ನೀರಿನ ಸಮಸ್ಯೆಯ ಬಗ್ಗೆ ಹೇಳುವುದಾದರೆ ದೇಶದ ಇತರ ಭಾಗಗಳೊಂದಿಗೆ ತಮಿಳುನಾಡಿಗೆ ಇರುವಷ್ಟು ಸಂಬಂಧವು ಬೇರ್ಯಾವ ರಾಜ್ಯದೊಂದಿಗೂ ಇರಲಿಕ್ಕಿಲ್ಲ. ಇಲ್ಲಿಯ ಬೋರ್ ವೆಲ್ ಯಂತ್ರಗಳು ಭಾರತದ ವಿವಿಧೆಡೆಗಳಲ್ಲಿ ಸಾಕಷ್ಟು ಆಳದವರೆಗೆ ಕೊರೆದಿವೆ (ಕೆಲ ಆಫ್ರಿಕನ್ ದೇಶಗಳಲ್ಲೂ ಕೂಡ). ತಿರುಚೆಂಗೋಡ್ ಪ್ರದೇಶವನ್ನು ಭಾರತದ ರಿಗ್ ರಾಜಧಾನಿ ಎಂದು ಹೇಳಿದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ. ಇಲ್ಲಿಯ ಸಾವಿರಾರು ಯಂತ್ರಗಳು ಮತ್ತು ಆಪರೇಟರ್ ಗಳು ಸುಮಾರು 1400 ಅಡಿಗಳಿಗೂ ಹೆಚ್ಚಿನ ಆಳವನ್ನು ವರ್ಷದ ಬಹುತೇಕ ಎಲ್ಲಾ ತಿಂಗಳುಗಳಲ್ಲೂ, ನಿತ್ಯವೂ ಕೊರೆಯುತ್ತಾರೆ. ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಮಹಾರಾಷ್ಟ್ರದಿಂದ ಒಳ್ಳೆಯ ಬ್ಯುಸಿನೆಸ್ ಇವರುಗಳಿಗೆ ದೊರಕಿತ್ತು. ಆದರೆ ಈ ಬಾರಿ ಮಾನ್ಸೂನ್ ಮಳೆಯಾದ ಪರಿಣಾಮವಾಗಿ ಮಹಾರಾಷ್ಟ್ರದಂತಹ ಕೆಲ ರಾಜ್ಯಗಳಲ್ಲಿ ವ್ಯಾಪಾರವು ಕೊಂಚ ಕುಸಿದಿದೆ. ಉಳಿದ ರಾಜ್ಯಗಳಲ್ಲಿ ಅಂತರ್ಜಲದ ತಲಾಶೆಯಲ್ಲಿ ಕೊರೆಯುವ ಕೆಲಸವು ಎಂದಿನಂತೆ ನಡೆಯುತ್ತಿದೆ.
ಮಹಾರಾಷ್ಟ್ರದಲ್ಲಿ ಪ್ರತೀ ಬೇಸಿಗೆಯಲ್ಲೂ ತೀವ್ರವಾಗುವ ನೀರಿನ ಸಮಸ್ಯೆಯಿಂದಾಗಿ ಮರಾಠಾವಾಡಾವೊಂದರಲ್ಲೇ ಸಾವಿರಾರು ಬೋರ್ ವೆಲ್ ಗಳು ಈ ವರ್ಷದ ಆರಂಭದಲ್ಲಿ ಕೊರೆಯಲ್ಪಟ್ಟಿವೆ (2013). ಆ ದಿನಗಳಲ್ಲಿ ಎತ್ತ ನೋಡಿದರೂ ಲಾರಿಗಳು ಮತ್ತು ಲಾರಿಗಳ ಮೇಲೇರಿ ಕೂತ ರಿಗ್ ಗಳೇ ಕಾಣುತ್ತಿದ್ದವು. ಕೆಲ ಗ್ರಾಮೀಣ ಭಾಗದ ಜಿಲ್ಲೆಗಳಲ್ಲಂತೂ ರೈತರ ಸಾಲಗಳು ನೀರಿಗಿಂತ ಹೆಚ್ಚು ಈ ಬೋರ್ ವೆಲ್ ಗಳಿಂದಾಗಿ ಹುಟ್ಟಿಕೊಂಡಿದ್ದವು. ಹೀಗೆ ರಸ್ತೆಗಳ ಬದಿಯಲ್ಲಿ ಇರಿಸಲಾಗಿದ್ದ ಬಹಳಷ್ಟು ರಿಗ್ ಗಳನ್ನು ಪರಿಶೀಲಿಸಿದಾಗ ನಮಗೆ ಕಂಡುಬಂದದ್ದು ಅವುಗಳನ್ನು ತಮಿಳುನಾಡಿನಿಂದ ತರಿಸಲಾಗಿದೆ ಎಂದು (ಇನ್ನುಳಿದವುಗಳನ್ನು ಆಂಧ್ರಪ್ರದೇಶದಿಂದ ತರಿಸಲಾಗಿತ್ತು). ಮಹಾರಾಷ್ಟ್ರ ಸರಕಾರದ ಹಿರಿಯ ಭೂವಿಜ್ಞಾನಿರೊಬ್ಬರು `ದಿ ಹಿಂದೂ' ಪತ್ರಿಕೆಗೆ ನೀಡಿರುವ ಹೇಳಿಕೆಯ ಪ್ರಕಾರ ಈ ರಿಗ್ ಗಳಲ್ಲಿ ಬಹಳಷ್ಟು ಒಂದೇ ಪ್ರದೇಶದಿಂದ ಬಂದವುಗಳಾಗಿದ್ದವು. ಆ ಪ್ರದೇಶ ಬೇರಾವುದೂ ಅಲ್ಲ. ಅದು ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಬರುವ ತಿರುಚೆಂಗೋಡ್ ಆಗಿತ್ತು.
`"ಈ ವರ್ಷ ನಾಲ್ಕು ತಿಂಗಳುಗಳ ಕಾಲ ನಾನು ಮಹಾರಾಷ್ಟ್ರದ ನಂದೇದ್ ಪಕ್ಕದ ಹಳ್ಳಿಯೊಂದರಲ್ಲಿ ಬೀಡುಬಿಟ್ಟಿದ್ದೆ'', ಶ್ರೀ ಬಾಲಮುರುಗನ್ ಬೋರ್ ವೆಲ್ಸ್ ನ ಕಡೆಯವರಾದ ಸಿ. ವೈಯಪುರಿ ತಿರುಚೆಂಗೋಡ್ ನಲ್ಲಿ ನನಗೆ ಹೇಳುತ್ತಿದ್ದರು. ಆತ ತನ್ನ ವೃತ್ತಿಯಲ್ಲಿ ಪರಿಣತಿಯನ್ನು ಹೊಂದಿರುವವನಲ್ಲದೆ ಪರಿಶ್ರಮಿಯೂ ಹೌದು. ನಾಲ್ಕು ತಿಂಗಳ ಅವಧಿಯಲ್ಲಿ ಈ ಒಬ್ಬನೇ ಒಬ್ಬ ಆಪರೇಟರ್ ಕಮ್ಮಿಯೆಂದರೂ 500 ಬೋರ್ ವೆಲ್ ಗಳನ್ನು ಕೊರೆಸಿದ್ದಾನೆ. ಅದೂ ಕೂಡ ನೀರಿನ ತೀವ್ರ ಅಭಾವವಿರುವ ಮರಾಠಾವಾಡಾದ ಭಾಗದಲ್ಲಿ. ``ದಿನವೊಂದಕ್ಕೆ ಸುಮಾರು 1300 ಅಡಿಗಳಷ್ಟು ಆಳವನ್ನು ನಾವು ತಲುಪುತ್ತೇವೆ. ಮಣ್ಣು ಸಡಿಲವಾಗಿದ್ದರೆ ಕೊರೆಯುವುದೂ ಕೂಡ ಸುಲಭ. ಅಂದರೆ ಆಳವು ಮುನ್ನೂರು ಅಡಿಗಿಂತ ಕಮ್ಮಿಯಿದ್ದರೆ ದಿನವೊಂದಕ್ಕೆ ನಾಲ್ಕು ಬೋರ್ ವೆಲ್ ಗಳನ್ನೂ ಕೂಡ ನಾವು ಕೊರೆಸಬಹುದು. ಆದರೆ ಮಣ್ಣು ಸಡಿಲವಾಗಿಲ್ಲದಿದ್ದರೆ ದಿನಕ್ಕೆ ಸಾವಿರ ಅಡಿಗಳನ್ನು ತಲುಪುವುದೂ ಕೂಡ ಕಷ್ಟ'', ಎನ್ನುತ್ತಾರೆ ವೈಯಪುರಿ.
ರಿಗ್ ಗಳನ್ನು ಹೊತ್ತಿರುವ ಪ್ರತೀ ಲಾರಿಯ ಜೊತೆಗೂ ಕಾರ್ಮಿಕರನ್ನು ಮತ್ತು ಇತರೆ ಉಪಕರಣಗಳನ್ನು ಹೊತ್ತ ಮತ್ತೊಂದು ಲಾರಿಯು ಸಾಗುತ್ತಿರುತ್ತದೆ. ಇವರ ತಂಡವೊಂದರಲ್ಲಿ ಸುಮಾರು 20 ಸದಸ್ಯರಿರುತ್ತಾರೆ. ಒಬ್ಬ ಮ್ಯಾನೇಜರ್, ಇಬ್ಬರ್ ಡ್ರಿಲ್ಲರ್ ಗಳು, ಇಬ್ಬರು ಸಹಾಯಕರು, ಇಬ್ಬರು ವಾಹನಚಾಲಕರು, ಒಬ್ಬ ಅಡುಗೆಯವನು ಮತ್ತು ಹನ್ನೆರಡು ಮಂದಿ ಕಾರ್ಮಿಕರು... ಹೀಗೆ ತಂಡವು ಸಾಮಾನ್ಯವಾಗಿ ಈ ರೀತಿಯಲ್ಲಿರುತ್ತದೆ. ಒಂದು ರೀತಿಯಲ್ಲಿ ಇವರೆಲ್ಲರೂ ಪ್ಯಾನ್-ಇಂಡಿಯನ್ ಪರಿಕಲ್ಪನೆಗೊಂದು ಹೊಸ ಆಯಾಮವನ್ನೇ ನೀಡುತ್ತಿದ್ದಾರೆ. ತಮಿಳುನಾಡಿನ ರಿಗ್ ಆಪರೇಟರುಗಳು ಭಾರತದ ಬಹುತೇಕ ರಾಜ್ಯಗಳಲ್ಲಿ ತಮ್ಮ ಏಜೆಂಟರುಗಳನ್ನಿಟ್ಟುಕೊಂಡಿದ್ದಾರೆ. ಕಾರ್ಮಿಕರಲ್ಲಿ ಹೆಚ್ಚಿನವರು ಬಿಹಾರ, ಒರಿಸ್ಸಾ, ಛತ್ತೀಸ್ ಗಢ್ ಮತ್ತು ಝಾರ್ಖಂಡ್ ಮೂಲದವರಾದರೆ ಬಹಳ ಕಮ್ಮಿ ಸಂಖ್ಯೆಯಲ್ಲಿರುವವರು ತಮಿಳುನಾಡಿನ ಕಾರ್ಮಿಕರು. ಇನ್ನೂರು ರೂಪಾಯಿಗಳ ದಿನಗೂಲಿ ಮತ್ತು ಮೂರುಹೊತ್ತಿನ ಊಟವೇ ಇವರಿಗೆ ಸಿಗುವ ಸೌಲಭ್ಯ. ಆದರೆ ಈ ಕೆಲಸಗಳು ವರ್ಷದ ಬಹಳಷ್ಟು ತಿಂಗಳುಗಳ ಕಾಲ ನಿರಂತರವಾಗಿ ನಡೆಯುತ್ತಿರುತ್ತವೆ ಎಂಬುದೂ ಕೂಡ ಸತ್ಯ.
ಹಾಗೆ ನೋಡಿದರೆ ಈ ಕೆಲಸವು ಬೇಡುವ ಶ್ರಮ ಹೆಚ್ಚು. ಹೀಗಾಗಿ ದರವೂ ಕೂಡ ಶ್ರಮಕ್ಕೆ ತಕ್ಕಂತೆಯೇ ಬದಲಾಗುತ್ತದೆ. ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ನೆಲವು ಅದೆಷ್ಟು ಗಟ್ಟಿಯಾಗಿರುತ್ತದೆಂದರೆ ಗಂಟೆಯೊಂದಕ್ಕೆ 80 ಅಡಿಗಳಷ್ಟು ಆಳಕ್ಕೆ ಹೋದರೆ ಅದೇ ಹೆಚ್ಚು ಎಂಬಂತಿರುತ್ತಿದೆ. ಇಲ್ಲಿ ಅಡಿಯೊಂದಕ್ಕೆ 75 ರೂಪಾಯಿಗಳ ದರವನ್ನು ಲೆಕ್ಕ ಹಿಡಿಯುತ್ತಾರೆ. ಅಂದರೆ ದಿನವೊಂದಕ್ಕೆ 1000 ಅಡಿಗಳಷ್ಟು ಆಳವನ್ನು ತಲುಪಿದರೆ 75000 ರೂಪಾಯಿಗಳ ಆದಾಯವು ದಕ್ಕುತ್ತದೆ. ಸಡಿಲ ಮಣ್ಣಿರುವ ಪ್ರದೇಶಗಳಲ್ಲಿ ವೈಯಪುರಿಯವರು ಹೇಳುವಂತೆ ಗಂಟೆಯೊಂದಕ್ಕೆ ನೂರಿಪ್ಪತ್ತು ಅಡಿಗಳಿಗೂ ಹೆಚ್ಚಿನ ಆಳವನ್ನು ತಲುಪುವುದು ಸುಲಭ. ಇಂಥಾ ಪ್ರದೇಶಗಳಲ್ಲಿ ಅಡಿಯೊಂದಕ್ಕೆ 56 ರೂಪಾಯಿಗಳಷ್ಟಿನ ದರವನ್ನು ಇವರುಗಳು ತೆಗೆದುಕೊಳ್ಳುತ್ತಾರಂತೆ. ಆದರೂ ದಿನವೊಂದಕ್ಕೆ 1300 ಅಡಿಗಳಷ್ಟು ಆಳಕ್ಕಿಳಿದರೆ 73000 ರೂಪಾಯಿಗಳಷ್ಟು ಆದಾಯವಂತೂ ಸಿಕ್ಕೇಸಿಗುತ್ತದೆ. ಅಂದರೆ ಕೇವಲ ಇನ್ನೂರು ದಿನಗಳ ಕಾಲ ಕೆಲಸವನ್ನು ಮಾಡಿದರೂ (ಸಾಮಾನ್ಯವಾಗಿ ಇದಕ್ಕಿಂತ ಹೆಚ್ಚೇ ದಿನಗಳ ಕಾಲದ ಕೆಲಸವು ಇವರಿಗಿರುತ್ತದಂತೆ) ಆದಾಯವು ಸುಮಾರು ಒಂದೂವರೆ ಕೋಟಿಯಷ್ಟಾಗುತ್ತದೆ ಅನ್ನುವುದು ದಿಟ.
ತಿರುಚೆಂಗೋಡ್ ಹಳ್ಳಿ ಮತ್ತು ತಾಲೂಕಿನಲ್ಲಿ ಒಟ್ಟು ಎಷ್ಟು ರಿಗ್ ಗಳಿರಬಹುದು? 5000 ಕ್ಕಿಂತ ಹೆಚ್ಚೇನಿಲ್ಲ ಅನ್ನುತ್ತಿದ್ದಾರೆ ಪಿ.ಆರ್.ಡಿ ಸಂಸ್ಥೆಯ (ಬೋರ್ ವೆಲ್ ಕೊರೆಸುವ ಮತ್ತು ರಿಗ್ ಗಳನ್ನು ಸರಬರಾಜು ಮಾಡುವ ದೊಡ್ಡ ಸಂಸ್ಥೆ) ವ್ಯವಸ್ಥಾಪಕ ನಿರ್ದೇಶಕರಾದ ಟಿ.ಟಿ. ಪರಂಥಾಮನ್. ತಿರುಚೆಂಗೋಡ್ ಲಾರಿ ಮಾಲೀಕರ ಅಸೋಸಿಯೇಷನ್ನಿನ ಅಧ್ಯಕ್ಷರೂ, ಸ್ವತಃ ರಿಗ್ ಸಂಸ್ಥೆಯೊಂದರ ಮಾಲೀಕರೂ ಆದ ಎನ್.ಪಿ. ವೇಲುರವರು ಹೇಳುವ ಪ್ರಕಾರ ಈ ಸಂಖ್ಯೆ ಸುಮಾರು 7000. ಇನ್ನು ಇತರ ಆಪರೇಟರುಗಳು ಒತ್ತಿ ಹೇಳುವ ಪ್ರಕಾರ ಈ ಸಂಖ್ಯೆ ಸುಮಾರು 20000 ಕ್ಕೂ ಹೆಚ್ಚು. ಹಾಗೆ ನೋಡಿದರೆ ವಿವಿಧ ಹಂತಗಳಲ್ಲಿ ಇವರೆಲ್ಲರೂ ಹೇಳುವ ಸಂಖ್ಯೆಗಳು ತಕ್ಕಮಟ್ಟಿಗೆ ಸರಿಯಿರಬಹುದು. ಈ ಉದ್ಯಮದಲ್ಲಿ ತೊಡಗಿರುವ ನುರಿತರೊಬ್ಬರು ಹೇಳುವ ಪ್ರಕಾರ ತಿರುಚೆಂಗೋಡ್ ನಲ್ಲೇ ಸಾಕಷ್ಟು ಸಂಖ್ಯೆಯಲ್ಲಿ ರಿಗ್ ಗಳು ಮತ್ತು ರಿಗ್ ಮಾಲೀಕರಿದ್ದಾರೆ. ಆದರೆ ಬಹಳಷ್ಟು ರಿಗ್ ಗಳನ್ನು ಬೇರೆಡೆಗಳಲ್ಲಿ ನೋಂದಾಯಿಸಲಾಗಿದೆ. ತೆರಿಗೆಯ ಲೆಕ್ಕಾಚಾರಗಳೂ ಇವುಗಳ ಹಿಂದಿರುತ್ತವೆ ಎನ್ನುತ್ತಾರೆ ಆತ.
ಇತ್ತ ಗ್ರಾಮೀಣ ರಾಜಸ್ಥಾನದಂತಹ ದೂರದೂರದ ಪ್ರದೇಶಗಳಿಂದ ರಿಗ್ ಆಪರೇಟರ್ ಗಳು ಮರಳಿ ಬರುತ್ತಿದ್ದಾರೆ. ಒಬ್ಬನಂತೂ ಜಮ್ಮುವಿನವರೆಗೆ ಹೋಗಿ ಬೋರ್ ವೆಲ್ ಕೊರೆದು ಬಂದಿದ್ದಾನೆ. ವರ್ಷದ ಎರಡರಿಂದ ಮೂರು ತಿಂಗಳುಗಳ ಕಾಲವನ್ನು ರಿಗ್ ಗಳ ಸರ್ವೀಸಿಂಗ್ ಗೆಂದು ಇಡಲಾಗುತ್ತದೆಯಂತೆ. ಸಾಮಾನ್ಯವಾಗಿ ಮಳೆಗಾಲವೇ ಇದಕ್ಕೆ ಅತ್ಯುತ್ತಮವಾದ ಅವಧಿ.
ಕೊರೆಯಲಾಗುವ ಬೋರ್ ವೆಲ್ ಗಳ ಸರಾಸರಿ ಆಳವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಾ ಹೋಗುತ್ತದೆ ಎನ್ನುತ್ತಾರೆ ವೇಲು. ಈತ ಹೇಳುವ ಪ್ರಕಾರ ಕರ್ನಾಟಕದಲ್ಲಿ ಸರಾಸರಿ ಆಳವು 1400 ಅಡಿಗಳಷ್ಟಾಗುತ್ತದಂತೆ. ತಮಿಳುನಾಡಿನಲ್ಲಿ ಇದಕ್ಕಿಂತ ಕೊಂಚ ಕಮ್ಮಿ. 1970 ರಲ್ಲಿ ಬಂದ ಭೀಕರ ಬರಗಾಲವು ಇದಕ್ಕೆ ಕಾರಣ ಎನ್ನುವುದು ಈತನ ಅಭಿಪ್ರಾಯ. ಹೀಗೆ ಈ ಉದ್ಯಮದಲ್ಲಿರುವ ಲಾಭವನ್ನು ಮನಗಂಡು ವಿವಿಧ ರೈತರ ಗುಂಪುಗಳು ಮತ್ತು ಬಾವಿಗಳನ್ನು ತೋಡುತ್ತಿದ್ದ ರೈತರು ಸಂಪನ್ಮೂಲಗಳನ್ನು ಹೇಗೋ ಕ್ರೋಢೀಕರಿಸಿ ರಿಗ್ ಗಳನ್ನು ಖರೀದಿಸಿದ್ದಾರೆ (ಇಂದಿಗೂ ಮೂರನೇ ಒಂದರಷ್ಟು ಭಾಗದ ರಿಗ್ ಗಳಿಗೆ ಇಂಥವರೇ ಮಾಲೀಕರು).
``ಆಗೆಲ್ಲಾ ನೂರಿನ್ನೂರು ಅಡಿಗಳಿಗಿಂತ ಹೆಚ್ಚು ಆಳಕ್ಕೆ ನಾವು ಹೋಗುತ್ತಿರಲಿಲ್ಲ. ಅಷ್ಟರಲ್ಲೇ ನಮಗೆ ನೀರು ಸಿಗುತ್ತಿತ್ತು. ಹೆಚ್ಚೆಂದರೆ 300. ಈ ಆಳಗಳು ತೀರಾ ಹೆಚ್ಚಾಗಿದ್ದು ಇತ್ತೀಚಿನ ಐದು ವರ್ಷಗಳಲ್ಲೇ'', ಎನ್ನುತ್ತಿದ್ದಾರೆ ವೇಲು.
ಈ ಪಟ್ಟಣದ ರಿಗ್ ಮಾಲೀಕರ ಕಥೆಗಳು ಕೊಂಚ ಗೊಂದಲಮಯವಾಗಿ ಕಂಡರೂ ಅಚ್ಚರಿಯಿಲ್ಲ. ಇವರಿಂದಾಗಿ ತಿರುಚೆಂಗೋಡ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯೂ, ಸಂಪತ್ತೂ ಹರಿದುಬಂದಿದೆ. ಇವರಲ್ಲಿ ಬಹಳಷ್ಟು ಅನಕ್ಷರಸ್ಥ ರೈತರು 70 ರ ದಶಕದಲ್ಲಿ ಚಿಕ್ಕ ಚಿಕ್ಕ ಗುಂಪುಗಳನ್ನು ಕಟ್ಟಿಕೊಂಡು ರಿಗ್ ಗಳನ್ನು ಖರೀದಿಸಲು ಕಷ್ಟಪಟ್ಟವರು. ತಮ್ಮ ಬಡತನವನ್ನು ಈ ಮೂಲಕವಾದರೂ ಕಳೆದುಕೊಳ್ಳಲು ಶ್ರಮಿಸಿದವರು (ತಮಿಳುನಾಡಿನ ಕೊಯಮತ್ತೂರು, ಕರೂರು ಮತ್ತು ತಿರುಪ್ಪೂರುಗಳನ್ನೊಂಡ ಈ ಒಂದಿಡೀ ಭಾಗವು ಉದ್ಯಮಶೀಲತೆಯನ್ನು ಸಾಧಿಸಿದವರ ಸ್ವಾರಸ್ಯಕರ ಇತಿಹಾಸವನ್ನೊಳಗೊಂಡಿದೆ). ಇವರು ರಿಗ್ ಗಳ ಬೇಡಿಕೆಯು ದೇಶದ ಯಾವ ಮೂಲೆಯಲ್ಲಿದ್ದರೂ ತಕ್ಷಣ ಸ್ಪಂದಿಸುತ್ತಾರೆ.
ಆದರೆ ಈ ಪ್ರಕ್ರಿಯೆಗಳಿಂದ ದೊಡ್ಡ ಮಟ್ಟಿನ ಹೊಡೆತವನ್ನು ತಿಂದಿರುವ ಅಂತರ್ಜಲದ ಮಟ್ಟದ ಬಗ್ಗೆಯೂ ನಾವು ಹೇಳಲೇಬೇಕು. ಅಂತರ್ಜಲದ ಮಿತಿಮೀರಿದ ದುರ್ಬಳಕೆಯು ನೀರಿನ ಮಟ್ಟವನ್ನು ದೇಶದೆಲ್ಲೆಡೆ ಗಂಭೀರ ಪ್ರಮಾಣದಲ್ಲಿ ಇಳಿಸಿಬಿಟ್ಟಿದೆ. ಒಸ್ಮಾನಾಬಾದಿನ ಜಿಲ್ಲಾಧಿಕಾರಿಯವರು ನಮಗೆ ಮರಾಠಾವಾಡಾದಲ್ಲಿ ಈ ಮಾರ್ಚ್ ನಲ್ಲಿ (2013) ಹೇಳಿರುವ ಪ್ರಕಾರ ಅವರ ಪ್ರದೇಶದಲ್ಲಿ ನೀರಿನ ಮಟ್ಟವು ಸರಾಸರಿ ಮಟ್ಟಕ್ಕಿಂತ ಐದು ಮೀಟರುಗಳಷ್ಟು ಇಳಿದಿದೆಯಂತೆ. ತಮಿಳುನಾಡಿನ ಕೇವಲ ಒಂದು ಭಾಗದಿಂದ ಬಂದ ಸುಮಾರು 10000 ರಿಗ್ ಗಳು ಸರಾಸರಿ 1000 ಅಡಿಗಳಷ್ಟು ಆಳವನ್ನು ಭಾರತದಾದ್ಯಂತ ಒಟ್ಟಾರೆಯಾಗಿ ತಲುಪಿದರೆ ಅದು ಬರೋಬ್ಬರಿ ಒಂದು ಕೋಟಿ ಅಡಿಗಳಷ್ಟಾಗುತ್ತದೆ. ಇನ್ನು ಕೇವಲ ಇನ್ನೂರು ದಿನಗಳ ಕಾಲ ಈ ಕೆಲಸವು ನಡೆದರೂ ಸುಮಾರು ಎರಡು ಶತಕೋಟಿ ಅಡಿಗಳಷ್ಟು ಆಳವನ್ನು ಈ ಯಂತ್ರಗಳು ಕೊರೆದಂತಾಗುತ್ತದೆ. ಇದು ನಿಜಕ್ಕೂ ಮಿತಿಮೀರಿದ ಹಂತ. ನೀರು ಸಿಕ್ಕದ ಕೆಲ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೂ ಸಹ ಕೊರೆದು ಹೊರತೆಗೆಯಲಾಗುತ್ತಿರುವ ಅಂತರ್ಜಲದ ನೀರಿನ ಮಟ್ಟವು ನಿಜಕ್ಕೂ ಭಾರೀ ಪ್ರಮಾಣದ್ದು.
ತಿರುಚೆಂಗೋಡ್ ನ ರಿಗ್ ಆಪರೇಟರ್ ಗಳು ದೇಶದ ಅಭಿವೃದ್ಧಿಯತ್ತ ಈ ರೀತಿಯಾಗಿ ತನ್ನ ಕೊಡುಗೆಯನ್ನು ನೀಡಿದರು ಎಂದು ಹೇಳುವುದು ಕಷ್ಟ. ಇನ್ನು ಈ ನಿಟ್ಟಿನಲ್ಲಿ ಅವರ ಮೇಲೆ ತಪ್ಪು ಹೊರಿಸುವುದೂ ಕೂಡ ಕಷ್ಟವೇ. ಯಾವುದೇ ಇತಿಮಿತಿಗಳಿಲ್ಲದ ಅಂತರ್ಜಲದ ದುರ್ಬಳಕೆಯನ್ನೇನೂ ಇವರುಗಳು ಹೇರಿರಲಿಲ್ಲ. ಅಲ್ಲದೆ ಇವರುಗಳು ಈ ಉದ್ಯಮದಲ್ಲಿ ಸಿಂಹಪಾಲನ್ನು ಹೊಂದಿದ್ದರೂ ಇತರ ಆಪರೇಟರುಗಳೂ ಕೂಡ ದೇಶದ ವಿವಿಧ ಭಾಗಗಳಲ್ಲಿದ್ದಾರೆ. ರಿಗ್ ಗಳನ್ನು ಇತರೆ ಉದ್ದೇಶಗಳಿಗೆ ಬಳಸಬಹುದಾದರೂ ಅವುಗಳಿಗೆ ಹೆಚ್ಚಿನ ಬೇಡಿಕೆಯಿರುವುದು ಬೋರ್ ವೆಲ್ ಗಳಿಗಾಗಿಯೇ. ಮತ್ತು ಈ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿರುವುದು ಎಚ್ಚರಿಕೆಯ ಗಂಟೆಯನ್ನು ಬಡಿಯುತ್ತಿದೆ (ಏಕೆಂದರೆ ಅಂತರ್ಜಲವು ದೇಶದ ಮೂರನೇ ಎರಡರಷ್ಟಿನ ಭಾಗವನ್ನು ನೀರಾವರಿ ಬಳಕೆಗಾಗಿಯೂ, ನಾಲ್ಕನೇ ಐದರಷ್ಟಿನ ಭಾಗವನ್ನು ಕುಡಿಯುವ ನೀರಿಗಾಗಿಯೂ ಇರುವ ಮೂಲವೂ ಹೌದು). ಸದ್ಯದ ಪರಿಸ್ಥಿತಿಯಲ್ಲಂತೂ ಸಾಮಾಜಿಕ ನೆಲೆಗಟ್ಟಿನಲ್ಲಿ ಅತ್ಯವಶ್ಯಕವಾಗಿರುವ ಇವುಗಳ ನಿಯಂತ್ರಣವು ಕಷ್ಟಸಾಧ್ಯವೆಂಬಂತಾಗಿದೆ.
ನಿಮ್ಮ ಆಸುಪಾಸಿನಲ್ಲೇ ಅದೆಷ್ಟು ಯಂತ್ರಗಳು ಕೆಲಸ ಮಾಡುತ್ತಿವೆ ನೋಡಿ ಎಂದು ಈ ಉದ್ಯಮದಲ್ಲಿ ತೊಡಗಿಕೊಂಡಿರುವ ಸ್ಥಳೀಯ ನುರಿತನೊಬ್ಬನಲ್ಲಿ ಹೇಳಿದೆ. ``ಹೇಳಿಕೊಳ್ಳುವಷ್ಟು ನೀರೇನೂ ಇಲ್ಲಿ ಉಳಿದಿಲ್ಲ. ಪಕ್ಕದ ಇರೋಡ್ ನಲ್ಲಿ ನಾವು 1400 ಅಡಿಗಳಷ್ಟು ಆಳವನ್ನು ನಾವೀಗ ಕೊರೆಯುತ್ತಿದ್ದೇವೆ'', ಎಂದ ಆತ.
ಈ ಲೇಖನವು ` ದಿ ಹಿಂದೂ ' ಪತ್ರಿಕೆಯಲ್ಲಿ ಜುಲೈ 28, 2013 ರಂದು ಪ್ರಕಟವಾಗಿದೆ .
ಈ ಲೇಖನವು ಪಿ. ಸಾಯಿನಾಥ್ ರವರಿಗೆ `ವಲ್ರ್ಡ್ ಮೀಡಿಯಾ ಸಮ್ಮಿಟ್ ಗ್ಲೋಬಲ್ ಅವಾರ್ಡ್ ಫಾರ್ ಎಕ್ಸಲೆನ್ಸ್' ಪುರಸ್ಕಾರವನ್ನು (2014) ತಂದುಕೊಟ್ಟ ಸರಣಿಬರಹದ ಒಂದು ಭಾಗ.