"ನಾನು ಒಂದಿಷ್ಟು ತರಕಾರಿಗಳನ್ನು ಮಾರುತ್ತೇನೆ, ಆದರೆ ಅದರಿಂದ ಹೆಚ್ಚಿನ ಲಾಭವಿಲ್ಲ, ಈಗ ನಾವೆಲ್ಲರೂ ಹೆಚ್ಚಾಗಿ ಮನೆಯಲ್ಲಿ ಖಾಲಿ ಕುಳಿತಿರುತ್ತೇವೆ. ಸ್ಥಳೀಯ ಸಿಮೆಂಟ್ ಕಾರ್ಖಾನೆ ನಡೆಯುತ್ತಿದೆಯಾದರೂ ನಾವು ಕೆಲಸಕ್ಕೆ ಹೋಗುತ್ತಿಲ್ಲ' ಎಂದು ಕಛ್ ಜಿಲ್ಲೆಯ ಲಖಪತ್ ತಾಲ್ಲೂಕಿನಲ್ಲಿರುವ ಮೋರಿ ಗ್ರಾಮದಿಂದ ಕರೀಂ ನನಗೆ ಪೋನ್ ಕರೆಯ ಮೂಲಕ ವಿವರಿಸುತ್ತಿದ್ದರು. ಕರೀಂ ಜಾಟ್ ಫಕಿರಾನಿ ಜಾಟ್ ಸಮುದಾಯದಲ್ಲಿನ ಮಾಲ್ಧಾರಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕಛಿ ಭಾಷೆಯಲ್ಲಿ 'ಮಾಲ್' ಎನ್ನುವುದು ಪ್ರಾಣಿಗಳನ್ನು ಸೂಚಿಸುತ್ತದೆ, ಮತ್ತು 'ಧಾರಿ' ಎಂದರೆ ರಕ್ಷಕ ಅಥವಾ ಮಾಲೀಕ ಎಂದರ್ಥವಾಗುತ್ತದೆ. ಕಛ್ ನಾದ್ಯಂತ ಮಾಲ್ಧಾರಿಗಳು ಹಸುಗಳು, ಎಮ್ಮೆಗಳು, ಒಂಟೆಗಳು, ಕುದುರೆಗಳು, ಕುರಿ ಮತ್ತು ಮೇಕೆಗಳನ್ನು ಸಾಕುತ್ತಾರೆ.

ತರಕಾರಿಗಳನ್ನು ತಾವು ಹತ್ತಿರದ ಮಾರುಕಟ್ಟೆ ಮತ್ತು ಹಳ್ಳಿಗಳಿಂದ ತಂದಿರುವುದಾಗಿ ಕರೀಂ ಜಾಟ್ ಹೇಳುತ್ತಾರೆ- ಆದರೆ, ಅವುಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎಂದು ದೂರುತ್ತಾರೆ. ಸಿಮೆಂಟ್ ಕಾರ್ಖಾನೆ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಟೌನ್‌ಶಿಪ್‌ನಲ್ಲಿದ್ದರೂ ಸಹಿತ, ಕರೀಮ್ ಮತ್ತು ಅವರ ಸಹವರ್ತಿ ಫಕಿರಾನಿ ಜಾಟ್‌ಗಳಿಗೆ ಲಾಕ್‌ಡೌನ್ ನಿಂದಾಗಿ ಹೊರ ಹೋಗುವುದೇ ಕಷ್ಟಕರವಾಗುತ್ತಿದೆ. ಇದಲ್ಲದೆ, ಕಾರ್ಖಾನೆಯಲ್ಲಿ ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಇತರ ಪ್ರದೇಶಗಳಿಂದ ವಲಸೆ ಬಂದಿರುವ ಅನೇಕ ಕಾರ್ಮಿಕರಿದ್ದಾರೆ, ಅವರಲ್ಲಿ ಹಲವರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗದೆ ಇಲ್ಲಿಯೇ ಉಳಿದಿದ್ದಾರೆ. ಇಲ್ಲಿನ ವಲಸಿಗರು ಮತ್ತು ಸ್ಥಳೀಯರ ನಡುವಿನ ಸಂಬಂಧವು ಕೂಡ ಎಂದಿಗೂ ಅನ್ಯೋನ್ಯತೆಯಿಂದ ಕೂಡಿಲ್ಲ.

ಲಾಕ್‌ಡೌನ್ ನಿಂದಾಗಿ, ಭಾರತ-ಪಾಕಿಸ್ತಾನ ಗಡಿಯ ಬಳಿಯಿರುವ ಸಾವ್ಲಾ ಪೀರ್ ದರ್ಗಾದ ಜಾತ್ರೆಗೆ ಹೋಗುವುದನ್ನು ತಪ್ಪಿಸಿಕೊಂಡಿರುವುದಾಗಿ ಕರೀಮ್ ಜಾಟ್ ಹೇಳುತ್ತಾರೆ."ಪವಿತ್ರ ರಂಜಾನ್ ತಿಂಗಳು ಈಗಾಗಲೇ ಪ್ರಾರಂಭವಾಗಿದೆ.ಮತ್ತು ಈದ್ ಗೆ ಒಂದು ತಿಂಗಳಿಗೂ ಕಡಿಮೆ ಸಮಯವಿದೆ, ಈ ಸಮಯದಲ್ಲಿ ಈದ್ ಎಂದಿನಂತಿರುವುದಿಲ್ಲ." ಎನ್ನುವ ಆತಂಕ ಅವರದ್ದಾಗಿದೆ.

ಕಛ್ ನಲ್ಲಿ ವರದಿಯಾದ ಮೊದಲ ಕೊರೊನಾ ಪ್ರಕರಣವು ಲಖಪತ್ ತಾಲ್ಲೂಕಿನ ಮಹಿಳೆ ಎಂದು ತಿಳಿದುಬಂದಿದೆ, ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ್ದರು. ಮಾರ್ಚ್ ನಲ್ಲಿ ಅವರನ್ನು ಭುಜ್ ಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೆ ಕೊರೊನಾ ಇರುವುದು ಧೃಢಪಟ್ಟಿತು. ಈ ಲಖಪತ್ ಪ್ರದೇಶವು ಬಹುತೇಕ ಒಂಟೆ ಸಾಕಾಣಿಕೆದಾರರ ನೆಲೆಬೀಡಾಗಿದೆ.

ಮಾರ್ಚ್ 24ರಂದು ಕಛ್ ನಲ್ಲಿ ಲಾಕ್‌ಡೌನ್ ಘೋಷಣೆಯಾದ ನಂತರ, ಬಹುತೇಕ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡವು. ಅದರಲ್ಲೂ ವಿಶೇಷವಾಗಿ ಒಂಟೆ ಸಾಕಾಣಿಕೆದಾರರು ತಮ್ಮ ಮನೆಗಳಿಂದ ದೂರದಲ್ಲಿರುವ ಸ್ಥಳಗಳಲ್ಲಿದ್ದು ತಮ್ಮ ಪ್ರಾಣಿಗಳನ್ನು ಮೇಯಿಸುವವರು. ಇದರಿಂದಾಗಿ ಅವರು ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು.ಅಲ್ಲದೆ, ಅವರು ವಾಸಿಸುವ ಪ್ರದೇಶಗಳು ಗಡಿಗೆ ಬಹಳ ಹತ್ತಿರದಲ್ಲಿರುವುದರಿಂದ ಅವುಗಳನ್ನು ಹೆಚ್ಚು ಸೂಕ್ಷ್ಮ ವಲಯಗಳಾಗಿ ಗುರುತಿಸಲಾಗಿದೆ, ಈ ಪ್ರದೇಶಗಳನ್ನು ಅತಿ ಕಠಿಣವಾಗಿರುವ ಭದ್ರತಾ ಪ್ರೋಟೋಕಾಲ್‌ಗಳು ನಿಯಂತ್ರಿಸುತ್ತವೆ.ಈಗ ದಿಢೀರ್ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಬಹುತೇಕ ಮಾಲ್ಧಾರಿಗಳಿಗೆ ತಮ್ಮ ಹಳ್ಳಿಗಳಿಗೆ ಮರಳಲು ಅಥವಾ ಅಲ್ಲಿ ವಾಸಿಸುವ ತಮ್ಮ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಲು ಸಾಕಷ್ಟು ಸಮಯವಿಲ್ಲ.

ಅವರ ಜಾನುವಾರಗಳು ಬಯಲಿನಲ್ಲಿ ಸಿಲುಕಿಕೊಂಡು ಸಂಕಷ್ಟದಲ್ಲಿ ಸಿಲುಕಿದ್ದವು, ಈಗ ಅವು ಪರವಾಗಿಲ್ಲ ಎಂದು ಹೇಳುತ್ತಾರೆ. ಆದರೆ, ಈಗ ಲಾಕ್‌ಡೌನ್ ನ್ನು ಮತ್ತಷ್ಟು ವಿಸ್ತರಿಸಿದರೆ ಜಾನುವಾರಗಳ ಆಹಾರಕ್ಕೆ ಸಮಸ್ಯೆಯಾಗುತ್ತದೆ.ಇನ್ನೊಂಡೆಗೆ ಆಗ ಬೇಸಿಗೆಯು ಸಹ ತೀವ್ರಗೊಳ್ಳುತ್ತದೆ ಎನ್ನುತ್ತಾರೆ.

ನಖತ್ರನಾ ಬ್ಲಾಕ್‌ನಲ್ಲಿರುವ ಪೊಲೀಸರು ಬಯಲು ಮೈದಾನ ಪ್ರದೇಶದಲ್ಲಿರುವ ಕೆಲವು ಒಂಟೆ ಸಾಕಾಣಿಕೆದಾರರನ್ನು ಭೇಟಿ ಮಾಡಿ ಅವರಿಗೆ ತಿರುಗಾಡದಂತೆ ಸೂಚನೆ ನೀಡಿದ್ದಾರೆ ಎಂದು ಸ್ಥಳೀಯರು ನನಗೆ ಪೋನ್ ನಲ್ಲಿ ಹೇಳುತ್ತಿದ್ದರು. ಆದ್ದರಿಂದ ಈಗ ಅಲೆಮಾರಿ ಸಾಕಾಣಿಕೆದಾರರು ಎಲ್ಲಿಗೆಯಾದರೂ ಹೋಗಲು ಪ್ರಯತ್ನಿಸಿದರೆ, ಅದು ಆಯಾ ಹಳ್ಳಿಗಳಿಗೆ ರೇಷನ್ ಅಥವಾ ಇನ್ನಾವುದೇ ಕೆಲಸಕ್ಕಾಗಿ ಮಾತ್ರ, ಆದರೆ ಈಗ ಅದು ಕೂಡ ಕಷ್ಟಕರವಾಗಿದೆ.

PHOTO • Ritayan Mukherjee

ಕಛ್ ನ ವಿವಿಧ ಗ್ರಾಮೀಣ (ಮಾಲ್ಧಾರಿ) ಸಮುದಾಯಗಳ ಜೀವನ ಮತ್ತು ಸಾಂಸ್ಕೃತಿಕ ಆಚರಣೆಗಳು- ರಬಾರಿಗಳು, ಜಾಟ್‌ಗಳು ಮತ್ತು ಸಮರ ಹಾಗೆ ತಮ್ಮ ಜಾನುವಾರಗಳ ಕೇಂದ್ರಿತವಾಗಿರುತ್ತದೆ. ಅವರ ಹಾಡುಗಳು ಸಹಿತ ತಮ್ಮ ದನಗಾಹಿ ಕಾಯಕದ ಕುರಿತಾಗಿ ಬಣ್ಣಿಸುತ್ತವೆ. ಕೆಲವರು ಋತುಮಾನಕ್ಕೆ ಅನುಗುಣವಾಗಿ ವಲಸೆ ಹೋದರೆ (ಮೇ-ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ) ಇನ್ನು ಕೆಲವರು ವರ್ಷಪೂರ್ತಿ ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿಯೇ ವಲಸೆ ಹೋಗುತ್ತಾರೆ. ಈಗ ಲಾಕ್ ಡೌನ್ ವಿಧಿಸಿರುವುದು ಅವರ ಋತುಮಾನದ ಕ್ರಮಕ್ಕೆ ಅಡ್ಡಿಪಡಿಸಿದಂತಾಗಿದೆ.

ಲಖಪತ್ ತಾಲ್ಲೂಕಿನ ಮಾಲ್ಧಾರಿಯಾದ ಗುಲ್ಮಾದ್ ಜಾಟ್ ನಂತಹ ಅನೇಕ ಜನರಿಗೆ ನ್ಯಾಯಬೆಲೆ ಅಂಗಡಿಗಳಿಂದ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯುವುದು ಕಷ್ಟಕರವಾಗಿದೆ. "ಪಡಿತರ ಚೀಟಿಗಳನ್ನು ನಮ್ಮ ಗುರುತಿಗಾಗಿ ಇಟ್ಟುಕೊಂಡಿದ್ದೇವೆ, ಆದರೂ ಪಡಿತರ ಅಂಗಡಿಗಳಲ್ಲಿ ನಮ್ಮ ಕೋಟಾದಡಿ ರೇಷನ್  ಸಾಮಗ್ರಿಗಳನ್ನು ತರಲು ಅದು ಸಹಾಯಕಾರಿಯಾಗಿಲ್ಲ, ಬಹುತೇಕ ಕುಟುಂಬಗಳಿಗೂ ಇದೆ ಪರಿಸ್ಥಿತಿ ಎದುರಾಗಿದೆ” ಎಂದು ಹೇಳುತ್ತಾರೆ.

ಈ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಭುಜ್‌ನ ಸಂತಾನೋತ್ಪತ್ತಿ ಕಾರ್ಯಕ್ರಮದ ಪ್ರವರ್ತಕ ರಮೇಶ್ ಭಟ್ಟಿ ಇದು ನಡೆಯುತ್ತಲೇ ಇರುತ್ತದೆ ಎನ್ನುತ್ತಾರೆ. ಅನೇಕ ಊಂಟ್ ವಾಲೆಗಳು (ಒಂಟೆ ಸಾಕಾಣಿಕೆದಾರರು) 10-20 ಕಿಲೋಮೀಟರ್ ದೂರದಲ್ಲಿರುವ ಅರಣ್ಯ ಭೂಮಿ ಅಥವಾ ತುಂಡು ಭೂಮಿಯಲ್ಲಿ ಕೆಲಸ ಮಾಡುತ್ತಾರೆ. "ಅವರಿಗೆ ಹಳ್ಳಿಗಳೊಂದಿಗೆ ಅಥವಾ ಸರ್ಕಾರದೊಂದಿಗೆ ಯಾವುದೇ ರೀತಿಯ ಸಂಪರ್ಕವಿಲ್ಲ. ಸಾಮಾನ್ಯವಾಗಿ ಅವರು ಎಲ್ಲೆಡೆ ಅಲೆದಾಡುವುದರಿಂದಾಗಿ ಬಹುತೇಕರು ರೇಷನ್ ಕಾರ್ಡ್ ಗಳನ್ನು ತಮ್ಮ ಗ್ರಾಮದಲ್ಲಿಯೇ ಬಿಟ್ಟು ಹೋಗಿರುತ್ತಾರೆ.ಈಗ ಮಾಲ್ಧಾರಿಗಳು ಮಾರುವ ಒಂಟೆ ಹಾಲು ಮತ್ತು ಇತರ ಉತ್ಪನ್ನಗಳಿಗೆ ಕೂಡ ಖರೀದಿದಾರರು ಇಲ್ಲ, ಆದ್ದರಿಂದ ಅವರ ಆದಾಯವು ಕುಂಠಿತಗೊಂಡಿದೆ. ಅವರಿಗೆ ಈಗ ಅಗತ್ಯ ವಸ್ತುಗಳನ್ನು ಖರೀದಿಸಲು ಸಹಿತ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆಗೆ ಕೆಲವು ಹಳ್ಳಿಗಳಲ್ಲಿ ತಮಗೆ ಮನೆಯಲ್ಲಿ ಅನುಮತಿ ನೀಡುವುದಿಲ್ಲ ಎನ್ನುವ ಕಾರಣಕ್ಕಾಗಿ ಅವರು ತಮ್ಮ ಮನೆಗಳಿಗೆ ಹಿಂತಿರುಗಲು ಹಿಂಜರಿಯುತ್ತಾರೆ’ ಎಂದು ಅವರು ವಿವರಿಸಿದರು.

ಕುಟುಂಬಗಳಲ್ಲಿನ ಪುರುಷರು ಜಾನುವಾರಗಳನ್ನು ಮೇಯಿಸಲು ಹೋದಂತಹ ಸಂದರ್ಭದಲ್ಲಿ ಹಾಲು ಹಾಗೂ ರೊಟ್ಟಿ ಮೂಲಕ ಅವರ ಜೀವನ ನಿರ್ವಹಣೆ ಹೇಗೋ  ನಡೆಯುತ್ತದೆ, ಆದರೆ ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳು ಮನೆಗೆ ಹಿಂದಿರುಗಿದಾಗ ಅವರಿಗೆ ಖಂಡಿತವಾಗಿಯೂ ಆಹಾರದ ಅಗತ್ಯವಿರುತ್ತದೆ.ಕಳೆದ ಕೆಲವು ದಿನಗಳಲ್ಲಿ ಸಾರಿಗೆ ಪುನರಾರಂಭಗೊಂಡಿದೆ.‌ ಆದರೂ ಈಗಾಗಲೇ ಅವರು ತೀವ್ರ ನಷ್ಟವನ್ನು ಅನುಭವಿಸಿದ್ದಾರೆ ಎಂದು ಭಟ್ಟಿ ಹೇಳುತ್ತಾರೆ.

ಅಂತಹ ಪರಿಸ್ಥಿತಿಯಲ್ಲಿ, ಹಸಿವು ನಿಜಕ್ಕೂ ಸಮಸ್ಯೆಯಾಗಿದೆ. ಸರ್ಕಾರವು ನೀಡಿದ್ದು ಏತಕ್ಕೂ ಸಾಕಾಗುವುದಿಲ್ಲ. "ಎಂಟು ಜನರನ್ನು ಒಳಗೊಂಡಿರುವ ಕುಟುಂಬಕ್ಕೆ 10 ಕಿಲೋ ಗೋಧಿಯನ್ನು ನೀಡಿದರೆ, ಅದರಲ್ಲಿ ಅವರು ಎಷ್ಟು ದಿನ ಜೀವನ ನಡೆಸಲಿಕ್ಕೆ ಸಾಧ್ಯ" ಎಂದು ಅವರು ಪ್ರಶ್ನಿಸುತ್ತಾರೆ.

ಭುಜ್ ಮೂಲದ 'ಸಹಜೀವನ್' ಪಶು ಸಂಗೋಪನಾ ಕೇಂದ್ರವನ್ನು ನಡೆಸುತ್ತಿದೆ, ಇದು ಮಾಲ್ಧಾರಿಗಳ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತದೆ. ಕಳೆದ ಎರಡು ವಾರಗಳಲ್ಲಿ ಈ ಸಂಸ್ಥೆಯು ಭುಜ್‌ನಲ್ಲಿ ತೊಂದರೆಯಲ್ಲಿರುವ ಕೆಲವು ಕುಟುಂಬಗಳಿಗೆ ಸುಮಾರು 70 ಪಡಿತರ ಕಿಟ್‌ಗಳನ್ನು ಸಿದ್ಧಪಡಿಸಿದೆ. ಈ ಕಿಟ್‌ಗಳಲ್ಲಿ ಗೋಧಿ, ಹತ್ತಿ ಎಣ್ಣೆ, ಮೂಂಗ್ ದಾಲ್ (ಬೇಳೆಕಾಳು), ಸಕ್ಕರೆ, ಈರುಳ್ಳಿ, ಆಲೂಗಡ್ಡೆ, ಅಕ್ಕಿ, ಉಪ್ಪು, ಮಸಾಲೆ, ಕೊತ್ತಂಬರಿ ಪುಡಿ, ಅರಿಶಿನ ಮತ್ತು ಸಾಸಿವೆಯಂತಹ ಪದಾರ್ಥಗಳು ಒಂದೆರಡು ವಾರಗಳವರೆಗೆ ಸಾಕಾಗುವಷ್ಟು ಇವೆ. "ಅವರಿಗೆ ಧನ್ಯವಾದಗಳು, ನಮ್ಮ ರೇಷನ್ ಸಾಮಗ್ರಿ ಮನೆ ಬಾಗಿಲ ಬಳಿಯೇ ಬಂದಿದೆ. ಈಗ ಅದರ ಮೇಲೆಯೇ ನಮ್ಮ ಜೀವನ ನಡೆದಿದೆ, ಆದರೆ ಈ ಲಾಕ್ ಡೌನ್ ನ್ನು ಮತ್ತಷ್ಟು ಬಿಗಿಗೊಳಿಸಿದರೆ ನಮಗೆ ಇನ್ನೂ ಹೆಚ್ಚಿನ ಸಂಕಷ್ಟಗಳು ಎದುರಾಗುತ್ತವೆ” ಎನ್ನುತ್ತಾರೆ ಕರೀಂ ಜಾಟ್.

ಕ್ರಮೇಣ ಕೆಲವು ಕೃಷಿ ಚಟುವಟಿಕೆಗಳನ್ನು ಪುನರಾರಂಭಿಸಲು ಸರ್ಕಾರದ ವಿನಾಯಿತಿ ಘೋಷಣೆ ಕುರಿತಾಗಿ ಪ್ರತಿಕ್ರಿಯಿಸಿದ ಕರೀಂ ಜಾಟ್ "ಹಾಗೆ ಆಗಲೆಂದು ನಾನು ಆಶಿಸುತ್ತೇನೆ, ಸರ್ಕಾರ ಕೂಡ ಅದನ್ನು ಮಾಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ಜಗತ್ತು ಏನನ್ನು ತಿನ್ನಬೇಕು ಹೇಳಿ ? ಎಲ್ಲರಲ್ಲೂ ಈಗ ಒಂದು ರೀತಿ ಆತಂಕ ಎದುರಾಗಿದೆ"ಎನ್ನುತ್ತಾರೆ.

ಒಂದೆಡೆ ಕೆಲವೊಂದಿಷ್ಟು ರೇಷನ್ ಬರುತ್ತಿದ್ದಂತೆ, ಇನ್ನು ಕೆಲವು ಜನರು ಇತರ ಕೊರತೆಗಳ ಬಗ್ಗೆ ಆತಂಕದಲ್ಲಿದ್ದಾರೆ-ಅವರಲ್ಲಿ ನನ್ನ ಸ್ನೇಹಿತರು ಮತ್ತು ನಾನು ಪ್ರೀತಿಯಿಂದ 'ಅಯೂಬ್ ಕಾಕಾ' (ಚಿಕ್ಕಪ್ಪ) ಎಂದು ಕರೆಯುವ ಜಾಟ್ ಅಯೂಬ್ ಅಮೀನ್ ಕೂಡ ಒಬ್ಬರಾಗಿದ್ದಾರೆ. ಅವರು ಫಕಿರಾನಿ ಜಾಟ್ ಸಮುದಾಯದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. "ಹೌದು, ನನ್ನ ಕಡೆ ಬದುಕಲಿಕ್ಕೆ ರೇಷನ್ ಇದೆ” ಎಂದು ಹೇಳಿದರು. “ಇದಕ್ಕಾಗಿ ಎಲ್ಲ ಒಳ್ಳೆಯ ಜನರಿಗೆ ಧನ್ಯವಾದಗಳು. ಆದರೆ ಈ ಲಾಕ್‌ಡೌನ್‌ನ ಅತ್ಯಂತ ದುಃಖಕರ ಭಾಗ ಯಾವುದೆಂದು ನಿಮಗೆ ತಿಳಿದಿದೆಯೇ? ನನಗೆ ಬೀಡಿಗಳು ಸಿಗುತ್ತಿಲ್ಲ ಎನ್ನುವುದು" ಎಂದು ಅವರು ಪೋನ್ ನಲ್ಲಿ ತಮ್ಮ ಸಂಕಷ್ಟವನ್ನು ತೋಡಿಕೊಂಡರು.

PHOTO • Ritayan Mukherjee

ಫಕಿರಾನಿ ಜಾಟ್ ಸಮುದಾಯದ ಹಿರಿಯರಲ್ಲಿ ಒಬ್ಬರಾದ ಜಾಟ್ ಅಯುಬ್ ಅಮೀನ್, ವರ್ಷದುದ್ದಕ್ಕೂ ಭಚೌ ತಾಲ್ಲೂಕಿನೊಳಗೆ ಖರೈ ಒಂಟೆಗಳನ್ನು ಮೇಯಿಸುವ ಮೂಲಕ ಜೀವನ ಸಾಗಿಸುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆವಾಸಸ್ಥಾನದ ವಿನಾಶದಿಂದಾಗಿ ಜಾನುವಾರಗಳನ್ನು ಮೇಯಿಸುವ ಮೈದಾನಗಳು ಹಾನಿಗೆ ಒಳಗಾಗಿವೆ, ಇದಲ್ಲದೇ ಕುಗ್ಗುತ್ತಿರುವ ಹಿಂಡಿನ ಗಾತ್ರ ಮತ್ತು ಇತರ ಕಾರಣಗಳಿಂದಾಗಿ ಅವರ ಆದಾಯ ಕುಂಠಿತಗೊಳ್ಳಲು ಕಾರಣವಾಗಿವೆ. ಈಗ ಕೊರೊನಾ ಹಿನ್ನಲೆಯಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಒಂಟೆ ಹಾಲಿನಿಂದ ಬರುವ ತಮ್ಮ ಆದಾಯದ ಶೇ 30 ರಷ್ಟು ಭಾಗಕ್ಕೆ ಕತ್ತರಿ ಬೀಳಬಹುದೆಂದು ಅವರು ಹೇಳುತ್ತಾರೆ.

PHOTO • Ritayan Mukherjee

ಕಳೆದ ಕೆಲವು ವರ್ಷಗಳಿಂದ ಕಛ್ ನ ಕರಾವಳಿ ಪ್ರದೇಶವು ಸಿಮೆಂಟ್ ಉದ್ಯಮದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಮೋರಿ, ತಾಹೇರಾ ಮತ್ತು ಇತರ ಗಡಿ ಗ್ರಾಮಗಳಲ್ಲಿನ ಫಕಿರಾನಿ ಜಾಟ್ ಕುಟುಂಬಗಳ ಕೆಲವು ಯುವಕರು ಪ್ರಮುಖ ಸಿಮೆಂಟ್ ಕಾರ್ಖಾನೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.ಆದರೆ ಈಗ ಲಾಕ್ ಡೌನ್ ಇರುವುದರಿಂದ ಕಾರ್ಖಾನೆಗಳು ಮುಚ್ಚಿವೆ.

PHOTO • Ritayan Mukherjee

ಪುರುಷರು ತಮ್ಮ ಜಾನುವಾರಗಳ ಮೇಯಿಸುವಿಕೆ ವೇಳೆ ಹಾಲು ಮತ್ತು ರೊಟ್ಟಿಗಳೊಂದಿಗೆ ಜೀವನ ನಿರ್ವಹಿಸುತ್ತಿದ್ದರೆ, ಹಳ್ಳಿಗಳಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ರೊಟ್ಟಿ, ಅಕ್ಕಿ ಮತ್ತು ದಾಲ್ ಪದಾರ್ಥಗಳು ದಿನ ನಿತ್ಯದ ಆಹಾರಕ್ಕೆ ಬೇಕಾಗುತ್ತದೆ. ಈಗ ಏಕಾಏಕಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಪ್ರತ್ಯೇಕ ಗಡಿ ಗ್ರಾಮಗಳಲ್ಲಿರುವ ಜನರನ್ನು ತೊಂದರೆಗೆ ಸಿಲುಕಿಸಿದೆ. ಅವರು ಜಾನುವಾರಗಳನ್ನು ಮೇಯಿಸುವ ನಿಮಿತ್ತ ಪಡಿತರ ಚೀಟಿಗಳನ್ನು ತಮ್ಮ ಹಳ್ಳಿಗಳಲ್ಲೇ ಬಿಟ್ಟಿದ್ದರಿಂದಾಗಿ ಹಲವಾರು ಅಲೆಮಾರಿ ಸಾಕಾಣಿಕೆದಾರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಈಗ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

PHOTO • Ritayan Mukherjee

ಕರೀಮ್ ಜಾಟ್ ಲಖಪತ್ ತಾಲ್ಲೂಕಿನ ಮೋರಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ, ಅವರು ಜಾನುವಾರಗಳ ಸಾಕಾಣಿಕೆಯಿಂದ ಕುಂಠಿತಗೊಂಡಿರುವ ಆದಾಯವನ್ನು ಹೆಚ್ಚಿಸಲು ಆಟೋರಿಕ್ಷಾವನ್ನು ಖರೀದಿಸಿದ್ದರು. ಈಗ ಈ ಲಾಕ್ ಡೌನ್ ನಿಂದಾಗಿ 'ನನ್ನ ಈ ರಿಕ್ಷಾವನ್ನು ಹೊರಗೆ ತರಲು ಸಾಧ್ಯವಿಲ್ಲ.ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ನನ್ನ ಜೀವನವನ್ನು ನಡೆಸಲು ಪ್ರಯತ್ನಿಸುತ್ತೇನೆ” ಎಂದು ಹೇಳುತ್ತಾರೆ.

PHOTO • Ritayan Mukherjee

ಅನೇಕ ಫಕಿರಾನಿ ಜಾಟ್‌ಗಳು ಬೀಡಿ ಮತ್ತು ಸಿಗರೇಟ್‌ಗಳನ್ನು ಸೇದುವ ಅಭ್ಯಾಸವನ್ನು ಹೊಂದಿದ್ದಾರೆ, ಈಗ ಆದರೆ ಲಾಕ್‌ಡೌನ್‌ ನಿಂದಾಗಿ ಈಗ ತಂಬಾಕು ಸಿಗುತ್ತಿಲ್ಲ. ಇದು 'ತುಂಬಾ ನಿರಾಶಾದಾಯಕ' ಎಂದು ಜಾಟ್ ಅಯುಬ್ ಅಮೀನ್ ದೂರುತ್ತಾರೆ.

Left: Pastoralist families receiving ration bags from Bhikhabhai Vaghabhai Rabari, president of the Kachchh Unt Uchherak Maldhari Sangathan (Kachchh Maldhari Camel Herders Organisation). Right: Several Fakirani Jat families have received such ration kits from a Bhuj-based organisation working for the rights of the maldharis. The bags include essentials like wheat, lentils, cotton oil, turmeric, spices, salt and rice. The families say this has reduced the pressure on them greatly.
PHOTO • Sahjeevan
Left: Pastoralist families receiving ration bags from Bhikhabhai Vaghabhai Rabari, president of the Kachchh Unt Uchherak Maldhari Sangathan (Kachchh Maldhari Camel Herders Organisation). Right: Several Fakirani Jat families have received such ration kits from a Bhuj-based organisation working for the rights of the maldharis. The bags include essentials like wheat, lentils, cotton oil, turmeric, spices, salt and rice. The families say this has reduced the pressure on them greatly.
PHOTO • Sahjeevan

ಎಡಕ್ಕೆ: ಕಛ್ ಉಂಟ್ ಉಚೇರಾಕ್ ಮಾಲ್ಧಾರಿ ಸಂಘಟನ್ ದ (ಕಛ್ ಮಾಲ್ಧಾರಿ ಒಂಟೆ ಸಾಕಾಣಿಕೆದಾರರ ಸಂಘಟನೆ) ಅಧ್ಯಕ್ಷರಾದ ಭಿಖಾಭಾಯ್ ವಘಭಾಯ್ ರಬಾರಿ ಅವರಿಂದ ಪಡಿತರ ಚೀಲಗಳನ್ನು ಸ್ವೀಕರಿಸುತ್ತಿರುವ ಅಲೆಮಾರಿ ದನಗಾಹಿ ಕುಟುಂಬಗಳು.ಬಲಕ್ಕೆ: ಮಾಲ್ಧಾರಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಭುಜ್ ಮೂಲದ ಸಂಸ್ಥೆಯಿಂದ ಹಲವಾರು ಫಕಿರಾನಿ ಜಾಟ್ ಕುಟುಂಬಗಳು ಇಂತಹ ಪಡಿತರ ಕಿಟ್‌ಗಳನ್ನು ಸ್ವೀಕರಿಸಿದ್ದಾರೆ.ಈ ಚೀಲಗಳಲ್ಲಿ ಗೋಧಿ, ಮಸೂರ, ಹತ್ತಿ ಎಣ್ಣೆ, ಅರಿಶಿನ, ಮಸಾಲೆ, ಉಪ್ಪು ಮತ್ತು ಅಕ್ಕಿ ಮುಂತಾದ ಪದಾರ್ಥಗಳು ಸೇರಿವೆ. ಇದು ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಕುಟುಂಬಗಳು ಹೇಳುತ್ತವೆ.

ಅನುವಾದ - ಎನ್ . ಮಂಜುನಾಥ್

Ritayan Mukherjee

ঋতায়ন মুখার্জি কলকাতার বাসিন্দা, আলোকচিত্রে সবিশেষ উৎসাহী। তিনি ২০১৬ সালের পারি ফেলো। তিব্বত মালভূমির যাযাবর মেষপালক রাখালিয়া জনগোষ্ঠীগুলির জীবন বিষয়ে তিনি একটি দীর্ঘমেয়াদী দস্তাবেজি প্রকল্পের সঙ্গে যুক্ত।

Other stories by Ritayan Mukherjee
Translator : N. Manjunath