ಎಲ್ಲ ಖಾಸಗಿ ಶಾಲೆಗೆ ಸೇರಿಸಿದ್ದೇವೆ" ಎನ್ನುತ್ತಾರೆ ಪ್ರಮೀಳಾ. ಪೂಜಾಳ ಮದುವೆಯ ಖರ್ಚು ಮತ್ತು ವರದಕ್ಷಿಣೆಯಿಂದಾಗಿ ಅವರ ಮೇಲೆ ಸಾಲದ ಹೊರೆ ಹೆಚ್ಚಾಯಿತು. ಆ ಸಾಲದಲ್ಲಿ ಇನ್ನೂ 1 ಲಕ್ಷ ರೂ. ಬಾಕಿಯಿದೆ. "ನಾನು ಈ ಸಾಲಗಳನ್ನು ಹೇಗೆ ತೀರಿಸುತ್ತೇನೊ ಗೊತ್ತಿಲ್ಲ" ಎಂದು ಅವರು ಮುಂದುವರೆದು ಹೇಳುತ್ತಾರೆ.
ಪುಷ್ಪರಾಜ್ ಸ್ಥಳೀಯ ಡೈರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ದಿನಕ್ಕೆ 150 ರೂ. ಸಂಪಾದಿಸುತ್ತಾರೆ. ಈ ಸಂಪಾದನೆಯಿಂದ ಅವರು ತಮ್ಮ ಕಾಲೇಜು ಶುಲ್ಕವನ್ನು ಪಾವತಿಸುತ್ತಾರೆ. ಅವರು ಹೇಳುತ್ತಾರೆ, "ತರಬೇತಿ ತರಗತಿಗಳಿಗೆ [ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಥವಾ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು] ಸಾಲುವಷ್ಟು ಹಣವನ್ನು ಸಂಗ್ರಹಿಸಲು ಕೆಲಸ ಮಾಡುತ್ತಿದ್ದೇನೆ." ಅವರು ಹೇಳುತ್ತಾರೆ, "ಗ್ರಾಹಕರು ಇಲ್ಲದಿದ್ದಾಗ, ನನಗೆ ಡೈರಿಯಲ್ಲಿ ಓದಲು ಅವಕಾಶ ನೀಡುತ್ತಾರೆ."
ಆದರೆ, ಸತತ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಬಚ್ಚು ಹೇಳುತ್ತಾರೆ, “ಲಾಕ್ಡೌನ್ಗೆ ಮೊದಲು [ಮಾರ್ಚ್ 2020ರಲ್ಲಿ] ಪೆಟ್ರೋಲ್ ಬೆಲೆ ಲೀಟರ್ಗೆ 70-80 ರೂ ಇದ್ದಾಗ, ನಾನು ತಿಂಗಳಿಗೆ ರೂ 7ರಿಂದ 8 ಸಾವಿರ ಗಳಿಸುತ್ತಿದ್ದೆ. ಗ್ರಾಮೀಣ ಪ್ರದೇಶದಲ್ಲಿ ನಮ್ಮ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿತ್ತು. ಅನೇಕ ಗ್ರಾಹಕರು ನಮ್ಮಿಂದ ಬಟ್ಟೆಗಳನ್ನು ಖರೀದಿಸಲು ನಮಗಾಗಿ ಕಾಯುತ್ತಿದ್ದರು."
ಬಚ್ಚು ಮುಂದುವರೆದು ಹೇಳುತ್ತಾರೆ, "ಈಗ ಪೆಟ್ರೋಲ್ ಬೆಲೆಯಿಂದ ನಮ್ಮ ಸಾರಿಗೆ ವೆಚ್ಚದ ಹೆಚ್ಚಿದ್ದರೂ, ಜನರು ನಮ್ಮಿಂದ ಸೀರೆಗಳು ಮತ್ತು ಇತರ ವಸ್ತುಗಳನ್ನು ಹಳೆಯ ಬೆಲೆಗೆ ನೀಡಬೇಕೆಂದು ಕೇಳುತ್ತಾರೆ. ಹಾಗೆ ಕೊಡದೆ ಹೋದರೆ ಸರಕುಗಳನ್ನು ಖರೀದಿಸಲು ನಿರಾಕರಿಸುತ್ತಾರೆ. ಅದಕ್ಕಾಗಿಯೇ, ನಮ್ಮ ಲಾಭಗಳು ಕಡಿಮೆಯಾಗಿದೆ.ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದರೂ 200ರೂ. ಗಳಿಸಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ಬೆಲೆಯಿಂದಾಗಿ ನಮ್ಮ ವ್ಯಾಪಾರ ಹಾಳಾಗಿದೆ."
ಅನುವಾದ: ಶಂಕರ. ಎನ್. ಕೆಂಚನೂರು