ಉದ್ಯೋಗಿಗಳ ಚಿಕ್ಕ ಮಕ್ಕಳಿಗಾಗಿ ತನ್ನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಚಿತ್ರಕಲೆ ಸ್ಪರ್ಧೆಗಾಗಿ ಚಿತ್ರವನ್ನು ಪೂರ್ಣಗೊಳಿಸಲು ಅವಳು ತನ್ನ ಪುಟ್ಟ ಸೋನುವಿಗೆ ಸಹಾಯ ಮಾಡುತ್ತಿದ್ದಳು. "ನನ್ನ ಕನಸಿನ ಭಾರತ" ಶೀರ್ಷಿಕೆಯಡಿ ತಮ್ಮ ಚಿತ್ರಗಳನ್ನು ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಸೋನು ತನ್ನ ಚಿತ್ರವನ್ನು ಪೂರ್ಣಗೊಳಿಸಲು ಹೊರಟಿದ್ದಳು. "ಅಮ್ಮಾ, ಬಾ, ದಯವಿಟ್ಟು ನನಗೆ ಚಿತ್ರ ಬಿಡಿಸಲು ಸಹಾಯ ಮಾಡು,” ಎನ್ನುವ ಮಗಳ ಅವಿರತ ವಿನಂತಿಗಳು ಇಲ್ಲದೆ ಹೋಗಿದ್ದರೆ... ಅವಳು ಇಂದು ಬೆಳಿಗ್ಗೆ ಬಣ್ಣಗಳನ್ನು ತುಂಬುವ ಮನಸ್ಥಿತಿಯಲ್ಲಿರಲಿಲ್ಲ. ಅವಳು ನಿಜವಾಗಿಯೂ ಕೆಲಸ ಮಾಡುವಂತೆ ನಟಿಸುತ್ತಾ ಸುದ್ದಿಯೊಂದರೊಳಗೆ ಸಿಕ್ಕಿಹಾಕಿಕೊಂಡಿದ್ದಳು. ಆದರೆ ಒಲ್ಲದ ಮನಸ್ಸಿನಿಂದ ಅವಳು ತನ್ನ ಪುಟ್ಟ ಮಗುವಿನ ಹತ್ತಿರ ಹೋದಳು.
ಮಗುವನ್ನು ಮಡಿಲಿನಲ್ಲಿ ಕೂರಿಸಿಕೊಳ್ಳುತ್ತಿದ್ದಂತೆ ಅದರ ಮುಖದಲ್ಲೊಂದು ಹಿತವಾದ ನಗು ಬೆಳಕಿನ ಕೋಲಿನಂತೆ ಬೆಚ್ಚಗೆ ಬಳುಕಿತು. “ನೋಡಮ್ಮಾ,” ಎನ್ನುತ್ತಾ ತನ್ನ ಚಿತ್ರವನ್ನು ಅಮ್ಮನಿಗೆ ತೋರಿಸಿದಳು. ಟಿವಿಯಲ್ಲಿ, ಧರ್ಮ ಸನ್ಸದ್ ಒಂದರ ವಿಡೀಯೋ ವೈರಲ್ ಆಗಿತ್ತು. ಅದರಲ್ಲಿ ಕೇಸರಿ ಉಡುಪನ್ನು ಧರಿಸಿದ್ದ ಮಹಿಳೆಯೊಬ್ಬಳು ದ್ವೇಷವನ್ನು ಕಾರುತ್ತಿದ್ದಳು. ಇತ್ತ ಮಗಳು ಬರೆದ ಚಿತ್ರದಲ್ಲಿ ಆರೇಳು ಬಿಳಿ ಬಣ್ಣದ ಮಾನವ ಆಕೃತಿಗಳು ಸುಂದರವಾದ ಹಿನ್ನೆಲೆಯಲ್ಲಿ ಎದ್ದು ಕಾಣುತ್ತಿದ್ದವು. ಪುರುಷರು, ಮಹಿಳೆಯರು, ಮಕ್ಕಳು, ಸಂಜೆಯ ಆಕಾಶದ ಕೇಸರಿ ಮತ್ತು ಕೆಳಗೆ ಪಚ್ಚೆ ಹಸಿರಿನ ಹಿನ್ನೆಲೆಯಲ್ಲಿ ನಿಂತಿದ್ದರು. ಇವೆರಡರಲ್ಲಿ ಅವಳು ಯಾವುದನ್ನು ನಿರ್ಲಕ್ಷ್ಯ ಮಾಡಬೇಕೆಂದು ತಿಳಿಯದೆ ಗೊಂದಲದಲ್ಲಿದ್ದಳು.
ಬಣ್ಣಗಳು ಹಿತವೆನ್ನಿಸುತ್ತಿದೆಯೋ ಅಥವಾ ಪದಗಳು ತುಂಬಾ ಹಿಂಸಾತ್ಮಕವಾಗಿವೆಯೇ ಎನ್ನುವುದು ಅವಳಿಗೆ ತಿಳಿಯುತ್ತಿರಲಿಲ್ಲ. ಆದರೆ ಅವಳು ತನ್ನ ತೇವವಾದ ಕಣ್ಣುಗಳನ್ನು ಈ ಸಣ್ಣ, ಎಲ್ಲಾ ಬಿಳಿ ಮಾನವ ಆಕೃತಿಗಳ ಮೇಲೆ ಕೇಂದ್ರೀಕರಿಸಲು ಹೆಣಗಾಡುತ್ತಿದ್ದಳು, ಅವುಗಳಲ್ಲಿ ಪ್ರತಿಯೊಂದೂ ಧಾರ್ಮಿಕ ಗುರುತುಗಳನ್ನು ಹೊಂದಿದ್ದವು – ಬಿಳಿ ಟೋಪಿ, ಸ್ಕಾರ್ಫ್, ಕುತ್ತಿಗೆಯಲ್ಲಿ ಹೊಳೆಯುವ ಶಿಲುಬೆ, ಸಿಂಧೂರ ತುಂಬಿದ ಬೈತಲೆ, ರುಮಾಲು... ಪ್ರತಿಯೊಂದೂ ಅತ್ಯಂತ ಮುಗ್ಧ ನಗು ಹೊಂದಿದ್ದವು ಮತ್ತು ಚಾಚಿದ ಕೈಗಳನ್ನು ಎರಡೂ ಬದಿಗಳಲ್ಲಿ ಇನ್ನೊಬ್ಬ ಅಪರಿಚಿತರ ಕೈಗಳನ್ನು ಹಿಡಿದುಕೊಂಡಿವೆ. ಅವಳ ಕಣ್ಣುಗಳು ತುಂಬಿ ಬಂದಂತೆಲ್ಲಾ ಕೇಸರಿ ಮತ್ತು ಹಸಿರು ಮತ್ತು ಬಿಳಿ ಎಲ್ಲವೂ ಸ್ವಲ್ಪ ಮಸುಕಾಗಿ ತೋರತೊಡಗಿತು...
ನಾವು ಸುಮ್ಮನಿರುವುದಿಲ್ಲ, ಹೋರಾಡುತ್ತೇವೆ
ಹೌದು ನಾನೋರ್ವ
ಹಿಂದೂ
ಇಲ್ಲಿನ
ಬಹುಸಂಖ್ಯಾತ ಹಿಂದೂಗಳಂತೆ.
ನಾನೋರ್ವ
ಹಿಂದೂ, ನನಗೆ ಹಿಂಸೆಯಲ್ಲಿ ನಂಬಿಕೆಯಿಲ್ಲ
ನಾವು
ಭಯೋತ್ಪಾನೆ ಪ್ರಚೋದಿಸುವವರಲ್ಲ.
ನಾನು ಭಯೋತ್ಪಾದನೆಯನ್ನು ಪ್ರಚೋದಿಸುವುದಿಲ್ಲ.
ನಾನು ಹಿಂದೂ,
ನಾನು ಮುಸಲ್ಮಾನ್,
ನಾನು ಸಿಖ್ ಮತ್ತು ನಾನು ಕ್ರಿಶ್ಚಿಯನ್ ಕೂಡ
ನಾನು ಭಾರತದ ಸಂವಿಧಾನವನ್ನು ಎತ್ತಿ ಹಿಡಿಯುತ್ತೇನೆ-
ಮತ್ತು ಅದರ
ಜೀವಸೆಲೆ ಬಾಡದಂತೆ ನೋಡಿಕೊಳ್ಳುತ್ತೇನೆ.
ನೀವು ಹಿಂದುತ್ವದ ಕುರಿತು ಮಾತನಾಡುತ್ತೀರಿ.
ʼಅವರನ್ನು ಕೊಲ್ಲಿರಿ, ಕೊಲ್ಲಿರಿʼ ಎಂದು ಕೂಗುತ್ತೀರಿ.
ನಾವು ಹಿಂದೂ-ಮುಸ್ಲಿಂ ಸಿಖ್-ಕ್ರಿಶ್ಚಿಯನ್
ಒಟ್ಟಾಗಿ ನಿಲ್ಲುತ್ತೇವೆ
ನೀವು ಸಾವಿರಾರು
ಜನರು ಬೀದಿಗಳಲ್ಲಿ ತಿರುಗಾಡಬಹುದು
ಗೋಡ್ಸೆಯ ನೆರಳಿನಡಿಯಲ್ಲಿ
ನಾವು ಲಕ್ಷಾಂತರ
ಜನರು ಗಾಂಧಿಯಂತೆ ನಡೆಯುತ್ತೇವೆ
ಮತ್ತು ಅಲ್ಲಿಯೇ ನಿಮ್ಮನ್ನು ತಡೆಯುತ್ತೇವೆ.
ನೀವು ದ್ವೇಷ ಮತ್ತು ಹಿಂಸೆಯ ಘೋಷಣೆಗಳನ್ನು ಕೂಗಬಹುದು
ನಾವು ಪ್ರೀತಿಯ ಹಾಡುಗಳನ್ನು ಹಾಡುತ್ತೇವೆ, ನಾವು ಭಾರತೀಯರು
ನೀವು ದ್ವೇಷದ
ದಾಸರಾಗಿದ್ದೀರಿ
ಮತಿಯ ಕೆಡಿಸಿಕೊಂಡಿರುವಿರಿ
ಆಯುಧಗಳನ್ನು ಹಿಡಿದು
ಭಾವೋದ್ರೇಕಗೊಂಡು
ಅಮಾನವೀಯರಾಗಿರುವಿರಿ
ಕೇಸರಿ ವೇಷ
ತೊಟ್ಟು ದುಷ್ಟರಿಗೆ ತಲೆಬಾಗುತ್ತಿರುವಿರಿ.
ನಾವು, ಈ ದೇಶದ ಹಿಂದೂಗಳು
ಹೇಡಿಗಳೂ ಅಲ್ಲ, ಮತಿಹೀನರೂ ಅಲ್ಲ
ನಮ್ಮದು ಭಗತ್
ಸಿಂಗ್. ಅಶ್ಫಾಕ್.
ಸರೋಜಿನಿ. ಕಸ್ತೂರಬಾ ಇವರುಗಳ ಪರಂಪರೆ.
ನಾವೆಂದರೆ ಭಾರತದ
ಸಂವಿಧಾನ
ನಾವೆಂದರೆ ಗೀತೆ, ಕುರಾನ್, ಬೈಬಲ್
ಹೌದು, ನಾವೆಂದರೆ ಗುರು ಗ್ರಂಥ
ಸಾಹಿಬ್ ಕೂಡಾ.
ನಾವು ಜಾತ್ಯತೀತ ಜನರು.
ನೀವು, ಬಲಾಢ್ಯರಿಗೆ ಆಪ್ತರು.
ರಾಮನ ಹೆಸರನ್ನು ಕಿರುಚುತ್ತಾ ಭಯ ಹುಟ್ಟಿಸಿ
ಅದನ್ನೇ ಧರ್ಮ ಎಂದು
ಕರೆಯುವವರು.
ನಾವು ನಮ್ಮ ಮಾನವೀಯತೆಯನ್ನು ಎತ್ತಿಹಿಡಿಯುತ್ತೇವೆ
ಮತ್ತು ಶಾಂತಿಯ ಸ್ತಂಭದ ತುದಿಗೆಯಲ್ಲಿ
ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುತ್ತೇವೆ
ನಾವು ಹೋರಾಡುತ್ತೇವೆ, ಪ್ರತಿಯೊಬ್ಬ ಗೋಡ್ಸೆಯನ್ನೂ ಹಿಮ್ಮೆಟ್ಟಿಸುತ್ತೇವೆ.
ನಾವು ನಿಮ್ಮನ್ನು ಮುಂದೆ ಸಾಗಲು ಬಿಡುವುದಿಲ್ಲ.
ನಾವು ಹೋರಾಡುತ್ತೇವೆ, ಮೌನವಾಗಿರುವುದಿಲ್ಲ,
ನಾವು ಹೋರಾಡುತ್ತೇವೆ, ನಾವು ಗೆಲ್ಲುತ್ತೇವೆ.
ನಾವು ಹೋರಾಡುತ್ತೇವೆ. ನಾವು ಮೌನವಾಗಿರುವುದಿಲ್ಲ
ಅನುವಾದ:
ಶಂಕರ. ಎನ್.
ಕೆಂಚನೂರು