ಸತ್ಯಜಿತ್ ಮೊರಾಂಗ್ ತನ್ನ ಎಮ್ಮೆಗಳ ಹಿಂಡಿನೊಂದಿಗೆ ಅಸ್ಸಾಂನ ಬ್ರಹ್ಮಪುತ್ರದ ನದಿತೀರದ ದ್ವೀಪಗಳಲ್ಲಿ ಮೇವು ಹುಡುಕುತ್ತಾ ಪ್ರಯಾಣಿಸುತ್ತಾರೆ. "ಒಂದು ಎಮ್ಮೆಯು ಆನೆ ತಿನ್ನುವಷ್ಟೇ ಆಹಾರ ತಿನ್ನಬಲ್ಲದು!," ಎಂದು ಅವರು ಹೇಳುತ್ತಾರೆ. ಮತ್ತುಇದೇ ಕಾರಣಕ್ಕಾಗಿ ಅವರು ಮೇವು ಹುಡುಕಿಕೊಂಡು ಅಲೆಯಬೇಕಾಗುತ್ತದೆ.
ಅವರ ಈ ಪ್ರಯಾಣದಲ್ಲಿ ಜಾನುವಾರುಗಳ ಜೊತೆಯಲ್ಲಿ ಸಂಗೀತವೂ ಪಯಣಿಸುತ್ತದೆ.
"ನಾನೇಕೆ
ಎಮ್ಮೆಗಳನ್ನು ಮೇಯಿಸಲು ಹೋಗಲಿ, ಪ್ರಿಯೆ.
ನಿನ್ನನ್ನು ನೋಡಲು ಸಾಧ್ಯವಿಲ್ಲವಾದರೆ
?"
ಅವರು ಪಾರಂಪರಿಕ ಒಯಿನಿಟೊಮ್ ಶೈಲಿಯಲ್ಲಿ ಹಾಡುತ್ತಾ ತಮ್ಮದೇ ಆದ ಪದಗಳನ್ನು ರಚಿಸುತ್ತಾರೆ. ಇವರ ಹಾಡುಗಳಲ್ಲಿ ತಮ್ಮ ಊರಾದ ಕರಂಗ್ ಚಪಾರಿಯಿಂದ ದೂರವಿರುವುದರ ಕುರಿತಾದ ನೋವು, ಪ್ರೇಮ, ಹಂಬಲಗಳನ್ನು ಚಿತ್ರಿಸುತ್ತಾರೆ. "ಹುಲ್ಲು ಎಲ್ಲಿದೆ ಎಂದು ನಮಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಹೀಗಾಗಿ ನಾವು ನಮ್ಮ ಎಮ್ಮೆಗಳೊಡನೆ ಚಲಿಸುತ್ತಲೇ ಇರುತ್ತೇವೆ," ಎಂದು ಅವರು ಈ ವೀಡಿಯೊದಲ್ಲಿ ಹೇಳುತ್ತಾರೆ. "ನಾವು ನೂರು ಎಮ್ಮೆಗಳನ್ನು 10 ದಿನಗಳವರೆಗೆ ಇಲ್ಲಿ ಮೇಯಿಸಿದರೆ, ಆ 10 ದಿನಗಳ ನಂತರ ಅವುಗಳಿಗೆ ಇಲ್ಲಿ ಹುಲ್ಲು ಇರುವುದಿಲ್ಲ. ಆಗ ನಾವೆಲ್ಲರೂ ಮತ್ತೆ ಹೊಸ ಹುಲ್ಲುಗಾವಲಿಗೆ ಹೋಗಬೇಕಾಗುತ್ತದೆ."
ಓಯಿನಿಟಮ್ ಶೈಲಿಯ ಜಾನಪದ ಸಂಗೀತವು ಅಸ್ಸಾಂನ ಒಂದು ಬುಡಕಟ್ಟು ಜನಾಂಗವಾದ ಮಿಸಿಂಗ್ ಸಮುದಾಯಕ್ಕೆ ಸೇರಿದ್ದು. ರಾಜ್ಯ ದಾಖಲೆಗಳಲ್ಲಿ, ಮಿಸಿಂಗ್ ಸಮುದಾಯವನ್ನು 'ಮಿರಿ' ಎಂದು ಉಲ್ಲೇಖಿಸಲಾಗಿದೆ ಮತ್ತು ಈ ಸಮುದಾಯವನ್ನು ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ - ಸಮುದಾಯದ ಅನೇಕರು ಈ ಹೆಸರನ್ನು ಅವಹೇಳನಕಾರಿ ಎಂದು ಹೇಳುತ್ತಾರೆ.
ಸತ್ಯಜಿತ್ ಅವರ ಊರು ಜೊಹ್ರತ್ ಜಿಲ್ಲೆಯ ಜೊಹ್ರತ್ ಬ್ಲಾಕ್ನ ವಾಯುವ್ಯದಲ್ಲಿದೆ. ಅವರು ತನ್ನ ಬಾಲ್ಯದಿಂದಲೂ ಎಮ್ಮೆ ಪಾಲಕನಾಗಿ ದುಡಿಯುತ್ತಿದ್ದಾರೆ. ಅವರು ಬ್ರಹ್ಮಪುತ್ರ ನದಿಯ ವಿವಿಧ ಮರಳಿನ ದಂಡೆಗಳು ಮತ್ತು ದ್ವೀಪಗಳ ನಡುವೆ ಚಲಿಸುತ್ತಾರೆ, ಇದರ ವ್ಯಾಪ್ತಿಯಾದ 1,94,413 ಚದರ ಕಿಲೋಮೀಟರುಗಳ ಉದ್ದಕ್ಕೂ ದ್ವೀಪಗಳು ರೂಪುಗೊಳ್ಳುತ್ತವೆ, ಕಣ್ಮರೆಯಾಗುತ್ತವೆ ಮತ್ತು ನದಿ ಮತ್ತು ಅದರ ಅನೇಕ ಉಪನದಿಗಳ ಗುಂಟ ಈ ದ್ವೀಪಗಳು ಕಾಣಿಸಿಕೊಳ್ಳುತ್ತವೆ.
ಈ ವಿಡಿಯೋದಲ್ಲಿ ಅವರು ತನ್ನ ಬದುಕಿನ ಕುರಿತು ಮಾತನಾಡಿರುವುದನ್ನು ನೋಡಿ.
ಅನುವಾದ: ಶಂಕರ. ಎನ್. ಕೆಂಚನೂರು