ಅದು ಪಾವಗಡದ ಮಟ್ಟಿಗೆ ಪೋಸ್ಟ್ ಕಾರ್ಡ್ ಕ್ಷಣವೇ ಸರಿ. ಮೇಲ್ನೋಟಕ್ಕಾದರೂ ಇದೊಂದು ಸತ್ಯದ ಸಂಗತಿ. ರಸ್ತೆಗಳಲ್ಲಿದ್ದ ಬೋಗನ್ ವಿಲ್ಲಾ ಗೊಂಚಲುಗಳು, ವರ್ಣಮಯ ಮನೆಗಳು, ಅಲಂಕೃತ ದೇವಾಲಯಗಳು ಮತ್ತು ಅಲ್ಲಿಂದ ಹೊರಹೊಮ್ಮುತ್ತಿದ್ದ ಸಂಗೀತವು ಕರ್ನಾಟಕದ ತುಮಕೂರು ಜಿಲ್ಲೆಯ ಗ್ರಾಮೀಣ ಭಾಗವೊಂದರ ಬೀದಿಯಲ್ಲಿ ನಡೆದಾಡುತ್ತಿದ್ದವರ ಕಿವಿಗಳನ್ನು ಹಿತವಾಗಿ ತಲುಪುತ್ತಿದ್ದವು. ಒಂದು ರೀತಿಯಲ್ಲಿ ಸುಂದರವಾಗಿದ್ದರೂ ನೈಜನೆಲೆಯಲ್ಲಿ ಅಂಥದ್ದೇನೂ ಇರಲಿಲ್ಲ. ಏಕೆಂದರೆ ನಾವಂದು s***t ಬಗ್ಗೆ ಮಾತನಾಡುತ್ತಿದ್ದೆವು.
ಸವಲತ್ತುಗಳ ಮೋಜನ್ನು ಸವಿಯುತ್ತಿರುವ ಮಧ್ಯಮವರ್ಗದ ಸೂಕ್ಷ್ಮತೆಗಳನ್ನು ಗಮನದಲ್ಲಿರಿಸಿಕೊಂಡು ಇಲ್ಲಿ ಈ ಪದವನ್ನು ನಕ್ಷತ್ರಚಿಹ್ನೆಗಳಿಂದ ಮರೆಮಾಚಲಾಗಿದೆ. ಆದರೆ ರಾಮಾಂಜನಪ್ಪನಿಗೆ ಅಂಥಾ ವಿಲಾಸಗಳಿಲ್ಲ. "ತನ್ನ ಬರಿಗೈಯಿಂದ ನಾನು ಮಲವನ್ನು ಸ್ವಚ್ಛಗೊಳಿಸುತ್ತೇನೆ", ಎನ್ನುತ್ತಿದ್ದಾರೆ ಪಾವಗಡ ತಾಲೂಕಿನ ಕನ್ನಮೇಡಿ ಹಳ್ಳಿಯ ಈ ಸಫಾಯಿ ಕರ್ಮಚಾರಿ. ಇದೂ ಕಮ್ಮಿಯೆಂಬಂತೆ ರಾಮಾಂಜನಪ್ಪನಿಗೆ ಸಿಕ್ಕ ಕೊನೆಯ ಸಂಬಳವೆಂದರೆ 2017 ರ ಅಕ್ಟೋಬರ್ ತಿಂಗಳಿನಲ್ಲಿ.
ಇತ್ತ ಟೌನ್ ಹಾಲಿನ ಗೋಡೆಗಳು ತ್ಯಾಜ್ಯ ಪ್ರತ್ಯೇಕತೆಯನ್ನು ಬಿಂಬಿಸುವ ಮ್ಯೂರಲ್ ಗಳಿಂದ ಸಿಂಗರಿಸಲ್ಪಟ್ಟಿವೆ. ಆದರೆ ಇದೊಂದು ಸರಕಾರಿ ಮುಖವಾಡ ಮಾತ್ರ. ಟೌನ್ ಹಾಲಿನ ಮ್ಯೂರಲ್ ಕಲಾಕೃತಿಗಳಿಂದ ಕೇವಲ 10 ಮೀಟರ್ ದೂರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಸಮಾಲೋಚನೆಯೊಂದರಲ್ಲಿ ಮಾದಿಗ ಸಮುದಾಯದ ದಲಿತರಾದ 20 ಸ್ವಚ್ಛತಾ ಕಾರ್ಮಿಕರು ತಮ್ಮ ದೀನಸ್ಥಿತಿಯ ಬಗ್ಗೆ ಮಾತನಾಡಿದ್ದರು.
ರಾಮಾಂಜನಪ್ಪ ಸಂಬಳವಾಗಿ ಪ್ರತೀ ತಿಂಗಳೂ ಪಡೆಯುತ್ತಿದ್ದ 3500 ರೂಪಾಯಿಗಳು ತನ್ನ ಪತ್ನಿ ಮತ್ತು ಶಾಲೆಗೆ ಹೋಗುವ ಮೂವರು ಮಕ್ಕಳನ್ನು ಹೊಂದಿರುವ ಐವರು ಸದಸ್ಯರ ಕುಟುಂಬಕ್ಕೆ ಯಾವುದಕ್ಕೂ ಸಾಲುತ್ತಿರಲಿಲ್ಲ. ಹೀಗಿರುವಾಗ ಕಳೆದ ಒಂಭತ್ತು ತಿಂಗಳುಗಳಿಂದ ರಾಮಾಂಜನಪ್ಪ ಸಂಬಳವಿಲ್ಲದೆ ದಿನ ಸಾಗಿಸುತ್ತಿದ್ದಾನೆ.
ಹೀಗೆ ಕೆಲವು ಕಾರ್ಮಿಕರ ಸಂಬಳ ಬರುವುದು ಬಾಕಿಯಾಗಿದ್ದರೆ, ಇನ್ನು ಕೆಲವರಿಗೆ ನೀಡಿರುವ ಭರವಸೆಯಂತೆ ಅವರ ಸಂಬಳದಲ್ಲಿ ಏರಿಕೆಯಾಗುವುದು ಬಾಕಿಯಾಗಿಬಿಟ್ಟಿದೆ.
"ನಾನು ಪ್ರತೀದಿನವೂ ರಸ್ತೆಗಳನ್ನು, ಸಾರ್ವಜನಿಕ ಶೌಚಾಲಯಗಳನ್ನು, ಶಾಲಾ ಶೌಚಾಲಯಗಳನ್ನು ಮತ್ತು ತೆರೆದ ಒಳಚರಂಡಿಗಳನ್ನು ಸ್ವಚ್ಛ ಮಾಡುತ್ತೇನೆ. ಈ ಕೆಲಸಕ್ಕಾಗಿ ನನಗೆ ತಿಂಗಳಿಗೆ 13,400 ರೂಪಾಯಿಗಳನ್ನು ಸಂಬಳವಾಗಿ ಕೊಡಲಾಗುವುದೆಂದು ನಾಲ್ಕು ತಿಂಗಳ ಹಿಂದೆ ಭರವಸೆ ನೀಡಲಾಗಿತ್ತು. ಆದರೆ ನನ್ನ 3400 ರೂಪಾಯಿಗಳ ಸಂಬಳವು ಇನ್ನೂ ಬದಲಾಗಿಲ್ಲ", ಎನ್ನುತ್ತಿದ್ದಾರೆ ಅದೇ ತಾಲೂಕಿನ ಕೊಡಮಡಗು ಹಳ್ಳಿಯ ಸ್ವಚ್ಛತಾ ಕರ್ಮಚಾರಿಯಾದ ನಾರಾಯಣಪ್ಪ. ಹಾಗೆ ನೋಡಿದರೆ ರಾಮನಂಜಪ್ಪನ ಸ್ಥಿತಿಗಿಂತ ನಾರಾಯಣಪ್ಪನ ಸ್ಥಿತಿಯು ವಾಸಿಯೆಂಬಂತಿದೆ. ಏಕೆಂದರೆ ನಾರಾಯಣಪ್ಪನ ಪಂಚಾಯತ್ ನಲ್ಲಿ ಸಂಬಳವು ಶೋಚನೀಯವೆಂಬಂತಿದ್ದರೂ ಕಾರ್ಮಿಕರು ಅದನ್ನು ಈಗಲೂ ಪಡೆದುಕೊಳ್ಳುತ್ತಿದ್ದಾರೆ.
2011 ರ ಸಾಮಾಜಿಕ-ಆರ್ಥಿಕ ಜಾತಿಗಣತಿಯ ಪ್ರಕಾರ ಕರ್ನಾಟಕದಲ್ಲಿರುವ ಸ್ವಚ್ಛತಾ ಕಾರ್ಮಿಕರ ಸಂಖ್ಯೆಯು ಇಡೀ ದಕ್ಷಿಣ ಭಾರತದಲ್ಲೇ ಹೆಚ್ಚು. ಇನ್ನು ಸಫಾಯಿ ಕರ್ಮಚಾರಿಗಳ ಬಗ್ಗೆ ಕರ್ನಾಟಕ ರಾಜ್ಯ ಆಯೋಗವು ನಡೆಸಿರುವ ಒಂದು ಹೊಸ ಅಧ್ಯಯನದ ಪ್ರಕಾರ ರಾಜ್ಯದ 30 ಜಿಲ್ಲೆಗಳಲ್ಲಿ ತುಮಕೂರು ಮುಂಚೂಣಿಯಲ್ಲಿದೆ.
2013 ರ ಸ್ವಚ್ಛತಾ ಕಾರ್ಮಿಕ ವೃತ್ತಿ ನಿಷೇಧ ಮತ್ತು ಪುನರ್ವಸತಿ ಕಾಯಿದೆಯು ಈ ಬಗ್ಗೆಯೇ ಬಂದಿದ್ದ 1993 ರ ಕಾಯಿದೆಯ ಮುಂದುವರಿದ ರೂಪದಂಥದ್ದು. 2013 ರ ಕಾಯಿದೆಯ ಪ್ರಕಾರ ಈ ವೃತ್ತಿಯನ್ನು ಪೋಷಿಸುವ ಅಪರಾಧಿಗಳಿಗೆ ಎರಡು ವರ್ಷಗಳವರೆಗಿನ ಜೈಲು ಶಿಕ್ಷೆಯಾಗುವ ಸಂಭವವಿದೆ. ಪಂಚಾಯತ್, ಪುರಸಭೆ, ಪೋಲೀಸ್ ಇಲಾಖೆ ಮತ್ತು ಶಾಸಕಾಂಗ ಸಭೆಗಳನ್ನೂ ಸೇರಿಸಿ ಹಲವು ಸಂಘಸಂಸ್ಥೆಗಳ ಸದಸ್ಯರನ್ನೊಳಗೊಂಡ ಮೇಲ್ವಿಚಾರಣಾ ಸಮಿತಿಯೊಂದರ ರಚನೆಯ ಬಗ್ಗೆಯೂ ಇದು ಸೂಚಿಸಿದೆ.
ಆದರೆ ಇಂಥಾ ಕಾಯಿದೆಗಳನ್ನು ಪಾಲಿಸಬೇಕಾಗಿರುವ ವ್ಯಕ್ತಿಗಳೇ ಇಂದು ರಾಮಾಂಜನಪ್ಪ ಮತ್ತು ಅವರಂಥಾ ಕೆಲ ಸಫಾಯಿ ಕರ್ಮಚಾರಿಗಳನ್ನು ಅಕ್ರಮ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದಾರೆ.
"ಪಂಚಾಯತ್ ಮತ್ತು ಪುರಸಭೆಯ ಕಾರ್ಮಿಕವರ್ಗದಲ್ಲೇ ಶ್ರೇಣಿ ವ್ಯವಸ್ಥೆಯಿದೆ. ಸೆಪ್ಟಿಕ್ ಟ್ಯಾಂಕುಗಳನ್ನು ಸ್ವಚ್ಛಗೊಳಿಸುವ ಕುಟುಂಬಸ್ಥರ ಹಿನ್ನೆಲೆಯುಳ್ಳ ಮತ್ತು ವ್ಯಸನಗಳಿಗೆ (ಮದ್ಯಪಾನ ಮತ್ತು ಮಾದಕ ಪದಾರ್ಥಗಳು) ಅಂಟಿಕೊಂಡ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸ್ವಚ್ಛತಾ ಕಾರ್ಮಿಕರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ಸಾಮಾಜಿಕ ಕಲ್ಯಾಣ ಇಲಾಖೆಗಳು ಸಮಾಜದ ಶ್ರೇಣಿವ್ಯವಸ್ಥೆಗಳನ್ನು ಹೀಗೆ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ", ಎನ್ನುತ್ತಾರೆ ಬೆಂಗಳೂರಿನ ರಾಮಯ್ಯ ಸಾರ್ವಜನಿಕ ನೀತಿ ಕೇಂದ್ರದ ಸಹಾಯಕ ನಿರ್ದೇಶಕರಾದ ಚೇತನ್ ಸಿಂಗೈ. ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರತರಾಗಿರುವ ಸಫಾಯಿ ಕರ್ಮಚಾರಿಗಳ ಸಂಖ್ಯೆಗಳನ್ನು ಗುರುತಿಸಲು ಕರ್ನಾಟಕ ರಾಜ್ಯ ಆಯೋಗವು ಆಯೋಜಿಸಿರುವ ಅಧ್ಯಯನ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿಯಾಗಿದ್ದಾರೆ. ಈ ಅಧ್ಯಯನವು ಕೊನೆಗೊಳ್ಳುವವರೆಗೂ ಪಾವಗಡ, ತುಮಕೂರು ಅಥವಾ ಇನ್ಯಾವುದೇ ಭಾಗದಲ್ಲಿರುವ ಸಫಾಯಿ ಕರ್ಮಚಾರಿಗಳ ಅಸಲಿ ಸಂಖ್ಯೆಯು ತಿಳಿಯುವ ಸಾಧ್ಯತೆಗಳಿಲ್ಲ.
ಹಲವು ಪ್ರಯತ್ನಗಳ ಹೊರತಾಗಿಯೂ ಕಾರ್ಮಿಕರ ಅಕ್ರಮ ನೇಮಕಾತಿ ಮತ್ತು ಸಂಬಳದ ಕೊರತೆಗಳ ಬಗ್ಗೆ ಕೊಡಮಡಗು ಪಂಚಾಯತ್ ಕಾರ್ಯಾಲಯವು ಪ್ರತಿಕ್ರಯಿಸಿರಲಿಲ್ಲ. ಇನ್ನು ಈ ಬಗ್ಗೆ ಕನ್ನಮೇಡಿ ಪಂಚಾಯತ್ ಕಾರ್ಯಾಲಯವಂತೂ ಉಗ್ರವಾಗಿ ಪ್ರತಿಕ್ರಯಿಸಿತ್ತು.
ಪುರಸಭೆಗಳಿಗಿಂತ ಭಿನ್ನವಾಗಿ ಪಂಚಾಯತ್ ಗಳಲ್ಲಿ ಕಾರ್ಮಿಕರ ಉದ್ಯೋಗವು ಖಾಯಂ ಆಗಿರುತ್ತದೆ. ಆದರೆ ಇದರೊಂದಿಗೆ ಬರುವ ಪ್ರೊವಿಡೆಂಟ್ ಫಂಡ್ ಅಥವಾ ವಿಮೆಯ ಸೌಲಭ್ಯಗಳಿಂದ ಮಾತ್ರ ಇವರುಗಳು ವಂಚಿತರಾಗಿದ್ದಾರೆ.
"ವಿಷಕಾರಿ ಗಾಳಿಯನ್ನು ನಿತ್ಯವೂ ಸೇವಿಸುವ ಮತ್ತು ಹಲವು ಮಾರಣಾಂತಿಕ ರೋಗಗಳಿಗೆ ಮೈಯೊಡ್ಡಬೇಕಾಗಿ ಬರುವ ಈ ಕಾರ್ಮಿಕರ ವಿಮೆಯನ್ನು ಮಾಡುವವರ್ಯಾರು?", ಎಂದು ಕೇಳುತ್ತಿದ್ದಾರೆ ಕೆ. ಬಿ. ಓಬಳೇಶ್. ಇವರು ಗ್ರಾಮೀಣ ಉದ್ಯೋಗ ಮತ್ತು ದಲಿತ ಸಮುದಾಯದ ಹಕ್ಕುಗಳಿಗಾಗಿ ಹೋರಾಡುತ್ತಿರುವ ತಮಟೆ ಕೇಂದ್ರದ ಸ್ಥಾಪಕರು.
ಗ್ರಾಮ ಪಂಚಾಯತ್ ಹಂತದ ಸಫಾಯಿ ಕರ್ಮಚಾರಿಗಳ ಸ್ಥಿತಿಯು ಇಷ್ಟು ಕೆಟ್ಟದಾಗಿದ್ದರೆ, ಪುರಸಭೆಯ ಗುತ್ತಿಗೆ ಕಾರ್ಮಿಕರ ಸ್ಥಿತಿಯು ಮತ್ತಷ್ಟು ಶೋಚನೀಯವಾಗಿದೆ. ಅವರ ದುಸ್ಥಿತಿಯು ರಾಜ್ಯದ ಇತರ ಸ್ವಚ್ಛತಾ ಕಾರ್ಮಿಕರಿಗೂ ಬರಲಿರುವ ಬಗ್ಗೆ ಸಂದೇಹಗಳಿಲ್ಲ
ಕರ್ನಾಟಕದಲ್ಲಿ ನೈರ್ಮಲ್ಯದ ಕೆಲಸಗಳನ್ನು ಸರಿದಾರಿಗೆ ತರುವ ಸಾಹಸಕ್ಕಿಳಿದಿದ್ದ ಸರಕಾರವು ಪ್ರತೀ 700 ಮಂದಿಗೆ ಓರ್ವ ಸಫಾಯಿ ಕರ್ಮಚಾರಿಯನ್ನು ನೇಮಿಸುವತ್ತ ಹೆಜ್ಜೆಯಿಟ್ಟಿತ್ತು. ಉದ್ಯೋಗಗಳನ್ನು ಕ್ರಮಬದ್ಧಗೊಳಿಸುವುದು ಅಥವಾ ಖಾಯಮ್ಮಾಗಿಸುವುದೆಂದರೆ ಕಾರ್ಮಿಕರ ಮೇಲೆ ಹೆಚ್ಚಿನ ಹಣವನ್ನು ವ್ಯಯಿಸಿದಂತೆಯೇ. ಹೀಗಾಗಿ ಅವರ ಪುನರ್ವಸತಿ ಕಾರ್ಯಕ್ರಮಗಳಾಗುವುದರ ಬದಲಾಗಿ ಕಾರ್ಮಿಕರು ವೃತ್ತಿಯಿಂದಲೇ ವಜಾಗೊಂಡಿದ್ದಾರೆ.
"ಈ ವಿಲಕ್ಷಣ ಅನುಪಾತದಿಂದಾಗಿ [1:700] ಈವರೆಗೆ ಸುಮಾರು 30 ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ", ಎನ್ನುತ್ತಾರೆ ಓಬಳೇಶ್.
ಮಣಿ ಹೀಗೆ ವಜಾಗೊಂಡ ಕಾರ್ಮಿಕರಲ್ಲೊಬ್ಬಳು. ಓರ್ವ ಪೌರಕಾರ್ಮಿಕನೂ, ಗುತ್ತಿಗೆ ಕಾರ್ಮಿಕನೂ ಆಗಿದ್ದ ಆಕೆಯ ಪತಿಯನ್ನೂ ಕೂಡ ವಜಾ ಮಾಡಲಾಗಿತ್ತು. "ಹೀಗಾದರೆ ನಾವು ನಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು? ಮನೆಬಾಡಿಗೆಯನ್ನು ಹೇಗೆ ಕಟ್ಟುವುದು?", ಎಂದು ಕೇಳುತ್ತಿದ್ದಾರೆ ಮಣಿ.
ಪೌರಕಾರ್ಮಿಕರಿಗೆ ನೀಡಬೇಕಿದ್ದ ಬಾಕಿ ಹಣವನ್ನು ಪಾವತಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿ.ಬಿ.ಎಮ್.ಪಿ) ಜುಲೈ 11 ರಂದು 27 ಕೋಟಿ ರೂಪಾಯಿಗಳ ಮೊತ್ತವನ್ನು ಬಿಡುಗಡೆ ಮಾಡಿತ್ತು. ಇದಾಗಿದ್ದು ಏಳು ತಿಂಗಳಿನಿಂದ ಸಂಬಳ ಕೊಡಲಿಲ್ಲವೆಂದು 40 ರ ಪ್ರಾಯದ ಪೌರಕಾರ್ಮಿಕನಾಗಿದ್ದ ಸುಬ್ರಮಣಿ ಟಿ. ಆತ್ಮಹತ್ಯೆ ಮಾಡಿಕೊಂಡ ನಂತರವೇ. "ಕಾರ್ಮಿಕರ ಬಯೋಮೆಟ್ರಿಕ್ ಪರಿಶೀಲನೆಯ ನಂತರ ಕೊಡಬೇಕಿದ್ದ ಹಣವನ್ನೆಲ್ಲಾ ಸಂದಾಯ ಮಾಡಲಾಗಿತ್ತು", ಎನ್ನುತ್ತಿದ್ದಾರೆ ಸರ್ಫರಾಝ್ ಖಾನ್. ಬಿ.ಬಿ.ಎಮ್.ಪಿ ಯ ಆರೋಗ್ಯ ವಿಭಾಗದ ಜಂಟಿ ಆಯುಕ್ತರಾಗಿರುವ ಸರ್ಫರಾಝ್ ಖಾನ್ ಹೇಳುವ ಪ್ರಕಾರ ಬೆಂಗಳೂರಿನಲ್ಲಿರುವ ಒಟ್ಟು 18000 ಪೌರಕಾರ್ಮಿಕರ ಬಾಕಿ ಹಣವು ಸಂದಾಯವಾಗಿದೆ.
"ಬಿ.ಬಿ.ಎಮ್.ಪಿ 27 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ ನಂತರ ಹಲವು ತಿಂಗಳುಗಳಿಂದ ಬಾಕಿಯಿದ್ದ ಪಗಾರವನ್ನು ಪಡೆದ ಪೌರಕಾರ್ಮಿಕರ ಶೇಕಡಾವಾರು ಪ್ರಮಾಣ ಸುಮಾರು 50 ಮಾತ್ರ", ಎನ್ನುತ್ತಿದ್ದಾರೆ ಓಬಳೇಶ್. ಓಬಳೇಶ್ ಹೇಳುವ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 32000 ಪೌರಕಾರ್ಮಿಕರಾಗಿದ್ದಾರೆ ಮತ್ತು ಬಯೋಮೆಟ್ರಿಕ್ ಪರಿಶೀಲನಾ ವಿಧಾನವನ್ನು ಅಳವಡಿಸಿದ ನಂತರವಂತೂ ದಾಖಲಾತಿಗಳಲ್ಲಿರುವ ಈ ಸಂಖ್ಯೆಯು ಸಾಕಷ್ಟು ಇಳಿಮುಖವಾಗಿದೆ.
ಪಾವಗಡದ ಆರೋಗ್ಯ ಪರಿಶೀಲನಾಧಿಕಾರಿಯಾದ ಎಸ್. ಶಂಶುದ್ದೀನ್ ಹೇಳುವ ಪ್ರಕಾರ ಬಜೆಟ್ ಕೊರತೆ ಮತ್ತು ಉದ್ಯೋಗಗಳನ್ನು ಕ್ರಮಬದ್ಧಗೊಳಿಸಲಾಗದ ಸವಾಲುಗಳು ಬಾಕಿ ಪಾವತಿಗಳನ್ನು ಮಾಡದಿರಲು ಕಾರಣವಾಗಿದ್ದವು. ಆದರೂ ತಿಂಗಳೊಳಗೆ ಇವೆಲ್ಲವನ್ನೂ ಪರಿಹರಿಸಲಾಗುವುದು ಎನ್ನುತ್ತಿದ್ದಾರೆ ಶಂಶುದ್ದೀನ್. ಅದೃಷ್ಟವಶಾತ್ ಶಂಶುದ್ದೀನ್ ರಿಗೆ ತಮ್ಮ ಸಂಬಳವು ಪ್ರತೀ ತಿಂಗಳು ತಪ್ಪದೆ ಬರುತ್ತಿರುವ ಕಾರಣ ಈ ಸಮಸ್ಯೆಯು ಅವರನ್ನು ಅಷ್ಟಾಗಿ ಕಂಗೆಡಿಸಿಲ್ಲ. ಓಬಳೇಶ್ ಹೇಳುವ ಪ್ರಕಾರ ಆ ಹಂತದ ಅಧಿಕಾರಿಗಳಿಗೆ ಏನಿಲ್ಲವೆಂದರೂ ತಿಂಗಳಿಗೆ 30000 ರೂಪಾಯಿಗಳ ಸಂಬಳವು ಕೈಸೇರುತ್ತದೆ.
2013 ರಲ್ಲಿ ಪಾವಗಡದ ಚರಂಡಿ ವ್ಯವಸ್ಥೆಯ ಸಮಸ್ಯೆಗಳಿಗೆ ಉತ್ತರವೆಂಬಂತೆ ಯಂತ್ರೀಕರಣದ ಪರಿಚಯವಾದಾಗ ಮುನಿಸಿಪಾಲ್ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರಿಟ್ಟಿದ್ದರು. ಕೊನೆಗೂ ತಮ್ಮ ದೇಶ ಮತ್ತು ಸರಕಾರಗಳು ತಮ್ಮನ್ನು ಮನುಷ್ಯರಾಗಿ ನೋಡುತ್ತಿರುವಂತೆ, ಮುಂದಾದರೂ ಒಂದೊಳ್ಳೆಯ ಸುಖಮಯ ಜೀವನವನ್ನು ನಡೆಸುವ ನಿರೀಕ್ಷೆಗಳು ಅವರಲ್ಲಿ ಹುಟ್ಟಿದ್ದವು
ಕೊನೆಗೂ ತಿಳಿದುಬಂದಿದ್ದೇನೆಂದರೆ ಯಂತ್ರಗಳು ತೆರೆದ ಒಳಚರಂಡಿಯ ಅರೆದ್ರವಪದಾರ್ಥಗಳನ್ನು ಮಾತ್ರ ಒಂದು ಮಟ್ಟಿಗೆ ಒಳಗೆಳೆದುಕೊಳ್ಳಲು ಸಮರ್ಥವಾಗಿದ್ದವು. ಯಂತ್ರವು ನಿಂತಾಗಲೆಲ್ಲಾ ಕಾರ್ಮಿಕನೊಬ್ಬ ಚರಂಡಿಗಿಳಿದು ತ್ಯಾಜ್ಯವನ್ನು ಮತ್ತಷ್ಟು ದ್ರವೀಕರಿಸುವ, ಕಲ್ಲುಗಳನ್ನು ತೆಗೆಯುವ ಮತ್ತು ಕೊಳವೆಗಳನ್ನು ಬ್ಲಾಕ್ ಮಾಡುತ್ತಿರುವ ಯಾವುದೇ ಪದಾರ್ಥಗಳಿದ್ದರೆ ಅವುಗಳನ್ನು ಕೈಯಾರೆ ತೆಗೆದು ಸ್ವತಃ ಸ್ವಚ್ಛಗೊಳಿಸಬೇಕಿತ್ತು. ಹೀಗಾಗಿ ಒಟ್ಟಿನಲ್ಲಿ ಸ್ವಚ್ಛತಾ ಕಾರ್ಮಿಕನೊಬ್ಬ ಮಲಪದಾರ್ಥಗಳನ್ನು ಸ್ವಚ್ಛಗೊಳಿಸುವವನಿಂದ ಮಲಪದಾರ್ಥಗಳನ್ನು ಬೆರೆಸುವವನಾಗಿ ಈಗ ಕೆಲಸ ಮಾಡಬೇಕಿತ್ತು. ಇದು ಯಾವ ರೀತಿಯಲ್ಲೂ ಕಾರ್ಮಿಕರಿಗೆ ಲಾಭದಾಯಕವಾಗಿರಲಿಲ್ಲ. ಕನಿಷ್ಠಪಕ್ಷ ಗೌರವಯುತ ಬಾಳಿನ ಬೇಡಿಕೆಯಿಡುತ್ತಿರುವ ಮಂದಿಗಂತೂ ಅಲ್ಲವೇ ಅಲ್ಲ.
ಕರ್ನಾಟಕದಲ್ಲಿ ಕೆಲ ವರದಿಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ ಸುಮಾರು 69 ಕಾರ್ಮಿಕರು ವೃತ್ತಿನಿರತರಾಗಿದ್ದಾಗ ಸಾವಿಗೀಡಾಗಿದ್ದಾರೆ. ಓಬಳೇಶ್ ಹೇಳುವ ಪ್ರಕಾರ ಇವುಗಳಲ್ಲಿ ಬಹಳಷ್ಟು ಸಾವುಗಳು ಸೆಪ್ಟಿಕ್ ಟ್ಯಾಂಕುಗಳನ್ನು ಸ್ವಚ್ಛಗೊಳಿಸುವ ಸಂದರ್ಭಗಳಲ್ಲಿ ಸಂಭವಿಸಿದೆ.
"ಸೆಪ್ಟಿಕ್ ಟ್ಯಾಂಕುಗಳಿಗೆ ಇಳಿಯುವ ಮುನ್ನ ನಾವು ಬಟ್ಟೆಯೆಲ್ಲಾ ಬಿಚ್ಚಿ ಕೇವಲ ಒಳವಸ್ತ್ರವನ್ನಷ್ಟೇ ಧರಿಸಿ ಕೆಳಗಿಳಿಯುತ್ತೇವೆ. ಹೀಗೆ ಕೆಳಗಿಳಿಯುವ ಮುನ್ನ 90 ಮಿಲಿಲೀಟರ್ ಮದ್ಯವನ್ನು ಸೇವಿಸಿದರಂತೂ ನಮಗೆ ಕೆಲಸ ಮಾಡಲು ಮತ್ತಷ್ಟು ಸಹಾಯವಾಗುತ್ತದೆ", ಎನ್ನುತ್ತಾರೆ ನಾರಾಯಣಪ್ಪ.
ಒಂದು ಪಕ್ಷ ಅದೇ ದಿನ ಅಥವಾ ಮುಂದಿನ ದಿನ ಉಣ್ಣಬೇಕಾದ ಸಂದರ್ಭಗಳು ಬಂದಲ್ಲಿ ಇವರಿಗೆ ಹೆಚ್ಚಿನ ಸಾರಾಯಿಯ ಅವಶ್ಯಕತೆಯುಂಟಾಗುತ್ತದೆ.
''ಆ ಗಬ್ಬು ವಾಸನೆಯನ್ನು ಮರೆಯಲು ಏನಾದರೊಂದು ಮಾಡದೆ ವಿಧಿಯಿಲ್ಲ'', ಎನ್ನುತ್ತಾರೆ ರಾಮಾಂಜನಪ್ಪ.
90 ಎಮ್.ಎಲ್ ಮದ್ಯಕ್ಕೆ ರೂ. 50 ರ ಲೆಕ್ಕ ಹಿಡಿದರೆ ಕೆಲವರು ಒಂದು ದಿನಕ್ಕೆ ಸುಮಾರು 200 ರೂಪಾಯಿಗಳನ್ನು ಮದ್ಯಕ್ಕೆಂದೇ ವ್ಯಯಿಸುತ್ತಾರೆ. ಅದೂ ಕೂಡ ಇಂಥದ್ದೊಂದು ಅಲ್ಪ ಮತ್ತು ಅನಿಯಮಿತ ಆದಾಯದಿಂದ.
ಕುಟುಂಬಸ್ಥರಿಂದ ಮತ್ತು ನೆರೆಕರೆಯವರಿಂದ ಸಾಲ ಪಡೆದುಕೊಳ್ಳುತ್ತಾ ನಡೆಸುವ ಈ ಜೀವನವು ಬಲು ಅನಿಶ್ಚಿತತೆಯಿಂದ ಕೂಡಿರುವಂಥದ್ದು. ''ನಮಗೆ ಉಳಿಯುವ ಕೊನೆಯ ಆಯ್ಕೆಯೆಂದರೆ ಖಾಸಗಿ ಲೇವಾದೇವಿಯವರಿಂದ ಸಾಲ ತೆಗೆದುಕೊಳ್ಳುವುದು. ನಮಗೆ ಜಮೀನು ಅಥವಾ ಇನ್ನಿತರ ಆಧಾರಗಳಿಲ್ಲದ ಕಾರಣ ಬ್ಯಾಂಕುಗಳೂ ಸಾಲ ನೀಡುವುದಿಲ್ಲ'', ಎನ್ನುತ್ತಾರೆ ರಾಮಾಂಜನಪ್ಪ.
ಹಾಗಿದ್ದರೆ ವಾಸಿ ಎನ್ನಬಹುದಾದ ಸಂಬಳವು ದಕ್ಕುವ ಬೇರೆ ವೃತ್ತಿಗಳೇ ಇಲ್ಲವೇ? ''ನಾವು ಮಾಡಬೇಕಾಗಿರುವುದು ಇದನ್ನೇ ಎಂದು ಎಲ್ಲರೂ ಹೇಳುತ್ತಾರೆ. ನಮಗೆ ಸಾಮಾಜಿಕ ಕಟ್ಟುಪಾಡುಗಳಿವೆ. ನಾವಿದನ್ನು ಮಾಡದಿದ್ದರೆ ಇನ್ಯಾರು ಮಾಡುತ್ತಾರೆ? ನಮ್ಮ ಕುಟುಂಬವು ಈ ವೃತ್ತಿಯನ್ನೇ ಹಲವು ಪೀಳಿಗೆಗಳಿಂದ ಮಾಡುತ್ತಾ ಬಂದಿದೆ'', ಎನ್ನುತ್ತಿದ್ದಾರೆ ಪಾವಗಡದ ದೊಮ್ಮತಮರಿ ಪಂಚಾಯತ್ತಿನ ಸಫಾಯಿ ಕರ್ಮಚಾರಿಯಾಗಿರುವ ಗಂಗಮ್ಮ.
''ಇದು ಜಾತಿಯಾಧಾರಿತ ಅಪಾಯವೇ ಸರಿ. ನೀನು ಹುಟ್ಟಿರುವುದೇ ಈ ವೃತ್ತಿಗಾಗಿ ಎಂಬ ಭಾವನೆಯನ್ನು ಇಲ್ಲಿ ಅವರಲ್ಲಿ ಮೂಡಿಸಲಾಗುತ್ತದೆ. ನಿನಗೆ ಇದಕ್ಕಿಂತ ಉತ್ತಮವಾದುದನ್ನು ಮಾಡಲು ಸಾಧ್ಯವಿಲ್ಲ ಮತ್ತು ನೀನದನ್ನು ಮಾಡಲೂಬಾರದು. ಒಂದು ವಿಚಿತ್ರ ಬಗೆಯ ಗುಲಾಮಗಿರಿಯಲ್ಲಿ ದೀನರಾಗಿ ಬದುಕುತ್ತಿರುವ ವರ್ಗವಿದು. ಒಂದೆಡೆ ಇವರಿಗೆ ಸಮಯಕ್ಕೆ ಸರಿಯಾಗಿ ಸಂಬಳ ದಕ್ಕುವುದಿಲ್ಲ. ಆದರೆ ಕೆಲಸವನ್ನು ನಿಲ್ಲಿಸದೆ ಮುಂದುವರಿಸಿದರೆ ಸಂಬಳವನ್ನು ಹೆಚ್ಚಿಸುವ ಭರವಸೆಯನ್ನು ನೀಡಲಾಗುತ್ತದೆ. ಇದೊಂದು ಬಲು ಇಕ್ಕಟ್ಟಿನ ಮಾರ್ಗ'', ಎನ್ನುತ್ತಿದ್ದಾರೆ ಓಬಳೇಶ್.
1989 ರಲ್ಲಿ ಮರಣದಂಡನೆಯನ್ನು ಪಡೆದಿದ್ದ ಅಮೆರಿಕಾದ ಕುಖ್ಯಾತ ಸರಣಿಹಂತಕನಾದ ರಿಚರ್ಡ್ ರಾಮಿರೇಝ್ ನಿರ್ಲಕ್ಷ್ಯದ ಧಾಟಿಯಲ್ಲಿ ಹೀಗಂದಿದ್ದ: ''ಇದೊಂದು ದೊಡ್ಡ ಸಂಗತಿಯೇ ಇಲ್ಲ. ಸಾವು ಯಾವತ್ತಿಗೂ ಜೊತೆಗೇ ಸಾಗುತ್ತಿದೆ''. ಇದು ಪಾವಗಡದ ಮಟ್ಟಿಗೂ ಒಂದು ರೀತಿಯಲ್ಲಿ ಸತ್ಯವೇ. ಸಾವೆಂಬುದು ಇಲ್ಲಿ ದೊಡ್ಡ ಸಂಗತಿಯೇ ಅಲ್ಲ. ಸಾವು ಪ್ರದೇಶಗಳ ಸೀಮೆಯಲ್ಲೇ ಸಾಗುತ್ತಿದೆ, ಆದರೆ ಕರ್ಮಚಾರಿಗಳು ಮಾತ್ರ ಸರಣಿಯಾಗಿ ಬಲಿಯಾಗುತ್ತಿದ್ದಾರೆ. ಕನಿಷ್ಠ ಮಟ್ಟದ ಭದ್ರತೆ, ಗರಿಷ್ಠ ಅಪಾಯ, ಇಲ್ಲದ ರಜಾದಿನ, ಇಲ್ಲದ ಸಂಬಳ. ಪೋಸ್ಟ್ ಕಾರ್ಡಿನ ಹಿಂದಿನ ಜಗತ್ತಿಗೆ ಸುಸ್ವಾಗತ.
ಈ ವರದಿಗಾಗಿ ನೈರ್ಮಲ್ಯದ ಕರ್ಮಚಾರಿಗಳನ್ನು ಮಾತನಾಡಿಸಿದಾಗ ವರದಿಯಲ್ಲಿ ತಮ್ಮ ಮೊದಲ ನಾಮಧೇಯವನ್ನಷ್ಟೇ ಬಳಸಿಕೊಳ್ಳಬೇಕೆಂಬ ಬಯಕೆ ಅವರದ್ದಾಗಿತ್ತು.
ಈ ವರದಿಗಾಗಿ ತಮ್ಮ ಅಮೂಲ್ಯವಾದ ಸಮಯವನ್ನು ಮತ್ತು ಅಗತ್ಯ ನೆರವನ್ನು ನೀಡಿರುವ ಸಂಶೋಧಕರಾದ ನೋಯಲ್ ಬೆನ್ನೋರವರಿಗೆ ಲೇಖಕರು ಕೃತಜ್ಞರು.
ಅನುವಾದ: ಪ್ರಸಾದ್ ನಾಯ್ಕ್