ಮಾಧ್ಯಮದಲ್ಲಿ ದಿನದಿಂದ ದಿನಕ್ಕೆ ಬಿರುಕುಗಳು ದೊಡ್ಡದಾಗುತ್ತಲೇ ಇತ್ತು. ಪ್ರತಿದಿನ ಅವಳು ಚಮೋಲಿ ಜಿಲ್ಲೆಯಲ್ಲಿರುವ ತನ್ನ ಪಟ್ಟಣದ ಕುರಿತು ದಿನವೂ ಬದಲಾಗುವ ಸಂಖ್ಯೆಗಳೊಡನೆ ಹೊಸ ಹೊಸ ಸುದ್ದಿಗಳನ್ನು ಕೇಳುತ್ತಲೇ ಇದ್ದಳು. ಪಟ್ಟಣದಲ್ಲಿ ಹೊಸದಾಗಿ ಮೂಡುತ್ತಿರುವ ಬಿರುಕುಗಳು ಮತ್ತು ಪ್ರತಿಭಟನೆಗಳನ್ನು ನೋಡಲು ಮಾಧ್ಯಮಗಳು ದಿನೇದಿನೇ ಮುಗಿಬೀಳುತ್ತಿದ್ದವು. ಕಳೆದ ವಾರ ಊರಿ ಜನರೆಲ್ಲ ಊರು ಬಿಡಬೇಕೆಂದು ಆಡಳಿತ ಹೇಳಿದಾಗ ಅವಳು ಹೊರಬರಲು ನಿರಾಕರಿಸಿ ಪ್ರತಿಭಟಿಸಿದ್ದಳು. ಅವಳು ಹೆದರಿರಲಿಲ್ಲ.

ಮೂಡಿರುವ ಬಿರುಕುಗಳು ಅವಳ ಪ್ರಕಾರ ದ್ವೇಷದ ಸಂಕೇತವಾಗಿತ್ತು. ಪರ್ವತಗಳನ್ನು ಆಕ್ರಮಿಸುವ ಹೊಸ ಯೋಜನೆಗಳು ಮತ್ತು ರಸ್ತೆಗಳು ಕೇವಲ ಆಕ್ರಮಣಗಳಾಗಿರಲಿಲ್ಲ. ಎಲ್ಲೋ ಆಳದಲ್ಲಿ ಇದರ ಹಿಂದೆ ಇನ್ನೇನೋ ಇತ್ತು. ಬಿರುಕು ಮೊದಲೇ ಮೂಡಿತ್ತು ಪ್ರಕೃತಿಯೊಂದಿಗಿನ ಸಂಬಂಧ ಕಡಿದು ಹೋಗಿತ್ತು ಮನುಷ್ಯನಿಗೆ. ಹೊಸ ಕನಸುಗಳ ಬೆನ್ನಟ್ಟಿ ಅವನು ಪ್ರಕೃತಿ ಮಾತೆಗೆ ಬೆನ್ನು ತೋರಿಸಿ ಓಡತೊಡಗಿದ್ದ.ಆ ಭ್ರಮೆಯ ಬೆನ್ನಟ್ಟಿ ಹೋಗಿದ್ದಕ್ಕಾಗಿ ಈಗ ಯಾರನ್ನು ದೂಷಿಸುವುದು?

ಪ್ರತಿಷ್ಟಾ ಪಾಂಡ್ಯ ಅವರ ದನಿಯಲ್ಲಿ ಕವಿತೆಯ ಇಂಗ್ಲಿಷ್‌ ಓದನ್ನು ಆಲಿಸಿ

PHOTO • Labani Jangi

ಬಿರುಕುಗಳು

ಈ ಬಿರುಕು ಒಂದೇ ದಿನ ಮೂಡಿದ್ದಲ್ಲ
ತೆಳ್ಳನೆಯ ಬಿರುಕೊಂದು ಆಳದಲ್ಲಿ ಅಡಗಿತ್ತು
ಅವಳ ಕಪ್ಪು ಕೂದಲುಗಳ ನಡುವೆ ಬಿಳಿಕೂದಲೊಂದು ಅಡಗಿದಂತೆ
ಅಥವಾ ಕಾಯಿಲೆಯ ಚಿಹ್ನೆಯೊಂದು ಕಣ್ಣಿನಾಳದಲ್ಲಿ ಅಡಗಿದಂತೆ.
ಸಣ್ಣ ಬಿರುಕುಗಳು ಹಳ್ಳಿಗಳು, ಬೆಟ್ಟಗಳು, ಕಾಡುಗಳು ನದಿಗಳು
ಇವುಗಳ ನಡುವೆ ಅಡಗಿದ್ದವು ದೂರದಿಂದ ಕಾಣದಂತೆ
ಸ್ವಲ್ಪ ದೊಡ್ಡದಾದ ಬಿರುಕುಗಳು ಕಾಣಿಸಿಕೊಂಡಾಗ,
ಮೆಲ್ಲಗೆ, ಸ್ಥಿರವಾಗಿ, ಅವಳು ಯೋಚಿಸಿದಳು,
ಅವಳು ಅವುಗಳನ್ನು ಸರಿಪಡಿಸಬಲ್ಲಳು -
ಒಂದು ಸಣ್ಣ ಗೋಡೆಯನ್ನು
ಗಾರೆಯಿಂದ ಸರಿಪಡಿಸಿದಂತೆ,
ಒಂದೆರಡು ಮಕ್ಕಳಿಗೆ ಜನ್ಮ ನೀಡಿದಂತೆ
ವಿಷಯಗಳು ಹದಗೆಡದಂತೆ ನೋಡಿಕೊಳ್ಳುವುದೆಂದರೆ.

ಆದರೆ ನಂತರ ದೈತ್ಯ ಬಿರುಕುಗಳು ಕಾಣಿಸಿಕೊಂಡವು,
ಅವಳ ಮುಖವನ್ನು ದಿಟ್ಟಿಸುತ್ತಾ
ಕನ್ನಡಿಯಂತಹ ಗೋಡೆಗಳ ಮೂಲಕ,
ನಾಚಿಕೆಗೇಡಿತನ, ನಿಸ್ಸಂಕೋಚ, ಕ್ಷಮೆ ಅರಿಯದ
ನರಸಿಂಹನ ಕಣ್ಣುಗಳಂತೆ.

ಅವಳಿಗೆ ಅವುಗಳ ಆಕಾರ, ದಿಕ್ಕು ತಿಳಿದಿತ್ತು -
ಸಮತಲ, ಲಂಬ, ಮೆಟ್ಟಿಲುಗಳು,
ಅವು ಬೆಳೆದ ವಿಶೇಷ ಸ್ಥಳಗಳು -
ಇಟ್ಟಿಗೆಗಳ ನಡುವೆ ಗಾರೆಯ ಹಾಸುಗಳು,
ಪ್ಲಾಸ್ಟರ್, ಇಟ್ಟಿಗೆ ಕೆಲಸದ ಮೇಲೆ,
ಅಡಿಪಾಯ ಗೋಡೆಗಳಲ್ಲಿ, ಮತ್ತು ನೋಡುತ್ತಲೇ
ಬಿರುಕು ಮೂಡಿದ್ದು ಕೇವಲ ಜೋಶಿಮಠದಲ್ಲಿ ಮಾತ್ರವೇ ಆಗಿರಲಿಲ್ಲ.
ಸಾಂಕ್ರಾಮಿಕ ರೋಗದಂತೆ ಅವು
ಎಲ್ಲೆಡೆ ಹರಡುತ್ತಿರುವುದನ್ನು ಅವಳು ನೋಡಿದಳು,
ಪರ್ವತಗಳು, ರಾಷ್ಟ್ರ, ಬೀದಿಗಳ ಉದ್ದಕ್ಕೂ,
ಅವಳ ಪಾದಗಳ ಕೆಳಗಿರುವ ಭೂಮಿಯನ್ನು ತಲುಪಿದವು.
ಅವಳ ಕೈಕಾಲುಗಳನ್ನು, ಅವಳ ಆತ್ಮವನ್ನು ಸಹ ಅದು ವ್ಯಾಪಿಸಿತು.

ಈಗ ಎಲ್ಲಿ ಹೋಗುವುದಕ್ಕೂ ಸಾಧ್ಯವಿರಲಿಲ್ಲ
ಬಹಳ ತಡವಾಗಿತ್ತು
ದೇವರುಗಳು ಎದ್ದು ನಡೆದಾಗಿತ್ತು.

ಪ್ರಾರ್ಥನೆ
ಹಳೆಯ ನಂಬಿಕೆಗಳ ಮೊರೆ ಹೋಗಲು
ಈಗ ಹೊತ್ತು ಮೀರಿದೆ
ಉಳಿಸುವ ಪ್ರಯತ್ನಕ್ಕೆ ಹೊತ್ತು ಕೈಮೀರಿದೆʼ
ಈ ಬಿರುಕುಗಳನ್ನು ಸೂರ್ಯನ ಬೆಳಕಿನಿಂದ ತುಂಬಿಸುವುದು ವ್ಯರ್ಥ
ಕರಗಿದ ಶಾಲಿಗ್ರಾಮದಂತೆ
ಅಜ್ಞಾತ ಕ್ರೋಧ, ಆಳವಾಗಿ ಬೇರೂರಿರುವ ದ್ವೇಷ ಎಲ್ಲವನ್ನೂ ನುಂಗುತ್ತಿತ್ತು

ಅವಳ ಮನೆಯ ಹಿಂದಿನ ಕಣಿವೆಯಲ್ಲಿ
ಈ ಶಾಪದ ಬೀಜಗಳನ್ನು ಎಸೆದವರು ಯಾರು?
ಅವಳು ನೆನಪಿಸಿಕೊಳ್ಳಲು ಯತ್ನಿಸಿದಳು.
ಯಾವುದಾದರೂ ಕೀಟಗಳು ಬಳ್ಳಿಯನ್ನು ತಲುಪಿದವೆ?
ಆಕಾಶದಲ್ಲಿ ಅದರ ಬೇರುಗಳಿರಬಹುದೇ?
ಈ ವಿಷಪೂರಿತ ಬಳ್ಳಿಯ ಮೇಲೆ
ಇರಬಹುದಾದ ಅರಮನೆ ಯಾರದ್ದಿರಬಹುದು?
ಅಲ್ಲಿರುವ ದೈತ್ಯ ಭೇಟಿಯಾದರೆ ಅವಳು ಗುರುತಿಸಬಲ್ಲಳೆ?
ಅವಳ ತೋಳುಗಳಲ್ಲಿ ಕೊಡಲಿ ಎತ್ತಿ ಹಿಡಿಯಬಲ್ಲ ಶಕ್ತಿ
- ಈಗಲೂ ಉಳಿದಿದೆಯೇ?
ಮೋಕ್ಷ ಕೊಡಿಸಬಲ್ಲವರನ್ನು ಎಲ್ಲಿಂದ ಹುಡುಕುವುದು?
ದಣಿದ ಅವಳು ಮಲಗಲು ಯತ್ನಿಸುತ್ತಿದ್ದಳು
ಅವಳ ಕಣ್ಣ ಬೊಂಬೆಗಳು ಮೇಲೆ ಕಳೆಗೆ ಆಡುತ್ತಿದ್ದವು
ಒಂದು ಕನಸಿನಂತಹ ಉನ್ಮಾದ ಗಳಿಗೆಯಲ್ಲಿ
ಮಾಂತ್ರಿಕ ಬೀಜದ ಬಳ್ಳಿಗಳು
ಶಿಥಿಲ ಗೋಡೆಯ ಮೇಲೆ ಬೆಳೆಯತೊಡಗಿದ್ದವು

ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

কবি এবং অনুবাদক প্রতিষ্ঠা পান্ডিয়া গুজরাতি ও ইংরেজি ভাষায় লেখালেখি করেন। বর্তমানে তিনি লেখক এবং অনুবাদক হিসেবে পারি-র সঙ্গে যুক্ত।

Other stories by Pratishtha Pandya
Illustration : Labani Jangi

২০২০ সালের পারি ফেলোশিপ প্রাপক স্ব-শিক্ষিত চিত্রশিল্পী লাবনী জঙ্গীর নিবাস পশ্চিমবঙ্গের নদিয়া জেলায়। তিনি বর্তমানে কলকাতার সেন্টার ফর স্টাডিজ ইন সোশ্যাল সায়েন্সেসে বাঙালি শ্রমিকদের পরিযান বিষয়ে গবেষণা করছেন।

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru