ಇಲ್ಲಿರುವ ಎಂಟು ಹಾಡುಗಳಲ್ಲಿ, ಬೀಡ್ ಜಿಲ್ಲೆಯ ಮಜಲ್‌ಗಾಂವ್‌ನ ಮೂವರು ಗಾಯಕಿಯರು ಮಧ್ಯಪ್ರದೇಶದ ಮೋವ್‌ನಲ್ಲಿ  ಭೀಮರಾವ್ ಅವರ ಜನನವಾದ ಸಂದರ್ಭವನ್ನು ಹೊಗಳಿ ಹಾಡಿದ್ದಾರೆ. ತಮ್ಮ ಹಾಡುಗಳ ಮೂಲಕ ಅಂಬೇಡ್ಕರ್‌ ಅವರಿಗೆ ಕೃತಜ್ಞತೆ ಸಲ್ಲಿಸುವುದರೊಡನೆ ಬೌದ್ಧಧರ್ಮವು ಅವರಿಗೆ ನೀಡಿರುವ ಹೊಸ ಗುರುತಿನ ಕುರಿತಾಗಿಯೂ ಹಾಡಿದ್ದಾರೆ. ಏಪ್ರಿಲ್ 14ರ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಸಲುವಾಗಿ, ʼಪರಿಯ ಗ್ರಿಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್‌ʼ ಅಡಿಯಲ್ಲಿ ಈ ತಿಂಗಳು ಪೂರ್ತಿ ಡಾ. ಅಂಬೇಡ್ಕರ್ ಮತ್ತು ಜಾತಿ ಸಮಸ್ಯೆಗಳ ಕುರಿತ ದ್ವಿಪದಿಗಳನ್ನು ಹಂಚಿಕೊಳ್ಳಲಾಗುತ್ತದೆ.

ಗ್ರೈಂಡ್‌ ಮಿಲ್‌ ಸಾಂಗ್‌ ಪ್ರಾಜೆಕ್ಟ್‌ನ ಈ ಆವೃತ್ತಿಯಲ್ಲಿನ ಎಂಟು ಚರಣಗಳನ್ನು ಮೂವರು ಹಾಡುಗಾರ್ತಿಯರಾದ ರಂಗುಬಾಯಿ ಪೋತ್ಬಾರೆ, ವಲ್ಹಾಬಾಯಿ ತಾಕಂಖರ್ ಮತ್ತು ರಾಧಾ ಬೋರ್ಡೆ ಅವರಿಂದ ಸಂಗ್ರಹಿಸಲಾಗಿದೆ. ಈ ಮೂವರು ಬೀಡ್‌ ಜಿಲ್ಲೆಯ ಮಜಲಗಾಂವ್ ನ ತಾಲೂಕು ಗ್ರಾಮವಾದ ಭೀಮ್‌ ನಗರದ ನಿವಾಸಿಗಳು.

ಮಜಲ್‌ಗಾಂವ್‌ ಒಂದು ತಾಲೂಕು ಗ್ರಾಮವಾಗಿದ್ದು ಭೀಮ್‌ ನಗರ ಅಲ್ಲಿನ ಪ್ರಧಾನವಾಗಿ ದಲಿತ ಜನಸಂಖ್ಯೆಯನ್ನು ಹೊಂದಿರುವ ಕಾಲೊನಿಯಾಗಿದೆ. ಈ ಕಾಲೊನಿಯು ನಮ್ಮ ʼಗ್ರೈಂಡ್‌ಮಿಲ್‌ ಸಾಂಗ್ಸ್‌ ಪ್ರಾಜೆಕ್ಟ್‌ʼಗೆ ಮೊಗೆದಷ್ಟೂ ಉಕ್ಕುವ ಚಿಲುಮೆಯಂತೆ ಒದಗಿ ಬಂದಿದೆ. ದೀನ-ದಲಿತರ ಬದುಕಿಗೆ ದಾರಿದೀಪವಾಗುವಂತಹ ಕೆಲಸಗಳನ್ನು ಮಾಡಿದ ರಾಜತಾಂತ್ರಿಕ, ರಾಷ್ಟ್ರೀಯ ನಾಯಕ, ತುಳಿತಕ್ಕೊಳಗಾದವರ ಮತ್ತು ಅಂಚಿನಲ್ಲಿರುವ ಜನರ ಧ್ವನಿ, ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ಬಹಳಷ್ಟು ಹಾಡುಗಳು ಇಲ್ಲಿಯೇ ದೊರೆತವು.

ಇಲ್ಲಿರುವ ಎಂಟು ಓವಿಗಳಲ್ಲಿ (ಬೀಸುಕಲ್ಲಿನ ಪದ), ಮೊದಲನೆಯ ಓವಿಯಲ್ಲಿ ರಂಗೂಬಾಯಿ ಮೋವ್‌ನಲ್ಲಿ ಮಗು ಹುಟ್ಟಿದ ದಿನದಂದು ಅಲ್ಲಿ ನೆಲೆಸಿದ್ದ ಸಂಭ್ರಮ ಮತ್ತು ಉತ್ಸಾಹದ ಕುರಿತು ಹಾಡಿದ್ದಾರೆ. ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮೋವ್ ಎಂಬ ನಗರದಲ್ಲಿ 1891ರ ಎಪ್ರಿಲ್ 14ರಂದು ಜನಿಸಿದರು. ಕಂಟೋನ್ಮೆಂಟ್‌ ನಗರವಾಗಿದ್ದ ಇದನ್ನು 2003ರಲ್ಲಿ ಇದನ್ನು ಅಧಿಕೃತವಾಗಿ ಡಾ. ಅಂಬೇಡ್ಕರ್ ನಗರ ಎಂದು ಕರೆಯಲಾಯಿತು. ರಾಮಜೀಯವರಿಗೆ ಮಗನೊಬ್ಬ ಹುಟ್ಟಿದ ಸುದ್ದಿಯ ಸಂಭ್ರಮ ನಗರದೆಲ್ಲೆಡೆ ಹರಡಿತ್ತೆಂದು ಈ ಪದ್ಯ ತಿಳಿಸುತ್ತದೆ.

PHOTO • Véronique Bacci

ಎರಡನೆಯ ಪದ್ಯದಲ್ಲಿ ಮಗುವಿನ ನಾಮಕರಣದ ಸಂಭ್ರಮ ಇನ್ನೇನು ಬರಲಿದೆಯೆಂದು ರಾಧಾಬಾಯಿ ಬೋರ್ಡೆ ಹಾಡುತ್ತಿದ್ದಾರೆ. ಮಗನಿಗೆ ಭೀಮರಾಜ್ ಎಂದು ಹೆಸರಿಸಬೇಕು ಎಂದು ರಾಮ್‌ಜಿಯ ಸಹೋದರಿ ಮೀರಾಬಾಯಿ ಹೇಳುತ್ತಾರೆ. (ಮಹಾರಾಷ್ಟ್ರದಲ್ಲಿ ಅಲ್ಲಿನ ಸಂಪ್ರದಾಯದಂತೆ ಮಗುವಿನ ತಂದೆಯ ಸಹೋದರಿ ಮಗುವಿಗೆ ಹೆಸರಿಡುವ ಹಕ್ಕನ್ನು ಹೊಂದಿರುತ್ತಾಳೆ)

ಮೂರನೆಯ ಚರಣದಲ್ಲಿ ಹಾಡುಗಾರ್ತಿಯು ಎಲ್ಲರಿಗೂ ಬೆಳಿಗ್ಗೆ ಎದ್ದೊಡನೆಯೇ ‘ಭೀಮ, ಭೀಮ’ ಎಂದು ಸ್ಮರಿಸುವಂತೆ ಹೇಳುತ್ತಾರೆ. ಭೀಮನ ನಾಮಸ್ಮರಣೆಯ ನಂತರವೇ ಭೂಮಿಗೆ ಪಾದವನ್ನು ಸೋಕಿಸಬೇಕು ಎಂದು ಹೇಳುವ ಮೂಲಕ ಬಾಬಾಸಾಹೇಬ್ ತಮಗೆಲ್ಲರಿಗೂ ಪ್ರಾತಃಸ್ಮರಣೀಯರು ಎಂಬುದನ್ನು ಸೂಚಿಸುತ್ತಾರೆ. ನಾಲ್ಕನೆಯ ಚರಣದಲ್ಲಿ ಮುಂಜಾನೆದ್ದು ಹೆಜ್ಜೆಯಿಡುವ ಮೊದಲು ಭೀಮನನ್ನು ನೆನೆದ ನಂತರವಷ್ಟೇ ತನಗೆ ದಿನದ ಕೆಲಸಗಳ ನೆನಪಾಗುವುದು ಎಂದು ಎಲ್ಲರಿಗೂ ಹೇಳುತ್ತಾರೆ.

ವಲ್ಹಾಬಾಯಿ ತಕಂಕರ್‌ ಮತ್ತು ರಾಧಾಬಾಯಿ ಬೋರ್ಡೆ ಮುಂದಿನ ನಾಲ್ಕು ದ್ವಿಪದಿಗಳನ್ನು ಯುಗಳ ಕಂಠದಲ್ಲಿ ಹಾಡಿದ್ದಾರೆ. ಮೂರು ದ್ವಿಪದಿಗಳಲ್ಲಿ ತಮ್ಮ ಮನೆಯ ಮುಂದೆ ನೀರಿನ ಬದಲು ಹಾಲು ಚಿಮುಕಿಸುತ್ತೇವೆಯೆಂದು ಹೇಳುತ್ತಾರೆ. ಮುಂದಿನ ಚರಣಗಳಲ್ಲಿ ಅವರು ಹಾಡುತ್ತಿರುವ ಮನೆ ಗೌತಮಬುದ್ಧನ ನಿವಾಸವೆಂದೂ ತಮ್ಮಲ್ಲಿ ಒಬ್ಬರು ಬುದ್ಧನ ಮಗಳೆಂದೂ ಇನ್ನೊಬ್ಬರು ಅವನ ಅಕ್ಕನ ಮಗಳೆಂದೂ ಬುದ್ಧನೊಡನೆ ತಮಗೆ ಸಂಬಂಧವನ್ನು ಕಲ್ಪಿಸಿಕೊಂಡು ಸಂಭ್ರಮಿಸುತ್ತಾರೆ.

ಎಂಟನೇ ದ್ವಿಪದಿಯಲ್ಲಿ ಪುನಃ ಡಾ. ಅಂಬೇಡ್ಕರ್‌ ಅವರ ಜನನದ ಕುರಿತು ತಿಳಿಸುತ್ತದೆ. ಈ ಪದ್ಯದಲ್ಲಿ ಭೀಮನು ಅವನ ತಾಯಿಯ (ಭೀಮಾಬಾಯಿ)ಮಗನು, ಮತ್ತು ನಾವು ಈ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತೇವೆ ಎಂದು ಹಾಡಿದ್ದಾರೆ.

ಟಿಪ್ಪಣಿ: ಅನೇಕ ದಲಿತ ಸಮುದಾಯಗಳು ತಮ್ಮನ್ನು ನವ ಬೌದ್ಧರೆಂದು ಗುರುತಿಸಿಕೊಳ್ಳುತ್ತಾರೆ. ಇಲ್ಲಿ ಬುದ್ಧನ ಉಲ್ಲೇಖವು ಜಾತಿ ವ್ಯವಸ್ಥೆಯನ್ನು ಅವರು ತಿರಸ್ಕರಿಸಿರುವುದನ್ನು ಸೂಚಿಸುತ್ತದೆ. ಇಲ್ಲಿ ಹಾಡುಗಾರರು ಬುದ್ಧನನ್ನು  ಪೂಜಿಸುವುದರೊಂದಿಗೆ ತಾವು ಅವನ ಕುಟುಂಬದ ಒಂದು ಭಾಗವೆಂದು ಭಾವಿಸುತ್ತಾರೆ. 5 ರಿಂದ 7ನೇ ದ್ವಿಪದಿಯವರೆಗೆ ಅವರ ಮನೆ ಮತ್ತು ಅಂಗಳವನ್ನು ‘ಅಸ್ಪೃಶ್ಯರ’ ಮನೆ ಎಂದು ಕರೆಯಬಾರದು ಬದಲಿಗೆ ಗೌತಮ ಬುದ್ಧನ ಮಹಲು ಎಂದು ಕರೆಯಬೇಕು ಎನ್ನುತ್ತವೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಯ ಮುಂದಿನ ಅಂಗಳದಲ್ಲಿ ಬೆಳಗಿನ ಹೊತ್ತು ಕಸ ಗುಡಿಸಿ ನೀರು ಚಿಮುಕಿಸಲಾಗುತ್ತದೆ. ಈ ಹಾಡಿನಲ್ಲಿ ಅಂಗಳದಲ್ಲಿ ಹಾಲನ್ನು ಚಿಮುಕಿಸುವುದು ಶುದ್ಧೀಕರಣವನ್ನು ಸೂಚಿಸುತ್ತದೆ, ಇದು ದಲಿತರ ವಿರುದ್ಧದ ಜಾತಿ-ಪ್ರೇರಿತ ತಾರತಮ್ಯದ ದಬ್ಬಾಳಿಕೆ ಮತ್ತು ‘ಅಶುದ್ಧತೆ’ಯ ಸಾಂಕೇತಿಕ ಅಳಿಸುವಿಕೆಯಾಗಿದೆ.

ಮೋವ್ ಎಂಬ ನಗರದಲ್ಲಿ
ಅರೆ! ಏನಿದು ಸಂಚಲನ?
ಅರೆ! ಏನಿದು ರೋಮಾಂಚನ!
ನಮ್ಮ ರಾಮಜೀಗೆ ಕಂದ ಹುಟ್ಟಿದ ಕ್ಷಣ

ಅಕ್ಕತಂಗಿಯರೆಲ್ಲ ಬೇಗ ಇಲ್ಲಿಗೆ ಬನ್ನಿರೆ
ಹೆಸರಿಡುವ ದಿನವಿಂದು ಮುದ್ದು ಮಗುವಿಗೆ
ಮೀರಾತಾಯಿ ಮಗುವಿಗೆ ಹೆಸರನಿಟ್ಟಳೆ
"ಭೀಮರಾಜ" ಎಂದು ಹೆಸರನಿಟ್ಟಳೆ

ಅಕ್ಕತಂಗಿಯರೆಲ್ಲ ಇಲ್ಲಿ ಕೇಳಿರೆ
ಎದ್ದ ಮಗ್ಗುಲಲ್ಲಿ ಭೀಮನ ನೆನೆಯಿರೆ
ಭೂಮಿಯ ಮೇಲೆ ಕಾಲು ಇಡುವ ಮುನ್ನ
‘ಭೀಮ್, ಭೀಮ್’ ಎಂಬ ಹೆಸರ ಹೇಳಿರೆ

ಅಕ್ಕತಂಗಿಯರೆಲ್ಲ ಇಲ್ಲಿ ಕೇಳಿರೆ
ನಾನೆದ್ದ ಮಗ್ಗುಲಲ್ಲಿ ‘ಭೀಮ್’ ಎನ್ನುವೆ
ಮುಂಜಾನೆಯ ನಡಿಗೆಯಲ್ಲೂ ‘ಭೀಮ್’ ಎನ್ನುವೆ
ಮುಂದಿನ ದಿನದ ಕೆಲಸ ಯೋಚಿಸುವೆ

ಅಕ್ಕತಂಗಿಯರೆಲ್ಲ  ಇಲ್ಲಿ ಕೇಳಿರೆ
ಮುಂಜಾನೆ ಅಂಗಳಕೆ ಹಾಲು ಚಿಮುಕಿಸುವೆ
ಬುದ್ಧದೇವನ ಮಹಲಿನ ಅಂಗಳಕೆ
ನಾನೆದ್ದ ಗಳಿಗೆಯಲ್ಲಿ ಹಾಲು ಚಿಮುಕಿಸುವೆ

ಅಕ್ಕತಂಗಿಯರೆಲ್ಲ ಇಲ್ಲಿ ಕೇಳಿರೆ
ನಸುಕಿನಲ್ಲಿ ಎದ್ದು ನಾನು ಹಾಲು ಚಿಮುಕಿಸುವೆ
ಬುದ್ಧನ ಮನೆಯ ಅಂಗಳಕೆ ಹಾಲು ಚಿಮುಕಿಸುವೆ
ನಾ ಬುದ್ಧನ ಸೋದರಿ ಎಂದು ತಿಳಿಯಿರೆ

ಅಕ್ಕ ತಂಗಿಯರೆಲ್ಲ ಇಲ್ಲಿ ಕೇಳಿರೆ
ನಾ ಹಾಲು ಚಿಮುಕಿಸುವ ಚಂದವ ನೋಡಿರೇ
ನಾ ಹಾಲು ಚಿಮುಕಿಸುವ ಚಂದವ ಹಾಡಿರೆ
ಬುದ್ಧನ ಸೋದರ ಸೊಸೆ ನಾನೆಂದು ಕಾಣಿರೆ

ಅಕ್ಕತಂಗಿಯರೆಲ್ಲ  ಇಲ್ಲಿ ಕೇಳಿರೆ
‘ಭೀಮ್,  ಭೀಮ್’ ಎಂದು ನೀವು ಹಾಡಿರೆ
ಬಿಡುಗಡೆಯ ತಂದ ನಮಗೆ ಭೀಮರಾಯ
ಅಮ್ಮನ ಮುದ್ದಿನ ಕಂದ ಭೀಮ  ಕಾಣಿರೆ

ಗಾಯನ ಮತ್ತು ಪ್ರದರ್ಶನ: ರಂಗು ಪೋತ್ಭಾರೆ, ವಾಲ್ಹಾ ತಕಂಖರ್, ರಾಧಾ ಬೋರ್ಡೆ

PHOTO • Samyukta Shastri

ಫೋಟೋ: ಸಂಯುಕ್ತಾ ಶಾಸ್ತ್ರಿ

ಗ್ರಾಮ: ಮಜಲ್‌ಗಾಂವ್

ಊರು: ಭೀಮ್ ನಗರ

ತಾಲ್ಲೂಕು: ಮಜಲ್‌ಗಾಂವ್

ಜಿಲ್ಲೆ: ಬೀಡ್

ಜಾತಿ: ನವ ಬೌದ್ಧ

ದಿನಾಂಕ: ಏಪ್ರಿಲ್ 2, 1996 ರಂದು ರೆಕಾರ್ಡ್ ಮಾಡಲಾಗಿದೆ. ನಾವು ಏಪ್ರಿಲ್ 2, 2017ರಂದು ಮಜಲ್‌ಗಾಂವ್‌ಗೆ ಮರು ಭೇಟಿ ನೀಡಿ ಗಾಯಕರನ್ನು ಭೇಟಿ ಮಾಡಿದ್ದೆವು.

ಫೋಟೋಗಳು: ವೆರೊನಿಕ್ ಬಾಕಿ ಮತ್ತು ಸಂಯುಕ್ತಾ ಶಾಸ್ತ್ರಿ

ಪೋಸ್ಟರ್: ಶ್ರೇಯಾ ಕಾತ್ಯಾಯಿನಿ


ಓವಿ ಅನುವಾದಕರು: ಸುಧಾ ಅಡುಕಳ

ಅನುವಾದ: ಶಂಕರ ಎನ್. ಕೆಂಚನೂರು

নমিতা ওয়াইকার লেখক, অনুবাদক এবং পিপলস আর্কাইভ অফ রুরাল ইন্ডিয়া, পারির নির্বাহী সম্পাদক। ২০১৮ সালে তাঁর ‘দ্য লং মার্চ’ উপন্যাসটি প্রকাশিত হয়েছে।

Other stories by নমিতা ওয়াইকার
PARI GSP Team

পারি গ্রাইন্ডমিল সংগস্ প্রজেক্ট টিম: আশা ওগালে (অনুবাদ); বার্নার্ড বেল (ডিজিটাইজেশন, ডেটাবেস নির্মাণ, রূপায়ণ এবং রক্ষণাবেক্ষণ); জিতেন্দ্র মেইদ (প্রতিলিপি এবং অনুবাদ সহায়ক); নমিতা ওয়াইকার (প্রকল্প প্রধান এবং কিউরেশন); রজনী খলাদকর (ডেটা এন্ট্রি)

Other stories by PARI GSP Team
Photographs : Samyukta Shastri

সময়ুক্তা শাস্ত্রী পারির পরিচালনার দ্বায়িত্বে থাকা কাউন্টার মিডিয়া ট্রাস্টের অছি সদস্য হওয়ার পাশাপাশি একজন স্বতন্ত্র সাংবাদিক, ডিজাইনার ও কর্মদ্যোগী। ২০১৯ সালের জুন মাস অবধি তিনি পারির কন্টেন্ট কোওর্ডিনেটর ছিলেন।

Other stories by সমযুক্তা শাস্ত্রী
Editor and Series Editor : Sharmila Joshi

শর্মিলা জোশী পিপলস আর্কাইভ অফ রুরাল ইন্ডিয়ার (পারি) পূর্বতন প্রধান সম্পাদক। তিনি লেখালিখি, গবেষণা এবং শিক্ষকতার সঙ্গে যুক্ত।

Other stories by শর্মিলা জোশী
Translator : Sudha Adukala

Sudha Adukala is from Uttarakannada district’s Honnavara taluk of Karnataka. She works as a mathematics lecturer at Udupi. Writing stories, poems, plays and translating poetry and stories are some of her hobbies.

Other stories by Sudha Adukala
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru