"ಚಾಲೂನ್, ಚಾಲೂನ್, ಹುಟ್ಟಲಿರುವ ಮಗುವಿಗೆ ಭೂಮಿಯ ಕಡೆಗೆ ಚಲಿಸಲು ನಾನು ಸಹಾಯ ಮಾಡುತ್ತೇನೆ."

ಅವರು ಮಾಡಿಸಿದ ಹೆರಿಗೆಗಳ ಕುರಿತು ಮಾತು ಬರುತ್ತಿದ್ದಂತೆ ಗುಣಮಯ್‌ ಕಾಂಬ್ಳೆಯವರ ಕಣ್ಣುಗಳು ಮಿಂಚತೊಡಗಿದವು. ಅವರು ಮತ್ತೊಮ್ಮೆ ತಮ ಹೆರಿಗೆಯ ಲೋಕದಲ್ಲಿರುವವರಂತೆ ಚುರುಕಾದರು. ಮಹಾರಾಷ್ಟ್ರದಲ್ಲಿ ದಾಯಿ ಎಂದು ಕರೆಯಲ್ಪಡುವ ನುರಿತ ಸೂಲಗಿತ್ತಿಯಾದ ಅವರು ಹೆರಿಗೆ ಪ್ರಕ್ರಿಯೆಯನ್ನು ವಿವರಿಸತೊಡಗಿದರು. ಮಗು ಹೇಗೆ ಗರ್ಭಚೀಲದಿಂದ ಜನನಾಂಗದ ಕಡೆಗೆ ಬರುತ್ತದೆನ್ನುವುದನ್ನು ವಿವರಿಸುತ್ತಾ, "ಹಾತತ್ ಕಾಕಾನ ಘಲತೋ ನಾ, ಅಗಡಿ ತಸಾ! [ಬಳೆಗಳು ಕೈಯಿಂದ ಹೇಗೆ ಜಾರುತ್ತೇವೆಯೋ ಹಾಗೆ, ಅಷ್ಟೇ!],” ಎಂದು ವಿವರಿಸುವಾಗ ಅವರ ಕೈಗಳಲ್ಲಿದ್ದ ಬಳೆಗಳು ಮೊಳಕೈಯೆಡೆಗೆ ಸದ್ದು ಮಾಡುತ್ತ ಜಾರಿದವು.

ಏಳು ದಶಕಗಳ ಹಿಂದೆ ವಾಗ್ದಾರಿ ಗ್ರಾಮದ ಈ ದಲಿತ ಮಹಿಳೆ ಗುಣಮಯಿ ಚೊಚ್ಚಲ ಹೆರಿಗೆಗೆ ನೆರವಾದರು.ಆನಂತರ ಉಸ್ಮಾನಾಬಾದ್‌ನಲ್ಲಿ ನೂರಾರು ಮಕ್ಕಳನ್ನು ತಾಯಿಯ ಗರ್ಭದಿಂದ ಸುರಕ್ಷಿತವಾಗಿ ಹೊರತೆಗೆದಿದ್ದರು. "ಇದು ಕೈಗಳ ಮಾಂತ್ರಿಕತೆ," ಎಂದು ಅಜ್ಜಿ ಹೇಳುತ್ತಾರೆ, ನಾಲ್ಕು ವರ್ಷಗಳ ಹಿಂದೆ ತನ್ನ 82ನೇ ವಯಸ್ಸಿನಲ್ಲಿ ತನ್ನ ಕೊನೆಯ ಹೆರಿಗೆಗೆ ಸಹಾಯ ಮಾಡಿದ ಅಜ್ಜಿ. ಹೆಮ್ಮೆಯಿಂದ ತಮ್ಮ ಕೈಗಳನ್ನು ತೋರಿಸಿ ಹೇಳುತ್ತಾರೆ. "ನನ್ನ ಕೈಗಳು ಎಂದಿಗೂ ವಿಫಲವಾಗಿಲ್ಲ. ದೇವರು ನನ್ನೊಂದಿಗಿದ್ದಾನೆ.”

ಸೊಲ್ಲಾಪುರ ಸಿವಿಲ್ ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ಗುಣಮಯಿ ಅವರ ಪುತ್ರಿ ವಂದನಾ ನೆನಪಿಸಿಕೊಳ್ಳುತ್ತಾರೆ. ಸಿಸೇರಿಯನ್ ಮೂಲಕ ಮೂವರು ಮಕ್ಕಳನ್ನು ಹೆರಿಗೆ ಮಾಡಲು ಸಿದ್ಧರಾದ ವೈದ್ಯರಿಗೆ ಗುಣಮಯಿ ಅವರು ಏನು ಮಾಡುತ್ತಿದ್ದಾರೆಂದು ಅರ್ಥ ಮಾಡಿಕೊಳ್ಳುವಂತೆ ಸಲಹೆ ನೀಡಿದರು. "ಅಜ್ಜಿ, ನೀವು ನಮಗಿಂತ ಹೆಚ್ಚು ಅನುಭವಿ ಎಂದು ಅವರು ಹೇಳಿದರು," ಅವರಲ್ಲಿದ್ದ ಕೌತುಕ ಭಾವವನ್ನು ನೆನೆದು ಗುಣಮಯಿ ನಕ್ಕರು.

ಅವರ ಪರಿಣತಿಯು ಹೆರಿಗೆ ಮಾಡಿಸುವುದನ್ನು ಮೀರಿದೆ. ಹೀಗಾಗಿ ಸೊಲ್ಲಾಪುರ, ಕೊಲ್ಹಾಪುರ, ಪುಣೆಯಿಂದ ಆರಂಭಿಸಿ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಅವರನ್ನು ಕರೆಸಿಕೊಳ್ಳುತ್ತಾರೆ. "ಜನರು ನನ್ನ ಅಜ್ಜಿಯ ಮನೆಗೆ ಮಕ್ಕಳನ್ನು ಕರೆತರುತ್ತಿದ್ದರು - ಬೀಜಗಳು ಅಥವಾ ಮಣಿಗಳು - ಆಕಸ್ಮಿಕವಾಗಿ ಅವರ ಕಣ್ಣು, ಕಿವಿ ಮತ್ತು ಮೂಗುಗಳಲ್ಲಿ ಸಿಲುಕಿರುವ ಸಣ್ಣ ವಸ್ತುಗಳನ್ನು ಹೊರತೆಗೆಯಲು," ಎಂದು ಗುಣಮಯ್ ಅವರ ಮೊಮ್ಮಗಳು ಶ್ರೀದೇವಿ ಕೆಲವು ತಿಂಗಳ ಹಿಂದೆ ಪರಿಗೆ ಹೆಮ್ಮೆಯಿಂದ ಹೇಳಿದರು. ಮಕ್ಕಳನ್ನು ಹೊರತರುವಷ್ಟೇ ಪ್ರಾಮುಖ್ಯತೆಯನ್ನು ಈ ಕಾರ್ಯಗಳಿಗೂ ನೀಡುತ್ತಿದ್ದರು. ಅಲ್ಲದೆ, ಹೊಟ್ಟೆನೋವು, ಕಾಮಾಲೆ, ಜ್ವರ ಮತ್ತು ಕೆಮ್ಮುಗಳಿಗೆ ಗಿಡಮೂಲಿಕೆ ಪರಿಹಾರಗಳ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ.

Gunamay Kamble (in green saree) with her family in Wagdari village of Tuljapur taluka . From the left: granddaughter Shridevi (in yellow kurta); Shridevi's children; and Gunamay's daughter Vandana (in purple saree)
PHOTO • Medha Kale

ತುಳಜಾಪುರ ತಾಲೂಕಿನ ವಾಗ್ದರಿ ಗ್ರಾಮದಲ್ಲಿ, ಗುಣಮಯ್ ಕಾಂಬಳೆ (ಹಸಿರು ಸೀರೆಯಲ್ಲಿ) ತನ್ನ ಕುಟುಂಬದೊಂದಿಗೆ. ಎಡದಿಂದ: ಮೊಮ್ಮಗಳು ಶ್ರೀದೇವಿ (ಹಳದಿ ಕುರ್ತಾ), ಶ್ರೀದೇವಿಯ ಮಕ್ಕಳು; ಗುಣಮಯ್ ಮಗಳು ವಂದನಾ (ನೇರಳೆ ಸೀರೆಯಲ್ಲಿ)

ಗುಣಮಯ್ ಅವರಂತಹ ದಾಯಿಗಳು ಸಾಂಪ್ರದಾಯಿಕ ಜನನ ಪರಿಚಾರಕರು (ಟಿಬಿಎಗಳು) ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಾರೆ. ಅವರ ಬಳಿ ಯಾವುದೇ ಆಧುನಿಕ ತರಬೇತಿ ಅಥವಾ ಪ್ರಮಾಣಪತ್ರವಿಲ್ಲ, ಆದರೆ ಹೆಚ್ಚಾಗಿ ದಲಿತ ಕುಟುಂಬಗಳ ಮಹಿಳೆಯರು ಹಳ್ಳಿಗಳು ಮತ್ತು ನಗರ ಕಡಿಮೆ ಆದಾಯದ ಕಾಲೋನಿಗಳಲ್ಲಿ ಹಲವಾರು ತಲೆಮಾರುಗಳಿಂದ ತಾಯಂದಿರಿಗೆ ಸಹಾಯ ಮಾಡುತ್ತಿದ್ದಾರೆ, ಅವರಿಗೆ ಭರವಸೆ ನೀಡುತ್ತಾರೆ, "ಶಾಬುತ್ ಬಾಲಾತೀನ್ ಹೋತೀಸ್ [ಆಯ್ತು, ಮುಗೀತು. ಸ್ವಲ್ಪ ಹೊತ್ತು ಎಲ್ಲವೂ ಸರಿಹೋಗುತ್ತದೆ."

ಆದರೆ ಕಳೆದ 3-4 ದಶಕಗಳಲ್ಲಿ, ಸಾಂಸ್ಥಿಕ ಜನನಗಳಿಗೆ ರಾಜ್ಯ ಪ್ರೋತ್ಸಾಹಗಳು ವೇದಿಕೆಯನ್ನು ಮೌನಗೊಳಿಸಿವೆ. ಮೊದಲ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, 1992-93 ರಲ್ಲಿ (ಎನ್ಎಫ್ಎಚ್ಎಸ್ -1) ಮಹಾರಾಷ್ಟ್ರದಲ್ಲಿ ಅರ್ಧಕ್ಕಿಂತ ಕಡಿಮೆ ಜನನಗಳು ಆರೋಗ್ಯ ಸೌಲಭ್ಯದಲ್ಲಿ ನಡೆದಿವೆ. ಮೂರು ದಶಕಗಳ ನಂತರ, 2019-21ರಲ್ಲಿ, ಈ ಸಂಖ್ಯೆ ಶೇಕಡಾ 95ರಷ್ಟಿದೆ (ಎನ್ಎಫ್ಎಚ್ಎಸ್ -5).

ಅವಳಿ ಮಕ್ಕಳನ್ನು ಹೆರಿಗೆ ಮಾಡುವ ಸಾಮರ್ಥ್ಯ, ತಲೆಯ ಬದಲು ಕಾಲು ಅಥವಾ ಪೃಷ್ಠ ಮೊದಲು ಹೊರಬರುವ ಸಂದರ್ಭಗಳಲ್ಲಿ ವ್ಯವಹರಿಸಲು ಮತ್ತು ಸಂಕೀರ್ಣ ಪರಿಸ್ಥಿತಿಗಳಲ್ಲಿ ಸಹಾಯ ಮಾಡುವ ಗುಣಮಯಿಯಂತಹ ಸೂಲಗಿತ್ತಿಯರು ಈಗ ಗರ್ಭಿಣಿಯರನ್ನು ಆಸ್ಪತ್ರೆಗಳಿಗೆ ಉಲ್ಲೇಖಿಸಲು ಮತ್ತು ಅವರ ಜೊತೆಯಲ್ಲಿ ಹೋಗಲಷ್ಟೇ ಬಳಸಲ್ಪಡುತ್ತಿದ್ದಾರೆ. ಸೂಲಗಿತ್ತಿಯರಿಗೆ ಈ ಕೆಲಸಕ್ಕೆ ಗರ್ಭಿಣಿಯೊಬ್ಬರಿಗೆ 80 ರೂ.ಗಳಂತೆ ನೀಡಲಾಗುತ್ತದೆ.

ಶಿಶು ಜನನದಲ್ಲಿ ತನ್ನ ಪಾತ್ರ ಕಡಿಮೆಯಾಗಿದ್ದರೂ, ಗುಣಮಯ್ ಹೇಳುವಂತೆ, "ಹಳ್ಳಿಯ ಜನರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನನ್ನನ್ನು ಚಹಾಕ್ಕಾಗಿ ಕರೆಯುತ್ತಾರೆ ಅಥವಾ ಭಾಕರ್ ನೀಡುತ್ತಾರೆ. ಆದರೆ ನಮಗೆ ಮದುವೆಯ ಆಮಂತ್ರಣಗಳು ಸಿಗುವುದಿಲ್ಲ. ಕಾರ್ಯಕ್ರಮ ಮುಗಿದ ನಂತರ ನಮಗೆ ಆಹಾರವನ್ನು ನೀಡಲಾಗುತ್ತದೆ" ಎಂದು ಅವರು ಹೇಳಿದರು. ಜನರು ಆಕೆಯ ಕೆಲಸವನ್ನು ಮೆಚ್ಚುತ್ತಾರೆ, ಆದರೆ ದಲಿತ ಎಂಬ ಜಾತಿಯ ಗೋಡೆಗಳು ಅವರ ಪಾಲಿಗೂ ಅಡ್ಡಿಯಾಗಿಯೇ ಉಳಿದಿವೆ

*****

ಮಾಂಗ್ ಸಮುದಾಯಕ್ಕೆ ಸೇರಿದ ದಲಿತ ಕುಟುಂಬದಲ್ಲಿ ಜನಿಸಿದ ಗುಣಮಯ್ ಅವರ ತಂದೆ ವಿದ್ಯಾವಂತರು. ಗುಣಮಯಿಯ ಒಡಹುಟ್ಟಿದವರು ಶಾಲೆಗೆ ಹೋಗಿದ್ದಾರೆ. ಆದರೆ, ಗುಣಮಯಿಯ ಮದುವೆ ಏಳನೇ ವಯಸ್ಸಿಗೆ ನಡೆಯಿತು. ಋತುಮತಿಯಾದ ನಂತರ ಗಂಡನ ಮನೆಗೆ ಹೋದರು. “ನನಗೆ ಕೇವಲ 10 ಅಥವಾ 12 ವರ್ಷ. ಆಗ ಲಂಗ ರವಿಕೆ ತೊಡುತ್ತಿದ್ದೆ. "ನಾನು ವಾಗ್ದರಿಗೆ ಬಂದ ವರ್ಷವೇ ನಲ್ದುರ್ಗ ಕೋಟೆಯನ್ನು ವಶಪಡಿಸಿಕೊಳ್ಳಲಾಯಿತು," ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಭಾರತೀಯ ಸೇನೆಯು ಕೋಟೆಯನ್ನು ವಶಪಡಿಸಿಕೊಂಡಿದ್ದನ್ನು ಅವರು ಉಲ್ಲೇಖಿಸುತ್ತಾರೆ.

ಒಸ್ಮಾನಾಬಾದ್ ಜಿಲ್ಲೆಯ ತುಳಜಾಪುರ ತಾಲೂಕಿನ ವಾಗ್ದಾರಿ ಗ್ರಾಮವು 265 ಕುಟುಂಬಗಳನ್ನು ಹೊಂದಿದೆ (ಜನಗಣತಿ 2011). ಗುಣಮಯ್ ಹಳ್ಳಿಯ ಹೊರಗಿರುವ ದಲಿತ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದರು. ಗುಣಮಯಿಯವರದ್ದು ಒಂದೇ ಕೋಣೆಯ ಮನೆ. 2019ರಲ್ಲಿ, ದಲಿತ ವಸತಿ ಯೋಜನೆಯಾದ ರಾಮಾಯಿ ಆವಾಸ್ ಯೋಜನೆ ಅಡಿಯಲ್ಲಿ ಇನ್ನೂ ಎರಡು ಕೊಠಡಿಗಳನ್ನು ನಿರ್ಮಿಸಲಾಯಿತು.

Gunamay sitting on a metal cot in her courtyard
PHOTO • Medha Kale
Vandana and Shridevi with Gunamay inside her home. When she fell ill in 2018, Gunamay had to leave the village to go live with her daughters
PHOTO • Medha Kale

ಎಡ: ಗುಣಮಯ್ ತನ್ನ ಅಂಗಳದಲ್ಲಿ ಲೋಹದ ಮಂಚದ ಮೇಲೆ ಕುಳಿತಿರುವುದು. ಬಲ: ವಂದನಾ ಮತ್ತು ಶ್ರೀದೇವಿ ತನ್ನ ಮನೆಯೊಳಗೆ ಗುಣಮಯ್ ಅವರೊಡನೆ. 2018ರಲ್ಲಿ ಅನಾರೋಗ್ಯಕ್ಕೆ ಒಳಗಾದ ನಂತರ ಗುಣಮಯ್ ತನ್ನ ಹೆಣ್ಣುಮಕ್ಕಳೊಂದಿಗೆ ವಾಸಿಸುವ ಸಲುವಾಗಿ ಊರನ್ನು ತೊರೆಯಬೇಕಾಯಿತು

ಮದುವೆಯ ನಂತರ ಮದುಮಗಳಾಗಿ ಗ್ರಾಮಕ್ಕೆ ಬಂದಿದ್ದ ಗುಣಮಯ್, ಮಣ್ಣಿನ ಗೋಡೆಯ ಮನೆಯಲ್ಲಿ ಗಂಡನ ಕುಟುಂಬದೊಂದಿಗೆ ವಾಸವಾಗಿದ್ದರು. ಕುಟುಂಬಕ್ಕೆ ಸ್ವಂತ ಸ್ಥಳ ಇರಲಿಲ್ಲ. ಪತಿ ಮನೋಹರ ಕಾಂಬಳೆ ಗ್ರಾಮ ಮತ್ತು ಅದರ ಮುಖ್ಯಸ್ಥರಿಗೆ ಸೇವೆ ಸಲ್ಲಿಸುತ್ತಿದ್ದರು. ಮಾಡಿದ ಕೆಲಸಕ್ಕೆ ಪ್ರತಿಯಾಗಿ ವರ್ಷಕ್ಕೊಮ್ಮೆ ಕೃಷಿ ಉತ್ಪನ್ನಗಳನ್ನು ಕೂಲಿಯಾಗಿ ಪಡೆಯುತ್ತಿದ್ದರು. ಇದು ವೇತನಕ್ಕೆ ಪರ್ಯಾಯವಾದ ಬಲುತೇದಾರಿ ಎಂಬ ಸಾಂಪ್ರದಾಯಿಕ ವಿನಿಮಯ ವ್ಯವಸ್ಥೆ.

ಆದರೆ ಅದರಿಂದ ಮಾತ್ರವೇ ಕುಟುಂಬವನ್ನು ಪೋಷಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಗುಣಮಯ್ ಆಡು, ಎಮ್ಮೆ ಸಾಕಲು ಆರಂಭಿಸಿದರು. ಮನೆಯಲ್ಲಿ ತಯಾರಿಸಿದ ತುಪ್ಪವನ್ನೂ ಮಾರುತ್ತಿದ್ದರು. ನಂತರ, 1972ರ ಬರಗಾಲದ ನಂತರ, ಅವರು ಹೊಸದಾಗಿ ಪರಿಚಯಿಸಲಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮಾಡಲು ಪ್ರಾರಂಭಿಸಿದರು. ಕ್ರಮೇಣ ಪ್ರಸೂತಿ ಶಾಸ್ತ್ರದಲ್ಲೂ ತೊಡಗಿಸಿಕೊಂಡರು.

“ಹೆರಿಗೆ ಮಾಡಿಸುವುದು ಅಪಾಯಕಾರಿ ಕೆಲಸ. "ಒಬ್ಬರ ಕಾಲಿನಿಂದ ಮುಳ್ಳನ್ನು ತೆಗೆಯುವುದೇ ಕಷ್ಟ, ಅಂತಹದ್ದರಲಲಿ ಇಲ್ಲಿ ಮಹಿಳೆಯ ದೇಹದಿಂದ ಇಡೀ ದೇಹವು ಹೊರಬರುತ್ತದೆ," ಎಂದು ಅವರು ಹೇಳುತ್ತಾರೆ. ಅಂತಹ ಪ್ರಮುಖ ಮತ್ತು ಗಂಭೀರವಾದ ಕೆಲಸವನ್ನು ಮಾಡಿದರೂ, "ಜನರು ತಮಗಿಷ್ಟ ಬಂದಷ್ಟು ಕೊಡುತ್ತಿದ್ದರು, ಕೆಲವರು ಒಂದು ಹಿಡಿ ಧಾನ್ಯವನ್ನು ಕೊಡುತ್ತಿದ್ದರು. ಅಥವಾ 10 ರೂ. ಒಮ್ಮೊಮ್ಮೆ ಹಳ್ಳಿಯಿಂದ ದೂರದಲ್ಲಿರುವ ಯಾರೋ ಒಬ್ಬರು ನನಗೆ ನೂರು ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನದನ್ನು ನೀಡಿರಬಹುದು, ”ಎಂದು ಅವರು ಹೇಳುತ್ತಾರೆ.

ಅವರು ಜನ್ಮ ನೀಡಿದ ಮಹಿಳೆ ಮತ್ತು ಮಗುವಿನೊಂದಿಗೆ ಇಡೀ ರಾತ್ರಿ ಕಳೆಯಬೇಕಾಗುತ್ತಿತ್ತು. ನಂತರ ಅವರಿಗೆ ಸ್ನಾನ ಮಾಡಿಸಿ ಮನೆಗೆ ಹೋಗಬೇಕು. “ನಾನು ಯಾರ ಮನೆಯಲ್ಲಿಯೂ ಚಹಾ ಕುಡಿದಿಲ್ಲ ಅಥವಾ ಊಟ ಮಾಡಿಲ್ಲ. ಒಂದು ಹಿಡಿ ಧಾನ್ಯ ಸೀರೆಗೆ ಕಟ್ಟಿಕೊಂಡು ಹೋಗುತ್ತಿದ್ದೆ,” ಎಂದು ನೆನಪಿಸಿಕೊಳ್ಳುತ್ತಾರೆ.

ಎಂಟು ವರ್ಷಗಳ ಹಿಂದೆ ವಕೀಲರ ಕುಟುಂಬದ ಸೊಸೆಗೆ ರಾತ್ರಿಯಿಡೀ ಹೆರಿಗೆ ಕಷ್ಟದಲ್ಲಿ ನೆರವಾದರು. “ಬೆಳಿಗ್ಗೆ ಆ ಮಹಿಳೆಗೆ ಹೆರಿಗೆಯಾಯಿತು. ಗಂಡು ಮಗು ಹುಟ್ಟಿತು. ನಾನು ಹೊರಡುವಷ್ಟರಲ್ಲಿ ಅವಳ ಅತ್ತೆ ಬಂದು 10 ರೂಪಾಯಿ ಕೊಟ್ಟರು. ನಾನು ಹಣವನ್ನು ಹಿಂದಿರುಗಿಸಿ ಅವರಿಗೆ ಹೇಳಿದೆ, “ನಾನು ನನ್ನ ಕೈಯಲ್ಲಿ ಧರಿಸಿರುವ ಈ ಬಳೆ ಬೆಲೆ 200 ರೂ. ಈ 10 ರೂಪಾಯಿಯನ್ನು ನೀವೇ ಇಟ್ಟುಕೊಳ್ಳಿ ಯಾರಾದರೂ ಭಿಕ್ಷುಕನಿಗೆ ಬಿಸ್ಕೆಟ್ ಖರೀದಿಸಿ ನೀಡಿ.”

Gunamay's daughter Vandana (in purple saree) says dais are paid poorly
PHOTO • Medha Kale
‘The bangles I am wearing cost 200 rupees,' Gunamay had once told a lawyer's family offering her Rs. 10 for attending a birth. ‘ Take these 10 rupees and buy a packet of biscuits for a beggar'
PHOTO • Medha Kale

ಎಡ: ಗುಣಮಯ್ ಮಗಳು ವಂದನಾ (ನೇರಳೆ ಬಣ್ಣದ ಸೀರೆ)  ದಾಯಿಗಳಿಗೆ ಬಹಳ ಕಡಿಮೆ ಮೊತ್ತದ ಹಣ ನೀಡಲಾಗುತ್ತದೆ ಎಂದು ಹೇಳುತ್ತಾರೆ. ಬಲ: ಹೆರಿಗೆಗೆ ಸಹಾಯ ಮಾಡಿದ್ದಕ್ಕಾಗಿ ಕೇವಲ 10 ರೂ. ನೀಡಿದ್ದ ವಕೀಲರ ಕುಟುಂಬಕ್ಕೆ ಗುಣಮಯ್ ಒಮ್ಮೆ, 'ನಾನು ಹಾಕಿಕೊಂಡಿರುವ ಈ ಬಳೆಗಳು 200 ರೂಪಾಯಿ ಮೌಲ್ಯದ್ದಾಗಿದೆ. ಈ 10 ರೂಪಾಯಿ ವಾಪಸ್ ತೆಗೆದುಕೊಂಡು ಬಿಸ್ಕೆಟ್ ಪ್ಯಾಕೆಟ್ ಖರೀದಿಸಿ ಭಿಕ್ಷುಕನಿಗೆ ನೀಡಿ' ಎಂದಿದ್ದರು

ಗುಣಮಯ್ ಅವರ ಹಿರಿಯ ಮಗಳು ವಂದನಾ ಮೌಲ್ಯದ ಕೊರತೆ ಮತ್ತು ಕಡಿಮೆ ಕೂಲಿಯಿಂದಾಗಿ ಈ ಕೆಲಸ ಮಾಡದಂತೆ ತಡೆಯುತ್ತಾರೆ. “ಜನರು ಮತ್ತು ಸರ್ಕಾರ ಯಾರೂ ದುಡ್ಡು ಕೊಡುವುದಿಲ್ಲ. ಮೌಲ್ಯವಿಲ್ಲದಿದ್ದರೆ ನಾನೇಕೆ ಶ್ರಮಿಸಬೇಕು? ನಾನು ನನ್ನ ನಾಲ್ಕು ಮಕ್ಕಳನ್ನು ಬೆಳೆಸಲು ಬಯಸುತ್ತೇನೆ. ಹಾಗಾಗಿ ನಾನು ಕೆಲಸ ಮಾಡುವುದನ್ನು ಬಿಟ್ಟು ಕೂಲಿ ಮಾಡಲು ಪ್ರಾರಂಭಿಸಿದೆ,” ಎಂದು ಈಗ ಪುಣೆಯಲ್ಲಿ ನೆಲೆಸಿರುವ ವಂದನಾ ಹೇಳುತ್ತಾರೆ. ಗುಣಮಯ್ ಅವರಿಂದಲೇ ತರಬೇತಿ ಪಡೆದ ಅವರು ಈಗ ನವಜಾತ ಶಿಶು ಮತ್ತು ತಾಯಿಗೆ ಸ್ನಾನ ಮಾಡಿಸಲು ಸಹಾಯ ಮಾಡುತ್ತಾರೆ.‌

ವಂದನಾ ಮತ್ತು ಅವರ ಮೂವರು ಸಹೋದರಿಯರಿಗೆ ಒಟ್ಟು 14 ಮಕ್ಕಳಿದ್ದಾರೆ, ಮತ್ತು ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಗುಣಮಯ್ ಅವರ ಮಾರ್ಗದರ್ಶನದಲ್ಲಿ ಜನಿಸಿದರು. ಗುಣಮಯ್ ಅವರ ಮೂರನೇ ಮಗಳ ಪತಿ ಆಸ್ಪತ್ರೆಗೆ ಕರೆದೊಯ್ದ ಕಾರಣ ಅಲ್ಲಿಯೇ ಸಿಸೇರಿಯನ್‌ ಹೆರಿಗೆಯಾಯಿತು. "ನನ್ನ ಅಳಿಯ ಶಾಲಾ ಶಿಕ್ಷಕರಾಗಿದ್ದರು (ಈಗ ನಿವೃತ್ತರಾಗಿದ್ದಾರೆ). ಅವನಿಗೆ [ಮನೆ ಜನನ ಮತ್ತು ಅವರ ಕೌಶಲಗಳಲ್ಲಿ] ನಂಬಿಕೆ ಇರಲಿಲ್ಲ" ಎಂದು ಅವರು ವಿವರಿಸಿದರು.

ಕಳೆದ 2-3 ದಶಕಗಳಲ್ಲಿ, ಹೆಚ್ಚು ಹೆಚ್ಚು ಮಹಿಳೆಯರು ಸಿಸೇರಿಯನ್ ವಿಧಾನದ ಕಡೆ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ ಅಥವಾ ಪ್ರೇರೇಪಿಸಲ್ಪಡುತ್ತಿದ್ದಾರೆ, ಇದು ಗುಣಮಯ್ ಅವರ ನಿರಾಶೆಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳು ಹೆಚ್ಚುತ್ತಿವೆ.2019-21ರಲ್ಲಿ ಎನ್‌ಎಫ್‌ಎಚ್‌ಎಸ್-5 ಪ್ರಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ವಿಭಾಗಗಳ ಸಂಖ್ಯೆ ಶೇಕಡಾ 25ರಷ್ಟಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ಗಳ ಸಂಖ್ಯೆ ಇನ್ನೂ ಹೆಚ್ಚಿದೆ. ಎಂದರೆ 39ರಷ್ಟು.

"ಗರ್ಭಧಾರಣೆ ಮತ್ತು ಹೆರಿಗೆ ನೈಸರ್ಗಿಕ ಪ್ರಕ್ರಿಯೆ," ಎಂದು ಗುಣಮಯಿ ಹೇಳುತ್ತಾರೆ. ಗುಣಮಯ್ ಅವರು ಕತ್ತರಿಸುವುದು ಮತ್ತು ಹೊಲಿಯುವ ಈ ಪ್ರಕ್ರಿಯೆಯ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ. "ಮೊದಲು ಅವರು ಕತ್ತರಿಸುತ್ತಾರೆ ಹಾಕುತ್ತಾರೆ. ನಂತರ ಹೊಲಿಯುತ್ತಾರೆ. ಅದರ ನಂತರ ಮಹಿಳೆ ಎದ್ದು ನಿಲ್ಲಬಹುದು ಅಥವಾ ಕುಳಿತುಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ? ಹೆರಿಗೆಯಲ್ಲಿರುವ ಮಹಿಳೆಯ ದೇಹದ ಭಾಗಗಳು ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುತ್ತವೆ. ಅವರು ಹೋದೆಡೆಯೆಲ್ಲೆಲ್ಲ ಪ್ರಸೂತಿ ತಜ್ಞರೊಡನೆ ಒಂದು ಸಾಮಾನ್ಯ ತಿಳುವಳಿಕೆಯನ್ನು ಹಂಚಿಕೊಂಡಿದ್ದಾರೆ: "ವಾರ್ [ಜರಾಯು] ಹೊರಬರುವ ಮೊದಲು ಬಳ್ಳಿಯನ್ನು ಎಂದಿಗೂ ಕತ್ತರಿಸಬಾರದು, ಏಕೆಂದರೆ [ನೀವು ಹಾಗೆ ಮಾಡಿದರೆ] ಜರಾಯು ಹೋಗಿ ಯಕೃತ್ತಿಗೆ ಅಂಟಿಕೊಳ್ಳುತ್ತದೆ."

ಪರಿಗೆ ಅವರು ತಿಳಿಸಿದಂತೆ, ಅವರ ಹೆರಿಗೆಯ ಕಲಿಕೆ ಅವರ ತಾಯ್ತನದ ಮೂಲಕವೇ ನಡೆಯಿತು. "ನಾನು ನನ್ನ ಮೂವರು ಮಕ್ಕಳ ಹುಟ್ಟಿನಿಂದಲೇ ಹೆರಿಗೆಯನ್ನು ಕಲಿತೆ. ಸಂಕೋಚನದ ಸಮಯದಲ್ಲಿ ಜೋರಾಗಿ ತಳ್ಳುವುದು, [ತಾಯಿಯ] ಹೊಟ್ಟೆಯನ್ನು  ತಿಕ್ಕುವುದು ಮತ್ತು ಮಗುವನ್ನು ಹೊರಗೆ ತಳ್ಳುವುದು ಹೀಗೆ ಇವೆಲ್ಲವನ್ನೂ ಆಗ ಕಲಿತೆ." ಎಂದು ತನ್ನ ಯೌವನದ ದಿನಗಳನ್ನು ನೆನಪಿಸಿಕೊಳ್ಳುತ್ತಾ ನುಡಿದ ಅವರು, "ಆ ಸಮಯದಲ್ಲಿ ನಾನು ಯಾರನ್ನೂ ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ನನ್ನ ತಾಯಿಯನ್ನು ಕೂಡಾ ಹೊರಗೇ ನಿಲ್ಲಿಸುತ್ತಿದ್ದೆ."

Gunamay (left) practiced as a dai for most of her 86 years . A lot of her learning came from her experiences of giving birth to Vandana (right) and three more children
PHOTO • Medha Kale
Gunamay (left) practiced as a dai for most of her 86 years . A lot of her learning came from her experiences of giving birth to Vandana (right) and three more children
PHOTO • Medha Kale

ಗುಣಮಯ್ (ಎಡಗಡೆ) ತನ್ನ 86 ವರ್ಷಗಳ ಬಹುಪಾಲು ಕಾಲ ದಾಯಿ ಆಗಿ ಅಭ್ಯಾಸ ಮಾಡಿದರು. ವಂದನಾ (ಬಲಕ್ಕೆ) ಮತ್ತು ಇನ್ನೂ ಮೂರು ಮಕ್ಕಳಿಗೆ ಜನ್ಮ ನೀಡಿದ ಅನುಭವಗಳಿಂದ ಬಹಳಷ್ಟು ಕಲಿಕೆಗಳು ಅವರ ಅನುಭವಕ್ಕೆ ಬಂದವು

ಹೊಟ್ಟೆಯಲ್ಲೇ ಮಗು ತೀರಿಕೊಂಡ ಸಂದರ್ಭಗಳಲ್ಲೂ ಗುಣಮಯ್‌ ಅವರ ಕೌಶಲ ಸಹಾಯಕ್ಕೆ ಬಂದಿದ್ದಿದೆ. ಅಂತಹದ್ದೊಂದು ಪ್ರಕರಣವನ್ನು ನೆನಪಿಸಿಕೊಂಡ ಅವರು, “ಮಗು ಗರ್ಭದಲ್ಲೇ ಸತ್ತು ಹೋಗಿರುವುದು ನನಗೆ ಅರಿವಾಯಿತು,” ಎಂದು ಹೇಳಿದರು. ಮೃತ ಮಗುವನ್ನು ಹೊರತೆಗೆಯಲು ತಾಯಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗಾಗಿ ಸೋಲಾಪುರಕ್ಕೆ ಹೋಗಬೇಕಾಗುತ್ತದೆ ಎಂದು ಹತ್ತಿರದ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. "ಅವರು ಅದನ್ನು ಭರಿಸುವ ಸ್ಥಿತಿಯಲ್ಲಿಲ್ಲ ಎಂದು ನನಗೆ ತಿಳಿದಿತ್ತು. ನನಗೆ ಸ್ವಲ್ಪ ಸಮಯ ನೀಡುವಂತೆ ನಾನು ಅವರಿಗೆ ಹೇಳಿದೆ, ಮತ್ತು ಅವಳ ಹೊಟ್ಟೆಯನ್ನು ಉಜ್ಜಿ ಮತ್ತು ಒತ್ತುವ ಮೂಲಕ ನಾನು ಮಗುವಿನ ದೇಹವನ್ನು ಹೊರತೆಗೆದೆ" ಎಂದು ಅವರು ಹೇಳಿದರು. "ಯಾವುದೇ ಸಂಕೋಚನಗಳಿಲ್ಲದ ಕಾರಣ ಇದು ವಿಶೇಷವಾಗಿ ಕಷ್ಟಕರ," ಎಂದು ವಂದನಾ ಹೇಳಿದರು.

“ಜಾರಿದ ಗರ್ಭಾಶಯವನ್ನು ಹೊಂದಿರುವ ಮಹಿಳೆಯರಿಗೂ ನಾನು ಸಹಾಯ ಮಾಡುತ್ತೇನೆ. ಆದರೆ ಇದು ಹೆರಿಗೆಯ ನಂತರ ತಕ್ಷಣವೇ ಸಂಭವಿಸಿದರೆ ಮಾತ್ರ. ಅದರ ನಂತರ ಆಗಿದ್ದಲ್ಲಿ ಹೇಗಾದರೂ ವೈದ್ಯರನ್ನು ಭೇಟಿಯಾಗಬೇಕು,” ಪರಿಣಿತ ವೈದ್ಯರಿಗೆ ತನ್ನ ಕೆಲಸವನ್ನು ಬಿಟ್ಟುಕೊಟ್ಟು ಯಾವಾಗ ಹಿಂದೆ ಸರಿಯಬೇಕೆಂದು ನಿಖರವಾಗಿ ತಿಳಿದಿರುವ ಗುಣಮಯ್ ಹೇಳುತ್ತಾರೆ.

1977ರಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ದಾಯಿಯರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅದೇ ಸಮಯದಲ್ಲಿ, ವಿವಿಧ ಸ್ವಯಂಸೇವಾ ಸಂಸ್ಥೆಗಳು ತಮ್ಮ ಆರೋಗ್ಯ ಕಾರ್ಯಕ್ರಮಗಳ ಭಾಗವಾಗಿ ದಾಯಿಯರಿಗೆ ತರಬೇತಿ ನೀಡಲು ಪ್ರಾರಂಭಿಸಿದವು.

“ನಾನು ತರಬೇತಿಗಾಗಿ ಸೊಲ್ಲಾಪುರಕ್ಕೆ ಹೋಗಿದ್ದೆ. ಯಾವಾಗ ಎಂದು ನನಗೆ ನೆನಪಿಲ್ಲ," ಎಂದು ಗುಣಮಯ್ ನಿಧಾನವಾಗಿ ಮನೆಯಿಂದ ಹೊರಟು ಅಂಗಳದಲ್ಲಿದ್ದ ಹುಣಸೆ ಮರದ ಕೆಳಗೆ ನಡೆದರು. "ಅವರು ನಮಗೆ ಸ್ವಚ್ಛತೆಯ ಬಗ್ಗೆ ಹೇಳಿದರು. ಸ್ವಚ್ಛ ಕೈಗಳು, ಸ್ವಚ್ಛ ಚಾಕು, ಹೊಕ್ಕುಳಬಳ್ಳಿಯನ್ನು ಕತ್ತರಿಸುವ ದಾರ ಇತ್ಯಾದಿಗಳ ಬಗ್ಗೆ ಹೇಳಿಕೊಟ್ಟಿದ್ದರು. ನಾನು ಪ್ರತಿ ಹೆರಿಗೆಗೂ ಹೊಸ ಕಿಟ್ ಬಳಸುತ್ತಿದ್ದೆ. ಆದರೆ ಅವರು ಹೇಳಿದ್ದನ್ನು ಯಾವುದನ್ನೂ ಅನುಸರಿಸಲಿಲ್ಲ,” ಎಂದು ಅವರು ಸತ್ಯವಾಗಿ ಹೇಳುತ್ತಾರೆ. ಅವರ ಸ್ವಂತ ಜ್ಞಾನ, ಕೌಶಲ್ಯ ಮತ್ತು ಅನುಭವಗಳು ಹೆಚ್ಚು ಮೌಲ್ಯಯುತವೆಂದು ಅವರು ತಿಳಿದಿರಬಹುದು.

2018ರಲ್ಲಿ, ಮೂರ್ಛೆ ಬಂದು ಬಿದ್ದ ಘಟನೆಯ ನಂತರ, ಗುಣಮಯ್ ತನ್ನ ಹೆಣ್ಣುಮಕ್ಕಳೊಂದಿಗೆ ವಾಸಿಸಲು ಪ್ರಾರಂಭಿಸಿದರು - ತುಳಜಾಪುರ ಬ್ಲಾಕಿನ ಕಸಾಯಿ ಅಥವಾ ಪುಣೆ ನಗರದಲ್ಲಿ. ಆದರೆ ವಾಗ್ದರಿಯಲ್ಲಿರುವ ತನ್ನ ಮನೆಯಲ್ಲಿ ಇಂದಿರಾ ಗಾಂಧಿ ದೇಶದ ಚುಕ್ಕಾಣಿ ಹಿಡಿದ ರೀತಿಯಲ್ಲಿಯೇ ನಾನು ಮಕ್ಕಳ ಜನನದ ಕೆಲಸವನ್ನು ವಹಿಸಿಕೊಂಡಿದ್ದೆ," ಎಂದು ಅವರು ಹೇಳಿದ್ದರು.

ವಿ . ಸೂ : ಗುಣಮಯ್ ಕಾಂಬ್ಳೆ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು . ನಾವು ಲೇಖನದ ಪ್ರಕಟಣೆಯ ಸಿದ್ಧತೆಯಲ್ಲಿರುವಾಗಲೇ , ನವೆಂಬರ್ 11, 2022 ರಂದು ಅವರು ನಿಧನರಾದರು .

ಲೇಖನದ ಹಿಂದಿನ ಆವೃತ್ತಿಯು 2010 ರಲ್ಲಿ ತಥಾಪಿ - WHO ಇಂಡಿಯಾದ ಪ್ರಕಟಣೆಯಾದ ಆಸ್ ವಿ ಸೀ ಟ್ ‌ ( As We See It) ಪತ್ರಿಕೆಯಲ್ಲಿ ಪ್ರಕಟವಾ ಗಿತ್ತು .

ಅನುವಾದ: ಶಂಕರ. ಎನ್. ಕೆಂಚನೂರು

Medha Kale

পুণে নিবাসী মেধা কালে নারী এবং স্বাস্থ্য - এই বিষয়গুলির উপর কাজ করেন। তিনি পারির মারাঠি অনুবাদ সম্পাদক।

Other stories by মেধা কালে
Editor : Priti David

প্রীতি ডেভিড পারি-র কার্যনির্বাহী সম্পাদক। তিনি জঙ্গল, আদিবাসী জীবন, এবং জীবিকাসন্ধান বিষয়ে লেখেন। প্রীতি পারি-র শিক্ষা বিভাগের পুরোভাগে আছেন, এবং নানা স্কুল-কলেজের সঙ্গে যৌথ উদ্যোগে শ্রেণিকক্ষ ও পাঠক্রমে গ্রামীণ জীবন ও সমস্যা তুলে আনার কাজ করেন।

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru