"ಓಹ್, ಆಕೆ ನಮ್ಮ ‘ಗೆಸ್ಟ್ ಹೌಸ್ ಬಗ್ಗೆ‘’ ವಿಚಾರಿಸಲು ಬಂದಿದ್ದಾರಷ್ಟೇ", ಎಂಬುದಾಗಿ ರಾಣಿ ಆ ಕೋಣೆಯಲ್ಲಿ ತನ್ನೊಂದಿಗಿರುವ ‘ರೂಂಮೇಟ್’ ಲಾವಣ್ಯಳಿಗೆ ತಿಳಿಸಿದಳು. ನಮ್ಮ ಭೇಟಿಯ ಉದ್ದೇಶವನ್ನು ತಿಳಿದ ಈ ಇಬ್ಬರಿಗೂ ನಿರಾಳವೆನಿಸಿತು.
ಜನವರಿ ತಿಂಗಳ ಪ್ರಾರಂಭದಲ್ಲಿ, ಮಧುರೈ ಜಿಲ್ಲೆಯ ಟಿ. ಕೊಲ್ಲುಪಟ್ಟಿ ಕ್ಷೇತ್ರದ ಕೂವಲಪುರಂ ಹಳ್ಳಿಗೆ ಭೇಟಿಯಿತ್ತ ನಾವು, ಮೊದಲ ಬಾರಿಗೆ ಗೆಸ್ಟ್ ಹೌಸ್ ಬಗ್ಗೆ ವಿಚಾರಿಸತೊಡಗಿದಾಗ ಅಲ್ಲಿನ ಬೀದಿಗಳಲ್ಲಿ ಆತಂಕ ಮನೆಮಾಡಿತು. ಪುರುಷರು ತಗ್ಗಿದ ದನಿಯಲ್ಲಿ ಸ್ವಲ್ಪ ದೂರದಲ್ಲಿ ಕೈಸಾಲೆಯಲ್ಲಿ (porch) ಕುಳಿತ ಇಬ್ಬರು ಹೆಂಗಸರನ್ನು ನಮಗೆ ತೋರಿಸಿದರು.
"ಅದು ಆ ಕಡೆಗಿದೆ. ನಡೆಯಿರಿ, ಹೋಗೋಣ", ಎಂದ ಹೆಂಗಸರು ಅರ್ಧ ಕಿ.ಮೀ. ದೂರದ ಹಳ್ಳಿಯ ಮೂಲೆಯೊಂದಕ್ಕೆ ನಮ್ಮನ್ನು ಕರೆದೊಯ್ದರು. ‘ಗೆಸ್ಟ್ ಹೌಸ್’ ಎಂದು ಕರೆಯಲಾಗುವ ಎರಡು ಪ್ರತ್ಯೇಕ ಕೊಠಡಿಗಳು ನಾವು ಅಲ್ಲಿಗೆ ತಲುಪಿದಾಗ ಪರಿತ್ಯಕ್ತ ಸ್ಥಿತಿಯಲ್ಲಿದ್ದವು. ಎರಡು ಚಿಕ್ಕ ಸಂಕೀರ್ಣಗಳ ನಡುವಿನ ಬೇವಿನ ಮರವು ತನ್ನ ಟೊಂಗೆಗಳಿಗೆ ನೇತುಹಾಕಿದ್ದ ಚೀಲಗಳ ಭಾರವನ್ನು ಹೊತ್ತು ನಿಂತ ನೋಟವು ಕುತೂಹಲ ಕೆರಳಿಸುವಂತಿತ್ತು.
ಋತುಮತಿಯಾದ ಹೆಂಗಸರು ಗೆಸ್ಟ್ ಹೌಸ್ ‘ಅತಿಥಿಗಳು’. ಯಾವುದೇ ಆಹ್ವಾನಕ್ಕೆ ಓಗೊಟ್ಟು ಅಥವ ತಮ್ಮ ಸ್ವಂತ ಇಚ್ಚೆಯಿಂದ ಅವರು ಇಲ್ಲಿಗೆ ಬಂದಿರುವುದಿಲ್ಲ. ಮಧುರೈ ಜಿಲ್ಲೆಯಿಂದ ಸುಮಾರು 50 ಕಿ.ಮೀ. ದೂರದ ಈ ಊರಿನ 3,000 ನಿವಾಸಿಗಳ ನಿಷ್ಠುರ ಸಾಮುದಾಯಿಕ ಪದ್ಧತಿಯಿಂದಾಗಿ ಅವರು ಇಲ್ಲಿ ಬಲವಂತವಾಗಿ ಸಮಯ ಕಳೆಯುವಂತಾಗಿದೆ. ನಾವು ಗೆಸ್ಟ್ ಹೌಸಿನಲ್ಲಿ ಸಂಧಿಸಿದ ಇಬ್ಬರು ಹೆಂಗಸರಾದ ರಾಣಿ ಮತ್ತು ಲಾವಣ್ಯ (ಇದು ಅವರ ಮೂಲ ಹೆಸರಲ್ಲ) ಐದು ದಿನಗಳವರೆಗೆ ಇಲ್ಲಿರಬೇಕಾಗುತ್ತದೆ. ಆದಾಗ್ಯೂ ಮೈನೆರೆದ ಹುಡುಗಿಯರನ್ನು ಇಡೀ ತಿಂಗಳವರೆಗೂ ಇಲ್ಲಿರಿಸಲಾಗುತ್ತದೆ. ಪ್ರಸವದ ನಂತರ ಸ್ತ್ರೀಯರು ನವಜಾತ ಶಿಶುವಿನೊಂದಿಗೆ ನೆಲೆಸತಕ್ಕದ್ದು.
"ಕೊಠಡಿಯಲ್ಲಿ ನಮ್ಮೊಂದಿಗೆ ಚೀಲಗಳನ್ನು ಇರಿಸಿಕೊಳ್ಳುತ್ತೇವೆ", ಎಂದು ರಾಣಿ ವಿವರಿಸಿದರು. ಚೀಲದಲ್ಲಿ ಋತುಮತಿಯಾದ ಸಮಯದಲ್ಲಿ ಹೆಂಗಸರು ಬಳಸತಕ್ಕ ಪ್ರತ್ಯೇಕ ಪಾತ್ರೆಗಳಿವೆ. ಇಲ್ಲಿ ಯಾವುದೇ ಅಡುಗೆ ಮಾಡುವುದಿಲ್ಲ. ಅವರ ಮನೆಗಳಲ್ಲಿ ಅಥವ ನೆರೆಹೊರೆಯವರು ಮಾಡಿದ ಅಡುಗೆಯನ್ನು ಹೆಂಗಸರಿಗೆ ಈ ಪಾತ್ರೆಗಳಲ್ಲಿ ನೀಡಲಾಗುತ್ತದೆ. ಶಾರೀರಿಕ ಸಂಪರ್ಕವನ್ನು ತಪ್ಪಿಸಲು ಬೇವಿನ ಮರಕ್ಕೆ ಚೀಲಗಳನ್ನು ತೂಗುಹಾಕಲಾಗುತ್ತದೆ. ಒಂದೇ ಕುಟುಂಬದವರಾದಾಗ್ಯೂ ಪ್ರತಿಯೊಬ್ಬ ‘ಅತಿಥಿಗೂ’ ಪ್ರತ್ಯೇಕ ಪಾತ್ರೆಗಳ ಕಟ್ಟುಗಳಿವೆ (set). ಆದರೆ ಅಲ್ಲಿ ಕೇವಲ ಎರಡು ಕೊಠಡಿಗಳಿದ್ದು ಅವನ್ನೇ ಹಂಚಿಕೊಳ್ಳತಕ್ಕದ್ದು.
ಕೂವಲಪುರಂನಲ್ಲಿ ಋತುಮತಿಯಾದ ಹೆಂಗಸರಿಗೆ ರಾಣಿ ಹಾಗೂ ಲಾವಣ್ಯರಂತೆ ಈ ಕೊಠಡಿಗಳಲ್ಲಿ ಇರುವುದರ ಹೊರತಾಗಿ ಬೇರೆ ದಾರಿಯಿಲ್ಲ. ಸುಮಾರು 2 ದಶಕಗಳ ಹಿಂದೆ ಗ್ರಾಮದ ಜನರು ಒಟ್ಟುಗೂಡಿಸಿದ ಹಣದಿಂದ ಇವುಗಳಲ್ಲಿನ ಮೊದಲ ಕೊಠಡಿಯನ್ನು ನಿರ್ಮಿಸಲಾಗಿದೆ. ಈ ಇಬ್ಬರೂ ವಿವಾಹಿತ ಹೆಂಗಸರ ವಯಸ್ಸು 23. ಲಾವಣ್ಯಳಿಗೆ ಇಬ್ಬರು ಮಕ್ಕಳಿದ್ದು, ರಾಣಿಗೆ ಒಂದು ಮಗುವಿದೆ. ಇವರ ಗಂಡಂದಿರು ಕೃಷಿ ಕಾರ್ಮಿಕರು.
"ಈಗ ಕೇವಲ ನಾವಿಬ್ಬರೇ ಇದ್ದೇವೆ. ಆದರೆ ಕೆಲವೊಮ್ಮೆ ಎಂಟರಿಂದ ಒಂಭತ್ತು ಹೆಂಗಸರಿದ್ದು, ಈ ಜಾಗವು ಜನಭರಿತವಾಗುತ್ತದೆ", ಎನ್ನುತ್ತಾರೆ ಲಾವಣ್ಯ. ಆಗಿಂದಾಗ್ಗೆ ಇಂತಹ ಪರಿಸ್ಥಿತಿಯು ಉದ್ಭವವಾಗುತ್ತಿದ್ದ ಕಾರಣ ಗ್ರಾಮದ ಹಿರಿಯರು ಉದಾರ ಹೃದಯದಿಂದ ಎರಡನೆಯ ಕೊಠಡಿಗೆ ಭರವಸೆಯಿತ್ತು, ಯುವಜನ ಕಲ್ಯಾಣ ಸಂಸ್ಥೆಯು ಹಣವನ್ನು ಸಂಗ್ರಹಿಸಿ, ಅಕ್ಟೋಬರ್ 2019ರಲ್ಲಿ ಅದನ್ನು ನಿರ್ಮಿಸಿದರು.
ಈಗ ಇವರಿಬ್ಬರೇ ಇದ್ದಾಗ್ಯೂ ಹೊಸ ಕೊಠಡಿಯು ದೊಡ್ಡದಾಗಿದ್ದು, ಗಾಳಿ-ಬೆಳಕಿನ ವ್ಯವಸ್ಥೆಯಿರುವುದರಿಂದ ರಾಣಿ ಮತ್ತು ಲಾವಣ್ಯ ಅಲ್ಲಿಯೇ ನೆಲೆಸಿದ್ದಾರೆ. ಈ ಪ್ರತಿಗಾಮಿ (regressive) ಪ್ರವೃತ್ತಿಯನ್ನು ಪ್ರತಿನಿಧಿಸುವ ಈ ಸಾಂಪ್ರದಾಯಿಕ ಜಾಗದಲ್ಲಿ ಲಾವಣ್ಯಳು ಶಾಲೆಯಲ್ಲಿದ್ದಾಗ ರಾಜ್ಯ ಸರ್ಕಾರದಿಂದ ದೊರೆತ ಲ್ಯಾಪ್ ಟಾಪ್ ಕೂಡ ಕಾಣಿಸುತ್ತದೆ. ಇದು ವಿಪರ್ಯಾಸವೇ ಸರಿ. "ಇಲ್ಲಿ ಕುಳಿತ ನಾವು ಸಮಯವನ್ನು ಕೊಲ್ಲುವುದಾದರೂ ಹೇಗೆ? ಅದಕ್ಕಾಗಿ ಲ್ಯಾಪ್ ಟಾಪಿನಲ್ಲಿ ಹಾಡುಗಳನ್ನು ಕೇಳುತ್ತೇವೆ ಅಥವ ಚಲನಚಿತ್ರಗಳನ್ನು ನೋಡುತ್ತೇವೆ. ನಾನು ಮನೆಗೆ ಮರಳಿದಾಗ ಇದನ್ನು ವಾಪಸ್ಸು ಒಯ್ಯುತ್ತೇನೆ", ಎನ್ನುತ್ತಾರೆ ಆಕೆ.
‘ಅಪವಿತ್ರ’ ಹೆಂಗಸರು ನೆಲೆಸುವ ಮುಟ್ಟುಥುರೈ ಎಂದು ಕರೆಯಲಾಗುವ ಈ ಜಾಗಕ್ಕೆ ‘ಗೆಸ್ಟ್ ಹೌಸ್’ ಎಂಬ ಹೆಸರು ಒಂದು ರೀತಿಯ ಸೌಮ್ಯೋಕ್ತಿಯಷ್ಟೇ. "ನಮ್ಮ ಮಕ್ಕಳ ಎದುರು ಇದನ್ನು ನಾವು ಗೆಸ್ಟ್ ಹೌಸ್ ಎನ್ನುತ್ತೇವೆ. ಹೀಗಾಗಿ ಇದನ್ನು ನಿಜವಾಗಿ ಏತಕ್ಕೆ ಬಳಸಲಾಗುತ್ತಿದೆಯೆಂಬುದು ಅವರಿಗೆ ಅರ್ಥವಾಗುವುದಿಲ್ಲ", ಎಂಬುದಾಗಿ ರಾಣಿ ವಿವರಿಸುತ್ತಾರೆ. "ಮುಟ್ಟುಥುರೈನಲ್ಲಿರುವುದು ನಾಚಿಕೆಗೇಡಿನ ವಿಷಯ. ಅದರಲ್ಲೂ, ದೇವಸ್ಥಾನದ ಹಬ್ಬಗಳು ಅಥವ ಸಾರ್ವಜನಿಕ ಸಮಾರಂಭಗಳಿದ್ದಲ್ಲಿ ಗ್ರಾಮದ ಹೊರಗಿನಿಂದ ಅತಿಥಿಗಳು ಬರುತ್ತಾರೆ. ಅವರಿಗೆ ಈ ಪದ್ಧತಿಯ ಅರಿವಿಲ್ಲ." ಮಧುರೈ ಜಿಲ್ಲೆಯ 5 ಗ್ರಾಮಗಳಲ್ಲಿ ಋತುಮತಿಯಾದ ಹೆಂಗಸರು ಪ್ರತ್ಯೇಕವಾಗಿ ಇರತಕ್ಕದ್ದು. ಪುದುಪಟ್ಟಿ, ಗೋವಿಂದನಲ್ಲೂರ್, ಸಪ್ತುರ್ ಅಲಗಪುರಿ ಮತ್ತು ಚಿನ್ನಯ್ಯಪುರಂಗಳು ಈ ಪದ್ಧತಿಯು ಚಾಲ್ತಿಯಲ್ಲಿರುವ ಇತರೆ ಗ್ರಾಮಗಳು.
ಈ ಪ್ರತ್ಯೇಕತೆಯು ಅಪವಾದಕ್ಕೆ ದಾರಿಯಾಗುತ್ತಿದೆ. ಪ್ರಾಯದ ಹುಡುಗಿಯರು, ಅವಿವಾಹಿತೆಯರು ನಿಗದಿತ ಸಮಯಕ್ಕೆ ಗೆಸ್ಟ್ ಹೌಸಿನಲ್ಲಿಲ್ಲದಿದ್ದಲ್ಲಿ ಇಲ್ಲಸಲ್ಲದ ಮಾತುಗಳು ಹರಿದಾಡತೊಡಗುತ್ತವೆ. "ನನ್ನ ಋತುಚಕ್ರವು ಹೇಗೆ ಕಾರ್ಯನಿರ್ವಹಿಸುತ್ತದೆಂದು ಅವರಿಗೆ ಅರ್ಥವಾಗುವುದಿಲ್ಲ, ಆದರೆ ಪ್ರತಿ 30 ದಿನಗಳಿಗೊಮ್ಮೆ ನಾನು ಮುಟ್ಟುಥುರೈಗೆ ಹೋಗದಿದ್ದಲ್ಲಿ ಜನರು ನನ್ನನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ಹೇಳುತ್ತಾರೆ", ಎನ್ನುತ್ತಾಳೆ 14ರ ವಯಸ್ಸಿನ 9ನೇ ತರಗತಿಯ ಭಾನು (ಹೆಸರನ್ನು ಬದಲಿಸಿದೆ).
ಋತುಚಕ್ರವನ್ನು ಕುರಿತ ನಿಷೇಧದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಪುದುಚೆರಿಯ ನಿವಾಸಿಯಾದ ಸ್ತ್ರೀವಾದಿ ಬರಹಗಾರ್ತಿ ಸಾಲೈ ಸೆಲ್ವಂ, "ನನಗಿದು ಆಶ್ಚರ್ಯಕರವೆನಿಸುತ್ತಿಲ್ಲ", ಎನ್ನುತ್ತಾರೆ. "ಜಗತ್ತು ಹೆಂಗಸರನ್ನು ನಿರಂತರವಾಗಿ ಕೆಳಮಟ್ಟದಲ್ಲಿ ನೋಡಲು ಪ್ರಯತ್ನಿಸುತ್ತದೆಯಲ್ಲದೆ, ಆಕೆಯನ್ನು ಎರಡನೆ ದರ್ಜೆಯ ಪ್ರಜೆಯೆಂಬಂತೆ ನಡೆಸಿಕೊಳ್ಳುತ್ತದೆ. ಸಂಸ್ಕೃತಿಯ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಈ ನಿಷೇಧಗಳು ಆಕೆಯ ಮೂಲಭೂತ ಹಕ್ಕನ್ನು ನಿರಾಕರಿಸುವ ಮತ್ತೊಂದು ಸದವಕಾಶವಾಗಿದೆ. If Men Could Menstruate ಎಂಬ ತನ್ನ ಸುಪ್ರಸಿದ್ಧ ಪ್ರಬಂಧದಲ್ಲಿ ಸ್ತ್ರೀವಾದಿ ಗ್ಲೋರಿಯ ಸ್ಟೈನೆಮ್, "ಗಂಡಸರೇನಾದರೂ ಋತುಚಕ್ರವನ್ನು ಅನುಭವಿಸುತ್ತಿದ್ದಲ್ಲಿ, ಪರಿಸ್ಥಿತಿಯು ಸಂಪೂರ್ಣವಾಗಿ ಬೇರೆಯಾಗಿರುತ್ತಿತ್ತಲ್ಲವೇ?" ಎಂದು ಕೇಳಿದ್ದಾರೆ.
ಕೂವಲಪುರಂ ಮತ್ತು ಸಪ್ತುರ್ ಅಲಗಪುರಿಗಳಲ್ಲಿ ನಾನು ಭೇಟಿಯಾದ ಅನೇಕ ಹೆಂಗಸರು ಸಂಸ್ಕೃತಿಯ ಮರೆಯಲ್ಲಿನ ಭೇದಭಾವವನ್ನು ಕುರಿತ ಸೆಲ್ವಂನ ಮಾತುಗಳನ್ನು ಸಮರ್ಥಿಸಿದರು. 12ನೇ ತರಗತಿಯ ನಂತರ ರಾಣಿ ಹಾಗೂ ಲಾವಣ್ಯರಿಬ್ಬರ ವಿದ್ಯಾಭ್ಯಾಸಕ್ಕೂ ತಡೆಯೊಡ್ಡಿ ಒಡನೆಯೇ ಅವರಿಗೆ ಮದುವೆ ಮಾಡಲಾಯಿತು. "ಪ್ರಸವದ ಸಮಯದಲ್ಲಿ ತೊಂದರೆಯುಂಟಾಗಿ ಸಿಸೇರಿಯನ್ಗೆ ಒಳಗಾಗಬೇಕಾಯಿತು. ಅದರ ತರುವಾಯ ನನ್ನ ಋತುಚಕ್ರವು ಅನಿಯಮಿತವಾಗಿದೆ. ಆದರೆ ಮುಟ್ಟುಥುರೈಗೆ ಹೋಗುವುದು ವಿಳಂಬವಾದಲ್ಲಿ ಜನರು ನಾನು ಈಗಾಗಲೇ ಗರ್ಭಿಣಿಯೋ ಎಂದು ಕೇಳುತ್ತಾರೆ. ನನ್ನ ಸಮಸ್ಯೆಯೇ ಅವರಿಗೆ ಅರ್ಥವಾಗುವುದಿಲ್ಲ", ಎನ್ನುತ್ತಾರೆ ರಾಣಿ.
ರಾಣಿ, ಲಾವಣ್ಯ ಮತ್ತು ಕೂವಲಪುರಂನ ಇತರೆ ಹೆಂಗಸರಿಗೆ ಈ ಪದ್ಧತಿಯ ಯಾವಾಗ ಉಗಮವಾಯಿತೆಂಬುದು ತಿಳಿದಿಲ್ಲ. "ನಮ್ಮ ಮುತ್ತಜ್ಜಿ, ಅಜ್ಜಿಯರನ್ನೂ ಹೀಗೆಯೇ ಪ್ರತ್ಯೇಕವಾಗಿರಿಸಲಾಗುತ್ತಿತ್ತು. ನಾವೂ ಇದಕ್ಕೆ ಹೊರತಲ್ಲ", ಎನ್ನುತ್ತಾರೆ ಲಾವಣ್ಯ.
ದ್ರವಿಡಿಯನ್ ಸಿದ್ಧಾಂತವಾದಿ ಹಾಗೂ ವೈದ್ಯಕೀಯ ವೃತ್ತಿನಿರತರಾದ ಚೆನ್ನೈ ನಿವಾಸಿ ಡಾ. ಎಜಿ಼ಲನ್ ನಾಗನಾಥನ್, "ನಾವು ಬೇಟೆಯಾಡಿ ಜೀವನ ಸಾಗಿಸುತ್ತಿದ್ದಾಗ ಇದರ ಉಗಮವಾಯಿತು", ಎಂಬುದಾಗಿ ಈ ಪದ್ಧತಿಯ ಬಗ್ಗೆ ಅಪರಿಚಿತವೆನಿಸಿದರೂ ತರ್ಕಬದ್ಧ ವಿವರಣೆ ನೀಡುತ್ತಾರೆ.
ವೀಟುಕ್ಕು ಥೂರಮ್ (ಮನೆಯಿಂದ ದೂರಕ್ಕೆ- ಋತುಮತಿಯಾದ ಹೆಂಗಸರನ್ನು ಪ್ರತ್ಯೇಕವಾಗಿರಿಸುವ ಸೌಮ್ಯೋಕ್ತಿ) ಎಂಬುದು ಮೊದಲಿಗೆ, ಕಾಟುಕ್ಕು ಥೂರಮ್ (ಕಾಡಿನಿಂದ ದೂರಕ್ಕೆ) ಎಂದಿತ್ತು. ರಕ್ತದ ವಾಸನೆಯಿಂದ [(ಋತುಸ್ರಾವ, ಪ್ರಸವ ಅಥವ ಮೈನೆರೆತದ (puberty)] ಕಾಡು ಪ್ರಾಣಿಗಳು ಹೆಂಗಸರನ್ನು ಬೇಟೆಯಾಡುತ್ತವೆಂದು ನಂಬಲಾಗಿತ್ತು. ಈ ಪದ್ಧತಿಯು ನಂತರದಲ್ಲಿ ಹೆಂಗಸರ ಶೋಷಣೆಗೆ ಬಳಕೆಯಾಯಿತು.
ಕೂವಲಪುರಂ ಜನರು ಹೆಚ್ಚು ಯುಕ್ತಾಯುಕ್ತ ಪರಿಜ್ಞಾನವುಳ್ಳವರಲ್ಲ. ಸಿದ್ಧರ್ (ದೈವಿಕ ಪುರುಷ) ಗೌರವಾರ್ಥ ನೀಡಲ್ಪಟ್ಟ ವಾಗ್ದಾನವೇ ಈ ಪದ್ಧತಿ. ಸದರಿ ಗ್ರಾಮದೊಂದಿಗೆ ಸುತ್ತಮುತ್ತಲಿನ ನಾಲ್ಕು ಗ್ರಾಮಗಳೂ ಈ ನಿರ್ಬಂಧಕ್ಕೊಳಪಟ್ಟಿವೆ. "ಸಿದ್ಧರ್ ನಮ್ಮೊಂದಿಗೆ ವಾಸಿಸುತ್ತಿದ್ದುದೇ ಅಲ್ಲದೆ ನಮ್ಮೊಂದಿಗೆ ನಡೆದಾಡಿದ್ದೂ ಉಂಟು. ದೇವಾಂಶಸಂಭೂತನಾಗಿದ್ದ ಆತ ಶಕ್ತಿಶಾಲಿಯೂ ಹೌದು. ನಮ್ಮ ಗ್ರಾಮದ ಜೊತೆಗೆ ಪುದುಪಟ್ಟಿ, ಗೋವಿಂದನಲ್ಲೂರ್, ಸಪ್ತುರ್ ಅಲಗಪುರಿ ಮತ್ತು ಚಿನ್ನಯ್ಯಪುರಂಗಳು ಸಿದ್ಧರ್ ಹೆಂಡತಿಯರು ಎಂಬುದಾಗಿ ನಮ್ಮ ನಂಬಿಕೆ. ವಾಗ್ದಾನವನ್ನು ಮುರಿಯುವ ಯಾವುದೇ ಪ್ರಯತ್ನವು ಈ ಗ್ರಾಮಗಳ ನಾಶಕ್ಕೆ ಕಾರಣವಾಗುತ್ತದೆ", ಎನ್ನುತ್ತಾರೆ ಸಿದ್ಧರ್ ಥಂಗಮುಡಿ ಸಾಮಿಗೆ ಮೀಸಲಾದ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕರಾದ 60 ವರ್ಷದ ಎಂ. ಮುತ್ತು.
ಕೂವಲಪುರಂನಲ್ಲಿ ತನ್ನ ಜೀವಿತದ ಬಹುಪಾಲು ಭಾಗವನ್ನು ಕಳೆದ 70ರ ವಯಸ್ಸಿನ ಸಿ. ರಸು ಯಾವುದೇ ಭೇದಭಾವವನ್ನು ಅಲ್ಲಗಳೆಯುತ್ತಾರೆ. "ಇದು ಸರ್ವಶಕ್ತನ ಗೌರವಾರ್ಥವಾಗಿ ಅನುಸರಿಸುವ ಪದ್ಧತಿಯಾಗಿದೆ. ತಲೆಯ ಮೇಲೆ ಗಟ್ಟಿಯಾದ ಸೂರು, ಫ್ಯಾನುಗಳು ಹಾಗೂ ಸಾಕಷ್ಟು ಸೂಕ್ತವೆನಿಸಿದ ಜಾಗವನ್ನು ಒಳಗೊಂಡಂತೆ ಎಲ್ಲ ಸೌಲಭ್ಯಗಳನ್ನು ಹೆಂಗಸರಿಗೆ ನೀಡಲಾಗಿದೆ", ಎನ್ನುತ್ತಾರೆ ಆತ.
ಇವರ ಸಹೋದರಿ 90ರ ವಯಸ್ಸಿನ ಮುಥುರೋಳಿಗೆ ತಮ್ಮ ಕಾಲದಲ್ಲಿ ಈ ಸೌಲಭ್ಯವನ್ನು ಅನುಭವಿಸಲಾಗಲಿಲ್ಲ. "ನಮ್ಮ ತಲೆಯ ಮೇಲೆ ಜೊಂಡಿನ ಸೂರು ಮಾತ್ರವೇ ಲಭ್ಯವಿತ್ತು. ವಿದ್ಯುತ್ ಸೌಲಭ್ಯವೂ ಇರಲಿಲ್ಲ. ಇಂದಿನ ಹುಡುಗಿಯರ ಪರಿಸ್ಥಿತಿ ಉತ್ತಮವಾಗಿದೆ. ಆದಾಗ್ಯೂ ಅವರು ದೋಷಾರೋಪಣೆ ಮಾಡುತ್ತಾರೆ. ಆದರೆ ನಾವು ಈ ವ್ಯವಸ್ಥೆಯನ್ನು ಪಾಲಿಸತಕ್ಕದ್ದು. ಇಲ್ಲದಿದ್ದಲ್ಲಿ ನಾವು ಮಣ್ಣಾಗಿ ಹೋಗುತ್ತೇವೆ", ಎಂಬುದಾಗಿ ಆಕೆ ಒತ್ತಿ ಹೇಳುತ್ತಾರೆ.
ಗ್ರಾಮದ ಬಹುತೇಕ ಹೆಂಗಸರು ಈ ಮಿಥ್ಯಾ ಕಲ್ಪನೆಗೆ ಒಳಗಾಗಿದ್ದಾರೆ. ಒಂದೊಮ್ಮೆ ತಾನು ಋತುಮತಿಯಾದದ್ದನ್ನು ಮುಚ್ಚಿಡಲು ಯತ್ನಿಸಿದ ಹೆಂಗಸೊಬ್ಬಳಿಗೆ ಒಂದು ಸಂದರ್ಭದಲ್ಲಿ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಪುನರಾವರ್ತನೆಗೊಳ್ಳತೊಡಗಿತು, ಮುಟ್ಟುಥುರೈಗೆ ಹೋಗದೆ ಸಂಪ್ರದಾಯವನ್ನು ಮುರಿದ ಕಾರಣ ದೈವದ ಮುನಿಸೇ ಇದಕ್ಕೆ ಕಾರಣವೆಂಬುದಾಗಿ ಆಕೆ ಇದನ್ನು ವ್ಯಾಖ್ಯಾನಿಸಿದಳು.
ಗೆಸ್ಟ್ ಹೌಸಿನ ಸೌಲಭ್ಯಗಳಲ್ಲಿ ಶೌಚಾಲಯವು ಸೇರಿಲ್ಲವೆಂಬುದು, ಈ ಎಲ್ಲ ಸಂವಾದಗಳಲ್ಲಿ ತಿಳಿಯಪಡಿಸದ ಒಂದು ಸಂಗತಿ. "ಶೌಚ ಹಾಗೂ ನ್ಯಾಪ್ಕಿನ್ ಬದಲಿಸಲು ನಾವು ದೂರದ ಹೊಲಗಳಿಗೆ ಹೋಗುತ್ತೇವೆ", ಎನ್ನುತ್ತಾರೆ ಭಾನು. ಗ್ರಾಮದಲ್ಲಿ ಶಾಲೆಗೆ ಹೋಗುವ ಹುಡುಗಿಯರು ಸ್ಯಾನಿಟರಿ ನ್ಯಾಪ್ಕಿನ್ ಬಳಸಲು ಪ್ರಾರಂಭಿಸಿದ್ದು, (ಇವನ್ನು ಅವರು ನೆಲದಲ್ಲಿ ಹೂಳುತ್ತಾರೆ ಅಥವ ಸುಡುತ್ತಾರೆ ಅಥವ ಗ್ರಾಮದ ಸರಹದ್ದಿನಿಂದಾಚೆಗೆ ವಿಸರ್ಜಿಸುತ್ತಾರೆ) ಹಿರಿಯ ಮಹಿಳೆಯರಿನ್ನೂ ಬಟ್ಟೆಯನ್ನೇ ಬಳಸುತ್ತಿದ್ದು, ಅದನ್ನು ಒಗೆದ ನಂತರ ಮರುಬಳಕೆ ಮಾಡುತ್ತಾರೆ.
ಮುಟ್ಟುಥುರೈನಲ್ಲಿರುವವರಿಗೆಂದು ತೆರೆದ ಜಾಗದಲ್ಲಿ ನಲ್ಲಿಯೊಂದಿದೆ. ಗ್ರಾಮದ ಇತರರು ಅದನ್ನು ಮುಟ್ಟುವುದಿಲ್ಲ. "ನಮ್ಮೊಂದಿಗೆ ಒಯ್ದ ಬಟ್ಟೆ ಹಾಗೂ ಹೊದಿಕೆಗಳನ್ನು ಒಗೆಯದೆ ಗ್ರಾಮಕ್ಕೆ ನಾವು ಕಾಲಿಡುವಂತಿಲ್ಲ", ಎಂಬುದಾಗಿ ರಾಣಿ ವಿವರಿಸುತ್ತಾರೆ.
ಈ ಪದ್ಧತಿಯನ್ನು ಉಲ್ಲಂಘಿಸಿದಲ್ಲಿ ತಮ್ಮ ಋತುಚಕ್ರವೇ ನಿಂತುಹೋಗುತ್ತದೆಯೆಂಬುದು ಹತ್ತಿರದ ಸಪ್ತುರ್ ಅಲಗಪುರಿ ಗ್ರಾಮದಲ್ಲಿನ ಸೆಡಪ್ಪಟಿ ಕ್ಷೇತ್ರದಲ್ಲಿನ ಹೆಂಗಸರ ನಂಬಿಕೆ. ಮೂಲತಃ ಚೆನ್ನೈನವರಾದ 32ರ ವಯಸ್ಸಿನ ಕರ್ಪಾಗಂ, (ಹೆಸರನ್ನು ಬದಲಿಸಿದೆ) ಪ್ರತ್ಯೇಕಿಸುವ ಈ ಪದ್ಧತಿಯಿಂದ ತಬ್ಬಿಬ್ಬಾಗಿದ್ದು; "ಇದು ಇಲ್ಲಿನ ಸಂಸ್ಕೃತಿ. ನಾನಿದನ್ನು ಉಲ್ಲಂಘಿಸುವಂತಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ನಾನು ಹಾಗೂ ನನ್ನ ಪತಿ ತಿರುಪ್ಪುರಿನಲ್ಲಿ ಕೆಲಸ ಮಾಡುತ್ತಿದ್ದು, ಕೇವಲ ರಜಾದಿನಗಳಲ್ಲಿ ಇಲ್ಲಿಗೆ ಬರುತ್ತೇವೆ." ತನ್ನ ಮನೆಯ ಮೆಟ್ಟಿಲುಗಳ ಕೆಳಗಿನ ಚಿಕ್ಕ ಸ್ಥಳವೊಂದನ್ನು ತೋರಿಸಿದ ಆಕೆ ಋತುಮತಿಯಾದ ಸಂದರ್ಭಗಳಲ್ಲಿ ಇದೇ ನನ್ನ ‘ಜಾಗ’ ಎಂಬುದಾಗಿ ತಿಳಿಸಿದಳು.
ಸಪ್ತುರ್ ಅಲಗಪುರಿಯ ಮುಟ್ಟುಥರೈ ಜನರಿಂದ ದೂರವಾಗಿರುವ ಸ್ಥಳವೊಂದರಲ್ಲಿ ಚಿಕ್ಕದೊಂದು ಶಿಥಿಲ ಕಟ್ಟಡವಿದೆ. ಋತುಮತಿಯಾದ ಹೆಂಗಸರು “ಮಳೆ ಬೀಳದ ಹೊರತು” ಈ ಮನೆಯಲ್ಲಿರುವುದರ ಬದಲಾಗಿ ಬೀದಿಯಲ್ಲಿರಲು ಬಯಸುತ್ತಾರೆ ಎನ್ನುತ್ತಾರೆ 41ರ ವಯಸ್ಸಿನ ಲತ (ಹೆಸರನ್ನು ಬದಲಿಸಿದೆ). ಮಳೆ ಪ್ರಾರಂಭಗೊಂಡಾಗ ಅವರು ಮುಟ್ಟುಥರೈ ಒಳಗೆ ಹೋಗುತ್ತಾರೆ.
ಕೂವಲಪುರಂ ಮತ್ತು ಸಪ್ತುರ್ ಅಲಗಪುರಿಗಳಲ್ಲಿನ ಎಲ್ಲ ಮನೆಗಳಲ್ಲೂ ಸುಮಾರು ಏಳು ವರ್ಷಗಳ ಹಿಂದೆ, ರಾಜ್ಯ ಸರ್ಕಾರಿ ಯೋಜನೆಯಡಿ ನಿರ್ಮಿಸಲಾದ ಶೌಚಾಲಯಗಳಿವೆಯೆಂಬುದು ಇಲ್ಲಿನ ವಿಪರ್ಯಾಸ. ಯುವಜನರು ಅದನ್ನು ಬಳಸುತ್ತಾರೆ. ಹೆಂಗಸರನ್ನೊಳಗೊಂಡಂತೆ ಹಿರಿಯ ಗ್ರಾಮಸ್ಥರು ಬಯಲುಶೌಚವನ್ನು ಬಯಸುತ್ತಾರೆ. ಆದರೆ ಎರಡೂ ಜಿಲ್ಲೆಗಳ ಮುಟ್ಟುಥುರೈಗಳಲ್ಲಿ ಶೌಚಾಲಯಗಳಿಲ್ಲ.
"ನಾವು ಬಹಿಷ್ಠೆಯಾದಾಗ, ಈ ಜಾಗವನ್ನು ತಲುಪಲು ನಡೆದುಕೊಂಡು ಹೋಗುವಾಗಲೂ ಮುಖ್ಯರಸ್ತೆಯನ್ನು ಬಳಸುವಂತಿಲ್ಲ", ಎನ್ನುತ್ತಾರೆ ಮೈಕ್ರೊಬಯಾಲಜಿಯ ಪದವಿಪೂರ್ವ ಶಿಕ್ಷಣದಲ್ಲಿ ನಿರತರಾಗಿರುವ 20ರ ವಯಸ್ಸಿನ ಶಾಲಿನಿ (ಹೆಸರನ್ನು ಬದಲಿಸಿದೆ). "ಮುಟ್ಟುಥರೈ ತಲುಪಲು ಬಹುತೇಕ ಜನರಹಿತವಾಗಿರುವ ಬಳಸು ದಾರಿಯನ್ನು ಬಳಸಬೇಕು." ಈ ರಹಸ್ಯವನ್ನು ಹೊರಗೆಡಹಬೇಕಾಗಬಹುದು ಎಂಬ ಹೆದರಿಕೆಯಿಂದ ಇತರೆ ವಿದ್ಯಾರ್ಥಿಗಳೊಂದಿಗೆ ಎಂದಿಗೂ ಋತುಚಕ್ರದ ಬಗ್ಗೆ ಶಾಲಿನಿ ಚರ್ಚಿಸುವುದಿಲ್ಲ. "ಇದು ಹೆಮ್ಮೆಯ ವಿಷಯವಂತೂ ಅಲ್ಲ ಅಲ್ಲವೇ", ಎನ್ನುತ್ತಾರೆ ಆಕೆ.
ಸಪ್ತರ್ ಅಲಗಪುರಿಯ 43ರ ವಯಸ್ಸಿನ ಸಾವಯವ ರೈತ, ಟಿ. ಸೆಲ್ವಕಣಿ ಈ ನಿಷೇಧದ ಬಗ್ಗೆ ಗ್ರಾಮಸ್ಥರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ. "ನಾವು ಸ್ಮಾರ್ಟ್ ಫೋನುಗಳನ್ನು ಹಾಗೂ ಲ್ಯಾಪ್ ಟಾಪುಗಳನ್ನು ಬಳಸಲಾರಂಭಿಸಿದ್ದೇವಾದರೂ, 2020ರಲ್ಲೂ ನಮ್ಮ ಹೆಂಗಸರನ್ನು (ಋತುಚಕ್ರದ ಅವಧಿಯಲ್ಲಿ) ಪ್ರತ್ಯೇಕವಾಗಿರಿಸುತ್ತಿದ್ದೇವೆ", ಎನ್ನುತ್ತಾರವರು. ವಿವೇಚನಾಯುಕ್ತ ಚಿಂತನೆಗೆ ಮಾಡಿದ ಅವರ ಮನವಿಗಳು ಫಲ ನೀಡಲಿಲ್ಲ. "ಜಿಲ್ಲಾ ಕಲೆಕ್ಟರ್ ಕೂಡ ಇಲ್ಲಿ ಈ ನಿಯಮವನ್ನು ಪಾಲಿಸತಕ್ಕದ್ದು", ಎಂಬುದಾಗಿ ಲತಾ ಒತ್ತಿ ಹೇಳುತ್ತಾರೆ. "ಇಲ್ಲಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳಲ್ಲಿ ಕೆಲಸವನ್ನು ನಿರ್ವಹಿಸುವ ದಾದಿಯರು (ಹಾಗೂ ಇತರೆ ವಿದ್ಯಾವಂತ ಹಾಗೂ ಉದ್ಯೋಗಸ್ಥ ಮಹಿಳೆಯರು) ಸಹ ಋತುಚಕ್ರದ ಅವಧಿಯಲ್ಲಿ ಹೊರಗಿರುತ್ತಾರೆ", ಎನ್ನುತ್ತಾರೆ ಆಕೆ. "ನಿಮ್ಮ ಹೆಂಡತಿಯೂ ಇದನ್ನು ಪಾಲಿಸತಕ್ಕದ್ದು. ಇದು ನಂಬಿಕೆಗೆ ಸಂಬಂಧಪಟ್ಟ ವಿಷಯವಾಗಿದೆ", ಎಂದು ಆಕೆ ಸೆಲ್ವಕಣಿಗೆ ತಿಳಿಸಿದರು.
ಹೆಂಗಸರು ಗೆಸ್ಟ್ ಹೌಸಿನಲ್ಲಿ ಐದು ದಿನಗಳ ನೆಲೆಸಬೇಕು. ಆದಾಗ್ಯೂ ಮೈನೆರೆದ ಹುಡುಗಿಯರನ್ನು ಇಡೀ ಒಂದು ತಿಂಗಳವರೆಗೆ ಇಲ್ಲಿ ನಿರ್ಬಂಧದಲ್ಲಿರಿಸಲಾಗುತ್ತದೆ. ಹೆಂಗಸರು ಪ್ರಸವದ ನಂತರದಲ್ಲಿ ನವಜಾತ ಶಿಶುವಿನೊಂದಿಗೆ ಇಲ್ಲಿ ನೆಲೆಸತಕ್ಕದ್ದು.
"ಮಧುರೈ ಹಾಗೂ ಥೇನಿ ಜಿಲ್ಲೆಗಳಲ್ಲಿ ಇಂತಹ ಇತರೆ ‘ಗೆಸ್ಟ್ ಹೌಸುಗಳನ್ನು’ ಕಾಣಬಹುದು. ವಿವಿಧ ದೇವಾಲಯಗಳಿಗೆ ವಿಭಿನ್ನ ಕಾರಣಗಳಿಗಾಗಿ ಅವು ನಿಷ್ಠವಾಗಿರುತ್ತವೆ. ಈ ಬಗ್ಗೆ ಜನರೊಂದಿಗೆ ಮಾತನಾಡಲು ನಾವು ಪ್ರಯತ್ನಿಸಿದೆವಾದರೂ ಅವರು ಅದಕ್ಕೆ ಕಿವಿಗೊಡಲಿಲ್ಲ. ಇದು ನಂಬಿಕೆಯ ವಿಷಯವಾಗಿದೆ. ಕೇವಲ ರಾಜಕೀಯ ಇಚ್ಛೆಯಿಂದಷ್ಟೇ ಇದನ್ನು ಬದಲಿಸಲು ಸಾಧ್ಯ. ಇದಕ್ಕೆ ಬದಲಾಗಿ ಅಧಿಕಾರದಲ್ಲಿರುವವರು ಮತಯಾಚನೆಗೆ ಬಂದಾಗ ಗೆಸ್ಟ್ ಹೌಸನ್ನು ಆಧುನೀಕರಣಗೊಳಿಸುವ, ಹೆಚ್ಚಿನ ಸೌಲಭ್ಯವನ್ನು ಒದಗಿಸುವ ಭರವಸೆಗಳನ್ನು ನೀಡುತ್ತಾರೆ", ಎನ್ನುತ್ತಾರೆ ಸಾಲೈ ಸೆಲ್ವಂ.
ಇದಕ್ಕೆ ವ್ಯತಿರಿಕ್ತವಾಗಿ, ಅಧಿಕಾರದಲ್ಲಿರುವವರು ಮಧ್ಯೆ ಪ್ರವೇಶಿಸಿ ಗೆಸ್ಟ್ ಹೌಸುಗಳನ್ನು ಮುಚ್ಚಿಸಬಹುದು. ನಂಬಿಕೆಗೆ ಸಂಬಂಧಿಸಿದ ವಿಷಯವಾದ್ದರಿಂದ ಇದು ಕಷ್ಟವೆಂಬುದಾಗಿ ಅವರು ಹೇಳುತ್ತಾರೆ. "ಆದರೆ ನಾವು ಎಷ್ಟು ದಿನಗಳವರೆಗೂ ಈ ಅಸ್ಪೃಶ್ಯತೆಯನ್ನು ಒಪ್ಪಿಕೊಳ್ಳಬೇಕು? ಸರ್ಕಾರವು ಕಠಿಣ ಕ್ರಮವನ್ನು ಕೈಗೊಂಡಲ್ಲಿ ಪ್ರತಿಭಟನೆಯು ಎದುರಾಗುತ್ತದೆಂಬುದು ನಿಜವೇ. ಆದರೆ ಇದು ಕೊನೆಗೊಳ್ಳತಕ್ಕದ್ದು. ಜನ ಇದನ್ನು ಬೇಗನೆ ಮರೆತುಬಿಡುತ್ತಾರೆ. ನನ್ನ ಈ ಮಾತಿನಲ್ಲಿ ವಿಶ್ವಾಸವಿಡಿ", ಎನ್ನುತ್ತಾರೆ ಸೆಲ್ವಂ.
ಋತುಚಕ್ರ ಹಾಗೂ ಸಂಬಂಧಿತ ಅಪಮಾನಕರ ನಡವಳಿಕೆಗಳು ತಮಿಳು ನಾಡಿನಲ್ಲಿ ಸರ್ವೇಸಾಮಾನ್ಯ. 2018ನೇ ನವೆಂಬರಿನಲ್ಲಿ ತಂಜಾವೂರ್ ಜಿಲ್ಲೆಯನ್ನು ‘ಗಜ’ ಸೈಕ್ಲೋನ್ ಅಪ್ಪಳಿಸಿದಾಗ, ಪುಟ್ಟುಕೊಟ್ಟೈ ಕ್ಷೇತ್ರದ ಅನೈಕ್ಕಾಡು ಗ್ರಾಮದ 14ರ ವಯಸ್ಸಿನ ಎಸ್. ವಿಜಯ ಈ ನಿಷೇಧದಿಂದಾಗಿ ಸಾವನ್ನಪ್ಪಿದಳು. ಬಹಿಷ್ಠೆಯಾಗಿದ್ದ ಹುಡುಗಿಯನ್ನು ತನ್ನ ಪ್ರಥಮ ಋತುಚಕ್ರದ ಅವಧಿಯಲ್ಲಿ, ಮನೆಯ ಬಳಿಯಿದ್ದ ಶಿಥಿಲ ಗುಡಿಸಲಿನಲ್ಲಿ ಒಬ್ಬಂಟಿಯಾಗಿ ಇರಿಸಲಾಗಿತ್ತು (ತಮ್ಮ ವಾಸದ ಮನೆಯಲ್ಲಿದ್ದ ಉಳಿದ ಕುಟುಂಬಸ್ಥರು ಉಳಿದುಕೊಂಡರು).
ನಿಷೇಧವು ಬಹುತೇಕ ತಮಿಳುನಾಡನ್ನು ಆವರಿಸಿದ್ದು ಅದರ ಪ್ರಮಾಣದಲ್ಲಿ ವ್ಯತ್ಯಾಸವಿದೆಯಷ್ಟೇ ಎನ್ನುತ್ತಾರೆ ಸಾಕ್ಷ್ಯಚಿತ್ರ ನಿರ್ಮಾಪಕರಾದ ಗೀತ ಇಳಂಗೋವನ್. 2012ರಲ್ಲಿ ಆಕೆಯು ನಿರ್ಮಿಸಿದ ಮಾಧವಿದಾಯಿ (ಋತುಸ್ರಾವ) ಎಂಬ ಸಾಕ್ಷ್ಯಚಿತ್ರವು ಋತುಚಕ್ರ ಸಂಬಂಧಿತ ನಿಷೇಧಗಳನ್ನು ಕುರಿತದ್ದಾಗಿದೆ. ಹೆಂಗಸರನ್ನು ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆಗಳು ಕೆಲವು ನಗರ ಪ್ರದೇಶಗಳಲ್ಲಿ ವಿವೇಚನೆಯುಳ್ಳವಾಗಿರಬಹುದು ಆದರೆ ಇದು ವ್ಯಾಪಕವಾಗಿ ಚಾಲ್ತಿಯಲ್ಲಿದೆ. "ಅಧಿಕಾರಿಯೊಬ್ಬರ ಪತ್ನಿಯು, ಆ ಮೂರು ದಿನಗಳಲ್ಲಿ ನನ್ನ ಮಗಳನ್ನು ಅಡಿಗೆ ಕೋಣೆಯ ಒಳಗೆ ಸೇರಿಸುವುದಿಲ್ಲ. ಇದು ಆಕೆಗೆ ವಿಶ್ರಾಂತಿಯ ಸಮಯ ಎಂದು ಹೇಳುವುದನ್ನು ಕೇಳಿದ್ದೇನೆ. ನೀವು ಇದಕ್ಕೆ ಹಲವು ಬಣ್ಣಗಳನ್ನು ಹಚ್ಚಬಹುದಾದರೂ ಇದು ಭೇದಭಾವವೇ ಹೌದು", ಎನ್ನುತ್ತಾರೆ ಇಳಂಗೋವನ್.
ಮತಧರ್ಮಗಳು ಹಾಗೂ ಸಮಾಜೋ-ಆರ್ಥಿಕ ಹಿನ್ನೆಲೆಗಳಲ್ಲಿ ಋತುಚಕ್ರವನ್ನು ಕುರಿತ ಅಪಮಾನಕರ ನಡವಳಿಕೆಯು ಸರ್ವೇಸಾಮಾನ್ಯವಾಗಿದ್ದು, ಅವುಗಳ ಪ್ರಕಾರಗಳು ಮಾತ್ರ ವಿಭಿನ್ನವೆಂತಲೂ ಇಳಂಗೋವನ್ ತಿಳಿಸುತ್ತಾರೆ. "ನನ್ನ ಸಾಕ್ಷ್ಯಚಿತ್ರಕ್ಕಾಗಿ ಅಮೆರಿಕದ ನಗರವೊಂದಕ್ಕೆ ಸ್ಥಳಾಂತರಗೊಂಡ ನಂತರವೂ ಋತುಚಕ್ರದ ಅವಧಿಯಲ್ಲಿ ಪ್ರತ್ಯೇಕವಾಗಿ ಉಳಿಯುವ ಹೆಂಗಸಿನೊಂದಿಗೆ ಮಾತನಾಡಿದಾಗ, ಇದು ನನ್ನ ಸ್ವಂತ ಆಯ್ಕೆಯೆಂಬುದಾಗಿ ಆಕೆ ವಾದಿಸಿದರು. ಇಂತಹ ಮೇಲ್ವರ್ಗದ, ಮೇಲ್ಜಾತಿಯ ಹೆಂಗಸರ ಸ್ವಂತ ಆಯ್ಕೆಗಳು ಕಟ್ಟುನಿಟ್ಟಿನ ಪುರುಷಪ್ರಧಾನ ವ್ಯವಸ್ಥೆಯಲ್ಲಿ, ಯಾವುದೇ ಅಧಿಕಾರಯುತ ಧ್ವನಿಯಿಲ್ಲದ ಹೆಂಗಸಿನ ಸಾಮಾಜಿಕ ಒತ್ತಡಗಳಾಗಿ ಪರಿಣಮಿಸುತ್ತವೆ", ಎನ್ನುತ್ತಾರೆ ಇಳಂಗೋವನ್.
"ಪಾವಿತ್ರ್ಯದ ಈ ಸಂಸ್ಕೃತಿಯು ವಾಸ್ತವವಾಗಿ ಮೇಲ್ಜಾತಿಗೆ ಸಂಬಂಧಪಟ್ಟದ್ದು", ಎಂದ ಇಳಂಗೋವನ್ ಮುಂದುವರಿದು ಹೀಗೆ ಹೇಳಿದರು: "ಆದರೂ ಇದು ಸಮಾಜದ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಕೂವಲಪುರಂನ ಸಮುದಾಯದ ಬಹುತೇಕರು ದಲಿತರು. ಸಾಕ್ಷ್ಯಚಿತ್ರದ ಪ್ರಮುಖ ಲಕ್ಷ್ಯವಿದ್ದದ್ದು ಪುರುಷರತ್ತ. ಈ ವಿಷಯದ ಬಗ್ಗೆ ಅವರಿಗೆ ತಿಳಿವಳಿಕೆ ಮೂಡಬೇಕು. ನೀತಿ ನಿಯಮಗಳನ್ನು ರೂಪಿಸುವವರು ಬಹುತೇಕವಾಗಿ ಪುರುಷರು. ನಾವು ಈ ಬಗ್ಗೆ ಮಾತನಾಡದಿದ್ದಲ್ಲಿ, ಮನೆಯಿಂದಲೇ ಸಂವಾದವು ಪ್ರಾರಂಭಗೊಳ್ಳದಿದ್ದಲ್ಲಿ, ನನಗೆ ಈ ಬಗ್ಗೆ ಯಾವುದೇ ಭರವಸೆಯಿಲ್ಲ", ಎನ್ನುತ್ತಾರೆ ಈ ಚಿತ್ರ ನಿರ್ಮಾಪಕ.
ಚೆನ್ನೈಯಲ್ಲಿ ನೆಲೆಸಿರುವ ಗರ್ಭಶಾಸ್ತ್ರಜ್ಞೆ ಡಾ. ಶಾರದ ಸಕ್ಥಿರಾಜನ್, "ಸೂಕ್ತ ನೀರಿನ ವ್ಯವಸ್ಥೆಯಿಲ್ಲದೆ ಹೆಂಗಸರನ್ನು ಪ್ರತ್ಯೇಕವಾಗಿರಿಸುವುದು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಅಪಾಯಗಳಿಗೆ ಕಾರಣವಾಗುತ್ತದೆ" ಎನ್ನುತ್ತಾರೆ. "ಒದ್ದೆಯಾದ ಪ್ಯಾಡುಗಳನ್ನು ದೀರ್ಘಕಾಲದವರೆಗೆ ಇಡುವುದು ಹಾಗೂ ಸ್ವಚ್ಛ ನೀರಿನ ವ್ಯವಸ್ಥೆಯಿಲ್ಲದಿರುವುದು ಮೂತ್ರೀಯ ಹಾಗೂ ಸಂತಾನೋತ್ಪತ್ತಿಯ ಅಂಗವ್ಯೂಹಗಳ ಸೋಂಕಿಗೆ ಕಾರಣವಾಗುತ್ತದೆ. ಈ ಸೋಂಕುಗಳು ಹೆಂಗಸರ ಭವಿಷ್ಯದಲ್ಲಿನ ಫಲವತ್ತತೆಯನ್ನು ದುರ್ಬಲಗೊಳಿಸಿ ವಸ್ತಿಕುಹರದ ಬೆಂಬಿಡದ ಶೂಲೆಯಂತಹ ಅನಾರೋಗ್ಯಕರ ದೀರ್ಘಕಾಲೀನ ಅಪಾಯಗಳನ್ನು ಉಂಟುಮಾಡುತ್ತವೆ. ನೈರ್ಮಲ್ಯರಾಹಿತ್ಯ (ಹಳೆಯ ಪ್ಯಾಡುಗಳ ಮರುಬಳಕೆ) ಹಾಗೂ ತನ್ಮೂಲಕ ಹರಡುವ ಸೋಂಕುಗಳು ಗರ್ಭಕಂಠದ ಕ್ಯಾನ್ಸರಿನ ಪ್ರಮುಖ ಕಾರಣಗಳಾಗುತ್ತವೆ", ಎಂದು ಅವರು ತಿಳಿಸುತ್ತಾರೆ.
ಇಂಟರ್ನ್ಯಾಶನಲ್ ಜರ್ನಲ್ ಆಫ್ ಕಮ್ಯುನಿಟಿ ಮೆಡಿಸಿನ್ ಅಂಡ್ ಪಬ್ಲಿಕ್ ಹೆಲ್ತ್ ಪ್ರಕಟಿತ 2018ರ ವರದಿಯು , ಗರ್ಭಕಂಠದ ಕ್ಯಾನ್ಸರ್, ಮಹಿಳೆಯರನ್ನು ಬಹುತೇಕವಾಗಿ ಬಾಧಿಸುವ ಕ್ಯಾನ್ಸರುಗಳಲ್ಲಿ ಅದರಲ್ಲೂ ವಿಶೇಷವಾಗಿ ತಮಿಳು ನಾಡಿನ ಗ್ರಾಮೀಣ ಭಾಗಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆಯೆಂಬುದಾಗಿ ತಿಳಿಸುತ್ತದೆ.
ಕೂವಲಪುರಂನ ಭಾನುವಿಗೆ ಇತರೆ ಆದ್ಯತೆಗಳಿವೆ. "ನೀವೆಷ್ಟೇ ಪ್ರಯಾಸಪಟ್ಟರೂ ಈ ಪದ್ಧತಿಯನ್ನು ಬದಲಿಸಲಾರಿರಿ. ಆದರೆ ಒಂದು ವಿಷಯದಲ್ಲಿ ಮಾತ್ರ ನೀವು ನಮಗೆ ಸಹಾಯಮಾಡಬಹುದು. ದಯವಿಟ್ಟು ಮುಟ್ಟುಥರೈನಲ್ಲಿ ಶೌಚಾಲಯವನ್ನು ಒದಗಿಸಿ. ಅದು ನಮ್ಮ ಜೀವನವನ್ನು ಕ್ಲೇಶರಹಿತವಾಗಿಸುತ್ತದೆ", ಎನ್ನುತ್ತಾರೆ ಆಕೆ.
ಮುಖಪುಟ ಸಚಿತ್ರ ವಿವರಣೆ: ಅರ್ಥ ಮತ್ತು ಅಭಿವ್ಯಕ್ತಿಯ ಹೊಸ ರೂಪಗಳನ್ನು ಅನ್ವೇಷಿಸಲು ತಂತ್ರಜ್ಞಾನದೊಂದಿಗೆ ಪ್ರಯೋಗದಲ್ಲಿ ತೊಡಗಿರುವ, ನೂತನ ಮಾಧ್ಯಮದ (new media) ಕಲಾಕಾರರಾದ ಪ್ರಿಯಾಂಕ ಬೊರರ್ , ಕಲಿಕೆ ಹಾಗೂ ಕ್ರೀಡೆಗಳಿಗಾಗಿ ಅನುಭವಗಳನ್ನು ವಿನ್ಯಾಸಗೊಳಿಸುತ್ತಾರೆ. ಸಂವಾದಾತ್ಮಕ ಮಾಧ್ಯಮದೊಂದಿಗೆ ಕೈಜೋಡಿಸುವ ಇವರು, ಪಾರಂಪರಿಕ ಲೇಖನಿ ಹಾಗೂ ಕಾಗದಗಳೊಂದಿಗೆ ಸಹಜತೆಯನ್ನು ಕಾಣುತ್ತಾರೆ.
ಪರಿ ಹಾಗೂ ಕೌಂಟರ್ ಮೀಡಿಯ ಟ್ರಸ್ಟ್ನ ವತಿಯಿಂದ ದೇಶಾದ್ಯಂತ ಗ್ರಾಮೀಣ ಭಾರತದ ಕಿಶೋರಿಯರು ಹಾಗೂ ಯುವತಿಯರ ಪರಿಸ್ಥಿತಿಗಳನ್ನು ಕುರಿತಂತೆ ವರದಿಯನ್ನು ತಯಾರಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ. ಸದರಿ ಯೋಜನೆಯು ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯ ಬೆಂಬಲಿತ ಉಪಕ್ರಮದ (initiative) ಒಂದು ಭಾಗವಾಗಿದ್ದು, ಸಾಮಾನ್ಯ ಜನರ ಅನುಭವ ಹಾಗೂ ಹೇಳಿಕೆಗಳ ಹಿನ್ನೆಲೆಯಲ್ಲಿ ಅಂಚಿಗೆ ತಳ್ಳಲ್ಪಟ್ಟ ಈ ಪ್ರಮುಖ ಸಮುದಾಯಗಳ ಪರಿಸ್ಥಿತಿಗಳನ್ನು ಅನ್ವೇಷಿಸಲಾಗುತ್ತಿದೆ.
ಈ ಲೇಖನವನ್ನು ಪುನಃ ಪ್ರಕಟಿಸಲು ಬಯಸಿದಲ್ಲಿ, [email protected] ಗೆ ಬರೆದು, ಅದರ ಪ್ರತಿಯನ್ನು [email protected] ಗೆ ಸಲ್ಲಿಸಿ.
ಅನುವಾದ: ಶೈಲಜ ಜಿ. ಪಿ.