ನಾನು ನರ್ಮದಾ ಜಿಲ್ಲೆಯ ಮಹುಪಾದ ಗ್ರಾಮದಲ್ಲಿ ಭಿಲ್ಸ್‌ನ ವಾಸವ ವಂಶದಲ್ಲಿ ಹುಟ್ಟಿದೆ. ಮಹಾರಾಷ್ಟ್ರದ (ಆಗಿನ ಬಾಂಬೆ ಪ್ರಾಂತ್ಯದ ಭಾಗ) ಗಡಿಯಲ್ಲಿರುವ 21 ಹಳ್ಳಿಗಳಲ್ಲಿ ನನ್ನ ಹಳ್ಳಿಯೂ ಒಂದಾಗಿತ್ತು. ಮಹಾಗುಜರಾತ್ ಚಳವಳಿಯ ನಂತರ (1956-1960) ಗುಜರಾತ್ ಭಾಷೆಯ ಆಧಾರದ ಮೇಲೆ ಪ್ರತ್ಯೇಕ ರಾಜ್ಯವಾಗಿ ಸ್ಥಾಪನೆಯಾದಾಗ, ನಮ್ಮ ಈ ಗ್ರಾಮವು ಗುಜರಾತ್‌ಗೆ ಸೇರಿತು. ಹೀಗಾಗಿ, ನನ್ನ ಹೆತ್ತವರು ಮರಾಠಿ ತಿಳಿದಿದ್ದರು ಮತ್ತು ಮಾತನಾಡುತ್ತಿದ್ದರು. ತಾಪಿ ಮತ್ತು ನರ್ಮದಾ ನದಿಗಳ ನಡುವಿನ ಪ್ರದೇಶವು ದೆಹ್ವಾಲಿ ಭಿಲಿ ಮಾತನಾಡುವ ಭಿಲ್ ಸಮುದಾಯಗಳಿಗೆ ನೆಲೆಯಾಗಿದೆ. ಮಹಾರಾಷ್ಟ್ರದ ತಾಪಿಯ ಇನ್ನೊಂದು ಭಾಗದಿಂದ ಜಲಗಾಂವ್‌ವರೆಗಿನ ಜನರು ಒಂದಲ್ಲ ಒಂದು ರೂಪದಲ್ಲಿ ದೆಹ್ವಾಲಿಯನ್ನು ಮಾತನಾಡುತ್ತಾರೆ ಮತ್ತು ಗುಜರಾತ್‌ನ ಮೋಲ್ಗಿ ಮತ್ತು ಧಡ್‌ಗಾಂವ್‌ವರೆಗಿನ ಜನರು ಸಾತ್ಪುರ ಬೆಟ್ಟಗಳಲ್ಲಿ ನೆಲೆಸಿರುವ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಇದು ಗುಜರಾತ್ ಮತ್ತು ಮಹಾರಾಷ್ಟ್ರದ ದೊಡ್ಡ ಪ್ರದೇಶವಾಗಿದೆ.
ನಾನು ದೆಹ್ವಾಲಿ ಭಿಲಿಯಲ್ಲಿ ಬರೆಯುತ್ತೇನೆ ಮತ್ತು ನಮ್ಮ ಬಗ್ಗೆ ಹೆಚ್ಚು ತಿಳಿದಿಲ್ಲದ ಜನರು ನಮ್ಮ ಸಮುದಾಯಗಳಿಂದ ನಮ್ಮ ಭಾಷೆಗಳನ್ನು ಗುರುತಿಸಿಕೊಳ್ಳುತ್ತಾರೆ. ಹಾಗಾಗಿ, ಕೆಲವೊಮ್ಮೆ ನಾನು ವಾಸವಿಯಲ್ಲಿ ಬರೆಯುತ್ತೇನೆ ಎಂದು ಅವರು ಹೇಳುತ್ತಾರೆ, ಏಕೆಂದರೆ ನನ್ನ ಕುಟುಂಬವು ವಾಸವ ಮೂಲದವರು. ಇದು ಗುಜರಾತ್‌ನ ಬುಡಕಟ್ಟು ಜನಾಂಗದವರು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ. ಗುಜರಾತ್‌ನ ಡ್ಯಾಂಗ್‌ನಲ್ಲಿ ಭಿಲ್‌ಗಳು ವಾರ್ಲಿ ಮಾತನಾಡುತ್ತಾರೆ. ಈ ಪ್ರದೇಶದ ಮೂಲ ನಿವಾಸಿಗಳಾದ ಭಿಲ್‌ಗಳು ಭಿಲಿ ಮಾತನಾಡುತ್ತಾರೆ. ಕೊಂಕಣದಿಂದ ಇಲ್ಲಿಗೆ ಬಂದವರು ಕೊಂಕಣಿ ಮಾತನಾಡುತ್ತಾರೆ. ವಲ್ಸಾದ್‌ನಲ್ಲಿ ಅವರು ವಾರ್ಲಿ ಮತ್ತು ಧೋಡಿಯಾ ಮಾತನಾಡುತ್ತಾರೆ. ವ್ಯಾರಾ ಮತ್ತು ಸೂರತ್‌ನಲ್ಲಿ ಗಮಿತ್ ಮಾತನಾಡುತ್ತಾರೆ; ಬೂಮ್ ಚೌಧರಿಯ ಬದಿಯಲ್ಲಿ; ನಿಜಾರ್ನಲ್ಲಿ ಅವರು ಮಾವ್ಚಿ ಮಾತನಾಡುತ್ತಾರೆ; ನಿಜಾರ್ ಮತ್ತು ಸಗ್ಬರ ನಡುವೆ, ಭಿಲ್‌ಗಳು ದೆಹ್ವಾಲಿ ಮಾತನಾಡುತ್ತಾರೆ. ಅದೇ ರೀತಿ ಅಂಬುಡಿ, ಕಥಲಿ ವಾಸವಿ, ತದ್ವಿ, ಡುಂಗ್ರ ಭಿಲಿ, ರಥ್ವಿ, ಪಂಚಮಹಾಲಿ ಭಿಲಿ, ಡುಂಗ್ರಿ ಗರಸಿಯಾ... ಎಂಬ ಉಪಭಾಷೆಗಳಿವೆ.
ಪ್ರತಿಯೊಂದು ಭಾಷೆಯಲ್ಲೂ ಅಡಗಿರುವ ನಿಧಿಯನ್ನು ಕಲ್ಪಿಸಿಕೊಳ್ಳಿ. ಪ್ರತಿಯೊಂದು ಭಾಷೆಯಲ್ಲೂ ಸಾಹಿತ್ಯ, ಜ್ಞಾನ, ಜೊತೆಗೆ ಜೀವನ ದರ್ಶನವಿದೆ. ನನ್ನ ಕೆಲಸದ ಮೂಲಕ ಈ ನಿಧಿಯನ್ನು ಅಭಿವೃದ್ಧಿಪಡಿಸಲು, ಸಂಗ್ರಹಿಸಲು ಮತ್ತು ಆಚರಿಸಲು ಹೋರಾಡುತ್ತೇನೆ.
ನಾವು ಬೀಜಗಳು, ನಮ್ಮೊಳಗೆ ಕಾಡಿದೆ
ಹಲವು ಯುಗಗಳ
ಹಿಂದೆ
ನನ್ನ ಪೂರ್ವಿಕರನ್ನು
ಮಣ್ಣುಪಾಲು ಮಾಡಲಾಗಿತ್ತು.
ಹಾಗೆಂದು,
ನೀನೂ ನಿನ್ನ
ಹಿಂದಿನವರಂತೆ
ನಮ್ಮನ್ನು ಮಣ್ಣು
ಮಾಡುವ ಧೈರ್ಯ ಮಾಡಬೇಡ.
ಭೂಮಿಗೆ ಬಾನಿನೊಡನೆ
ಮೋಡಕ್ಕೆ ಮಳೆಯೊಡನೆ
ನದಿಗೆ ಕಡಲಿನೊಡನೆ
ಇರುವಂತಹದ್ದೇ
ಹತ್ತಿರದ ಸಂಬಂಧವಿದೆ ನಮಗೆ
ಧೀರ್ಘಕಾಲದಿಂದಲೂ
ಈ ಮಣ್ಣಿನೊಡನೆ.
ನೀನು ನಮ್ಮನ್ನು
ಮಣ್ಣಿನಲ್ಲಿ ಮುಚ್ಚಿದ ದಿನ
ಮರವಾಗಿ ಎದ್ದು
ನಿಲ್ಲುತ್ತೇವೆ ನಾವು
ಯಾಕೆಂದರೆ ನಾವೆಲ್ಲರೂ
ಬೀಜಗಳು, ಕಾಡು ಮರದ ಬೀಜಗಳು
ನಮ್ಮೊಳಗೊಂದು
ಒರಟು ಕಾಡಿದೆ
ಕಾಡು ಮರದ ಬೀಜಗಳೆಂದ
ಮೇಲೆ ಒರಟಾಗಿರಲೇಬೇಕು.
ನೀನು ನಮ್ಮನ್ನು
ಆಳ ನೀರಿನಲ್ಲಿ
ಮುಳುಗಿಸಲು ಬಯಸಬಹುದು
ಆದರೆ ನೀರೇ ನಮ್ಮ
ಮೂಲ.
ಇರುವೆ, ಕೀಟ,
ಮನುಷ್ಯ ಜೀವಿ
ಎಲ್ಲವೂ
ಇಲ್ಲಿಂದಲೇ ಉಗಮೊಗೊಂಡಿದ್ದು
ನಾವು ಅಲ್ಲಿಂದಲೂ
ಮೇಲೇಳುತ್ತೇವೆ
ಇಷ್ಟಕ್ಕೂ, ನಾವು
ನಾವು ಬೀಜಗಳು, ಕಾಡುಮರದ ಬೀಜಗಳು
ನಮ್ಮೊಳಗೊಂದು
ಒರಟು ಕಾಡಿದೆ
ಮತ್ತು ಬೀಜಗಳೆಂದ
ಮೇಲೆ ಹಟಮಾರಿಗಳಾಗಿರಲೇಬೇಕು.
ನೀವು ನಮ್ಮನ್ನು
ಮರಗಳೆಂದು ಕರೆಯಬಹುದು
ಅಥವಾ ನೀರು,
ಹಾಗೂ ನೀವು ಬಯಸಿದರೆ
ಬೆಟ್ಟವೆಂದೂ
ಕರೆಯಬಹುದು.
ಅದೇನೇ ಇದ್ದರೂ,
ನೀವು ನಮ್ಮನ್ನು
ಕರೆಯುವುದು
ಒರಟರೆಂದು, ಕಾಡು
ಜನರೆಂದು
ಮತ್ತು ನಾವು
ಕಾಡು ಜನರೇ ಹೌದು.
ಇಷ್ಟಕ್ಕೂ, ನಾವು
ನಾವು ಬೀಜಗಳು, ಕಾಡುಮರದ ಬೀಜಗಳು
ನಮ್ಮೊಳಗೊಂದು
ಒರಟು ಕಾಡಿದೆ
ಮತ್ತು ಬೀಜಗಳೆಂದ
ಮೇಲೆ ಹಟಮಾರಿಗಳಾಗಿರಲೇಬೇಕು.
ಆದರೆ ಗೆಳೆಯ,
ಈಗ ಹೇಳು ನೀನು,
ಬೀಜದಿಂದ ಬೇರಾಗುವುದೆಂದರೇನೆಂದು
ನಿನಗೆ ತಿಳಿದಿದೆಯೇ?
ನದಿಯಲ್ಲದಿದ್ದರೆ,
ಮರ, ಬೆಟ್ಟವಲ್ಲದಿದ್ದರೆ
ನೀನ್ಯಾರು? ನಿನಗಿದಕ್ಕೆ
ಉತ್ತರ ಹೇಗೆ ಸಿಗುತ್ತದೆ?
ನನಗೆ ಗೊತ್ತು,
ನನ್ನ ಪ್ರಶ್ನೆಗಳಿಗೆ
ನಿನ್ನ ಬಳಿ ಉತ್ತರವಿಲ್ಲ.
ಇಷ್ಟಕ್ಕೂ ನಾವು
ಬೀಜಗಳು,ಕಾಡು ಮರದ ಬೀಜಗಳು
ಮತ್ತು ಬೀಜಗಳೆಂದರೆ
ಒರಟಾಗಿಯೇ ಇರುತ್ತವೆ.
ಅನುವಾದ: ಶಂಕರ. ಎನ್. ಕೆಂಚನೂರು