ವಂದನಾ ಕೋಲಿ ಮತ್ತು ಗಾಯತ್ರಿ ಪಾಟೀಲ್ ಅವರು ಸೋಮವಾರ ಬೆಳಗಿನ 7 ಗಂಟೆ ಸುಮಾರಿಗೆ ಸುಡುವ ಬಿಸಿಲಿನಲ್ಲಿ ಮುಂಬೈನ ಸಾಸೂನ್ ಡಾಕ್ ಬಳಿಯ ಜೆಟ್ಟಿಯಲ್ಲಿ ಮೀನುಗಳನ್ನು ಹೊತ್ತು ಬರುವ ದೋಣಿಗಾಗಿ ಆತಂಕದಿಂದ ಕಾಯುತ್ತಿದ್ದರು.
ಅವರು ಕೊಲಾಬಾದ ಕೋಲಿವಾಡ ಪ್ರದೇಶದ ತಮ್ಮ ಮನೆಯಿಂದ ಆ ಬೆಳಿಗ್ಗೆ ಮೀನುಗಳನ್ನು ಕೊಂಡುಕೊಳ್ಳಲು ಢಕ್ಕೆಗೆ ಸುಮಾರು ಎರಡು ಕಿಲೋಮೀಟರ್ ನಡೆದು ಬರುತ್ತಾರೆ. ಇದು ಅವರ ವಾರದ ಐದು ದಿನಗಳ ದಿನಚರಿಯಾಗಿದೆ - ತಾಜಾ ಮೀನುಗಳನ್ನು ಖರೀದಿಸುವುದು ಮತ್ತು ಹತ್ತಿರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು (ಮಂಗಳವಾರ ಮತ್ತು ಗುರುವಾರ, ಅನೇಕ ಜನರು ಮೀನು ತಿನ್ನುವುದಿಲ್ಲ, ಹೀಗಾಗಿ ಆ ದಿನಗಳಲ್ಲಿ ಮಾರಾಟ ಕಡಿಮೆಯಿರುತ್ತದೆ) ಎಂದು ಅವರು ಹೇಳುತ್ತಾರೆ.
53 ವರ್ಷದ ವಂದನಾ ಹೇಳುತ್ತಾರೆ, “ಭಾನುವಾರದಂದು ವ್ಯಾಪಾರ ಒಂದಷ್ಟು ಹೆಚ್ಚಿರುತ್ತದೆ, ಆದರೆ ನಿನ್ನೆಯ ವ್ಯಾಪಾರ ಲಾಭ ತರಲಿಲ್ಲ. ಆ ನಷ್ಟವನ್ನು ಹೇಗಾದರೂ ಸರಿದೂಗಿಸಬೇಕು ಇಲ್ಲದಿದ್ದರೆ ಈ ವಾರದ ರೇಷನ್ ಖರೀದಿಸಲು ಕಷ್ಟವಾಗುತ್ತದೆ.” ಅವರು ಮತ್ತು 51 ವರ್ಷದ ಗಾಯತ್ರಿ, ಇಬ್ಬರೂ ಕೋಲಿ ಸಮುದಾಯಕ್ಕೆ ಸೇರಿದವರು (ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗದಡಿ ಪಟ್ಟಿ ಮಾಡಲಾಗಿದೆ) ಮತ್ತು ಕಳೆದ 28 ವರ್ಷಗಳಿಂದ ಆತ್ಮೀಯ ಸ್ನೇಹಿತರು.
ಬೋಟ್ಗಳು ಜೆಟ್ಟಿಗೆ ಬರಲಾರಂಭಿಸಿದಂತೆ ಅಲ್ಲಿ ಕಾಯುತ್ತಿದ್ದ ಸುಮಾರು 40-50 ಮಹಿಳೆಯರು ಮೀನು ಖರೀದಿಗೆಂದು, ದೋಣಿ ಮಾಲೀಕರು ಅಥವಾ ಮೀನುಗಾರರಿಗೆ ಮೀನು ಮಾರಾಟ ಮಾಡಲು ಹರಾಜಿಗೆ ಸಹಾಯ ಮಾಡುವ ಮಧ್ಯವರ್ತಿಗಳ/ಹರಾಜುದಾರರ ಸುತ್ತಲೂ ಜಮಾಯಿಸಲು ಪ್ರಾರಂಭಿಸಿದರು. ವಂದನಾ, "200 ರೂಪಾಯಿಗೆ ಕೊಡು (ಚಲ್, ಆತಾ ದೇ 200 ಮಾಧೆ)". ಕೊನೆಗೆ ಒಂದು ಪಾಲು ಸೀಗಡಿಯನ್ನು 240 ರೂಪಾಯಿಗಳಿಗೆ ಖರೀದಿಸಿದರು. ಬೆಳಗಿನ 9 ಗಂಟೆ ಸುಮಾರಿಗೆ, ತೀವ್ರ ಚೌಕಾಸಿಯ ನಂತರ, ಅವರು ಮತ್ತು ಗಾಯತ್ರಿ ಸೀಗಡಿಗಳು, ಸಮುದ್ರ ಸೀಗಡಿ ಮತ್ತು ಬೊಂಬಿಲ್ಗಳನ್ನು ಸಂಗ್ರಹಿಸಿದರು. ದಿನದ ಬೆಲೆಯನ್ನು ಅವಲಂಬಿಸಿ ಅವರು ಪ್ರತಿ ದಿನ 7ರಿಂದ 10 ಕೆಜಿ ಮೀನು ಖರೀದಿಸುತ್ತಾರೆ.
ವಂದನಾ ಗಾಯತ್ರಿಗೆ ಸಂಕೇತ ನೀಡುತ್ತಾಳೆ: " ಘೆತ್ಲಾ, ನಿಘೂಯಾ (ತಗೊಂಡಾಯ್ತು, ಹೋಗೋಣ)."
ʼಇಲ್ಲಿನ ಹೆಂಗಸರು ಡಾಕ್ಟರ್ ಹತ್ರ ಹೋಗೋದಿಲ್ಲ, ಅವರು ಮೈ-ಕೈ ನೋವಿನ ಮಾತ್ರೆ ತಗೊಂಡು ಸುಮ್ನಾಗ್ತಾರೆ. ಯಾಕಂದ್ರೆ ಅವರ ಹತ್ರ ಡಾಕ್ಟರ್ ಹತ್ರ ಹೋಗೋವಷ್ಟು ಹಣ ಇರಲ್ಲ, ಜೊತೆಗೆ ಈ ಕೊವಿಡ್ನಿಂದಾಗಿ ಡಾಕ್ಟರ್ ಹತ್ರ ಹೋಗೋದಕ್ಕೆ ಹೆದರ್ತಾರೆʼ
“ಮೊದಲು ಇದಕ್ಕಿಂತಲೂ ಹೆಚ್ಚು ಮೀನು ತಗೊತಿದ್ವಿ, ಆದ್ರೆ ಕೊವಿಡ್ ವ್ಯಾಪಾರ ಹಾಳುಮಾಡಿದೆ” ಎನ್ನುತ್ತಾರೆ ವಂದನಾ. (ನೋಡಿ: Mumbai fishermen: no shelter from this storm ) “ಈಗ ಜನರು ಮೊದಲಿನಷ್ಟು ಖರೀದಿ ಮಾಡ್ತಿಲ್ಲ ನಮ್ಮ ಹತ್ರ.” ಎಂದು ತುಂಬಿದ ನೀಲಿ ಪ್ಲಾಸ್ಟಿಕ್ ಟಬ್ ಒಂದನ್ನು ಸೀತಾ ಶೆಳ್ಕೆಯವರ ತಲೆಯ ಮೇಲೆ ಇರಿಸಲು ಸಹಾಯ ಮಾಡುತ್ತಾ ಈ ಮಾತುಗಳನ್ನು ಹೇಳಿದರು. ಸಸ್ಸೂನ್ ಢಕ್ಕೆಯಲ್ಲಿನ ಸೀತಾ ಮತ್ತಿತರ ಕೂಲಿ ಮಹಿಳೆಯರು ಅಲ್ಲಿಂದ ಕೊಲಬಾ ಮಾರುಕಟ್ಟೆಗೆ ಮೀನು ಹೊತ್ತು ತರಲು ರೂಪಾಯಿ 40-50ಷ್ಟು ಶುಲ್ಕ ವಿಧಿಸುತ್ತಾರೆ. ಆ ದಿನ ಗಾಯತ್ರಿ ತನ್ನ ಬುಟ್ಟಿಯನ್ನು ಅದೇ ದಾರಿಯಾಗಿ ಸಾಗುತ್ತಿದ್ದ ನೆರೆಮನೆಯವರ ದ್ವಿಚಕ್ರ ವಾಹನದಲ್ಲಿರಿಸಿ ಕಳುಹಿಸಿದ್ದರು.
“ಮೊದ್ಲೆಲ್ಲ ನಾನೇ ಹೊತ್ಕೊಂಡು ಹೋಗ್ತಿದ್ದೆ, ಆದ್ರೆ ಹಾರ್ಟ್ ಆಪರೇಷನ್ ಆದ ಮೇಲೆ ಜಾಸ್ತಿ ಭಾರ ಎತ್ತೋದಕ್ಕೆ ಆಗ್ತಿಲ್ಲ,” ಎನ್ನುತ್ತಾರೆ ವಂದನಾ. ಸೀತಾ ಮೀನಿನ ಬುಟ್ಟಿಯನ್ನು ತಲೆಯ ಮೇಲಿರಿಸಿಕೊಂಡ ನಂತರ ಮೂವರು ಮಹಿಳೆಯರೂ ಅಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಮಾರುಕಟ್ಟೆಯತ್ತ ನಡೆಯತೊಡಗಿದರು. ಅವರು ಆ ದಾರಿಯಲ್ಲಿ ನಡುವೆ ಒಮ್ಮೆ ಮಾತ್ರ ಪುಡಿ ಮಾಡಲಾದ ಐಸ್ ಖರೀದಿಗಾಗಿ ಮಾತ್ರವೇ ನಿಂತಿದ್ದರು. ಅಲ್ಲಿ ವಂದನಾ ಹತ್ತು ರೂಪಾಯಿಗಳ ಎರಡು ನೋಟ್ ನೀಡಿ ಐಸ್ ಖರೀದಿ ಮಾಡಿದರು.
2008ರ ಡಿಸೆಂಬರ್ ತಿಂಗಳಿನಲ್ಲಿ, ವಂದನಾ ಆಂಜಿಯೋಪ್ಲಾಸ್ಟಿಗೆ ಒಳಗಾಗಬೇಕಾಯಿತು. ಒಂದು ರಾತ್ರಿ ಎದೆನೋವು ಕಾಣಿಸಿಕೊಂಡ ನಂತರ ಅವರ ಪತಿ ದಕ್ಷಿಣ ಮುಂಬೈನ ನಾಗ್ಪಾಡಾ ಪ್ರದೇಶದ ಜೆಜೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವಂದನಾ ಅವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬಕ್ಕೆ ಮಾಹಿತಿ ನೀಡಲಾಯಿತು. "ಆಪರೇಷನ್ ಆದಾಗಿನಿಂದ ನನಗೆ ಒಂದು ಲೀಟರ್ ನೀರಿನ ಬಾಟಲಿಯನ್ನು ಕೂಡಾ ಸಾಗಿಸೋಕೆ ಆಗ್ತಿಲ್ಲ. ಒಂದಿಷ್ಟು ಓಡುವುದು, ಬಾಗುವುದು ಕೂಡಾ ಆಗ್ತಿಲ್ಲ. ನನ್ನ ಆರೋಗ್ಯಸರಿಯಿಲ್ಲದಿದ್ದರೂ, ನನ್ನ ಕುಟುಂಬಕ್ಕಾಗಿ ಕೆಲಸ ಮಾಡಲೇಬೇಕಾಗಿದೆ" ಎಂದು ಅವರು ಹೇಳುತ್ತಾರೆ.
ಗಾಯತ್ರಿಯವರತ್ತ ನೋಡುತ್ತಾ, ಅವರು ಮಾತು ಮುಂದುವರೆಸಿ “ಇವ್ಳು ದಿನಾ ಆಸ್ಪತ್ರೆಗೆ ಡಬ್ಬಿ [ಊಟ] ತಗೊಂಡು ಬರ್ತಿದ್ಲು. ನಾನು ಆಸ್ಪತ್ರೆಯಲ್ಲಿದ್ದಾಗ ನನ್ನ ಮಗ ಮತ್ತೆ ಗಂಡನಿಗೂ ಊಟ ಕಳಿಸ್ತಿದ್ಲು. ಅವಳು ತೊಂದರೆಯಲ್ಲಿದ್ದಾಗ ನಾನು ಕಾಳಜಿ ಮಾಡಿದ ಹಾಗೆಯೇ ಅವಳೂ ನನ್ನ ಕುಟುಂಬದ ಕಾಳಜಿ ಮಾಡಿದ ವಿಷಯ ಕೇಳಿ ತುಂಬಾ ಖುಷಿಯಾಗಿತ್ತು. ನಾವಿಬ್ಬರೂ ಬಡವರೇ ಆಗಿರೋದ್ರಿಂದಾಗಿ ನಮಗೆ ಒಬ್ರಿಗೊಬ್ರು ಹಣ ಸಹಾಯ ಮಾಡೋದಕ್ಕಾಗಲ್ಲ, ಆದ್ರೆ ಯಾವತ್ತಿಗೂ ನಮ್ಮ ಸ್ನೇಹ ಹಾಗೇ ಇದೆ.”
ಗಾಯತ್ರಿ ತನ್ನ ಸೀರೆಯ ಕಟ್ಟನ್ನು ಚೂರು ಕೆಳಗಿಳಿಸಿ ಅಲ್ಲಿದ್ದ ಗುರುತನ್ನು ತೋರಿಸುತ್ತಾ ಕಿಡ್ನಿ ಕಸಿಯ ಪ್ರಕ್ರಿಯೆಯಲ್ಲಿ ತನ್ನ ಕಿಡ್ನಿಯನ್ನು ಮಗಳಿಗೆ ನೀಡಿದ್ದನ್ನು ವಿವರಿಸುತ್ತಿದ್ದರು. “ನನ್ನ ಮಗಳಿಗೆ ಕಿಡ್ನಿ ಕೊಡಬೇಕಿತ್ತು, ಪುಣ್ಯಕ್ಕೆ ಅವಳಿಗೆ ನನ್ನ ಕಿಡ್ನಿ ಸರಿಯಾಗಿ ಹೊಂದಿಕೊಂಡಿತು,” ಎಂದರು. “ಆದ್ರೆ ತುಂಬಾ ಒದ್ದಾಡಿದ್ಲು. ನೋವಲ್ಲಿ ಅಳ್ತಿದ್ಲು.”
ಮೇ 2015ರಲ್ಲಿ ಗಾಯತ್ರಿ ಅವರ 25 ವರ್ಷದ ಮಗಳಾದ ಶ್ರುತಿಕಾ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು. ಅವರ ಕುಟುಂಬವು ಅವರನ್ನು ವಿವಿಧ ಸ್ಥಳೀಯ ಕ್ಲಿನಿಕ್ಕುಗಳಿಗೆ ಕರೆದೊಯ್ದರು, ಆದರೆ ಜ್ವರವು ಮರುಕಳಿಸುತ್ತಲೇ ಇತ್ತು. ಅವರ ಮುಖ ಕಪ್ಪು ಬಣ್ಣಕ್ಕೆ ತಿರುಗಿತು ಮತ್ತು ಪಾದಗಳು ಊದಿಕೊಂಡವು. ನಂತರ ಕುಟುಂಬದವರು ಅವರನ್ನು ದಕ್ಷಿಣ ಮುಂಬೈನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿಯೂ ಸರಿಯಾದ ಚಿಕಿತ್ಸೆ ದೊರೆಯಲಿಲ್ಲ ಎನ್ನುತ್ತಾರೆ ಶ್ರುತಿಕಾ. ಅವರು ಮುಂದುವರೆದು ಹೇಳುತ್ತಾರೆ, “ನಾನು ಈಗಾಗಲೇ ತುಂಬಾ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದೆ ಹೀಗಾಗಿ ಬಾಬಾ ಯಾವುದೇ ರಿಸ್ಕ್ ತೆಗೆದುಕೊಳ್ಳದಿರಲು ನಿರ್ಧರಿಸಿದರು. ಅದರ ನಂತರ ನಾವು ಬಾಂಬೆ ಆಸ್ಪತ್ರೆಗೆ (ಖಾಸಗಿ ಆಸ್ಪತ್ರೆ) ಹೋದೆವು." ಅಲ್ಲಿ ಶ್ರುತಿಕಾ ಮತ್ತು ಆಕೆಯ ಪೋಷಕರಿಗೆ ಅವರ ಎರಡೂ ಕಿಡ್ನಿಗಳು ವಿಫಲವಾಗಿವೆ ಮತ್ತು ಕಿಡ್ನಿ ಕಸಿ ಮಾಡಬೇಕಾಗಿದೆ ಎಂದು ಹೇಳಿದರು.
ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಆಸ್ಪತ್ರೆಯಲ್ಲಿ 10 ದಿನಗಳು ಮತ್ತು ಕೋಲಿವಾಡದ ಬಾಡಿಗೆ ಕೋಣೆಯಲ್ಲಿ ಮೂರು ತಿಂಗಳು ಪ್ರತ್ಯೇಕವಾಗಿ ಕಳೆದ ನಂತರ, ಕುಟುಂಬಕ್ಕೆ ಸುಮಾರು 10 ಲಕ್ಷ ರೂಪಾಯಿ ಬಿಲ್ ಬಾಕಿಯಿತ್ತು. ಶ್ರುತಿಕಾ ಹೇಳುತ್ತಾರೆ, “ಮಮ್ಮಿ ಮತ್ತು ಬಾಬಾ ಅವರಿಗೆ ತಿಳಿದಿರುವ ಪ್ರತಿಯೊಬ್ಬರಿಂದ ಹಣವನ್ನು ಸಾಲವಾಗಿ ಪಡೆಯಬೇಕಾಯಿತು. ನಾನು ಡಯಾಲಿಸಿಸ್ನಲ್ಲಿದ್ದೆ. ನಮ್ಮ ಸಂಬಂಧಿಕರು ನಮಗೆ ಸಹಾಯ ಮಾಡಿದರು ಮತ್ತು ಬಾಬಾ ತನ್ನ ಉದ್ಯೋಗದಾತರಿಂದ 3 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡರು.” ಕುಟುಂಬಕ್ಕೆ ಎನ್ಜಿಒ ಒಂದರಿಂದ ಆರ್ಥಿಕ ಸಹಾಯವೂ ಸಿಕ್ಕಿತು. "ಅವರು ಈಗಲೂ ಸಾಲದ ಬಾಕಿ ಮೊತ್ತವನ್ನು ತೀರಿಸುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ.
ಶಸ್ತ್ರಚಿಕಿತ್ಸೆಯ ನಂತರ, ಶ್ರುತಿಕಾ ಮತ್ತು ಗಾಯತ್ರಿ ಇಬ್ಬರಿಗೂ ವೈದ್ಯರು ತೂಕವಿರುವ ವಸ್ತುಗಳನ್ನು ಎತ್ತದಂತೆ ಹೇಳಿದ್ದಾರೆ. ಗಾಯತ್ರಿ ಹೇಳುತ್ತಾರೆ, “ಏನನ್ನಾದರೂ ಎತ್ತದೆ ಹೇಗೆ ಕೆಲಸ ಮಾಡುವುದು? ಈಗಲೂ ನನ್ನ ಮಗಳ ಔಷಧಿಗಳಿಗೆ ಪ್ರತಿ ತಿಂಗಳು ದುಡ್ಡು ಕೊಡಬೇಕು. ಔಷಧಿಗೆ 5000 ರೂ. ಆಗುತ್ತದೆ.” ಒಂದು ದಿನವೂ ಮಾತ್ರೆ ತಪ್ಪಿಸುವಂತಿಲ್ಲ. ಆಕೆಗೆ ಅಷ್ಟು ನೋವಿರುತ್ತದೆ. ಇದೆಲ್ಲದಕ್ಕೂ ಕಾಸಿಗೆ ಕಾಸು ಸೇರಿಸಿ ಉಳಿತಾಯ ಮಾಡಬೇಕಿರುತ್ತದೆ. “ಒಂದೊಂದು ದಿನ ನನ್ನ ಬೆನ್ನು ಮತ್ತು ಕಾಲುಗಳು ಬಹಳು ನೋಯುತ್ತಿರುತ್ತವೆ. ಆದರೆ ಈ ರೀತಿ ನೋವಿನಲ್ಲಿರುವುದು ನಾನು ಮಾತ್ರವಲ್ಲ. ಇಲ್ಲಿನ ಸಾಕಷ್ಟು ಮಹಿಳೆಯರು ನೋವಿನೊಂದಿಗೆ ಕೆಲಸ ಮಾಡುತ್ತಾರೆ. ವಂದನಾಗೆ ಕೂಡಾ ಆಪರೇಷನ್ ಆಗಿದೆ.”
"ಇಲ್ಲಿನ ಹೆಂಗಸರು (ಕೋಲಿವಾಡದಲ್ಲಿ) ಡಾಕ್ಟರ್ ಬಳಿ ಹೋಗುವುದಿಲ್ಲ, ಅವರು ಮೈ-ಕೈ ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆಸ್ಪತ್ರೆಯ ಬಿಲ್ಗಳಿಗೆ ಖರ್ಚು ಮಾಡಲು ಅವರ ಬಳಿ ಹಣವಿಲ್ಲ, ಮತ್ತು ಕೋವಿಡ್ನಿಂದಾಗಿ ಅವರು ವೈದ್ಯರನ್ನು ಭೇಟಿ ಮಾಡಲು ಹೆದರುತ್ತಾರೆ. ಕೋಲಿವಾಡದೊಳಗೆ ಒಂದೇ ಒಂದು ಸಣ್ಣ [ಖಾಸಗಿ] ಕ್ಲಿನಿಕ್ ಇದೆ, ಅದು ಯಾವಾಗಲೂ ಜನರಿಂದ ತುಂಬಿರುತ್ತದೆ. ಮತ್ತು ಅದನ್ನು ಲಾಕ್ ಡೌನ್ ಸಮಯದಲ್ಲಿ (ಕಳೆದ ವರ್ಷ) ಮುಚ್ಚಲಾಯಿತು" ಎಂದು ಗಾಯತ್ರಿ ಹೇಳುತ್ತಾರೆ. "ನಮ್ಮ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಜನರು ಕೋಲಿಗಳು ಶ್ರೀಮಂತರು ಎಂದು ಭಾವಿಸುತ್ತಾರೆ. ಆದರೆ ನಮ್ಮ ಸಮುದಾಯದಲ್ಲಿ ಬಡವರೂ ಇದ್ದಾರೆ. ಲಾಕ್ ಡೌನ್ ಸಮಯದಲ್ಲಿ ನಾವು ಕನಿಷ್ಠ ನಮಗೆ ಒಂದು ಒಳ್ಳೆಯ ದಿನವನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದೆವು. ಹಡಗುಕಟ್ಟೆಯನ್ನು ಮುಚ್ಚಲಾಯಿತು. ನಾವು ಮನೆಯಲ್ಲಿ ಈರುಳ್ಳಿ-ಆಲೂಗಡ್ಡೆಯನ್ನು ಸಹ ಹೊಂದಿರಲಿಲ್ಲ - ನಮ್ಮ ಸ್ಥಿತಿ ಹೀಗಿತ್ತು. ನಾವು ಬೇಳೆಯನ್ನು ತಿಂದು ದಿನ ಕಳೆಯುತ್ತಿದ್ದೆವು."
ಎರಡೂ ಬದಿಗಳಲ್ಲಿ ಸಣ್ಣ ಒಂದು ಅಥವಾ ಎರಡು ಮಹಡಿಯ ಕಟ್ಟಡಗಳನ್ನು ಹೊಂದಿರುವ ಅತ್ಯಂತ ಕಿರಿದಾದ ಬೀದಿಗಳ ಅವರ ಮನೆಯಿರುವ ಸ್ಥಳವು 800 ಕುಟುಂಬಗಳು ಮತ್ತು 4122 ಜನರಿಗೆ ನೆಲೆಯಾಗಿದೆ (ಸಾಗರ ಮೀನುಗಾರಿಕೆ ಜನಗಣತಿ 2010). ಕೊಲಾಬಾದ ಕೆಲವು ಭಾಗಗಳು ಕಳೆದ ವರ್ಷ ಸ್ವಲ್ಪ ಸಮಯದವರೆಗೆ ಕೋವಿಡ್ 'ನಿಯಂತ್ರಿತ ವಲಯ' ಎಂದು ಘೋಷಿಸಿದ್ದರಿಂದ, "ಕೋಲಿವಾಡವನ್ನು ಪ್ರವೇಶಿಸಲು ಅಥವಾ ಇಲ್ಲಿಂದ ಹೊರಗೆ ಹೋಗಲು ಯಾರಿಗೂ ಸಾಧ್ಯವಾಗಲಿಲ್ಲ. ನಮಗೆ ಪಡಿತರ ನೀಡಲು ಬಯಸಿದ ಜನರನ್ನು ಸಹ ಒಳಗೆ ಬಿಡಲಿಲ್ಲ. ಇದು ಕಷ್ಟದ ಸಮಯವಾಗಿತ್ತು. ನಾವು ನಮ್ಮ ಊಟದ ಪಾಲನ್ನು ಕಡಿಮೆ ಮಾಡಬೇಕಾಗಿತ್ತು" ಎಂದು ವಂದನಾ ಹೇಳುತ್ತಾರೆ, ಮಾರ್ಚ್ 2020ರಿಂದ ಲಾಕ್ ಡೌನ್ ಆದಂತಹ ಮೊದಲ ಕೆಲವು ತಿಂಗಳುಗಳನ್ನು ನೆನಪಿಸಿಕೊಳ್ಳುತ್ತಾರೆ.
ಮಾರುಕಟ್ಟೆಗಳು ಮತ್ತೆ ತೆರೆದ ನಂತರವೂ, ಇಲ್ಲಿನ ಅನೇಕ ಕುಟುಂಬಗಳು ತರಕಾರಿಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಅವರ ಬಳಿ ಕೆಲಸ ಅಥವಾ ಹಣವಿರಲಿಲ್ಲ ಎಂದು ಅವರು ಮುಂದುವರೆದು ಹೇಳುತ್ತಾರೆ. ಲಾಕ್ ಡೌನ್ ಆಗುವ ಮೊದಲು ವಂದನಾ ಮತ್ತು ಗಾಯತ್ರಿ ಇಬ್ಬರೂ ದಿನಕ್ಕೆ ಸುಮಾರು 500 ರೂ. ಲಾಭ ಗಳಿಸುತ್ತಿದ್ದರು. ಕೆಲವು ದಿನಗಳ ಕಾಲ ಈ ಸಂಪಾದನೆ ಶೂನ್ಯವಾಗಿತ್ತು - ನಿಯಮಗಳ ಪ್ರಕಾರ ಎಲ್ಲಾ ಮೀನುಗಾರಿಕೆ ಚಟುವಟಿಕೆಗಳನ್ನು ಮೇ 21ರ ಅಂತ್ಯದಿಂದ ಆಗಸ್ಟ್ 1ರವರೆಗೆ ವಾರ್ಷಿಕವಾಗಿ ನಿಲ್ಲಿಸಲಾಗುತ್ತದೆ. ಅದರ ನಂತರ, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಿಂದ, ಅವರ ಆದಾಯವು ವಾರಕ್ಕೆ ಐದು ದಿನ ದಿನವೊಂದಕ್ಕೆ ಸುಮಾರು 300 ರೂ.ಗಳಷ್ಟಿದೆ.
ನಾವು ಬೆಳಿಗ್ಗೆ 10:30ರ ಸುಮಾರಿಗೆ ಮಾರುಕಟ್ಟೆಯ ಕಡೆಗೆ ಹೊರಟೆವು. ಗೆಳತಿಯರಿಬ್ಬರೂ ಅಂಗಡಿ ಇಡುತ್ತಿದ್ದ ಜಾಗಕ್ಕೆ ಹತ್ತಿರವಾಗುತ್ತಿದ್ದಂತೆ ಗಾಯತ್ರಿಯವರ ಹಿಂದಿನ ಉದ್ಯೋಗದಾತರನ್ನು ಭೇಟಿಯಾದರು. ಅವರ ಬಳಿ ಮನೆಗೆಲಸದ ಲಭ್ಯತೆಯ ಬಗ್ಗೆ ಕೇಳಿದರು ಮತ್ತು ನಂತರ ದೈನಂದಿನ ಖರ್ಚುಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ವಂದನಾ ಹೇಳುತ್ತಾರೆ, “ಮನೆ ಬಾಡಿಗೆಗೆ ತಿಂಗಳಿಗೆ 6,000 ರೂ. ಬೇಕು. ಜೊತೆಗೆ, ನಾವು ಅಂಗಡಿಗಳನ್ನು ಇಟ್ಟು ಮೀನು ಮಾರಾಟ ಮಾಡುವ ಸ್ಥಳಕ್ಕೆ ದಿನಕ್ಕೆ 200 ರೂ. ಬಾಡಿಗೆ ಕೊಡಬೇಕು. ನಮ್ಮ ಗಂಡ ಮತ್ತು ಮಕ್ಕಳಿಗೂ ಕೆಲಸವಿಲ್ಲ,” ಎಂದರು ವಂದನಾ.
ಅವರ ಪತಿ 59 ವರ್ಷದ ಯಶವಂತ್ ಕೋಲಿ ಮತ್ತು ಗಾಯತ್ರಿಯವರ ಪತಿ 49 ವರ್ಷದ ಮನೋಜ್ ಪಾಟೀಲ್ ಇಬ್ಬರೂ ಸಾಸೂನ್ ಬಂದರಿನಲ್ಲಿ ಮೀನು ಬಲೆಗಳನ್ನು ಸರಿಪಡಿಸುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಮಾರ್ಚ್ 2020ರಲ್ಲಿ ಲಾಕ್ ಡೌನ್ ಪ್ರಾರಂಭವಾಗುವ ಮೊದಲು ದಿನಕ್ಕೆ 200-300 ರೂಪಾಯಿಗಳನ್ನು ಗಳಿಸುತ್ತಿದ್ದರು. ತನ್ನ ಪತಿ ಈಗ ಕುಡಿಯುತ್ತಾ ಸಮಯ ಕಳೆಯುತ್ತಾನೆ ಮತ್ತು ಕೆಲಸಕ್ಕೆ ಹಿಂತಿರುಗಿಲ್ಲ ಎಂದು ವಂದನಾ ಹೇಳುತ್ತಾರೆ. ಗಾಯತ್ರಿಯವರ ಪತಿಗೆ ಕಳೆದ ವರ್ಷದ ಜನವರಿಯಲ್ಲಿ ಅವರ ಎಡತೋಳಿಗೆ ಗಾಯವಾಗಿದೆ ಮತ್ತು ಅಂದಿನಿಂದ ಬಲೆಗಳನ್ನು ಸರಿಪಡಿಸುವಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.
ವಂದನಾ ಮತ್ತು ಗಾಯತ್ರಿಯವರ ಪುತ್ರರಾದ 34 ವರ್ಷದ ಕುನಾಲ್ ಮತ್ತು 26 ವರ್ಷದ ಹಿತೇಶ್ ಫುಡ್ ಡೆಲಿವರಿ ಕಂಪನಿಯಲ್ಲಿ ಡೆಲಿವರಿ ಕೊಡುವ ಕೆಲಸ ಮಾಡುತ್ತಿದ್ದರು, ತಿಂಗಳಿಗೆ 3,000-4,000 ರೂ. ಗಳಿಸುತ್ತಿದ್ದರು, ಆದರೆ ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡರು ಮತ್ತು ಅಂದಿನಿಂದ ನಿರುದ್ಯೋಗಿಗಳಾಗಿದ್ದಾರೆ. ಈ ವರ್ಷದ ಜೂನ್ ತಿಂಗಳಿನಲ್ಲಿ, ಶ್ರುತಿಕಾ ಅವರಿಗೆ ಕೊಲಾಬಾದ ಶೂ ಅಂಗಡಿಯಲ್ಲಿ ಕೆಲಸ ದೊರಕಿತು, ಮತ್ತು ಈಗ ತಿಂಗಳಿಗೆ ರೂ. 5,000 ಗಳಿಸುತ್ತಿದ್ದಾರೆ.
ನಾವು ಮಾರುಕಟ್ಟೆಯನ್ನು ತಲುಪಿದಾಗ, ವಂದನಾ ಮೀನುಗಳನ್ನು ಹೊತ್ತು ತಂದಿದ್ದಕ್ಕಾಗಿ ಸೀತಾ ಅವರಿಗೆ ಪಾವತಿಸಿ, ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಸಹಾಯದಿಂದ ಬುಟ್ಟಿಯನ್ನು ಅವರ ತಲೆ ಮೇಲಿನಿಂದ ಕೆಳಗಿಳಿಸಿದರು. ಅವರು ಹಳೆಯದಾದ ದೊಡ್ಡ ಥರ್ಮಾಕೋಲ್ ಪೆಟ್ಟಿಗೆಯನ್ನು ನೆಲದ ಮೇಲೆ ಇಟ್ಟುಕೊಂಡು ಅದರ ಮೇಲೆ ಮರದ ಹಲಗೆಯನ್ನು ಇರಿಸಿ, ಹಲಗೆಯ ಮೇಲೆ ಮೀನುಗಳನ್ನು ಹರಡಿದರು. ಸುಮಾರು 11 ಗಂಟೆಗೆ ಗ್ರಾಹಕರನ್ನು ಸೆಳೆಯಲು ಮೀನು ಕೊಳ್ಳುವಂತೆ ಕರೆಯಲಾರಾಂಭಿಸಿದರು.
ಗಾಯತ್ರಿ ಕೂಡ ತನ್ನ ಅಂಗಡಿಯನ್ನು ಜೋಡಿಸಿದರು ಮತ್ತು ಗ್ರಾಹಕರನ್ನು ಕೂಗಲಾರಂಭಿಸಿದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ, ಅವರು ಮನೆಕೆಲಸಗಳನ್ನು ಮಾಡಲು ಕೊಲಾಬಾದಲ್ಲಿನ ಅಪಾರ್ಟ್ಮೆಂಟಿಗೆ ಹೋಗಬೇಕು. ಮೀನು ಮಾರಾಟದಿಂದ ಕಡಿಮೆ ಆದಾಯ ಬರುತ್ತಿರುವ ಕಾರಣ, ಅವರು ಸೆಪ್ಟೆಂಬರ್ 2020 ರಿಂದ ಕೆಲವು ಮನೆಗಳಲ್ಲಿ ಅಡುಗೆ ಮತ್ತು ಶುಚಿಗೊಳಿಸುವ ಕೆಲಸವನ್ನು ಮಾಡಲು ಪ್ರಾರಂಭಿಸಿದ್ದಾರೆ, 5 ಗಂಟೆಗಳ ಕೆಲಸಕ್ಕೆ ತಿಂಗಳಿಗೆ ಸುಮಾರು 4000 ರೂಪಾಯಿಗಳನ್ನು ಗಳಿಸುತ್ತಾರೆ. ವಂದನಾರನ್ನು ತನ್ನ ಅಂಗಡಿಯ ಮೇಲೆ ನಿಗಾ ಇಡಲು ಹೇಳುತ್ತಾ, “ಲಾಕ್ಡೌನ್ ಸಮಯದಲ್ಲಿ ಮೇಡಮ್ ನನಗೆ ಒಂದು ರೂಪಾಯಿಯನ್ನೂ ನೀಡಲಿಲ್ಲ. ನಾನು ತಾತ್ಕಾಲಿಕವಾಗಿ ಕೆಲಸಕ್ಕೆ ಹೋಗುತ್ತಿದ್ದೇನೆ. ಕಷ್ಟದಲ್ಲಿರುವುದರಿಂದ ಈ ಕೆಲಸ ಮಾಡಬೇಕು. ಅವಳು ಅವುಗಳನ್ನು ಮಾರುತ್ತಾಳೆ. ಹೀಗೆ ನಾವು ಒಬ್ಬರಿಗೊಬ್ಬರು ಸಹಾಯ ಮಾಡುತ್ತೇವೆ. ಅವಳ ಮನೆಯಲ್ಲಿ ಅಕ್ಕಿ ಇಲ್ಲದಿದ್ದರೆ ನಾನು ಅವಳಿಗೆ ಕೊಡುತ್ತೇನೆ ಮತ್ತು ನನ್ನ ಬಳಿ ಬೇಳೆಕಾಳು ಇಲ್ಲದಿದ್ದರೆ ಅವಳು ನನಗೆ ಬೇಳೆಯನ್ನು ಕೊಡುತ್ತಾಳೆ.”
ವಂದನಾ ಮತ್ತು ಗಾಯತ್ರಿ ಇಬ್ಬರೂ ಸುಮಾರು ನಾಲ್ಕು ದಶಕಗಳಿಂದ ಮೀನು ಮಾರಾಟ ಮಾಡುತ್ತಿದ್ದಾರೆ. ಗಾಯತ್ರಿ ಮಧ್ಯ ಮುಂಬೈನ ಮಜಗಾಂವ್ನ ಕೋಲಿವಾಡದಲ್ಲಿ ಬೆಳೆದವರು ಮತ್ತು 28 ವರ್ಷಗಳ ಹಿಂದೆ ಮದುವೆಯಾದ ನಂತರ ಕೊಲಾಬಾಗೆ ಬಂದರು, ವಂದನಾ ಮೊದಲಿನಿಂದಲೂ ಕೊಲಾಬಾ ಕೋಲಿವಾಡದ ನಿವಾಸಿ.
ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ಬಿಟ್ಟರೆ ತಮ್ಮ ನೆರೆಹೊರೆಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ ಎನ್ನುತ್ತಾರೆ ವಂದನಾ. ಅವರು ಹೇಳುತ್ತಾರೆ, “ನಾನು ಈ ಕಿರಿದಾದ ಬೀದಿಗಳಲ್ಲಿ ಬೆಳೆದೆ. ನನ್ನ ತಂದೆ ತಾಯಿ ಕೂಡ ಮೀನು ವ್ಯಾಪಾರ ಮಾಡುತ್ತಿದ್ದರು. ನಾನು ನನ್ನ ಜೀವನದುದ್ದಕ್ಕೂ ಕಷ್ಟಪಟ್ಟಿದ್ದೇನೆ, ಆದರೆ ನನ್ನ ಮಗನ ಅಥವಾ ನಮ್ಮ ಕೋಲಿ ಸಮುದಾಯದ ಯಾವುದೇ ಮಗುವಿನ ಭವಿಷ್ಯ ಅದೇ ರೀತಿ ಇರಬೇಕೆಂದು ನಾನು ಬಯಸುವುದಿಲ್ಲ.”
ಅನುವಾದ: ಶಂಕರ. ಎನ್. ಕೆಂಚನೂರು