“ಹೆಂಡ ನಿಷೇಧ ಎಲ್ಲಿ ಮಾಡಿದ್ದಾರೆ?” ಎಂದು ಹೇಳುವಾಗ ಗೌರಿ ಪರ್ಮಾರ್ ಅವರ ದನಿಯಲ್ಲಿ ಕಹಿಯಾದ ವ್ಯಂಗ್ಯ ತುಂಬಿತ್ತು.
"ಒಂದೋ ಇದು ನಮಗೆ ಮಾಡಿದ ಮೋಸ, ಇಲ್ಲವೇ ನಮ್ಮ ಹಳ್ಳಿ ಈ ಗುಜರಾಜ್ ರಾಜ್ಯದಲ್ಲೇ ಇಲ್ಲ ಅನ್ನಿಸುತ್ತಿದೆ” ಎಂದು ಗೌರಿ ಹೇಳುತ್ತಾರೆ. "ನನ್ನ ಹಳ್ಳಿಯ ಗಂಡಸರು ಎಷ್ಟೋ ವರ್ಷಗಳಿಂದ ಕುಡಿಯುತ್ತಿದ್ದಾರೆ,” ಎಂದು ಹೇಳುವ ಗೌರಿ ಗುಜರಾತ್ನ ಬೊಟಾಡ್ ಜಿಲ್ಲೆಯ ರೋಜಿದ್ ಗ್ರಾಮದವರು.
ಭಾರತದಲ್ಲಿನ ಮೂರು 'ಒಣ' ರಾಜ್ಯಗಳಲ್ಲಿ ಗುಜರಾತ್ ಕೂಡ ಒಂದು. ಇಲ್ಲಿ ನಾಗರಿಕರು ಮದ್ಯವನ್ನು ಖರೀದಿಸಲು ಹಾಗೂ ಕುಡಿಯಲು ಸಾಧ್ಯವಿಲ್ಲ. ಮದ್ಯ ತಯಾರಿಕೆ ಮತ್ತು ಮಾರಾಟವನ್ನು ಗುಜರಾತ್ ಮದ್ಯ ನಿಷೇಧ (ತಿದ್ದುಪಡಿ) ಕಾಯಿದೆ, 2017 ರ ಅಡಿಯಲ್ಲಿ ನಿಷೇಧಿಸಲಾಗಿದೆ. ಅಕ್ರಮ ಮದ್ಯ ತಯಾರಿಸಿ ಮಾರಿದವರಿಗೆ ಮತ್ತು ಸೇವಿಸಿದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುತ್ತಾರೆ.
ಆದರೆ 50 ವರ್ಷದ ಗೌರಿ ಅವರು 30 ವರ್ಷಗಳ ಹಿಂದೆ ಮದುವೆಯಾಗಿ ರೋಜಿಡ್ಗೆ ಬಂದಾಗ ಯಾವುದೇ ಭಯ ಇಲ್ಲದೆ ಜನರು ನಿಯಮವನ್ನು ಉಲ್ಲಂಘಿಸಿ ಕುಡಿಯುತ್ತಿದ್ದರು. ಸ್ಥಳೀಯರು ಮದ್ಯವನ್ನು ತಯಾರಿಸಿ ಸಣ್ಣ ಸಣ್ಣ ಪಾಲಿಥಿನ್ ಚೀಲಗಳಲ್ಲಿ ಮಾರುವುದನ್ನು ಅವರು ನೋಡಿದ್ದರು.
ಈ ರೀತಿ ತಯಾರಿಸಿದ ಮದ್ಯ ಅತ್ಯಂತ ಅಪಾಯಕಾರಿ. ಮದ್ಯ ತಯಾರಿಸುವವರು ಬೇಗ ಬೇಗ ಮದ್ಯ ತಯಾರಿಸಲು ಕೆಲವೊಮ್ಮೆ ವಿಷಕಾರಿ ರಾಸಾಯನಿಕಗಳನ್ನು ಬಳಸುತ್ತಾರೆ. "ಅವರು ದ್ರವರೂಪದ ಸ್ಯಾನಿಟೈಸರ್, ಯೂರಿಯಾ ಮತ್ತು ಮೆಥನಾಲನ್ನು ಹೆಂಡದ ಜೊತೆಗೆ ಸೇರಿಸುತ್ತಾರೆ" ಎಂದು ಗೌರಿ ಹೇಳುತ್ತಾರೆ.
ಜುಲೈ 2022 ರಲ್ಲಿ ಹೀಗೆ ಅಕ್ರಮವಾಗಿ ತಯಾರಿಸಿದ ಮದ್ಯ ಸೇವಿಸಿ ಗುಜರಾತ್ನ ಅಹಮದಾಬಾದ್, ಭಾವನಗರ ಮತ್ತು ಬೊಟಾಡ್ ಜಿಲ್ಲೆಗಳಲ್ಲಿ 42 ಜನರನ್ನು ಸಾವನ್ನಪ್ಪಿದ್ದರು ಮತ್ತು ಸುಮಾರು 100 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಸಾವನ್ನಪ್ಪಿದವರಲ್ಲಿ 11 ಜನರು ಬೋಟಾಡ್ನ ಬರ್ವಾಲಾ ತಾಲೂಕಿನ ರೋಜಿದ್ ಎಂಬ ಹಳ್ಳಿಯವರು.
“ಹಾಗೆ ಸತ್ತವರಲ್ಲಿ ನನ್ನ ಮಗ ವಸ್ರಾಮ್ ಕೂಡ ಒಬ್ಬ” ಎಂದು ಗೌರಿ ಹೇಳುತ್ತಾರೆ. 30 ವರ್ಷ ಪ್ರಾಯದ ವಸ್ರಾಮ್ ಇಡೀ ಕುಟುಂಬದಲ್ಲಿ ದುಡಿದು ಮನೆ ನಡೆಸುವ ಏಕೈಕ ವ್ಯಕ್ತಿ. ಪತ್ನಿ ಮತ್ತು 4 ಹಾಗೂ 2 ವರ್ಷದ ಇಬ್ಬರು ಮಕ್ಕಳಿರುವ ಕುಟುಂಬ ಇವರದ್ದು. ಇವರು ಗುಜರಾತ್ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವಾಲ್ಮೀಕಿ ಸಮುದಾಯದವರು.
ಗೌರಿ ಜುಲೈ 25, 2022 ರಂದು ಬೆಳಿಗ್ಗೆ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ವಸ್ರಾಮ್ ಅವರಿಗೆ ಅನಾರೋಗ್ಯ ಕಾಡಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮನೆಯವರು ಅವರನ್ನು ಬರ್ವಾಲಾದ ಖಾಸಗಿ ಕ್ಲಿನಿಕ್ ಒಂದಕ್ಕೆ ಕರೆದುಕೊಂಡು ಹೋದರು. ಅಲ್ಲಿನ ವೈದ್ಯರು ವಸ್ರಾಮ್ ಅವರಿಗೆ ಅಗತ್ಯವಾಗಿ ಬೇಕಾದ ಆರೋಗ್ಯ ಸೌಲಭ್ಯಗಳನ್ನು ತಮ್ಮ ಕ್ಲಿನಿಕ್ ನಲ್ಲಿ ಇಲ್ಲ ಎಂದು ಹೇಳಿದರು. ನಂತರ ವಸ್ರಾಮ್ ಅವರನ್ನು ಬರ್ವಾಲಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. "ಅಲ್ಲಿ ವೈದ್ಯರು ಅವರಿಗೆ ಇಂಜೆಕ್ಷನ್ ನೀಡಿ ಸ್ವಲ್ಪ ಸಮಯದವರೆಗೆ ಸಲೈನ್ ಡ್ರಿಪ್ ಹಾಕಿದರು. ಮಧ್ಯಾಹ್ನ 12:30 ಕ್ಕೆ ಅವರನ್ನು ಬೊಟಾಡ್ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು," ಎಂದು ಗೌರಿ ಹೇಳುತ್ತಾರೆ.
“ಆಸ್ಪತ್ರೆಗೆ ತಲುಪಲು 45 ನಿಮಿಷಗಳಾದರೂ ಬೇಕು. ಪ್ರಯಾಣದ ಉದ್ದಕ್ಕೂ ವಸ್ರಾಮ್ ಎದೆ ನೋವಿನಿಂದ ಕಷ್ಟ ಪಡುತ್ತಿದ್ದರು. ಅವರು ಉಸಿರಾಡಲು ತೊಂದರೆಯಾಗುತ್ತಿದೆ ಎಂದು ಅವರು ಹೇಳುತ್ತಿದ್ದರು. ವಾಂತಿ ಕೂಡ ಮಾಡುತ್ತಿದ್ದರು," ಎಂದು ಗೌರಿ ಹೇಳುತ್ತಾರೆ
“ಬೊಟಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ವಸ್ರಾಮ್ ಅವರಿಗೆ ಏನಾಗಿದೆ ಎಂದು ಕೂಡ ಹೇಳಲಿಲ್ಲ. ಒಂದು ಮಾತು ಕೂಡ ಆಡಲಿಲ್ಲ,” ಎನ್ನುತ್ತಾರೆ ಗೌರಿ. ಏನಾಗುತ್ತಿದೆ ಎಂದು ಅವರನ್ನು ಕೇಳಿದಾಗ ಅವರು ವಾರ್ಡ್ ಬಿಟ್ಟು ಹೋಗುವಂತೆ ಹೇಳಿದರು.
ಗೌರಿ ಅಸಹಾಯಕತೆಯಿಂದ ತಮ್ಮ ಮಗನ ಎದೆಯನ್ನು ವೈದ್ಯರು ಪಂಪ್ ಮಾಡುತ್ತಿರುವುದನ್ನು ನೋಡುತ್ತಿದ್ದರು. ಮದ್ಯ ಸೇವನೆ ತಮ್ಮ ಮಗನನ್ನು ಈ ಸ್ಥಿತಿಗೆ ತಂದು ಬಿಟ್ಟಿದೆ ಎಂದು ಅವರು ಹೇಳುತ್ತಾರೆ. ಆದರೆ ಅದು ಅವನಿಗೆ ಉಂಟುಮಾಡಿದ ಹಾನಿಯ ಪ್ರಮಾಣ ಅವರಿಗೆ ತಿಳಿದಿರಲಿಲ್ಲ. “ಮಗನಿಗೆ ಏನಾಗಿದೆ ಎಂದು ವೈದ್ಯರನ್ನು ನಾನು ಕೇಳುತ್ತಿದ್ದೆ. ಆದರೆ ಅವರು ನನಗೆ ಏನನ್ನೂ ಹೇಳಲಿಲ್ಲ. ನಿಮ್ಮ ಮಗ ಆಸ್ಪತ್ರೆಯಲ್ಲಿದ್ದಾಗ ಕೆಟ್ಟ ಸುದ್ದಿಯೋ ಒಳ್ಳೆಯ ಸುದ್ದಿಯೋ, ಏನಾದರೊಂದನ್ನು ವೈದ್ಯರು ನಿಮಗೆ ಹೇಳಲೇ ಬೇಕು” ಎಂದು ಅವರು ಹೇಳುತ್ತಾರೆ.
ರೋಗಿಗಳು ಮತ್ತು ಅವರ ಸಂಬಂಧಿಕರ, ಅದರಲ್ಲೂ ಬಡ ಹಾಗೂ ದುರ್ಬಲ ಸಮುದಾಯಗಳ ರೋಗಿಗಳ ಜೊತೆಗೆ ವೈದ್ಯರು ವರ್ತಿಸುವ ರೀತಿ ಒಪ್ಪುವಂತದ್ದಲ್ಲ. "ಬಡವರ ಬಗ್ಗೆ ಯಾರೂ ಗಮನ ಕೊಡುವುದಿಲ್ಲ" ಎಂದು ಗೌರಿ ಹೇಳುತ್ತಾರೆ.
ರೋಗಿಗಳ ಹಕ್ಕುಗಳು ಮತ್ತು ಜವಾಬ್ದಾರಿಗಳ ಚಾರ್ಟರ್ (ಆಗಸ್ಟ್ 2021 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಮೂಲಕ ಅನುಮೋದನೆಗೊಂಡಿರುವ) ಹೇಳುವಂತೆ "ರೋಗ ಲಕ್ಷಣ ಹಾಗೂ ಅನಾರೋಗ್ಯಕ್ಕೆ ಇರುವ ಕಾರಣಗಳ ಬಗ್ಗೆ ಅಗತ್ಯ ಮಾಹಿತಿಯನ್ನು" ಪಡೆಯುವ ಹಕ್ಕು ರೋಗಿ ಅಥವಾ ರೋಗಿಗೆ ಸಂಬಂಧ ಪಟ್ಟವರಿಗೆ ಇದೆ .ಆರ್ಥಿಕ ಸ್ಥಿತಿ ಅಥವಾ ಜಾತಿಯಂತಹ ಸಾಮಾಜಿಕ ಅಂಶಗಳ ಆಧಾರದ ಮೇಲೆ ಚಿಕಿತ್ಸೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಚಾರ್ಟರ್ ಹೇಳುತ್ತದೆ.
ಗೌರಿ ಅವರನ್ನು ವಾರ್ಡ್ನಿಂದ ಹೊರಹೋಗುವಂತೆ ಹೇಳಿದ ಕೆಲವು ಗಂಟೆಗಳ ನಂತರ ಜಿಲ್ಲಾ ಆಸ್ಪತ್ರೆಯ ವೈದ್ಯರು ವಸ್ರಾಮ್ನನ್ನು ಅವರ ಮನೆಯವರನ್ನು ಕೇಳದೆ ಬೋಟಾಡ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆ ಖಾಸಗಿ ಆಸ್ಪತ್ರೆಯಲ್ಲಿ ವಸ್ರಾಮ್ ಅದೇ ದಿನ ಸಂಜೆ 6:30ಕ್ಕೆ ಮೃತಪಟ್ಟಿದ್ದಾರೆ.
"ಮದ್ಯ ನಿಷೇಧ ಎಂಬುದು ಎಂದು ದೊಡ್ಡ ತಮಾಷೆಯ ವಿಷಯವಾಗಿ ಹೋಗಿದೆ" ಎಂದು ಗೌರಿ ಮತ್ತೆ ಮತ್ತೆ ಹೇಳುತ್ತಾರೆ. “ಗುಜರಾತ್ನಲ್ಲಿ ಎಲ್ಲರೂ ಕುಡಿಯುತ್ತಾರೆ. ಆದರೆ ಬಡವರು ಮಾತ್ರ ಕುಡಿತದಿಂದ ಸಾಯುತ್ತಾರೆ,” ಎಂದು ಅವರು ಹೇಳುತ್ತಾರೆ
ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಗುಜರಾತ್ನಲ್ಲಿ ಮದ್ಯ ಸೇವನೆಯ ಚಟ ಒಂದು ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ ಪರಿಣಮಿಸಿದೆ. ವಿಷಕಾರಿ ಮದ್ಯ ಸೇವನೆಯು ವರ್ಷಗಳಲ್ಲಿ ನೂರಾರು ಜನರನ್ನು ಬಲಿತೆಗೆದುಕೊಂಡಿದೆ. ಜುಲೈ 2009 ರಲ್ಲಿ ಅಹಮದಾಬಾದ್ ಜಿಲ್ಲೆಯಲ್ಲಿ 150 ಜನರನ್ನು ಸಾಯಿಸಿದ ಕಳ್ಳಭಟ್ಟಿ ದುರಂತ ಅತ್ಯಂತ ಭೀಕರವಾದದ್ದು. ಎರಡು ದಶಕಗಳ ಹಿಂದೆ, ಅಂದರೆ ಮಾರ್ಚ್ 1989 ರಲ್ಲಿ, ವಡೋದರಾ ಜಿಲ್ಲೆಯಲ್ಲಿ 135 ಮಂದಿ ಸಾವನ್ನಪ್ಪಿದ್ದರು. ಈ ರೀತಿಯ ಸಾಮೂಹಿಕ ಮರಣಗಳು ಮೊದಲು 1977 ರಲ್ಲಿ ಅಹಮದಾಬಾದ್ನಲ್ಲಿ ಸಂಭವಿಸಿದವು. ಆಗ ಆ ನಗರದ ಸಾರಂಗ್ಪುರ, ದೌಲತ್ ಖಾನಾ ಪ್ರದೇಶದಲ್ಲಿ 101 ಜನರು ಸತ್ತು ಹೋದರು. ಇಂತಹ ಭೀಕರ ನರಮೇಧಕ್ಕೆ ಮದ್ಯದಲ್ಲಿ ಬೆರೆಸಿರುವ ಹೆಚ್ಚಿನ ಪ್ರಮಾಣದ ಮೀಥೈಲ್ ಆಲ್ಕೋಹಾಲ್ (ಮೆಥೆನಾಲ್) ಕಾರಣವೆಂದು ಗುರುತಿಸಲಾಗಿದೆ.
ಸಾರಾಯಿ ತಯಾರಿಸಲು ಯಾವುದೇ ಪ್ರಮಾಣಿತ ಪ್ರಕ್ರಿಯೆಗಳಿಲ್ಲ. ಹಳ್ಳಿಗಾಡಿನಲ್ಲಿ ಸಾರಾಯಿಯನ್ನು ಸಾಮಾನ್ಯವಾಗಿ ಹುದುಗುವಿಕೆ (fermentation) ಮತ್ತು ಕಾಕಂಬಿ ಅಥವಾ ಸಸ್ಯದ ಸಾರವನ್ನು ಬಟ್ಟಿ ಇಳಿಸಿ ತಯಾರಿಸುತ್ತಾರೆ. ಆದರೆ ಬೇಡಿಕೆ ಹೆಚ್ಚಾದಾಗ ಅಕ್ರಮ ಮದ್ಯ ತಯಾರಕರು ಕೈಗಾರಿಕೆಗಳಲ್ಲಿ ಬಳಸುವ ಈಥೈಲ್ ಆಲ್ಕೋಹಾಲನ್ನು ಸೇರಿಸುತ್ತಾರೆ. ಈ ಆಲ್ಕೋಹಾಲ್ ಕೈಗೆ ಹಾಕುವ ಸ್ಯಾನಿಟೈಸರ್ಗಳಲ್ಲಿಯೂ ಇರುತ್ತದೆ. ಇಷ್ಟಲ್ಲದೆ ವಿಷಕಾರಿ ಮೆಥನಾಲನ್ನು ಸಹ ಸೇರಿಸುತ್ತಾರೆ.
ಇದು ಕೇವಲ ಮೇಲ್ನೋಟಕ್ಕೆ ಕಾಣುವುದು ಮಾತ್ರ, ಒಳಗೆ ಬೇರೆಯೇ ಇದೆ ಎಂದು ಈ ಅಕ್ರಮದ ಬಗ್ಗೆ ತಿಳಿದವರು ಹೇಳುತ್ತಾರೆ.
ಈ ಅಕ್ರಮ ಮದ್ಯದ ಮಾರಾಟದಲ್ಲಿ ಅಕ್ರಮ ಮದ್ಯತಯಾರಕರು ಮಾತ್ರವಲ್ಲ ಪೊಲೀಸರು ಮತ್ತು ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎಂದು ಅಹಮದಾಬಾದ್ ಮೂಲದ ಹಿರಿಯ ಸಮಾಜಶಾಸ್ತ್ರಜ್ಞ ಘನಶ್ಯಾಮ್ ಶಾ ಹೇಳುತ್ತಾರೆ.
ಜಸ್ಟಿಸ್ ಕೆ ಎಂ ಮೆಹ್ತಾ ನೇತೃತ್ವದ ಲಠ್ಠಾ (ಹೂಚ್) ತನಿಖಾ ಆಯೋಗ ಸೇರಿದಂತೆ 2009 ರ ಘಟನೆಯ ನಂತರ ಅಕ್ರಮ ಕಳ್ಳಭಟ್ಟಿ ಸೇವನೆ ದುರಂತಗಳನ್ನು ತನಿಖೆ ಮಾಡಲು ಮತ್ತು ತಡೆಗಟ್ಟಲು ಸ್ಥಾಪಿಸಲಾದ ಸರ್ಕಾರಿ ತನಿಖಾ ಆಯೋಗಗಳು ನಿಷೇಧ ನೀತಿಯು ಪರಿಣಾಮಕಾರಿಯಾಗಿ ಜಾರಿಯಾಗದೆ ಇರುವುದನ್ನು ಎತ್ತಿ ತೋರಿಸಿವೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಗುಜರಾತ್ನಲ್ಲಿ ಕಳ್ಳಭಟ್ಟಿಯು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ ಪರಿಣಮಿಸಿದೆ. ವಿಷಕಾರಿ ಸಾರಾಯಿ ಸೇವನೆಯು ವರ್ಷಗಳಲ್ಲಿ ನೂರಾರು ಜನರನ್ನು ಬಲಿತೆಗೆದುಕೊಂಡಿದೆ. ಜುಲೈ 2009 ರಲ್ಲಿ ಅತ್ಯಂತ ಭೀಕರ ಕಳ್ಳಭಟ್ಟಿ ದುರಂತಗಳು ಸಂಭವಿಸಿದವು
ಗುಜರಾತಿನಲ್ಲಿ ಆರೋಗ್ಯದ ನೆಲೆಯಿಂದ ಮಾತ್ರ ಮದ್ಯ ಸೇವನೆಯನ್ನು ಅನುಮತಿಸಲಾಗಿದೆ. ಅದೂ ಕೂಡ ವೈದ್ಯರು ಹೇಳಿದರೆ ಮಾತ್ರ. ಆದರೂ ಹೊರ ರಾಜ್ಯದಿಂದ ಬಂದವರಿಗೆ ಇಲ್ಲಿ ಮದ್ಯ ದೊರೆಯುತ್ತದೆ. ಅದಕ್ಕಾಗಿ ಅವರು ಅಧಿಕೃತ ಅಂಗಡಿಗಳಲ್ಲಿ ಖರೀದಿಸಲು ತಾತ್ಕಾಲಿಕ ಪರವಾನಗಿಯನ್ನು ಪಡೆಯಬೇಕು.
"ಮಧ್ಯಮ ವರ್ಗ ಮತ್ತು ಮೇಲ್ ಮಧ್ಯಮ ವರ್ಗದವರಿಗೆ ಮದ್ಯ ನಿಗದಿತ ದರದಲ್ಲಿ ಸಿಗುತ್ತದೆ. ಬಡವರು ಅದನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಅವರು ಹಳ್ಳಿಗಳಲ್ಲಿ ತಯಾರಿಸಿದ ಅಗ್ಗದ ಹೆಂಡದ ಮೊರೆ ಹೋಗುತ್ತಾರೆ,” ಎಂದು ಶಾ ಹೇಳುತ್ತಾರೆ.
ಅಕ್ರಮ ಮದ್ಯ ಸೇವನೆಯಿಂದ ಜನ ತಕ್ಷಣಕ್ಕೆ ಜನ ಸಾಯದೇ ಇದ್ದರೂ ಅದು ಅವರಲ್ಲಿ ಕಣ್ಣಿನ ಸಮಸ್ಯೆಯನ್ನು ಮತ್ತು ಮೆದುಳು ಹಾಗೂ ಯಕೃತ್ತಿಗೆ ಸಮಸ್ಯೆಗಳನ್ನು ಉಂಟು ಮಾಡಿ ರೋಗಗ್ರಸ್ತರನ್ನಾಗಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
ದುರದೃಷ್ಟವೆಂದರೆ ಗುಜರಾತ್ನ ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆ ಈ ಆರೋಗ್ಯ ಸಮಸ್ಯೆಯನ್ನು ನಿಭಾಯಿಸಲು ಇನ್ನೂ ಸಜ್ಜುಗೊಂಡಿಲ್ಲ.
ಮೊದಲೇ ಜಿಲ್ಲಾ ಆಸ್ಪತ್ರೆಗಳು ಹಾಗೂ ಗ್ರಾಮೀಣ ಪ್ರದೇಶದ ಜನರ ತುರ್ತು ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಾಗಿ ಬೇಕಾದಷ್ಟು ಹಾಸಿಗೆಗಳು ಇಲ್ಲ. ದೇಶದ ಜಿಲ್ಲಾ ಆಸ್ಪತ್ರೆಗಳ ಕಾರ್ಯಕ್ಷಮತೆಯ ಕುರಿತು ಬಂದಿರುವ ನೀತಿ ಆಯೋಗದ 2021ರ ವರದಿ ಯ ಪ್ರಕಾರ ಗುಜರಾತ್ ಪ್ರತಿ 1 ಲಕ್ಷ ಜನಸಂಖ್ಯೆಗೆ ಸರಾಸರಿ 19 ಹಾಸಿಗೆಗಳು ಮಾತ್ರ ಲಭ್ಯ ಇವೆ. ಇದು ರಾಷ್ಟ್ರೀಯ ಸರಾಸರಿ 24 ಕ್ಕಿಂತ ಕಡಿಮೆ.
ಇಷ್ಟೇ ಅಲ್ಲದೆ ಜಿಲ್ಲಾ ಮತ್ತು ಉಪಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದ್ದು, ಗುಜರಾತ್ನ ಗ್ರಾಮಾಂತರದಲ್ಲಿ ಒಟ್ಟು 74 ಜನ ಮಾತ್ರ ಇದ್ದಾರೆ. ಗ್ರಾಮೀಣ ಆರೋಗ್ಯ ಅಂಕಿಅಂಶ - 2020-21 ರ ಪ್ರಕಾರ 799 ವೈದ್ಯರು ಇರಬೇಕಾದಲ್ಲಿ 588 ವೈದ್ಯರು ಮಾತ್ರ ಇದ್ದಾರೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ 333 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHC) 1,197 ತಜ್ಞ ವೈದ್ಯರ, ಶಸ್ತ್ರಚಿಕಿತ್ಸಕರ, ಪ್ರಸೂತಿ -ಸ್ತ್ರೀರೋಗತಜ್ಞರ, ವೈದ್ಯರ ಮತ್ತು ಮಕ್ಕಳ ತಜ್ಞರ ಕೊರತೆಯಿದೆ.
ಜುಲೈ 26, 2022 ರಂದು ಭಾವನಗರದಲ್ಲಿರುವ ಸರ್ ಟಿ ಹಾಸ್ಪಿಟಲ್ ಎಂಬ ಸಿವಿಲ್ ಆಸ್ಪತ್ರೆಗೆ ತನ್ನ ತಂದೆಯನ್ನು 24 ವರ್ಷದ ದಿನಗೂಲಿ ಕಾರ್ಮಿಕ ಮತ್ತು ಕೃಷಿ ಕೆಲಸಗಾರ ಕರಣ್ ವೀರ್ಗಮ ಕರೆದೊಯ್ದರು. ಆಗ ಅವರನ್ನು ಮಾತನಾಡಿಸಿದ್ದು ಅತ್ಯಂತ ಒತ್ತಡದ ಕೆಲಸದಲ್ಲಿದ್ದ ಓರ್ವ ಸಿಬ್ಬಂದಿ. "ನಾವು ಆಸ್ಪತ್ರೆಯಲ್ಲಿ ಎಲ್ಲಿಗೆ ಹೋಗಬೇಕೆಂಬುದು ನಮಗೆ ಗೊತ್ತೇ ಆಗಲಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳು ಅವರಷ್ಟಕ್ಕೇ ಕೆಲಸ ಮಾಡುತ್ತಿದ್ದರು ಮತ್ತು ಅವರಿಗೇ ಏನು ಮಾಡಬೇಕು ಎಂದು ತಿಳಿದಿರಲಿಲ್ಲ" ಎಂದು ಕರಣ್ ಹೇಳುತ್ತಾರೆ.
2009ರಲ್ಲಿ ಅಕ್ರಮ ಮದ್ಯ ಸೇವಿಸಿ ಸಂಭವಿಸಿದ ಸಾವುಗಳನ್ನು ಎದುರಿಸಲು ದುರಂತ ನಡೆದ ಆರಂಭಿಕ ಗಂಟೆಗಳಲ್ಲಿ ಯಾವುದೇ ತುರ್ತು ಸಿದ್ಧತೆಗಳನ್ನೂ ಮಾಡಿರಲಿಲ್ಲ ಎಂದು ಲಠ್ಠಾ ತನಿಖಾ ಆಯೋಗ (Laththa Commision of Inquiry) ವರದಿ ಮಾಡಿದೆ. ವಿಷಕಾರಿ ಮೆಥನಾಲ್ ಸೇವನೆಗೆ ಚಿಕಿತ್ಸೆ ನೀಡಲು ಬೇಕಾದ ಚಿಕಿತ್ಸಾ ಪ್ರೋಟೋಕಾಲ್ ಇಲ್ಲದೇ ಇರುವುದನ್ನು ಆಯೋಗವು ಎತ್ತಿ ತೋರಿಸಿದೆ.
ಕರಣ್ ಅವರ ತಂದೆ 45 ವರ್ಷದ ಕೃಷಿ ಕೆಲಸಗಾರನಾಗಿದ್ದ ಭೂಪದ್ಭಾಯ್ ಕೂಡ ರೋಜಿದ್ನಲ್ಲಿ ಅಕ್ರಮ ಕಳ್ಳಭಟ್ಟಿ ಸೇವಿಸಿ ಆಸ್ಪತ್ರೆಗೆ ದಾಖಲಾದ ಹಲವರಂತೆ ಅದೇ ಮದ್ಯವನ್ನು ಸೇವಿಸಿದ್ದರು. ಆ ದಿನ ಬೆಳಗ್ಗೆ 6 ಗಂಟೆಗೆ ಅವರಿಗೆ ಉಸಿರಾಟದ ತೊಂದರೆ ಮತ್ತು ಅನಾರೋಗ್ಯ ಕಾಡಿತು.
ಕರಣ್ ಅವರನ್ನು ಸಿಎಚ್ಸಿ ಬರ್ವಾಲಾಗೆ ಕರೆದೊಯ್ದಾಗ ಅಲ್ಲಿನ ಸಿಬ್ಬಂದಿ ಭೂಪಾದ್ಭಾಯ್ ಅವರತ್ತ ನೋಡಲೂ ಇಲ್ಲ. ಅವರನ್ನು ತಕ್ಷಣವೇ ಭಾವನಗರ ಆಸ್ಪತ್ರೆಗೆ ಕಳುಹಿಸಿದರು. ಇದು ಅಕ್ರಮ ಮದ್ಯ ಸೇವನೆಯಿಂದ ಆಗಿರುವ ಸಮಸ್ಯೆ ಎಂಬುದು ಅವರಿಗೆ ತಿಳಿದಿತ್ತು. "ಏನು ತಪ್ಪಾಗಿದೆ ಎಂಬುದು ಅವರಿಗೆ ಗೊತ್ತಿತ್ತು" ಎಂದು ಕರಣ್ ಹೇಳುತ್ತಾರೆ. “ಸಮಯವನ್ನು ವ್ಯರ್ಥ ಮಾಡದೆ ಸಿ.ಎಚ್.ಸಿಯವರು ನಮ್ಮನ್ನು ಭಾವನಗರಕ್ಕೆ ಹೋಗಲು ಕೇಳಿದರು. ಸೌಲಭ್ಯದ ವಿಚಾರದಲ್ಲಿ ಅದೇ ಒಳ್ಳೆಯ ಆಯ್ಕೆಯಾಗಿತ್ತು," ಎಂದು ಅವರು ಹೇಳುತ್ತಾರೆ.
ಆದರೆ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಆ ಆಸ್ಪತ್ರೆಗೆ ಹೋಗಲು ಎರಡು ಗಂಟೆಯಾದರೂ ಬೇಕು. “ರೋಜಿದ್ನಿಂದ ಭಾವನಗರದವರೆಗಿನ ರಸ್ತೆ ಕೂಡಾ ಚೆನ್ನಾಗಿಲ್ಲ. ಹಾಗಾಗಿ ಎರಡು ಗಂಟೆ ತೆಗೆದುಕೊಳ್ಳುತ್ತದೆ," ಎಂದು ಆ ಪ್ರದೇಶದಲ್ಲಿ 108 ಆಂಬ್ಯುಲೆನ್ಸನ್ನು ಓಡಿಸುವ ಪರೇಶ್ ದುಲೇರಾ ಹೇಳುತ್ತಾರೆ.
ದುಲೇರಾ ಅವರು ಭೂಪಾದಭಾಯಿಯನ್ನು ಎತ್ತಿಕೊಂಡು ಹೋಗುವಾಗ ಸ್ಟ್ರೆಚರ್ ಅಗತ್ಯ ಬೀಳದೇ ಇದ್ದುದನ್ನು ನೆನಪಿಸಿಕೊಳ್ಳುತ್ತಾರೆ. "ಅವರು ಹೆಚ್ಚಿನ ನೆರವಿಲ್ಲದೆ ಆಂಬ್ಯುಲೆನ್ಸ್ ಒಳಗೆ ಬಂದರು" ಎಂದು ದುಲೇರಾ ಹೇಳುತ್ತಾರೆ.
ಸಾರ್ವಜನಿಕ-ಖಾಸಗಿ-ಪಾಲುದಾರಿಕೆಯಲ್ಲಿ ಕಾರ್ಯನಿರ್ವಹಿಸುವ ಈ ಆಂಬ್ಯುಲೆನ್ಸ್ ಸೇವೆ ತುರ್ತು ಸಮಯದಲ್ಲಿ ಆಸ್ಪತ್ರೆಗೆ ತಲುಪುವ ತನಕ ಬೇಕಾದ ಆರೈಕೆಯನ್ನು ನೀಡುತ್ತದೆ. ಇದರಲ್ಲಿ ಸಹಾಯಕ ನರ್ಸ್-ಸೂಲಗಿತ್ತಿ ಮತ್ತು ಜನರಲ್ ನರ್ಸ್-ಸೂಲಗಿತ್ತಿಯರೂ ಇರುತ್ತಾರೆ. ಈ ವಾಹನದಲ್ಲಿ ಆಮ್ಲಜನಕದ ಸಿಲಿಂಡರ್, ಸಲೈನ್ ಬಾಟಲಿಗಳು ಮತ್ತು ಇಂಜೆಕ್ಷನ್ಗಳೂ ಇವೆ ಎಂದು ದುಲೇರಾ ಹೇಳುತ್ತಾರೆ.
ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ನಡುವೆಯೂ ಭೂಪಾದ್ ಭಾಯಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. "ಸಿಬ್ಬಂದಿಗಳು ಅವರನ್ನು ಒಳಗೆ ಕರೆದುಕೊಂಡು ಹೋದರು.ಆದರೆ ತುಂಬಾ ಜನ ತುಂಬಿದ್ದರಿಂದ ನಮಗೆ ಯಾವುದೇ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗಲಿಲ್ಲ" ಎಂದು ಕರಣ್ ಹೇಳುತ್ತಾರೆ. "ಒಂದು ಗಂಟೆಯ ನಂತರ ಅವರು ನಿಧನರಾದರು ಎಂದು ನಮಗೆ ತಿಳಿಸಿದರು. ನಮಗೆ ಅದನ್ನು ನಂಬಲೂ ಸಾಧ್ಯವಿರಲಿಲ್ಲ,”ಎಂದು ಅವರು ಹೇಳುತ್ತಾರೆ. ಆಂಬ್ಯುಲೆನ್ಸ್ನ ಒಳಗೆ ತಮ್ಮ ತಂದೆ ಚೆನ್ನಾಗಿದ್ದರು ಎಂದು ಕರಣ್ ಮತ್ತೆ ಮತ್ತೆ ಹೇಳುತ್ತಾರೆ.
"ಅವರು ತೀರಿಕೊಂಡಿದ್ದಾರೆ ಎಂಬುದು ಗೊತ್ತು. ಆದರೆ ಅವರ ಆರೋಗ್ಯವು ಹೇಗೆ ಮತ್ತೆ ಯಾಕೆ ಇಷ್ಟು ಬೇಗ ಹದಗೆಟ್ಟಿತು ಎಂಬುದನ್ನು ನಾನು ತಿಳಿದುಕೊಳ್ಳಬೇಕು. ನಮ್ಮ ಕುಟುಂಬಕ್ಕೆ ಆ ಬಗ್ಗೆ ಸ್ವಲ್ಪ ಮಾಹಿತಿಯಾದರೂ ಬೇಕು," ಎಂದು ಕರಣ್ ಹೇಳುತ್ತಾರೆ. ಆದರೆ ಮಾರಣಾಂತಿಕ ಪರಿಸ್ಥಿತಿಗೆ ಕಾರಣ ಏನೆಂಬುದು ಅವರಿಗೆ ಯಾರೂ ತಿಳಿಸಿಲ್ಲ.
ಭೂಪಾದ್ ಭಾಯಿ ನಿಧನರಾಗಿ ಎರಡು ತಿಂಗಳಾದರೂ ಕುಟುಂಬದವರಿಗೆ ಅವರ ಮರಣೋತ್ತರ ಪರೀಕ್ಷೆಯ ವರದಿ ಕೂಡ ಸಿಕ್ಕಿಲ್ಲ.
ಜುಲೈ 27, 2022 ರಂದು ಪೊಲೀಸರು 15 ಮಂದಿಯನ್ನು ಬಂಧಿಸಿ ಮೆಥನಾಲ್ ಸ್ವಾಧೀನಪಡಿಸಿಕೊಂಡು ನಕಲಿ ಕಳ್ಳಭಟ್ಟಿ ಸಾರಾಯಿ ತಯಾರಿಸುವ ಮತ್ತು ಮಾರಾಟ ಮಾಡುವ ಆರೋಪದ ಮೇಲೆ ಬಂಧಿಸಿದ್ದರು. ಜುಲೈ 29 ರ ಈ ವರದಿ ನಂತರ ಮೇಲೆ ರಾಜ್ಯಾದ್ಯಂತ ಪೊಲೀಸರು 2,400 ಕ್ಕೂ ಹೆಚ್ಚು ಕಳ್ಳಭಟ್ಟಿ ತಯಾರಕರು ಹಾಗೂ ಮಾರಾಟಗಾರರನ್ನು ಬಂಧಸಿ 1.5 ಕೋಟಿ ರುಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡರು.
ಬೋಟಾಡ್ನಲ್ಲಿ ಪೊಲೀಸರ ಈ ಕ್ರಮ ಕಡಿಮೆಯಾದಂತೆ ಮನೆಯಲ್ಲಿ ತಯಾರಿಸಿದ 20 ರುಪಾಯಿಯ ಮದ್ಯದ ಒಂದು ತೊಟ್ಟೆ 100 ರುಪಾಯಿಗೆ ಮಾರಾಟವಾಯಿತು.
ಠಾಕೂರ್ ಫ್ಯಾಮಿಲಿ ಫೌಂಡೇಶನ್ ನೀಡುವ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಕುರಿತು ಪಾರ್ಥ್ ಎಮ್.ಎನ್. ಈ ವರದಿಯನ್ನು ಮಾಡಿದ್ದಾರೆ. ಈ ವರದಿಯಲ್ಲಿನ ವಿಷಯಗಳ ಮೇಲೆ ಠಾಕೂರ್ ಫ್ಯಾಮಿಲಿ ಫೌಂಡೇಶನ್ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.
ಅನುವಾದಕರು: ಚರಣ್ ಐವರ್ನಾಡು