''ಕುದುರೆಗಳನ್ನು ನಾವು ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇವೆ. ಅವುಗಳ ವೈದ್ಯನ ಜವಾಬ್ದಾರಿಯನ್ನೂ ನಿಭಾಯಿಸುವ ನಾನು ಅಗತ್ಯವಿದ್ದಾಗಲೆಲ್ಲಾ ಮುಂಬೈಯಿಂದ ಔಷಧಿಗಳನ್ನು ತರುತ್ತೇನೆ. ಅವುಗಳ ಆರೋಗ್ಯವು ಚೆನ್ನಾಗಿಲ್ಲದ ಸಂದರ್ಭಗಳಲ್ಲಿ ಈ ಔಷಧಿಗಳನ್ನು ಚುಚ್ಚುಮದ್ದಿನ ಮೂಲಕವಾಗಿ ನಾನು ನೀಡುತ್ತೇನೆ. ಅವುಗಳಿಗೆ ಸ್ನಾನ ಮಾಡಿಸಿ ಸ್ವಚ್ಛವಾಗಿಡುವ ಕೆಲಸವೂ ಕೂಡ ನನ್ನದೇ'', ಎನ್ನುತ್ತಿದ್ದಾರೆ ಮನೋಜ್ ಕಸುಂಡೆ. ಮಥೇರನ್ ಪ್ರದೇಶದಲ್ಲಿ ಪರವಾನಗಿಯ ಸಮೇತವಾಗಿ ಕುದುರೆಗಳನ್ನು ಹೊಂದಿರುವ ಮತ್ತು ಜೀವನೋಪಾಯಕ್ಕಾಗಿ ಪ್ರವಾಸಿಗರನ್ನು ಕುದುರೆ ಸವಾರಿ ಮಾಡಿಸುವ ವೃತ್ತಿಯನ್ನವಲಂಬಿಸಿಕೊಂಡು ಬದುಕುತ್ತಿರುವ ಹಲವರಲ್ಲಿ ಕಸುಂಡೆ ಕೂಡ ಒಬ್ಬರು. ಪ್ರವಾಸಿಗರನ್ನು ಕುದುರೆ ಸವಾರರಂತೆ ಕೂರಿಸಿಕೊಂಡು ಇವುಗಳು ಮಥೇರನ್ ನ ಬೆಟ್ಟವನ್ನು ಹತ್ತಿಳಿದರೆ ಹ್ಯಾಂಡ್ಲರ್ ಮತ್ತು ಕೀಪರ್ ಗಳು ಜೊತೆಯಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ.
ಕಸುಂಡೆಗಳು ಒಂದು ರೀತಿಯಲ್ಲಿ ಇದ್ದರೂ ಇಲ್ಲದಂತಿರುವವರು. ಇವರ ಬಗ್ಗೆ ಹೆಚ್ಚಿನ ಮಾಹಿತಿಗಳಾಗಲೀ, ತಿಳಿದುಕೊಳ್ಳುವ ಅವಕಾಶಗಳಾಗಲೀ ಇರುವುದು ಕಮ್ಮಿ. ಇವರುಗಳ ಬಗ್ಗೆ ನಾವು ವಿಚಾರಿಸದಿರುವುದೂ ಕೂಡ ಇದಕ್ಕೊಂದು ಕಾರಣವಾಗಿರಬಹುದು. ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ, ಮುಂಬೈಯ ದಕ್ಷಿಣಕ್ಕೆ ಸುಮಾರು 90 ಕಿಲೋಮೀಟರ್ ದೂರವಿರುವ ಈ ಜನಪ್ರಿಯ ಹಿಲ್ ಸ್ಟೇಷನ್ ನಲ್ಲಿ ಬರೋಬ್ಬರಿ 460 ಕುದುರೆಗಳು ಓಡಾಡುತ್ತಿವೆಯೆಂದರೆ ನೀವು ನಂಬಲೇಬೇಕು. ''ಪ್ರತಿನಿತ್ಯವೂ ನಾವುಗಳು 20-25 ಕಿಲೋಮೀಟರ್ ದೂರದ ಬೆಟ್ಟವನ್ನು ಹತ್ತಿ ಇಳಿಯಬೇಕು'', ಎನ್ನುತ್ತಿದ್ದಾರೆ ಈ ಕುದುರೆಗಳನ್ನು ನೋಡಿಕೊಳ್ಳುತ್ತಿರುವ ಕೀಪರ್ ಗಳು (ಇವರಲ್ಲಿ ಎಲ್ಲರೂ ಮಾಲಕರಲ್ಲ). ಈ ಮಾತುಗಳನ್ನು ಕೇಳಿದರೆ ಹೊರೆಯನ್ನು ಹೊರುವ ಪಾಡು ಕುದುರೆಗಳದ್ದೋ ಅಥವಾ ಕೀಪರ್ ಗಳದ್ದೋ ಎಂಬ ಪ್ರಶ್ನೆಯು ಮೂಡಿದರೆ ಅಚ್ಚರಿಯಿಲ್ಲ.
ಹಿಲ್ ಸ್ಟೇಷನ್ನಿನ ಹೃದಯ ಭಾಗದಲ್ಲಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಂದರೆ ಈ ಭಾಗವು ವಾಹನಗಳ ಪ್ರವೇಶಕ್ಕೆ ಅನುಮತಿಯಿರುವ ಕೊನೆಯ ಜಾಗವಾದ ದಸ್ತೂರಿಯಿಂದ ಮಥೇರನ್ನಿನ ಮುಖ್ಯ ಮಾರುಕಟ್ಟೆಯವರೆಗಿನ ಸುಮಾರು 3 ಕಿಲೋಮೀಟರುಗಳ ದೂರದಲ್ಲಿದೆ. ಇಲ್ಲಿಂದ 11 ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ಸ್ಟೇಷನ್ ಆದ ನೇರಲ್ ಮತ್ತು ಮಾರುಕಟ್ಟೆಯ ಮಧ್ಯೆ ಆಟಿಕೆಯಂತಿದ್ದ ಪುಟ್ಟ ರೈಲೊಂದು ಈ ಹಿಂದೆ ಪ್ರಯಾಣಿಸುತ್ತಿತ್ತು. ಆದರೆ ಎರಡು ಹಳಿ ತಪ್ಪಿದ ಪ್ರಕರಣಗಳಾದ ನಂತರ ಈ ಸೇವೆಯನ್ನೂ ಕೂಡ ಮೇ 2016 ರಲ್ಲಿ ಸ್ಥಗಿತಗೊಳಿಸಲಾಯಿತು. ಹೀಗಾಗಿ ಸದ್ಯ ಈ ಜಾಗವನ್ನು ತಲುಪಬೇಕಾದರೆ ಒಂದೋ ಚಾರಣದಂತೆ ನಡೆದುಕೊಂಡು ಹೋಗಬೇಕು. ಅಥವಾ ದಸ್ತೂರಿಯಿಂದ ಎಳೆಯಲ್ಪಡುವ ರಿಕ್ಷಾಗಳಲ್ಲೋ, ಕುದುರೆಗಳಲ್ಲೋ ಕುಳಿತುಕೊಂಡು ಮುಂದುವರಿಯಬೇಕು. ಇಲ್ಲಿ ದೊಡ್ಡ ಸೈನ್ಯದಂತೆ ಕಾರ್ಯನಿರ್ವಹಿಸುತ್ತಿರುವ ಕುದುರೆಗಳ, ಕೀಪರ್ ಗಳ, ರಿಕ್ಷಾಗಳ ಮತ್ತು ಪೋರ್ಟರುಗಳ ಇರುವಿಕೆಯ ಹಿನ್ನೆಲೆಯೇ ಇದು.
ಶಿವಾಜಿ ಕೋಕರೆಯ ಕುದುರೆಗಳಾದ ರಾಜ, ಜೈಪಾಲ್ ಮತ್ತು ಚೇತಕ್ ಗಳು ತಮ್ಮ ಚಿತ್ರಗಳನ್ನು ಗುರುತಿನ ಚೀಟಿಗಳಲ್ಲಿ ಹೊಂದಿವೆ. ಇವರುಗಳ ಗುರುತುಚೀಟಿ ಎಂದರೆ ಮಾಲೀಕರ ಬಳಿಯಿರುವ ಪರವಾನಗಿಯ ಪತ್ರದಲ್ಲಿ. ಈ ಪರವಾನಗಿಯ ಪತ್ರವನ್ನು ಸ್ಥಳೀಯ ಪೋಲೀಸರಿಂದ ಕುದುರೆಗಳ ಮಾಲೀಕರು ಪಡೆದುಕೊಳ್ಳುತ್ತಾರೆ. ಈ ಕಾರ್ಡಿನ ಹಿಂಭಾಗದಲ್ಲಿ ನೋಂದಾಯಿಸಿಕೊಂಡ ಕುದುರೆಯ ಚಿತ್ರವನ್ನು ಕಾಣಬಹುದು. ಕುದುರೆ ಮಾಲೀಕನೊಬ್ಬ ಮೂರು ಕುದುರೆಗಳನ್ನಿಟ್ಟುಕೊಂಡಿದ್ದರೆ ಮೂರು ಕುದುರೆಗಳ ಚಿತ್ರವೂ ಕೂಡ ಆತನ ಪರವಾನಗಿಯ ಮೇಲಿರುತ್ತದೆ.
''ಇದು ನಮ್ಮ ಕುಟುಂಬದ ಬ್ಯುಸಿನೆಸ್. ರಾಜ, ಜೈಪಾಲ್ ಮತ್ತು ಚೇತಕ್ ಗಳ ಅಸಲಿ ಮಾಲೀಕ ನಮ್ಮಣ್ಣ. ಆತ ಮಥೇರನ್ ನಲ್ಲಿ ನೆಲೆಸಿದ್ದಾನೆ'', ಅನ್ನುತ್ತಿದ್ದಾನೆ ಕೋಕರೆ.
20 ರ ಹರೆಯದ ಕೋಕರೆ ಪ್ರವಾಸಿಗರಿಗೆ ಕುದುರೆ ಸವಾರಿಯನ್ನು ಮಾಡಿಸುವ ಹೆಸರಿನಲ್ಲಿ ನೇರಲ್ ನಲ್ಲಿರುವ ಧಂಗರವಾಡಾದಿಂದ ದಸ್ತೂರಿ ಪಾರ್ಕಿಂಗ್ ಸ್ಥಳದವರೆಗೆ ಸ್ವತಃ ಪ್ರತಿನಿತ್ಯವೂ ಸಂಚರಿಸುತ್ತಾನೆ. ಕಳೆದ ಸುಮಾರು ಐದು ವರ್ಷಗಳಿಂದ ಆತ ಇದರಲ್ಲಿ ತೊಡಗಿಸಿಕೊಂಡಿದ್ದಾನಂತೆ. ಪ್ರವಾಸಿಗರ ಸಂಖ್ಯೆಗನುಗುಣವಾಗಿ ಒಬ್ಬರನ್ನು ಅಥವಾ ಎಲ್ಲರನ್ನೂ ಕೂಡ ಈ ಕುದುರೆಗಳ ಮೇಲೆ ಕುಳ್ಳಿರಿಸಿ ಬೆಟ್ಟದ ಇಳಿಜಾರಿನಲ್ಲಿ ಮೇಲಕ್ಕೂ ಕೆಳಕ್ಕೂ ಕರೆದೊಯ್ಯುತ್ತಾನೆ ಕೋಕರೆ. ಕೆಲವೊಮ್ಮೆ ಈತ ಪ್ರವಾಸಿಗರನ್ನು ಕುದುರೆಗಳ ಮೇಲೆ ಕುಳ್ಳಿರಿಸಿ ವಿವಿಧ ಪ್ರದೇಶಗಳನ್ನು ತೋರಿಸಲು ಕುದುರೆಯೊಂದಿಗೆ ಬೆಟ್ಟದೆಡೆಗೆ ಏರುಮುಖವಾಗಿ ಓಡುವುದೂ ಇದೆಯಂತೆ. ಹೀಗೆ ಬೆಟ್ಟದ ತುದಿಯನ್ನು ತಲುಪುವ ಕೋಕರೆ ತನ್ನ ಇಡೀ ದಿನವನ್ನು ಆ ಧೂಳು ತುಂಬಿದ ಪರಿಸರದಲ್ಲೇ ಕಳೆಯುತ್ತಾನೆ. ಇನ್ನು ಧೂಳನ್ನೇ ತುಂಬಿಕೊಂಡಿರುವ ಇಲ್ಲಿಯ ಮಣ್ಣು ಮಳೆಗಾಲದ ಸಂದರ್ಭಗಳಲ್ಲಿ ಕೆಸರು ಕೆಸರಾಗಿಬಿಟ್ಟಿರುತ್ತದೆ.
ಪೀಕ್ ಸೀಸನ್ನಿನ ಮತ್ತು ವಾರಾಂತ್ಯದ ದಿನಗಳಲ್ಲಿ ಕೋಕರೆ ಕಮ್ಮಿಯೆಂದರೂ ದಿನವೊಂದಕ್ಕೆ 3-4 ಕುದುರೆ ಪ್ರಯಾಣಗಳನ್ನು ಮಾಡಿಸುತ್ತಾನೆ. ವಾರದ ಇತರ ದಿನಗಳಲ್ಲಿ ಪ್ರಯಾಣದ ಸಂಖ್ಯೆಗಳು ಸಹಜವಾಗಿಯೇ ಕಮ್ಮಿಯಿರುತ್ತವೆ. ದರಗಳ ಬಗ್ಗೆ ಹೇಳುವುದಾದರೆ ದಸ್ತೂರಿಯಲ್ಲಿ ದರಗಳ ಚಾರ್ಟ್ ಒಂದನ್ನು ನಿಗದಿಪಡಿಸಲಾಗಿದೆ. ಪ್ರಯಾಣದ ದೂರ, ದೂರವನ್ನು ಸಾಗಲು ತಗಲುವ ಸಮಯ ಮತ್ತು ನಿಲ್ದಾಣಗಳ ಸಂಖ್ಯೆಗನುಗುಣವಾಗಿ ದರಗಳು ಬದಲಾಗುತ್ತವೆ. ಒಂದೊಳ್ಳೆಯ ದಿನದಲ್ಲಿ ಕುದುರೆಯೊಂದು 1500 ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ತನ್ನ ಮಾಲೀಕನಿಗೆ ದಕ್ಕಿಸಿಕೊಡಬಲ್ಲದು. ಈ ಮೊತ್ತವು ನಂತರ ಮಾಲೀಕನ, ಕೀಪರ್ ಗಳ ಮತ್ತು ಕುದುರೆಯ ನಿರ್ವಹಣೆಗೆ ಬೇಕಾದ ಖರ್ಚುಗಳ ಮಧ್ಯದಲ್ಲಿ ಹಂಚಿಹೋಗುತ್ತದೆ.
46 ರ ಪ್ರಾಯದ ಮನೋಜ್ ಕಸುಂಡೆ ಬರೋಬ್ಬರಿ 30 ವರ್ಷಗಳ ಕಾಲ ಕುದುರೆಗಳೊಂದಿಗೆ ಕಾಲಕಳೆದಿದ್ದಾರೆ. ಬಿಳಿಯ ಬಣ್ಣದ 'ಸ್ನೋ ಬಾಯ್' ಮತ್ತು ಕಂದು ಬಣ್ಣದ 'ಫ್ಲಫಿ' ಹೆಸರಿನ ಎರಡು ಕುದುರೆಗಳ ಒಡೆಯ ಈ ಕಸುಂಡೆ. ''ಸಂಪೂರ್ಣವಾಗಿ ಬಿಳಿ ಅಥವಾ ಕಪ್ಪು ಬಣ್ಣದಲ್ಲಿರುವ ಕುದುರೆಗಳು ನಿಜಕ್ಕೂ ದುಬಾರಿ. ಅವುಗಳು 1-1.2 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುತ್ತವೆ'', ಎನ್ನುತ್ತಿದ್ದಾರೆ ಈತ. ಕಸುಂಡೆ ಈ ಎರಡೂ ಕುದುರೆಗಳಿಂದ ತಲಾ 1000 ದಷ್ಟು ದಿನವೊಂದಕ್ಕೆ ಸಂಪಾದಿಸುತ್ತಾರೆ. ಆದರೆ ಸ್ನೋ ಬಾಯ್ ಅಥವಾ ಫ್ಲಫಿ ಯಾವಾಗಲಾದರೂ ಖಾಯಿಲೆ ಬಿದ್ದರೆ ಚಿಕಿತ್ಸೆಗಾಗಿ 5000-15000 ರಷ್ಟು ಖರ್ಚಂತೂ ಇವರು ಮಾಡಲೇಬೇಕು. ಇನ್ನು ಈ ಎರಡೂ ಕುದುರೆಗಳ ನಿರ್ವಹಣಾ ವೆಚ್ಚವು ತಿಂಗಳಿಗೆ 12000 ರೂಪಾಯಿಗಳಿಂದ 15000 ರೂಪಾಯಿಗಳಷ್ಟಾಗುತ್ತದೆ.
ತನ್ನ ಹೆತ್ತವರು, ಪತ್ನಿ ಮನೀಷಾ, ಮಗ ಮತ್ತು ಮಗಳೊಂದಿಗೆ ನೆಲೆಸಿರುವ ಮನೋಜ್ ಕಸುಂಡೆ ಮಥೇರನ್ನಿನ ಪಂಚವಟಿ ನಗರದ ನಿವಾಸಿ. ಸುಮಾರು 40-50 ಮನೆಗಳನ್ನು ಹೊಂದಿರುವ ಬಸ್ತಿಯಂತಹ ಪ್ರದೇಶವಿದು. 21 ರ ಹರೆಯದ ಕಸುಂಡೆಯವರ ಮಗಳು ಇತ್ತೀಚೆಗಷ್ಟೇ ವಿದ್ಯಾಭ್ಯಾಸವನ್ನು ಮುಗಿಸಿದ್ದರೆ, 19 ರ ಹರೆಯದ ಮಗ ದ್ವಿತೀಯ ಪಿಯುಸಿ ಓದುತ್ತಾನೆ. ಹಾಗೆ ನೋಡಿದರೆ ಕಸುಂಡೆಯವರ ದಿನವು ಬೇಗನೇ ಶುರುವಾಗುತ್ತದೆ. ಹುಲ್ಲು, ಬಾಜ್ರಾ ರೊಟ್ಟಿ ಅಥವಾ ಗೋಧಿಯ ನಾರನ್ನು ತಿನ್ನಿಸಿ ಮುಂಜಾನೆ ಏಳರ ಜಾವಕ್ಕೇ ಸ್ನೋ ಬಾಯ್ ಮತ್ತು ಫ್ಲಫಿ ಇಬ್ಬರನ್ನೂ ಕರೆದುಕೊಂಡು ಮುಖ್ಯ ಮಾರುಕಟ್ಟೆಗೆ ಬಂದಿರುತ್ತಾರೆ ಕಸುಂಡೆ. ಸಂಜೆಯ ಏಳರ ಹೊತ್ತಿಗೆ ಕುದುರೆಗಳನ್ನು ಮರಳಿ ಲಾಯಕ್ಕೆ ಕರೆದೊಯ್ಯಲಾಗುತ್ತದೆ. ''ಕುದುರೆಗಳು ಸಂಜೆಯ ಹೊತ್ತಿನಲ್ಲಿ ರೊಟ್ಟಿಯನ್ನೋ, ಬಿಸ್ಕತ್ತುಗಳನ್ನೋ, ಕ್ಯಾರೆಟ್ಟುಗಳನ್ನೋ ತಿಂದು ಮಲಗುತ್ತವೆ'', ಎನ್ನುತ್ತಾರೆ ಕಸುಂಡೆ.
ಅಕ್ಕಪಕ್ಕದ ಬೆಟ್ಟದ ಪ್ರದೇಶಗಳಿಂದ ತಂದ ಹುಲ್ಲನ್ನೂ ಒಳಗೊಂಡಂತೆ ಇತರೆ ಆಹಾರವಸ್ತುಗಳನ್ನು ಆದಿವಾಸಿಗಳು ಮಥೇರನ್ನಿನ ರವಿವಾರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟರೆ, ಕುದುರೆಗಳ ನಿರ್ವಹಣೆಗೆ ಬೇಕಾಗಿರುವ ಸಾಮಾನುಗಳನ್ನು ಕೀಪರ್ ಗಳು ಬಂದು ಖರೀದಿಸಿ ಹೋಗುತ್ತಾರೆ. ನೇರಲ್ ನಲ್ಲಿರುವ ವ್ಯಾಪಾರಿಗಳೂ ಕೂಡ ಕುದುರೆಗಳಿಗೆ ಬೇಕಾದ ಆಹಾರವನ್ನು ಈಗೀಗ ಮಾರಾಟ ಮಾಡತೊಡಗಿದ್ದಾರೆ.
''ಸುಮಾರು 15 ವರ್ಷಗಳ ಹಿಂದೆ ಮಥೇರನ್ ಬಹಳ ಸುಂದರವಾಗಿತ್ತು. ಆ ದಿನಗಳಲ್ಲಿ ಕುದುರೆಗಳು ಕೇವಲ 100 ರೂಪಾಯಿಗಳನ್ನು ನಮಗೆ ಸಂಪಾದಿಸಿಕೊಡುತ್ತಿದ್ದರೂ ಆ ದಿನಗಳು ಚೆನ್ನಾಗಿದ್ದವು'', ಎನ್ನುತ್ತಾರೆ ಕಸುಂಡೆ.
ಮಥೇರನ್ನಿನ ಹೋಟೇಲುಗಳಲ್ಲಿ ಚೆಕ್-ಔಟ್ ನಡೆಯುವುದು ಮುಂಜಾನೆಯ 9 ರಿಂದ ಮಧ್ಯಾಹ್ನದ ನಡುವಿನ ಅವಧಿಯಲ್ಲಿ. ಇದೂ ಕೂಡ ಕುದುರೆಗಳನ್ನು ನೋಡಿಕೊಳ್ಳುವ ಕೀಪರ್ ಗಳ, ಸಾಮಾನುಗಳನ್ನು ತಲೆಯ ಮೇಲೆ ಹೊತ್ತೊಯ್ಯುವ ಪೋರ್ಟರುಗಳ ಮತ್ತು ರಿಕ್ಷಾ ಎಳೆಯುವವರ ಕೆಲಸದ ಅವಧಿಯ ಮೇಲೆ ಪರಿಣಾಮ ಬೀರುವ ಅಂಶಗಳಲ್ಲೊಂದು. ಚೆಕ್-ಔಟ್ ಅವಧಿಯು ಶುರುವಾಗುವ ಮುನ್ನವೇ ಹೋಟೇಲುಗಳ ಮುಖ್ಯದ್ವಾರಗಳ ಬಳಿಯಲ್ಲಿ ದಸ್ತೂರಿಗೆ ಮರಳುತ್ತಿರುವ ಗ್ರಾಹಕರನ್ನು ಇವರುಗಳು ಕಾಯುತ್ತಿರುವ ದೃಶ್ಯವು ಇಲ್ಲಿ ಸರ್ವೇಸಾಮಾನ್ಯ
ಪುಣೆ ಜಿಲ್ಲೆಯ ಕಾಲಕರಾಯಿ ಹಳ್ಳಿಯ ಮೂಲದವರಾಗಿರುವ 38 ರ ಪ್ರಾಯದ ಕೀಪರ್ ಶಾಂತಾರಾಮ್ ಕಾವ್ಲೆ ಮತ್ತು ಆತನ ಕುದುರೆಯಾದ ರಾಜ ಹೀಗೆ ಕಾಯುತ್ತಿರುವ ಹಲವರಲ್ಲೊಬ್ಬರು. ಕಾವ್ಲೆ ಮುಂಜಾನೆಯ 3:30 ಕ್ಕೆ ಎದ್ದು ರಾಜನಿಗೆ ಬೆಳಗ್ಗಿನ ಆಹಾರವನ್ನು ತಿನ್ನಿಸುತ್ತಾನೆ. ಬೇಗನೇ ಹೋಗಬೇಕಾಗಿರುವ ಬುಕ್ಕಿಂಗ್ ಗಳೇನಾದರೂ ಇದ್ದರೆ ಆತ ಮುಂಜಾನೆಯ 5 ರ ಹೊತ್ತಿಗೇ ಹೋಟೇಲ್ ತಲುಪಿರುತ್ತಾನೆ. ಅಂಥದ್ದೇನೂ ಇಲ್ಲದಿದ್ದರೆ ಶಾಂತಾರಾಮ್ ಮತ್ತು ರಾಜ ಮುಂಜಾನೆಯ 7 ರಷ್ಟಿನ ಹೊತ್ತಿಗೆ ಮಾರುಕಟ್ಟೆಗೆ ಬರುತ್ತಾರೆ. ಅಲ್ಲಿಂದ ಇವರಿಬ್ಬರದ್ದು ಬರೋಬ್ಬರಿ 12 ತಾಸುಗಳ ಕೆಲಸ. ''ಮನೆಯಲ್ಲಿ ಆಲಸಿಗಳಂತೆ ಕುಳಿತುಕೊಂಡೇ ಹಣವನ್ನು ಗಳಿಸುವುದು ಯಾರಿಗೂ ಸಾಧ್ಯವಿಲ್ಲ. ಮನೆಯಿಂದ ಹೊರಬಿದ್ದರೆ ವ್ಯಾಪಾರ ಕೂಡ ನಡೆಯುತ್ತದೆ'', ಎಂದು ಹೇಳಿದ ಶಾಂತಾರಾಮ್ ಕಾವ್ಲೆ.