"ನನ್ನ ತಂದೆ ನನ್ನ ಬೆರಳುಗಳಿಗೆ ತಂತಿಗಳನ್ನು ಕಟ್ಟಿ ಬೊಂಬೆಗಳನ್ನು ಕುಣಿಸುವುದು ಹೇಗೆ ಎನ್ನುವುದನ್ನು ನನಗೆ ಕಲಿಸಿದರು" ಎಂದು 74 ವರ್ಷದ ಪ್ರೇಮರಾಮ್ ಭಟ್ ಹೇಳುತ್ತಾ ಸುಮಾರು ಆರು ದಶಕಗಳ ಗತಕಾಲವನ್ನು ಸ್ಮರಿಸಿಕೊಳ್ಳುತ್ತಿದ್ದರು.
"ನನಗೆ ಸುಮಾರು ಒಂಬತ್ತು ವರ್ಷ ವಯಸ್ಸಿನವನಾಗಿದ್ದಾಗಿನಿಂದ ಅವರು ಬೊಂಬೆ ಪ್ರದರ್ಶನಗಳನ್ನು ನೀಡಲು ತಾವು ಭೇಟಿ ನೀಡಿದ ವಿವಿಧ ಹಳ್ಳಿಗಳಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು" ಎಂದು ಅವರು ಹೇಳುತ್ತಾರೆ. “ನಾನು ಧೋಲ್ ನುಡಿಸುತ್ತಿದ್ದೆ. ನಂತರ ನಿಧಾನವಾಗಿ ಬೊಂಬೆಯಾಟದಲ್ಲಿ ಆಸಕ್ತಿ ನನಗೆ ಮೂಡಿತು. ನನ್ನ ತಂದೆ ಲಾಲೂರಾಮ್ ಭಟ್ ಅವರು ಅವುಗಳನ್ನು ಚಲನೆ ಮಾಡುವುದು ಹೇಗೆ ಎನ್ನುವುದನ್ನು ನನಗೆ ಕಲಿಸಿದರು, ಇದಾದ ನಂತರ ನಾನು ಸಹ ಬೊಂಬೆಗಳನ್ನು ಆಡಿಸಲು ಪ್ರಾರಂಭಿಸಿದೆ” ಎಂದು ಅವರು ಹೇಳುತ್ತಾರೆ.
ಪ್ರೇಮರಾಮ್ ಪಶ್ಚಿಮ ಜೋಧ್ಪುರದ ಪ್ರತಾಪ್ ನಗರ ಪ್ರದೇಶದ ಫುಟ್ಪಾತ್ನಲ್ಲಿರುವ ಝುಗ್ಗಿಯೊಂದರಲ್ಲಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಜುಗ್ನಿಬಾಯಿ, (70), ಅವರ ಮಗ ಸುರೇಶ್, ಸೊಸೆ ಸುನೀತಾ ಮತ್ತು ಅವರ 3ರಿಂದ 12 ವರ್ಷ ವಯಸ್ಸಿನ ನಾಲ್ಕು ಮಕ್ಕಳು, ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದಾರೆ. ಅವರ ಕುಟುಂಬವು ಭಟ್ ಸಮುದಾಯಕ್ಕೆ ಸೇರಿದೆ (ರಾಜಸ್ಥಾನದಲ್ಲಿ ಒಬಿಸಿ ಎಂದು ಪಟ್ಟಿ ಮಾಡಲಾಗಿದೆ). ಸುಮಾರು 100 ವರ್ಷಗಳ ಹಿಂದೆ ರಾಜ್ಯದ ನಾಗೌರ್ ಜಿಲ್ಲೆಯಿಂದ ಅನೇಕ ಭಟ್ ಕುಟುಂಬಗಳು ವಲಸೆ ಬಂದು ರಾಜಸ್ಥಾನದ ಜೋಧ್ಪುರ, ಜೈಪುರ, ಜೈಸಲ್ಮೇರ್ ಮತ್ತು ಬಿಕಾನೇರ್ನಂತಹ ವಿವಿಧ ನಗರಗಳಲ್ಲಿ ನೆಲೆಸಿದ್ದಾರೆ ಎಂದು ಅವರ ಸಮುದಾಯದ ಹಿರಿಯರು ಹೇಳುತ್ತಾರೆ.
"ನನಗೆ ಗೊಂಬೆ ತಯಾರಿಕೆ ಅಥವಾ ಬೊಂಬೆಯಾಟದಲ್ಲಿ ಯಾವುದೇ ತರಬೇತಿಯಿಲ್ಲ, ನನ್ನ ತಂದೆ ಪ್ರದರ್ಶನವನ್ನು ನೋಡಿಯೇ ನಾನು ಈ ಕಲೆಯನ್ನು ಕಲಿತಿದ್ದೇನೆ" ಎಂದು 39 ವರ್ಷದ ಸುರೇಶ್ ಹೇಳುತ್ತಾರೆ, ಅವರು ಸಹ ಪ್ರೇಮರಾಮ್ ಅವರೊಂದಿಗೆ ಹಳ್ಳಿಗಳಿಗೆ ಹೋಗುತ್ತಿದ್ದರು ಮತ್ತು ಅವರು ಸುಮಾರು 10 ವರ್ಷ ವಯಸ್ಸಿನವರಾಗಿದ್ದಾಗ ಪ್ರದರ್ಶನಗಳಲ್ಲಿ ಸಹಾಯ ಮಾಡಲು ಪ್ರಾರಂಭಿಸಿದರು.ಅವರು ಮನೆಯಲ್ಲಿ ಬೊಂಬೆಗಳನ್ನು ತಯಾರಿಸಲು ನೆರವಾಗುತ್ತಾರೆ, ಮತ್ತು ನಾನು 15 ವರ್ಷ ವಯಸ್ಸಿನವನಾಗಿದ್ದಾಗ ನಾನು ಬೊಂಬೆಗಳನ್ನು ಚೆನ್ನಾಗಿ ಕುಣಿಸುವ ವಿದ್ಯೆಯನ್ನು ಕಲಿತಿದ್ದೇನೆ, ನಾನು ಈಗ ಹಳ್ಳಿಗಳಿಗೆ ಹೋಗಿ ಪ್ರದರ್ಶನಗಳನ್ನು ನೀಡುತ್ತೇನೆ,” ಎಂದು ಅವರು ಹೇಳುತ್ತಾರೆ.
12 ವರ್ಷದ ಅವರ ಮಗ ಮೋಹಿತ್, ಈಗ ಅವರ ಜೊತೆಗಿದ್ದಾನೆ. "ನಮಗೆ ಯಾವುದಾದರೂ ಕೆಲಸ ಸಿಕ್ಕಾಗ, ಮೋಹಿತ್ ನನ್ನೊಂದಿಗೆ ಧೋಲ್ ನುಡಿಸುತ್ತಾನೆ," ಎಂದು ಸುರೇಶ್ ಹೇಳುತ್ತಾರೆ. "ಅವನು ಈಗ 5ನೇ ತರಗತಿಯಲ್ಲಿ ಓದುತ್ತಿದ್ದಾನೆ, ಆದರೆ ಈಗ ಕೊರೊನಾ ಲಾಕ್ಡೌನ್ನಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ.” ಎಂದು ಅವರು ಹೇಳುತ್ತಿದ್ದರು.
ಮತ್ತು ಈಗ ಆ ಕೆಲಸ ಸಿಗುವುದು ಅಪರೂಪ. ದೀರ್ಘಕಾಲದವರೆಗೆ, ರಾಜಸ್ಥಾನದ ಹೋಟೆಲ್ಗಳಲ್ಲಿ ನೆಲೆಸಿರುತ್ತಿದ್ದ ವಿದೇಶಿ ಪ್ರವಾಸಿಗರು ಬೊಂಬೆಗಳ ಮುಖ್ಯ ಪ್ರೇಕ್ಷಕರಾಗಿದ್ದರು. ಅವರಿಗಾಗಿ, ಮೂರು ಜನರ ತಂಡವು ಒಂದು ಗಂಟೆಯ ಅವಧಿಯ ಪ್ರದರ್ಶನವನ್ನು ನೀಡುತ್ತದೆ- ಒಬ್ಬರು ಬೊಂಬೆಗಳನ್ನು ನಿರ್ವಹಿಸಿದರೆ, ಇತರರು ಹಾರ್ಮೋನಿಯಂ ಮತ್ತು ಢೋಲಕ್ ನುಡಿಸುತ್ತಾರೆ. ಈ ಪ್ರದರ್ಶನಗಳು ಸಾಮಾನ್ಯವಾಗಿ ಜಾನಪದದ ಹಾಡುಗಳು ಮತ್ತು ರಾಜಮನೆತನದ ಒಳಸಂಚುಗಳು ಮತ್ತು ಘರ್ಷಣೆಗಳ ನಿರೂಪಣೆಗಳನ್ನು ಚಿತ್ರಿಸುತ್ತದೆ (ಇದರ ಜೊತೆಗಿರುವ ವೀಡಿಯೊವನ್ನು ವೀಕ್ಷಿಸಿ).
ಈ ಪ್ರದರ್ಶನಗಳಿಂದ ಪ್ರತಿ ಪ್ರದರ್ಶಕನಿಗೆ ತಿಂಗಳಿಗೆ ಸುಮಾರು 3-4 ಬಾರಿ 300ರಿಂದ 500 ರೂ.ಸಿಗುತ್ತದೆ. ಲಾಕ್ಡೌನ್ಗಳ ಸಮಯದಲ್ಲಿ ಈ ಆಹ್ವಾನಗಳು ಸ್ಥಗಿತಗೊಳ್ಳುವುದರೊಂದಿಗೆ, ಬೊಂಬೆಯಾಟಗಾರರು ಸಾಂದರ್ಭಿಕವಾಗಿ ಬೀದಿಬದಿಯ ಪ್ರದರ್ಶನಗಳನ್ನು ಅವಲಂಬಿಸಬೇಕಾಗಿದೆ, ಇದರಿಂದಾಗಿ ಪ್ರತಿ ಪ್ರದರ್ಶನಕ್ಕೆ ಕೇವಲ 100-150 ರೂ. ಸಿಗುತ್ತದೆ. ಮತ್ತು ಅವರ ಕೆಲವು ಆದಾಯವು ನೇಯ್ದ ವೆಲ್ವೆಟ್ ವಸ್ತುಗಳ ಮಾರಾಟದಿಂದ ಬರುತ್ತದೆ. (ನೋಡಿ: Jaipur toy makers: stuck under a grass ceiling )
ಸಮುದಾಯವು ಲಾಕ್ಡೌನ್ಗಳ ಸಮಯದಲ್ಲಿ ಪಡಿತರ ಮತ್ತು ಇತರ ಅಗತ್ಯಗಳಿಗಾಗಿ ದತ್ತಿ ಸಂಸ್ಥೆಗಳನ್ನು ಅವಲಂಬಿಸಬೇಕಾಗಿತ್ತು, ಆದರೂ ಈಗ ರಾಜ್ಯಾದ್ಯಂತ ನಿರ್ಬಂಧಗಳನ್ನು ಸರಾಗಗೊಳಿಸುವ ಮೂಲಕ ಮತ್ತೆ ಕೆಲಸವು ನಿಧಾನವಾಗಿ ಹಿಂತಿರುಗುತ್ತಿದೆ.
ಜೋಧ್ಪುರದ ಪ್ರತಾಪ್ ನಗರದ ಫುಟ್ಪಾತ್ಗೆ ಅಡ್ಡಲಾಗಿರುವ ಗುಡಿಸಲಿನಲ್ಲಿ 38 ವರ್ಷದ ಮಂಜು ಭಟ್ ವಾಸಿಸುತ್ತಿದ್ದಾರೆ, ಅವರು ತಮ್ಮ ಪತಿ 41 ವರ್ಷದ ಬನ್ವಾರಿ ಲಾಲ್ ಭಟ್ ಅವರೊಂದಿಗೆ ಪ್ರದರ್ಶನ ನೀಡುವ ಬೊಂಬೆಗಳಿಗೆ ಬಟ್ಟೆಗಳನ್ನು ಹೊಲಿಯುತ್ತಾರೆ ಮತ್ತು ಆಭರಣಗಳನ್ನು ಸಿದ್ದಪಡಿಸುತ್ತಾರೆ.
"ಈ ಕಲೆ ಸಾಯುತ್ತಿದೆ, ಹಿಂದೆ ನಮಗೆ ತಿಂಗಳಿಗೆ 3-4 ಆಟಗಳಿಗೆ ಆಹ್ವಾನ ಬರುತ್ತಿತ್ತು, ಆದರೆ ಕರೋನಾದಿಂದ ನಾವು ಹೆಚ್ಚಾಗಿ ಕೆಲಸವಿಲ್ಲದೆ ಬದುಕುತ್ತಿದ್ದೇವೆ. ಈಗ ಈ ಕಲೆಯನ್ನು ಉಳಿಸಲು ಸರ್ಕಾರದಿಂದ ಮಾತ್ರ ಸಾಧ್ಯ. ನಮ್ಮಿಂದಂತೂ ಸಾಧ್ಯವಿಲ್ಲ. ಈಗ ಮನರಂಜನೆಯ ಹೊಸ ವಿಧಾನಗಳು ಬಂದಿವೆ, ಹಾಗಾಗಿ ನಮ್ಮನ್ನು ಕೇಳಲು ಅಥವಾ ನಮ್ಮ ಪ್ರದರ್ಶನಗಳನ್ನು ವೀಕ್ಷಿಸಲು ಯಾರೂ ಇಲ್ಲ." ಎಂದು ಅವರು ಹೇಳುತ್ತಾರೆ.
ಅಲ್ಲದೆ, ಅವರ ಸಾಂಪ್ರದಾಯಿಕ ಕಥೆಗಳನ್ನು ತಿರುಚಲಾಗುತ್ತಿದೆ ಎಂದು ಅವರು ಹೇಳುತ್ತಾರೆ. "ನಮ್ಮಲ್ಲಿ ನೈಜ ಕಥನಗಳಿವೆ. ಈ ವಿದ್ಯಾವಂತರು ನಮ್ಮಲ್ಲಿಗೆ ಬಂದು ನಮ್ಮ ಕಥೆಗಳನ್ನು ಕೇಳುತ್ತಾರೆ ಮತ್ತು ನಂತರ ಅವರು ತಮಗೆ ಇಷ್ಟಬಂದದ್ದನ್ನು ಸೇರಿಸಿ ಅಥವಾ ತೆಗೆದುಹಾಕಿ ಟಿವಿ ಧಾರಾವಾಹಿ, ನಾಟಕ, ಚಲನಚಿತ್ರ ನಿರ್ಮಿಸುತ್ತಾರೆ. ಆದರೆ ಇವುಗಳಲ್ಲಿ ಹೆಚ್ಚಿನ ಅಂಶ ಸುಳ್ಳು ಮತ್ತು ಕಡಿಮೆ ಸತ್ಯವಿರುತ್ತದೆ.” ಎನ್ನುತ್ತಾರೆ.
ಟೆಲಿವಿಷನ್ ಮತ್ತು ಮೊಬೈಲ್ ಫೋನ್ಗಳಂತಹ ಹೊಸ ತಂತ್ರಜ್ಞಾನಗಳಿಂದಾಗಿ ತಮ್ಮಂತಹ ಕಲಾವಿದರಿಗೆ ಈ ಹಿಂದೆ ಸಿಗುತ್ತಿದ್ದ ಗೌರವಾದರ ಕೂಡ ಕಡಿಮೆಯಾಗಿದೆ ಎಂದು ಪ್ರೇಮರಾಮ್ ಕೂಡ ಹೇಳುತ್ತಾರೆ. “ನಮ್ಮ ಪೂರ್ವಜರು ರಾಜರು ಮತ್ತು ಚಕ್ರವರ್ತಿಗಳ ಆಸ್ಥಾನಗಳಲ್ಲಿ ಮನರಂಜನೆಯನ್ನು ನೀಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಅವರಿಗೆ ಆಹಾರ ಧಾನ್ಯಗಳು, ಹಣ ಮತ್ತು ಒಂದು ವರ್ಷಕ್ಕೆ ಸಾಕಾಗುವಷ್ಟು ವಿವಿಧ ಬಗೆಯ ವಸ್ತುಗಳು ಸಿಗುತ್ತಿದ್ದವು. ನನ್ನ ತಂದೆ ಮತ್ತು ತಾತ ಜನರನ್ನು ರಂಜಿಸಲು ಹಳ್ಳಿಯಿಂದ ಹಳ್ಳಿಗೆ ತಿರುಗುತ್ತಿದ್ದರು. ಹಳ್ಳಿಗರು ನಮ್ಮನ್ನು ಈಗಲೂ ಗೌರವಿಸುತ್ತಾರೆ, ಆದರೆ ಜಗತ್ತು ಬದಲಾಗಿದೆ. ಈಗ ಹಿಂದಿನಂತೆ ನಮ್ಮ ಕಲೆಯನ್ನು ಯಾರೂ ಗೌರವಿಸುವುದಿಲ್ಲ. ಇದು ಸಾಯುತ್ತಿರುವ ಕಲೆ ಮತ್ತು ನಾನು ಇನ್ನು ಮುಂದೆ ಈ ಬೊಂಬೆಯಾಟವನ್ನು ಆನಂದಿಸಲು ಸಾಧ್ಯವಿಲ್ಲ.
ಅನುವಾದ: ಎನ್.ಮಂಜುನಾಥ್